Dr Sadhanashree Column: ಈ ಆರು ಬಗೆಯ ತರಕಾರಿಗಳ ಬಗ್ಗೆ ಬಲ್ಲಿರಾ ?
ಆಯುರ್ವೇದದ ‘ಭಾವಪ್ರಕಾಶ ನಿಘಂಟು’ ಎಂಬ ಗ್ರಂಥವು ತರಕಾರಿಗಳನ್ನು ಆರು ಮುಖ್ಯ ವರ್ಗ ಗಳಾಗಿ ವಿಂಗಡಿಸುತ್ತದೆ- ಪತ್ರ, ಪುಷ್ಪ, ಫಲ, ನಾಲ, ಕಂದ ಮತ್ತು ಸಂಸ್ವೇದಜ. ಪ್ರತಿಯೊಂದು ವರ್ಗಕ್ಕೂ ತನ್ನದೇ ಆದ ಹಿತ-ಅನಿಷ್ಟ ಗುಣಗಳಿವೆ. ಸರಿಯಾದ ರೀತಿಯಲ್ಲಿ ಸಂಸ್ಕರಿಸಿದ ತರಕಾರಿಯು ಔಷಧ ವಾಗುತ್ತದೆ; ತಪ್ಪಾಗಿ ಬಳಸಿದರೆ ಅದು ದೋಷಗಳನ್ನು ಉತ್ತೇಜಿಸಿ ರೋಗಕ್ಕೆ ಕಾರಣವಾಗುತ್ತದೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಆಹಾರವನ್ನು ‘ಮಹಾ ಔಷಧಿ’ ಎಂದು ಆಯುರ್ವೇದ ಶ್ಲಾಘಿಸಿದೆ. ಪ್ರತಿದಿನ ನಾವು ಸೇವಿಸುವ ತರಕಾರಿಗಳು ದೋಷ ಸಮತೋಲನ, ಧಾತು ಪೋಷಣೆ, ಸ್ರೋತಸ್ಸುಗಳ ಶುದ್ಧೀಕರಣ, ಮನಸ್ಸಿನ ಸ್ಥಿರತೆ- ಇವೆಲ್ಲವನ್ನೂ ನೇರವಾಗಿ ಪ್ರಭಾವಿಸುವ ಒಂದು ಔಷಧಿಯ ದ್ರವ್ಯ. ಆದರೆ ಸೇವಿಸಿದಾಗ ಎಲ್ಲಾ ತರಕಾರಿಗಳೂ ಒಂದೇ ರೀತಿಯಾಗಿ ದೇಹದಲ್ಲಿ ವರ್ತಿಸುವುದಿಲ್ಲ. ಅವುಗಳ ಸ್ವಭಾವ (ಗುಣ), ರಸ ( ರುಚಿ), ವೀರ್ಯ (ಉಷ್ಣ /ಶೀತ) ಮತ್ತು ಬೆಳೆಯುವ ವಿಧಾನವು ಅವುಗಳ ಪರಿಣಾಮವನ್ನು ನೇರವಾಗಿ ನಿರ್ಧರಿಸುತ್ತವೆ.
