ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಪುಟಿನ್‌ ಹಿಂದಿನ ದೈತ್ಯಶಕ್ತಿ ಯಾರು ಗೊತ್ತಾ ?

ಉಕ್ರೇನ್ ದೇಶದ ಮೇಲಿನ ಹಿಡಿತಕ್ಕಾಗಿ ಹೊಡೆದಾಡುವ ಸಮಯದಲ್ಲಿ ನೇರಾ ನೇರ ಅಮೆರಿಕವನ್ನ ಉಪೇಕ್ಷಿಸಿ, ಜಾಗತಿಕ ಮಟ್ಟದ ಒತ್ತಡಗಳಿಗೂ ಮಣಿಯದೆ ಉಕ್ರೇನ್ ದೇಶದ ಹತ್ತಿರತ್ತಿರ 8 ಪ್ರತಿಶತ ಜಾಗ ವನ್ನ ರಷ್ಯಾ ಆಕ್ರಮಿಸಿದೆ. ಉಕ್ರೇನ್‌ನ ಕ್ರಿಮಿಯಾ ನಗರ ಮತ್ತು ಇತರ ಪ್ರಮುಖ ನಾಲ್ಕು ನಗರಗಳ ಮೇಲೆ ರಷ್ಯಾ ಹಿಡಿತ ಹೊಂದಿದೆ.

ವಿಶ್ವರಂಗ

ಪುಟಿನ್ ಎಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ರಷ್ಯಾದ ಅಧ್ಯಕ್ಷ, ಬಲಶಾಲಿ ನಾಯಕ ಎನ್ನುವ ಚಿತ್ರಣ ಮೂಡುತ್ತದೆ. ಆದರೆ ಪುಟಿನ್ ಹಿಂದಿನ ಶಕ್ತಿ ಅಥವಾ ಪುಟಿನ್‌ನ ಮಿದುಳು ಎಂದು ಹೆಸರುವಾಸಿ ಯಾಗಿರುವ ವ್ಯಕ್ತಿಯ ಬಗ್ಗೆ ಹೆಚ್ಚು ತಿಳಿದಿರಲು ಸಾಧ್ಯವಿಲ್ಲ. ಈ ವ್ಯಕ್ತಿಯ ಚಿಂತನೆಗಳನ್ನ ಪುಟಿನ್ ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಅಂದರೆ ರಷ್ಯಾ ದೇಶ ಮುಂದಿನ ದಿನಗಳಲ್ಲಿ ಹೇಗಿರಬೇಕು, ಜಗತ್ತಿನಲ್ಲಿ ರಷ್ಯಾದ ಪಾತ್ರವೇನು? ಇತ್ಯಾದಿಗಳನ್ನ ನಿರ್ಧರಿಸುವುದು ಇವರು. ಯಾರಿವರು? ಇವರು ಅಲೆಕ್ಸಾಂಡರ್ ದುಗಿನ್. ಸೋವಿ ಯತ್ ಯೂನಿಯನ್ ಛಿದ್ರವಾದದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅಮೆರಿಕ ಇದರ ಹಿಂದಿನ ಶಕ್ತಿ ಎನ್ನುವುದು ಕೂಡ ರಹಸ್ಯವೇನಲ್ಲ.

ಹೀಗೆ ಸೋವಿಯತ್ ಯೂನಿಯನ್‌ನಿಂದ ಬೇರ್ಪಟ್ಟು 15 ಹೊಸ ದೇಶಗಳು ನಿರ್ಮಾಣವಾದವು. ನಮಗೆ ಇಷ್ಟು ವಿಷಯ ಮಾತ್ರ ತಿಳಿದಿರುತ್ತದೆ. ಜಾರ್ಜಿಯಾ, ಉಕ್ರೇನ್ ಮುಂತಾದ ದೇಶಗಳಲ್ಲಿ ಆಂತರಿಕ ಕಲಹ ಶುರುವಾಗಿ ಆ ದೇಶಗಳು ಇನ್ನಿಲ್ಲದ ಸಾವು-ನೋವಿನ ಜತೆಗೆ ಇಡೀ ನಗರವೇ ಸ್ಮಶಾನ ಎನ್ನುವ ಮಟ್ಟಿಗೆ ಹಾಳಾದವು.

