ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಹಣ್ಣುಗಳ ಮೆರವಣಿಗೆಗೆ ಬೇಸಗೆಯೇ ಬರಬೇಕೆ ?

ಸುರಗಿ ಹೂವಿನ ನೆನಪೇಕೆ ಆಯಿತೆಂದರೆ, ನಮ್ಮ ಹಳ್ಳಿಯಲ್ಲಿ ಸುಗಂಧಭರಿತ ಸುರಗಿ ಹೂವುಗಳನ್ನು ಕಾಣಬೇಕೆಂದರೆ, ಬೇಸಗೆಯೇ ಬರಬೇಕು! ಬೇಸಗೆಯ ಬಿಸಿಲಿನ ದಿನಗಳಲ್ಲೇ ಸುರಗಿ, ಬಕುಳ ಮೊದಲಾದ ಹೂವುಗಳು, ಹಲಸು, ಮಾವು, ಮುರಿನ, ಪನ್ನೇರಳೆ, ಚೇಂಪಿ (ಕಾಡುಸಂಪಿಗೆ), ಬುಕ್ಕ, ಬೆಳ ಮಾರು ಮೊದ ಲಾದ ಹಣ್ಣುಗಳು ಅವತರಿಸುತ್ತವೆ ಮತ್ತು ಇದು, ನಮಗೆಲ್ಲಾ, ಅಂದರೆ ಮಕ್ಕಳಿಗೆ, ಒಂದು ಸೋಜಿಗ ಎನಿಸುತ್ತಿತ್ತು.

ಹಣ್ಣುಗಳ ಮೆರವಣಿಗೆಗೆ ಬೇಸಗೆಯೇ ಬರಬೇಕೆ ?

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ

ಕೆಲವು ದಶಕಗಳ ಹಿಂದೆ, ನಮ್ಮ ರಾಜ್ಯದ ಬಯಲು ಸೀಮೆಯಲ್ಲೂ ಸುರಗಿ, ಬಕುಳ ಮೊದಲಾದ ಮರಗಳಿದ್ದವು, ಅವುಗಳ ಹೂವುಗಳು ಜನರ ಮನ ತಣಿಸುತ್ತಿದ್ದವು. ಅದೇಕೆ ಇಲ್ಲಿ ಪ್ರಸ್ತಾಪವಾಯಿ ತೆಂದರೆ, ಆ ಮರಗಳು ಮಲೆನಾಡಿನಲ್ಲಿ ಮಾತ್ರ ಕಾಣಸಿಗುವಂಥವು ಎಂಬ ಅನಿಸಿಕೆ ಈಗ ವ್ಯಾಪಕ ವಾಗಿದೆ. ಬಹುಶಃ, ಬಯಲು ಸೀಮೆಯಲ್ಲಿ ನಿರಂತರವಾಗಿ ನಡೆದ ಮರಗಳ ಹನನದಿಂದಾಗಿ, ಅಲ್ಲಿನ ಹಳ್ಳಿ ಗಳಲ್ಲಿ ಅವಶ್ಯವಾಗಿ ಇರುತ್ತಿದ್ದ ತೋಪುಗಳು, ಗೋಮಾಳಗಳು ನಾಶಗೊಂಡು, ಅಲ್ಲಿನ ಪಾರಂ ಪರಿಕ ಸಸ್ಯವೈವಿಧ್ಯ ನಿರ್ನಾಮವಾಗಿದೆ. ಸುಮಾರು ಆರು ದಶಕಗಳ ಹಿಂದೆ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಸುರಗಿ ಮರ ಇದ್ದುದರ ಪ್ರಸ್ತಾಪಗಳಿವೆ.

ಸುರಗಿ ಹೂವಿನ ನೆನಪೇಕೆ ಆಯಿತೆಂದರೆ, ನಮ್ಮ ಹಳ್ಳಿಯಲ್ಲಿ ಸುಗಂಧಭರಿತ ಸುರಗಿ ಹೂವುಗಳನ್ನು ಕಾಣಬೇಕೆಂದರೆ, ಬೇಸಗೆಯೇ ಬರಬೇಕು! ಬೇಸಗೆಯ ಬಿಸಿಲಿನ ದಿನಗಳಲ್ಲೇ ಸುರಗಿ, ಬಕುಳ ಮೊದ ಲಾದ ಹೂವುಗಳು, ಹಲಸು, ಮಾವು, ಮುರಿನ, ಪನ್ನೇರಳೆ, ಚೇಂಪಿ (ಕಾಡುಸಂಪಿಗೆ), ಬುಕ್ಕ, ಬೆಳ ಮಾರು ಮೊದಲಾದ ಹಣ್ಣುಗಳು ಅವತರಿಸುತ್ತವೆ ಮತ್ತು ಇದು, ನಮಗೆಲ್ಲಾ, ಅಂದರೆ ಮಕ್ಕಳಿಗೆ, ಒಂದು ಸೋಜಿಗ ಎನಿಸುತ್ತಿತ್ತು.

