ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Turuvekere Prasad Column: ದೂರಶಿಕ್ಷಣ ನಕಲಿಗೆ ಮುಕ್ತವಾಗದಿರಲಿ !

ವಿಶ್ವವಿದ್ಯಾಲಯಗಳ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ತಕ್ಕಮಟ್ಟಿಗೆ ಶಿಸ್ತು ಮತ್ತು ಪರೀಕ್ಷಾ ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಇತರೆ ಊರುಗಳ ಎಷ್ಟೋ ಪರೀಕ್ಷಾ ಕೇಂದ್ರಗಳು ಎಲ್ಲಾ ನಿಯಮ, ಮೌಲ್ಯಗಳನ್ನು ಗಾಳಿಗೆ ತೂರಿ ಪದವಿಗಳನ್ನು ಅಗ್ಗಕ್ಕೆ ಮಾರುವ ಗೂಡಂಗಡಿ ಗಳಾಗಿದ್ದವು. ಇಲ್ಲಿ ಮೂರು ಹಂತದ ಸುಲಿಗೆ ನಡೆಯುತ್ತಿತ್ತು.

ಮುಕ್ತ ಶಿಕ್ಷಣ

ತುರುವೇಕೆರೆ ಪ್ರಸಾದ್

ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ನೀಡಿರುವ ದೂರ ಶಿಕ್ಷಣದ ಮೂಲಕ ಪದವಿ ಪಡೆಯುವ ಏಕಮೇವ ಸೌಲಭ್ಯ ಹಾಗೂ ಮಾನ್ಯತೆಯನ್ನು ಇತರೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸುವುದಾಗಿ ಹೇಳಿದೆ. ರಾಜ್ಯ ಮುಕ್ತ ವಿವಿ ಆಡಳಿತ ಮತ್ತು ಸರ್ಕಾರದ ಸಂಘರ್ಷದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾ ಗಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಸರ್ಕಾರ ನೀಡಿರುವ ಕಾರಣ ಇತರೆ ವಿಶ್ವವಿದ್ಯಾಲಯ ಗಳಿಗೆ ಪೂರಕ ಅನುದಾನ ನೀಡಲು ಸಾಧ್ಯವಾಗದಿರುವುದು!

ಸರ್ಕಾರ ದುಡುಕಿ ಸೇಡಿನ ಕ್ರಮ ಕೈಗೊಳ್ಳುವ ಮುಂಚೆ, ಮತ್ತೆ ಹಿಂದಿನ ವ್ಯವಸ್ಥೆಗೆ ಮರಳುವ ಮುನ್ನ ಇದರ ಸಾಧಕ ಬಾಧಕಗಳ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರುವುದು ಒಳ್ಳೆಯದು ಎನಿಸುತ್ತದೆ. ಕರಾಮುವಿ ಹೊರತುಪಡಿಸಿ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ (ಎಲ್ಲವೂ ಅಲ್ಲದಿರಬಹುದು) ದೂರ ಶಿಕ್ಷಣದ ಗುಣಮಟ್ಟ, ಪರೀಕ್ಷಾ ಕ್ರಮ, ಫಲಿತಾಂಶ ಪ್ರಕಟಣೆ ಈ ಎ ಪ್ರಕ್ರಿಯೆಗಳು ಅದೆಷ್ಟು ಹದಗೆಟ್ಟಿದ್ದವು ಎನ್ನುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಿದೆ.

ಅದೊಂದು ಪದವಿಯನ್ನು ಹರಾಜು ಹಾಕುವ ದಂಧೆಯಾಗಿ ಹೋಗಿತ್ತು. ವಿಶ್ವವಿದ್ಯಾ ಲಯದ ಸ್ಟಡಿ ಸೆಂಟರ್‌ಗಳು ಕಮಿಶನ್ ಏಜೆಂಟ್‌ಗಳಿಗಿಂತ ಕಡೆಯಾಗಿದ್ದವು. ಇನ್ನು ಪರೀಕ್ಷಾ ಕೇಂದ್ರಗಳ ಬಗ್ಗೆಯಂತೂ ಹೇಳುವುದೇ ಬೇಡ. ಅಸಹ್ಯ ಮೂಡುವಷ್ಟು ಅವ್ಯವಹಾರಗಳು ನಡೆಯುತ್ತಿದ್ದವು.