ಹೀಗೆ ಅಂದಿನ ಶಕ್ತಿಶಾಲಿ ಒಕ್ಕೂಟವನ್ನ ಛಿದ್ರಗೊಳಿಸಿದ್ದರ ಪರಿಣಾಮ ಸೋವಿಯತ್ ಯೂನಿಯನ್ ನ ಹೃದಯವಾಗಿದ್ದ ರಷ್ಯಾ ಬಹಳ ಪೆಟ್ಟು ತಿಂದಿತು. ಈ ರೀತಿಯ ವಿಭಜನೆ 1991ರಲ್ಲಿ ಆಗುತ್ತದೆ. ಆ ನಂತರ ರಷ್ಯಾ ಹಲವು ವರ್ಷ ಯಾವುದೇ ಸಿದ್ಧಾಂತವಿಲ್ಲದೆ ವೇಳೆಯನ್ನ ಕಳೆಯುತ್ತದೆ. 2000ನೇ ಇಸವಿಯ ವೇಳೆಗೆ ಪುಟಿನ್ ಅಧಿಕಾರವನ್ನ ಪಡೆಯುತ್ತಾರೆ.

ಇದನ್ನೂ ಓದಿ: Rangaswamy Mookanahalli Column: ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತಂತೆ ಹೌದಾ ?

ಒಂದೆರಡು ವರ್ಷದಲ್ಲಿ ತೈಲದ ಮೇಲಿನ ಹಿಡಿತವನ್ನ ಸಂಪಾದಿಸುತ್ತಾರೆ. ಜಗತ್ತಿಗೆ ಬೇಕಾದ ಎನರ್ಜಿ ಮೂಲಗಳ ಮೇಲೆ ಮತ್ತು ತೈಲದ ಮೇಲಿನ ಹಿಡಿತ ರಷ್ಯಾವನ್ನ ಮತ್ತೆ ಒಂದಷ್ಟು ಆರ್ಥಿಕವಾಗಿ ಪುನರುಜ್ಜೀವನಗೊಳಿಸುತ್ತವೆ. ಈ ಸಮಯದಲ್ಲಿ ಪುಟಿನ್‌ಗೆ ಮಾರ್ಗದರ್ಶನ ಮಾಡಲು ಗುರುವಿ ನಂತೆ ಸಿಕ್ಕವರು ಅಲೆಕ್ಸಾಂಡರ್ ದುಗಿನ್.

ಇವರು ತಮ್ಮ ಅನೇಕ ಭಾಷಣಗಳಲ್ಲಿ ‘ಅಮೆರಿಕ ನಮ್ಮ ಮೊದಲ ಶತ್ರು’ ಎಂದು ಮುಚ್ಚುಮರೆ ಯಿಲ್ಲದೆ ಹೇಳುತ್ತಾರೆ. ರಾಷ್ಟ್ರೀಯವಾದ ಇವರ ಐಡಿಯಾಲಜಿ. ಟಿವಿ, ರೇಡಿಯೋ ಇತರ ಎಲ್ಲಾ ಮಾಧ್ಯಮಗಳು ಕೂಡ ಕೇವಲ ಮತ್ತು ಕೇವಲ ರಾಷ್ಟ್ರೀಯವಾದಕ್ಕೆ ಸೀಮಿತವಾಗಿರಬೇಕು ಎನ್ನುವ ತತ್ವದ ಉಗ್ರ ಪ್ರತಿಪಾದಕರು ಇವರು. ಇಷ್ಟೇ ಅಲ್ಲದೆ ‘ಅಮೆರಿಕನ್ ಜೀವನ್‌ಶೈಲಿ ನಮ್ಮದಲ್ಲ, ರಷ್ಯಾ ತನ್ನದೇ ಅದ ಸಾಂಸ್ಕೃತಿಕ ನೆಲೆಯನ್ನ ಹೊಂದಿದೆ’ ಎಂದು ಪ್ರತಿಪಾದಿಸುವ ಅತ್ಯಂತ ರಿಲೀಜಿಯಸ್ ಮನಸ್ಥಿತಿ ಕೂಡ ಹೊಂದಿದ್ದಾರೆ.

