ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಬಿಸಿಲು ಕಾಲದಲ್ಲೇ ಪ್ರವಾಸ ! ನಮ್ಮೂರ ವಿಶೇಷ !

ನಮ್ಮಲ್ಲಿ ಮಕ್ಕಳಿಗೆ ದೀರ್ಘ ರಜಾ ಸಿಗುವುದೇ ಎಪ್ರಿಲ್-ಮೇ ತಿಂಗಳುಗಳಲ್ಲಿ, ಇದೇ ಅವಧಿಯಲ್ಲಿ ಇಲ್ಲೆಲ್ಲಾ ಅತಿಯಾದ ಬಿಸಿಲು ಇರುವ ಋತು! ಈಚಿನ ನಾಲ್ಕಾರು ವರ್ಷಗಳಲ್ಲಂತೂ, ಗ್ಲೋಬಲ್ ವಾರ್ಮಿಂಗ್ ಮತ್ತು ಇತರ ಕಾರಣಗಳಿಂದಾಗಿ ಭೂ ತಾಪಮಾನವೇ ಅಧಿಕವಾಗಿದೆಯಂತೆ, ಅದೇ ರೀತಿ ನಮ್ಮ ರಾಜ್ಯದಲ್ಲೂ, ದೇಶದಲ್ಲೂ ಅತ್ಯಧಿಕ ಉಷ್ಣಾಂಶ ದಾಖಲಾಗುತ್ತಿದೆ.

ಬಿಸಿಲು ಕಾಲದಲ್ಲೇ ಪ್ರವಾಸ ! ನಮ್ಮೂರ ವಿಶೇಷ !

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Mar 28, 2025 8:37 AM

ಶಶಾಂಕಣ

ಪ್ರವಾಸದ ವಿಷಯಕ್ಕೆ ಬಂದರೆ, ನಮ್ಮಲ್ಲಿ ವಿಶಿಷ್ಟ-ವಿಭಿನ್ನ ಎನಿಸುವ ಒಂದು ಸನ್ನಿವೇಶ ವಿದೆ. ನಮ್ಮ ಶಾಲೆಗಳಲ್ಲಿ ಪರೀಕ್ಷೆ ಮುಗಿದು, ರಜಾ ದೊರಕುವುದು ಸಾಮಾನ್ಯವಾಗಿ ಮಾರ್ಚ್ ಕೊನೆ ಮತ್ತು ಎಪ್ರಿಲ್ ತಿಂಗಳುಗಳಲ್ಲಿ. ಮಕ್ಕಳ ರಜೆಯನ್ನು ಹೊಂದಿಸಿಕೊಂಡು, ಎಲ್ಲರೂ ಪ್ರವಾಸಕ್ಕೆ ಹೊರಡುವುದು ಪರಿಪಾಠ ಮತ್ತು ಅನುಕೂಲ ಸಹ. ನಮ್ಮಲ್ಲಿನ ವಿಭಿನ್ನ ಸನ್ನಿವೇಶ ಎಂದರೆ, ಪರೀಕ್ಷೆಗಳು ಮುಗಿದು ರಜೆಗಳು ಬರುವುದು ಬೇಸಗೆಯಲ್ಲಿ! ‘ಬೇಸಗೆ ರಜಾ’ ಎಂದೇ ಈ ರಜೆಗಳನ್ನು ಕರೆಯುವ ಅಭ್ಯಾಸ. ಅತ್ತ ಪರೀಕ್ಷೆ ಮುಗಿಯುತ್ತವೆ, ಇತ್ತ ಮಕ್ಕಳನ್ನು ಕರೆದುಕೊಂಡು, ಬೇರೆ ಊರುಗಳಿಗೆ ಪ್ರವಾಸ ಹೊರಡುವುದು. ತಪ್ಪೇನು ಅಂತೀರಾ? ಸರಿಯೇ! ಬೇಸಗೆಯ ಬಿಸಿಲಿನಲ್ಲಿ ಬೆವರುತ್ತಾ, ಬಸವಳಿಯುತ್ತಾ ಪ್ರವಾಸ ಮಾಡುವುದು ಒಂದು ವಿಭಿನ್ನ ಅನುಭವವಾದರೂ, ಬಿಸಿಲಿನ ತಾಪಕ್ಕೆ ಬೆಂಡಾದ ದೇಹ ಹೊತ್ತು ಪ್ರವಾಸಿ ತಾಣಗಳಲ್ಲಿ ಅಡ್ಡಾಡುವುದು ಒಂದು ರೀತಿಯ ಕಷ್ಟವೂ ಹೌದು, ಹಿಂಸೆ ಯೂ ಹೌದು.

