ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R‌ T Vittalmurthy Column: ಟೇಕ್‌ ಆಫ್‌ ಆಗುತ್ತಿದೆ ಡಿ.ಕೆ.ಫ್ಲೈಟ್

ಡಿ.ಕೆ.ಶಿವಕುಮಾರ್ ನೇತೃತ್ವದ ಮೊದಲ ಕಂತಿನ ಸಂಪುಟ ಸಾಲಿಡ್ಡಾಗಿದೆಯಾದರೂ ಅದರಲ್ಲಿ ‘ಅಹಿಂದ’ ವರ್ಗಗಳ ಮೇಜರ್ ಪಿಲ್ಲರುಗಳು ಕಾಣಿಸುತ್ತಿಲ್ಲ. ಈ ಪೈಕಿ ಮುಖ್ಯರಾದವರು ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪ. ರಾಜ್ಯದಲ್ಲಿ ಅಹಿಂದ ಚಳವಳಿ ತಲೆ ಎತ್ತಲು ಹೆಚ್.ಸಿ.ಮಹದೇಪ್ಪ ಪವರ್ ಫುಲ್ ಆದ ಕಾಣಿಕೆ ನೀಡಿದ್ದಾರೆ.

ಮೂರ್ತಿಪೂಜೆ

ಕಳೆದ ವಾರ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಒಂದು ಚೀಟಿ ಹೊರ ತೆಗೆದರಂತೆ. ಅವರೇನು ಮಾಡುತ್ತಾರೆ ಅಂತ ಮುಖ್ಯಮಂತ್ರಿಗಳು ನೋಡುತ್ತಿದ್ದಂತೆಯೇ ಅವರ ಕೈಗೆ ರಾಹುಲ್ ಗಾಂಧಿ ಈ ಚೀಟಿಯನ್ನು ಕೊಟ್ಟಿದ್ದಾರೆ. ಅವರು ಕೊಟ್ಟ ಚೀಟಿಯನ್ನು ಡಿ.ಕೆ.ಶಿವಕುಮಾರ್ ಅವರು ಬಿಚ್ಚಿ ನೋಡಿದರೆ ಅದರಲ್ಲಿ ಕೃಷ್ಣ ಭೈರೇಗೌಡರ ಹೆಸರು ಕಾಣಿಸಿದೆ.

ಅದನ್ನು ಅವರು ನೋಡುತ್ತಿದ್ದಂತೆಯೇ ರಾಹುಲ್ ಗಾಂಧಿ ಅವರು: ‘ಶಿವಕುಮಾರ್ ಜೀ, ಸಂಪುಟ ಸದಸ್ಯರಿಗೆ ಖಾತೆ ಹಂಚುವಾಗ ಕೃಷ್ಣ ಭೈರೇಗೌಡರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೊಡಿ. ಯಾವ ಕಾರಣಕ್ಕೂ ತಪ್ಪಿಸಬೇಡಿ’ ಎಂದಿದ್ದಾರೆ. ಸರಿ, ರಾಹುಲ್ ಗಾಂಧಿಯವರೇ ಪರ್ಸನಲ್ ಇಂಟ್ರೆಸ್ಟು ತೋರಿಸಿದ ಮೇಲೆ ಡಿ.ಕೆ.ಶಿವಕುಮಾರ್ ಏನು ಮಾಡಲು ಸಾಧ್ಯ? ಹಾಗಂತಲೇ ಸಂಪುಟಕ್ಕೆ ಸೇರ್ಪಡೆಯಾದವರಿಗೆ ಖಾತೆ ಹಂಚುವಾಗ ಕೃಷ್ಣ ಭೈರೇಗೌಡರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದಾರೆ. ಆದರೆ ಹೀಗೆ ಕೊಡುವ ಹೊತ್ತಿಗಾಗಲೇ ಅವರಿಗೆ ಒಂದು ವಿಷಯ ಕನ್ ಫರ್ಮ್ ಆಗಿದೆ. ಅದೆಂದರೆ ಖಾತೆ ಹಂಚಿಕೆಯ ವಿಷಯದಲ್ಲಿ ಯಾವತ್ತೂ ಮೂಗು ತೂರಿಸದ ರಾಹುಲ್ ಗಾಂಧಿ ಈಗ ಕರ್ನಾಟಕದಲ್ಲಿ ತಮಗೆ ಪರ್ಯಾಯವಾಗಿ ಪವರ್ ಸೆಂಟರ್ ಆಗಿರುವ ನಾಯಕರೊಬ್ಬರ ಮಾತಿನ ಪ್ರಕಾರ ಈ ಕೆಲಸ ಮಾಡಿದ್ದಾರೆ ಎಂಬುದು.

