ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranjith H Ashwath Column: ಹೋರಾಟದ ಹಾದಿಯಲ್ಲೇ ಬಂದ ಡಿಕೆ ಮುಂದಿದೆ ಸವಾಲು

ರಾಜೀನಾಮೆ ಬಳಿಕವೂ, ಸಹಿ ಸಂಗ್ರಹ, ಪ್ರತಿಭಟನೆ, ಪತ್ರ ಚಳವಳಿಗೆ ಅವಕಾಶ ನೀಡದೇ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಡಿ.ಕೆ. ಶಿವಕುಮಾರ್ ಹೆಸರನ್ನು ತಾವೇ ಪ್ರಸ್ತಾಪಿಸುವ ಮೂಲಕ, ಯಾವುದೇ ರೀತಿಯ ವಿರೋಧಕ್ಕೆ ಅವಕಾಶ ನೀಡದೇ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸದ್ಯಕ್ಕಂತೂ ಸುಸೂತ್ರವಾಗಿ ಮುಗಿಸಿ ಕೊಟ್ಟಿದ್ದಾರೆ.

ಅಶ್ವತ್ಥಕಟ್ಟೆ

2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜೋಡೆತ್ತಾಗಿ ಚುನಾ ವಣೆಗೆ ಶ್ರಮಿಸಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ ವಿಧಾನಸಭಾ ಚುನಾ ವಣೆಗೆ ಸಿದ್ದರಾಮಯ್ಯ ಅವರು ‘ಹೆಗಲು’ ಕೊಡಬಹುದು. ಆದರೆ, ಹಿಂದಿನ ಚುನಾ ವಣೆಯಷ್ಟು ಭಾರವನ್ನು ಅವರೂ ಹೋರುವ ಸಾಧ್ಯತೆ ತೀರಾ ಕಡಿಮೆಯಿದೆ. ಇದರೊಂದಿಗೆ ಪಕ್ಷದಲ್ಲಿ ಮುಂದಿನ ದಿನದಲ್ಲಿ ಏಳಬಹುದಾದ ಆಂತರಿಕ ಕಲಹ ಗಳಿಗೆ ಆಸ್ಪದ ನೀಡದೇ, ಕಲಹ ಬಂದರೂ ಅದನ್ನು ನಿಭಾಯಿಸುವ ಬಹುದೊಡ್ಡ ಸವಾಲು ಮುಂದಿದೆ.

‘ಒದ್ದು ಅಧಿಕಾರ ಕಿತ್ತುಕೊಳ್ಳಬೇಕು!’ ಬೆಳಗಾವಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಅಂದಿನ ಉಪ ಮುಖ್ಯಮಂತ್ರಿ, ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಂತಾಪ ಸೂಚಿಸುವ ಸಮಯದಲ್ಲಿ ಆ ಮಾತನ್ನು ಹೇಳಿದ್ದರೂ, ಕರ್ನಾಟಕದಲ್ಲಿ ಕಳೆದ ಆರು ತಿಂಗಳುಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ವಿಷಯ ಮುನ್ನಲೆಗೆ ಬಂದಾಗಲೆಲ್ಲ ಈ ಹೇಳಿಕೆಗೆ ಹತ್ತು ಹಲವು ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿತ್ತು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ತುಂಬಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾದ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನಾರಚನೆಯ ಹತ್ತು ಹಲವು ಥಿಯರಿಗಳಿಗೆ ಹೈಕಮಾಂಡ್ ಕಳೆದ ವಾರ ಕೊನೆಗೂ ಇತಿಶ್ರೀ ಹಾಡಿದೆ. ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಅವರ ಪಟ್ಟಾಭಿಷೇಕವೂ ನಡೆದಿದೆ. ಬುಧವಾರ ಅಧಿಕೃತವಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸ ಲಿದ್ದಾರೆ. ಎಲ್ಲವೂ ಇಷ್ಟು ಸಲೀಸಾಗಿ ನಡೆಯುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೋಗಲು ಪಕ್ಷದ ಹೈಕಮಾಂಡ್ ಸಹ ನಿರೀಕ್ಷೆ ಮಾಡಿರಲಿಲ್ಲ ಎನ್ನುವುದು ಬೇರೆ ಮಾತು.

