ದೀಪಸಾಲು
ಗ.ನಾ.ಭಟ್ಟ
‘ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ | ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ || (ಭಗವದ್ಗೀತೆ: 2-28) ‘ಅರ್ಜುನ, ಜೀವಿಗಳು ಕಾಣದ ಮೂಲದಿಂದ ಬರುತ್ತವೆ. ಮಧ್ಯದಲ್ಲಿ ಕಾಣಿಸಿ ಕೊಳ್ಳುತ್ತವೆ. ಕಾಣದ ಕೊನೆಯಲ್ಲೇ ಸೇರಿಕೊಳ್ಳುತ್ತವೆ. ಈ ವಿಷಯದಲ್ಲಿ ಮರುಕ ಏಕೆ?’ ಎಂದು ಶ್ರೀಕೃಷ್ಣ ಅರ್ಜುನನ ಬಳಿ ಕೇಳುತ್ತಾನೆ. ಬದುಕಿನ ಬಗ್ಗೆ ಬಂದ ಕೃಷ್ಣನ ಮಾರ್ಮಿಕವಾದ ಮಾತು ಇದು. ನಮಗೆ ಹುಟ್ಟು-ಸಾವುಗಳ ಬಗ್ಗೆ ಗೊತ್ತಿಲ್ಲ. ಹುಟ್ಟು-ಸಾವುಗಳ ಮಧ್ಯದ ಬದುಕಷ್ಟೇ ನಮಗೆ ಗೊತ್ತು.
ಹುಟ್ಟು ಎಂದರೆ ಬೆಳಕು. ಸಾವು ಎಂದರೆ ಕತ್ತಲು. ಮಧ್ಯದ ಬದುಕು ಇದೆಯಲ್ಲ! ಅದೇ ಬೆಳಕೂ ಹೌದು; ಕತ್ತಲೆಯೂ ಹೌದು. ಆದರೆ ನಾವು ಕತ್ತಲಿನಿಂದ ಬಂದವರು. ನಡುವೆ ಒಂದಿಷ್ಟು ಸಮಯ ಬೆಳಕಿನಲ್ಲಿ ನಿಂತವರು. ಮತ್ತೆ ಕತ್ತಲಿನೆಡೆಗೇ ಹೋಗುವವರು. ಹಾಗೆಂದ ಮಾತ್ರಕ್ಕೆ ನಾವು ನಿರಾಶ ರಾಗಬೇಕಿಲ್ಲ. ಇಲ್ಲಿ ಒಂದು ಸ್ವಾರಸ್ಯವಿದೆ. ಕತ್ತಲೆಯ ತೊರೆಯಲ್ಲಿ ಬೆಳಕಿನ ಹಣತೆಯೆಂಬ ದೋಣಿಯನ್ನು ಸಾಗಿಸುತ್ತಿರುವವರು ನಾವು.
ಎಣ್ಣೆ ಹೊಯ್ದಷ್ಟು ಕಾಲ ಬದುಕಿನ ಹಣತೆಯೆಂಬ ದೋಣಿ ಸಾಗುತ್ತಿರುತ್ತದೆ. ಆ ಎಣ್ಣೆ ಸುರಿದು ದೀಪ ಬೆಳಗುವ ಹಬ್ಬವೇ ದೀಪಾವಳಿ. ಇದರ ಸಾಂಕೇತಿಕ ಅರ್ಥ ನಿಜಕ್ಕೂ ರೋಚಕ. ಎಣ್ಣೆ ಎಂದರೆ ಇನ್ನೂ ಒಂದು ಅರ್ಥವಿದೆ. ಎಣ್ಣೆ ಎಂದರೆ ಸ್ನೇಹ, ಅಂಟು, ಜಿಡ್ಡು ಎಂಬ ಅರ್ಥಗಳಿವೆ. ಅಂಟಿನ ನಂಟೇ ಈ ಬದುಕು. ಈ ನಂಟು ಇರುವಷ್ಟು ಕಾಲ ಬದುಕಿನ ಬೆಸುಗೆ ಗಟ್ಟಿಯಾಗಿರುತ್ತದೆ. ಅದು ಗಂಡು-ಹೆಣ್ಣಿನ ಬೆಸುಗೆಯಾಗಿರಬಹುದು. ಅಕ್ಕ-ತಂಗಿಯರ, ಅಣ್ಣ-ತಮ್ಮಂದಿರ, ಗೆಳೆಯರ ನಂಟಾಗಿರಬಹುದು.