ಹೀಗಾಗಿ 2000ದಿಂದ ಈಚೆಗೆ ರಷ್ಯಾದಲ್ಲಿ ಚರ್ಚು ಬಹಳ ಪ್ರಾಮುಖ್ಯವನ್ನು ಪಡೆದಿದೆ. ದೇಶದ ೭೦ ಪ್ರತಿಶತ ಜನರು ಬಹಳ ಧಾರ್ಮಿಕ ಮನೋಭಾವವನ್ನ ಹೊಂದಿದ್ದಾರೆ ಎನ್ನುತ್ತದೆ ಸಮೀಕ್ಷೆ. ಆ ಮಟ್ಟಿಗೆ ರಷ್ಯಾ ದೇಶವನ್ನ ಆಗಲೇ ಅಲೆಕ್ಸಾಂಡರ್ ದುಗಿನ್ ಪರಿವರ್ತನೆ ಮಾಡಿದ್ದಾರೆ. ಹೀಗೆ ರಷ್ಯಾದಲ್ಲಿ ತಮಗೆ ಬೇಕಾದ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಮತ್ತು ಆರ್ಥಿಕ ಬದಲಾವಣೆ ಗಳನ್ನ ಮಾಡಿಕೊಂಡಿದ್ದಷ್ಟೇ ಅಲ್ಲದೆ, ರಷ್ಯಾವನ್ನ ಮತ್ತೆ ಜಗತ್ತಿನ ಪ್ರಮುಖ ದೇಶವನ್ನಾಗಿ ಮಾಡುವ ಉದ್ದೇಶ ಅಲೆಕ್ಸಾಂಡರ್ ದುಗಿನ್ ಅವರದು.

ಹೀಗಾಗಿ ಇವರು ಮುಂದಿನ ನಲವತ್ತು ವರ್ಷದಲ್ಲಿ ರಷ್ಯಾ ಏನು ಮಾಡಬೇಕು ಎನ್ನುವ ನೀಲಿನಕ್ಷೆ ಯನ್ನ ತಯಾರಿಸಿದ್ದಾರೆ. ಪುಟಿನ್ ಇಂಥ ಪ್ಲಾನ್ ಗಳನ್ನ ನಿಷ್ಠೆಯಿಂದ ಕಾರ್ಯಗತಗೊಳಿಸಲು ಶ್ರಮಿಸುತ್ತಿದ್ದಾರೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಅಲೆಕ್ಸಾಂಡರ್ ದುಗಿನ್ ಎಂದರೆ ಪುಟಿನ್‌ರ ಮಿದುಳು, ಪುಟಿನ್‌ರ ಗುರು, ಮಾರ್ಗದರ್ಶಕ ಎನ್ನುವ ಮಾತುಗಳು ಕೇಳಿ ಬರುತ್ತವೆ.

ಇಂಥ ದುಗಿನ್ ಕಾರ್ಯಸಾಧನೆಗೆ ತುಳಿದಿರುವ ಮಾರ್ಗ ಇದೆಯಲ್ಲ ಅದು ಮಾತ್ರ ಅಮೆರಿಕ ದೇಶ ಹಿಡಿದಿದ್ದ ದಾರಿಯೇ, ಇದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಅಮೆರಿಕವನ್ನ ಉದ್ದೇಶಿಸಿ “ನಿಮ್ಮ ದೇಶದಲ್ಲಿ ಗಲಭೆಗಳು, ಕಲಹಗಳು ಆದರೆ ನಿಮಗೆ ನೋವಾಗುತ್ತದೆ ಅಲ್ಲವೇ? ನಮಗೂ ನೋವಾಗಿತ್ತು. ನಿಮ್ಮದೇ ಭಾಷೆಯಲ್ಲಿ ನಿಮಗೆ ಉತ್ತರವನ್ನ ಕೊಡುತ್ತಿದ್ದೇವೆ ಅಷ್ಟೇ" ಎಂದು ರಾಜಾ ರೋಷವಾಗಿ ಹೇಳಿಕೆಯನ್ನ ನೀಡುತ್ತಾರೆ.