ಪರೀಕ್ಷೆ ಮುಗಿದು, ಶಾಲೆಗೆ ರಜಾ ಬಂದ ಕೂಡಲೆ, ನಮ್ಮ ಮನೆ ಸುತ್ತಲಿನ ಹಾಡಿ, ಹಕ್ಕಲು, ಬ್ಯಾಣ, ಗುಡ್ಡೆ ಮತ್ತು ತೋಡಿನ ಅಂಚುಗಳಲ್ಲಿರುವ ಮರಗಿಡಗಳಲ್ಲಿ, ಹಣ್ಣುಗಳು ಮತ್ತು ಹೂವುಗಳ ಮೆರವಣಿಗೆಯನ್ನು ಕಾಣುವ ಅವಕಾಶ, ಒಂದು ರೀತಿಯ ಅದೃಷ್ಟವೂ ಎನ್ನಿ, ದೊರಕುತ್ತಿತ್ತು ಮತ್ತು ಅದನ್ನೇ ಯೋಚಿಸುತ್ತಾ, ನಮ್ಮ ಶಾಲಾ ರಜಾದಿನಗಳಿಗೆ ಸರಿಯಾಗಿ, ಈ ರೀತಿ ಪ್ರಕೃತಿ ಅರಳುತ್ತದೆ ಎಂದು ವಿಸ್ಮಯಪಡುತ್ತಿದ್ದೆವು.

ಇದನ್ನೂ ಓದಿ: Shashidhara Halady Column: ಬಿಸಿಲು ಕಾಲದಲ್ಲೇ ಪ್ರವಾಸ ! ನಮ್ಮೂರ ವಿಶೇಷ !

ಬೇಸಗೆ, ಬಿಸಿಲು, ತಂಗಾಳಿ, ಮೋಡಗಳು, ಮಳೆ, ಹೂವು, ಹಣ್ಣು, ಗಿಡ, ಮರ, ಬಳ್ಳಿ, ತೋಡಿನ ನೀರು, ಅದರಲ್ಲಿನ ಮೀನು ಇವೆಲ್ಲವೂ ಪರಿಸರದ ಒಂದು ಸಮತೋಲಿತ ಸ್ಥಿತಿಯೂ ಹೌದು ಮತ್ತು ಅವೆಲ್ಲವೂ ಇಕಾಲಜಿಯ ಸರಪಣಿಯ ಭಾಗಗಳಾಗಿ ರೂಪುಗೊಂಡಿವೆ ಎಂದು ಇಂದು ತಜ್ಞರು ಗುರುತಿಸಿ, ವಿವರಿಸಿ ಹೇಳಿದ್ದರೂ, ನಮಗೆ ಅಂಥ ತಿಳಿವಳಿಕೆ ಆಗ ಎಲ್ಲಿತ್ತು? ಸುರಗಿಯ ವಿಚಾರಕ್ಕೆ ಬಂದರೆ, ನಮ್ಮ ಮನೆಯಿಂದ ಕೆಲವೇ ನೂರು ಅಡಿಗಳ ದೂರದಲ್ಲಿ, ಗದ್ದೆ ಬೈಲಿಗೆ ಅಂಟಿಕೊಂಡಿದ್ದ ತುಸು ಎತ್ತರದ ಹಕ್ಕಲಿನಂಥ ಜಾಗದಲ್ಲಿ, ಇತರ ಮರಗಿಡಗಳ ನಡುವೆ, ಎರಡು ಸುರಗಿ ಮರಗಳಿ ದ್ದವು.