ಆಯುರ್ವೇದದ ‘ಭಾವಪ್ರಕಾಶ ನಿಘಂಟು’ ಎಂಬ ಗ್ರಂಥವು ತರಕಾರಿಗಳನ್ನು ಆರು ಮುಖ್ಯ ವರ್ಗ ಗಳಾಗಿ ವಿಂಗಡಿಸುತ್ತದೆ- ಪತ್ರ, ಪುಷ್ಪ, ಫಲ, ನಾಲ, ಕಂದ ಮತ್ತು ಸಂಸ್ವೇದಜ. ಪ್ರತಿಯೊಂದು ವರ್ಗ ಕ್ಕೂ ತನ್ನದೇ ಆದ ಹಿತ-ಅನಿಷ್ಟ ಗುಣಗಳಿವೆ. ಸರಿಯಾದ ರೀತಿಯಲ್ಲಿ ಸಂಸ್ಕರಿಸಿದ ತರಕಾರಿ ಯು ಔಷಧವಾಗುತ್ತದೆ; ತಪ್ಪಾಗಿ ಬಳಸಿದರೆ ಅದು ದೋಷಗಳನ್ನು ಉತ್ತೇಜಿಸಿ ರೋಗಕ್ಕೆ ಕಾರಣವಾಗು ತ್ತದೆ. ಆದ್ದರಿಂದ ಪ್ರತಿ ತರಕಾರಿ ವರ್ಗದ ಗುಣಧರ್ಮ, ದೇಹದಲ್ಲಿ ಸೃಷ್ಟಿಸುವ ದೋಷ ಬದಲಾವಣೆ ಮತ್ತು ಅದರ ದುರ್ಗುಣಗಳನ್ನು ಕಡಿಮೆ ಮಾಡುವ ಪಾಕಶೈಲಿ- ಇವುಗಳನ್ನು ಅರಿತುಕೊಂಡು ಸೇವಿಸುವುದು ನಿಜವಾದ ಆಯುರ್ವೇದೀಯ ಆಹಾರ ಸಂಸ್ಕೃತಿ.
ಈ ಲೇಖನದಲ್ಲಿ, ಭಾವಪ್ರಕಾಶದ ಆಧಾರದ ಮೇಲೆ ಈ ೬ ತರಕಾರಿ ವರ್ಗಗಳ ಗುಣ-ದೋಷಗಳು, ಅದಕ್ಕೆ ಮಾಡಬೇಕಾದ ಪಾಕಶಾಮಕ ವಿಧಾನಗಳನ್ನು ಸವಿಸ್ತಾರವಾಗಿ ನೋಡೋಣ. ತರಕಾರಿಯ ವಿಧಗಳು ಹೀಗಿವೆ:
೧. ಪತ್ರ- ಸೊಪ್ಪುಗಳು
೨. ಪುಷ್ಪ- ಹೂವುಗಳು
೩. ಫಲ- ಹಣ್ಣುಗಳು
೪. ನಾಳ- ದಂಟುಗಳು
೫. ಕಂದ- ಗೆಡ್ಡೆಗಳು
೬. ಸಂಸ್ವೇದಜ- ಅಜೈವಿಕ ವಸ್ತುಗಳಿಂದ ಪೋಷಣೆಯಾಗುವ ಸಸ್ಯಗಳು, ಶಿಲೀಂಧ್ರಗಳು, ಪರಾವಲಂಬಿ ಸಸ್ಯಗಳು, ಪಾಚಿ ಸಸ್ಯಗಳು.
ಇದನ್ನೂ ಓದಿ: Dr Sadhanashree Column: ಆಯುರ್ವೇದ ಹೇಳುವ ಕಿವಿಗಳ ಕಾಳಜಿ
ಭಾವಪ್ರಕಾಶ ನಿಘಂಟುವಿನಲ್ಲಿ ತರಕಾರಿಗಳನ್ನು ಅವು ಬೆಳೆಯುವ ವಿಧಾನ, ರಸ-ಗುಣ-ವೀರ್ಯ ಮತ್ತು ದೋಷಗಳ ಮೇಲೆ ಮಾಡುವ ಪ್ರಭಾವ ಇತ್ಯಾದಿಗಳ ಆಧಾರದ ಮೇಲೆ ವಿಭಜಿಸಲಾಗಿದೆ. ನಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳು ಅತ್ಯಂತ ಮುಖ್ಯ ಸ್ಥಾನ ಪಡೆದಿರುವುದರಿಂದ, ಅವುಗಳ ಸ್ವಭಾವ (ಗುಣ) ಮತ್ತು ಅನಿಷ್ಟ ಪರಿಣಾಮ (ಅವಗುಣ) ಇವುಗಳನ್ನು ತಿಳಿದುಕೊಳ್ಳು ವುದು ಅತ್ಯವಶ್ಯಕ. ಸರಿಯಾದ ಪಾಕವಿಧಾನದ ಮೂಲಕ ತರಕಾರಿಗಳಲ್ಲಿರುವ ದುರ್ಗುಣಗಳನ್ನು ನೀಗಿಸಿ ಆರೋಗ್ಯವೃದ್ಧಿಗಾಗಿ ಸಂಯೋಜಿಸಬಹುದು.