ಉಕ್ರೇನ್ ದೇಶದ ಮೇಲಿನ ಹಿಡಿತಕ್ಕಾಗಿ ಹೊಡೆದಾಡುವ ಸಮಯದಲ್ಲಿ ನೇರಾ ನೇರ ಅಮೆರಿಕವನ್ನ ಉಪೇಕ್ಷಿಸಿ, ಜಾಗತಿಕ ಮಟ್ಟದ ಒತ್ತಡಗಳಿಗೂ ಮಣಿಯದೆ ಉಕ್ರೇನ್ ದೇಶದ ಹತ್ತಿರತ್ತಿರ 8 ಪ್ರತಿಶತ ಜಾಗವನ್ನ ರಷ್ಯಾ ಆಕ್ರಮಿಸಿದೆ. ಉಕ್ರೇನ್‌ನ ಕ್ರಿಮಿಯಾ ನಗರ ಮತ್ತು ಇತರ ಪ್ರಮುಖ ನಾಲ್ಕು ನಗರಗಳ ಮೇಲೆ ರಷ್ಯಾ ಹಿಡಿತ ಹೊಂದಿದೆ. ಇದು ಜಾಗತಿಕ ಮಟ್ಟದಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲ್ಪಟ್ಟಿದೆ. ಇದ್ಯಾವುದಕ್ಕೂ ಸೊಪ್ಪು ಹಾಕದೆ ರಷ್ಯಾ ತನ್ನ ಕಾರ್ಯಸಾಧನೆಯತ್ತ ಚಿತ್ತ ಹರಿಸಿದೆ.

ರಷ್ಯಾದಲ್ಲಿ ಇಂದು ಧಾರ್ಮಿಕತೆ ಮತ್ತು ರಾಷ್ಟ್ರೀಯವಾದ ಮರಳಿ ಮುಂಚೂಣಿಗೆ ಬಂದಿವೆ. ಪಾಶ್ಚಾತ್ಯ ಜೀವನಶೈಲಿಯ ಬಗ್ಗೆ ಇಲ್ಲಿ ಅಸಮಾಧಾನ ಹೆಚ್ಚಾಗಿದೆ. ದುಗಿನ್ ತಮ್ಮನ್ನ ತಾವೇ ಸಂಪ್ರದಾಯವಾದಿ ಎಂದು ಕರೆದುಕೊಳ್ಳುತ್ತಾರೆ. “ನಮ್ಮ ಹಿಂದಿನ ಮೌಲ್ಯಗಳು, ಚರಿತ್ರೆ ನೋಡಿ, ರಷ್ಯಾ ಎಂದಿಗೂ ತನ್ನದೇ ಆದ ಸಾಂಸ್ಕೃತಿಕ ನೆಲಗಟ್ಟು ಹೊಂದಿದೆ. ಅದರ ಆಧಾರದ ಮೇಲೆ ಹೊಸ ಮತ್ತು ಪ್ರಬಲ ರಷ್ಯಾವನ್ನ ಮರಳಿ ನಿರ್ಮಿಸುವುದು ನಮ್ಮ ಕರ್ತವ್ಯ" ಎನ್ನುವ ವಾದದ ಪ್ರತಿಪಾದಕ ಅಲೆಕ್ಸಾಂಡರ್ ದುಗಿನ್.

ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ ತಕ್ಷಣ ನೆನಪಿಗೆ ಬರುತ್ತಾರೆ ಅಲ್ಲವೇ? ನನಗೆ ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿ ನೆನಪಾದರು. ನಮ್ಮಲ್ಲಿ ಅಮಿತ್ ಶಾ ಅವರು ದುಗಿನ್ ಸ್ಥಾನ ವನ್ನು ತುಂಬದಿರಬಹುದು. ಆದರೆ ಅವರು ಮೋದಿಯವರ ‘ಥಿಂಕ್ ಟ್ಯಾಂಕ್’ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಟ್ರಂಪ್ ಈ ಬಾರಿ ಅಧಿಕಾರ ವಹಿಸಿಕೊಂಡ ಮರುದಿನದಿಂದ ಆಡುತ್ತಿರುವ ಆಟವನ್ನು ನೋಡಿ ಜಗತ್ತಿಗೆ ಜಗತ್ತೇ ‘ಟ್ರಂಪ್ ಸರಿಯಿಲ್ಲ’ ಎನ್ನುವ ಮಾತುಗಳನ್ನು ಆಡುತ್ತಿದ್ದರೆ, ದುಗಿನ್ ಅವರು ಮಾತ್ರ ಟ್ರಂಪ್ ಮಹಾಶಯನಿಗೆ “ರಷ್ಯಾ ಎಂದರೇನು? ಪುಟಿನ್ ಎಂದರೇನು? ಎನ್ನುವುದು ಈಗ ಹೆಚ್ಚು ಅರ್ಥವಾಗಿರುತ್ತೆ" ಎನ್ನುವ ಮಾರ್ಮಿಕ ಮಾತುಗಳನ್ನು ಆಡಿದ್ದರು.

ಮಾರ್ಚ್ 2025ರ ಸಮಯದಲ್ಲಿ ನೇರವಾಗಿ “ಟ್ರಂಪ್ ಮಾಡುತ್ತಿರುವುದು ಅಮೆರಿಕದ ದೃಷ್ಟಿಯಿಂದ ಸರಿ" ಎನ್ನುವ ಮಾತನ್ನು ಕೂಡ ಆಡಿದ್ದಾರೆ. ಸಂಪ್ರದಾಯವಾದಿ, ಅಲ್ಟ್ರಾ ರಾಷ್ಟ್ರೀಯವಾದಿ ದುಗಿನ್ ಅವರು ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದಾರೆಯೇ? ಎನ್ನುವ ಪ್ರಶ್ನೆ ಉದ್ಭವವಾಗುತ್ತೆ. ಪುಟಿನ್ ಮತ್ತು ದುಗಿನ್ ನಡುವೆ ಎಲ್ಲವೂ ಸರಿಯಿದೆಯೇ? ಖಂಡಿತ ಎಲ್ಲಾ ಸರಿಯಿದೆ.

ಪ್ರತಿಯೊಬ್ಬ ನಾಯಕನೂ ತನ್ನ ದೇಶದ ಒಳಿತಿಗೆ ದುಡಿಯಬೇಕು. ದೇಶ ಮೊದಲು ಎನ್ನುವುದು ದುಗಿನ್ ಅವರ ಮಂತ್ರ. ನಮ್ಮ ನರೇಂದ್ರ ಮೋದಿಯವರು ಪುಟಿನ್ ಜತೆಗೆ ವಿಶೇಷ ಬಾಂಧವ್ಯ ಹೊಂದಿರುವುದರ ಕಾರಣ ನಿಮಗೆ ಗೊತ್ತಾಯ್ತು ಎಂದುಕೊಳ್ಳುವೆ. ಇವತ್ತು ಜಗತ್ತು ಯಾವ ಪರಿಸ್ಥಿತಿಯಲ್ಲಿದೆ ಎಂದರೆ ಎಲ್ಲಾ ದೇಶಗಳೂ ಒಂದಲ್ಲ ಒಂದು ರೀತಿಯಲ್ಲಿ ಒಂದರ ಮೇಲೊಂದು ಅವಲಂಬಿಸಿವೆ.

ಚೀನಾ ತನ್ನ ಪದಾರ್ಥವನ್ನು ಅಮೆರಿಕಕ್ಕೆ ಮಾರಬೇಕು; ಇಲ್ಲವಾದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಅದು ಕಳೆದುಕೊಳ್ಳುತ್ತದೆ. ಇದರ ಜತೆಗೆ ತನ್ನ ರಿಸರ್ವ್ಸ್ ಅನ್ನು ಅದು ಅಮೆರಿ ಕನ್ ಡಾಲರ್‌ನಲ್ಲಿ ಹೊಂದಿದೆ. ಅಮೆರಿಕನ್ ಬಾಂಡ್ ಅನ್ನು ಕೊಂಡಿದೆ. ಅಮೆರಿಕ ಕುಸಿತ ಕಂಡರೆ, ಅತಿ ಹೆಚ್ಚು ಹೊಡೆತ ಬೀಳುವುದು ಚೀನಾ ಮತ್ತು ಜಪಾನ್ ದೇಶಗಳಿಗೆ. ಅಮೆರಿಕ ಕೂಡ ‘ಚೀನಾ ಪದಾರ್ಥಗಳು ಬೇಡ’ ಎಂದರೆ ವಾರದಲ್ಲಿ ಅವಸಾನ ಹೊಂದುತ್ತದೆ.