ಆ ಜಾಗಕ್ಕೆ ಗರಡಿ ಜಡ್ಡು ಎಂಬ ಹೆಸರೂ ಇದೆ; ಸುಮಾರು 400 ವರ್ಷಗಳ ಹಿಂದೆ, ಅಲ್ಲೇ ಅರ್ಧ ಕಿ.ಮೀ. ದೂರದಲ್ಲಿ ಪುಟ್ಟ ಅರಮನೆ ಕಟ್ಟಿಕೊಂಡು ಪಾಳೆಪಟ್ಟು ನಡೆಸುತ್ತಿದ್ದ ಮುದ್ದಳ ಎಂಬ ರಾಜನ ಕಾಲದಲ್ಲಿ ರೂಪುಗೊಂಡಿದ್ದಿರಬಹುದಾದ ಗರಡಿ ಅದು. ಇಂದು ಗಿಡಮರಗಳ ನಡುವೆ ಮರೆಯಾಗಿದೆ; ನಮ್ಮ ಹಳ್ಳಿಯ ಕೆಲವು ಕುಟುಂಬಗಳು ವರ್ಷಕ್ಕೊಂದೆರಡು ಬಾರಿ ಅಲ್ಲಿರುವ ಪುಟ್ಟ ಗುಡಿಸಲಿನಲ್ಲಿ ದೀಪ ಹಚ್ಚಿ, ಹಿರಿಯ ವೀರರನ್ನು ನಮಸ್ಕರಿಸುವ ಮಟ್ಟಿಗೆ ಮಾತ್ರ ಅದರ ಚಟುವಟಿಕೆ ಸೀಮಿತಗೊಂಡಿದೆ.

Frt ok

ಆ ಗರಡಿಯ ಪಕ್ಕದಲ್ಲೇ ಎರಡು ಮಧ್ಯಮ ಗಾತ್ರದ ಸುರಗಿ ಮರಗಳಿದ್ದವು. ಅವುಗಳಲ್ಲಿ ಬಿಡುವ ಹೂವಿನ ಸುವಾಸನೆ ಅದೆಷ್ಟು ಗಾಢ ಎಂದರೆ, ಹತ್ತಿಪ್ಪತ್ತು ದೂರದಲ್ಲಿದ್ದ ಒಂದು ಕಾಲ್ದಾರಿಯಲ್ಲಿ ಸಾಗುವವರಿಗೆಲ್ಲರಿಗೂ, ‘ನೋಡಿ ಇಲ್ಲಿ, ನಾನು ಸುರಗಿ ಮರ, ನನ್ನ ಮೈತುಂಬಾ ಹೂವುಗಳನ್ನು ಬಿಟ್ಟುಕೊಂಡಿದ್ದೇನೆ’ ಎಂದು ಹೇಳುವಷ್ಟು.

ಆ ಎರಡು ಸುರಗಿ ಮರಗಳಲ್ಲಿ ಹೂವು ಬಿಡುವುದು ಮಾರ್ಚ್ ಕೊನೆ ಮತ್ತು ಎಪ್ರಿಲ್‌ನ ದಿನಗಳಲ್ಲಿ; ಪರೀಕ್ಷೆಗೆ ಓದಲು ನಮಗೆ ರಜಾ ಕೊಟ್ಟಾಗ, ಆ ಮರಗಳಲ್ಲಿ ಸುಗಂಧಭರಿತ ಹೂವುಗಳು; ಬೆಳಗೆದ್ದು ಸುರಗಿ ಮರಕ್ಕೆ ಹೋಗಿ ಮೊಗ್ಗುಗಳನ್ನು ಕೀಳುವುದು ಶಾಲಾ ವಿದ್ಯಾರ್ಥಿಗಳ ಕೆಲಸ. ಆ ನಂತರ, ಪರೀಕ್ಷೆಗೆ ಓದಿನ ತಯಾರಿ. ಮೊಗ್ಗುಗಳನ್ನು ಕಿತ್ತು ತಂದು, ದಾರಕ್ಕೆ ಪೋಣಿಸುವಷ್ಟರಲ್ಲಿ, ಅವು ನಿಧಾನವಾಗಿ ಅರಳುತ್ತವೆ; ಅದೇ ದಿನ ಮುಡಿದರೆ ಗಾಢ ಸುವಾಸನೆ.

ಆ ಹೂಮಾಲೆಯನ್ನು ನಾಲ್ಕೆಂಟು ದಿನ ಬಿಸಿಲಿನಲ್ಲಿ ಒಣಗಿಸಿ, ಜೋಪಾನವಾಗಿಟ್ಟುಕೊಂಡರೆ, ಮುಂದಿನ ನಾಲ್ಕಾರು ತಿಂಗಳುಗಳ ಕಾಲ ಅದನ್ನು ಬಳಸಬಹುದು! ಏಕೆಂದರೆ, ಒಣಗಿಸಿಟ್ಟರೂ ಪರಿಮಳ ಸೂಸುವ ಹೂವು ಸುರಗಿ. ಸುರಗಿ ಹೂವಿನ ವಿಚಾರ ಬರೆಯುತ್ತಾ ಹೋದರೆ, ಒಂದು ಪುಟ್ಟ ಪುಸ್ತಕವನ್ನೇ ಬರೆಯಬಹುದೇನೋ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ನಮ್ಮ ಹಳ್ಳಿಯ ವಿವಿಧ ಸಮುದಾಯಗಳಲ್ಲಿ ಆ ಹೂವಿಗೆ ಅಷ್ಟೊಂದು ಪ್ರಾಮುಖ್ಯವಿದೆ.