ಕಾಲೇಜು ದಿನಗಳಿಂದಲೂ ಹೋರಾಟದ ಹಾದಿಯಲ್ಲಿಯೇ ಸಾಗಿ ಬಂದಿರುವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯನ್ನೂ ಹೋರಾಟ ಮಾಡಿಯೇ ಪಡೆದಿರುವುದು ಗೊತ್ತಿಲ್ಲದ ವಿಷಯವೇನಲ್ಲ. ಅದರಲ್ಲಿಯೂ ಅಹಿಂದ ನಾಯಕನಾಗಿ, ರಾಜ್ಯದ ಪ್ರತಿ ಕ್ಷೇತ್ರದಲ್ಲಿಯೂ ಕನಿಷ್ಠ ಐದತ್ತು ಸಾವಿರ ಮತಗಳನ್ನು ಆಚೀಚೆ ಮಾಡುವ ಸಾಮರ್ಥ್ಯ ವಿರುವ, ರಾಹುಲ್ ಗಾಂಧಿಯ ಕಣ್ಣಲ್ಲಿ ಬೆಸ್ಟ್ ಎನಿಸಿಕೊಂಡಿದ್ದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದು ಸುಲಭದ್ದಾಗಿರಲಿಲ್ಲ.

ಸಿದ್ದರಾಮಯ್ಯ ಅವರು ಕಳೆದ ಆರು ತಿಂಗಳಿನಿಂದಲೂ ‘ಹೈಕಮಾಂಡ್ ಹೇಳಿದರೆ ಅಧಿಕಾರ ತ್ಯಾಗಕ್ಕೆ’ ಸಿದ್ಧ ಎನ್ನುವ ಮಾತನ್ನು ಹೇಳಿಕೊಂಡೇ ಬಂದಿದ್ದರಾದರೂ, ಅವರಿಗೆ ರಾಜೀನಾಮೆ ನೀಡಿ ಎಂದು ಹೇಳುವವರು ಯಾರು ಎನ್ನುವ ಪ್ರಶ್ನೆಗೆ ಹೈಕಮಾಂಡ್ ಬಳಿ ಉತ್ತರವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರನ್ನೆ ಎರಡು ವರ್ಷ ಮುಂದು ವರೆಸಲು ಸಾಧ್ಯವೇ ಎನ್ನುವ ಪ್ರಶ್ನೆಗೂ ಹೈಕಮಾಂಡ್ ಬಳಿ ಉತ್ತರವಿರಲಿಲ್ಲ. ಈ ಇಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ ಡಿ.ಕೆ.ಶಿವಕುಮಾರ್ ತಮ್ಮ ಪ್ರಯತ್ನವನ್ನು ಮುಂದು ವರಿಸಿಯೇ ಇದ್ದರೂ. ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ’ ಎನ್ನುವ ಅಚಲ ವಿಶ್ವಾಸದಲ್ಲಿಯೇ ಇದ್ದ ಡಿ.ಕೆ.ಶಿವಕುಮಾರ್ ತಾವು ನಂಬುವ ದೇವರ ಬಳಿ ಮಾತ್ರವಲ್ಲದೇ ‘ಎಐಸಿಸಿ ಕಚೇರಿ ಎಂಬ ದೇವರ’ ಮುಂದೆಯೂ ತಮ್ಮ ಪ್ರಾರ್ಥನೆಯನ್ನು ನಿರಂತರವಾಗಿ ಸಲ್ಲಿಸುತ್ತಲೇ ಬಂದರು.