ಇದನ್ನೂ ಓದಿ: G N Bhat Column: ಭಾರತದ ಅಸ್ಮಿತೆ ಎತ್ತಿಹಿಡಿದ ಏಕೈಕ ಪ್ರಧಾನಿ ಮೋದಿ
ದೈವ-ಭಕ್ತ ನಂಟಾಗಿರಬಹುದು. ಆದರೆ ಅದು ಭದ್ರವಾಗಿ ಬಿಗಿದ ಗಂಟಾಗಿರಬೇಕು ಅಷ್ಟೇ! ಅದು ಕೆಲವೊಮ್ಮೆ ಬಿಡಿಸಲಾರದ ಕಗ್ಗಂಟೂ ಆದೀತು! ಅದಕ್ಕೆ ಅವಕಾಶ ಕೊಡಬಾರದು. ಈ ಅಂಟು-ಗಂಟು-ನಂಟು ಭದ್ರವಾಗಿರಬೇಕಾದುದು ಮಾತ್ರವಲ್ಲ. ಅಷ್ಟೇ ಸುಂದರವೂ, ಆಹ್ಲಾದಮಯವೂ, ಅರ್ಥಪೂರ್ಣವೂ ಆಗಿರಬೇಕು. ಅವಿಲ್ಲದಿದ್ದರೆ ಅದು ನರಕವೇ ಆಗಿಬಿಡುತ್ತದೆ. ಆ ನರಕದಿಂದ ನಾವು ಪಾರಾಗಬೇಕು. ಅದಕ್ಕೆಂದೇ ನರಕಚತುರ್ದಶಿಯಂದು ದೀಪ ಬೆಳಗಬೇಕು.
ಬದುಕನ್ನು ಸುಂದರವಾಗಿಸುವ ಸಂಕೇತವೇ ದೀಪದ ಬೆಳಗು. ಇನ್ನು ನರಕನ ಚಾರಿತ್ರಿಕ, ಐತಿಹಾಸಿಕ ವ್ಯಕ್ತಿತ್ವವನ್ನು ಕುರಿತು ಹೇಳುವುದಾದರೆ ಇವನೊಬ್ಬ ಮಹಾ ಅಸುರ ಶ್ರೀಕೃಷ್ಣ- ಸತ್ಯಭಾಮೆಯರ ಮಗ. ಭೂಪುತ್ರ. ಭೂಮಿಯಲ್ಲಿ ಹುಟ್ಟಿದ್ದರಿಂದಲೇ ಇವನನ್ನು ಭೌಮಾಸುರ ಅಂತಲೂ ಕರೆಯು ತ್ತಾರೆ. ಆದರೆ ಭೌಮಾಸುರನಿಗೆ ತಾನು ಭೂಪುತ್ರ ಎಂಬ ದಿವ್ಯಭಾವವಿಲ್ಲ. ಮಣ್ಣಿನ ಮಗ ಎಂಬ ಸೊಕ್ಕು, ಅಹಂಕಾರ ಇದೆ. ಇವನ ಹುಟ್ಟೇ ಒಂದು ವಿಚಿತ್ರ!