ಬೇಸಗೆಯಲ್ಲಿ ಅರಳುವ ನಾನಾ ಹೂವುಗಳು ನಮ್ಮ ಹಳ್ಳಿಯ ಒಂದು ಪುಟ್ಟ ವಿಸ್ಮಯ ಎನಿಸಿದರೆ, ಅದೇ ಸಮಯದಲ್ಲಿ ಮಾಗುವ ವಿವಿಧ ಹಣ್ಣುಗಳು ಕೇವಲ ಅಚ್ಚರಿ ಅಷ್ಟೇ ಅಲ್ಲ, ಮಕ್ಕಳ ಹೊಟ್ಟೆ ಯನ್ನೂ ತುಂಬಿಸುವಂಥವುಗಳು! ನಮ್ಮ ಹಳ್ಳಿಯಲ್ಲಿ ಬೇಸಗೆಯ ಹಣ್ಣುಗಳು ಎಂದಾಕ್ಷಣ, ಪ್ರಧಾನ ವಾಗಿ ಕಾಣಿಸಿಕೊಳ್ಳುವುದು ಮಾವಿನ ಹಣ್ಣುಗಳು.

ಇಂದು ನಗರ-ಪಟ್ಟಣವಾಸಿಗಳಾಗಿರುವವರಿಗೆ ‘ಮಾವಿನ ಹಣ್ಣು’ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮಲ್ಲಿಕಾ, ರಸಪೂರಿ, ಆಪೂಸು ಮೊದಲಾದ ಕಸಿ ಹಣ್ಣುಗಳು. ಆದರೆ ನಮ್ಮ ಹಳ್ಳಿಯ ಮಾವಿನ ಹಣ್ಣು ಎಂದರೆ, ಮುಖ್ಯವಾಗಿ ‘ಕಾಟು ಮಾವಿನ ಹಣ್ಣು’. ಮನೆಯ ಸುತ್ತ ಇರುವ ಖಾಲಿ ಜಾಗಗಳಲ್ಲಿ, ತೋಡಿನ ಅಂಚಿನಲ್ಲಿ, ತುಸು ದೂರದ ಹಾಡಿ ಹಕ್ಕಲುಗಳಲ್ಲಿ ಬೃಹದಾಕಾರವಾಗಿ ಬೆಳೆಯುವ ಕಾಟು ಮಾವಿನ ಮರಗಳ ವಿವಿಧ ತಳಿಗಳ ಹಣ್ಣುಗಳೇ ಬೇಸಗೆಯಲ್ಲಿ ಮಕ್ಕಳ ಬಾಯಿಗೆ ರುಚಿಕರ ಆಹಾರ!

ಕಾಟು ಮಾವಿನ ಹಣ್ಣಿನ ಮರಗಳ ವೈವಿಧ್ಯದ ಕುರಿತೂ ಹೇಳಲೇಬೇಕು. ನಮ್ಮ ಗ್ರಾಮೀಣ ಪ್ರದೇಶ ದಲ್ಲಿ ಅಕ್ಷರಶಃ ಸಾವಿರಾರು ತಳಿಯ ಕಾಟು ಮಾವಿನ ಮರಗಳಿವೆ! ಹಿಂದೆ ಇನ್ನೂ ಹೆಚ್ಚಿನ ತಳಿಗಳಿದ್ದಿರಬೇಕು. ಅವುಗಳಲ್ಲಿ ಕೆಲವು ಬೃಹದಾಕಾರದವು; ಇನ್ನು ಕೆಲವು ಮಧ್ಯಮ ಗಾತ್ರದ ಮರಗಳು. ಹಕ್ಕಿಗಳೋ, ಅಳಿಲೋ ಅಥವಾ ಯಾರೋ ಮನುಷ್ಯರೋ ಎಂದೋ ತಿಂದು ಎಲ್ಲೆಲ್ಲೋ ಎಸೆದ ಹಣ್ಣಿನ ಗೊರಟು, ತನ್ನಷ್ಟಕ್ಕೆ ತಾನೇ ಹುಟ್ಟಿ, ಮಳೆ ನೀರಿನ ಆಶ್ರಯದಲ್ಲಿ ಬೆಳೆಯುವ ಈ ಕಾಟು ಮಾವಿನ ಮರದಲ್ಲಿ, ವೈವಿಧ್ಯಮಯ ರುಚಿಯ ಹಣ್ಣುಗಳಾಗುವುದು ಒಂದು ಸೋಜಿಗ.