೧. ಪತ್ರ- ಸೊಪ್ಪುಗಳ ವಿಭಾಗ: ಉದಾಹರಣೆಗಳು- ಹರಿವೆ, ಮೆಂತೆ, ಕೊತ್ತಂಬರಿ, ಪಾಲಕ್, ಸಬ್ಬಸಿಗೆ ಇತ್ಯಾದಿ. ಇವುಗಳ ಸಾಮಾನ್ಯ ಗುಣಗಳು ಹೀಗಿವೆ:
ರಸ: ಹೆಚ್ಚಿನವು ತಿಕ್ತ (ಕಹಿ), ಕಷಾಯ (ಒಗರು).
ಗುಣ: ಲಘು (ಜೀರ್ಣಕ್ಕೆ ಹಗುರ), ರೂಕ್ಷ (ಒಣಗಿಸುವ ಸ್ವಭಾವವುಳ್ಳದ್ದು) ಸ್ವಲ್ಪ ತೀಕ್ಷ್ಣ.
ವೀರ್ಯ: ದೇಹದಲ್ಲಿ ಶೀತವನ್ನು ಹೆಚ್ಚು ಮಾಡುತ್ತದೆ.
ದೋಷ ಪ್ರಭಾವ: ವಾತವರ್ಧಕ, ಕಫಹರ, ಪಿತ್ತಶಾಮಕ.
ಅನಿಷ್ಟ ಪರಿಣಾಮ: ಜೀರ್ಣಶಕ್ತಿ ಕಡಿಮೆಯಿದ್ದಾಗ ಸೇವಿಸಿದರೆ ಹೊಟ್ಟೆಯುಬ್ಬರ, ಬಿಗಿತ, ನೋವನ್ನು ನೀಡಬಹುದು. ಹೆಚ್ಚಾಗಿ ತಿಂದರೆ ಆತಿಸಾರ/ಮಲಬದ್ಧತೆ ಎರಡನ್ನೂ ತರಬಹುದು. ಅತಿ ರೂಕ್ಷತೆಯಿಂದ ದೇಹವನ್ನು ಒಣಗಿಸಬಹುದು. ಮಳೆಗಾಲದಲ್ಲಿ/ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವುದು ಸೂಕ್ತವಲ್ಲ.
ಪಾಕ ವಿಧಾನ (ದುರ್ಗುಣ ನಿವಾರಣೆಗಾಗಿ):
- ಸಾಕಷ್ಟು ಪ್ರಮಾಣದ ಎಣ್ಣೆ/ತುಪ್ಪದ ಬಳಕೆ ಮಾಡಿ ಬಾಡಿಸಬೇಕು.
- ಒಗ್ಗರಣೆಯಲ್ಲಿ ಜೀರಿಗೆ-ಸಾಸಿವೆ-ಹಿಂಗು ಬಳಸಬೇಕು.
- ಸೊಪ್ಪುಗಳನ್ನು ಮಿತವಾಗಿ ಬೇಯಿಸಬೇಕು, ನೀರನ್ನು ಬಸಿದು ನಂತರ ಉಪಯೋಗಿಸತಕ್ಕದ್ದು.
- ಒಂದು ಹಿಡಿ ಹೆಸರುಬೇಳೆ ಜತೆ ಸೇರಿಸಿದರೆ ವಾತ ಶಮನವಾಗಬಹುದು.
೨. ಪುಷ್ಪ- ಹೂವುಗಳು: ಉದಾಹರಣೆಗಳು- ಬಾಳೆಹೂವು, ಅಗಸೆ ಹೂ, ನುಗ್ಗೆ ಹೂವು, ಬೇವಿನ ಹೂವು ಇತ್ಯಾದಿ. ಇವುಗಳ ಸಾಮಾನ್ಯ ಗುಣಗಳು ಹೀಗಿವೆ:
ರಸ: ತಿಕ್ತ (ಕಹಿ), ಕಷಾಯ(ಒಗರು).