ವಿಶ್ವವಿದ್ಯಾಲಯಗಳ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ತಕ್ಕಮಟ್ಟಿಗೆ ಶಿಸ್ತು ಮತ್ತು ಪರೀಕ್ಷಾ ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಇತರೆ ಊರುಗಳ ಎಷ್ಟೋ ಪರೀಕ್ಷಾ ಕೇಂದ್ರಗಳು ಎಲ್ಲಾ ನಿಯಮ, ಮೌಲ್ಯಗಳನ್ನು ಗಾಳಿಗೆ ತೂರಿ ಪದವಿಗಳನ್ನು ಅಗ್ಗಕ್ಕೆ ಮಾರುವ ಗೂಡಂಗಡಿಗಳಾಗಿದ್ದವು. ಇಲ್ಲಿ ಮೂರು ಹಂತದ ಸುಲಿಗೆ ನಡೆಯುತ್ತಿತ್ತು.

ಇದನ್ನೂ ಓದಿ: ‌Turuvekere Prasad Column: ಉಚಿತ ಗ್ಯಾರಂಟಿ ಸಹವಾಸ: ವಿಜಯ ವಿʼಲಾಸಾʼ ?

ಪರೀಕ್ಷಾ ಕೇಂದ್ರದಲ್ಲಿ ನೊಂದಣಿ ಮಾಡಿಕೊಂಡಾಗ, ಪ್ರವೇಶ ಪತ್ರ ಬಂದಾಗ ಮತ್ತು ಫಲಿತಾಂಶ ಬಂದಾಗ- ಹೀಗೆ ಮೂರು ಕೊಕ್ಕೆಯಲ್ಲಿ ವಿದ್ಯಾರ್ಥಿಗಳನ್ನು ಸಿಕ್ಕಿಸಿ ಸಾವಿರ ಗಟ್ಟಲೆ ದುಡ್ಡು ಕೀಳುತ್ತಿದ್ದರು. ಒಟ್ಟಾರೆ ಈ ಮೊತ್ತ ಕೆಲವೊಮ್ಮೆ ರೂ.25000 ಮೀರಿದ್ದೂ ಉಂಟು. ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಎಗ್ಗಿಲ್ಲದೆ ರಾಜಾರೋಷವಾಗಿ ಕಾಪಿ ಹೊಡೆಯಲು ಅವಕಾಶ ನೀಡಲಾಗುತ್ತಿತ್ತು.

ಪರೀಕ್ಷಾ ಕೇಂದ್ರದೊಳಗೆ ಮತ್ತು ಕೊಠಡಿಗಳೊಳಗೆ ಮೊಬೈಲ್, ಬೋಧನ ಸಾಮಗ್ರಿ, ನೋಟ್ಸ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿತ್ತು. ಪರೀಕ್ಷಾರ್ಥಿಗಳು ಪರಸ್ಪರ ಮಾತಾಡಿಕೊಂಡು, ಚರ್ಚಿಸಿಕೊಂಡು ಪುಸ್ತಕದಲ್ಲಿ ಸಿಗದಿದ್ದರೆ ಗೂಗಲ್ ಸರ್ಚ್ ಮಾಡಿ ಉತ್ತರ ಹುಡುಕಿ ಬರೆಯುತ್ತಿದ್ದರು.

ಪರೀಕ್ಷಾ ಮೇಲ್ವಿಚಾರಕರು ಹುಡುಗರನ್ನು ಕಾಯುತ್ತಿರಲಿಲ್ಲ, ಆಚೆ ಕಡೆ ಜಾಗೃತದಳ ದವರು ಬಂದಾರೆಯೇ ಎಂದು ನೋಡಲು ಬಾಗಿಲು ಕಾಯುತ್ತಿದ್ದರು. ಅಪ್ಪಿತಪ್ಪಿ ಜಾಗೃತ ದಳದವರೇನಾದರೂ ಬಂದರೆ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿಗಳನ್ನು ಎಚ್ಚರಿಸು‌ ತ್ತಿದ್ದರು. ಇನ್ನು ಬಹುತೇಕ ಜಾಗೃತದಳದ ಸದಸ್ಯರೂ ಅಷ್ಟೇ, ಯಾವ ಕೋಣೆಯಲ್ಲೂ ಕಣ್ ಹಾಯಿಸದೆ ಕಚೇರಿಯ ಕುಳಿತು ತಿಂಡಿ, ಕಾಫಿ, ಬಕ್ಷೀಸು ಸ್ವೀಕರಿಸಿ ಹಾಗೇ ಹೊರಟು ಹೋಗುತ್ತಿದ್ದರು.