ನಗರವಾಸಿಗಳ ತಿಳಿವಳಿಕೆಗೆ ಹೇಳುವುದಾದರೆ, ಅಪ್ಪೆ ಮಿಡಿ, ಜೀರಿಗೆ ಮಿಡಿ ಮೊದಲಾದವು ಸಹ ಇಂಥದ್ದೇ ಅಪರೂಪದ ತಳಿಗಳ ಮಾವಿನ ಮರಗಳಲ್ಲಿ ಬಿಡುವಂಥವು. ನಮ್ಮ ಹಳ್ಳಿಯ ಸುತ್ತಮುತ್ತ ಹಲವು ಕಾಟು ಮಾವಿನ ಮರಗಳಿವೆ. ಒಂದೊಂದು ಮರದ ಹಣ್ಣು ಒಂದೊಂದು ರುಚಿ. ಇನ್ನೂ ಕೆಲವು ಕಿ.ಮೀ. ಆಚೀಚೆ ನೋಡಿದರೆ, ನಮ್ಮ ಬಂಧುಗಳ ಮನೆಯ ಸುತ್ತಾ, ಹೆಚ್ಚು ರುಚಿ ಮತ್ತು ಪರಿಮಳ ಇರುವ ಹಣ್ಣುಗಳನ್ನು ನೀಡುವ ಮಾವಿನ ಮರಗಳಿದ್ದವು. ನಮ್ಮ ಮನೆಯಿಂದ ಸುಮಾರು ಆರು ಕಿ.ಮೀ. ದೂರದಲ್ಲಿ ಅಬ್ಲಿಕಟ್ಟೆ ಎಂಬ ಪುಟ್ಟ ಹಳ್ಳಿ ಇದೆ. ಅಲ್ಲಿನ ನಮ್ಮ ಬಂಧುಗಳ ಮನೆಯ ಸುತ್ತಲೂ ಹತ್ತಾರು ಅಂಥ ಮರಗಳಿದ್ದವು; ಅವರ ಹಳೆಯ ಮನೆಯ ಮೇಲೆ ವಿಶಾಲವಾಗಿ ರೆಂಬೆಗಳನ್ನು ಚಾಚಿಕೊಂಡಿದ್ದ 2-3 ಮರಗಳಿದ್ದವು!

ಅಂದಿನ ಜನರ ಪ್ರವೃತ್ತಿಯೇ ಹಾಗೆ, ಮನೆಯ ಮೇಲೆ ಚಾಚಿಕೊಂಡಿದ್ದ ಹಲಸು, ಮಾವಿನ ಮರ ಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತಿದ್ದರೇ ಹೊರತು, ಮನೆಗೆ ಅಪಾಯವೆಂದೋ, ಮನೆಯ ಚಂದಕ್ಕೆ ಕುಂದು ಬಂದೀತು ಎಂದೋ ಕಡಿದುಹಾಕುತ್ತಿರಲಿಲ್ಲ.

ಆ ಮನೆಯ ಸುತ್ತಲಿದ್ದ ಕಾಟು ಮಾವಿನ ಮರಗಳ ಒಂದೊಂದು ತಳಿಯೂ ಅದ್ಭುತ ಎನ್ನಬಹು ದಾದ ರುಚಿಯ ಹಣ್ಣುಗಳನ್ನು ನೀಡುತ್ತಿದ್ದವು. ಕೆಲವು ಹಣ್ಣುಗಳು ಇಂದಿನ ಆಧುನಿಕ ತಳಿಗಳಾದ ಮಲ್ಲಿಕಾ, ರಸಪೂರಿ ಮೊದಲಾದ ರುಚಿಯನ್ನೇ ಹೊಂದಿದ್ದವು; ಆದರೆ, ಆ ಎಲ್ಲಾ ಕಾಟು ಮಾವಿನ ಮರಗಳಲ್ಲಿ ಬಿಡುವ ಹಣ್ಣುಗಳ ಗಾತ್ರ ಮಾತ್ರ ಚಿಕ್ಕದು,