ಇದನ್ನೂ ಓದಿ: Ranjith H Ashwath Column: ಲೈಕ್ಸ್-ಕಾಮೆಂಟ್‌ ಬಿಟ್ಟು, ಬೂತ್‌ ಸಂಘಟಿಸಿ: ಕಮಲ ಪಾಠ

ಈ ಎಲ್ಲದರ ಫಲವಾಗಿ ಡಿ.ಕೆ.ಶಿವಕುಮಾರ್ ಕರ್ನಾಟಕದ 21ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ. ರಾಜಕೀಯ ವಿಶ್ಲೇಷಕರು ಎಣಿಸಿದಂತೆ, ಕಾಂಗ್ರೆಸ್ ಹೈಕಮಾಂಡ್ ಆತಂಕಪಟ್ಟಂತೆ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದೇ ಸಿದ್ದರಾಮಯ್ಯ ಅವರು ‘ಗೌರವಯುತ’ವಾಗಿಯೇ ತಮ್ಮ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ.

ರಾಜೀನಾಮೆ ಬಳಿಕವೂ, ಸಹಿ ಸಂಗ್ರಹ, ಪ್ರತಿಭಟನೆ, ಪತ್ರ ಚಳವಳಿಗೆ ಅವಕಾಶ ನೀಡದೇ ಎಲ್ಲವನ್ನೂ ಸುಸೂತ್ರವಾಗಿ ನಿಭಾಯಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಡಿ.ಕೆ. ಶಿವಕುಮಾರ್ ಹೆಸರನ್ನು ತಾವೇ ಪ್ರಸ್ತಾಪಿಸುವ ಮೂಲಕ, ಯಾವುದೇ ರೀತಿಯ ವಿರೋಧಕ್ಕೆ ಅವಕಾಶ ನೀಡದೇ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸದ್ಯಕ್ಕಂತೂ ಸುಸೂತ್ರವಾಗಿ ಮುಗಿಸಿ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಹಸ್ತಾಂತರ ವಿಷಯದಲ್ಲಿ ಎಲ್ಲವೂ ಸುಸೂತ್ರವಾಗಿ ಮುಗಿದಿರುವುದು ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಹಂತಕ್ಕೆ ಸಮಾಧಾನ ತಂದಿದೆ. ಈ ಹಿಂದೆ ಸಂಘಟನೆಯೇ ನೆಲಕಚ್ಚಿದ ಸಮಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ಪಡೆದು ಮೇಡಂ ಸೋನಿಯಾ ಗಾಂಧಿ ಅವರಿಗೆ ಕೊಟ್ಟಿದ್ದ ‘ಭರವಸೆ’ಯಂತೆ 2023ರ ವಿಧಾನಸಭಾ ಚುನಾ ವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ, ಸೊರಗಿದ್ದ ಸಂಘಟನೆಗೆ ಜೀವ ತುಂಬಿದ, ದೇಶಾದ್ಯಂತ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕ, ತೆಲಂಗಾಣದಲ್ಲಿ ಯಶಸ್ವಿಯಾಗುವಂತೆ ನೋಡಿಕೊಂಡ, ಮೇಕೆದಾಟು ಪಾದಯಾತ್ರೆ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಎದುರಾದ ಸವಾಲುಗಳನ್ನು ಎಲ್ಲ ಯಶಸ್ವಿಯಾಗಿದ್ದಾರೆ. ಜತೆ ಇದೀಗ ಮುಖ್ಯಮಂತ್ರಿಯಾಗಬೇಕೆಂಬ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಮೊದಲ ಹಂತದ ಸವಾಲನ್ನು ಗೆದ್ದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ಎರಡನೇ ಹಂತದ ಸವಾಲು ಸಜ್ಜಾಗಿದೆ. ಆರಂಭಿಕ ದಿನದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಎದುರಾಗುವ ಸಚಿವ ಸಂಪುಟ ರಚನೆ, ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಗೊಂದಲ, ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಬೇಡಿಕೆ, ಸಚಿವ ಸ್ಥಾನ ಭರ್ತಿಯಾಗದ ಬಳಿಕ ಖಾತೆಗಳ ಹಂಚಿಕೆ ಸೇರಿದಂತೆ ಹತ್ತು ಹಲವು ಸವಾಲುಗಳು ಡಿ.ಕೆ. ಶಿವಕುಮಾರ್ ಅವರಿಗೂ ಎದುರಾಗುವುದು ನಿಶ್ಚಿತ.