ಆದರೇನು ಮಾಡುವುದು, ನಮ್ಮಲ್ಲಿ ಮಕ್ಕಳಿಗೆ ದೀರ್ಘ ರಜಾ ಸಿಗುವುದೇ ಎಪ್ರಿಲ್-ಮೇ ತಿಂಗಳುಗಳಲ್ಲಿ, ಇದೇ ಅವಧಿಯಲ್ಲಿ ಇಲ್ಲೆಲ್ಲಾ ಅತಿಯಾದ ಬಿಸಿಲು ಇರುವ ಋತು! ಈಚಿನ ನಾಲ್ಕಾರು ವರ್ಷಗಳಲ್ಲಂತೂ, ಗ್ಲೋಬಲ್ ವಾರ್ಮಿಂಗ್ ಮತ್ತು ಇತರ ಕಾರಣಗಳಿಂದಾಗಿ ಭೂ ತಾಪಮಾನವೇ ಅಧಿಕವಾಗಿದೆಯಂತೆ, ಅದೇ ರೀತಿ ನಮ್ಮ ರಾಜ್ಯದಲ್ಲೂ, ದೇಶದಲ್ಲೂ ಅತ್ಯಧಿಕ ಉಷ್ಣಾಂಶ ದಾಖಲಾಗುತ್ತಿದೆ.

ಇದನ್ನೂ ಓದಿ: Shashidhara Halady Column: ಮಗಾ ನೀನು ಆಡು, ನಿನ್ನ ಆಪ್ಪ ಹೋತ !

ಬೆಂಗಳೂರು ಸೇರಿದಂತೆ, ಅದೆಷ್ಟೋ ಊರುಗಳಲ್ಲಿ ಕಳೆದ ವರ್ಷ, ಎಪ್ರಿಲ್-ಮೇ ತಿಂಗಳು ಗಳಲ್ಲಿ ಇತಿಹಾಸದಲ್ಲೇ ಅತಿ ಗರಿಷ್ಠ ಮಟ್ಟದ ಉಷ್ಣಾಂಶ ಕಂಡುಬಂತು; ಜತೆಗೆ ಅದೊಂದು ದಾಖಲೆಯನ್ನೂ ಬರೆಯಿತು! ದಾಖಲೆ ಕತೆ ಹಾಳಾಗಿ ಹೋಗಲಿ, ಇಂಥ ತಾಪಮಾನದಲ್ಲಿ ಪ್ರವಾಸ ಮಾಡುವುದಾದರೂ ಹೇಗೆ? ಈ ಪ್ರಶ್ನೆ ನಿಮಗೂ ಉದ್ಭವಿಸಿದೆಯೆ? ಆದರೆ, ನಿರ್ವಾಹವಿಲ್ಲ, ಮಕ್ಕಳಿಗೆ ರಜಾ ಬಂದಾಗಲೇ ತಾನೆ, ತಂದೆ ತಾಯಿಯರು ಮತ್ತು ಮನೆಯ ವರು ಪ್ರವಾಸಕ್ಕೆ ಹೋಗುವ ಅವಕಾಶವಾಗುವುದು!

ನಿಜವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ, ಹಿಮಾಲಯದ ಅಂಚಿನ ಕೆಲವು ಪ್ರದೇಶ ಗಳನ್ನು ಹೊರತುಪಡಿಸಿದರೆ, ಪ್ರವಾಸ ಮಾಡಲು ಅತ್ಯಂತ ಸೂಕ್ತ ಕಾಲ ಎಂದರೆ ಚಳಿ ಗಾಲ. ದಕ್ಷಿಣ ಭಾರತದಲ್ಲಂತೂ ಚಳಿಗಾಲದ ಹವಾಮಾನ, ಪ್ರವಾಸಕ್ಕೆ ಹೇಳಿ ಮಾಡಿಸಿದ್ದು. ಅತ್ತ ನಿಸರ್ಗ ಸಿರಿಯೂ ತುಸು ಹಸಿರನ್ನು ತುಂಬಿಕೊಂಡಿರುವ ಕಾಲ ಅದು; ನವೆಂಬರ್‌ ನಿಂದ ಫೆಬ್ರವರಿ ತನಕ, ನಮ್ಮ ದೇಶದ ಹೆಚ್ಚಿನ ಪ್ರವಾಸಿ ತಾಣಗಳಲ್ಲಿ ಹಿತಕರ ಹವಾಮಾನ ಇರುತ್ತದೆ.

