ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranjith H Ashwath Column: ಎಲ್ಲಿದ್ದೇವೆ ಎನ್ನುವುದರ ಮೇಲೆ ಹೋರಾಟ ನಿರ್ಣಯವೇ ?

ಸದ್ಯ ಕರ್ನಾಟಕದಲ್ಲಿ ಆಡಳಿತ-ಪ್ರತಿಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಹಾಗೂ ನೈಸ್ ರಸ್ತೆ ವಿಷಯವೂ ಇದಕ್ಕೆ ಹೊರತಾಗಿಲ್ಲ. ಹಾಗೇ ನೋಡಿದರೆ, ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರಕಾರ ಸಮಾನಪಾಲಿದೆ. ಇನ್ನು ನೈಸ್ ರಸ್ತೆಯ ವಿಷಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಪಾಲನ್ನು ಹೊಂದಿದೆ

ಅಶ್ವತ್ಥಕಟ್ಟೆ

ರಾಜಕೀಯದಲ್ಲಿ ನಾಯಕರು ಆಡುವ ಮಾತು ಸಮಯದಿಂದ ಸಮಯ ಹಾಗೂ ತಾವು ಕೂತಿರುವ ಜವಾಬ್ದಾರಿಗಳ ಮೇಲೆ ನಿರ್ಧರಿತವಾಗುತ್ತದೆ. ಪ್ರತಿಪಕ್ಷದಲ್ಲಿದ್ದಾಗ ಯಾವುದೋ ಒಂದು ಯೋಜನೆ ಯನ್ನು ತೀವ್ರವಾಗಿ ವಿರೋಧಿಸಿದ್ದ ಪಕ್ಷ ಹಾಗೂ ನಾಯಕರು, ಅಧಿಕಾರಕ್ಕೆ ಬರುತ್ತಿದ್ದಂತೆ ಆ ಯೋಜನೆಯನ್ನು ಅಪ್ಪಿಕೊಂಡು ಮುದ್ದಾಡುವ ಅದೆಷ್ಟೋ ಉದಾಹರಣೆಗಳಿವೆ. ಅದೇ ರೀತಿ ಅಧಿಕಾರದಲ್ಲಿದ್ದಾಗ ಯೋಜನೆಯನ್ನು ಬೆಂಬಲಿಸಿಕೊಂಡು ಬಂದಿದ್ದ ನಾಯಕರು ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತಿದ್ದಂತೆ ಯೋಜನೆಯ ವಿಷಯದಲ್ಲಿ ‘ಚಪಾತಿ’ಯನ್ನು ಉಲ್ಟಾ ಹಾಕುವುದು ರಾಜಕೀಯದಲ್ಲಿ ಹೊಸದೇನಲ್ಲ.

ಸದ್ಯ ಕರ್ನಾಟಕದಲ್ಲಿ ಆಡಳಿತ-ಪ್ರತಿಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಹಾಗೂ ನೈಸ್ ರಸ್ತೆ ವಿಷಯವೂ ಇದಕ್ಕೆ ಹೊರತಾಗಿಲ್ಲ. ಹಾಗೇ ನೋಡಿದರೆ, ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸರಕಾರ ಸಮಾನಪಾಲಿದೆ. ಇನ್ನು ನೈಸ್ ರಸ್ತೆಯ ವಿಷಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಪಾಲನ್ನು ಹೊಂದಿದೆ. ಆದರೀಗ, ಪ್ರತಿಪಕ್ಷದಲ್ಲಿ ರುವ ಕಾರಣಕ್ಕೆ ಮೈತ್ರಿ ಪಕ್ಷಗಳು ಈ ಎರಡು ಯೋಜನೆಯ ವಿರುದ್ಧ ಹೋರಾಡುತ್ತಿದ್ದಾರೆ. ಪ್ರತಿಪಕ್ಷಕ್ಕೆ ಬಂದ ಕೂಡಲೇ ವಿರೋಧಿಸುವುದು ಕೇವಲ ಜೆಡಿಎಸ್ ಅಥವಾ ಬಿಜೆಪಿಗೆ ಸೀಮಿತ ವಾಗಿರುವ ವಿಷಯವೇನಲ್ಲ.