DKS

ಮೇಲ್ನೋಟಕ್ಕೆ ಈ ಎಲ್ಲವೂ, ಸವಾಲುಗಳೆನಿಸಿದರೂ ರಾಜಕೀಯದ ಒಂದು ಭಾಗ. ಆದರೆ, ಇದನ್ನು ಮೀರಿದ ಸವಾಲು ಅಧಿಕಾರ ಸ್ವೀಕರಿಸಿದ ಕೆಲ ತಿಂಗಳಲ್ಲಿ ಎದುರಾಗಬಹದು. ಈ ಸವಾಲುಗಳ ಬಗ್ಗೆ ಸ್ವತಃ ಡಿಕೆಶಿಗೂ ಅರಿವಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನೂರು ದಿನ ಕಳೆಯುವುದರೊಂದಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳು ಎದುರಾಗು ತ್ತದೆ. ಡಿ.ಕೆ.ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರಿಂದ ಸಿಎಂ ಸ್ಥಾನಕ್ಕೆ ಹೋದರೂ ಈ ಚುನಾವಣೆಯ ಸೋಲು-ಗೆಲುವಿನ ಫಲ ಡಿಕೆಶಿ ಅವರಿಗೆ ಸಿಗಲಿದೆ.

ಪಂಚ ನಗರಪಾಲಿಕೆಯೊಂದಿಗೆ ಜಿಬಿಎ ಚುನಾವಣೆಗೆ ಹೋದರೆ ಕಾಂಗ್ರೆಸ್'ಗೆ ಗೆಲುವುದು ಸುಲಭಕ್ಕೆ ಧಕ್ಕುವುದಿಲ್ಲ ಎನ್ನುವ ಮಾತನ್ನು ಸ್ವತಃ ಬೆಂಗಳೂರಿನ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಈ ಆತಂಕದಿಂದಲೇ ಒಂದಿಲ್ಲೊಂದು ಕಾರಣ ನೀಡಿ ಜಿಬಿಎ ಚುನಾವಣೆ ಯನ್ನು ವರ್ಷಗಳಿಂದ ಮುಂದೂಡಿಕೊಂಡು ಬರಲಾಗಿದೆ. ಆದರೀಗ ಆಗಸ್ಟ್ ಅಂತ್ಯ ದೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲೇಬೇಕು ಎನ್ನುವ ಸ್ಪಷ್ಟ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ.

ಈಗಲೂ ಮತ್ತೊಂದು ಕಾರಣ ನೀಡಿ ಮುಂದೂಡುವ ಉತ್ಸಾಹದಲ್ಲಿ ಕಾಂಗ್ರೆಸ್ ಇದ್ದರೂ ಸುಪ್ರೀಂ ಕೋರ್ಟ್ ಒಪ್ಪುವ ಸಾಧ್ಯತೆ ಕಡಿಮೆ ಇರುವುದರಿಂದ ಚುನಾವಣೆಗೆ ಸಜ್ಜಾಗು ತ್ತಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಪ್ರಕಾರವೂ, ಸದ್ಯ ಜಿಬಿಎ ಚುನಾವಣೆ ನಡೆದರೂ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಐದು ಪಾಲಿಕೆಗಳಲ್ಲಿ ಕನಿಷ್ಠ ಮೂರರಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎನ್ನುವ ಮಾತಿದೆ. ಅಧಿಕಾರಕ್ಕೆ ಬಂದು ನೂರು ದಿನ ತುಂಬುವುದರೊಳಗೆ ಚುನಾವಣೆಗೆ ಹೋದರೆ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆಂದು, ಈ ಚುನಾವಣೆಯಲ್ಲಿ ಹಿನ್ನಡೆಯಾದರೆ ಅಧಿಕಾರ ತೆಗೆದುಕೊಂಡ ಮೊದಲ ಚುನಾವಣೆಯಲ್ಲಿಯೇ ಹಿನ್ನಡೆ ಎನ್ನುವ ಕಪ್ಪುಚುಕ್ಕಿ ಅಂಟಿಸುವುದಕ್ಕೆ ನೂರಾರು ಮಂದಿ ಕಾಂಗ್ರೆಸಿಗರೇ ಕಾಯುತ್ತಿದ್ದಾರೆ.