ಅಂಥ ದಿನಗಳಲ್ಲಿ ಅಲ್ಲಿ ಗರಿಷ್ಠ ತಾಪಮಾನ 30ರ ಆಸುಪಾಸಿನಲ್ಲಿರುತ್ತದೆ; ನಿಸರ್ಗ ದೃಶ್ಯ ಗಳು ಆಗ ಹೆಚ್ಚು ಬಣ್ಣ ವೈವಿಧ್ಯದಿಂದ ಕೂಡಿರುತ್ತವೆ. ಆದರೆ, ಡಿಸೆಂಬರ್ ಕೊನೆಯ ಒಂದು ವಾರವನ್ನು ಹೊರತುಪಡಿಸಿದರೆ, ಆಗ ಶಾಲೆಗಳಿಗೆ ರಜಾ ಇರುವುದಿಲ್ಲ; ಆದ್ದರಿಂದ, ಮಕ್ಕಳ ಜತೆ ಪ್ರವಾಸ ಹೋಗುವುದು ತುಸು ಕಷ್ಟ.

ಈಚಿನ ಕೆಲವು ವರ್ಷಗಳಲ್ಲಿ, ಡಿಸೆಂಬರ್‌ನಲ್ಲಿ ನಮ್ಮವರು ಪ್ರವಾಸ ಹೋಗುವುದು ಕಂಡು ಬರುತ್ತಿದೆ; ಒಂದು ವಾರದ ತನಕ ಕ್ರಿಸ್‌ಮಸ್ ರಜ ಕೆಲವು ಶಾಲೆಗಳಿಗಿರುತ್ತದೆ; ಮುಖ್ಯವಾಗಿ ನಗರ ಮತ್ತು ಪಟ್ಟಣಗಳಲ್ಲಿರುವವರು, ಆ ಒಂದು ವಾರದ ಅವಧಿಯಲ್ಲೇ, ಸಮಯ ಮತ್ತು ದಿನ ಹೊಂದಿಸಿಕೊಂಡು ಪ್ರವಾಸಕ್ಕೆ ಹೋಗುವುದುಂಟು.

ಅದರಲ್ಲೂ, ಐಟಿ ವಲಯದ ಉದ್ಯೋಗಿಗಳು, ಪ್ರತಿವರ್ಷ ಡಿಸೆಂಬರ್ ಕೊನೆಯ ವಾರ, ಬ್ಯಾಗ್ ಪ್ಯಾಕ್ ಮಾಡಿಕೊಂಡು, ಕಾರು ಹತ್ತಿ, ಮಲೆನಾಡಿನ ಹೋಂ ಸ್ಟೇಗಳಿಗೋ, ಕೇರಳದ ಬೋಟ್ ಹೌಸ್ ಗಳಿಗೋ, ಗೋವಾ ಅಥವಾ ಪಾಂಡಿಚೇರಿಯ ಸಮುದ್ರ ತೀರಕ್ಕೋ ಪ್ರವಾಸ ಮಾಡುತ್ತಾರೆ. ಪ್ರವಾಸಿಗರಿಗಾಗಿ, ಡಿಸೆಂಬರ್‌ನಲ್ಲಿ ಈ ಸ್ಥಳಗಳಲ್ಲಿ ಅತಿ ಉತ್ತಮ ಎನಿಸುವ ವಾತಾವರಣ ಇರುವುದಂತೂ ಸತ್ಯ.

