ಸಂಪಾದಕರ ಸದ್ಯಶೋಧನೆ
ಎಂ.ಜಿ.ದೇವಸಹಾಯಂ ಹೆಸರು ಹೇಳಿದರೆ ನಿಮಗೆ ಏನು ನೆನಪಿಗೆ ಬರುತ್ತದೆ? ಈ ಪ್ರಶ್ನೆಗೆ ನಿಸ್ಸಂದೇಹದ ಉತ್ತರ- ತುರ್ತುಪರಿಸ್ಥಿತಿಯ ದಿನಗಳು. ನಿಜ, ಆ ದಿನಗಳಲ್ಲಿ ಅವರ ಹೆಸರು ಆಗಾಗ ಕೇಳಿಬರುತ್ತಿತ್ತು. ಕಾರಣ ಅವರು ಆ ಸಮಯದಲ್ಲಿ ಚಂಡೀಗಢದ ಜಿಲ್ಲಾಧಿಕಾರಿ (ಡಿಸಿ) ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು.
ಲೋಕನಾಯಕ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರನ್ನು ತುರ್ತು ಪರಿಸ್ಥಿತಿಯ ವೇಳೆ ಚಂಡೀಗಢದಲ್ಲಿ ಬಂಧಿಸಿ ಇಡಲಾಗಿತ್ತು. ಆ ಸಂದರ್ಭದಲ್ಲಿ ಜೆಪಿ ಅವರ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ದೇವಸಹಾಯಂ ಅವರ ಮೇಲಿತ್ತು. ಆಗ ಮುಖ್ಯಮಂತ್ರಿ ಬನ್ಸಿಲಾಲ್, ದೇವಸಹಾಯಂ ಅವರನ್ನು ಕರೆದು, “ಆ ಮನುಷ್ಯ (ಜೆಪಿ) ತನ್ನನ್ನು ದೊಡ್ಡ ನಾಯಕ ಎಂದು ಭಾವಿಸಿದ್ದಾನೆ. ಆತ ಅಲ್ಲಿಯೇ ಬಿದ್ದಿರಲಿ. ಆತ ಯಾರನ್ನೂ ಭೇಟಿ ಮಾಡಲು ಅವಕಾಶ ನೀಡಬೇಡಿ, ಆತನಿಗೆ ಫೋನ್ ಕೂಡ ಕೊಡಬೇಡಿ" ಎಂದು ಕಟ್ಟಪ್ಪಣೆ ನೀಡಿದ್ದರು. ಸರಕಾರದ ಕಠಿಣ ನಿಯಮ ಗಳ ನಡುವೆಯೂ ದೇವಸಹಾಯಂ, ಜೆಪಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಕೇವಲ ಒಬ್ಬ ಅಧಿಕಾರಿಯಾಗಿರದೇ, ಜೆಪಿಗೆ ಬೌದ್ಧಿಕ ಸಾಂಗತ್ಯವನ್ನೂ ನೀಡಿದರು. ಆ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಚೇಲಾಗಳ ಹಾಗೆ ವರ್ತಿಸುತ್ತಿದ್ದರು.
ಇದನ್ನೂ ಓದಿ: Vishweshwar Bhat: ವಿಶ್ವೇಶ್ವರ ಭಟ್ಟರಿಗೆ ಗಾಂಧಿ ಪುರಸ್ಕಾರ
ಜೆಪಿಯವರಿಗೆ ರಹಸ್ಯವಾಗಿ ದೇವಸಹಾಯಂ ನೆರವಾಗುತ್ತಿದ್ದರು. ಜೆಪಿ ಅವರ ಆರೋಗ್ಯ ಹದ ಗೆಟ್ಟಾಗ, ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಸರಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಮೀರಿ ದೇವಸಹಾಯಂ ಶ್ರಮಿಸಿದ್ದರು. ಜೆಪಿ ಅವರು ತಮ್ಮ ದಿನಚರಿಯಲ್ಲಿ ದೇವಸಹಾಯಂ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದರು.
ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಒಬ್ಬ ಐಎಎಸ್ ಅಧಿಕಾರಿ ಹೇಗೆ ಮನುಷ್ಯತ್ವವನ್ನು ಉಳಿಸಿ ಕೊಳ್ಳಬಹುದು ಎಂಬುದಕ್ಕೆ ಇವರು ಮಾದರಿಯಾಗಿದ್ದರು ಎಂದು ಬರೆದಿದ್ದರು. ನಂತರದ ದಿನ ಗಳಲ್ಲಿ ದೇವಸಹಾಯಂ, ಜೆಪಿ ಕುರಿತು ’JP in Jail: An Unfinished Story’ ಎಂಬ ಪ್ರಸಿದ್ಧ ಪುಸ್ತಕ ವನ್ನೂ ಬರೆದರು.