ಶ್ರೀಮನ್ಮಹಾವಿಷ್ಣುವಿನ ವರಾಹಾವತಾರ ಕಾಲದಲ್ಲಿ ಆ ವರಾಹ ಒಂದು ಗೋಳಾಕೃತಿಯನ್ನು (ಭೂಮಿಯನ್ನು) ಮೇಲಕ್ಕೆ ಎತ್ತುತ್ತಿದೆ. ಆ ವರಾಹವೇ ಭಗವಂತನಾದ ಶ್ರೀಕೃಷ್ಣ. ಅವನಿಗೆ ಸಾವಿರ ತೋಳುಗಳು. ಆ ಗೋಳವೇ ಸತ್ಯಭಾಮೆ. ಅಷ್ಟರಲ್ಲಿ ಆ ಸಾವಿರ ತೋಳಿನ ವ್ಯಕ್ತಿಯ ತೋಳೊಂದರಿಂದ ಒಂದು ಬೆವರಿನ ಹನಿ ನೀರಿನಲ್ಲಿ ಬೀಳುತ್ತದೆ. ಅದು ರಾಕ್ಷಸಾಕಾರವನ್ನು ಧರಿಸಿ, ಭೂಮಿಯನ್ನು ಸ್ಪರ್ಶಿಸಿ ಗೋಳದಿಂದ ಕೆಳಗೆ ಸರಿಯುತ್ತದೆ. ಹಾಗೆ ಸರಿದ ಆ ವ್ಯಕ್ತಿಯೇ ನರಕಾಸುರ.
ಕಪ್ಪಾದ ಕಬ್ಬಿಣದಂತಹ ಮೈ. ದುಂಡು ಕಣ್ಣುಗಳು. ಕಿಡಿಗಾರುತ್ತಾ, ಸುತ್ತ ನೋಡುತ್ತಾ, ಕೈಯ ಗದೆಯನ್ನು ತಿರುವುತ್ತಾ ಗೋಲದ ಮೇಲೆಯೇ ಜಿಗಿದು ನಿಲ್ಲುತ್ತಾನೆ. ಬೆವರಿನ ಬೆಲೆಯನ್ನು ತಿಳಿಯದ ಧೂರ್ತ ಆತ; ಭೂಮಿಯ ಸ್ಪರ್ಶವಿದ್ದೂ ಅದರ ಪಾವಿತ್ರ್ಯವನ್ನು ತಿಳಿಯದ ದೈತ್ಯ. ಎಂತಹ ವಿಚಿತ್ರ! ಒಳ್ಳೆಯವರಿಗೆ ಕೆಟ್ಟ ಮಕ್ಕಳು ಹುಟ್ಟುವುದು, ಕೆಟ್ಟವರಿಗೆ ಒಳ್ಳೆಯ ಮಕ್ಕಳು ಹುಟ್ಟುವುದು! ಕಟ್ಟಿಗೆಯಲ್ಲೇ ಹುಟ್ಟಿದ ಅಗ್ನಿ ಆ ಕಟ್ಟಿಗೆಯನ್ನೇ ಸುಡುವಂತೆ ನಿರಪರಾಧಿಗಳ ಹೊಟ್ಟೆಯಲ್ಲಿ ಲೋಕಕಂಟಕರು ಹುಟ್ಟುವುದು ಹೊಸದೇನೂ ಅಲ್ಲ. ವಿಶ್ರವಸುವಿನಂತಹ ಮಹಾತಪಸ್ವಿಗೆ ರಾವಣನಂತಹ ಲೋಕವಿಧ್ವಂಸಕ, ಅತ್ಯಾಚಾರಿ, ಲಂಪಟ ಮಗ ಹುಟ್ಟಿದ.