ವಿಪರ್ಯಾಸದ ಸಂಗತಿಯೆಂದರೆ ಈ ಕಾಪಿಚಟ್ ಪರೀಕ್ಷಾ ಕೇಂದ್ರಗಳಲ್ಲಿ ಪಾಸಾಗಲು ಯಾರೂ ಬರುತ್ತಿರಲಿಲ್ಲ. ಎಲ್ಲಾ ಶೇ.55 ಮೀರಿ ಅಂಕ ಗಳಿಸಿ ದೊಡ್ಡ ದೊಡ್ಡ ಹುದ್ದೆ ಗಿಟ್ಟಿಸಬೇಕೆಂಬ ಆಕಾಂಕ್ಷೆಯುಳ್ಳವರೇ! ಎಲ್ಲಾ ವಿಷಯಗಳಲ್ಲೂ ಆಂತರಿಕ ಮೌಲ್ಯ ಮಾಪನಕ್ಕೆಂದೇ 20-30 ಅಂಕಗಳಿರುತ್ತಿದ್ದವು. ಇದನ್ನು ವಿದ್ಯಾರ್ಥಿಗಳು ಮನೆಯ ಕೂತು ಬರೆದು ಕಳಿಸುತ್ತಿದ್ದರು. ಇಲ್ಲೂ ಅವ್ಯವಹಾರ, ವಶೀಲುಬಾಜಿ. ವಿವಿ ಸಿಬ್ಬಂದಿ, ಪ್ರಾಧ್ಯಾ ಪಕರೇ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಉತ್ತರ ಬರೆಸಿ ಮಿಕ್ಕವರಿಗೆ ದುಡ್ಡಿಗೆ ಮಾರಿ ಕೊಳ್ಳುತ್ತಿದ್ದರು.(ನನಗೆ ಗೊತ್ತಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ ಇದಕ್ಕೆ ಅಪವಾದ ವಾಗಿತ್ತು.

2013-14ನೇ ಸಾಲಿನಲ್ಲೂ ಅಲ್ಲಿ ಈ ಆಂತರಿಕ ಅಂಕಗಳಿಗೂ ಚಿಕ್ಕದೊಂದು ಪರೀಕ್ಷೆಯನ್ನು ನೇರವಾಗಿ ಸೆಂಟ್ರಲ್ ಕಾಲೇಜಿಗೆ ಬಂದು ಬರೆಯಬೇಕಿತ್ತು. ಅಲ್ಲಿನ ವಿದ್ಯಾರ್ಥಿಯಾಗಿದ್ದ ನನಗೆ ಅಲ್ಲಿ ಯಾವ ವಶೀಲಿಬಾಜಿಯೂ ನಡೆದದ್ದು ಗಮನಕ್ಕೆ ಬಂದಿಲ್ಲ. ಪರೀಕ್ಷೆಗಳು ಶಿಸ್ತುಬದ್ಧವಾಗಿ ನಡೆಯುತ್ತಿದ್ದವು).

