ಸಂಪಾದಕರ ಸದ್ಯಶೋಧನೆ
ಸಾಮಾನ್ಯವಾಗಿ ಪತ್ರಕರ್ತರು ಜಗತ್ತಿನಲ್ಲಿ ನಡೆಯುವ ಘಟನೆಗಳನ್ನು ದೂರದಿಂದ ನೋಡಿ, ಸಾಕ್ಷಿಗಳನ್ನು ಮಾತನಾಡಿಸಿ ವರದಿ ಮಾಡುತ್ತಾರೆ. ಆದರೆ ಅಮೆರಿಕದ ಖ್ಯಾತ ಪತ್ರಕರ್ತ ಹಾಗೂ ಲೇಖಕ ಎ.ಜೆ.ಜೇಕಬ್ಸ್ ಅವರ ಶೈಲಿಯೇ ಬೇರೆ. ಅವರು ಸುದ್ದಿಯನ್ನು ಹುಡುಕಿಕೊಂಡು ಹೋಗುವುದಿಲ್ಲ. ಬದಲಿಗೆ ತಾವೇ ಒಂದು ವಿಚಿತ್ರ ಪ್ರಯೋಗಕ್ಕೆ ಒಳಗಾಗಿ, ಆ ಅನುಭವವನ್ನೇ ಬರಹವಾಗಿಸುತ್ತಾರೆ.
ಪತ್ರಿಕೋದ್ಯಮದ ಜಗತ್ತಿನಲ್ಲಿ ಇದನ್ನು ‘ಇಮ್ಮರ್ಶನ್ ಜರ್ನಲಿಸಂ’ (Immersion Journalism) ಅಥವಾ ‘ಸ್ಟಂಟ್ ಜರ್ನಲಿಸಂ’ ಎಂದು ಕರೆಯುತ್ತಾರೆ. ತಮ್ಮ ದೇಹ ಮತ್ತು ಮನಸ್ಸನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿರುವ ಜೇಕಬ್ಸ್, ಓದುಗರಿಗೆ ಕೇವಲ ಮಾಹಿತಿಯನ್ನು ನೀಡದೇ, ಆ ಅನುಭವದ ಆಳವನ್ನು ಹಾಸ್ಯ ಮತ್ತು ಕುತೂಹಲದೊಂದಿಗೆ ದಾಟಿಸುತ್ತಾರೆ.
ನ್ಯೂಯಾರ್ಕ್ ನಗರದಲ್ಲಿ ಹುಟ್ಟಿ ಬೆಳೆದ ಜೇಕಬ್ಸ್ ಅವರಿಗೆ ಬಾಲ್ಯದಿಂದಲೂ ಜ್ಞಾನದ ಬಗ್ಗೆ ವಿಪರೀತ ಹಸಿವು. ಬ್ರೌನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ‘ಎಂಟರ್ಟೈನ್ ಮೆಂಟ್ ವೀಕ್ಲಿ’ ಮತ್ತು ’ಎಸ್ಕ್ವೈರ್’ನಂಥ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದರು. ಆದರೆ ಕೇವಲ ಕಚೇರಿಯಲ್ಲಿ ಕುಳಿತು ಬರೆಯುವುದು ಅವರಿಗೆ ತೃಪ್ತಿ ನೀಡಲಿಲ್ಲ.
ಇದನ್ನೂ ಓದಿ: Vishweshwar Bhat Column: ವಿಸಿಟಿಂಗ್ ಕಾರ್ಡ್ ಶಿಷ್ಟಾಚಾರ
‘ನಾವು ಓದುವ ಅಥವಾ ಕೇಳುವ ವಿಷಯಗಳನ್ನು ನಿಜಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಿ ಕೊಂಡರೆ ಏನಾಗಬಹುದು?’ ಎಂಬ ಒಂದು ಸಣ್ಣ ಆಲೋಚನೆಯೇ ಅವರನ್ನು ಜಗತ್ತಿನ ಅತ್ಯಂತ ವಿಶಿಷ್ಟ ಬರಹಗಾರರನ್ನಾಗಿ ರೂಪಿಸಿತು. ಅವರ ಈ ವಿಚಿತ್ರ ಪಯಣದ ಮೊದಲ ದೊಡ್ಡ ಹೆಜ್ಜೆಯೇ ‘ದಿ ನೋ-ಇಟ್-ಆಲ್’.