ಇನ್ನು ಜಿಬಿಎ ಚುನಾವಣೆ ಒಂದೆಡೆಯಾದರೆ ಇದಾದ ಬಳಿಕ ಎದುರಾಗುವ ಜಿಲ್ಲಾ, ಗ್ರಾಮ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಈ ಚುನಾವಣೆಗಳು ತಳಮಟ್ಟದಲ್ಲಿ ಮತದಾರರ ಅಭಿಪ್ರಾಯಗಳೇನಿವೆ ಎನ್ನುವುದನ್ನು ಎತ್ತಿ ಹಿಡಿಯುತ್ತವೆ. ಗ್ಯಾರಂಟಿ ಯೋಜನೆಗಳ ಕಾರಣಕ್ಕೆ ಮೂಲಸೌಕರ್ಯ, ಇತರೆ ಅಭಿವೃದ್ಧಿ ಯೋಜನೆಗಳಿಗೆ ನಿರೀಕ್ಷೆ ಮಾಡಿದಷ್ಟು ಅನುದಾನ ಸಿಗದೇ ಇರುವುದರಿಂದ ಸಹಜ ವಾಗಿಯೇ ಗ್ರಾಮೀಣ ಭಾಗದಲ್ಲಿ ‘ಆಡಳಿತ ವಿರೋಧಿ ಅಲೆಯಿದೆ’.

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಗೆಲುವನ್ನು ಕಾಂಗ್ರೆಸಿಗರು ಜನಾಭಿಪ್ರಾಯ ಪಕ್ಷದ ಪರವಾಗಿದೆ ಎಂದು ಹೇಳುತ್ತಿದ್ದರೂ, ಉಪಚುನಾವಣೆಗಳಿಗೂ ಇತರೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ಅಜಗಜಾಂತರವಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಸವಾಲುಗಳನ್ನು ಡಿಕೆ ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿದೆ.

ಇನ್ನು ಕರ್ನಾಟಕದಲ್ಲಿ ಯಾವುದೇ ಮಾಸ್ ಲೀಡರ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬರುವ ಅಧಿಕಾರಕ್ಕೆ ಬರುವ ನಾಯಕನಿಗೆ ಸಹಜವಾದ ಸವಾಲು ನೋಡಿದ್ದೇವೆ. ಈ ಹಿಂದೆ ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್ ಅವರಿಂದ ಮುಖ್ಯಮಂತ್ರಿ ಸ್ಥಾನ ತೆರವಾದ ಬಳಿಕ ನಡೆದಿರುವ ಗೊಂದಲ, ಗೋಜಲುಗಳು, ಪಕ್ಷದ ಶುರುವಾಗುವ ಆಂತರಿಕ ಕಿತ್ತಾಟ ಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ.

