ಕ್ರಿಯಾಲೋಪ
ಶ್ರೀನಿವಾಸ ಶರ್ಮ
ತಮಿಳುನಾಡಿನ ತಿರುಪಾರನುಕುಂಡ್ರಮ್ ಎಂಬಲ್ಲಿ ‘ಕಾರ್ತಿಕ ದೀಪಂ’ ಅಥವಾ ‘ಕಾರ್ತಿಗೈ ದೀಪಂ’ ಉತ್ಸವದ ಕುರಿತು ಉಂಟಾಗಿರುವ ವಿವಾದವು ಡಿಎಂಕೆ ಪಕ್ಷದ ಅಸಲಿ ಬಣ್ಣವನ್ನು ಬಯಲಿಗೆಳೆದಿದೆ. ತಿರುಪಾರನುಕುಂಡ್ರಮ್‌ನ ಬೆಟ್ಟದಲ್ಲಿ ಶತಶತಮಾನಗಳಿಂದಲೂ ಪರಂಪರಾನುಗತವಾಗಿ ಭಕ್ತಾದಿ ಗಳು ಕಾರ್ತಿಕ ದೀಪಂ ಉತ್ಸವವನ್ನು ಸಂಭ್ರಮ, ಸಡಗರ, ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸು ತ್ತಿದ್ದಾರೆ.
ವಕ್ಫ್ ಮಂಡಳಿ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಸ್ವತಃ ಡಿಎಂಕೆ ಸರಕಾರ ಮಾತ್ರ ಕಾರ್ತಿಕ ದೀಪಂ ಉತ್ಸವ ನಡೆಸದಂತೆ ಹೇಳಿರುವುದು ಭಾರಿ ವಿವಾದ ಸೃಷ್ಟಿಸಿದೆ. ಹೈಕೋರ್ಟ್ ಕೂಡ ಕಾರ್ತಿಕ ದೀಪ ಬೆಳಗಿಸುವ ಪರಂಪರೆಯನ್ನುಪುರಸ್ಕರಿಸಿದ್ದರೂ, ಡಿಎಂಕೆ ಸರಕಾರ ಮಾತ್ರ ಕಾರ್ತಿಕ ದೀಪ ಬೆಳಗುವುದನ್ನು ಅಪರಾಧದಂತೆ ಕಾಣುತ್ತಿರುವುದು ಆ ಪಕ್ಷದ ಮುಖವಾಡವನ್ನು ಕಳಚಿಟ್ಟಿದೆ.
ಇದು ಖಂಡಿತ ಆಡಳಿತವಲ್ಲ, ಹಿಂದೂ ನಂಬಿಕೆಗಳ ವಿರುದ್ಧ ಮಾಡಿರುವ ಘೋರ ಅಪಚಾರ. ಮಾತ್ರವಲ್ಲದೆ ಇದು ನ್ಯಾಯಾಂಗದ ನಿಂದನೆಯೂ ಆಗಿದೆ. ನ್ಯಾಯಾಂಗವನ್ನೇ ಧಿಕ್ಕರಿಸುವ ಪ್ರಯತ್ನಕ್ಕೆ ಡಿಎಂಕೆ ಕೈಹಾಕಿದಂತಾಗಿದೆ. ತಮಿಳುನಾಡಿನ ಡಿಎಂಕೆ ನೇತೃತ್ವದ ಸರಕಾರದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (ಎಚ್‌ಆರ್‌ಸಿಇ) ಸಚಿವರಾದ ಪಿ.ಕೆ. ಶೇಖರ್ ಬಾಬು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಿರುಪಾರನುಕುಂಡ್ರಮ್‌ನಲ್ಲಿ ದೀಪ ಬೆಳಗುವುದರಿಂದ ಬೀದಿಯಲ್ಲಿ ರಕ್ತ ಹರಿಯಲಿದೆ ಎಂದು ಇಲ್ಲ ಸಲ್ಲದ ‘ಲೂಸ್‌ಟಾಕ್’ ಆಡಿದ್ದಾರೆ. ಯಾವುದೇ ಸಮುದಾಯವು ಇಂಥ ಬಾಲಿಶ ಹೇಳಿಕೆಯನ್ನು ನೀಡಿಲ್ಲ. ಡಿಎಂಕೆ ಸರಕಾರ ಮಾತ್ರ ಖುದ್ದಾಗಿ ಇಂಥ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.