ಗುಣ: ರೂಕ್ಷ, ಲಘು.
ವೀರ್ಯ: ಉಷ್ಣ.
ದೋಷ: ವಾತವರ್ಧಕ, ಪಿತ್ತವರ್ಧಕ (ಕೆಲವು).
ಅನಿಷ್ಟ ಪರಿಣಾಮಗಳು: ಹೊಟ್ಟೆ ಹಸಿವನ್ನು ಕುಗ್ಗಿಸಬಹುದು, ವಾತ-ಪಿತ್ತ ಹೆಚ್ಚಳಕ್ಕೆ ಕಾರಣ ವಾಗಬಹುದು, ಕೆಲವು (ಬಾಳೆಹೂ) ಮಲದಬದ್ಧತೆಯನ್ನು ಹೆಚ್ಚಿಸುವ ಸಂಭವವಿದೆ.
ಪಾಕ ಕ್ರಮ:
- ಸ್ವಲ್ಪ ಸಮಯ ನೀರಿನಲ್ಲಿ ನೆನೆಸಬೇಕು.
- ಒಗ್ಗರಣೆಯಲ್ಲಿ ಮೆಂತೆ, ಜೀರಿಗೆ, ಶುಂಠಿ ಹಾಕಿ ಬಾಡಿಸಿದರೆ ಉತ್ತಮ.
- ಹೆಸರುಬೇಳೆ ಜತೆಯಲ್ಲಿ ಸೇರಿಸಿದರೆ ವಾತ ಶಮನವಾಗಬಹುದು.
- ತಯಾರಾದ ಮೇಲೆ ಸೇವಿಸುವಾಗ ಸ್ವಲ್ಪ ತುಪ್ಪ ಸೇರಿಸುವುದು ಸೂಕ್ತ.
೩. ಫಲ- ಹಣ್ಣುಗಳು: ಉದಾಹರಣೆಗೆ- ಸೌತೆಕಾಯಿ, ಕುಂಬಳಕಾಯಿ, ಹೀರೇಕಾಯಿ, ಬದನೆಕಾಯಿ, ಬಾಳೇಕಾಯಿ, ಸೋರೆಕಾಯಿ, ಪಡವಲಕಾಯಿ. ಇವುಗಳ ಸಾಮಾನ್ಯ ಗುಣಗಳು
ಹೀಗಿವೆ: ರಸ: ತಿಕ್ತ, ಕಷಾಯ.
ಗುಣ: ರೂಕ್ಷ, ಲಘು.
ವೀರ್ಯ: ಬಹುತೇಕ ಶೀತ.
ದೋಷ: ಕಫ-ಪಿತ್ತ ಶಮನ, ವಾತವನ್ನು ಸ್ವಲ್ಪ ಹೆಚ್ಚಿಸಬಹುದು.
ಅನಿಷ್ಟ ಪರಿಣಾಮ: ಸೋರೆ/ಸೌತೆಕಾಯಿಯಂಥ ತರಕಾರಿಗಳು ಹೊಟ್ಟೆ ನೋವು, ಉಬ್ಬರಕ್ಕೆ ಕಾರಣವಾದರೆ, ಬದನೆಕಾಯಿಯು ವಾತವನ್ನು ಹೆಚ್ಚಿಸಿ ಚರ್ಮದ ತುರಿಕೆಯನ್ನು ನೀಡಬಹುದು.
ಹೀಗೆ ಬಳಸಿದರೆ ಉತ್ತಮ:
- ಬದನೆಕಾಯಿಯನ್ನು ಉಪ್ಪುನೀರಲ್ಲಿ ನೆನೆಸಬೇಕು, ಯಥೇಚ್ಛವಾಗಿ ಎಣ್ಣೆಯಲ್ಲಿ ಬೇಯಿಸಬೇಕು.