ರಾಷ್ಟ್ರಮಟ್ಟದಲ್ಲಿ ನೋಡಿದರೆ, ಯುಪಿಎ ಸರಕಾರದ ಅವಧಿಯ ಆಧಾರ್ ಅನ್ನು ವಿರೋಧಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದನ್ನೇ ‘ಕಡ್ಡಾಯ’ಗೊಳಿಸುವ ಪ್ರಯತ್ನ ಮಾಡಿತ್ತು. ಆಗ ಕಾಂಗ್ರೆಸ್ ವಿರೋಧಿಸಿತ್ತು. ಇದೇ ರೀತಿ ಹಲವು ಒಪ್ಪಂದ, ಯೋಜನೆಗಳಿಗೆ ಚಾಲನೆ ನೀಡಿದ್ದ ಕಾಂಗ್ರೆಸ್ ಬಿಜೆಪಿ ಅಧಿಕಾರಾವಧಿಯಲ್ಲಿ ಜಾರಿಯಾಗುತ್ತಿದೆ ಎನ್ನುವ ಕಾರಣಕ್ಕೆ ವಿರೋಧಿಸಿದನ್ನು ನೋಡಿದ್ದೇವೆ.

ಇದನ್ನೂ ಓದಿ: Ranjith H Ashwath Column: ಹೈಕಮಾಂಡ್‌ ತೀರ್ಮಾನ ಅಂತಿಮ ಹೌದು, ಆದರೆ..!

ರಾಜ್ಯದಲ್ಲಿ ಬರ, ಕಾವೇರಿ ನೀರು ಹಂಚಿಕೆ, ಗುಳೆ ಸೇರಿದಂತೆ ಹಲವು ರೀತಿಯ ಸಂಕಷ್ಟದ ಹೊರತಾ ಗಿಯೂ ಬಿಡದಿ ಹಾಗೂ ನೈಸ್ ವಿರುದ್ಧ ಜೆಡಿಎಸ್, ಬಿಜೆಪಿ ಧ್ವನಿ ಎತ್ತಿರುವುದಕ್ಕೂ ಹಿಂದಿರುವ ಮರ್ಮ ಅನೇಕರಿಗೆ ತಿಳಿಯುತ್ತಿಲ್ಲ. ಇನ್ನು ರಾಜ್ಯಾದ್ಯಂತ ಹತ್ತಾರು ಕಡೆ ಟೌನ್‌ಶಿಪ್ ಮಾಡುವುದಕ್ಕೆ ಅವಕಾಶವಿದ್ದರೂ, ತಾವೇ ವಿರೋಽಸಿದ್ದ ‘ಬಿಡದಿ ಟೌನ್ ಶಿಪ್’ಗೆ ಮರುಜನ್ಮವನ್ನು ಡಿ.ಕೆ.ಶಿವಕುಮಾರ್ ನೀಡಿದ್ದು ಏಕೆ? ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿಯೇ ನೈಸ್ ವಿರುದ್ಧ ವರದಿ ಬಂದಿದ್ದರೂ, ಈಗ ಏನು ಮಾಡಲಾಗದೆ ‘ಕಾದು ನೋಡುವ’ ತಂತ್ರಕ್ಕೆ ಕಾಂಗ್ರೆಸ್ ಸರಕಾರ ಮೊರೆಹೋಗಲು ಕಾರಣವೇನು ಎನ್ನುವುದನ್ನು ಗಮನಿಸಬೇಕಿದೆ.

ಹಾಗೇ ನೋಡಿದರೆ, ಬಿಡದಿ ಟೌನ್‌ಶಿಪ್‌ನ ಕನಸಿಗೆ ರೆಕ್ಕೆ ಕಟ್ಟಿದ್ದೇ ಎಚ್.ಡಿ. ಕುಮಾರಸ್ವಾಮಿ. ಅವರ ಅವಧಿಯಲ್ಲೇ ಅದರ ಜಾರಿಗೆ ಯತ್ನಿಸಲಾಗಿತ್ತು. ಇಂದು ಅವರೇ ಅದನ್ನು ತೀವ್ರವಾಗಿ ವಿರೋಧಿಸು ತ್ತಿದ್ದಾರೆ. 2006ರಲ್ಲಿ ಬೆಂಗಳೂರಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ‘ನಾಲೆಡ್ಜ್ ಸಿಟಿ’ಯನ್ನು ಆರಂಭಿಸಲು ಡಿಎಲ್‌ಎಫ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಆ ಸಮಯದಲ್ಲಿ ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ಕಾರಣಕ್ಕೆ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ 2023ರ ವೇಳೆಗೆ ಅಂದು ವಿರೋಧಿಸಿದ್ದ ಡಿ.ಕೆ.ಶಿವಕುಮಾರ್ ಅವರೇ ಯೋಜನೆಗೆ ಮರುಜೀವ ನೀಡಿದರು. ಇದನ್ನು ಭಾರತದ ಮೊದಲ ‘ಎಐ ಸಿಟಿ’ಯನ್ನಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿ, ಸುಮಾರು ಒಂಬತ್ತಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರಕಾರ ತೀರ್ಮಾನಿಸಿತು.