ಜಗತ್ತಿನ ಎಲ್ಲ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಅವರು ಸುಮಾರು 32 ಸಂಪುಟಗಳ ‘ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ’ ವಿಶ್ವಕೋಶವನ್ನು ‘A’ ಅಕ್ಷರದಿಂದ ‘Z’ ಅಕ್ಷರದವರೆಗೆ ಸಂಪೂರ್ಣ ವಾಗಿ ಓದಲು ನಿರ್ಧರಿಸಿದರು! ಸುಮಾರು 44 ಮಿಲಿಯನ್ ಪದಗಳ ಈ ಬೃಹತ್ ಗ್ರಂಥವನ್ನು ಓದಿ ಮುಗಿಸಲು ಅವರಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಯಿತು. ಈ ಪ್ರಯಾಣದಲ್ಲಿ ಅವರು ಗಳಿಸಿದ ಅಪಾರ ಜ್ಞಾನಕ್ಕಿಂತ ಹೆಚ್ಚಾಗಿ, ಎಲ್ಲವನ್ನೂ ತಿಳಿದಿದ್ದೇನೆ ಎಂಬ ಅಹಂಕಾರ ಬಂದಾಗ ತಮ್ಮ ಹೆಂಡತಿ ಮತ್ತು ಸ್ನೇಹಿತರ ನಡುವೆ ಅವರು ಎದುರಿಸಿದ ಹಾಸ್ಯಮಯ ಪ್ರಸಂಗಗಳು ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ.
ಇದಾದ ನಂತರ ಜೇಕಬ್ಸ್ ಕೈಗೊಂಡ ಮತ್ತೊಂದು ಸಾಹಸ ಇಡೀ ಜಗತ್ತಿನ ಗಮನ ಸೆಳೆಯಿತು. ಅದೇ ‘ದಿ ಇಯರ್ ಆಫ್ ಲಿವಿಂಗ್ ಬಿಬ್ಲಿಕಲಿ’ (The Year of Living Biblically). ಧರ್ಮಗ್ರಂಥಗಳಲ್ಲಿರುವ ನಿಯಮ ಗಳನ್ನು ಅಕ್ಷರಶಃ ಪಾಲಿಸಿದರೆ ಆಧುನಿಕ ಮನುಷ್ಯನ ಬದುಕು ಹೇಗಿರುತ್ತದೆ ಎಂಬುದನ್ನು ತಿಳಿಯಲು ಅವರು ಬೈಬಲ್ನ ಪ್ರತಿಯೊಂದು ನಿಯಮವನ್ನೂ ಒಂದು ವರ್ಷದ ಕಾಲ ಪಾಲಿಸಲು ನಿರ್ಧರಿಸಿದರು.
ಗಡ್ಡ ಬೋಳಿಸದೇ ಬಿಡುವುದು, ಮಿಶ್ರ ನೂಲಿನ ಬಟ್ಟೆಗಳನ್ನು ಧರಿಸದಿರುವುದು, ಸುಳ್ಳು ಹೇಳದಿರುವುದು, ಕೆಟ್ಟ ಆಲೋಚನೆಗಳನ್ನು ಮಾಡದಿರುವುದು, ಅಷ್ಟೇ ಅಲ್ಲ, ಬೈಬಲ್ನಲ್ಲಿ ಹೇಳಿರುವಂತೆ ವ್ಯಭಿಚಾರ ಮಾಡಿದವರ ಮೇಲೆ ಸಣ್ಣ ಕಲ್ಲುಗಳನ್ನು ಎಸೆಯುವಂಥ ನಿಯಮ ಗಳನ್ನೂ ನ್ಯೂಯಾರ್ಕ್ ಬೀದಿಗಳಲ್ಲಿ ಅತ್ಯಂತ ನಾಜೂಕಾಗಿ ಪಾಲಿಸಿ, ಧರ್ಮ ಮತ್ತು ಆಧುನಿಕತೆ ಯ ನಡುವಿನ ಸಂಘರ್ಷವನ್ನು ಅದ್ಭುತವಾಗಿ ಕಟ್ಟಿಕೊಟ್ಟರು. ಅವರ ಪ್ರಯೋಗಗಳು ಕೇವಲ ಬೌದ್ಧಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸೀಮಿತವಾಗಲಿಲ್ಲ.
