ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

ನನ್ನ ಪ್ರಕಾರ, ಈ ರೀತಿಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ವರ್ಷಕ್ಕೆ ಒಂದು ಬಾರಿ ಮಾತ್ರ ಆಗಬಾರದು. ಇದು ಪ್ರತಿ ತಿಂಗಳೂ ನಡೆಯಬೇಕು. ಪ್ರಶಸ್ತಿಯ ಸಂಖ್ಯೆಯನ್ನು ಎಪ್ಪತ್ತು-ಎಂಬತ್ತಕ್ಕೆ ಸೀಮಿತಗೊಳಿಸಬಾರದು. ಅದನ್ನು ಇನ್ನೂರು, ಮುನ್ನೂರಕ್ಕೆ ಏರಿಸಬೇಕು. ಏಳು ಕೋಟಿ ಜನಸಂಖ್ಯೆ ಇರುವ ನಾಡಿನಲ್ಲಿ ತಿಂಗಳಿಗೆ ಇನ್ನೂರು-ಮುನ್ನೂರು ಸಾಧಕರು ಸಿಗುವುದು, ಅಥವಾ ಅವರನ್ನು ಹುಡುಕುವುದು ಕಷ್ಟವೇನಲ್ಲ.

Kiran Upadhyay Column: ರಾಜ್ಯ ಪ್ರಶಸ್ತಿ: ಅರ್ಹರಿಗೆ ಮುಂದಿನ ದಾರಿ...!

-

ವಿದೇಶವಾಸಿ

ಮತ್ತೊಮ್ಮೆ ರಾಜ್ಯೋತ್ಸವ. ಮತ್ತೊಮ್ಮೆ ಕರ್ನಾಟಕದ ಹಬ್ಬ, ಕನ್ನಡದ ಹಬ್ಬ. ಮತ್ತೊಮ್ಮೆ ಸಡಗರ- ಸಂಭ್ರಮ. ಮತ್ತೊಮ್ಮೆ ರಾಜ್ಯ ಪ್ರಶಸ್ತಿ ಪ್ರಕಟಣೆ. ಮೊತ್ತಮೊದಲನೆಯದಾಗಿ, ಈ ವರ್ಷ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತರಾದವರಿಗೂ, ಪ್ರಶಸ್ತಿಗೆ ಭಾಜನರಾದವರಿಗೂ ಅಭಿನಂದನೆಗಳು.

ರಾಜ್ಯ ಪ್ರಶಸ್ತಿ ವಿಜೇತರಿಗೂ, ಪ್ರಶಸ್ತಿ ಪಡೆದುಕೊಂಡವರಿಗೂ ಅಭಿನಂದನೆಗಳು. ಪುರಸ್ಕೃತರಿಗಾದರೆ, ಇದು ಅವರ ಸಾಧನೆಗೆ ಸಂದ ಗೌರವ. ವಿಜೇತರಿಗಾದರೆ ಇದು ಅವರ ‘ಶ್ರಮ’ಕ್ಕೆ ಸಿಕ್ಕ ಫಲ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಹುಟ್ಟಿ ಬೆಳೆದರೂ, ಒಮ್ಮೆಯೂ ಹೆಸರು ಕೇಳದ ಕೆಲವು ಘಟಾನುಘಟಿಗಳು, ಮಹಾನ್ ಸಾಧಕರು ನಮ್ಮ ನಡುವೆಯೇ ಇzರೆ ಎಂದು ಮೊದಲ ಬಾರಿ ನಮಗೆ ತಿಳಿಸಿಕೊಟ್ಟ ರಾಜ್ಯ ಸರಕಾರಕ್ಕೆ ಮಹದಾಭಿನಂದನೆಗಳು, ನಮಸ್ಕಾರಗಳು.

ಇಂಥದೊಂದು ಪ್ರಶಸ್ತಿಯನ್ನು ಸರಕಾರ ಕೊಡದೇ ಇದ್ದಿದ್ದರೆ, ನಮ್ಮ ನಾಡಿನಲ್ಲಿ ‘ಎಂತೆಂಥ’ವರು ಇದ್ದಾರೆ ಎಂಬುದು ನಾವು ಸಾಯುವವರೆಗೂ ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಆದ್ದರಿಂದ, ಪ್ರತಿವರ್ಷವೂ ನಾವು ಕೇಳದ ಹೆಸರನ್ನು ರಾಜ್ಯ ಪ್ರಶಸ್ತಿಯ ಪಟ್ಟಿಗೆ ಸೇರಿಸಿ, ಅವರ ಬಗ್ಗೆ ನಮಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ ಎಲ್ಲರೂ ಶ್ಲಾಘನೀಯರು.

ಇದನ್ನೂ ಓದಿ: Kiran Upadhyay Column: ಹೀಗೊಂದು ದಾಖಲೆಯ ಯೋಗಾಯೋಗ...