ಸಾಮಾನ್ಯವಾಗಿ ಮುಷ್ಟಿ ಗಾತ್ರದವು. ಏಪ್ರಿಲ್-ಮೇ ಸಮಯದಲ್ಲಿ ಅಪರೂಪಕ್ಕೆ ಬೀಸುವ ಬಿರುಸಾದ ಗಾಳಿಯ ಸಮಯದಲ್ಲಿ, ಆ ಕಾಟು ಮಾವಿನ ಮರಗಳ ಅಡಿ ಅಕ್ಷರಶಃ ನೂರಾರು ಹಣ್ಣುಗಳು ಬೀಳುತ್ತವೆ! ಅವನ್ನು ಆರಿಸುವುದುಂಟು; ಎಲ್ಲವನ್ನೂ ತಿನ್ನಲು ಎಲ್ಲಿ ಸಾಧ್ಯ? ಆದ್ದರಿಂದ, ಅದರ ರಸವನ್ನು ತೆಗೆದು, ಗೆರಸಿಯಲ್ಲಿ ಹರವಿ, ಚೆನ್ನಾಗಿ ನಾಲ್ಕೆಂಟು ದಿನ ಒಣಗಿಸಿ, ‘ಹಣ್ಣುಚೆಟ್’ ಮಾಡಿ ಟ್ಟುಕೊಂಡು, ಒಣ ಎಲೆಗಳಲ್ಲಿ ಭದ್ರವಾಗಿ ಕಟ್ಟಿಟ್ಟು, ಮಳೆಗಾಲದಲ್ಲಿ ಚಟ್ಟಿ, ಗೊಜ್ಜು, ಪಾಯಸ ಮಾಡಲು ಉಪಯೋಗಿಸುತ್ತಿದ್ದರು.

ಕಾಟು ಮಾವಿನ ಹಣ್ಣಿನ ರಸದಿಂದ ಈ ‘ಹಣ್ಣುಚೆಟ್’ ಎಂಬುದನ್ನು ತಯಾರಿಸುವ ಪದ್ಧತಿ ಈಚಿನ ದಶಕಗಳಲ್ಲಿ ಬಹುಪಾಲು ನಿಂತೇಹೋಗಿದೆ. ಆಧುನಿಕ ಜೀವನ ಪದ್ಧತಿಗೆ ಒಗ್ಗಿಕೊಳ್ಳುತ್ತಿರುವ ಗ್ರಾಮೀಣರ ದಿನಚರಿಯಲ್ಲಿ, ತಾಳ್ಮೆಯಿಂದ, ಹಲವು ದಿನಗಳ ಕಾಲ ರಸ ತೆಗೆದು ಒಣಗಿಸಿ, ಕಾಪಿಡ ಬೇಕಾದಂತೆ ಹಣ್ಣುಚೆಟ್‌ನಂಥ ರಕಂಗಳಿಗೆ ಜಾಗವಿಲ್ಲ!

ನಮ್ಮ ಹಳ್ಳಿಯಲ್ಲಿ ಬೇಸಗೆಯ ದಿನಗಳಲ್ಲಿ ಅಗತ್ಯವಾಗಿ ಕಾಣಸಿಗುವ ಇನ್ನೊಂದು ಹಣ್ಣೆಂದರೆ ಗೋಯ್ ಹಣ್ಣು (ಗೋಡಂಬಿ ಮರದ ಹಣ್ಣು.) ಗೋವಾದಿಂದ ಬಂದ ಮರ ಆದ್ದರಿಂದ, ಗೋಯ್ ಹಣ್ಣು ಎಂಬ ಹೆಸರು; ನಮ್ಮ ರಾಜ್ಯದ ಕರಾವಳಿಯುದ್ದಕ್ಕೂ ಬೆಳೆದುಕೊಂಡಿದೆ. ಗೋಡಂಬಿ ಬೀಜ ಪಡೆಯಲೆಂದು ಬೆಳೆಸುವ ಈ ಮರದಲ್ಲಿ, ಬೀಜದ ಜತೆ ದೊರಕುವ ಹಣ್ಣಿಗೆ ಅಷ್ಟೊಂದು ಮೌಲ್ಯ ವಿಲ್ಲ.