ಅಷ್ಟೇ ಅಲ್ಲ, ಇದು ತಮ್ಮ ಸರಕಾರವನ್ನು ಕಟ್ಟಿ ಹಾಕುವ ಮೊದಲ ಯತ್ನ ಎಂಬುದೂ ಕನ್ʼಫರ್ಮ್ ಆಗಿದೆ. ಅವರ ಈ ಲೆಕ್ಕಾಚಾರ ಸುಳ್ಳಾಗಿಲ್ಲ. ಯಾಕೆಂದರೆ ತಮಗೆ ಜಲಸಂಪನ್ಮೂಲ ಖಾತೆ ಕೊಟ್ಟು ಕೃಷ್ಣ ಭೈರೇಗೌಡರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಲಾಗಿದೆ ಎಂಬುದು ತಿಳಿಯುತ್ತಲೇ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಕುದ್ದು ಹೋಗಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ ತಮ್ಮ ಮಂತ್ರಿಗಿರಿಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: R T Vittalmurthy Column: ಸಿದ್ದು ವಿದಾಯದ ಅಂತಿಮ ಕ್ಷಣಗಳು

ಕಾರಣ? ಮೊದಲನೆಯದಾಗಿ ರಾಜಧಾನಿ ಬೆಂಗಳೂರಿನಲ್ಲಿ ದಶಕಗಳ ಕಾಲದಿಂದ ದುಡಿದು ಪಕ್ಷದ ನೆಲೆಯನ್ನು ಭದ್ರಗೊಳಿಸಿದ್ದು ತಾವು. ಹೀಗೆ ಬೆಂಗಳೂರಿನಲ್ಲಿ ಪಕ್ಷದ ಕೋಟೆಯನ್ನು ಕಟ್ಟಿದ ತಮಗೆ ಅದರ ಅಭಿವೃದ್ಧಿಗೆ ಏನು ಮಾಡಬೇಕು ಅಂತ ಇಂಚಿಂಚೂ ಗೊತ್ತಿರುತ್ತದೆ. ಹೀಗಿರುವಾಗ ನ್ಯಾಯಸಮ್ಮತವಾಗಿ ತಮಗೆ ಬೆಂಗಳೂರು ನಗರಾಭಿವೃದ್ಧಿಯನ್ನು ಕೊಡಬೇಕು. ಆದರೆ ಅದನ್ನು ಬಿಟ್ಟು ತಮಗೆ ಆಸಕ್ತಿಯೇ ಇಲ್ಲದ ಖಾತೆಯನ್ನು ಕೊಟ್ಟಿರುವುದು ರಾಮಲಿಂಗಾರೆಡ್ಡಿ ಅವರಿಗೆ ಸಹ್ಯವಾಗಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ರಚನೆ ಯಾದಾಗ ರಾಮಲಿಂಗಾರೆಡ್ಡಿಯವರಿಗೆ ಸಾರಿಗೆ ಖಾತೆ ಕೊಡಲಾಗಿತ್ತಲ್ಲ? ಆಗಲೂ ರೆಡ್ಡಿಯವರಿಗೆ ಅಸಮಾಧಾನವಾಗಿತ್ತು. ಆದರೆ ಆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಾರಿಗೆ ಜತೆ ಮುಜರಾಯಿ ಖಾತೆ ಇಟ್ಟುಕೊಳ್ಳಿ ಅಂತ ಹೇಳಿದ್ದರು.