ಸರಕಾರದ ನಡೆಯನ್ನು ವಿರೋಧಿಸಿ ರಾಮನಗರ ಜಿಲ್ಲೆಯ ರೈತರು ಬೃಹತ್ ಪ್ರತಿಭಟನೆಗಳನ್ನು ಆರಂಭಿಸಿದರು. ಈ ವಿರೋಧದ ನಡುವೆಯೂ 518 ಎಕರೆ ಭೂಸ್ವಾಧೀನಕ್ಕೆ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ರೈತರಿಗೆ ಪ್ರತಿ ಎಕರೆಗೆ 2 ರಿಂದ 3 ಕೋಟಿ ರು.ಗಳವರೆಗೆ ಪರಿಹಾರ ನೀಡುವುದಾಗಿ ಸರಕಾರ ಘೋಷಿಸಿದೆ. ಅಂದು ವಿರೋಧಿಸಿದ್ದ ಜೆಡಿಎಸ್ ಇಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದೆ.

61 ok

ಬಿಡದಿ ಟೌನ್‌ಶಿಪ್‌ನೊಂದಿಗೆ ಜೆಡಿಎಸ್ ಸಮರ ಸಾರಿರುವ ನೈಸ್ ರಸ್ತೆಯಲ್ಲಿ ಸಂಗ್ರಹಿಸುತ್ತಿರುವ ಟೋಲ್ ವಿರುದ್ಧ. ಈಗ ನೈಸ್ ರಸ್ತೆಯನ್ನು ವಿರೋಧಿಸುತ್ತಿರುವ ಜೆಡಿಎಸ್ ನಾಯಕರು ಈ ಹಿಂದೆ ಈ ಯೋಜನೆ ಕಾರ್ಯಗತಗೊಳ್ಳಲು ಕಾರಣ ಯಾರು ಎನ್ನುವುದನ್ನು ನೋಡಿದರೆ, ಅದು ಅವರದ್ದೇ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು. ಸದಾ ಒಂದಿಲ್ಲೊಂದು ವಿವಾದಕ್ಕೆ ಸುದ್ದಿಯಲ್ಲಿರುವ ನೈಸ್ ರಸ್ತೆಯ ಯೋಜನೆ ಮೊಳಕೆ ಒಡೆದಿದ್ದು ಹೇಗೆ ಎಂದು ನೋಡಿದರೆ, ಸದ್ಯ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರ ಕನಸಿನ ಕೂಸಾಗಿತ್ತು. 1995ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಅಮೆರಿಕ ಪ್ರವಾಸದಲ್ಲಿದ್ದಾಗ ಅಮೆರಿಕ ಮಸಾಚುಸೆಟ್ಸ್ ಗರ್ವನರ್ ಅವರೊಂದಿಗೆ ಬೆಂಗಳೂರು-ಮೈಸೂರು ನಡುವೆ ಅತ್ಯಾಧುನಿಕ ರಸ್ತೆ ನಿರ್ಮಾಣ ಹಾಗೂ ಉಪನಗರಗಳ ನಿರ್ಮಾಣ ಮಾಡುವ ಕನಸಿನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದದ ಅನುಷ್ಠಾನದ ಜವಾಬ್ದಾರಿಯನ್ನು ಅಶೋಕ್ ಖೇಣಿ ಒಡೆತನದ ನೈಸ್ ಕಂಪನಿಗೆ ವಹಿಸಲಾಯಿತು. ಇದಾದ ಬಳಿಕ 1997ರಲ್ಲಿ ಜೆ.ಎಚ್.ಪಟೇಲ್ ಅವರ ಸರಕಾರದ ಅವಧಿಯಲ್ಲಿ ನೈಸ್ ಸಂಸ್ಥೆಯೊಂದಿಗೆ ಅಧಿಕೃತವಾಗಿ ಒಪ್ಪಂದ ಮಾಡಿಕೊಂಡು, ಯೋಜನೆಗಾಗಿ ಬರೋಬ್ಬರಿ 20193 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಿ, ಭೂಸ್ವಾಧೀನ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಲಾಯಿತು. ಯೋಜನೆ ಆರಂಭವಾದ ಕೆಲವೇ ವರ್ಷದಲ್ಲಿ ರಸ್ತೆ ನಿರ್ಮಾಣಕ್ಕಿಂತ ಹೆಚ್ಚಾಗಿ ಹೆದ್ದಾರಿಯ ಅಕ್ಕಪಕ್ಕದ ಬೆಲೆಬಾಳುವ ಜಮೀನನ್ನು ಬಳಸಿಕೊಳ್ಳುವ ಲೆಕ್ಕಾಚಾರಗಳಿವೆ ಎನ್ನುವ ಆರೋಪ ಕೇಳಿ ಬಂದು, ಅಗತ್ಯವಿರುವುದಕ್ಕಿಂತ ಹೆಚ್ಚಿನ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಶುರುವಾಗಿತ್ತು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಹಲವು ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಂಡ ರೈತರು ಬೀದಿಗಿಳಿದರು. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದರು.