ಬಣ್ಣ ಬಣ್ಣದ ಆ ಹಣ್ಣುಗಳು, ರಸಭರಿತವಾಗಿರುವುದಾದರೂ, ರುಚಿಯಲ್ಲಿ ಮಧ್ಯಮ. ತುಸು ಒಗರು, ತುಸು ಸಿಹಿ ಇರುವ ಆ ಹಣ್ಣಿನ ರಸವು ಮಕ್ಕಳಿಗೆ ಇಷ್ಟ ಎನಿಸಿದರೂ, ಕೆಲವರಿಗೆ ಅಷ್ಟಕ್ಕಷ್ಟೆ. ಜತೆಗೆ, ಗೋಯ್ ಹಣ್ಣನ್ನು ತಿಂದರೆ, ಗಂಟಲಿನಲ್ಲಿ ಕೆಲವು ಬಾರಿ ಸಣ್ಣ ಕೆರೆತ ಉಂಟಾದೀತು. ಅವುಗಳಲ್ಲೂ ಬೇರೆ ಬೇರೆ ಗಾತ್ರ, ಬಣ್ಣದ ಹಣ್ಣು ನೀಡುವ ತಳಿಗಳಿವೆ. ನಮ್ಮ ಮನೆಯ ಬಳಿ ಇದ್ದ ಒಂದು ಗೋಯ್ ಮರದಲ್ಲಿ, ಪ್ರತಿ ವರ್ಷ, ನೂರಾರು ಹಣ್ಣುಗಳು, ಬೀಜಗಳು ಬಿಡುತ್ತವೆ; ಆ ಹಣ್ಣು ಗಾತ್ರ ದಲ್ಲಿ ಚಿಕ್ಕದಾದರೂ, ರುಚಿಕರ ಮತ್ತು ಹಣ್ಣಿನ ರಸವನ್ನು ಚೀಪಿ ಸೇವಿಸಿದ ನಂತರ, ಗಂಟಲು ಕೆರೆತ ಅಷ್ಟೊಂದು ಕಾಣದು.

ಆದರೆ, ಏನಿದ್ದರೂ ನಾಲ್ಕಾರು ಗೋಯ್ ಹಣ್ಣನ್ನು ತಿನ್ನಬಹುದಷ್ಟೆ; ಜಾಸ್ತಿ ತಿಂದರೆ, ಅದೆಷ್ಟೇ ರುಚಿಕರ ಎನಿಸಿದರೂ, ಗಂಟಲು ಕೆರೆತ, ಕೆಲವರಿಗೆ ಗಂಟಲು ನೋವು ಖಚಿತ. ಗೋಡಂಬಿ ಬೀಜ ವನ್ನು ಆರಿಸಿದ ನಂತರ ಉಳಿವ ಗೋಯ್ ಹಣ್ಣನ್ನು ಕೋಣ, ಎಮ್ಮೆ, ದನ ಕರುಗಳಿಗೆ ತಿನ್ನಲು ಕೊಡುವುದುಂಟು. ಗೋವಾ ರಾಜ್ಯದಲ್ಲಿ ಅದನ್ನು ಬಳಸಿ ಫೆನ್ನಿ ಎಂಬ ಮದ್ಯಸಾರವನ್ನು ತಯಾ ರಿಸುವ ಪದ್ಧತಿ ಇದ್ದರೂ, ನಮ್ಮ ರಾಜ್ಯದಲ್ಲಿ ಈ ವಾಣಿಜ್ಯಿಕ ಚಟುವಟಿಕೆ ವ್ಯಾಪಕವಾಗಿ ಬೆಳೆದಿಲ್ಲ. ಗೋಡಂಬಿ ಬೀಜ ಆರಿಸಿದ ನಂತರ, ರಾಶಿ ರಾಶಿ ಗೋಯ್ ಹಣ್ಣುಗಳನ್ನು ನಮ್ಮವರು ಎಸೆಯುತ್ತಾರೆ; ಅದನ್ನು ನೋಡಿದ ಕೆಲವು ಹಿರಿಯರು, ಲೊಚಗುಟ್ಟುತ್ತಾ, ‘ಒಳ್ಳೆ ಹಣ್ಣು ಮಾರಾಯರೆ, ಅದನ್ನು ಭಟ್ಟಿ ಇಳಿಸಿದರೆ ಒಳ್ಳೆಯ ಪಾನೀಯ!’ ಎಂದು ನಾಲಗೆ ಚಪ್ಪರಿಸುವುದುಂಟು.