ಆದರೆ ಅವತ್ತು ಸಾರಿಗೆ ಜತೆ ಮುಜರಾಯಿ ಖಾತೆ ಕೊಟ್ಟರು ಅಂತ ರಾಮಲಿಂಗಾರೆಡ್ಡಿ ಸಮಾಧಾನ ಗೊಂಡಿರಲಿಲ್ಲ. ಬದಲಿಗೆ ಅವತ್ತು ಮಾತನಾಡುತ್ತಾ ಡಿ.ಕೆ.ಶಿವಕುಮಾರ್ ಅವರು: ‘ಎರಡೂವರೆ ವರ್ಷಗಳ ನಂತರ ನಾನು ಸಿಎಂ ಆಗುತ್ತೇನೆ. ಆಗ ನಿಮಗೆ ಮಸ್ಟ್ ಆಂಡ್ ಶುಡ್ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುತ್ತೇನೆ’ ಎಂದಿದ್ದರು.ಹೀಗಾಗಿ ಅವತ್ತು ಒಲ್ಲದ ಮನಸ್ಸಿನಿಂದಲೇ ರಾಮಲಿಂಗಾರೆಡ್ಡಿಯವರು ಸಾರಿಗೆ ಮತ್ತು ಮುಜರಾಯಿ ಖಾತೆಯನ್ನು ವಹಿಸಿಕೊಂಡಿದ್ದರು.

ಆದರೆ ಅವತ್ತು ತಮಗೇನೇ ಅಸಮಾಧಾನವಿರಲಿ, ಆದರೆ ಸಾರಿಗೆ ಮತ್ತು ಮುಜರಾಯಿ ಖಾತೆಯನ್ನು ರಾಮಲಿಂಗಾರೆಡ್ಡಿ ಅದ್ಭುತವಾಗಿ ನಿರ್ವಹಿಸಿದರು. ಆದರೆ ಹೀಗೆ ಕೊಟ್ಟ ಖಾತೆಯನ್ನು ಚಂದಗೆ ನಿರ್ವಹಿಸಿದರೂ ಪುನಃ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಪ್ಪಿಸಿದ ಈಗಿನ ಬೆಳವಣಿಗೆ ರಾಮಲಿಂಗಾರೆಡ್ಡಿ ಅವರಲ್ಲಿ ಅಸಮಾಧಾನ ಸೃಷ್ಟಿಸಿದೆ. ಹೀಗಾಗಿ ಅವರು ಮಂತ್ರಿಗಿರಿಯ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

6

ಯಾವಾಗ ಅವರು ತಮ್ಮ ರಾಜೀನಾಮೆ ಪತ್ರ ಕೊಟ್ಟರೋ? ಆಗ ಸಹಜವಾಗಿಯೇ ಡಿ.ಕೆ.ಶಿವಕುಮಾರ್ ಚಿಂತಿತರಾಗಿದ್ದಾರೆ. ಅಷ್ಟೊತ್ತಿಗಾಗಲೇ ಕೆಲವರು: ‘ಕೊಟ್ಟ ಖಾತೆಯನ್ನು ರಾಮಲಿಂಗಾರೆಡ್ಡಿ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಅವರ ರಾಜೀನಾಮೆ ಅಂಗೀಕರಿಸಿ ಬೇರೆಯವರಿಗೆ ಆ ಖಾತೆ ಕೊಡಿ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ’ ಅಂತ ಪುಕಾರು ಹಬ್ಬಿಸಲು ಯತ್ನಿಸಿದ್ದಾರಾ ದರೂ ಅದು ಎಷ್ಟು ಸುಳ್ಳು ಎಂಬುದು ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆ. ಅಷ್ಟೇ ಅಲ್ಲ, ಇವತ್ತು ಜಿಬಿಎ ಚುನಾವಣೆಗಳು ಹತ್ತಿರವಾಗಿರುವ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ಅವರೊಬ್ಬರು ರಣಾಂಗಣದಿಂದ ವಾಪಸ್ಸಾದರೆ ರಾಜಧಾನಿಯಲ್ಲಿ ಕಾಂಗ್ರೆಸ್ ಎಷ್ಟು ದಾರುಣವಾಗಿ ಸೋಲು ಅನುಭವಿಸುತ್ತದೆ ಎಂಬುದೂ ಗೊತ್ತಿದೆ.