ಆಂತರಿಕ ಮೌಲ್ಯಮಾಪನದಲ್ಲಿ ಬಹುತೇಕ ಎಲ್ಲರಿಗೂ ಗರಿಷ್ಠ ಅಂಕ ಸಿಕ್ಕೇ ಸಿಗುತ್ತಿತ್ತು. ಇನ್ನು ಪ್ರಥಮ ದರ್ಜೆಗೆ ಬೇಕಾದ ಉಳಿದ 30-35 ಅಂಕಗಳಿಗಾಗಿ ವಿದ್ಯಾರ್ಥಿಗಳು ಈ ನಕಲು ಪರೀಕ್ಷಾಕೇಂದ್ರಗಳ ಮೊರೆ ಹೋಗುತ್ತಿದ್ದರು. ಕಲೆ, ವಾಣಿಜ್ಯ ವಿಷಯಗಳಿರಲಿ ಆನ್ವಯಿಕ ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯಸ್ತ್ರ ಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಗಣಿತಶಾಸ್ತ್ರ, ಸ್ನಾತಕೋತ್ತರ ಪರೀಕ್ಷೆಯಲ್ಲೂ ಕಾಪಿ ಹೊಡೆಸಿದರೆ ಶಿಕ್ಷಣದ ಗುಣಮಟ್ಟ ಏನಾಗಬಹುದು? ಈ ರೀತಿ ಶಿಕ್ಷಣದ ಮೌಲ್ಯ, ಶ್ರಮ ಗೊತ್ತಿಲ್ಲದೆ ಕಾಸಿಗೆ ಪದವಿ ಪಡೆದವರೇ ಬಹುಶಃ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಓಎಂಆರ್ ಶೀಟ್ ತಿದ್ದುವು ದರಿಂದ ಹಿಡಿದು ಎಲ್ಲಾ ಪರೀಕ್ಷಾ ಅವ್ಯವಹಾರಗಳಲ್ಲಿ ಭಾಗಿಯಾಗಿರಬಹುದು. ಅವರಲ್ಲಿ ಎಷ್ಟು ಜನ ಪ್ರೊಫೆಸರ್ʼಗಳಾಗಿ ನಮ್ಮ ಮಕ್ಕಳಿಗೆ ಅನ್ವಯಿಕ ವಿಜ್ಞಾನ ಇಲ್ಲವೇ ನೈತಿಕ ಶಿಕ್ಷಣದ ಶಂಖ ಊದುತ್ತಿzರೋ ದೇವರೇ ಬಲ್ಲ!

ದೂರಶಿಕ್ಷಣದ ಉದ್ದೇಶ ನೇರವಾಗಿ ವಿವಿಗಳಲ್ಲಿ ದಾಖಲಾಗಿ ಓದು ಮುಂದುವರೆಸಲಾಗ ದವರು ಪದವಿ ಪಡೆಯಲು, ಉದ್ಯೋಗದಲ್ಲಿರುವವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವುದೇ ಆಗಿದೆ. ಹಿಂದೆ ಪ್ರಥಮ ದರ್ಜೆ ಕಾಲೇಜುಗಳ ಸಂಖ್ಯೆ ಕಡಿಮೆ ಇದ್ದಾಗ ದೂರದೂರಿಗೆ ಹೋಗಿ ಓದಲಾಗದ ಅಸಹಾಯಕತೆಗೆ ಹಾಗೂ ಚಿಕ್ಕವಯಸ್ಸಿನ ಮದುವೆಯಾಗಿ ಸಂಸಾರದ ಜವಾಬ್ದಾರಿಗೆ ಸಿಕ್ಕಿಕೊಳ್ಳುವ ಹೆಣ್ಣುಮಕ್ಕಳಿಗೆ ಇದೊಂದು ನಿಜಕ್ಕೂ ವರವಾಗಿತ್ತು.

ಉದ್ಯೋಗ ನೇಮಕಾತಿಗೆ ದೂರ ಶಿಕ್ಷಣದ ಪ್ರಮಾಣಪತ್ರ ಪರಿಗಣಿಸದ ಕಾಲವೂ ಇತ್ತು. ಆಗಂತೂ ಈ ದೂರಶಿಕ್ಷಣ ನಾಮಕೇವಾಸ್ಥೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾ ಗಿತ್ತು. ಉದ್ಯೋಗಕ್ಕೂ ದೂರಶಿಕ್ಷಣದ ಪದವಿ ಪ್ರಮಾಣಪತ್ರಗಳನ್ನು ಪರಿಗಣಿಸುವಂತಾದ ಮೇಲೆ ಹಲವು ಕಡೆ ಈ ಪಠ್ಯಗಳ ಹಾಗೂ ಪರೀಕ್ಷಾ ವಿಧಾನಗಳ ಗುಣಮಟ್ಟವನ್ನು ಉನ್ನತೀಕರಿಸಿದ್ದೂ ನಿಜ!

ಪ್ರಾಯೋಗಿಕ ತರಗತಿಗಳನ್ನು ಕಡ್ಡಾಯ ಮಾಡಲಾಯಿತು. ಮುಂಚೆ ಕಾಟಾಚಾರಕ್ಕೆ ಇದ್ದ ಸಂಪರ್ಕ ಕಾರ್ಯಕ್ರಮಗಳನ್ನು (ಕಾಂಟ್ಯಾಕ್ಟ್‌ ಪ್ರೋಗ್ರಾಮ್ಸ) ಕಡ್ಡಾಯಗೊಳಿಸಲಾಯಿತು. ದಕ್ಷತೆ, ನ್ಯೂನತೆ ಒಂದೇ ನಾಣ್ಯದ ಎರಡು ಮುಖಗಳು. ಒಂದೆಡೆ ಗುಣಮಟ್ಟ ಸುಧಾರಣೆ ಅದರೆ ಅದು ನಗಣ್ಯ ಎನ್ನುವಷ್ಟರ ಮಟ್ಟಿಗೆ ಇದೊಂದು ಬೃಹತ್ ದಂಧೆಯಾಗಿ ಬದಲಾಯಿತು.