ಇದನ್ನೂ ಓದಿ: Karthigai Deepam Row: ತಮಿಳುನಾಡಿನ ಕಾರ್ತಿಕ ದೀಪಕ್ಕೆ ಡಿಎಂಕೆ ವಿರೋಧ, ನ್ಯಾಯಾಂಗಕ್ಕೂ ಅವಮಾನ
ದೀಪ ಬೆಳಗಿಸುವುದಕ್ಕೆ ಡಿಎಂಕೆ ವಿರೋಧ: ಹಿಂದೂ ಧಾರ್ಮಿಕ ಪರಂಪರೆಯೊಂದನ್ನು ಸ್ಥಗಿತ ಗೊಳಿಸಲು ನಕಲಿ ಬೆದರಿಕೆಯನ್ನು ಡಿಎಂಕೆ ನಾಯಕರು ಒಡ್ಡುತ್ತಿದ್ದಾರೆ. ದೇವಾಲಯದ ವ್ಯಾಪ್ತಿ ಯಲ್ಲಿ ದೀಪ ಬೆಳಗುವುದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ. ಆದರೆ ಡಿಎಂಕೆ ವರ್ತನೆ ಮಾತ್ರ ಹಿಂದೂಗಳ ವಿರುದ್ಧವಾಗಿದೆ.
ಇದರ ಹಿಂದಿನ ಸತ್ಯ ಸರಳವಾಗಿದೆ. ಡಿಎಂಕೆ ಜಾತ್ಯತೀತತೆಯ ಬಗ್ಗೆ ಮಾತನಾಡುತ್ತದೆ. ಆದರೆ ಸ್ವತಃ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತದೆ. ಮತ್ತೊಂದು ಧರ್ಮದ ದರ್ಗಾವನ್ನಾಗಲಿ, ಅದರ ಸಹ ಸಂಸ್ಥೆಗಳನ್ನಾಗಲಿ ಸವಾಲಿಗೆ ಒಳಪಡಿಸುವುದಿಲ್ಲ. ಇತರ ಯಾವುದೇ ಧರ್ಮದ ನಂಬಿಕೆಗಳನ್ನು ಅದು ಪ್ರಶ್ನಿಸುವುದಿಲ್ಲ. ಆದರೆ ಶತ ಶತಮಾನಗಳಿಂದ ಅಸ್ತಿತ್ವದಲ್ಲಿರುವ, ಭಗವಂತ ಮುರುಗನ್ ಸ್ವಾಮಿಯ ಕುರಿತ ಭಕ್ತರ ಆಚರಣೆ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತದೆ.
ದೇವಾಲಯದಲ್ಲಿ ದೀಪ ಬೆಳಗಿದ ಹಿಂದೂಗಳು ಕೋರ್ಟಿಗೆ ಹೋಗಬೇಕಾದ ತಪ್ಪೇನು ಮಾಡಿzರೆ? ಡಿಎಂಕೆ ಸರಕಾರದ ಅಡಿಯ ಏಕೆ ಇಂಥ ವಿವಾದಗಳು ಉದ್ಭವಿಸುತ್ತವೆ? ತಿರುಪಾರನುಕುಂಡ್ರಮ್ ಕ್ಷೇತ್ರದಲ್ಲಿ ಕಾರ್ತಿಕ ದೀಪವನ್ನು ಬೆಳಗುವ ನಿಟ್ಟಿನಲ್ಲಿ ಭಕ್ತಾದಿಗಳ ಪರವಾಗಿ ಹೈಕೋರ್ಟ್ ತನ್ನ ತೀರ್ಪು ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಡಿಎಂಕೆ ಸರಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇ ರಿದೆ.
ದೀಪ ಬೆಳಗುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಡಿಎಂಕೆ ಸರಕಾರ ವಾದಿಸಿದೆ. ಆದರೆ ಇದು ಗೊಂದಲವನ್ನು ಸೃಷ್ಟಿಸುವ ಪ್ರಯತ್ನ ಎಂದು ಭಕ್ತಾದಿಗಳು ಹೇಳಿದ್ದಾರೆ.