ಹೀಗಾಗಿ ಅವರು ತಾವು ಮಾತ್ರವಲ್ಲದೆ ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮೂಲಕವೂ ಸಮಾಧಾನಿಸುವ ಯತ್ನ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಸುರ್ಜೇವಾಲ ಅವರು ರಾಜೀಸೂತ್ರವೊಂದನ್ನು ರೂಪಿಸಿ ಬೆಂಗಳೂರು ಅಭಿವೃದ್ಧಿ ಖಾತೆಯಿಂದ ಬಿಡಿಎ ಮತ್ತು ಬಿಎಂಆರ್‌ಡಿಯನ್ನು ವಿಭಜಿಸಿ ಖಾತೆ ಹಂಚುವ ಪ್ರಪೋಸಲ್ಲು ಮಂಡಿಸಿದರೆ ಸ್ವತಃ ಕೃಷ್ಣ ಭೈರೇಗೌಡರು: ‘ಇಲ್ಲ, ಇಲ್ಲ ಬೆಂಗಳೂರು ನಗರಾಭಿವೃದ್ಧಿಯಲ್ಲಿ ಅವೂ ಇರಬೇಕು. ಅವನ್ನು ಹೊರತುಪಡಿಸಿದ ಬೆಂಗಳೂರು ನಗರಾಭಿವೃದ್ಧಿ ನನಗೆ ಬೇಡ’ ಎಂದು ಪಟ್ಟು ಹಿಡಿದರು.

ಯಾವಾಗ ಈ ಬೆಳವಣಿಗೆ ನಡೆಯಿತೋ? ಆಗ ಸುರ್ಜೇವಾಲ ಮತ್ತು ಡಿ.ಕೆ.ಶಿವಕುಮಾರ್ ಅವರು, ‘ನಿಮಗೆ ಎರಡು ಖಾತೆ ಕೊಡುತ್ತೇವೆ’ ಅಂತ ಹೇಳಿದ್ದಾರಾದರೂ ರಾಮಲಿಂಗಾ ರೆಡ್ಡಿಯವರಿಗೆ ಅದು ಇಷ್ಟವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಎಂಟು ಬಾರಿ ಶಾಸನಸಭೆಗೆ ಗೆದ್ದು ಬಂದು ಪಕ್ಷ ಮತ್ತು ಸರಕಾರದಲ್ಲಿ ಮಹತ್ವದ ಜವಾಬ್ದಾರಿ ವಹಿಸಿದ ಮೇಲೂ ಬೆಂಗಳೂರು ಅಭಿವೃದ್ಧಿಯ ವಿಷಯ ಬಂದಾಗ ಚರ್ಚೆ ಮಾಡಲು ಕೃಷ್ಣ ಭೈರೇಗೌಡರ ಮುಂದೆ ಕೂತು ಅವರು ಹೇಳಿದ್ದನ್ನು ಕೇಳಿಕೊಂಡು ಬರಬೇಕೇ? ಎಂಬುದು ರಾಮಲಿಂಗಾರೆಡ್ಡಿಯವರ ಅಸಮಾಧಾನ.

ಹೀಗಾಗಿ ಈ ವಿಷಯದಲ್ಲಿ ಈಗ ತೇಪೆ ಹಚ್ಚುವ ಕೆಲಸ ನಡೆದಿದೆಯಾದರೂ ಸರಿಯಾದ ಸೆಟ್ಲಮೆಂಟ್ ಅಗದಿದ್ದರೆ ಇವತ್ತಲ್ಲ, ನಾಳೆ ರಾಮಲಿಂಗಾರೆಡ್ಡಿ ಮತ್ತೆ ತಿರುಗಿ ಬೀಳುವುದು ಗ್ಯಾರಂಟಿ. ಹೀಗಾಗಿ ಟೇಕ್ ಆಫ್ ಆಗುತ್ತಿರುವ ತಮ್ಮ ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಈ ಬೆಂಕಿಯನ್ನು ಡಿಕೆ ತಕ್ಷಣ ಅರಿಸಿದರೆ ಒಳಿತು. ಇಲ್ಲದಿದ್ದರೆ ಕಷ್ಟ.