ಅಷ್ಟೇ ಅಲ್ಲ, ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವನ್ನು ‘ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ’ ಎಂದು ಇವರು ಬಣ್ಣಿಸಿ, India's Second Freedom Struggle ಎಂಬ ಇನ್ನೊಂದು ಪುಸ್ತಕವನ್ನು ಸಹ ಬರೆದರು. ದೇವಸಹಾಯಂ ಅವರು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ವರು. ತಮ್ಮ ವೃತ್ತಿಜೀವನವನ್ನು ಮೊದಲು ಭಾರತೀಯ ಸೇನೆಯಲ್ಲಿ ಆರಂಭಿಸಿದರು.
1964ರಿಂದ 1969ರವರೆಗೆ ಸೇನೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು, ಭಾರತ-ಪಾಕಿಸ್ತಾನ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು. ನಂತರ ಭಾರತೀಯ ಆಡಳಿತ ಸೇವೆಗೆ (ಐಎಎಸ್) ಆಯ್ಕೆ ಯಾಗಿ ಹರಿಯಾಣ ಕೆಡರ್‌ನಲ್ಲಿ ಅಧಿಕಾರಿಯಾಗಿ ನಿಯೋಜನೆಗೊಂಡರು. ಹರಿಯಾಣದಲ್ಲಿ ಅಧಿಕಾರಿಯಾಗಿದ್ದಾಗ ಅವರು ಭೂ ಸುಧಾರಣೆ, ನಗರಾಭಿವೃದ್ಧಿ ಮತ್ತು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದರು.
ಮುಖ್ಯವಾಗಿ ಚಂಡೀಗಢದ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದಿದೆ. ಭ್ರಷ್ಟಾಚಾರದ ವಿರುದ್ಧ ರಾಜಿ ಮಾಡಿಕೊಳ್ಳದ ಅವರ ಗುಣವು ಅನೇಕ ಬಾರಿ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು. ಐಎಎಸ್‌ನಿಂದ ನಿವೃತ್ತರಾದ ನಂತರ ದೇವಸಹಾಯಂ ವಿಶ್ರಮಿಸದೇ ಸಾರ್ವಜನಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರು.
ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಅವರು ನಿರಂತರವಾಗಿ ಶ್ರಮಿಸು ತ್ತಿದ್ದಾರೆ. ಮುಖ್ಯವಾಗಿ ಇವಿಎಂ ಯಂತ್ರಗಳ ಕಾರ್ಯವೈಖರಿ ಮತ್ತು ವಿವಿ-ಪ್ಯಾಟ್ ಬಳಕೆಯ ಬಗ್ಗೆ ಅವರು ತಾಂತ್ರಿಕ ಮತ್ತು ಕಾನೂನಾತ್ಮಕ ಪ್ರಶ್ನೆಗಳನ್ನು ಎತ್ತುತ್ತಾ ಬಂದಿದ್ದಾರೆ.
ತಮಿಳುನಾಡಿನಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ನಗರಾಭಿವೃದ್ಧಿಗಾಗಿ ಕೆಲಸ ಮಾಡುವ ಹಲವು ಸಂಘಟನೆಗಳೊಂದಿಗೆ ಅವರು ಗುರುತಿಸಿಕೊಂಡಿದ್ದಾರೆ. ಆಡಳಿತದಲ್ಲಿ ನೈತಿಕತೆ ಇರಬೇಕೆಂ ದು ಪ್ರತಿಪಾದಿಸುವ ಅವರು, ಸರಕಾರದ ತಪ್ಪು ನೀತಿಗಳನ್ನು ನಿರ್ಭೀತಿಯಿಂದ ಟೀಕಿಸುತ್ತಾರೆ.
ದೇವಸಹಾಯಂ ಕೇವಲ ಅಧಿಕಾರಿಯಷ್ಟೇ ಅಲ್ಲ, ಅವರೊಬ್ಬ ಉತ್ತಮ ಲೇಖಕರೂ ಹೌದು. ಇಂಗ್ಲಿಷ್‌ನ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಲ್ಲಿ ಅವರು ಆಡಳಿತ, ರಾಜಕೀಯ ಮತ್ತು ನಾಗರಿಕ ಹಕ್ಕುಗಳ ಕುರಿತು ನಿಯತವಾಗಿ ಲೇಖನಗಳನ್ನು ಬರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರಕಾರದ ‘ಸ್ಮಾರ್ಟ್ ಸಿಟಿ’ ಯೋಜನೆಯನ್ನು ಇವರು ತೀವ್ರವಾಗಿ ವಿಮರ್ಶಿಸಿದ್ದಾರೆ. ಅವರು ಇಂದಿಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ವಯಸ್ಸಿನ ಹಂಗಿಲ್ಲದೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.