ಅತ್ಯಂತ ಆಘಾತಕರ ಬೆಳವಣಿಗೆ ಏನೆಂದರೆ, ಡಿಎಂಕೆ ಸಂಸದರು, ಕಾರ್ತಿಕ ದೀಪ ಬೆಳಗಿಸುವ ಹಿಂದೂಗಳ ಹಕ್ಕಿನ ಪರವಾಗಿ ನಿಂತಿದ್ದ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿ ನಿಲುವಳಿಯನ್ನು ಮಂಡಿಸಲು ಮುಂದಾಗಿರುವುದು. ಐವತ್ತಕ್ಕೂ ಹೆಚ್ಚು ನಿವೃತ್ತ ನ್ಯಾಯಾಧೀಶರು ಇದೀಗ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ಅವರ ಬೆಂಬಲಕ್ಕೆ ಮುಂದಾಗಿದ್ದಾರೆ.
ಡಿಎಂಕೆಯು ನ್ಯಾಯಾಂಗದ ವಿರುದ್ಧ ಹೋಗುತ್ತಿರುವುದನ್ನು ಇದು ಬಿಂಬಿಸಿದೆ. ಇದು ನ್ಯಾಯಾಂಗ ಕ್ಕೆ ಮಾಡುವ ಅವಮಾನವೂ, ಅಗೌರವವೂ ಆಗಿದೆ. ಅತಿ ದೊಡ್ಡ ವಿಪರ್ಯಾಸವೇನೆಂದರೆ ಡಿಎಂಕೆ ಮತ್ತು ಅದರ ಒಡನಾಡಿಯಾದ ‘ಇಂಡಿ’ ಮೈತ್ರಿಕೂಟವು ‘ಸಂವಿಧಾನವು ಅಪಾಯದಲ್ಲಿದೆ’ ಎಂಬ ಬೆದರಿಕೆ ಒಡ್ಡುತ್ತಿವೆ. ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿವೆ.
ರಾಜಕೀಯ ಬೆದರಿಕೆಗೆ ಜಗ್ಗದೆ ತೀರ್ಪು ನೀಡಿದ ನ್ಯಾಯಾಧೀಶರನ್ನೇ ಡಿಎಂಕೆ ಅವಮಾನಿಸುತ್ತಿದೆ. ಇದು ನ್ಯಾಯಾಂಗದ ಸಾಂಸ್ಥಿಕ ವ್ಯವಸ್ಥೆಯನ್ನೇ ತಿರುಚಲು ಮಾಡುವ ಯತ್ನವಾಗಿದೆ.
ಹಿಂದೂ ಪರ ತೀರ್ಪಿದ್ದರೂ ವಿರೋಧ: ತಿರುಪಾರನುಕುಂಡ್ರಮ್ ಕ್ಷೇತ್ರದಲ್ಲಿ ಹಿಂದೂಗಳು ಕಾರ್ತಿಕ ದೀಪವನ್ನು ಬೆಳಗಲು ಹೈಕೋರ್ಟ್ ತೀರ್ಪು ನೀಡಿದ್ದರೂ, ‘ಇಂಡಿ’ ಒಕ್ಕೂಟವು ಇದರ ವಿರುದ್ಧ ನಿಂತಿರುವುದು ಹಿಂದೂ ವಿರೋಧಿ ಕೃತ್ಯವಾಗಿದೆ. ಈ ತೀರ್ಪು ನೀಡಿದ ನ್ಯಾಯಾಧೀಶರನ್ನು ಪಕ್ಷಪಾತಿ, ಕೋಮುವಾದಿ ಎಂದು ಆರೋಪಿಸುವುದು ಪೂರ್ವಗ್ರಹಪೀಡಿತವಾಗಿದೆ. ಇದು ಕಾಂಗ್ರೆಸ್, ಡಿಎಂಕೆ ಪಕ್ಷಗಳ ಚಾಳಿಯಾಗಿ ಬಿಟ್ಟಿದೆ.
ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದ ಕಾರ್ಯಕ್ರಮವನ್ನು ‘ಇಂಡಿ’ ಒಕ್ಕೂಟ ಬಹಿಷ್ಕರಿಸಿತ್ತು. ಜಸ್ಟೀಸ್ ರಂಜನ್ ಗೊಗೋಯ್ ಅವರು ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವುದರ ಪರವಾಗಿ ತೀರ್ಪು ಕೊಟ್ಟಿದ್ದುದೇ ಈ ವಿರೋಧಕ್ಕೆ ಕಾರಣವಾಗಿತ್ತು. ಇದು ‘ಇಂಡಿ’ ಒಕ್ಕೂಟದ ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ.
