ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ನಿಸರ್ಗ ಎಂದಾಕ್ಷಣ ಮನುಷ್ಯ ನೆನಪಾಗುತ್ತಾನಾ ?

ಪ್ರಕೃತಿಯೊಂದಿಗೆ ಕ್ಷಿಪ್ತವಾದ ಪ್ರತಿಯೊಂದು ವಸ್ತುವೂ, ಕಾರ್ಯವೂ ಪರಮಪವಿತ್ರ. ಆದರೆ ಆ ಪಾವಿತ್ರ್ಯದ ಕೀಲು ಕಳಚುತ್ತಿರುವುದು ಮನುಷ್ಯ. ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿತ್ಯ ವೂ ಅತ್ಯಾಚಾರಗೈಯುತ್ತಿರುವ ಮನುಷ್ಯ, ಬದುಕಲು ಅತ್ಯವಶ್ಯವಾದ ಪ್ರಾಣವಾಯುವನ್ನು ನೀಡುವ ಮರವನ್ನು ಕಡಿಯುವುದರಲ್ಲೂ ದಾಕ್ಷಿಣ್ಯ ತೋರುತ್ತಿಲ್ಲ.

ವಿದೇಶವಾಸಿ

ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿತ್ಯವೂ ಅತ್ಯಾಚಾರಗೈಯುತ್ತಿರುವ ಮನುಷ್ಯ, ಬದುಕಲು ಅತ್ಯವಶ್ಯವಾದ ಪ್ರಾಣವಾಯುವನ್ನು ನೀಡುವ ಮರವನ್ನು ಕಡಿಯುವು ದರಲ್ಲೂ ದಾಕ್ಷಿಣ್ಯ ತೋರುತ್ತಿಲ್ಲ. ಮರವನ್ನು ಕಡಿಯುವುದೂ ಒಂದೇ, ತನ್ನ ಶ್ವಾಸಕೋಶ ವನ್ನು ಕತ್ತರಿಸಿಕೊಳ್ಳುವುದೂ ಒಂದೇ ಎಂಬ ಜ್ಞಾನವೂ ಈತನಿಗಿಲ್ಲ. ದೈವದತ್ತವಾಗಿ ಬಂದದ್ದನ್ನು ಉಳಿಸಿಕೊಳ್ಳಲು ಆಗದಿದ್ದಾಗ ಪರ್ಯಾಯ ವ್ಯವಸ್ಥೆಯೊಂದೇ ದಾರಿ.

ನಿಸರ್ಗವೆಂದರೆ ನಮಗೆ ನೆನಪಾಗುವುದು ಗಿಡ-ಮರಗಳು, ಹುಲ್ಲುಗಾವಲು, ಹೂವು-ಹಣ್ಣು, ನದಿ-ಸರೋವರಗಳು, ಗಿರಿಶಿಖರಗಳು. ಈ ಪಟ್ಟಿಯಿಂದ ಹೊರಗೆ ಉಳಿಯುವುದು ಮನುಷ್ಯ ಮಾತ್ರ. ‘ನಿಸರ್ಗ’ ಎಂದಾಕ್ಷಣ ಎಂದಾದರೂ ಮುನುಷ್ಯ ನೆನಪಾಗುತ್ತಾನಾ? ಖಂಡಿತ ಇಲ್ಲ. ಒಂದೊಮ್ಮೆ ನೆನಪಾದರೂ ಖಳನಾಯಕನಾಗಿಯೇ ಹೊರತು ನಾಯಕನಾಗಿ ಅಲ್ಲ, ಸೇವಕನಾಗಿಯೂ ಅಲ್ಲ. ನಿಜ, ಪ್ರಕೃತಿಯಲ್ಲಿ ಸೇವಕನಿಗೂ ರಾಜಮರ್ಯಾದೆ, ಅಲ್ಲಿ ಕನಿಷ್ಠ ಎಂಬುದಿಲ್ಲ.