2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು, ನೈಸ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಸಿಕೊಂಡು, ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಆರೋಪಿಸಿ, ತನಿಖೆಗೆ ಆದೇಶಿಸಿದರು. ಇಲ್ಲಿಂದ ಅಶೋಕ್ ಖೇಣಿ ಮತ್ತು ದೇವೇಗೌಡರ ಕುಟುಂಬದ ನಡುವೆ ತೀವ್ರ ತಿಕ್ಕಾಟಗಳು ಶುರುವಾದವು. ಆರಂಭದಲ್ಲಿ 2006ರಲ್ಲಿ ಸುಪ್ರೀಂ ಕೋರ್ಟ್ ನೈಸ್ ಪರವಾಗಿ ತೀರ್ಪು ನೀಡಿ, 1997ರ ಮೂಲ ಒಪ್ಪಂದದ ಪ್ರಕಾರವೇ ಯೋಜನೆ ಮುಂದುವರಿಸಲು ಸೂಚಿಸಿತು.

ಸರಕಾರ ಯಾವುದೇ ಅಡ್ಡಿಪಡಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಿತು. ಇದು ನೈಸ್ ಸಂಸ್ಥೆಗೆ ಸಿಕ್ಕ ಬಹುದೊಡ್ಡ ಜಯವಾಗಿತ್ತು. ನೈಸ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಬಂದರೂ, ಸರಕಾರ ಸದನ ಸಮಿತಿಗಳನ್ನು ರಚಿಸಿತ್ತು. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಅಂದಿನ ಕಾನೂನು ಸಚಿವ ಕಾನೂನು ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ‘ಜಂಟಿ ಸದನ ಸಮಿತಿ’ಯನ್ನು ರಚಿಸಲಾಯಿತು. ಸುಮಾರು ಮೂರು ವರ್ಷ ಸಮಯ ಪಡೆದ ಈ ಸಮಿತಿಯೂ 2016ರಲ್ಲಿ ಈ ಸಮಿತಿ ಸುದೀರ್ಘ ವರದಿಯನ್ನು ನೀಡಿತ್ತು. ಅದರಲ್ಲಿ ಪ್ರಮುಖವಾಗಿ, ನೈಸ್ ಸಂಸ್ಥೆ ಮೂಲ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ.

ರಸ್ತೆ ನಿರ್ಮಿಸದೆ ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಂಡಿರುವ 11660 ಎಕರೆ ಭೂಮಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಯೋಜನೆಯನ್ನು ಸರಕಾರವೇ ವಹಿಸಿಕೊಂಡು ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎನ್ನುವ ಶಿಫಾರಸನ್ನು ಮಾಡಿತ್ತು. ಅದಾದ ಬಳಿಕ ಜೆ.ಸಿ. ಮಾಧುಸ್ವಾಮಿ ನೇತೃತ್ವದ ಸಮಿತಿಯೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಸಿಎಜಿ ವರದಿಯಲ್ಲಿಯೂ ಲೆಕ್ಕಪತ್ರಗಳ ದೋಷವನ್ನು ಎತ್ತಿ ತೋರಿಸಿದವು.