ಜಗತ್ತಿಗೇ ಬೆಳಕನ್ನು ನೀಡುವ ಸೂರ್ಯನಿಗೆ ಅಂಗವಿಕಲ ಮಗ-ಅರುಣ ಹುಟ್ಟಲಿಲ್ಲವೆ? ಕ್ಷೀರಸಮುದ್ರ ದಲ್ಲೇ ಹಾಲಾಹಲ ವಿಷ ಹುಟ್ಟಲಿಲ್ಲವೆ? ಇದೇ ಜಗತ್ತಿನ ವಿಚಿತ್ರ! ಅಂತೆಯೇ ಶ್ರೀಕೃಷ್ಣ-ಸತ್ಯಭಾಮೆಯರಿಗೆ ಇಂತಹ ಲೋಕಕಂಟಕ ಮಗ. ಸ್ವತಃ ದೇವರಿಗೇ ಇಂತಹ ಮಗ. ಇವನ ವಾಸಸ್ಥಳ ಪ್ರಾಗ್ಜ್ಯೋತಿಷಪುರ. ಈಗಿನ ಅಸ್ಸಾಂ ರಾಜ್ಯ. ಪರ್ವತಸೀಮೆಯ ರಾಜ್ಯ. ಗಿರಿದುರ್ಗ, ಜಲದುರ್ಗ, ವನದುರ್ಗಗಳಿಂದ ಆವೃತವಾದ ಪ್ರದೇಶ. ಏರು-ತಗ್ಗುಗಳಿಂದ ಕೂಡಿದ ಅಸಮ ಪ್ರದೇಶ ಅದು. ಅದಕ್ಕಾಗಿಯೇ ಅದು ಅಸಮ ದೇಶ. ವಿದೇಶಿಯರ ಕೈಯಲ್ಲಿ ಅದು ಅಸ್ಸಾಂ ಆಗಿ ಹೋಯಿತು.
ಇಂಥಾದ್ದು ಎಷ್ಟೋ! ಮಡಿಕೇರಿ- ಮರ್ಕೇರಾ, ವಿಜಯಪುರ- ಬಿಜಾಪುರ, ಕೊಡಗು- ಕೂರ್ಗ್, ಕನ್ನಡ-ಕೆನರಾ... ಹೀಗೆ ಅನೇಕ ಹೆಸರುಗಳು ಅಪಭ್ರಂಶಗೊಂಡವು. ಚೀನವೂ ಇವನ ಆಡಳಿತಕ್ಕೆ ಒಳಪಟ್ಟಿತ್ತು. ಮೇಘಾಲಯ, ನಾಗಾಲ್ಯಾಂಡ್ನಂತಹ ಗುಡ್ಡಗಾಡು ಪ್ರದೇಶ ಕೂಡಾ ಇವನ ಆಡಳಿಕ್ಕೆ ಸೇರಿತ್ತು. ‘ಸ ಕಿರಾತೈಶ್ಚ ಚೀನೈಶ್ಚ ಯತಃ ಪ್ರಾಗ್ಜೋತಿಷೋಭವತ್’ ಎಂದು ಭಾಗವತ ಹೇಳುತ್ತದೆ. ಇಂತಹ ಅಸುರನ ಲೋಕೋಪದ್ರವ ಅವ್ಯಾಹತವಾಗಿ ಸಾಗಿತು. ಇಡೀ ಭೂಮಿಯಷ್ಟೇ ಅಲ್ಲ.