ಪ್ರಕೃತಿಯೊಂದಿಗೆ ಕ್ಷಿಪ್ತವಾದ ಪ್ರತಿಯೊಂದು ವಸ್ತುವೂ, ಕಾರ್ಯವೂ ಪರಮಪವಿತ್ರ. ಆದರೆ ಆ ಪಾವಿತ್ರ್ಯದ ಕೀಲು ಕಳಚುತ್ತಿರುವುದು ಮನುಷ್ಯ. ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ನಿತ್ಯವೂ ಅತ್ಯಾಚಾರಗೈಯುತ್ತಿರುವ ಮನುಷ್ಯ, ಬದುಕಲು ಅತ್ಯವಶ್ಯವಾದ ಪ್ರಾಣವಾಯು ವನ್ನು ನೀಡುವ ಮರವನ್ನು ಕಡಿಯುವುದರಲ್ಲೂ ದಾಕ್ಷಿಣ್ಯ ತೋರುತ್ತಿಲ್ಲ.

ಮರವನ್ನು ಕಡಿಯುವುದೂ ಒಂದೇ, ತನ್ನ ಶ್ವಾಸಕೋಶವನ್ನು ಕತ್ತರಿಸಿಕೊಳ್ಳುವುದೂ ಒಂದೇ ಎಂಬ ಜ್ಞಾನವೂ ಈತನಿಗಿಲ್ಲ. ದೈವದತ್ತವಾಗಿ ಬಂದದ್ದನ್ನು ಉಳಿಸಿಕೊಳ್ಳಲು ಆಗದಿದ್ದಾಗ ಪರ್ಯಾಯ ವ್ಯವಸ್ಥೆಯೊಂದೇ ದಾರಿ. ಅಂಥ ದಾರಿಗಳಲ್ಲೊಂದು ಕೃತಕ ಉದ್ಯಾನ ಅಥವಾ ಪಾರ್ಕ್.

ಇದನ್ನೂ ಓದಿ: Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

ಸೌದಿ ಅರೇಬಿಯಾದ ನನ್ನ ಮನೆಯ ಹಿಂಭಾಗದಲ್ಲೊಂದು ಸುಂದರ ಉದ್ಯಾನವಿದೆ. ರಣ ಮರುಭೂಮಿಯ ದೇಶದ ಪ್ರಮುಖ ನಗರಗಳಲ್ಲೊಂದಾದ ದಮಾಮ್‌ನ ಮಧ್ಯಭಾಗ ದಲ್ಲಿರುವ ಇದು, ಉಳಿದ ಉದ್ಯಾನಗಳಿಗಿಂತ ಒಂದು ಸ್ತರ ಮೇಲೆ. ಉದ್ಯಾನದೊಳಗೆ ಕಬ್ಬಿಣದ ಬೇಲಿಗೆ ತಾಗಿಕೊಂಡಂತೆ, ಒಂದಕ್ಕೊಂದು ಹೊಂದಿಕೊಂಡ ಇಟ್ಟಿಗೆಗಳಿಂದ ನಿರ್ಮಿಸಿದ ನಡಿಗೆಯ ಮಾರ್ಗವಿದೆ.

ಇಲ್ಲಿ ಒಂದು ಸುತ್ತು ಹಾಕಿದರೆ, ಬರೋಬ್ಬರಿ ಎರಡೂವರೆ ಕಿ.ಮೀ. ಆಗುತ್ತದೆ. ಉದ್ಯಾನ ದೊಳಗೆ ಕಾರ್ ಪಾರ್ಕಿಂಗ್, ಮಕ್ಕಳಿಗೆ ಆಡಲು ಉಯ್ಯಾಲೆ-ಜಾರುಬಂಡಿಯಂಥ ಸೌಲಭ್ಯ ಗಳಿವೆ. ಜಾರುಬಂಡಿ ಇರುವೆಡೆ ಸ್ವಲ್ಪ ಮರಳು, ಡಾಂಬರ್ ಹಾಕಿದ ಕಾರ್ ಪಾರ್ಕಿಂಗ್ ಮತ್ತು ಒಳಗಿನ ರಸ್ತೆಯ ಭಾಗ ಬಿಟ್ಟರೆ, ಉಳಿದೆಲ್ಲೆಡೆ ಹಸಿರುಮಯ.