ಆರೇಳು ದಶಕಗಳ ಹಿಂದಿನ ತನಕ, ಗೋಯ್ ಹಣ್ಣನ್ನು ಕೊಳೆ ಹಾಕಿ, ಅದನ್ನು ಮಡಕೆಯಲ್ಲೇ ಭಟ್ಟಿ ಇಳಿಸಿ ಮದ್ಯಸಾರ ತಯಾರಿಸುತ್ತಿದ್ದ ಪದ್ಧತಿ ನಮ್ಮ ಹಳ್ಳಿಯಲ್ಲಿತ್ತು; ಆದರೆ, ಮದ್ಯಸಾರವನ್ನು ತಯಾರಿಸುವುದು ತನ್ನ ಹಕ್ಕು, ಅದರಿಂದ ದೊರಕುವ ಆದಾಯ ಪೂರ್ತಿ ತನಗೇ ಸೇರಬೇಕು ಎಂಬ ಸರಕಾರದ ನಿಲುವಿನಿಂದಾಗಿ, ಹಳ್ಳಿಯ ಜನರು ಈ ರೀತಿ ಸ್ಥಳೀಯವಾಗಿ ದೊರಕುವ ವಸ್ತುಗಳಿಂದ, ಸ್ವಂತ ಉಪಯೋಗಕ್ಕೆ ತಯಾರಿಸುವ ಮದ್ಯಸಾರವು ಕಾನೂನು ಬಾಹಿರ ಎಂದು ಪರಿಗಣಿತವಾಗಿದ್ದ ರಿಂದ, ನಮ್ಮ ಹಳ್ಳಿಯಲ್ಲಿ ಗೋಯ್ ಹಣ್ಣಿನಿಂದ ಮದ್ಯಸಾರ ತಯಾರಿಸುವ, ರಹಸ್ಯ ಎಂದೂ ಕರೆಯಬಹುದಾದ ಈ ಚಟುವಟಿಕೆಗೆ ಪೂರ್ಣವಿರಾಮ ಬಿದ್ದಿದೆ.

ಬೇಸಗೆಯ ಬಿರುಬಿಸಿಲಿನ ಸಮಯದಲ್ಲೇ ನಮ್ಮೂರಿನ ಹಕ್ಕಲುಗಳಲ್ಲಿ ದೊರಕುವ ಇನ್ನೊಂದು ವರ್ಣಭರಿತ ಹಣ್ಣು ಎಂದರೆ ಮುರಿನ ಹಣ್ಣು (ಪುನರ್ಪುಳಿ.) ಅದರ ಒಳಗಿನ ಮೆದುವಾದ ತಿರುಳ ನ್ನು ತಿನ್ನಬಹುದು; ಅದರ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿಟ್ಟುಕೊಂಡರೆ, ಮಳೆಗಾಲದಲ್ಲಿ ತಿಳಿಸಾರು ಮಾಡಬಹುದು! ಬಿಸಿಲಿನ ದಿನಗಳಲ್ಲಿ, ಆ ಹಣ್ಣುಗಳನ್ನು ಬುಟ್ಟಿಗಟ್ಟಲೆ ತಂದು, ಹಣ್ಣಿನ ಸಿಪ್ಪೆಯನ್ನು ಪ್ರತ್ಯೇಕಿಸಿ ಒಣಗಿಸಿ ಇಡುವುದು, ನಮ್ಮೂರಿನ ಹಲವರ ಬೇಸಗೆಯ ಮುಖ್ಯ ಚಟು ವಟಿಕೆಗಳಲ್ಲಿ ಒಂದಾಗಿತ್ತು.

ಕೋಕಂ ಎಂದು ವಾಣಿಜ್ಯಿಕವಾಗಿ ಎಲ್ಲಾ ಕಡೆ ಪರಿಚಯಗೊಂಡಿರುವ ಮುರಿನ ಹಣ್ಣು, ಇಂದು ಆರೋಗ್ಯ ಕಾಪಾಡುವ ವಸ್ತುವಾಗಿಯೂ ಪ್ರಚಾರಪಡೆದಿರುವುದು ಮಾತ್ರ ವಿಶೇಷವೆಂದೇ ಹೇಳ ಬಹುದು. ಇಂದು, ಬೇಸಗೆಯ ಸೆಕೆಯು ನಮಗೆಲ್ಲಾ ಹಿಂಸೆ ನೀಡುವಂಥದ್ದು ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅದೇ ಬೇಸಗೆಯಲ್ಲಿ ನಮ್ಮೂರಿನ ಶಾಲಾ ಮಕ್ಕಳು ತಿನ್ನುತ್ತಿದ್ದ ಹಣ್ಣಿನ ವೈವಿಧ್ಯ, ಕಾಣುತ್ತಿದ್ದ ಹೂವುಗಳ ಸಿರಿವಂತಿಕೆಗೆ ಸಾಟಿ ಇರಲಿಲ್ಲ! (ಜಡ್ಡು = ಹುಲ್ಲು ಬೆಳೆದ ಜಾಗ, ಬ್ಯಾಣ = ಬೋಳಾದ ವಿಶಾಲ ಮೈದಾನ, ಗೆರಸಿ =ಮೊರ).