ದೇವಲೋಕವನ್ನೂ ಆಕ್ರಮಿಸಿ ದೇವತೆಗಳನ್ನೂ ಸೋಲಿಸಿದ. ದೇವತೆಗಳು ವಿಷ್ಣುವಿನ ಬಳಿ ಮೊರೆಯಿಟ್ಟರು. ವಿಷ್ಣು ಅವನನ್ನು ಸಂಹರಿಸುವುದಾಗಿ ಮಾತು ಕೊಟ್ಟ. ಹಾಗೆಯೇ ಸತ್ಯಭಾಮೆ ಸಹಿತ, ಗರುಡನನ್ನೂ ಸೇರಿಸಿಕೊಂಡು ಪ್ರಾಗ್ಜೋತಿಷಪುರಕ್ಕೆ ಮುತ್ತಿಗೆ ಹಾಕಿದ. ಮೊದಲು ಅವನ ಸೇನಾಪತಿ ಮುರನನ್ನು ಕೊಂದು ಮುಗಿಸಿದ. ಹಾಗಾಗಿಯೇ ಕೃಷ್ಣನನ್ನು ಮುರಮರ್ದನ ಅನ್ನುವುದು. ಅನಂತರ ನರಕಾಸುರನನ್ನು ಕೊಂದು ಮುಗಿಸಿ ಲೋಕಕ್ಕೆ ನೆಮ್ಮದಿ, ಶಾಂತಿಯನ್ನು ತಂದ. ನರಕ ಸೆರೆಯಲ್ಲಿಟ್ಟಿದ್ದ ಹದಿನಾರು ಸಾವಿರದ ನೂರು ಹೆಣ್ಣುಮಕ್ಕಳ ಸೆರೆ ಬಿಡಿಸಿ, ಅವರನ್ನು ತಾನೇ ಮದುವೆಯಾದ. ಅವರ ಹೃದಯಮಂದಿರಲ್ಲಿ ಕೃಷ್ಣ ಬೆಳಕಾದ. ನರಕ ಸಾಯುವಾಗ ಭಗವಂತನನ್ನು ಕುರಿತು-‘ಪ್ರಭು, ನನ್ನ ಉದ್ಧಟತನಕ್ಕೆ ಕ್ಷಮೆ ಕೇಳುತ್ತೇನೆ. ನನಗೊಂದು ವರವನ್ನು ಕೊಡು. ನಾನು ಸೋತು ಸತ್ತ ದಿನವನ್ನೂ ನನ್ನನ್ನೂ ಜಗತ್ತು ಇರುವ ತನಕ ಎಲ್ಲರೂ ನೆನೆಯುವಂತಾಗಬೇಕು. ಅಂತಹ ವರವನ್ನು ಕೊಡು’ ಎಂದು ಕೇಳಿದ. ಕೃಷ್ಣ ‘ತಥಾಸ್ತು’ ಎಂದ. ಆ ದಿನವೇ ನರಕ ಚತುರ್ದಶೀ. ಇನ್ನು ಬಲಿಯ ವಿಚಾರ. ಇವನೂ ಅಸಾಮಾನ್ಯ ವಿಕ್ರಮಿ; ಮಹಾ ಬಲಶಾಲಿ. ಪರಮ ವೈಷ್ಣವ ಶಿರೋಮಣಿ. ತಾತ ಪ್ರಹ್ಲಾದನಂತೆ ಇವನೂ ಕೂಡಾ ವಿಷ್ಣುವಿನ ಭಕ್ತ. ಆದರೆ ಇವನು ಗುರು ಶುಕ್ರಾಚಾರ್ಯ ಮಾತ್ರ ವಿಷ್ಣುದ್ವೇಷಿ. ದೈವಬಲಕ್ಕಿಂತ ಪೌರುಷಬಲವೇ ಮೇಲು ಅನ್ನುವವನು.
ದೇವಲೋಕಾಕ್ರಮಣಕ್ಕೆ ಪ್ರೇರಣೆ ಕೊಟ್ಟವನೇ ಇವನು. ಒಲ್ಲದ ಮನಸ್ಸಿನಿಂದ ಬಲಿ ದೇವಲೋಕಕ್ಕೆ ಆಕ್ರಮಣ ಮಾಡಿದ. ಆದರೆ ದೇವತೆಗಳೆಲ್ಲರೂ ಓಡಿಹೋಗಿ ಅಡಗಿ ಕೂತರು. ಸೂರ್ಯ-ಚಂದ್ರರೂ ಮರೆಯಾಗಿಬಿಟ್ಟರು. ಅದರ ಫಲ ಬಲಿಗೆ ಕಾಲದ ಗಣನೆ ತಪ್ಪಿಹೋಯಿತು. ತಿಥಿ, ವಾರ, ನಕ್ಷತ್ರ, ತಿಂಗಳು, ವರ್ಷ ಯಾವುದೆಂದೇ ತಿಳಿಯದಾಯಿತು. ದೈತ್ಯಜೀವನಕೆ ಒಗ್ಗಿದ್ದ ದೈತ್ಯರಿಗೆ ದೇವಲೋಕದ ಸುಖ ಒಗ್ಗಲಿಲ್ಲ. ದೇವತೆಗಳ ಸೋಮರಸ ಸಪ್ಪೆಯೆನಿಸಿತು. ಅಪ್ಸರೆಯರು ಮನಃಪೂರ್ವಕವಾಗಿ ರಮಿಸಲಿಲ್ಲ; ಸುಖ ಕೊಡಲಿಲ್ಲ. ಬಲಿಗೆ ಇವೆಲ್ಲವೂ ಬಂಜೆಯ ಸುಖ ಅನ್ನಿಸಿಬಿಟ್ಟಿತು.