ಬೇಸಗೆಯ ದಿನಗಳಲ್ಲೂ, ಎಪ್ರಿಲ್-ಮೇ ತಿಂಗಳುಗಳಲ್ಲೂ ನಮ್ಮವರು ಸಾಕಷ್ಟು ಪ್ರವಾಸ ಮಾಡುವುದು ಇದ್ದದ್ದೇ; ಇದಕ್ಕೆ ಮುಖ್ಯ ಕಾರಣ ಶಾಲೆಗೆ ರಜೆ ಮತ್ತು ಅದೇ ತಿಂಗಳುಗಳ ಶುಭ ಮುಹೂರ್ತಗಳಲ್ಲಿ, ಹಲವು ಕಡೆ ಮದುವೆ ಮೊದಲಾದ ಸಮಾರಂಭಗಳು ನಡೆಯು ವುದು. ಜತೆಗೆ, ಜಾತ್ರೆಗಳೂ ನಡೆಯುವುದುಂಟು. ಧಾರ್ಮಿಕ ಪ್ರವಾಸಕ್ಕೂ ಬೇಸಗೆಯು ಜನ ಪ್ರಿಯ ಸೀಸನ್; ತಿರುಪತಿ, ವಾರಾಣಸಿ, ರಾಮೇಶ್ವರ ಮೊದಲಾದ ಕಡೆ ಬೇಸಗೆಯ ಸೆಕೆಯ ಲ್ಲೂ ಯಾತ್ರಿಕರ ದಟ್ಟಣೆ ಸಾಮಾನ್ಯ.

ಅಂಥ ತಿರುಗಾಟಗಳು ಯಾತ್ರೆಯ ಭಾಗವಾಗಿ, ದೇವರ ದರ್ಶನದ ಉದ್ದೇಶದಿಂದ ನಡೆಯು ವುದರಿಂದಾಗಿ, ಸೆಕೆಯು ದೇಹವನ್ನು ದಣಿಸುತ್ತಿದ್ದರೂ, ಮನಸ್ಸಿಗೆ ಅವೆಲ್ಲಾ ತಾಗುವುದಿಲ್ಲ; ಕಷ್ಟ ಹೆಚ್ಚಾದಷ್ಟೂ ಯಾತ್ರೆಯ ಫಲ ಅಧಿಕ ಎಂಬ ಭಾವನೆಯೂ ಇಲ್ಲಿ ಕೆಲಸಮಾಡೀತು.

ಎಪ್ರಿಲ್-ಮೇ ತಿಂಗಳುಗಳು ಪ್ರವಾಸದ ಕಾಲವಾಗಿ ರೂಪುಗೊಂಡಿರುವ ನಮ್ಮ ದೇಶದ ಸನ್ನಿವೇಶವು, ಈ ಆಧುನಿಕ ಯುಗದಲ್ಲಿ, 21ನೇ ಶತಮಾನದ 3ನೇ ದಶಕದಲ್ಲಿ ನಿಜಕ್ಕೂ ಅಧ್ಯಯನಯೋಗ್ಯ. ಏಕೆಂದರೆ, ಪಾಶ್ಚಾತ್ಯ ದೇಶಗಳಲ್ಲಿ, ಜಪಾನ್ ಮೊದಲಾದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಪ್ರಿಲ್-ಮೇ ತಿಂಗಳುಗಳಲ್ಲಿ ಪ್ರವಾಸದ ಸೀಸನ್ ಆರಂಭ!

ಅಮೆರಿಕದಲ್ಲಿ ಎಪ್ರಿಲ್‌ನಲ್ಲಿ ಆರಂಭಗೊಂಡ ಪ್ರವಾಸದ ತಿಂಗಳು, ಮುಂದಿನ ನಾಲ್ಕಾರು ತಿಂಗಳುಗಳ ಕಾಲ ಮುಂದುವರಿಯುತ್ತದೆ ಮತ್ತು ಆ ಅವಧಿಯಲ್ಲಿ ಪ್ರವಾಸವನ್ನು ಅಲ್ಲಿನ ಜನರು ಅನುಭವಿಸುವ, ಯೋಜಿಸುವ ಮತ್ತು ಬದುಕಿನ ಭಾಗವನ್ನಾಗಿಸಿಕೊಂಡು ಸಂತಸ ಪಡುವ ಮನಸ್ಥಿತಿ ನಿಜಕ್ಕೂ ವಿಶೇಷ.