- ಸೌತೆಕಾಯಿಯ ಅತಿ ಶೀತಲ ಗುಣವನ್ನು ಕಡಿಮೆ ಮಾಡಲು ಶುಂಠಿ, ಮೆಣಸಿನ ಜತೆಗೆ ಬಳಸಬೇಕು.
- ತುಪ್ಪ ಅಥವಾ ಎಣ್ಣೆಯೊಂದಿಗೆ ತಾಳಿಸಿದರೆ ರೂಕ್ಷತೆ ನಿವಾರಣೆ.
- ಹಾಗಲಕಾಯಿಯನ್ನು ಉಪ್ಪಿನಲ್ಲಿ ಕುಟ್ಟಿದರೆ/ಹುಣಸೆಹಣ್ಣಿನ ನೀರಿನಲ್ಲಿ ಬೇಯಿಸಿದರೆ ಅತಿಸಾರದ ಸಾಧ್ಯತೆ ಕಡಿಮೆ.
೪. ನಾಳ/ದಂಟು: ಉದಾಹರಣೆಗಳು- ಬಾಳೆದಂಟು, ಕಮಲದ ದಂಟು, ಹರಿವೆ ದಂಟು, ಬಸಳೆದಂಟು. ಇವುಗಳ ಸಾಮಾನ್ಯ ಗುಣಗಳು ಹೀಗಿವೆ:
ರಸ: ಕಷಾಯ-ಮಧುರ.
ಗುಣ: ಸ್ವಲ್ಪ ಲಘು, ಸ್ವಲ್ಪ ರೂಕ್ಷ.
ವೀರ್ಯ: ಶೀತ.
ದೋಷ: ಸಾಮಾನ್ಯವಾಗಿ ವಾತ ಪಿತ್ತ ಶಮನ. ಸೇವಿಸುವ ವಿಧಾನ: ಕಂದಗಳನ್ನು ಮತ್ತು ಕಂದಗ ಳಿಂದ ತಯಾರಿಸಿದ ಖಾದ್ಯಗಳನ್ನು ಸದಾ ಆಹಾರದ ಮೊದಲಭಾಗದ ಸೇವಿಸತಕ್ಕದ್ದು. ಸದಾ ಚೆನ್ನಾಗಿ ಬೇಯಿಸಿ, ಜೀರ್ಣಕಾರಿ ದ್ರವ್ಯಗಳಿಂದ ಸಂಸ್ಕರಿಸುವುದು ಅತ್ಯವಶ್ಯಕ.
೫. ಕಂದ/ಗೆಡ್ಡೆ: ಉದಾಹರಣೆಗಳು- ಆಲೂಗೆಡ್ಡೆ, ಸುವರ್ಣ ಗೆಡ್ಡೆ, ಕೆಸುವಿನ ಗೆಡ್ಡೆ, ಗೆಣಸು, ಬೀಟ್ರೂಟ್, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿ. ಇವುಗಳ ಸಾಮಾನ್ಯ ಗುಣಗಳು ಹೀಗಿವೆ:
ರಸ: ಮಧುರ.
ಗುಣ: ಗುರು (ಜೀರ್ಣಕ್ಕೆ ಜಡ), ಸ್ನಿಗ್ಧ.
ವೀರ್ಯ: ಕೆಲವು ಉಷ್ಣ, ಕೆಲವು ಶೀತ.
ದೋಷ: ವಾತಶಮನ, ಕಫ ವೃದ್ಧಿಕರ.
ಅನಿಷ್ಟ ಪರಿಣಾಮ: ಹೆಚ್ಚು ತಿಂದರೆ ಅಜೀರ್ಣ, ಆಲಸ್ಯ. ಕೆಲವು ಕಂದಗಳು ತುರಿಕೆಯನ್ನು ನೀಡು ತ್ತವೆ. ಅಗ್ನಿಯನ್ನು ಹಾಳುಮಾಡಿ ಜೀರ್ಣಶಕ್ತಿಯನ್ನು ಕುಗ್ಗಿಸುತ್ತವೆ.