ದೈಹಿಕ ಆರೋಗ್ಯದ ಕಡೆಗೂ ತಿರುಗಿದವು. ‘ಡ್ರಾಪ್ ಡೆಡ್ ಹೆಲ್ತಿ’ ಎಂಬ ಪುಸ್ತಕಕ್ಕಾಗಿ ಅವರು ಜಗತ್ತಿನ ಅತ್ಯಂತ ಆರೋಗ್ಯವಂತ ವ್ಯಕ್ತಿಯಾಗಲು ಪಣತೊಟ್ಟರು. ಇದಕ್ಕಾಗಿ ಅವರು ತಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ಪ್ರತ್ಯೇಕ ಗಮನ ನೀಡಿದರು. ನಿದ್ರೆಯ ಗುಣಮಟ್ಟ ಸುಧಾರಿಸುವುದರಿಂದ ಹಿಡಿದು, ಕಣ್ಣಿನ ವ್ಯಾಯಾಮ, ಹಲ್ಲುಜ್ಜುವ ಸರಿಯಾದ ವಿಧಾನ, ನಗುವಿನ ಥೆರಪಿ ಹಾಗೂ ನಡೆಯುತ್ತಲೇ ಕೆಲಸ ಮಾಡಲು ‘ಟ್ರೆಡ್ಮಿಲ್ ಡೆಸ್ಕ್’ ಬಳಸುವವರೆಗೆ ನೂರಾರು ಆರೋಗ್ಯ ಸಲಹೆಗಳನ್ನು ಒಂದೇ ಬಾರಿಗೆ ಪ್ರಯೋಗಿಸಿದರು. ಈ ಪ್ರಕ್ರಿಯೆಯಲ್ಲಿ ಆರೋಗ್ಯದ ಹುಚ್ಚು ಹೇಗೆ ನಮ್ಮ ನೆಮ್ಮದಿಯನ್ನೇ ಕಸಿದುಕೊಳ್ಳಬಹುದು ಎಂಬ ಸತ್ಯವನ್ನೂ ಅವರು ತೆರೆದಿಟ್ಟರು.
ಜೇಕಬ್ಸ್ ಅವರ ಕುತೂಹಲಕ್ಕೆ ಇನ್ನೊಂದು ಮುಖವಿದೆ, ಅದು ಮಾನವ ಸಂಬಂಧಗಳು ಮತ್ತು ಕೃತಜ್ಞತೆಯ ಬಗೆಗಿನ ಅನ್ವೇಷಣೆ. ‘ಥ್ಯಾಂಕ್ಸ್ ಎ ಥೌಸಂಡ್’ ಎಂಬ ಪುಸ್ತಕದಲ್ಲಿ ಅವರು ಒಂದು ಸಣ್ಣ ಕಪ್ ಕಾಫಿಯ ಹಿಂದಿರುವ ಶ್ರಮವನ್ನು ಅರಿಯಲು ಹೊರಟರು. ತಾವು ಪ್ರತಿದಿನ ಕುಡಿಯುವ ಒಂದು ಕಪ್ ಕಾಫಿ ತಯಾರಾಗಲು ಕಾರಣರಾದ ಪ್ರತಿಯೊಬ್ಬರಿಗೂ ಖುದ್ದಾಗಿ ‘ಧನ್ಯವಾದ’ ಹೇಳಲು ನಿರ್ಧರಿಸಿದರು.