ಕಳೆದ ವರ್ಷ ಎಪ್ರಿಲ್‌ನಲ್ಲಿ ಅಮೆರಿಕದಲ್ಲಿರುವ ಅವಕಾಶ ದೊರಕಿತ್ತು; ಮಾರ್ಚ್ ತನಕ ಚಳಿಯ ವಾತಾವರಣ ಇರುವ ಆ ದೇಶದಲ್ಲಿ, ಜನರು ಎಪ್ರಿಲ್ ಬರುವುದನ್ನೇ ಕಾಯು ತ್ತಿರುವವರಂತೆ, ಒಮ್ಮೆಗೇ ಹೊರಾಂಗಣದ ವಾತಾವರಣವನ್ನು ಅನುಭವಿಸಲು ಅಕ್ಷರಶಃ ‘ಫೀಲ್ಡ್’ಗೆ ಇಳಿಯುತ್ತಾರೆ!

ಎಪ್ರಿಲ್ ಮೊದಲ ವಾರ ಅಲ್ಲಿನ ಗಿಡ ಮರಗಳು ಒಮ್ಮೆಗೇ ಹೂವು ಬಿಡತೊಡಗುತ್ತವೆ; ಅದು ತನಕ ಒಣಗಿದ್ದ ಮರಗಳು ಒಮ್ಮೆಗೇ ಹಸಿರಿನ ಕುಡಿಯನ್ನು ಬಿಡತೊಡಗುತ್ತವೆ ಮತ್ತು ನೋಡನೋಡುತ್ತಿದ್ದಂತೆಯೇ, ಒಮ್ಮೆಗೇ ಮರಗಳಲ್ಲಿ ಹಸಿರಿನ ಸಿರಿಯೇ ತುಂಬಿ ಹೋಗು ತ್ತದೆ; ಹಿಮ ತುಂಬಿದ ಚಳಿಗಾಲ ಮುಗಿಯುವುದನ್ನೇ ಕಾಯುತ್ತಿರುವಂತೆ, ಒಮ್ಮೆಗೇ ದಟ್ಟ ವಾಗಿ ಚಿಗಿತುಕೊಳ್ಳುವ ಆ ಮರಗಳ ಉತ್ಸಾಹವೂ ಅನುಕರಣೀಯ!

ಅದಕ್ಕೆ ಸರಿಯಾಗಿ, ಆ ಮರಗಳನ್ನೇ ಅನುಕರಿಸುವರೋ ಎಂಬಂತೆ, ಅಲ್ಲಿನ ಜನರ ಉತ್ಸಾಹವೂ ಅಮಿತ. ಮೇ ತಿಂಗಳಿನಲ್ಲಿ ವಾಷಿಂಗ್ಟನ್ ಡಿ.ಸಿ. ಪ್ರವಾಸಕ್ಕೆ ಹೋಗಿದ್ದಾಗ, ಅಲ್ಲಿನ ಶ್ವೇತಭವನ, ಕ್ಯಾಪಿಟಾಲ್, ಮಾನ್ಯುಮೆಂಟ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾಗ, ಒಂದು ದೃಶ್ಯ ಗಮನ ಸೆಳೆಯಿತು; ಗಮನ ಸೆಳೆಯುವುದೇನು, ಮೊದಲ ಬಾರಿ ನೋಡಿದಾಗ, ಸಣ್ಣಗೆ ದಿಗ್ಭ್ರಮೆಯೂ ಆಯಿತು.

ಕ್ಯಾಪಿಟಾಲ್ ಮುಂಭಾಗದ ವಿಶಾಲ ಪ್ರದೇಶದಲ್ಲಿ, ಒಬ್ಬ ಯುವಕ ಚಡ್ಡಿ ಮಾತ್ರ ಧರಿಸಿ, ಜಾಗಿಂಗ್ ಮಾಡುತ್ತಾನೆ! ನಿಜಕ್ಕೂ ಅಚ್ಚರಿ. ನಮ್ಮ ದೇಶದ ಪಾರ್ಲಿಮೆಂಟ್/ತಾಜ್‌ಮಹಲ್ ಮುಂಭಾಗದಲ್ಲಿ, ಕೇವಲ ಚಡ್ಡಿ ಧರಿಸಿದ ಯುವಕರು ಜಾಗಿಂಗ್ ಮಾಡುವುದನ್ನು ನಾವು ಕಲ್ಪಿಸಲೂ ಸಾಧ್ಯವಿಲ್ಲ.