ಅಹಿಂದ ಪಿಲ್ಲರುಗಳೇ ಇಲ್ಲ

ಈ ಮಧ್ಯೆ ಡಿ.ಕೆ.ಶಿವಕುಮಾರ್ ನೇತೃತ್ವದ ಮೊದಲ ಕಂತಿನ ಸಂಪುಟ ಸಾಲಿಡ್ಡಾಗಿದೆಯಾದರೂ ಅದರಲ್ಲಿ ‘ಅಹಿಂದ’ ವರ್ಗಗಳ ಮೇಜರ್ ಪಿಲ್ಲರುಗಳು ಕಾಣಿಸುತ್ತಿಲ್ಲ. ಈ ಪೈಕಿ ಮುಖ್ಯರಾದವರು ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪ. ರಾಜ್ಯದಲ್ಲಿ ಅಹಿಂದ ಚಳವಳಿ ತಲೆ ಎತ್ತಲು ಹೆಚ್.ಸಿ.ಮಹದೇಪ್ಪ ಪವರ್ ಫುಲ್ ಆದ ಕಾಣಿಕೆ ನೀಡಿದ್ದಾರೆ.

ಅಂದ ಹಾಗೆ ಅಹಿಂದ ಮತ ಬ್ಯಾಂಕಿಗೆ ವಿವಿಧ ಫೋರ್ಸುಗಳು ಶಕ್ತಿ ತುಂಬಿವೆಯಾದರೂ ‘ಅಹಿಂದ’ ಚಳವಳಿಯ ಐಡಿಯಾಲಜಿ ಮೂಲ ದಲಿತ ಚಳವಳಿ. ಇವತ್ತು ದಲಿತ ಚಳವಳಿಯ ಫೋರ್ಸು ಕರ್ನಾಟಕದಲ್ಲಿ ಪವರ್ ಫುಲ್ಲಾಗಿದ್ದರೆ ಅದರಲ್ಲಿ ಹೆಚ್.ಸಿ.ಮಹದೇವಪ್ಪನವರ ಪಾತ್ರ ದೊಡ್ಡದು. ಆದರೆ ಅಂತಹ ನಾಯಕರು ಮೊದಲ ಕಂತಿನ ಸಂಪುಟದಲ್ಲಿ ಕಾಣದೆ ಇರುವುದು ಸರಕಾರಕ್ಕೆ ಒಂದು ಕೊರತೆ.

ಮುಂದಿನ ಕಂತಿನ ಸಂಪುಟ ರಚನೆಯ ಸಂದರ್ಭದಲ್ಲಿ ಈ ಕೊರತೆ ನಿವಾರಣೆಯಾದರೆ ಸರಕಾರಕ್ಕೆ ಮತ್ತು ಪಕ್ಷಕ್ಕೆ ಶಕ್ತಿ ದಕ್ಕಿದಂತೆ. ಇಲ್ಲದಿದ್ದರೆ ನಿಶ್ಯಕ್ತಿ ಗ್ಯಾರಂಟಿ. ಈ ಮಾತು ಕಳೆದ ಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕನ್ನು ಒಗ್ಗೂಡಿಸಿದ ಜಮೀರ್ ಅಹ್ಮದ್ ಮತ್ತು ಪಕ್ಷದ ಸಿದ್ಧಾಂತಗಳನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಸಂತೋಷ್ ಲಾಡ್ ಅವರ ಹೆಸರಿಗೂ ಅನ್ವಯವಾಗುತ್ತದೆ.

ಸಂಪುಟಕ್ಕೆ ಸೇರುವವರು ಯಾರು?

ಇನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಮುಂದಿನ ಕಂತಿನಲ್ಲಿ ಸೇರುವವರು ಯಾರು? ಈ ಪ್ರಶ್ನೆ ಬಂದಾಗ ಮೂವತ್ತಕ್ಕೂ ಹೆಸರುಗಳು ರೇಸಿನಲ್ಲಿ ಕಾಣಿಸುತ್ತಿವೆ. ಹಾಸನ ಜಿಲ್ಲೆಯಿಂದ ಶಿವಲಿಂಗೇಗೌಡ, ಬಿಜಾಪುರ ಜಿಲ್ಲೆಯಿಂದ ಯಶವಂತರಾವ್, ಬಳ್ಳಾರಿಯಿಂದ ಕಂಪ್ಲಿ ಗಣೇಶ್, ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ ಇಲ್ಲವೇ ಹಿಟ್ನಾಳ್, ಶಿವಮೊಗ್ಗ ಜಿಲ್ಲೆಯಿಂದ ಬಿ.ಕೆ.ಸಂಗಮೇಶ್ ಮತ್ತು ಬೇಳೂರು ಗೋಪಾಲಕೃಷ್ಣ, ರಾಯಚೂರು ಜಿಲ್ಲೆಯಿಂದ ಎನ್.ಎಸ್.ಭೋಸರಾಜು, ಧಾರವಾಡ ಪಾಕೀಟಿನಿಂದ ಸಂತೋಷ್ ಲಾಡ್, ದಾವಣಗೆರೆ ಜಿಲ್ಲೆಯಿಂದ ಎಸ್.ಎಸ್.ಮಲ್ಲಿಕಾರ್ಜುನ್ ಹೆಸರುಗಳು ಮುಂಚೂಣಿಯಲ್ಲಿವೆ.

ಇದೇ ರೀತಿ ಚಿತ್ರದುರ್ಗ ಜಿಲ್ಲೆಯಿಂದ ಚಳ್ಳಕೆರೆಯ ರಘುಮೂರ್ತಿ, ಚಾಮರಾಜ ನಗರ ಜಿಯಿಂದ ಪುಟ್ಟರಂಗಶೆಟ್ಟಿ, ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮಣ ಸವದಿ, ಮಹಿಳೆಯರ ಕೋಟಾದಲ್ಲಿ ರೂಪಕಲಾ ಶಶಿಧರ್, ಹಾವೇರಿ ಜಿಲ್ಲೆಯಿಂದ ರುದ್ರಪ್ಪ ಲಮಾಣಿ, ಮಂಡ್ಯ ಜಿಲ್ಲೆಯಿಂದ ನರೇಂದ್ರ ಸ್ವಾಮಿ, ಬೆಂಗಳೂರಿನಿಂದ ಜಮೀರ್ ಅಹ್ಮದ್ ಅವರ ಹೆಸರುಗಳು ಮಂತ್ರಿಗಿರಿಯ ರೇಸಿನಲ್ಲಿ ಮುಂದಿವೆ.

ಸ್ಪೀಕರ್ ಹುದ್ದೆಗೆ ಹೆಚ್ಕೆ ಇಲ್ಲವೇ ದಿನೇಶ್?

ಇದೇ ರೀತಿ ಕುತೂಹಲ ಕೆರಳಿಸುತ್ತಿರುವ ಮತ್ತೊಂದು ವಿಷಯವೆಂದರೆ, ವಿಧಾನಸಭೆಯ ಸ್ಪೀಕರ್ ಯಾರಾಗುತ್ತಾರೆ ಎಂಬುದು. ಈಗಿರುವ ಮಾಹಿತಿಯ ಪ್ರಕಾರ, ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಅದರೆ ಹೆಚ್.ಕೆ.ಪಾಟೀಲ್ ಅವರ ಆಪ್ತರ ಪ್ರಕಾರ, ಸ್ಪೀಕರ್ ಅಗಲು ಹೆಚ್.ಕೆ.ಪಾಟೀಲ್ ಅವರಿಗೆ ಆಸಕ್ತಿ ಇಲ್ಲ. ಬದಲಿಗೆ ಸಚಿವ ಸಂಪುಟಕ್ಕೆ ಸೇರುವುದು ಅವರ ಇಚ್ಛೆ.