ಹಿಂದಿನ ಸರ್ಕಾರ ಎಲ್ಲಾ ವಿವಿಗಳ ದೂರಶಿಕ್ಷಣ ವಿಭಾಗ ಮುಚ್ಚಿ ಕರಾಮುವಿಗೆ ವಹಿಸಿದ್ದರ ಹಲವು ಉದ್ದೇಶಗಳಲ್ಲಿ ಇದೇ ಪ್ರಮುಖವಾದ ಕಾರಣ ಇರಬಹುದು. ಒಂದು ವೇಳೆ ಸರ್ಕಾರ ಈ ಹಿಂದಿನಂತೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ದೂರಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ನೀಡಲು ಅವಕಾಶ ನೀಡಿದರೆ ಈ ಎಲ್ಲಾ ಕೊಳೆತ ಮಂಡಲಗಳು ಮತ್ತೆ ಹೆಡೆಯೆತ್ತಿ ನಿಲ್ಲುತ್ತವೆ.

ಬಹಳಷ್ಟು ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಹಲವು ವಿಶ್ವ ವಿದ್ಯಾಲಯಗಳಲ್ಲಿ ಸಿಬ್ಬಂದಿಗೆ, ಪ್ರಾಧ್ಯಾಪಕರಿಗೆ ಸಂಬಳ ಕೊಡಲೂ ದುಡ್ಡಿಲ್ಲ. ಹಲವು ವಿವಿಗಳನ್ನು (ಸುಮಾರು 9 ವಿವಿಗಳು) ಸರ್ಕಾರವೇ ಮುಚ್ಚಲು ಹೊರಟಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದೆ ಸರಿಯೇ! ಆದರೆ ವಿಶ್ವವಿದ್ಯಾಲಯಗಳ ಪುನಶ್ಚೇತನಕ್ಕೆಂದು ದೂರಶಿಕ್ಷಣಕ್ಕೆ ಅವಕಾಶ ಮಾಡಿಕೊಡುವ ಮುನ್ನ ಸರ್ಕಾರ ಕೆಲವು ಹೊಸ ನೀತಿ, ನಿಯಮ ಗಳನ್ನು ಪ್ರಕಟಿಸಬೇಕು.

ಮುಖ್ಯವಾಗಿ ಶಿಕ್ಷಣದ ಗುಣಮಟ್ಟದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ ಕ್ರಮಬದ್ಧ ಮತ್ತು ನ್ಯಾಯಸಮ್ಮತ ಪರೀಕ್ಷೆಗಳು ನಡೆಯುವ ಖಾತರಿ ಸಿಗಬೇಕು. ಕರಾಮುವಿ ಹಿಡಿತ ದಿಂದ ದೂರಶಿಕ್ಷಣವನ್ನು ಹಿಂದಿನಂತೆ ವಿಕೇಂದ್ರೀಕರಣಗೊಳಿಸುವುದು ತಪ್ಪೇನಲ್ಲ, ಆದರೆ ತಕ್ಕಮಟ್ಟಿಗೆ ದೂರಶಿಕ್ಷಣದ ಮಾನಮರ್ಯಾದೆ ಕಾಪಾಡಿರುವ ಕರಾಮುವಿ ತೆಕ್ಕೆಯಿಂದ ಏಕಸ್ವಾಮ್ಯವನ್ನು ಕಿತ್ತುಕೊಳ್ಳುವ ಮೊದಲು ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾದರಿಯಲ್ಲಿ ‘ದೂರಶಿಕ್ಷಣ ಪರೀಕ್ಷಾ ಪ್ರಾಧಿಕಾರ’ ಸ್ಥಾಪಿಸಿ ಎಲ್ಲಾ ವಿವಿಗಳು ಅದರಡಿ ಕಾರ್ಯನಿರ್ವಹಿಸುವಂತೆ ಮಾಡಿ ಪದವಿಗಳು ಬಿಕರಿಯಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.