ಪಾಕ ಮಾಡುವ ವಿಧಾನ:
- ಕಂದ ತರಕಾರಿಗಳನ್ನು ಹುರಿದ ಮೇಲೆ ಮಾತ್ರ ಕರಿಯಬೇಕು, ಆಗ ಜೀರ್ಣಕ್ಕೆ ಸುಲಭ.
- ಕಪ್ಪು ಮೆಣಸು, ಮೆಂತೆ, ಜೀರಿಗೆ, ಹಿಂಗುಗಳ ಜತೆಗೆ ಒಗ್ಗರಿಸಬೇಕು.
- ಸೂರಣವನ್ನು ಹುಣಸೆ/ಬೆಲ್ಲ/ಕಪ್ಪು ಮೆಣಸು/ಎಳ್ಳೆಣ್ಣೆ ಜತೆಗೆ ಪಾಕ ಮಾಡಬೇಕು.
೬. ಸಂಸ್ವೇದಜ: ವಿಷರಹಿತವಾದ, ಸೇವನೆಗೆ ಯೋಗ್ಯವಾದ ಅಣಬೆಗಳು. ಇವುಗಳ ಸಾಮಾನ್ಯ ಗುಣಗಳು ಹೀಗಿವೆ:
ರಸ: ಮಧುರ-ಕಷಾಯ.
ಗುಣ: ಗುರು, ಪಿಚ್ಚಿಲ, ಅಭಿಷ್ಯಂದಿ- ಜೀರ್ಣಕ್ಕೆ ಜಡ, ಲೋಳೆ ಮತ್ತು ಜಿನುಗುವ ಸ್ವಭಾವ ಹೊಂದಿದೆ.
ವೀರ್ಯ: ಶೀತ.
ದೋಷ: ಕಫ ವೃದ್ಧಿ.
ಅನಿಷ್ಟ ಪರಿಣಾಮ: ಅಜೀರ್ಣ, ಹೊಟ್ಟೆ ಭಾರ, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ತೊಂದರೆ ಇರುವವರಿಗೆ ಕಫ ಹೆಚ್ಚಳ, ಆಲಸ್ಯ, ಮೈಭಾರ, ಅತಿನಿದ್ರಾ, ಮಲಬದ್ಧತೆ.
ಪಾಕ ಮಾಡುವ ವಿಧಾನ:
- ಅಣಬೆಗಳನ್ನು ಚೆನ್ನಾಗಿ ಬೇಯಿಸಬೇಕು; ಹಸಿ/ಅರ್ಧಬೇಯಿಸಿದರೆ ವಿಷಕೃತ.
- ಶುಂಠಿ, ಬೆಳ್ಳುಳ್ಳಿ, ಮೆಣಸು, ಜೀರಿಗೆ, ಹಿಂಗು ಅಗತ್ಯ.
- ಒಗ್ಗರಣೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಳಕೆ ಮಾಡಿದರೆ ಉತ್ತಮ.
ಈ ಆರು ಬಗೆಯ ತರಕಾರಿಗಳು ಸೇವಿಸಲ್ಪಟ್ಟಾಗ ಕ್ರಮವಾಗಿ ಜೀರ್ಣಕ್ಕೆ ಜಡವಾಗುತ್ತವೆ. ಸೊಪ್ಪುಗಳು ಅತ್ಯಂತ ಹಗುರವಾಗಿದ್ದು ಬೇಗ ಜೀರ್ಣವಾದರೆ, ಅಣಬೆಯು ಜೀರ್ಣವಾಗಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದನ್ನು ನೆನಪಿಟ್ಟುಕೊಂಡು ಬಳಸುವುದು ಸದಾ ಕ್ಷೇಮ.