ಇಲ್ಲಿ ಖರ್ಜೂರ, ತಾಳೆ ಸೇರಿದಂತೆ 500 ಮರಗಳಿವೆ. ಎಲ್ಲವೂ ೨೫-೩೦ ಅಡಿಗಿಂತಲೂ ಎತ್ತರ ಬೆಳೆದುನಿಂತು ಭೂಮಿಗೆ ತಂಪೆರೆಯುತ್ತಿವೆ. ನಡುನಡುವೆ ಅಲಂಕಾರಿಕ ಗಿಡಗಳು, ಒಂದು ಮಲ್ಲಿಗೆ ಬಳ್ಳಿ ಇತ್ಯಾದಿಗಳಿವೆ. ಇಷ್ಟೆಲ್ಲ ಇರುವ ಉದ್ಯಾನಕ್ಕೊಂದು ಹೆಸರಿಲ್ಲ.

Screenshot_7 R

ಒಂದಿಷ್ಟು ಕೆಲಸಗಾರರು ಮುಂಜಾನೆ ೫ಕ್ಕೆ ಬಂದು ಉದ್ಯಾನವನ್ನು ಗುಡಿಸಿ, ಹುಲ್ಲುಹಾಸು ಮತ್ತು ಗಿಡಗಳಿಗೆ ನೀರು ಹಾಯಿಸಿ ನಿರ್ಗಮಿಸುತ್ತಾರೆ. ಸಾಕಷ್ಟು ವರ್ಷಗಳಿಂದ ಈ ಉದ್ಯಾನ ವನ್ನು ಹೊರಗಿನಿಂದಲೇ ನೋಡುತ್ತಿದ್ದೆ, ಒಮ್ಮೆಯೂ ಒಳಗೆ ಕಾಲಿಟ್ಟಿರಲಿಲ್ಲ. ಕೆಲ ತಿಂಗಳ ಹಿಂದೆ ಒಮ್ಮೆ ಉದ್ಯಾನದ ಒಳಗೆ ಹೋಗಿ ನೋಡೋಣವೆಂದು ಹೋದೆ.

ಅಷ್ಟೇ, ‘ಲವ್ ಅಟ್ ಫಸ್ಟ್ ಸೈಟ್’ ಅಂತಾರಲ್ಲಾ, ಹಾಗಾಯಿತು! ಈ ಮೊದಲು ನಾನೆಂದೂ ಸತತ ೩ ದಿನಕ್ಕಿಂತ ಹೆಚ್ಚು ವಾಕ್ ಮಾಡಿದ ದಾಖಲೆಯಿಲ್ಲ; ಈ ಉದ್ಯಾನ ಅದೆಷ್ಟು ಆಪ್ತ ವಾಯಿತೆಂದರೆ, ಪ್ರತಿನಿತ್ಯ ಬೆಳಗ್ಗೆ ೨ ಸುತ್ತು ನಡಿಗೆ. ಆ ಸೆಳೆತವೇ ನನ್ನನ್ನು ಮುಂಜಾನೆ ಬೇಗ ಎಬ್ಬಿಸಿಬಿಡುತ್ತಿತ್ತು.

ಒಮ್ಮೆ ಅದ್ಯಾಕೋ ಬೆಳಗ್ಗೆ ವಾಕಿಂಗ್ ಹೋಗಲು ಆಗಿರಲಿಲ್ಲ, ರಾತ್ರಿಯ ವಾತಾವರಣ ಹೇಗಿರುತ್ತದೆಂದು ನೋಡಲು ಹೋದೆ. ಅಂದು ಅಚ್ಚರಿಯೆಂಬಂತೆ ಒಂದು ಬಿಳಿ ಬಣ್ಣದ ಮೊಲ ಎದುರಾಯಿತು. ಸರಿಯಾಗೇ ಓದಿದ್ದೀರಿ- ‘ಮೊಲ ಎದುರಾಯಿತು’.