ಆದರೆ, ಅಲ್ಲಿ ಅದು ಸಾಮಾನ್ಯವಂತೆ. ಕೆಲವೇ ನಿಮಿಷಗಳಲ್ಲಿ ಇನ್ನಷ್ಟು ಯುವಕರು ಕೇವಲ ಚಡ್ಡಿ ಧರಿಸಿ, ಅತ್ತಿಂದಿತ್ತ ಇತ್ತಿಂದತ್ತ ಜಾಗಿಂಗ್ ಮಾಡುತ್ತಿದ್ದರು! ಈ ವಿಚಾರವನ್ನು ಅಲ್ಲಿದ್ದ ಕೆಲವರ ಬಳಿ (ನಮ್ಮ ದೇಶದ ಮೂಲದವರು) ಪ್ರಸ್ತಾಪಿಸಿದಾಗ, “ಈ ದೇಶದವರು ಈಗ ನಾಲ್ಕಾರು ವಾರಗಳಿಂದ ಒಳ್ಳೆಯ ವಾತಾವರಣ ನೋಡುತ್ತಿದ್ದಾರೆ; ಫೆಬ್ರವರಿಯ ತನಕ ಹಿಮ, ಗಾಳಿ, ಸಣ್ಣ ಮಳೆ ಎಲ್ಲವೂ ಸೇರಿ ಇವರಿಗೆ ರೇಜಿಗೆ ಹಿಡಿಸಿರುತ್ತದೆ; ಈಗ ಬಿಸಿಲು ಬಂದ ತಕ್ಷಣ, ಅತಿ ಹೆಚ್ಚು ಪ್ರಮಾಣದ ವಿಟಮಿನ್ ‘ಡಿ’ ಪಡೆಯಲು, ಗರಿಷ್ಠ ಮಟ್ಟದಲ್ಲಿ ತಮ್ಮನ್ನು ಬಿಸಿಲಿಗೆ ಒಡ್ಡಿಕೊಳ್ಳುತ್ತಾರೆ" ಎಂದರು.

ಬಿಸಿಲಿಗೆ ಒಡ್ಡಿಕೊಳ್ಳುವುದೇನೋ ಸರಿ, ಆದರೆ, ಶರ್ಟನ್ನೂ ಧರಿಸುವುದಿಲ್ಲವಲ್ಲಾ ಎಂಬ ಅಚ್ಚರಿಗೆ ಅಲ್ಲಿನ ಸನ್ನಿವೇಶ ಉತ್ತರ ನೀಡಿತು. ಅತಿ ಹೆಚ್ಚು ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ದೇಶ ಎಂದೇ ಅಮೆರಿಕವನ್ನು ಗುರುತಿಸಿರುವಾಗ, ಚಡ್ಡಿ ಮಾತ್ರ ಧರಿಸಿ ಜಾಗಿಂಗ್ ಮಾಡು ವುದು ವಿಶೇಷವೇನಲ್ಲ ಎಂಬ ಅಭಿಪ್ರಾಯವೂ ಸಾಧು, ಸಹಜ.

ಸೈಕಲ್ ಮೇಲೆ ಕುಳಿತು, ಹತ್ತಾರು ಮೈಲು ಬಿಸಿಲಿನಲ್ಲಿ ಅಡ್ಡಾಡುವುದು, ಪ್ರವಾಸಿ ತಾಣಗಳಿಗೆ ಬಂದ ತಕ್ಷಣ ಸೈಕಲ್ ಬಾಡಿಗೆ ಪಡೆದು ಓಡಾಡುವುದು ಅಲ್ಲಿನ ಜನಪ್ರಿಯ ಹವ್ಯಾಸ. ಈ ಮೂಲಕ ಸಹ ಬಿಸಿಲಿಗೆ ಗರಿಷ್ಠ ಪ್ರಮಾಣದಲ್ಲಿ ಒಡ್ಡಿಕೊಳ್ಳುವ ಪ್ರಯತ್ನವನ್ನು ಅಲ್ಲಿನ ಜನ ಮಾಡುತ್ತಾರಂತೆ!