ವಿಶ್ವದ ಎರಡು ಅತಿ ದೊಡ್ಡ ಇಕಾನಾಮಿಗಳು ಕುಸಿದರೆ ಪೂರ್ಣ ವಿಶ್ವ ಕುಸಿದಂತೆ! ಚೀನಾ ತನ್ನ ಅಮೆರಿಕನ್ ರಿಸರ್ವ್ ಕಡಿಮೆ ಮಾಡಿಕೊಂಡು ಆ ಹಣದಲ್ಲಿ ಚಿನ್ನವನ್ನು ಕೊಂಡುಕೊಳ್ಳುತ್ತಿದೆ. ಚೀನಾವನ್ನು ನೋಡಿ ಜಪಾನ್, ಭಾರತ ಕೂಡ ಚಿನ್ನವನ್ನು ಕೊಂಡುಕೊಳ್ಳುತ್ತಿವೆ. ಇಂದಿಗೆ ರಷ್ಯಾ ಅತಿ ಹೆಚ್ಚು ಚಿನ್ನದ ರಿಸರ್ವ್ ಮೇಲೆ ಕುಳಿತಿದೆ. ನಾಳೆ ಆಟ ಮತ್ತೆ ಚಿನ್ನದ ಆಧಾರದಲ್ಲಿ ಶುರು ವಾದರೆ ರಷ್ಯಾ ಲೀಡರ್ ಆಗಿ ಹೊರಹೊಮ್ಮುತ್ತದೆ.

ಚೀನಾ, ಜಪಾನ್, ಭಾರತ ಸೇರಿಕೊಂಡು ಸಾಮೂಹಿಕ ನಾಯಕತ್ವದಲ್ಲಿ ಜಗತ್ತು ಮುಂದು ವರಿಯುವ ಸಾಧ್ಯತೆ ಹೆಚ್ಚಾಗಿದೆ. ಗ್ಲೋಬಲೈಸಷನ್ ಎನ್ನುವ ಆಟವನ್ನು ಅಮೆರಿಕ ಹುಟ್ಟು ಹಾಕದಿದ್ದರೆ ಜಗತ್ತು ಇಂದಿನ ಕೆಟ್ಟ ಪರಿಸ್ಥಿತಿಯನ್ನು ಕಾಣುವ ಅವಶ್ಯಕತೆ ಬರುತ್ತಿರಲಿಲ್ಲ. ಇದೀಗ ಅಮೆರಿಕಕ್ಕೆ ಗ್ಲೋಬಲೈಸೇಷನ್ ಎಂಬುದು ದೊಡ್ಡ ತಪ್ಪು ಎನ್ನುವುದರ ಅರಿವಾಗಿದೆ.