ಮರುಭೂಮಿಯ ಮಧ್ಯೆ ಉದ್ಯಾನವನ್ನು ಮಾಡುವುದೇ ಹರಸಾಹಸ, ಅದರಲ್ಲಿ ಮೊಲವೂ ಇದೆ ಎಂದರೆ ನಂಬಲಾಗಲಿಲ್ಲ. ಯಾರಾದರೂ ತಂದುಬಿಟ್ಟಿರಬಹುದಾ? ಅಷ್ಟು ಚೆಂದದ ಮೊಲವನ್ನು ನೋಡಿದರೆ, ವೈರಾಗ್ಯ ಬರಲು ಸಾಧ್ಯವೇ ಇಲ್ಲ. ಒಂದೊಮ್ಮೆ ಮೊಲ ಸಾಕಣೆ ಸಾಕೆನಿಸಿದರೂ, ಬಹುತೇಕವಾಗಿ ಅದರ ಅಂತ್ಯ ಊಟದ ತಟ್ಟೆಯಲ್ಲೇ ಹೊರತು ಉದ್ಯಾನ ದಲ್ಲಲ್ಲ.

ಅದೂ ಅಲ್ಲದೆ, ಬೇಡ ಎಂದರೆ ಹಣಕ್ಕೆ ಖರೀದಿಸುವ ಪೆಟ್ ಶಾಪ್‌ಗಳೂ ಇಲ್ಲಿವೆ. ಅಂದರೆ ಅದು ಯಾರೂ ಬಿಟ್ಟು ಹೋಗಿರಲು ಸಾಧ್ಯವಿಲ್ಲ. ಮಿಕ್ಕ ಸಾಧ್ಯತೆಯೆಂದರೆ, ಅಕ್ಕ ಪಕ್ಕದಲ್ಲಿನ ಸಾಕಿದವರ ಮನೆಯಿಂದ ತಪ್ಪಿಸಿಕೊಂಡು ಬಂದಿರಬಹುದು. ಆ ಸಾಧ್ಯತೆಯೇ ಹೆಚ್ಚು. ಆದರೆ ತಪ್ಪಿಸಿಕೊಂಡ ಮೊಲಕ್ಕೆ ಹತ್ತಿರದಲ್ಲೇ ತಾನು ಬದುಕಬಲ್ಲ ಸ್ಥಳವೊಂದಿದೆ ಎಂದು ತಿಳಿದ್ದಾದರೂ ಹೇಗೆ? ಅದಕ್ಕೆ ಮಾರ್ಗದರ್ಶನ ಮಾಡಿದ್ದು ಯಾರು? ಬಹುಶಃ ಅದೇ ಪ್ರಕೃತಿ ನಿಯಮ. ಏನೇ ಇರಲಿ, ಕಂಡ ಕ್ಷಣದಿಂದಲೇ ಅದು ಹೃದ್ಯವಾಯಿತು.

ಮರುದಿನ ವಾಕಿಂಗ್‌ಗೆ ಹೋಗುವಾಗ ಒಂದು ಗಜ್ಜರಿ ಒಯ್ದೆ. ತಿನ್ನದೆ ಎಷ್ಟು ದಿನವಾಗಿ ತ್ತೋ? ನಿಮಿಷಾರ್ಧದಲ್ಲಿ ತಿಂದು ಮುಗಿಸಿತು. ಅಂದಿನಿಂದ ಪ್ರತಿ ರಾತ್ರಿ ‘ಕ್ಯಾರೆಟ್ ವಾಕ್’ ಮುಂದುವರಿಯಿತು. ೨ ವಾರದ ನಂತರ ಒಮ್ಮೆ ಬಿಳಿಯ ಮೊಲದೊಂದಿಗೆ ಬೂದು ಬಣ್ಣದ ಮೊಲ, ನಂತರ ಇನ್ನೊಂದು ಹೀಗೆ ೩ ಮೊಲಗಳು ಕಾಣಿಸಿಕೊಂಡವು.