ಪತ್ರ, ಪುಷ್ಪ, ಫಲ, ನಾಳ/ದಂಟು, ಕಂದ/ಗೆಡ್ಡೆ ಮತ್ತು ಸಂಸ್ವೇದಜ ಹೀಗೆ ತರಕಾರಿಗಳ ಈ ಆರು ವಿಭಾಗದಲ್ಲಿ ಪ್ರತಿ ವಿಭಾಗವೂ ತನ್ನದೇ ಆದ ಸ್ವಭಾವ, ಪೋಷಕಶಕ್ತಿ ಮತ್ತು ದೋಷಪ್ರಭಾವ ಗಳನ್ನು ಹೊಂದಿದೆ. ಆಯುರ್ವೇದದ ದೃಷ್ಟಿಯಿಂದ ನೋಡಿದಾಗ, ಆಹಾರವನ್ನು ‘ಹಿತ’ ಮತ್ತು ‘ಅಹಿತ’ ಮಾಡಲು ಅದರ ಸ್ವಭಾವಕ್ಕಿಂತಲೂ ಹೆಚ್ಚಾಗಿ ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದು ಮುಖ್ಯ. ಸರಿಯಾದ ಸಂಕಲನ, ತಕ್ಕ ಪಾಕವಿಧಾನ, ಸೂಕ್ತ ದ್ರವ್ಯಗಳ ಜತೆ ಬಳಕೆ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವನೆ- ಈ ನಾಲ್ಕು ನಿಯಮಗಳನ್ನು ಪಾಲಿಸಿದರೆ ಯಾವುದೇ ತರಕಾರಿ ದೇಹಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ.
ದೋಷಗಳನ್ನು ಹೆಚ್ಚಿಸುವ ಗುಣಗಳನ್ನು ಕಡಿಮೆ ಮಾಡುವ ಒಂದೇ ಮಾರ್ಗವೆಂದರೆ ಜಾಣ್ಮೆಯ ಪಾಕಶಾಸ್ತ್ರ.
ಸ್ನೇಹಿತರೆ, ಯಾವ ವಸ್ತುವೂ ಅತಿಯಾದರೆ ಅದು ವಿಷವೇ. ಇದಕ್ಕೆ ತರಕಾರಿಯೂ ಹೊರತಲ್ಲ. ಒಳ್ಳೆಯದೆಂದು ಪ್ರಮಾಣವಿಲ್ಲದೆ ಸೇವಿಸಿದರೆ ತರಕಾರಿಗಳೂ ಆರೋಗ್ಯವನ್ನು ಹಾಳು ಮಾಡುತ್ತವೆ.
ಈ ಸಂದರ್ಭದಲ್ಲಿ ಒಂದು ಸ್ವಾರಸ್ಯಕರ ಕಥೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ: ಸಾವಿರಾರು ವರ್ಷಗಳ ಹಿಂದಿನ ಮಾತು. ಒಂದು ಬಾರಿ ಕಾಗೆಯೊಂದು ಭರತಭೂಮಿಯ ಪ್ರಾಂತ್ಯದ ಉದ್ದಗಲಕ್ಕೂ ಇರುವ ಎ ವೈದ್ಯರ ಮನೆಯ ಅಂಗಳಗಳಿಗೆ ಹಾರಿಹೋಗಿ ಕುಳಿತು ಕೂಗುತ್ತಿತ್ತು- ‘ಕೋರುಕ್? ಕೋರುಕ್? ಕೋರುಕ್?’ ಎಂದು. ಈ ರೀತಿ ಎಲ್ಲರ ಮನೆಯ ಮುಂದೆಯೂ ಮೂರು ಬಾರಿ ಕೂಗಿ ನಂತರ ಉತ್ತರಕ್ಕಾಗಿ ಸುಮ್ಮನೆ ಕುಳಿತು ನಿರೀಕ್ಷಿಸುತ್ತಿತ್ತು.