ಇದು ಅರಿವಾಗುವ ವೇಳೆಗೆ ಅದನ್ನು ಬದಲಾಯಿಸಲಾಗದ ಮಟ್ಟಿಗೆ ಅದು ಬದಲಾವಣೆ ಕಂಡು ಬಿಟ್ಟಿದೆ. ಇವತ್ತಿಗೆ ಇವತ್ತೇ ಹೊಸ ವ್ಯವಸ್ಥೆ ಕಟ್ಟಬೇಕು ಎಂದರೂ ಅದಕ್ಕೂ ದಶಕಗಳು ಬೇಕು, ಆ ಮಟ್ಟಿಗೆ ಅವಲಂಬನೆ ಬೆಳೆದು ಬಿಟ್ಟಿದೆ. ಆದರೆ ಅಮೆರಿಕ, ಚೀನಾ, ಯುರೋಪಿಯನ್ ಯೂನಿಯನ್‌ ಗಳಿಗೆ ದಶಕಗಳು ಕಾಯುವ ತಾಳ್ಮೆ, ಸಂಯಮ ಎರಡೂ ಇಲ್ಲ. ಅವಕ್ಕೆ ತಕ್ಷಣ ಈ ಆಟವನ್ನು ಮುಗಿಸಿ, ಹೊಸ ಆಟಕ್ಕೆ ಸಿದ್ಧರಾಗಬೇಕು ಎನ್ನುವ ಹಪಾಹಪಿ ಶುರುವಾಗಿದೆ. ಹೀಗಾಗಿ ಅವು ‘ರಿ-ಸೆಟ್’ ಬಟನ್ ಒತ್ತುವ ತರಾತುರಿಯಲ್ಲಿವೆ. ಗ್ಲೋಬಲೈಸೇಷನ್ ಎನ್ನುವ ಆಟವನ್ನು ರಿ-ಸೆಟ್ ಬಟನ್ ಒತ್ತಿ ಕೂಡ ಅಳಿಸಲಾಗದು ಎಂಬುದು ಅವಕ್ಕೆ ಗೊತ್ತಿದೆ!

ಹೀಗಾಗಿ ಅವು ಕಂಟ್ರೋಲ್ಡ್ ಗ್ಲೋಬಲೈಸೇಷನ್ ಎನ್ನುವ ಹೊಸ ಆಟವನ್ನು ಶುರು‌ ಮಾಡಲು ಬಯಸುತ್ತಿವೆ. ಇದರ ಚುಕ್ಕಾಣಿ ಯಾರ ಕೈಗೆ ಸಿಗುತ್ತದೋ ಅದು ಇನ್ನೊಂದೆರಡು ಶತಮಾನ ರಾಜ್ಯವಾಳುತ್ತದೆ. ಈ ಬಾರಿ ಈ ಅಧಿಕಾರದ ಚುಕ್ಕಾಣಿ ಒಂದು ದೇಶದ ಕೈಗೆ ಸಿಗುವ ಸಾಧ್ಯತೆ ಕಡಿಮೆ.

ಬಲಿಷ್ಠ ಭಾರತವು ಅಮೆರಿಕ ಮತ್ತು ಚೀನಾ ಎರಡಕ್ಕೂ ಬೇಕಿಲ್ಲ. ರಷ್ಯಾ ದೇಶವು ಭಾರತದೊಂದಿಗೆ ಅತ್ಯುತ್ತಮ ಬಾಂಧ್ಯವವನ್ನು ಹೊಂದಿದೆ. ಭಾರತ ಮತ್ತು ಚೀನಾದ ಮಧ್ಯೆ ಇರುವ ತಡೆಗೋಡೆ ಯನ್ನು ಕೆಡವಲು ಮತ್ತು ಒಟ್ಟಾಗಿ ಹೆಜ್ಜೆಹಾಕಲು ರಷ್ಯಾ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದೆ. ಗ್ಲೋಬಲೈಸೇಷನ್ ಎನ್ನುವ ಪದ ಸವಕಲಾಗಿದೆ.

ಇವತ್ತು ಅದು ಯಾರಿಗೂ ಬೇಡವಾದ ಕೂಸು. ಪ್ರತಿ ದೇಶವೂ ಇಂದು ಲೋಕಲೈಸೇಷನ್, ರಾಷ್ಟ್ರೀಯವಾದದ ಹಿಂದೆ ಬಿದ್ದಿವೆ. ಇದೆಷ್ಟು ವರ್ಷ ಎನ್ನುವುದನ್ನು ಕಾದು ನೋಡಬೇಕು. ಏಕೆಂದರೆ ಬಹಳ ದೊಡ್ಡ ಕನಸು ಇಟ್ಟುಕೊಂಡೇ ಅಮೆರಿಕ ಹುಟ್ಟು ಹಾಕಿದ ಗ್ಲೋಬಲೈಸೇಷನ್ ಪರಿಕಲ್ಪನೆಯು ಮೂರು ದಶಕದಲ್ಲಿ ಅಂತ್ಯ ಕಾಣುತ್ತಿದೆ. ಜಗತ್ತಿನೆಡೆ ವಲಸಿಗರನ್ನು ‘ಕೆಲಸ ಕದಿಯಲು ಬಂದವರು’ ಎನ್ನುವಂತೆ ನೋಡಲಾಗುತ್ತಿದೆ.