ಆ ಮೂರರ ವಾಸ್ತವ್ಯವೂ ಒಂದೇ ಪೊದೆಯಲ್ಲಿ. ಅಲ್ಲಿಗೆ ರಾತ್ರಿ ವಾಕ್ ನ ಬಜೆಟ್ ೩ ಗಜ್ಜರಿಗೆ ಏರಿತು. ದಿನಗಳೆದಂತೆ, ವಾಕ್ ಮಾಡಲು ಮನಸ್ಸಿಲ್ಲದಿದ್ದರೂ ಮೊಲಕ್ಕೆ ಗಜ್ಜರಿ ಕೊಡಲಾ ದರೂ ಹೋಗಬೇಕು ಎನ್ನುವಷ್ಟು ಬಾಂಧವ್ಯ ಬೆಳೆಯಿತು. ಹೀಗಿರುವಾಗ ಒಂದು ದಿನ ೫-೬ ಪುಂಡು ಹುಡುಗರು ಅದನ್ನು ಹಿಡಿಯಲು ಯತ್ನಿಸುತ್ತಿದ್ದರು.

ಅವರನ್ನೇನೋ ಗದರಿಸಿ ಕಳಿಸಿದರೆ, ಮರುದಿನ ಯುವಕರ ತಂಡವೊಂದು ಸಿದ್ಧವಾಗಿ ಬಂದಿತ್ತು. ಅವರಲ್ಲಿ ವಾದಕ್ಕೇ ನಿಲ್ಲಬೇಕಾಯಿತು. ಈ ಬೇಸಗೆಯ ತಾಪದಿಂದ ಮೊಲವನ್ನು ಬಚಾವು ಮಾಡಲು ಬಂದಿದ್ದೇವೆ ಎಂದು ವಾದಿಸುತ್ತಿದ್ದ ಯುವಕರ ಕೈಯಲ್ಲಿ ದೊಡ್ಡ ಬಡಿಗೆಗಳಿದ್ದವು.

ಸ್ಥಳೀಯ ಯುವಕರೊಂದಿಗೆ ತಲೆ ಚಚ್ಚಿಕೊಳ್ಳುವುದು ಬೇಡ ಎಂದುಕೊಂಡು, ಭಾರವಾದ ಮನಸ್ಸಿನಿಂದಲೇ ಅಲ್ಲಿಂದ ಹೊರಟೆ. ಆದರೆ, ಮೂರೂ ಮೊಲಗಳ ಆಯುಷ್ಯ ಗಟ್ಟಿ ಯಾಗಿದೆ ಎಂದು ಮರುದಿನ ಸಾಬೀತಾಗಿತ್ತು. ಅಂದಿನಿಂದ ಇಂದಿನವರೆಗೂ ಕ್ಯಾರೆಟ್ ವಾಕಿಂಗ್ ನಿರಂತರವಾಗಿದೆ. ಮನುಷ್ಯ ಕೊಲ್ಲುವ ವಿದ್ಯೆ ಕಲಿತರೆ, ಪ್ರಾಣಿಗಳು ಬದುಕುವ ವಿದ್ಯೆಯನ್ನೂ ಕಲಿತಿವೆ!

ಆ ವಿದ್ಯೆ ಅವನ್ನು ಇನ್ನೆಷ್ಟು ದಿನ ಬದುಕಿಸಬಲ್ಲದೋ ಗೊತ್ತಿಲ್ಲ! ವಿಭಿನ್ನ ವ್ಯಕ್ತಿತ್ವಗಳು ನಮಗೆ ಕಾಣಸಿಗುವ ಸ್ಥಳಗಳಲ್ಲಿ ಉದ್ಯಾನವೂ ಒಂದು. ಆರೋಗ್ಯ ಸುಧಾರಿಸಿಕೊಳ್ಳಲು ಬರುವವರು, ಇದ್ದ ಆರೋಗ್ಯ ನಿಭಾಯಿಸಿಕೊಳ್ಳಲು ಬರುವವರು, ಬೇರೆಯವರ ಆರೋಗ್ಯ ಹಾಳುಗೆಡವಲು ಬರುವವರು, ಎಲ್ಲರನ್ನೂ ಒಟ್ಟಿಗೇ ನೋಡಬಹುದಾದ ಸ್ಥಳ ಅದು.