ಎಪ್ರಿಲ್‌ನಿಂದ ಮುಂದಿನ 3-4 ತಿಂಗಳುಗಳ ಕಾಲ, ಅಲ್ಲಿನವರು ಬಿಸಿಲನ್ನು ಆಸ್ವಾದಿಸುವ ನೆಪದಲ್ಲಿ, ಬೀಚ್‌ಗಳಿಗೆ ಹೋಗುವುದು, ಪ್ರವಾಸ ಮಾಡುವುದು, ಕಾರಿನಲ್ಲಿ ಕುಳಿತು ದೇಶದ ಉದ್ದಗಲಕ್ಕೂ ಸಂಚರಿಸುವುದು ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆ ದೇಶದವರು ಈಗಾಗಲೇ ನಿರ್ಮಿಸಿರುವ, ಸಾವಿರಾರು ಮೈಲು ದೂರ ಸಾಗಬಲ್ಲ ಉತ್ತಮ ಹೆದ್ದಾರಿಗಳು ಸಹ ಅಲ್ಲಿನ ಇಂಥ ಪ್ರವಾಸಕ್ಕೆ ಸೂಕ್ತ ಪ್ರೋತ್ಸಾಹ ನೀಡುತ್ತವೆ.

ಕಾರಿನ ಹಿಂಭಾಗದಲ್ಲಿ ಕಾರಿನಷ್ಟೇ ದೊಡ್ಡ ದೋಣಿಯೊಂದನ್ನು ಕಟ್ಟಿಕೊಂಡು, ಅದನ್ನೂ ನೂರಾರು ಮೈಲುಗಳ ತನಕ ಕೊಂಡೊಯ್ದು, ಅಲ್ಲಿನ ಬೀಚ್ ಗಳಲ್ಲಿ, ಸರೋವರಗಳಲ್ಲಿ ಓಡಾಡುತ್ತಾ, ಪ್ರವಾಸ ಮಾಡುತ್ತಾ, ಬಿಸಿಲಿನ ದಿನಗಳ ಸದುಪಯೋಗ ಪಡೆಯುವ ಆ ದೇಶದ ಜನರ ಪ್ರವಾಸಿ ಮನಸ್ಥಿತಿ ವಿಶೇಷ ಮತ್ತು ನಮ್ಮ ದೇಶಕ್ಕೆ ಹೋಲಿಸಿಕೊಳ್ಳುವುದು ಸೂಕ್ತ ಎನಿಸದಿರಲಾರದು ಮತ್ತು ಸಮಂಜಸವೂ ಅಲ್ಲ.

ಅದೇನಿದ್ದರೂ, ಬಿಸಿಲಿಗಾಗಿ ಹಲವು ತಿಂಗಳುಗಳಿಂದ ಹಪಹಪಿಸಿ, ಬಿಸಿಲು ಬಂದ ತಕ್ಷಣ ಪ್ರವಾಸ ಮಾಡುತ್ತಾ, ಬಿಸಿಲಿನಲ್ಲಿ ಓಡಾಡುವ ಅಲ್ಲಿನ ಸಂಸ್ಕೃತಿ ವಿಶಿಷ್ಟ ಎನ್ನಬಹುದು. ನಮ್ಮ ದೇಶದಲ್ಲೂ ಬೇಸಗೆಯಲ್ಲಿ ತಂಪಾಗಿರುವ ಕೆಲವು ಪ್ರವಾಸಿ ತಾಣಗಳಿವೆ; ಊಟಿ, ಕೊಡೈಕೆನಾಲ್, ಡಾರ್ಜಿಲಿಂಗ್, ಏರ್‌ಕಾಡು, ಸಿಮ್ಲಾ, ಮನಾಲಿ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಹಲವು ತಾಣಗಳು ಎಪ್ರಿಲ್ ನಂತರ ಹಿತಕರವಾದ ವಾತಾವರಣ ಹೊಂದಿರುತ್ತವೆ.