ಮೋಕ್ಷ ಕಾಮಿಯಾದ ಅವನಿಗೆ ದೈವ ಒಲಿಯಿತು. ಮಹಾವಿಷ್ಣು ವಾಮನನಾಗಿ ಜನ್ಮವೆತ್ತಿ ಅವನ ಬಳಿ ಹೋಗಿ ‘ತ್ರಿಪಾದಪರಿಮಿತಾಭೂಮಿಃ’- ‘ಮೂರು ಅಡಿಯಷ್ಟು ಅಳತೆಯ ಭೂಮಿಯನ್ನು ಕೊಡು’ ಎಂದು ಕೇಳಿ, ಅದನ್ನು ಪಡೆದು, ಒಂದು ಪಾದದಿಂದ ಇಡೀ ಭೂಮಿಯನ್ನೂ, ಮತ್ತೊಂದು ಪಾದದಿಂದ ಇಡೀ ಊರ್ಧ್ವಲೋಕವನ್ನೂ ಅಳೆದು, ಇಡೀ ವಿಶ್ವವನ್ನು ವ್ಯಾಪಿಸಿಬಿಟ್ಟ. ಬಲಿಯ ಬಳಿ ಕೊಡಲು ಅವನ ಪ್ರಾಣದ ಹೊರತು ಇನ್ನೇನೂ ಇರಲಿಲ್ಲ. ಬಲಿ ತುಂಬಾ ಜಾಣ. ಭಗವಂತನಿಗೆ ತನ್ನ ತಲೆಯನ್ನೇ ಒಂದು ಲೋಕವೆಂದು ಭಾವಿಸು ಅಂತ ಹೇಳುತ್ತಾ, ತನ್ನ ತಲೆಯನ್ನೇ ಅರ್ಪಿಸಿಬಿಟ್ಟ.
ಇದರಿಂದ ತ್ರಿವಿಕ್ರಮನಾದ ವಾಮನ ಸಂತುಷ್ಟನಾದ. ಹಾಗಾದರೆ ಬಲಿ ಇಲ್ಲಿ ಮಾಡಿದ ತಪ್ಪೇನು? ಈಶಾವಾಸ್ಯಮಿದಂ ಸರ್ವಂ | ಯತ್ಕಿಂಚ ಜಗತ್ಯಾಂ ಜಗತ್ | ತೇನ ತ್ಯಕ್ತೇನ ಭುಂಜೀಥಾಃ | ಮಾ ಗೃಧಃ ಕಸ್ಯಸ್ವಿದ್ಧನಮ್ || ‘ಈ ಜಗತ್ತಿನಲ್ಲಿ ಯಾವು ಯಾವುದು ಇವೆಯೋ ಅವೆಲ್ಲವೂ ಈಶ್ವರನ ಮನೆ ಮತ್ತು ಅವಕ್ಕೆಲ್ಲಾ ಈಶ್ವರನು ಮನೆ. ಈ ಜಗತ್ತು ತನ್ನದಲ್ಲ ಎಂಬ ಭಾವದಿಂದ ಅನುಭವಿಸಬೇಕು. ಇದು ಭಗವಂತನಿಂದ ಬಂದ ಪ್ರಸಾದವೆಂದು ಭಾವಿಸಬೇಕು. ಯಾರೊಬ್ಬರ ಧನಕ್ಕಾಗಿಯೋ, ಸಂಪತ್ತಿಗಾಗಿಯೋ ಆಸೆ ಪಡದೆ ಬದುಕಬೇಕು’. ಮಾ ಗೃಧಃ ಕಸ್ಯಸ್ವಿದ್ಧನಮ್. ಆದರೆ ಬಲಿ ಹಾಗೆ ಬದುಕಿರಲಿಲ್ಲ. ಬೇರೆಯವರನ್ನು ನಿರ್ಗತಿಕರನ್ನಾಗಿಸಿದ. ದುರಾಕ್ರಮಣ ಮಾಡಿದ. ಬೇರೆಯವರ ಸಂಪತ್ತನ್ನು ಕೊಳ್ಳೆ ಹೊಡೆದ. ಜಗದೀಶ್ವರ ನಾನಾತ್ವದಲ್ಲಿ ಇಟ್ಟ ಸೂತ್ರ ಸಹಬಾಳ್ವೆ ಎಂಬುದನ್ನು ಮರೆತ. ಅದರ ಬದಲಿಗೆ ದ್ವೇಷ-ವೈರವನ್ನು ಸಾಧಿಸಿದ. ಎಲ್ಲೆಲ್ಲೂ ನನ್ನ ಪ್ರಭುತ್ವವೇ ಇರಬೇಕೆಂದು ಬಯಸಿದ.
ಐಶ್ವರ್ಯಮದದಿಂದ ಕೊಬ್ಬಿದ. ತಾನೇ ಜಗದೇಕ ಸಾರ್ವಭೌಮನೆಂಬ ಅಹಂಕಾರದಿಂದ ಮೆರೆದ. ಮಹಾಬಲಿಯಾಗಿ ಧರ್ಮಸತ್ವದಲ್ಲಿ ಬಲಿಷ್ಠನಾಗಿರಬೇಕಾದ ಆತ ಆಗ ಬಲಿಪಶುವಾಗಿ ಹೋದ. ದಾನೀ, ವದಾನ್ಯ, ದಾನಶೂರ, ನಿಸ್ಸೀಮ ದಾನವೈಭವ ಎಂದು ಹೇಳಿಸಿಕೊಳ್ಳುವ ಕೀರ್ತಿಕಾಮ ಬೇರೆ ಆದ. ಯಜ್ಞ-ದಾನ-ತಪಸ್ಸುಗಳನ್ನು ಯಾವುದೋ ಭೌತಿಕಕಾಮನೆಯಿಂದಲೋ, ಕೀರ್ತಿಯ ಆಸೆಯಿಂದಲೋ ಮಾಡಿದರೆ ಅವು ಉದ್ದಿಷ್ಟ ಫಲಗಳನ್ನು ಕೊಡಲಾರವು ಎಂಬುದಕ್ಕೆ ಅವನೇ ನಿದರ್ಶನವಾಗಿ ಹೋದ.
ವಾಮನನಿಗೆ ದಾನ ಮಾಡುವಾಗ ಆತ ಯಾಗವೊಂದರಲ್ಲಿ ತೊಡಗಿಕೊಂಡಿದ್ದ. ಅದೇ ಅವನಿಗೆ ಮೃತ್ಯುವಾಗಿಹೋಯಿತು. ಬಲಿಯೂ ಕೂಡಾ ತನ್ನ ತಪ್ಪನ್ನು ಒಪ್ಪಿಕೊಂಡ.