ಆ ಮನೆಯ ವೈದ್ಯರು ಏನೂ ಉತ್ತರ ನೀಡದಿzಗ ಮತ್ತೊಂದು ವೈದ್ಯರ ಮನೆಗೆ ಹಾರಿ ಹೋಗಿ ಮತ್ತೆ ಮೂರು ಬಾರಿ ಕೂಗುತ್ತಿತ್ತು. ಹೀಗೆ ಹಲವಾರು ವರ್ಷಗಳು ಕಳೆದವು. ಇಡೀ ದೇಶ ಸುತ್ತಿ ಸುತ್ತಿ ಉತ್ತರಕ್ಕಾಗಿ ಹುಡುಕಾಟ ಮುಂದುವರಿಯಿತು. ಈ ನಿಟ್ಟಿನಲ್ಲಿ ಒಮ್ಮೆ ದಕ್ಷಿಣದ ಕಡೆ ಬಂತು ಆ ಕಾಗೆ. ಅಲ್ಲಿ ಒಬ್ಬ ವೈದ್ಯರ ಮನೆಯಲ್ಲಿ ಕುಳಿತು ಕೂಗತೊಡಗಿತು. ಆ ವೈದ್ಯರು ಅತ್ಯಂತ ಕುಶಾಗ್ರಮತಿಗಳು. ಅವರಿಗೆ ಆ ಕಾಗೆಯ ಪ್ರಶ್ನೆಗಳು ಅರ್ಥವಾದವು.
ಕಾಗೆ ಕೇಳುತ್ತಿದ್ದ ಆ ಮೂರು ಪ್ರಶ್ನೆಗಳು- ‘ಯಾರು ಅರೋಗಿ? ಯಾರು ಅರೋಗಿ? ಯಾರು ಅರೋಗಿ?’ ಅಂತ. ಆ ವೈದ್ಯರು ಹೀಗೆ ಉತ್ತರಿಸಿದರು- ‘ಹಿತ ಭುಕ್, ಮಿತ ಭುಕ್, ಅಶಾಕ ಭುಕ್’ ಎಂದು. ಅಂದರೆ ಸದಾ ಹಿತವಾದ ಆಹಾರವನ್ನು ಸೇವಿಸುವವನು ಅರೋಗಿ. ಮಿತವಾಗಿ ಸೇವಿಸುವವನು ಅರೋಗಿ. ಹಾಗೆಯೇ ಅಲ್ಪವೇ ಶಾಕಾಹಾರವನ್ನು ಅಂದರೆ ತರಕಾರಿಗಳನ್ನು ಸೇವಿಸುವವನು ಅರೋಗಿ ಎಂದು.
ಆ ಆಯುರ್ವೇದ ವೈದ್ಯರು ಅಷ್ಟಾಂಗ ಹೃದಯವೆಂಬ ಅತ್ಯಂತ ಮುಖ್ಯವಾದ ಆಯುರ್ವೇದ ಸಂಹಿತೆಯನ್ನು ರಚಿಸಿದ ಆಚಾರ್ಯ ವಾಗ್ಭಟರು. ಆ ದಿವ್ಯಕಾಗೆಯೇ ದೇವ ಧನ್ವಂತರಿ.
ಸ್ನೇಹಿತರೆ, ಆಪ್ತರಾದ ಆಚಾರ್ಯ ವಾಗ್ಭಟರು ಕೊಟ್ಟ ಸಾರ್ವಕಾಲಿಕ ಸತ್ಯವಾದ ಆ ಮೂರು ಉತ್ತರ ಗಳು ನಮ್ಮ ಪಾಲಿಗೆ ವೇದವಾಕ್ಯವಾಗಬೇಕು. ಆಚಾರ್ಯರ ಪ್ರಕಾರ ‘ಅಶಾಕ ಭುಕ್’ ಅಂದರೆ ಸ್ವಲ್ಪವೇ ತರಕಾರಿ ತಿನ್ನುವವ ಮಾತ್ರ ಅರೋಗಿಯಾಗಿ ಉಳಿಯಬಹುದು.
ಶಾಕವನ್ನು ಹಿತಮಿತವಾಗಿ, ಅದರ ಗುಣಧರ್ಮಗಳನ್ನರಿತು ಬಳಸಿದರೆ ಸ್ವಾಸ್ಥ್ಯ ಸಾಧನೆ ಎಂದೂ ಕಷ್ಟಕರವಲ್ಲ!