ನನ್ನ ಪ್ರಕಾರ, ಈ ರೀತಿಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ವರ್ಷಕ್ಕೆ ಒಂದು ಬಾರಿ ಮಾತ್ರ ಆಗಬಾರದು. ಇದು ಪ್ರತಿ ತಿಂಗಳೂ ನಡೆಯಬೇಕು. ಪ್ರಶಸ್ತಿಯ ಸಂಖ್ಯೆಯನ್ನು ಎಪ್ಪತ್ತು-ಎಂಬತ್ತಕ್ಕೆ ಸೀಮಿತಗೊಳಿಸಬಾರದು. ಅದನ್ನು ಇನ್ನೂರು, ಮುನ್ನೂರಕ್ಕೆ ಏರಿಸಬೇಕು. ಏಳು ಕೋಟಿ ಜನಸಂಖ್ಯೆ ಇರುವ ನಾಡಿನಲ್ಲಿ ತಿಂಗಳಿಗೆ ಇನ್ನೂರು-ಮುನ್ನೂರು ಸಾಧಕರು ಸಿಗುವುದು, ಅಥವಾ ಅವರನ್ನು ಹುಡುಕುವುದು ಕಷ್ಟವೇನಲ್ಲ.

ಅದರಿಂದ ನಮಗೆ ಇನ್ನೂ ಒಂದಷ್ಟು ಜನರ ಹೆಸರು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಅವರ ಕ್ಷೇತ್ರ, ಅವರ ‘ಸಾಧನೆ’ ತಿಳಿದುಕೊಳ್ಳಲು ಅವಕಾಶ ಸಿಗುತ್ತದೆ. ನಾನೋ, ನನ್ನಂಥ ಅಜ್ಞಾನಿ ಗಳಿಗೋ ಒಂದಷ್ಟು ಸಾಕ್ಷಾತ್ಕಾರವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಒಂದಷ್ಟು ಪುಣ್ಯ ಕಟ್ಟಿಕೊಳ್ಳಬೇಕು. ಅಷ್ಟಕ್ಕೂ, ಹಿಂದಿನ ವರ್ಷ ಪ್ರಶಸ್ತಿ ಪಡೆದವರ ಹೆಸರು ಹೇಳಿ ಎಂದರೆ, ಅರವತ್ತೈದೋ-ಎಪ್ಪತ್ತೋ ಜನರ ಪೈಕಿ ಹತ್ತು ಜನರ ಹೆಸರೂ ನೆನಪಿಗೆ ಬರುವುದಿಲ್ಲ.

ಇದುವರೆಗಿನ ಎಲ್ಲ ರಾಜ್ಯಪ್ರಶಸ್ತಿ ವಿಜೇತರ ಹೆಸರು ಹೇಳಿ ಎಂದರೆ ನೂರು ಹೆಸರೂ ಹೇಳಲಾಗುವು ದಿಲ್ಲ. ಹಾಗಿರುವಾಗ, ವರ್ಷಕ್ಕೆ ಅರವತ್ತು, ಎಪ್ಪತ್ತು ಎಂಬ ನಿರ್ಬಂಧ ಹೇರದೇ, ‘ಯೋಗ್ಯರು’ ಎಂದೆನಿಸಿದಲ್ಲಿ ಎಷ್ಟೇ ಜನರಿದ್ದರೂ ಕೊಟ್ಟುಬಿಡಬೇಕು. ಆ ಒಂದು ದಿನದ ಮಟ್ಟಿಗಾದರೂ, ಒಂದಷ್ಟು ಜನರ ಹೆಸರು ಕೆಲವರ ಕಣ್ಣಿಗಾದರೂ ಬೀಳುತ್ತದೆ.

ರಾಜ್ಯ ಪ್ರಶಸ್ತಿ ಪ್ರಕಟವಾಗುವುದಕ್ಕೂ ಮೊದಲು, ಹಲವು ಜನ ವ್ಯಸ್ತರಾಗಿರಬಹುದು, ಕೆಲವು ವಿಭಾಗಗಳು ಕಾರ್ಯತತ್ಪರವಾಗಿರಬಹುದು, ಮಂತ್ರಿಗಳು, ಶಾಸಕರು ಒತ್ತಡದಲ್ಲಿರಬಹುದು. ಆದರೆ, ಪ್ರಶಸ್ತಿ ಪ್ರಕಟವಾದ ದಿನ ಎಲ್ಲರಿಗಿಂತ ಹೆಚ್ಚು ವ್ಯಸ್ತವಾಗಿರುವುದು ಗೂಗಲ್. ಈ ಗೂಗಲ್ ಒಂದು ಇಲ್ಲದಿದ್ದರೆ ಪ್ರಶಸ್ತಿ ಪಡೆದುಕೊಂಡವರ ಮಾಹಿತಿ ಹುಡುಕಲು ನಮಗೆ ಬಹಳ ಕಷ್ಟವಾಗುತ್ತಿತ್ತು. ಆದ್ದರಿಂದ, ಗೂಗಲ್ ಸಂಸ್ಥೆಗೂ ಧನ್ಯವಾದಗಳು.