ನೈಸ್ ರಸ್ತೆಯ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ, ಸರಕಾರಗಳು ಮಾತ್ರ ಈ ವಿಷಯದಲ್ಲಿ ಬಹುಪಾಲು ಸಮಯ ‘ಜಾಣ’ ಕಿವುಡು ಪ್ರದರ್ಶನ ಮಾಡಿದೆ ಎನ್ನುವ ಆರೋಪವಿದೆ. ಕೇವಲ ಮೌನವಷ್ಟೇ ಅಲ್ಲದೇ ನೈಸ್ ರಸ್ತೆಯ ವಿರುದ್ಧ ಕ್ರಮವಹಿಸಲು ಹತ್ತು ಹಲವು ಕಾನೂನು ಸಮಸ್ಯೆಗಳು ಸರಕಾರದ ಮುಂದಿವೆ ಎನ್ನುವ ಸುಳ್ಳಲ್ಲ.

ನೈಸ್ ವಿಷಯದಲ್ಲಿ ಪ್ರತಿಪಕ್ಷದಲ್ಲಿದ್ದಾಗ ಹೋರಾಟ ನಡೆಸುವ ರಾಜಕೀಯ ನಾಯಕರು, ಅಧಿಕಾರಕ್ಕೆ ಬರುತ್ತಿದ್ದಂತೆ ಮೌನವಾಗಲು ರಾಜಕೀಯ ಇಚ್ಛಾಶಕ್ತಿಯ ಜತೆಜತೆಗೆ ಕಾನೂನಾತ್ಮಕ ಸಮಸ್ಯೆಯೂ ಪ್ರಬಲ ಕಾರಣ. ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಆದಿಯಾಗಿ ಪ್ರತಿಯೊಬ್ಬರು ಆಗ್ರಹಿಸುತ್ತಿದ್ದರೂ, 1997ರ ಮೂಲ ಒಪ್ಪಂದದಲ್ಲಿ ಈ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸು ವಂತಿಲ್ಲ ಎನ್ನುವ ಅಂಶ ಸ್ಪಷ್ಟವಾಗಿದೆ.

ಒಂದು ವೇಳೆ ಒಪ್ಪಂದ ಮುರಿದು ಇಡೀ ಯೋಜನೆಯನ್ನು ಸರಕಾರವೇ ವಶಕ್ಕೆ ಪಡೆದರೆ, ಒಪ್ಪಂದದ ಷರತ್ತುಗಳ ಪ್ರಕಾರ ನೈಸ್ ಕಂಪನಿಗೆ ಸರಕಾರ ಸಾವಿರಾರು ಕೋಟಿ ರು. ಪರಿಹಾರ ನೀಡಬೇಕಾಗುತ್ತದೆ. ಇದರೊಂದಿಗೆ 2006ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನೈಸ್ ಸಂಸ್ಥೆಗೆ ಮೇಲುಗೈ ಆಗಿರುವುದರಿಂದ, ಈ ವಿಷಯವನ್ನು ಮುಂದಿಟ್ಟುಕೊಂಡು ಸರಕಾರ ಯಾವುದಾದರೂ ಕ್ರಮವಹಿಸಲು ಮುಂದಾದರೆ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ ಎನ್ನುವ ಆತಂಕ ಅಧಿಕಾರಿಗಳಲ್ಲಿದೆ.

ಇನ್ನು ನೈಸ್ ಒಪ್ಪಂದದಂತೆ ವಶಕ್ಕೆ ಪಡೆದಿರುವ ಸಾವಿರಾರು ಎಕರೆ ಭೂಮಿಯಲ್ಲಿ ಬಹುಪಾಲನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದೆ. ಹೀಗಿರುವಾಗ ಇಡೀ ಯೋಜನೆಯನ್ನು ವಶಕ್ಕೆ ಪಡೆಯಲು ಸರಕಾರ ಮುಂದಾದರೆ, ಅಡಮಾನವಿಟ್ಟುಕೊಂಡು ಸಾಲ ಕೊಟ್ಟಿರುವ ಬ್ಯಾಂಕ್‌ಗಳು ಸರಕಾರದ ವಿರುದ್ಧ ನಿಲ್ಲುವ ಸಾಧ್ಯತೆಯಿದೆ. ಆದ್ದರಿಂದ ಈ ವಿಷಯವನ್ನು ಕಾನೂನಾತ್ಮಕವಾಗಿ ಹೋರಾಡುವುದಕ್ಕಿಂತ ರಾಜಕೀಯ ಹೋರಾಟಕ್ಕೆ ಸೀಮಿತಗೊಳಿಸಲಾಗಿದೆ.

ಇದೀಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೈಸ್ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ಕೆಲ ಸಾಮಾಜಿಕ ಕಾರ್ಯಕರ್ತರು ಲೋಕಭವನದ ಕದ ತಟ್ಟಿದ್ದಾರೆ. ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎನ್ನುವ ಕುಮಾರಸ್ವಾಮಿ ಆಗ್ರಹಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಕಾನೂನಾತ್ಮಕ ಕ್ರಮ’ ಎಂದಷ್ಟೇ ಹೇಳಿದ್ದಾರೆ.

ಇನ್ನೊಂದೆಡೆ ರಾಜ್ಯಪಾಲರು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು, ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ಎರಡು ಯೋಜನೆಗಳನ್ನು ಆರಂಭಿಸುವಾಗ ಅಂದಿನ ರಾಜಕೀಯ ಲೆಕ್ಕಾಚಾರಗಳಲ್ಲಿಯೇ ಆಲೋಚನೆ ಮಾಡಲಾಗಿತ್ತು. ಆದರೀಗ ಬದಲಾದ ಕಾಲಘಟ್ಟದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುವ ಜೆಡಿಎಸ್ ಹಾಗೂ ಬಿಜೆಪಿ ವಿರೋಽಸಿಕೊಂಡು ಬರುತ್ತಿವೆ.

ಹಳೇ ಮೈಸೂರು ಭಾಗದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕಾರಣಕ್ಕೆ ನೈಸ್ ಹಾಗೂ ಬಿಡದಿ ವಿಷಯವನ್ನು ಜೆಡಿಎಸ್ ನಾಯಕರು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ ಈ ಎರಡು ಹೋರಾಟದಲ್ಲಿ ಬಿಜೆಪಿಯ ಪಾತ್ರವೇನು ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹಾಗೇ ನೋಡಿದರೆ, ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಿಗೆ ಹೋರಾಡುವ ಮನಸ್ಥಿತಿಯಲ್ಲಿಯೇ ಇತ್ತು. ಬಿಜೆಪಿ ನಾಯಕರು ಈ ವಿಷಯವನ್ನು ಅಧಿವೇಶನದಲ್ಲಿಯೂ ಪ್ರಸ್ತಾಪಿಸಿ ಸರಕಾರದ ವಿರುದ್ಧ ಬಾವಿಗಿಳಿಯುವ ಆಲೋಚನೆಯಲ್ಲಿತ್ತು. ಅದಕ್ಕೂ ಮೊದಲು ಜನಾಭಿಪ್ರಾಯ ಮೂಡಿಸುವ ಲೆಕ್ಕಾಚಾರ ದಲ್ಲಿ ಮೈತ್ರಿ ನಾಯಕರು ಹೋರಾಟದ ಹಾದಿ ತುಳಿಯಲು ತೀರ್ಮಾನಿಸಿದ್ದರೂ, ಪಾದಯಾತ್ರೆಯ ಮಾತುಗಳನ್ನು ಆಡಿದ್ದು ಮೊದಲಿಗೆ ಬಿಜೆಪಿ ನಾಯಕರು. ಆದರೆ ಹೋರಾಟ ಆರಂಭಿಸುವ ಹೊತ್ತಿಗೆ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ನಿಧನರಾಗಿದ್ದರಿಂದ ಈ ಹೋರಾಟದ ಕಾವು ತಾತ್ಕಾಲಿಕವಾಗಿ ನಿಂತಿತ್ತು.