ಕಳೆದ ಸರಕಾರವನ್ನೇ ಗಮನಿಸಿದಾಗ, ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಅವರಿಗೆ ಪಟ್ಟಕಟ್ಟಿದಾಗ ಬೊಮ್ಮಾಯಿ ಅವರು ಎದುರಿಸಿದ ‘ಮಾಸ್ ನಾಯಕತ್ವ’ದ ಸಮಸ್ಯೆ ಈಗ ಡಿ.ಕೆ.ಶಿವಕುಮಾರ್ ಅವರಿಗೂ ಎದುರಾಗಬಹುದೇ ಎನ್ನುವ ಪ್ರಶ್ನೆಯಿದೆ. ಹಾಗೇ ನೋಡಿದರೆ, ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ.ಶಿವಕುಮಾರ್ ತಮ್ಮ ಬಾಹುಳ್ಯವನ್ನು ರಾಜ್ಯಾದ್ಯಂತ ವಿಸ್ತರಿಸಿಕೊಂಡಿದ್ದರೂ, ‘ಮತಗಳಾಗಿ’ ಎಷ್ಟು ಪರಿವರ್ತನೆಯಾಗಿದ ಎನ್ನುವುದು ಈಗಲೂ ಪ್ರಶ್ನಾತೀತ.

ಏಕೆಂದರೆ, ರಾಜ್ಯದಲ್ಲಿ ಮಾಸ್ನಾ ಯಕರಾಗಿ ಗುರುತಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಬಳಿಕ ಮುಂದಿನ ನಾಯಕತ್ವ ಹೇಗೆ ಎನ್ನುವ ಪ್ರಶ್ನೆ ಈಗಲೂ ಅನೇಕರಲ್ಲಿದೆ. ಡಿ.ಕೆ. ಶಿವಕುಮಾರ್ಅ ದ್ಭುತ ಸಂಘಟಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಮಾಸ್ ಲೀಡರ್ ಆಗಿಯೂ ಮುಂದಿನ ಎರಡು ವರ್ಷದಲ್ಲಿ ‘ಹೊರಹೊಮ್ಮುವರೇ’ ಎನ್ನುವುದಕ್ಕೆ ಅವರೇ ಉತ್ತರಿಸಬೇಕಿದೆ.

ಇದರೊಂದಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗಬಹುದಾದ ಮತ್ತೊಂದು ಸವಾಲು ಎಂದರೆ ಅಹಿಂದ ಮತಗಳನ್ನು ಪಕ್ಷದಿಂದ ಹೋಗದಂತೆ ನೋಡಿಕೊಳ್ಳುವುದಾಗಿದೆ. ಸಿದ್ದರಾಮಯ್ಯ ಅವರ ಕಾರಣಕ್ಕೆ ಕಾಂಗ್ರೆಸ್‌ನೊಂದಿಗೆ ಅಹಿಂದ ಮತಗಳು ಗಟ್ಟಿಯಾಗಿ ನಿಂತಿದ್ದವು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸಕ್ರಿಯ ಪ್ರಚಾರದಲ್ಲಿ ಭಾಗವಹಿಸುವುದಾಗಿ ಹೇಳಿದ್ದರೂ, ಅವರು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದಾಗ ಅಷ್ಟೇ ಗಟ್ಟಿ ಈ ಮತಗಳು ಉಳಿಯಲಿದೆಯೇ ಎನ್ನುವ ಅನುಮಾನವಿದೆ.

ಅಲ್ಪಸಂಖ್ಯಾತಸಮುದಾಯಕ್ಕೆ ಪರ್ಯಾಯ ಪಕ್ಷವಿಲ್ಲದೇ ಇರುವುದರಿಂದ ಅನಿವಾರ್ಯ ವಾಗಿ ಕಾಂಗ್ರೆಸ್‌ನೊಂದಿಗೇ ಹೋಗಬಹುದು. ಆದರೆ, ದಲಿತ ಹಾಗೂ ಒಬಿಸಿ ಮತದಾರರಿಗೆ ಪರ್ಯಾಯವಾಗಿ ಬಿಜೆಪಿ, ಜೆಡಿಎಸ್ ಕಾಣಿಸಿಕೊಳ್ಳುತ್ತಿದೆ. ಆ ಕಡೆ ಜಂಪ್ ಆದರೆ ಬಹು ದೊಡ್ಡ ಮತಬ್ಯಾಂಕ್‌ಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಇದನ್ನು ನಿಭಾಯಿಸುವುದು ಹೇಗೆ ಎನ್ನುವುದಕ್ಕೆ ಅಂದಿನ ಪರಿಸ್ಥಿತಿಯೇ ಉತ್ತರಿಸಬೇಕಿದೆ.

