ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dissatisfied Aspirants: ಆಕಾಂಕ್ಷಿಗಳ ಅಸಮಾಧಾನ ಸಭೆ, ಪಕ್ಷಕ್ಕೆ ಪೀಕಲಾಟ

ಪದೇ ಪದೆ ಚರ್ಚೆಗೆ ಬಂದು ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಕೊಚ್ಚಿ ಹೋಗು ತ್ತಿರುವ ಸಂಪುಟ ಪುನಾರಚನೆ ವಿಚಾರ ಈ ಬಾರಿ ಕೊಂಚ ಗಂಭೀರ ಸ್ವರೂಪ ಪಡೆದು ಕೊಂಡರೂ ಅಚ್ಚರಿ ಎನ್ನಲಾಗುತ್ತಿದೆ. ಕಾರಣ ಈ ಬಾರಿ ಸಂಪುಟ ಪುನಾರಚನೆ ವಿಚಾರವನ್ನು ಕೈಗೆತ್ತಿ ಕೊಳ್ಳುತ್ತಿರುವವರು ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಾಸಕರಲ್ಲ, ಯಾವುದೇ ಸಮುದಾಯಕ್ಕೆ ಸೇರಿದ ಶಾಸಕರಲ್ಲ, ಹಾಗಂತ ಹೊಸದಾಗಿ ಆರಿಸಿ ಬಂದಿರುವ ಶಾಸಕರೂ ಅಲ್ಲ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಸಂಪುಟ ಪುನಾರಚನೆ ಮತ್ತೆ ಮುನ್ನೆಲೆಗೆ, ಸಚಿವರ ಮೇಲೂ ಆಕ್ರೋಶ ಸಾಧ್ಯತೆ

ಬಹುತೇಕ ಮೂಲೆಗೆ ಸೇರಿದೆ ಎನ್ನಲಾಗಿದ್ದ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತಿದೆ.

ಪದೇ ಪದೆ ಚರ್ಚೆಗೆ ಬಂದು ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಕೊಚ್ಚಿ ಹೋಗು ತ್ತಿರುವ ಸಂಪುಟ ಪುನಾರಚನೆ ವಿಚಾರ ಈ ಬಾರಿ ಕೊಂಚ ಗಂಭೀರ ಸ್ವರೂಪ ಪಡೆದು ಕೊಂಡರೂ ಅಚ್ಚರಿ ಎನ್ನಲಾಗುತ್ತಿದೆ. ಕಾರಣ ಈ ಬಾರಿ ಸಂಪುಟ ಪುನಾರಚನೆ ವಿಚಾರ ವನ್ನು ಕೈಗೆತ್ತಿಕೊಳ್ಳುತ್ತಿರುವವರು ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಾಸಕರಲ್ಲ, ಯಾವುದೇ ಸಮುದಾಯಕ್ಕೆ ಸೇರಿದ ಶಾಸಕರಲ್ಲ, ಹಾಗಂತ ಹೊಸದಾಗಿ ಆರಿಸಿ ಬಂದಿರುವ ಶಾಸಕರೂ ಅಲ್ಲ.

ಬದಲಾಗಿ ನಾಲ್ಕೈದು ಬಾರಿ ಆಯ್ಕೆಯಾಗಿ ಈತನಕ ಒಮ್ಮೆಯೂ ಮಂತ್ರಿ ಸ್ಥಾನವನ್ನೇ ಪಡೆಯಲಾಗದ ಅಥವಾ ಕೈ ತಪ್ಪಿರುವ ಹಿರಿಯ ಶಾಸಕರು. ಹೀಗೆ 30ಕ್ಕೂ ಹೆಚ್ಚು ಮಂದಿ ಶಾಸಕರು ಅಪಾರ ಚರ್ಚೆ, ಪ್ರಯತ್ನಗಳ ನಂತರ ಬೇಸತ್ತು ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆಯನ್ನು ಪಕ್ಕಕ್ಕಿಟ್ಟು ಒಂದಾಗಿ ಸೇರಿ ಸಭೆ ನಡೆಸಲಿದ್ದಾರೆ.