ಈ ವಿಷಯವಾಗಿ ಕುಮಾರಸ್ವಾಮಿ-ವಿಜಯೇಂದ್ರ ‘ಸಮನ್ವಯ’ ಸಭೆ ನಡೆಸಿದಾಗಲೂ, ಒಟ್ಟಿಗೆ ಕೂತು ದಿನಾಂಕ ನಿಗದಿ ಮಾಡೋಣ ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ ಚನ್ನಮ್ಮನವರ ಉತ್ತರಾಧಿ ಕ್ರಿಯೆಗಳು ಮುಕ್ತಾಯವಾದ ಬಳಿಕ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಿಜೆಪಿ ನಾಯಕರೊಂದಿಗೆ ಚರ್ಚಿಸದೇ, ಏಕಾಏಕಿ ಬಿಡದಿ ಚಲೋ ಘೋಷಿಸಿದರು. ನಿಖಿಲ್ ಈ ಘೋಷಣೆ ಮಾಡಿದ ಬಳಿಕ ಈ ಪಾದಯಾತ್ರೆಯಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡರು. ಅದರಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಾದಯಾತ್ರೆಯಲ್ಲಿ ಭಾಗವಹಿಸದೇ ತಮ್ಮ ಪರೋಕ್ಷ ಅಸಮಾಧಾನವನ್ನು ಹೊರಹಾಕಿದ್ದರು.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ‘ಜನಾಭಿಪ್ರಾಯ’ ಮೂಡಿಸಲು ಸಿಕ್ಕಿರುವ ಅತ್ಯುತ್ತಮ ಅವಕಾಶವನ್ನು ‘ಸಮನ್ವಯತೆ’ ದೃಷ್ಟಿಯಿಂದ ಮೈತ್ರಿ ಪಕ್ಷಗಳು ಹಾಳು ಮಾಡಿಕೊಳ್ಳು ತ್ತಿವೆಯೇ ಎನ್ನುವ ಅನುಮಾನ ಶುರುವಾಗುತ್ತಿದೆ. ಮೈತ್ರಿ ಘೋಷಣೆಯಾದಾಗಿನಿಂದಲೂ ಜೆಡಿಎಸ್‌ನ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು, ರಾಜ್ಯ ಬಿಜೆಪಿ ನಾಯಕರೊಂದಿಗೆ ಸಮನ್ವಯಕ್ಕಿಂತ ದಿಲ್ಲಿ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಆದ್ದರಿಂದ ಎಲ್ಲವನ್ನೂ ಅಲ್ಲಿಂದಲೇ ಒಪ್ಪಿಗೆ ಪಡೆದು ಹೆಜ್ಜೆ ಇಡುತ್ತಿರುವುದು ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಈಗಲೂ ಪೂರ್ಣ ಪ್ರಮಾಣದಲ್ಲಿ ಒಂದಾಗಿಲ್ಲ. ಈ ಹಿಂದೆ ಮುಡಾ ವಿಷಯದಲ್ಲಿ ಬಿಜೆಪಿ ನಡೆಗೆ ಜೆಡಿಎಸ್ ಮುನಿಸಿಕೊಂಡರೆ, ಇದೀಗ ಬಿಡದಿ ಟೌನ್‌ಶಿಪ್ ವಿಷಯದಲ್ಲಿ ಜೆಡಿಎಸ್ ನಡೆಗೆ ಬಿಜೆಪಿ ಮುನಿಸಿಕೊಂಡು ಅಂತರ ಕಾಯ್ದುಕೊಳ್ಳುತ್ತಿದೆ. ಇದರಿಂದ ಮುಟ್ಟಬೇಕಾದ ಗುರಿಯನ್ನು ಮುಟ್ಟಲು ಎರಡೂ ಪಕ್ಷಗಳಿಗೂ ಸಾಧ್ಯವಾಗುತ್ತಿಲ್ಲ. ಆದರೀಗ ನೈಸ್ ವಿಷಯದಲ್ಲಿ ಒಟ್ಟಿಗೆ ಹೋರಾಡುವ ಮಾತುಗಳನ್ನು ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಎರಡೂ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಆದರೆ ನೈಸ್ ಹೋರಾಟದಲ್ಲಾದರೂ ಎರಡೂ ಪಕ್ಷಗಳ ನಡುವೆ ಸಮನ್ವಯತೆ ಸಾಧ್ಯವೇ ಅಥವಾ ಈ ಹಿಂದಿನ ಹೋರಾಟಗಳ ರೀತಿಯಲ್ಲಿ ಈ ಹೋರಾಟದಲ್ಲೂ ಭಿನ್ನದಾರಿಯಲ್ಲಿ ಎರಡೂ ಪಕ್ಷಗಳು ಸಾಗುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author