ಆದರೆ, ಅಲ್ಲಿ ನಮ್ಮೂರಿನಿಂದ ಹೋಗಲು, ಅತಿ ಬಿಸಿಲು ಎನಿಸುವ ಜಾಗದ ಮೂಲಕ ಪಯಣಿಸಬೇಕು! ನಮ್ಮ ದೇಶದ ಹೆಚ್ಚಿನ ಭಾಗದಲ್ಲಿ ಮೇ ತಿಂಗಳಲ್ಲಿ 35 ಡಿಗ್ರಿಗಿಂತ ಅಧಿಕ ತಾಪಮಾನ; ಉತ್ತರಾಖಂಡ ಮತ್ತು ಹಿಮಾಚಲದ ಹಲವು ಪ್ರದೇಶಗಳಲ್ಲಿ 30 ಡಿಗ್ರಿಗಿಂತ ಕಡಿಮೆ ತಾಪಮಾನ. ಪ್ರವಾಸಿಗರ ಮತ್ತು ಪ್ರವಾಸೋದ್ಯಮದ ದೃಷ್ಟಿಯಲ್ಲಿ ಒಂದು ಪ್ರಮುಖ ವಿಚಾರವನ್ನು ನೆನಪಿಸಿಕೊಳ್ಳಲೇಬೇಕು; ಬೇಸಗೆಯಲ್ಲೂ ತಂಪಾಗಿರುವ, ಹಿಮ ತುಂಬಿದ ವಾತಾವರಣದ ಅನುಭವ ನೀಡಬಲ್ಲ ಹಲವು ತಾಣಗಳು ನಮ್ಮ ದೇಶದಲ್ಲಿವೆ; ತಮ್ಮ ಆವರಣದಲ್ಲೇ ಹಿಮದ ಗಡ್ಡೆಗಳನ್ನು ಬೀಳಿಸಿಕೊಂಡಿರುವ, ಹಿನ್ನೆಲೆಯಲ್ಲಿ ಸುಂದರ ವಾದ ಹಿಮಾಲಯ ಶ್ರೇಣಿಯನ್ನು ಹೊಂದಿರುವ, ಚೌಕಟ್ಟಿನ ಚಿತ್ರದಂಥ ಸೌಂದರ್ಯ ಹೊಂದಿರುವ ಕೇದಾರನಾಥ, ಬದರಿನಾಥದಂಥ ದೇಗುಲಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ, ಕಾಶ್ಮೀರದ ಹಲವು ಜಾಗಗಳು, ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣಗಳು. ಬೇಸಗೆ ಬಂತೆಂದರೆ, ಇಲ್ಲೆಲ್ಲಾ ಲಕ್ಷಾಂತರ ಪ್ರವಾಸಿಗರು, ಯಾತ್ರಿಕರು ತುಂಬಿಕೊಳ್ಳುತ್ತಾರೆ. ಕೇದಾರನಾಥದಂಥ ಸ್ಥಳಕ್ಕೆ ಹೋಗಲು ಈ ವರ್ಷ ಈಗಾಗಲೇ ಲಕ್ಷಾಂತರ ಜನರು ನೋಂದಣಿ ಮಾಡಿಸಿರುವರಂತೆ!

ಎಪ್ರಿಲ್‌ನಲ್ಲಿ ಹೂವುಗಳನ್ನು ಅರಳಿಸುವ ಶ್ರೀನಗರದ ‘ಟ್ಯುಲಿಪ್ ಹಬ’ಕ್ಕೆ ಹೋಗಲು ಸಾವಿರಾರು ಜನರು ಅದಾಗಲೇ ಸಿದ್ಧರಾಗಿದ್ದಾರೆ! ಅದರರ್ಥ, ಬೇಸಗೆಯಲ್ಲಿ ನಡೆಸುವ ಪ್ರವಾಸ, ಯಾತ್ರೆಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಇನ್ನೇಕೆ ತಡ, ಬಿಸಿಲೇ ಇರಲಿ, ಮಳೆಯೇ ಬರಲಿ, ಬೇಸಗೆಯ ಪ್ರವಾಸಕ್ಕೆ ಸಿದ್ಧರಾಗಿ, ಬೆವರು ಸುರಿದರೂ ಪರವಾಗಿಲ್ಲ, ಮನಸ್ಸಿನಲ್ಲಿ ಸಂತಸದ ಸೋನೆ ಸುರಿಯಬೇಕು, ಮನವು ಉಲ್ಲಾಸದಿಂದ ಅರಳಬೇಕು! ಅಲ್ಲವೆ?