ಒಂದು ಸಲ ಸ್ಪೀಕರ್ ಅದರೆ ಜನರ ಮಧ್ಯೆ ಇರುವ ಅವಕಾಶಗಳು ಕಡಿಮೆಯಾಗಿ ಪೊಲಿಟಿಕಲಿ ಸೈಡ್ ಲೈನಿಗೆ ಸರಿದಂತಾಗುತ್ತದೆ ಎಂಬುದು ಅವರ ಯೋಚನೆ. ಎಲ್ಲಕ್ಕಿಂತ ಮುಖ್ಯವಾಗಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಡಿಕೆ ಮತ್ತು ಹೆಚ್ಕೆ ಜೋಡೆತ್ತಿನಂತೆ ಇದ್ದವರು. ಈಗ ಡಿಕೆ ಸರಕಾರದ ಟಾಪ್ ಲೆವೆಲ್ಲಿಗೆ ಹೋಗಿದ್ದರೆ ತಾವು ಸ್ಪೀಕರ್ ಅಗಿ ಲಿಮಿಟ್ ಅಗುವುದು ಹೆಚ್ಕೆಯವರಿಗೆ ಇಷ್ಟವಿಲ್ಲ. ಪರಿಣಾಮ? ಹೆಚ್.ಕೆ.ಪಾಟೀಲ್ ಸ್ಪೀಕರ್ ಅಗಲು ನಿರಾಕರಿಸಿದರೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಈ ಹೊಣೆಗಾರಿಕೆಯನ್ನು ಹೊರುವುದು ಬಹುತೇಕ ಖಚಿತ.

ಲಾಸ್ಟ್ ಸಿಪ್

ಅಂದ ಹಾಗೆ ಡಿಕೆ ಸಚಿವ ಸಂಪುಟಕ್ಕೆ ಶೋಭೆ ತರಬಲ್ಲ ಹೆಸರೆಂದರೆ ಸಲೀಂ ಅಹ್ಮದ್ ಅವರದು. ಸಜ್ಜನ ರಾಜಕಾರಣಕ್ಕೆ ಹೆಸರಾದ ಸಲೀಂ ಅಹ್ಮದ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐಗೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು. ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರ ಜತೆ ಕೆಲಸ ಮಾಡಿದ್ದ ಮೂವರು ಇವತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು. ಈ ಪೈಕಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಒಬ್ಬರಾದರೆ, ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಕ್ಕು ಇನ್ನಿಬ್ಬರು. ಅವತ್ತು ಇಂತಹ ನಾಯಕರನ್ನು ಮುಂದಿಟ್ಟುಕೊಂಡು ಎನ್ಎಸ್‌ಯುಐ ರಥವನ್ನು ರಾಷ್ಟ್ರಮಟ್ಟದಲ್ಲಿ ಮುನ್ನಡೆಸಿದ್ದ ಸಲೀಂ ಅಹ್ಮದ್ ಇದುವರೆಗೆ ಮಂತ್ರಿಯಾಗಲು ಸಾಧ್ಯವಾಗಿಲ್ಲ. ಈಗ ಅವರು ಮಂತ್ರಿ ಪದವಿಯ ಆಕಾಂಕ್ಷಿಯಾಗಿದ್ದರೂ ಅವರನ್ನು ವಿಧಾನಪರಿಷತ್ ಸಭಾಪತಿ ಹುದ್ದೆಗೆ ತರುವ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಅವರಂತಹ ಸಜ್ಜನ ಮತ್ತು ಕ್ರಿಯಾಶೀಲ ನಾಯಕರನ್ನು ಮಂತ್ರಿ ಮಂಡಲಕ್ಕೆ ಸೇರಿಸಿದರೆ ನಿಶ್ಚಿತವಾಗಿ ಅದು ಡಿಕೆ ಸರ್ಕಾರಕ್ಕೆ ಶೋಭೆ ತರಲಿದೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author