ಒಂದಿಷ್ಟು ಜನ ಓಡುತ್ತಿರುತ್ತಾರೆ, ಒಂದಿಷ್ಟು ಜನ ಆಡುತ್ತಿರುತ್ತಾರೆ, ಒಂದಿಷ್ಟು ಮಂದಿ ಆಟ-ವಿಹಾರದ ನೆಪದಲ್ಲಿ ಅರಿವಿದ್ದೋ ಇಲ್ಲದೆಯೋ ವಾತಾವರಣ ಹಾಳುಗೆಡಹುವಲ್ಲಿ ನಿರತರಾಗಿರುತ್ತಾರೆ. ಈ ಉದ್ಯಾನದಲ್ಲಿ ಸಂಜೆ ಫ್ರಿಸ್ಬೀ, ಕ್ರಿಕೆಟ್, ಫುಟ್‌ಬಾಲ್ ಆಡಲು, ಮನೆಯವರೊಂದಿಗೆ, ಮಕ್ಕಳೊಂದಿಗೆ ವಿಹಾರಕ್ಕೆ ಬರುವವರಿದ್ದಾರೆ.

ಯಾವ ತಕರಾರಿಲ್ಲ, ಉದ್ಯಾನವಿರುವುದೇ ಅದಕ್ಕೆ. ಆದರೆ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ಒಂದು ಶಿಷ್ಟಾಚಾರ ಇರುತ್ತದೆ. ಆಯಾ ಸ್ಥಳಕ್ಕೆ ಕೊಡಬೇಕಾದ ಮರ್ಯಾದೆಯನ್ನು ನಾವು ಕೊಡಲೇಬೇಕು. ಕೆಲವರು ಉದ್ಯಾನಕ್ಕೆ ಬಂದು ಊಟ-ಉಪಾಹಾರ ಸೇವಿಸುವುದು ಸಾಮಾನ್ಯ. ಒಂದು ವರ್ಗದವರು ತಾವು ಬೀರಿದ ಎಲ್ಲ ಕಸವನ್ನೂ ಎತ್ತಿ ಕಸದಬುಟ್ಟಿಗೆ ಹಾಕಿ ಹೋಗುತ್ತಾರೆ, ಒಳ್ಳೆಯದು. ಇನ್ನೊಂದು ವರ್ಗದವರಿದ್ದಾರೆ, ಉದ್ಯಾನಕ್ಕೆ ಬಂದಾಗ ಇದ್ದಕ್ಕಿದ್ದಂತೆ ಅವರೊಳಗೆ ಹುದುಗಿದ್ದ ‘ಪರೋಪಕಾರಾರ್ಥಂ ಇದಂ ಶರೀರಂ’ ಮಂತ್ರ ಜಾಗೃತಗೊಳ್ಳುತ್ತದೆ.

ಅವರ ಔದಾರ್ಯ ತುಳುಕುವುದು ಇಲ್ಲಿ ಮಾತ್ರ. ತಾವು ತಿಂದು ಬಿಟ್ಟ, ಕೆಳಗೆ ಬೀರಿದ ಆಹಾರವನ್ನು ಹಕ್ಕಿಗಳು ತಿಂದು ಬದುಕಲಿ ಎಂಬ ಉದಾರ ಮನಸ್ಸು ಅವರದ್ದು. ಇಂಥವರು ಬಿಟ್ಟು ಹೋಗದಿದ್ದರೆ ಬಹುಶಃ ಹಕ್ಕಿಗಳು ಬದುಕುತ್ತಲೇ ಇರಲಿಲ್ಲವೇನೋ? ಅದಿರಲಿ, ಹಕ್ಕಿಗಳು ಪ್ಲಾಸ್ಟಿಕ್, ಚೂಯಿಂಗ್ ಗಮ, ಕೋಳಿಯ ಕಾಲು, ಮೀನಿನ ಮೂಳೆ ಯನ್ನೂ ತಿನ್ನುತ್ತವಾ? ಅವರು ಕಲಿತದ್ದು ಹೆಚ್ಚಾಯಿತಾ ಅಥವಾ ನಾವು ಕಲಿತದ್ದೇ ಕಡಿಮೆ ಆಯಿತಾ!