ಪ್ರತಿ ತಿಂಗಳೂ ಪ್ರಶಸ್ತಿ ಪ್ರಕಟಿಸಬೇಕು ಎಂದಿದ್ದೇನಲ್ಲ, ಅದಕ್ಕೆ ಗೂಗಲ್ ಸಂಸ್ಥೆಯವರಿಂದಲೇ ಪ್ರಾಯೋಜಕತ್ವವನ್ನು ಪಡೆಯುವ ನಿಟ್ಟಿನಲ್ಲಿಯೋ, ಗೌರವಧನ ಪಡೆಯುವ ದಿಸೆಯಲ್ಲಿಯೋ ಸರಕಾರ ಪ್ರಯತ್ನಿಸಬೇಕು. ಆಗ ಪ್ರಶಸ್ತಿ, ವಿತರಣಾ ಸಮಾರಂಭ, ಇತ್ಯಾದಿಗಳಿಗೆ ತಗಲುವ ವೆಚ್ಚ ವನ್ನೂ ನಿಭಾಯಿಸಬಹುದು.

ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ, ಪ್ರಶಸ್ತಿ ವಿಜೇತರಿಂದಲೇ ಖರ್ಚನ್ನು ಭರಿಸುವಂತೆ ಕೇಳಿಕೊಳ್ಳಬೇಕು. ‘ನಮಗೆ ಪ್ರಶಸ್ತಿಯ ಮೊತ್ತ ಬೇಡ, ಪ್ರಶಸ್ತಿಯೊಂದೇ ಸಾಕು’ ಎನ್ನುವ ಆಕಾಂಕ್ಷಿ ಗಳೂ ನಮ್ಮ ನಡುವೆ ಸಾಕಷ್ಟಿದ್ದಾರೆ. ಅಲ್ಲ, ಪ್ರಶಸ್ತಿ ಸಿಗುತ್ತದೆ ಎಂದಾದರೆ ಸ್ವತಃ ಖರ್ಚು ಮಾಡಲು ಸಿದ್ಧವಾಗಿದ್ದವರೂ ಸಿಗಬಹುದು.

ಅದು ಕಷ್ಟ ಎಂದಾದರೆ, ಗೌರವಧನ ನೀಡುವುದನ್ನು ನಿಲ್ಲಿಸಬೇಕು. ಅದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ. ಮೊದಲೆಲ್ಲ ರಾಜ್ಯಪ್ರಶಸ್ತಿ ವಿಜೇತರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ನೀಡುತ್ತಿದ್ದರು. ಈಗ ಅದನ್ನು ನಿಲ್ಲಿಸಿzರಲ್ಲ, ಹಾಗೆಯೇ ಗೌರವಧನ ನೀಡುವುದನ್ನೂ ನಿಲ್ಲಿಸಬೇಕು. ಒಂದು ಶಾಲು ಹೊದೆಸಿ, ಹಾರ ಹಾಕಿ, ಹಣ್ಣಿನ ಬುಟ್ಟಿ ಇಟ್ಟು, ಫಲಕ ನೀಡಿ, ಟೋಪಿ ಹಾಕಿ, ಅಲ್ಲ, ಅಲ್ಲ... ಪೇಟ ತೊಡಿಸಿ ಕಳಿಸಿದರೆ ಆಯಿತಪ್ಪ!

ಯಾರು ತಕರಾರು ಮಾಡುತ್ತಾರೆ? ಒಂದು ವೇಳೆ ಮಾಡಿದರೂ, ಎಷ್ಟು ದಿನ ಮಾಡುತ್ತಾರೆ? ಅಷ್ಟಾಗಿಯೂ ಒಂದೊಮ್ಮೆ ಖರ್ಚಿನ ಕುರಿತಾಗಿಯೂ ಅಪಸ್ವರ ಎದ್ದಿತು ಅಂದುಕೊಳ್ಳಿ, ಪ್ರಶಸ್ತಿ ಗಳನ್ನು ಅಂಚೆಯ ಮುಖಾಂತರ ವಿಜೇತರ ಮನೆಯ ಬಾಗಿಲಿಗೇ ಕಳಿಸಿಕೊಡುವ ವ್ಯವಸ್ಥೆ ಮಾಡಬೇಕು. ಅದರಿಂದ ಅಂಚೆ ಇಲಾಖೆಗೂ ಸಹಾಯವಾಗುತ್ತದೆ. ಅಲ್ಲಿರುವವರಿಗೂ ಕೆಲಸ ಕೊಟ್ಟಂತಾಗುತ್ತದೆ. ‘ಅಂಚೆ ಇಲಾಖೆ ಅಳಿವಿನ ಅಂಚಿನಲ್ಲಿದೆ’ ಎನ್ನುವವರಿಗೂ ಉತ್ತರ ಕೊಟ್ಟಂತಾ ಗುತ್ತದೆ.