ಮಹಾವಿಷ್ಣು ಅವನ ಭಕ್ತಿಗೆ ಮೆಚ್ಚಿ ತನ್ನ ಒಂದು ಅಂಶದಿಂದ ಗದಾಧರನಾಗಿ ಅವನ ಮನೆಯ ಬಾಗಿಲು ಕಾಯುತ್ತಾ ಅವನನ್ನು ಅನುಗ್ರಹಿಸಿದ. ವರ್ಷಕ್ಕೆ ಒಂದು ಸಲ ಕಾರ್ತಿಕ ಶುದ್ಧ ಪಾಡ್ಯದಂದು ಭೂಲೋಕಕ್ಕೆ ಬಂದು ಪೂಜೆಯನ್ನು ಸ್ವೀಕರಿಸು ಎಂದು ಅವನಿಗೆ ಪರಮಾನುಗ್ರಹ ಮಾಡಿದ. ಅದೇ ಬಲಿಪಾಡ್ಯಮಿ. ಹಾಗಾದರೆ ಈ ನರಕಚತುರ್ದಶೀ ಮತ್ತು ಬಲಿಪಾಡ್ಯಮಿಯ ಮಧ್ಯದ ಅಮಾವಾಸ್ಯೆಯಂದು ಆಚರಿಸಲ್ಪಡುವ ಲಕ್ಷ್ಮೀ ಪೂಜೆಗೆ ಏನು ಆರ್ಥ? ನಾವಿದನ್ನು ಬೆಳಕಿನ ಹಬ್ಬವೆಂದು ಕರೆದೆವಷ್ಟೇ! ಇಲ್ಲಿ ಬೆಳಕು ಅಂದರೆ ಸಂಪತ್ತಿನ ಸಂಕೇತವೂ ಹೌದು. ಅದಕ್ಕೆಂದೇ ಈ ಹಬ್ಬದಲ್ಲಿ ಧನಲಕ್ಷ್ಮಿಯ ಪೂಜೆ ಮಾಡುವುದು. ಗದ್ದೆಯ ಪಚ್ಚೆ ಪಯಿರು ಆಗಷ್ಟೇ ಮನೆ ಸೇರಿರುತ್ತದೆ.
ಅಡಿಕೆ ಮರಗಳೂ ಫಲಭರಿತವಾಗಿ ಕೊಯ್ಲಿಗೆ ಬಂದಿರುತ್ತವೆ. ಪ್ರತಿಮನೆಯೂ ಅನುದಿನವೂ ಧನಧಾನ್ಯ ಗಳಿಂದ ತುಂಬಿ ತುಳುಕಲಿ. ಆನಂದದಿಂದ ಬೆಳಗಲಿ. ದಾರಿದ್ರ್ಯದ ಕತ್ತಲ ಕಾವಳ ನೀಗಲಿ ಎಂಬ ಹಾರೈಕೆಯ ಕ್ಷಣವೇ ಲಕ್ಷ್ಮೀ ಪೂಜೆಯ ಮಥಿತಾರ್ಥ. ಆದರೆ ಒಂದು- ನಮ್ಮ ಒಳಗೆ ಬೆಳಕು ಹರಿಯಬೇಕು. ಒಳಗೆ ಬೆಳಕಾಗದೆ ಹೊರಗೆ ಎಷ್ಟೇ ದೀಪ ಹಚ್ಚಿದರೂ ಫಲವಿಲ್ಲ. ಅರಿಯುವ ಅರಿವಿನಿಂದ ಆನಂದ. ಅದೇ ಒಳಬೆಳಕು. ಇದರ ಸಂಕೇತ ಹೊರಬೆಳಕು. ನಮ್ಮ ಹೃದಯದ ಹಣತೆಯಲ್ಲಿ ಸ್ನೇಹದ ಎಣ್ಣೆ ಹೊಯ್ದು ವಿಶ್ವಬಾಂಧವ್ಯದ ದೀಪ ಹಚ್ಚಬೇಕು. ಆಗಲೇ ನಿಜವಾದ ದೀಪಾವಳಿಯಾಗುತ್ತದೆ.