ಮಾರ್ಚ್ 11ರ ಸಂಜೆ 7 ಗಂಟೆಗೆ ಖಾಸಗಿ ಹೊಟೇಲ್ʼನಲ್ಲಿ ಸಭೆ ನಡೆಯಲಿದ್ದು, ಇದಕ್ಕೆ ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮುಖಂಡರ ಬೆಂಬಲವೂ ಇದೆ ಎನ್ನಲಾಗಿದೆ. ಅಂದ ಹಾಗೆ ನಾಯಕತ್ವ ಬದಲಾವಣೆ ಕುರಿತ ನಿತ್ಯ ಸುದ್ದಿಗಳ ಬಿಸಿ ಚರ್ಚೆಗಳ ನಡೆವೆಯೇ ಹಿರಿಯ ಶಾಸಕರು ಸಭೆ ಸೇರಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುತ್ತಿರುವುದು ಹೆಚ್ಚು ಮಹತ್ವ ಪಡೆದುಕೊಂಡಿದ್ದು, ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಲಿದೆ.

ಇದನ್ನೂ ಓದಿ: Cabinet Meeting: ಬ್ಯಾಲೆಟ್ ಪೇಪರ್‌ನಲ್ಲೇ ಗ್ರಾಮ ಪಂಚಾಯಿತಿಗಳ ಚುನಾವಣೆ; ಸಚಿವ ಸಂಪುಟ ಮಹತ್ವದ ನಿರ್ಧಾರ

ವಿಶೇಷವೆಂದರೆ ಈ ಶಾಸಕರು ಸಭೆ ನಡೆಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಹಾಗೆಯೇ ಸಭೆ ನಡೆಸಲು ಅನುಮತಿಯನ್ನೂ ಪಡೆದಿದ್ದಾರೆ. ಈ ಸಭೆಯ ನಂತರ ಶಾಸಕರು ಮತ್ತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕೆನ್ನುವ ಬೇಡಿಕೆ ಸಲ್ಲಿಸ ಲಿದ್ದಾರೆ. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಆಕಾಂಕ್ಷೆಯನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎನ್ನಲಾಗಿದೆ.

ಈ ವಿಚಾರದ ಬಗ್ಗೆ ಜಾಗೃತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ನಡೆಯತ್ತಿರುವ ಬಜೆಟ್ ಅಧಿವೇಶನದ ನಡುವೆ ಅಥವಾ ನಂತರ ಪಕ್ಷದ ಹೈಕಮಾಂಡ್ ಭೇಟಿ ಮಾಡಿ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಇದರ ಮಧ್ಯೆ ನಾಯಕತ್ವ ಬದಲಾವಣೆಗೆ ಒತ್ತಡ ಹಾಕುತ್ತಿರುವ ಕಾಂಗ್ರೆಸ್‌ನ ಮತ್ತೊಂದು ಶಾಸಕರ ಬಣ, ಸದ್ಯಕ್ಕೆ ನಾಯಕತ್ವ ಬದಲಾವಣೆ ನಂತರ ಸಂಪುಟ ಪುನಾರಚನೆ ಮಾಡಿ ಎನ್ನುವ ಬೇಡಿಕೆ ಸಲ್ಲಿಸಿರುವುದರಿಂದ ಹೈಕಮಾಂಡ್ ಈ ಬಾರಿ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಶಾಸಕರು ಮಾತ್ರವಲ್ಲ, ಇವರೂ ಬರುತ್ತಾರೆ