ಈ ಎಲ್ಲ ರಾಜಕೀಯ ಸವಾಲುಗಳನ್ನು ಮೀರಿ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗ ಬಹುದಾದ ಬಹುದೊಡ್ಡ ಸವಾಲು ಎಂದರೆ ಆಡಳಿತಾತ್ಮಕ ವಿಷಯ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಒಂದು ದಿನದ ಮೊದಲು ಹಿಂದುಳಿದವರ್ಗಗಳ ಶಾಶ್ವತ ಆಯೋಗದಿಂದ ಜಾತಿಗಣತಿ ವರದಿಯನ್ನು ಸ್ವೀಕರಿಸಿದ್ದಾರೆ. ಈ ವರದಿಯನ್ನು ಈ ಹಿಂದೆ ಡಿ.ಕೆ.ಶಿವಕುಮಾರ್ ಸೇರಿದಂತೆ ಮೇಲ್ವರ್ಗದ ಬಹುತೇಕ ಸಚಿವರು ವಿರೋಧಿಸಿದ್ದರು.

ಆದರೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಈ ವರದಿಯನ್ನು ಜಾರಿಗೊಳಿಸುವಲ್ಲಿ ವಿಶೇಷ ಆಸಕ್ತಿಯಿದೆ. ಸಿದ್ದರಾಮಯ್ಯ ಅವರು ವರದಿಯನ್ನು ಸ್ವೀಕರಿಸಿರುವುದರಿಂದ ಮುಂದಿನ ಸರಕಾರದ ಮುಂದೆ ಸಹಜವಾಗಿಯೇ ಈ ವರದಿ ಬರಲಿದೆ.

ಕಾಂತರಾಜು ವರದಿಗೂ, ಜಯಪ್ರಕಾಶ್ ಹೆಗ್ಡೆ ಸಲ್ಲಿಸಿದ್ದ ಪರಿಷ್ಕೃತ ವರದಿ ಹಾಗೂ ಹೊಸದಾಗಿ ಮಾಡಿರುವ ಮಧುಸೂಧನ್ ನಾಯಕ್ ಅವರ ವರದಿ ಬಹುದೊಡ್ಡ ವ್ಯತ್ಯಾಸ ವೇನಿಲ್ಲ. ಈ ವರದಿಯಲ್ಲಿ ಮುಸ್ಲಿಂ, ದಲಿತ ಸಮುದಾಯಗಳೇ ನಿರ್ಣಾಯಕ ವಾಗಲಿದೆ. ಆದ್ದರಿಂದ ಈ ವರದಿಯನ್ನು ಡಿ.ಕೆ.ಶಿವಕುಮಾರ್ ಒಪ್ಪಿಕೊಂಡರೆ ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ವರದಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟು ಮುಂದಿನ ಸರಕಾರ ಸಾಗಿಸಲು ಪ್ರಯತ್ನಿಸಿದರೆ ಪಕ್ಷದ ಹೈಕಮಾಂಡ್ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಎರಡು ಅಲಗೆಯ ಕತ್ತಿಯಾಗಿರುವ ಈ ವರದಿಯ ತೀರ್ಮಾನವನ್ನು ಯಾವ ರೀತಿ ಕೈಗೊಳ್ಳುತ್ತಾರೆ ಎನ್ನುವುದು ಹಲವರ ಕುತೂಹಲ.