ಒಮ್ಮೆ ಈ ಉದ್ಯಾನದ ಹುಲ್ಲುಹಾಸಿನ ಮೇಲೆ ಇಬ್ಬರು (ಭಾರತೀಯರೇ) ಸುಮ್ಮನೆ ವಾಲಿಬಾಲ್ ಆಡುತ್ತಿದ್ದುದನ್ನು ನೋಡಿದೆ. ಮಾರನೇ ದಿನ ನೆಟ್ ತಂದು ಎರಡು ಕರೆಂಟ್ ಕಂಬಕ್ಕೆ ಬಿಗಿದು, ಕೋರ್ಟ್ ಅಳತೆಯಂತೆ ಗಡಿ ಗುರುತಿಸಲು ಹಗ್ಗ ಇಟ್ಟರು.

ಸರಿಹೋಗಲಿಲ್ಲವೇನೋ, ಮಾರನೇ ದಿನ ಹಗ್ಗದ ಬದಲು ಸುಣ್ಣದಲ್ಲಿ ಮಾರ್ಕ್ ಮಾಡಿ ದರು. ಅದೂ ಸರಿಯಾಗದಿದ್ದಾಗ ಗುದ್ದಲಿ, ಪಿಕಾಸಿ ತಂದು ಹುಲ್ಲನ್ನು ಕೆತ್ತಿ, ಎರಡು ಕಂಬ ಹುಗಿದು ನೆಟ್ ಕಟ್ಟಿ ಆಡತೊಡಗಿದರು. ಅವರ ತಯಾರಿ ನೋಡಿ ಬಹುಶಃ ದೊಡ್ಡ ತಂಡವೇ ಬರಬಹುದು ಅಂದುಕೊಂಡೆ. ಊಹೆ ಸರಿಯಾಗಿತ್ತು, ಈಗ ತಂಡ ಬೆಳೆದಿದೆ.

ಅವರೊಂದಿಗೆ ಇಬ್ಬರು ಮಕ್ಕಳು ಸೇರಿಕೊಂಡಿದ್ದಾರೆ. ಈಗ ಒಂದೊಂದು ತಂಡದಲ್ಲಿ ಬರೋಬ್ಬರಿ ಇಬ್ಬರಿದ್ದಾರೆ, ಒಮ್ಮೆಯೂ ಬಾಲ್ ಹಿಂತಿರುಗಿ ಸರ್ವೀಸ್ ಮಾಡಿದ ಕೋರ್ಟಿಗೆ ಹೋದದ್ದು ಕಂಡಿಲ್ಲ. ಹೊಂಡ ಹೊಡೆದದ್ದೇ ಸಾಧನೆ!

ಕೆಲವರಿಗೆ ಪಾರ್ಕ್ ಎಂದರೆ ಜೋಕ್! ಕೊನೆಯದಾಗಿ ಒಬ್ಬ ಬಾಬಾನ ಕತೆ ಹೇಳುತ್ತೇನೆ. ಬಾಬಾ ಎಂದರೆ ಸನ್ಯಾಸಿಯಲ್ಲ. ಅದು ಇಲ್ಲಿ ಹಿರಿಯರನ್ನು ಗೌರವದಿಂದ ಕರೆಯಲು ಬಳಸುವ ಪದ. ಮುಂಜಾನೆಯ ಸೂರ್ಯಕಿರಣ ಸೇವಿಸಲು ಕಾರಿನಲ್ಲಿ ಬರುವ ಸುಮಾರು ೮೦ ವರ್ಷದ ಬಾಬಾ, ಮಡಚಿಟ್ಟ ಕುರ್ಚಿಯನ್ನು ಡಿಕ್ಕಿಯಿಂದ ಹೊರತೆಗೆದು ಬಿಡಿಸಿ, ಸೂರ್ಯಾಭಿಮುಖವಾಗಿ ಹಾಕಿ ಕುಳಿತುಕೊಳ್ಳುತ್ತಾನೆ.