ಇದು ಮುಂಬರುವ ವರ್ಷಗಳಲ್ಲಿ ಇನ್ನಷ್ಟು ತೀವ್ರವಾಗಿ, ರಾಷ್ಟ್ರೀಯವಾದ ಇನ್ನಷ್ಟು ಮುನ್ನೆಲೆಗೆ ಬರಲಿದೆ. ಬದಲಾವಣೆ ಜಗದ ನಿಯಮ; ಆದರೆ ಜಾಗತಿಕ ತಿಕ್ಕಾಟಗಳಲ್ಲಿ ಸಾವಿರಾರು ಕುಟುಂಬಗಳ, ಲಕ್ಷಾಂತರ ಜನರ ಬದುಕು ವ್ಯತ್ಯಯವಾಗಲಿದೆ.

ಅಮೆರಿಕ ತಾನು ಹುಟ್ಟು ಹಾಕಿದ ಆಟದಲ್ಲಿ ಹೀನಾಯವಾಗಿ ಸೋತಿದೆ. ಜಗತ್ತಿಗೆ ಅಮೆರಿಕನ್ ಉತ್ಪನ್ನಗಳನ್ನು ಮಾರಿ ಹೇರಳವಾಗಿ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಆ ದೇಶದ ಹೂಡಿಕೆದಾರರು ಹೆಚ್ಚು ಲಾಭ ಬರುತ್ತದೆ ಎನ್ನುವ ಕಾರಣಕ್ಕೆ ಚೀನಾ, ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್ ಹೀಗೆ ಎಲ್ಲಾ ದೇಶಗಳಲ್ಲಿ ಹೂಡಿಕೆ ಮಾಡಿದರು. ಸದ್ದಿಲ್ಲದೆ ಮೂರು ದಶಕದಲ್ಲಿ ಅಮೆರಿಕ ಜಗತ್ತಿನ ಬೇರೆ ದೇಶಗಳ ಮೇಲೆ ಅವಲಂಬಿತ ದೇಶವಾಗಿ ಮಾರ್ಪಾಟಾಗಿ ಹೋಯ್ತು.

ಎಚ್ಚೆತ್ತು ರಾಷ್ಟ್ರೀಯವಾದಕ್ಕೆ ಅದು ತಿರುಗಿಕೊಂಡಿದೆ. ರಷ್ಯಾ ಈ ಕೆಲಸವನ್ನು, ಪುಟಿನ್ ಅಧಿಕಾರ ಹಿಡಿದ ಸಮಯದಿಂದ ಮಾಡುತ್ತಿದೆ. ಭಾರತ ಕೂಡ ಕಳೆದ ಒಂದು ದಶಕದಿಂದ ಪೂರ್ಣವಾಗಿ ರಾಷ್ಟ್ರೀಯವಾದದತ್ತ ತಿರುಗಿದೆ. ಚೀನಾ ಕಳೆದ ಮೂರು ದಶಕದಿಂದ ತೀವ್ರ ರಾಷ್ಟ್ರೀಯವಾದವನ್ನು ಬೆಳಸಿಕೊಂಡಿದೆ. ಅಮೆರಿಕ ರಾಷ್ಟ್ರೀಯವಾದದ ಹೊಸ ಆಟಕ್ಕೆ ‘ಲೇಟ್ ಎಂಟ್ರಿ’ ಕೊಟ್ಟಿದೆ. ಹೀಗಾಗಿ ಹೊಸ ಆಟದಲ್ಲಿನ ಅಡ್ವಾಂಟೇಜ್ ಚೀನಾ, ರಷ್ಯಾ ಮತ್ತು ಭಾರತಕ್ಕೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ರಂಗಸ್ವಾಮಿ ಎಂ

View all posts by this author