ಆಳಂದ ಕ್ಷೇತ್ರದ ಶಾಸಕರೂ ಹಾಗೂ ಹಿರಿಯರೂ ಆದ ಬಿ.ಆರ್.ಪಾಟೀಲ್, ಅಥಣಿಯ ಲಕ್ಷ್ಮಣ ಸವದಿ, ರಾಮದುರ್ಗ ಕ್ಷೇತ್ರದ ಅಶೋಕ್ ಪಟ್ಟಣ, ಮಾಲೂರಿನ ಕೆ.ವೈ.ನಂಜೇಗೌಡ, ಬಂಗಾರಪೇಟೆಯ ನಾರಾಯಣ ಸ್ವಾಮಿ, ಕೊಪ್ಪಳದ ರಾಘವೇಂದ್ರ ಹಿಟ್ನಾಳ, ರಮೇಶ್ ಬಂಡೀಸಿದ್ದೇಗೌಡ, ಬಾಗೇಪಲ್ಲಿಯ ಸುಬ್ಬಾರೆಡ್ಡಿ, ಸಾಗರದ ಬೇಳೂರು ಗೋಪಾಲಕೃಷ್ಣ, ಮಳವಳ್ಳಿಯ ಪಿ.ಎಂ.ನರೇಂದ್ರ ಸ್ವಾಮಿ, ಮಾಗಡಿ ಬಾಲಕೃಷ್ಣ, ಚಳ್ಳಕೆರೆ ರಘುಮೂರ್ತಿ, ಅರಸೀಕೆರೆ ಶಿವಲಿಂಗೇಗೌಡ, ತಿಪಟೂರು ಷಡಕ್ಷರಿ, ಶಿರಾ ಟಿ.ಬಿ.ಜಯಚಂದ್ರ, ಹಾವೇರಿ ಜಿಯ ಬ್ಯಾಡಗಿ ಬಸವರಾಜ ನೀಲಪ್ಪ ಶಿವಣ್ಣನವರ್, ಮೊಳಕಾಲ್ಮೂರಿನ ಎನ್.ವೈ.ಗೋಪಾಲಕೃಷ್ಣ, ಭದ್ರಾವತಿಯ ಬಿ.ಕೆ.ಸಂಗೇಮೇಶ್ ಸೇರಿದಂತೆ ಅನೇಕ ಶಾಸಕರು ಭಾಗವಹಿಸಲಿದ್ದಾರೆ. ಇವರ ಜತೆ ಈ ಹಿಂದೆ ಸಚಿವರಾಗಿದ್ದ ಶಿರಾದ ಟಿ.ಬಿ.ಚಯಚಂದ್ರ ಹಾಗೂ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಭಾಗವಹಿಸಿ ಬೆಂಬಲ ನೀಡುವ ಸಂಭವ ಕಾಣುತ್ತಿದೆ.

ಯಾವ ಮಂತ್ರಿ ಮೇಲೆ ಮುನಿಸು? ಏಕೆ?

ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪ‌ರ್ಧಿಸುವುದು ಬೇಡ ಎನ್ನುವ ಚಿಂತನೆಯಲ್ಲಿರುವ ಹಾಗೂ ಒಂದು ರೀತಿ ರಾಜಕೀಯ ಅಳಿವಿನಂಚಿನಲ್ಲಿರುವ ಸುಮಾರು 15 ಹಿರಿಯ ಶಾಸಕರು ಸಂಪುಟ ಪುನಾರಚನೆಗಾಗಿ ಪಕ್ಷದ ಹೈಕಮಾಂಡ್ ಕದ ತಟ್ಟಿ ವಿಫಲವಾಗಿದ್ದರು. ನಂತರ ಇತ್ತೀಚೆಗೆ 30ಕ್ಕೂ ಹೆಚ್ಚು ಹೊಸದಾಗಿ ಆರಿಸಿ ಬಂದಿರುವ ಶಾಸಕರು ಸಂಪುಟ ಪುನಾರಚನೆ ಮಾಡಬೇಕು. ಅದರಲ್ಲಿ ಕನಿಷ್ಠ ನಾಲ್ಕು ಮಂದಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ದ್ದರು.

ಇದಾದ ನಂತರ ಈಗ 3ಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ಶಾಸಕರು ಸಭೆ ನಡೆಸಿ ಸಂಪುಟ ಪುನಾರಚನೆ ಆಗಲೇಬೇಕೆಂದು ಪಟ್ಟು ಹಿಡಿಯಲಿದ್ದಾರೆ. ನಾಯಕತ್ವ ಬದಲಾವಣೆ ಯಾವಾಗಲಾದರೂ ಮಾಡಿ, ಯಾರಾದರೂ ನಾಯಕರಾಗಲಿ, ಆದರೆ ನಮಗೆ ಮಾತ್ರ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಎಂದು ಆಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಶಾಸಕರು ಸಭೆಯಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳ ಮೇಲೆ ದೂರುಗಳನ್ನು ಸಲ್ಲಿಸಿ ಚರ್ಚಿಸುವ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಗೃಹ ಇಲಾಖೆ, ವಸತಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ತೋಟಗಾರಿಕೆ ಸೇರಿದಂತೆ ಅನೇಕ ಇಲಾಖೆ ಮಂತ್ರಿಗಳ ಅಸಹಕಾರ ಮತ್ತು ಸ್ಪಂದನೆ ಇಲ್ಲದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಭಾಗವಹಿಸಲಿರುವ ಶಾಸಕರು ಹೇಳಿದ್ದಾರೆ.