ಅರ್ಧ ಗಂಟೆ ಕಳೆಯುತ್ತಿದ್ದಂತೆ ಅವನ ಮೊಮ್ಮಗ ಬರುತ್ತಾನೆ. ಉದ್ಯಾನದ ಒಳಗೆ ಬರಲು ೩ ಪ್ರವೇಶ ದ್ವಾರಗಳಿದ್ದರೂ ಆತ ಕಬ್ಬಿಣದ ಬೇಲಿಯ ಮಧ್ಯೆ ನುಸುಳಿಯೇ ಬರುವುದು. 100 ಕಿಲೋ ತೂಗುವ ೧೬ ವರ್ಷದ ಮೊಮ್ಮಗ ತೂರಿಕೊಂಡು ಬರಲು ವ್ಯವಸ್ಥೆ ಮಾಡಿಕೊಟ್ಟ ವರು ಯಾರೋ ಗೊತ್ತಿಲ್ಲ. ವಿಶೇಷವೆಂದರೆ ಉದ್ಯಾನದ ಕಬ್ಬಿಣದ ಬೇಲಿಯ ಅಲ್ಲಲ್ಲಿ ೩-೪ ಕಡೆ ಈ ವ್ಯವಸ್ಥೆಯಿದೆ!

ಬರುವಾಗ ಮೊಮ್ಮಗನ ಕೈಯಲ್ಲಿ ಲೇಸ್ ಕಂಪನಿಯ ದೊಡ್ಡ ಚಿಪ್ಸ್ ಪ್ಯಾಕೆಟ್, ಒಂದೆರಡು ಸ್ಯಾಂಡ್‌ವಿಚ್, ಒಂದಿಷ್ಟು ಚಾಕಲೇಟ್, ಎರಡೂವರೆ ಲೀಟರ್‌ನ ಪೆಪ್ಸಿ ಬಾಟಲ್ ಇರುತ್ತವೆ. ಅಜ್ಜ-ಮೊಮ್ಮಗ ಕೂತು ಅರ್ಧ ಗಂಟೆಯಲ್ಲಿ ಅದನ್ನೆಲ್ಲ ಮುಗಿಸಿದ ನಂತರ ಮೊಮ್ಮಗ ಅಲ್ಲಿಂದ ಹೊರಡುತ್ತಾನೆ. ‌ಮುಂದೇನು ಎಂದು ಕೇಳಬೇಡಿ, ಇನ್ನೊಂದು ಅರ್ಧ ಗಂಟೆ ಬಿಟ್ಟು ಬಾಬಾನೂ ಹೊರಡುತ್ತಾನೆ. ಚಾಕಲೇಟ್ ಕಾಗದ, ಖಾಲಿ ಚಿಪ್ಸ್ ಪ್ಯಾಕೆಟ್, ಖಾಲಿ ಪೆಪ್ಸಿ ಬಾಟಲ್, ಪ್ಲಾಸ್ಟಿಕ್ ಚೀಲಗಳೆಲ್ಲವೂ ಅ ಬಾಕಿ!

ಹೇಳೋಣವೆಂದರೆ ದೇಶ, ಭಾಷೆ, ವಯಸ್ಸು ಎಲ್ಲವೂ ಅಡ್ಡ ಬರುತ್ತವೆ! ಸುಮ್ಮನೆ ತಲೆ ಕೊಡವಿಕೊಂಡು ಮುನ್ನಡೆಯಬೇಕು ಅಷ್ಟೇ. ಇದು ಬಹುತೇಕ ಎಲ್ಲೆಡೆ ಇದ್ದದ್ದೇ. ನಿತ್ಯ ನಿರಂತರ ಪೃಕೃತಿಯ ಮೇಲೆ ದೌರ್ಜನ್ಯ ಎಸಗುವವರ ನಡುವೆ ಕೆಲವರು ಬದಲಿ ವ್ಯವಸ್ಥೆ ಕಲ್ಪಿಸಿಕೊಡಲು ಮುಂದಾಗುತ್ತಾರೆ. ಪ್ರಕೃತಿಗೆ ಪರ್ಯಾಯವಾಗಿ ನಿರ್ಮಿಸಿದ ಕೃತಕ, ಉಚಿತ ಸೌಲಭ್ಯದ ಜವಾಬ್ದಾರಿಯನ್ನೂ ಬೇರೆಯವರೇ ಹೊರಬೇಕು ಎಂದರೆ, ಅದು ತೀರಾ ಅತಿಯಾಯಿತು!

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author