ಈ ಸವಾಲುಗಳೊಂದಿಗೆ ಎರಡು ವರ್ಷದಲ್ಲಿ ಚುನಾವಣೆ ಎದುರಾಗಲಿರುವುದರಿಂದ 2027ರ ಬಜೆಟ್‌ನಲ್ಲಿಯೇ ಸಾಧ್ಯವಾದಷ್ಟು ಅಭಿವೃದ್ಧಿ ಪರ ಘೋಷಣೆಗಳನ್ನು ಮಾಡಬೇಕಿದೆ. 2028ರ ಬಜೆಟ್ ಚುನಾವಣೆಗೂ ಮುನ್ನಾ ನಡೆಯುವ ‘ಫ್ಯಾನ್ಸಿ ಬಜೆಟ್’ ಆಗಿರಲಿದೆ. ಅಂದರೆ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಅಭಿವೃದ್ಧಿ ಪರ ಚಿಂತನೆಗಳನ್ನು ತಿಳಿಸಲು ಸಿಗುವುದು ಮುಂದಿನ ವರ್ಷದ ಬಜೆಟ್ ಮಾತ್ರ. ಗ್ಯಾರಂಟಿ ಯೋಜನೆ, ಬದ್ಧತಾ ವೆಚ್ಚಕ್ಕಾಗಿಯೇ ಶೇ.65ಕ್ಕಿಂತ ಹೆಚ್ಚು ಅನುದಾನ ಹೋಗುತ್ತಿದೆ.

ಮುಂದಿನ ದಿನದಲ್ಲಿ ಸರಕಾರಿ ನೌಕರರ ವೇತನ ಹೆಚ್ಚಳ, ಒಪಿಎಸ್ ಜಾರಿ ಸೇರಿದಂತೆ ಹಲವು ಹೆಚ್ಚುವರಿ ಹೊರೆಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ. ಈ ಎಲ್ಲ ಸವಾಲು ಗಳನ್ನು ಮೀರಿ ಉತ್ತಮ ಬಜೆಟ್ ನೀಡಿ 2028ಕ್ಕೆ ಕಾಂಗ್ರೆಸ್ ಅನ್ನು ಪುನಃ ಅಧಿಕಾರಕ್ಕೆ ತರುವ ಹೊಣೆಯಿದೆ.

2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜೋಡೆತ್ತಾಗಿ ಚುನಾವಣೆಗೆ ಶ್ರಮಿಸಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದರಾ ಮಯ್ಯ ಅವರು ‘ಹೆಗಲು’ ಕೊಡಬಹುದು. ಆದರೆ, ಹಿಂದಿನ ಚುನಾವಣೆಯಷ್ಟು ಭಾರವನ್ನು ಅವರೂ ಹೋರುವ ಸಾಧ್ಯತೆ ತೀರಾ ಕಡಿಮೆಯಿದೆ. ಇದರೊಂದಿಗೆ ಪಕ್ಷದಲ್ಲಿ ಮುಂದಿನ ದಿನದಲ್ಲಿ ಏಳಬಹುದಾದ ಆಂತರಿಕ ಕಲಹಗಳಿಗೆ ಆಸ್ಪದ ನೀಡದೇ, ಕಲಹ ಬಂದರೂ ಅದನ್ನು ನಿಭಾಯಿಸುವ ಬಹುದೊಡ್ಡ ಸವಾಲು ಡಿ.ಕೆ. ಶಿವಕುಮಾರ್ ಅವರ ಮುಂದಿದೆ. ಈ ಎಲ್ಲ ಸವಾಲುಗಳಿಗೆ ‘ಬಂಡೆ’ಯಾಗಿ ನಿಂತು ರಾಜ್ಯಭಾರ ಹೇಗೆ ನಡೆಸಲಿದ್ದಾರೆ ಎನ್ನುವುದೇ ಈಗಿರುವ ಕುತೂಹಲ.

ರಂಜಿತ್​ ಎಚ್​ ಅಶ್ವತ್ಥ್

View all posts by this author