1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮೂವರು ನ್ಯಾಯಾಧೀಶರನ್ನು ಬೈಪಾಸ್ ಮಾಡಿ ನ್ಯಾಯಮೂರ್ತಿ ಎ.ಎನ್.ರಾಯ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದರು. ಸರಕಾರದ ವಿರುದ್ಧ ತೀರ್ಪು ನೀಡಿದ್ದ ಹಿರಿಯ ನ್ಯಾಯಾಧೀಶರುಗಳನ್ನು ಅವಗಣನೆ ಮಾಡಿದ್ದರು.
1977ರಲ್ಲಿ ಎರಡನೇ ಬಾರಿಗೆ ನ್ಯಾಯಮೂರ್ತಿ ಎಚ್.ಆರ್.ಖನ್ನಾ ಅವರನ್ನು ಟಾರ್ಗೆಟ್ ಮಾಡಿ ಅವರನ್ನು ಬೈಪಾಸ್ ಮಾಡಲಾಯಿತು. ತುರ್ತುಪರಿಸ್ಥಿತಿಯ ಸಂದರ್ಭ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿದಿದ್ದಕ್ಕೆ ಈ ಪ್ರತೀಕಾರದ ಕ್ರಮವನ್ನು ಸರಕಾರ ಕೈಗೊಂಡಿತ್ತು. ಇಂಥ ‘ಡಿಎನ್‌ಎ’ ಈಗ ಡಿಎಂಕೆ ಪಕ್ಷದಲ್ಲಿದೆ. ಇಂದಿರಾ ಗಾಂಧಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದ ಮೋಹನ್ ಕುಮಾರಮಂಗಲಮ್ ಅವರು “ನ್ಯಾಯಾಂಗವು ಆಡಳಿತಾರೂಢ ಸರಕಾರದ ಐಡಿಯಾಲಜಿಗಳಿಗೆ ಬದ್ಧವಾಗಿರಬೇಕು" ಎಂದು ಬಹಿರಂಗವಾಗಿಯೇ ಪ್ರತಿಪಾದಿಸಿದ್ದರು.
ಡಿಎಂಕೆಯು ತಮಿಳುನಾಡಿನಲ್ಲಿ ಇದೇ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಈಗ ಅದು ಹಿಂದೂ ಧಾರ್ಮಿಕ ನಂಬಿಕೆಗಳ ಪರವಾಗಿ ತೀರ್ಪು ನೀಡಿರುವ ನ್ಯಾಯಾಧೀಶರ ಪದಚ್ಯುತಿಗೆ ಯತ್ನಿಸುತ್ತಿದೆ. ನಾಳೆ ತನ್ನ ರಾಜಕೀಯ ಸಿದ್ಧಾಂತಗಳಿಗೆ ವಿರುದ್ಧವಾಗಿ ತೀರ್ಪು ನೀಡುವ ಪ್ರತಿಯೊಬ್ಬ ನ್ಯಾಯಾಧೀಶರನ್ನೂ ಪದಚ್ಯುತಿಗೊಳಿಸಲು ಅದು ಹುನ್ನಾರ ನಡೆಸಬಹುದು.
ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ವಿರುದ್ಧ ವಾಗ್ದಂಡನೆಗೆ ಆಗ್ರಹಿಸಿರುವ ಡಿಎಂಕೆಯದ್ದು ರಾಜಕೀಯ ಪ್ರೇರಿತ ದಾಳಿಯಲ್ಲದೆ ಇನ್ನೇನು? ವಾಗ್ದಂಡನೆ ಎಂದರೆ ಸಾಮಾನ್ಯ ವಲ್ಲ. ಇದು ನ್ಯಾಯಾಂಗವನ್ನೇ ಹತ್ತಿಕ್ಕುವ ಯತ್ನ. ಮುಖ್ಯವಾಗಿ ಹಿಂದೂ ಪರ ಹಕ್ಕುಗಳನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿಗಳ ವಿರುದ್ಧದ ನಡೆಯಾಗಿದೆ. ಎನ್‌ಡಿಎ ನ್ಯಾಯಾಂಗದ ಪರ ಇರುವು ದನ್ನು ಇಲ್ಲಿ ಗಮನಿಸಬಹುದು.
ಡಿಎಂಕೆಯ ಒಟ್ಟಾರೆ ಉದ್ದೇಶ ಒಂದು ಸಮುದಾಯದ ಓಲೈಕೆಯೇ ಆಗಿದೆ. ವಕ್ ಭೂ ಕಬಳಿಕೆ ಬಗ್ಗೆ ಅದು ಮಾತನಾಡುವುದಿಲ್ಲ. ಆದರೆ ಹಿಂದೂ ದೇವಾಲಯಗಳಿಗೆ ಸಂಬಂಧಿಸಿ ಅನಗತ್ಯ ವಿಚಾರ ಗಳಿಗೆ ಮಧ್ಯಪ್ರವೇಶಿಸುತ್ತಿದೆ. ಹಿಂದೂ ದೇವಾಲಯಗಳನ್ನು ಸರಕಾರ ನಿಯಂತ್ರಿಸುತ್ತಿದೆ.
ದೇವಾಲಯಗಳಿಗೆ ಬರುವ ಕಾಣಿಕೆಯನ್ನು ಬೇರೆ ಯಾವುದೋ ಉದ್ದೇಶಕ್ಕೆ ಖರ್ಚು ಮಾಡುತ್ತಾರೆ. ದೇವಾಲಯಗಳ ಸಂಸ್ಕೃತಿ, ಆಚರಣೆಗಳನ್ನು ನಿರ್ಬಂಧಿಸಲಾಗುತ್ತಿದೆ. ಈ ದೌರ್ಜನ್ಯವು ಡಿಎಂಕೆ ಸರಕಾರದ ಅಡಿಯಲ್ಲಿ ನಡೆಯುತ್ತಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಇರುವುದೇ ಹಿಂದೂ ದೇವಾಲಯಗಳ ಸಂಸ್ಕೃತಿ ರಕ್ಷಣೆಗೆ. ಆದರೆ ಅದನ್ನೇ ಹಿಂದೂಗಳ ವಿರುದ್ಧ ಆಯುಧವಾಗಿ ಬಳಸಲಾಗುತ್ತಿದೆ. ತಮಿಳುನಾಡಿನಲ್ಲಿ ಈ ಇಲಾಖೆಯೇ ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸು ತ್ತಿದೆ.
ಇದೆಂಥಾ ಜಾತ್ಯತೀತತೆ? ತಮಿಳುನಾಡಿನಲ್ಲಿ ನಡೆದಿರುವುದು ‘ಇಂಡಿ’ ಒಕ್ಕೂಟದ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವುದು, ನಿಯಂತ್ರಿಸುವುದು, ಬಳಿಕ ಸೆಕ್ಯುಲರಿಸಂ ಎಂದು ಅದನ್ನೇ ಬಿಂಬಿಸುವುದು ಇವರ ದುರುದ್ದೇಶ. ತಮ್ಮ ಕೃತ್ಯಗಳನ್ನು ಬೆಂಬಲಿ ಸುವ ನ್ಯಾಯಾಂಗ ಅವರಿಗೆ ಬೇಕಾಗಿದೆಯೇ ವಿನಾ, ನಿಜವಾದ ನ್ಯಾಯಾಂಗ ವ್ಯವಸ್ಥೆಯಲ್ಲ. ಸಾಂವಿ ಧಾನಿಕ ಸಂಸ್ಥೆಗಳನ್ನು ಈ ರೀತಿ ಬೆದರಿಸಬಾರದು. ಬಿಜೆಪಿ ಹಿಂದೂಗಳ ಸಂಸ್ಕೃತಿ, ಆಚರಣೆಗಳನ್ನು ಸಂರಕ್ಷಿಸುತ್ತಿದೆ.
ಜತೆಗೆ ಪ್ರಜಾಪ್ರಭುತ್ವ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆಯ ರಕ್ಷಣೆಗೂ ಬದ್ಧವಾಗಿದೆ. ಜನರು ಎಲ್ಲವನ್ನೂ ಸ್ಪಷ್ಟವಾಗಿ ನೋಡುತ್ತಿzರೆ. ಭಕ್ತಾದಿಗಳ ಪರ-ವಿರೋಧ ಯಾರು ಇದ್ದಾರೆ ಎಂಬುದು ಅವರಿಗೆ ತಿಳಿದಿದೆ. ಭಾರತೀಯರು ತಮಿಳುನಾಡಿನಲ್ಲಿ ಮುಂಬರುವ ತಿಂಗಳುಗಳಲ್ಲಿ ‘ಇಂಡಿ’ ಒಕ್ಕೂಟದ ಪಕ್ಷಗಳಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ.
(ಲೇಖಕರು ಹವ್ಯಾಸಿ ಬರಹಗಾರರು)