ಅಷ್ಟೇ ಅಲ್ಲ, ಆಯ್ಕೆ ಸಮಿತಿಯಲ್ಲಿಯೂ ಸಂಖ್ಯೆಯ ಮಿತಿ ಇರಬಾರದು. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅಥವಾ ಯಾರಿಗಾದರೂ ಪ್ರಶಸ್ತಿ ಕೊಡಬಾರದು ಎಂದು ಮನಸ್ಸಿದ್ದರೆ ಅಂಥವರನ್ನು ಆಯ್ಕೆ ಸಮಿತಿಗೆ ಸೇರಿಸಬೇಕು. ಆಯ್ಕೆ ಸಮಿತಿಯಲ್ಲಿಯೂ ಸದಸ್ಯರ ಸಂಖ್ಯೆಗೆ ಮಿತಿ ಇರಬಾರದು. ಒಬ್ಬ ಆಕಾಂಕ್ಷಿಗೆ ಒಬ್ಬ ಆಯ್ಕೆ ಸಮಿತಿಯ ಸದಸ್ಯರ ಶಿಫಾರಸಾದರೂ ಇರಬೇಕು.

ಅದರಿಂದ ಆಯ್ಕೆ ಸಮಿತಿಯವರು ಸೂಚಿಸಿದ ಅಥವಾ ಆರಿಸಿದ ಪ್ರತಿಯೊಬ್ಬನಿಗೂ ಪ್ರಶಸ್ತಿ ಲಭಿಸಿ ದಂತಾಗುತ್ತದೆ. ಆಯ್ಕೆ ಸಮಿತಿಗೆ ರಾಜ್ಯದಲ್ಲಿರುವ ಪ್ರತಿಯೊಂದು ಜಾತಿ, ಧರ್ಮ, ಜನಾಂಗ, ಬುಡ ಕಟ್ಟಿನವರನ್ನು ನೇಮಿಸಬೇಕು. ಇದರಿಂದ ಯಾರೂ ವಂಚಿತರಾಗುವುದಿಲ್ಲ. ಕೆಲಸ, ಸಂಪಾದನೆ ಇಲ್ಲದವರನ್ನು ಆಯ್ಕೆ ಸಮಿತಿಗೆ ಸೇರಿಸಿಕೊಂಡರಂತೂ ಇನ್ನೂ ಉತ್ತಮ. ಈ ನೆಪದದರೂ ಅವರಿಗೆ ಒಂದಷ್ಟು ಧನಸಹಾಯ, ಊಟ-ತಿಂಡಿ, ಭತ್ಯೆ ಇತ್ಯಾದಿಗಳನ್ನು ಸರಕಾರ ಕರುಣಿಸಿದಂತಾಗುತ್ತದೆ.

ಇನ್ನು, ಪ್ರಶಸ್ತಿ ಪಡೆಯಬೇಕಾದರೆ ಕನಿಷ್ಠ ಅರವತ್ತು ವರ್ಷವಾಗಿರಬೇಕು ಎಂಬ ನಿಯಮವನ್ನೂ ತೆಗೆಯಬೇಕು. ಹೇಗಿದ್ದರೂ ಆ ನಿಯಮವನ್ನು ಕಟ್ಟುನಿಟ್ಟಾಗಿ ಯಾವ ಸರಕಾರವೂ ಪಾಲಿಸುತ್ತಿಲ್ಲ ಎಂದಮೇಲೆ ಸುಮ್ಮನೆ ಹೆಸರು ಯಾಕೆ ಕೆಡಿಸಿಕೊಳ್ಳಬೇಕು? ಒಬ್ಬ ವ್ಯಕ್ತಿ ಐವತ್ತೊಂಬತ್ತು ವರ್ಷ ಕೆಲಸ ಮಾಡಿ ಅರವತ್ತು ವರ್ಷವಾಗುವುದರ ಒಳಗೇ ಶಿವನ ಪಾದ ಸೇರಿದರೆ, ಅಂಥವರಿಗೆ ಪ್ರಶಸ್ತಿ ಕೊಡದ ಪಾಪಪ್ರಜ್ಞೆ ಜೀವನಪರ್ಯಂತ ಕಾಡುವುದರಿಂದ ಬಚಾವಾಗಬೇಕು.

ಅಷ್ಟಕ್ಕೂ ಈ ‘ಅರವತ್ತ’ರ ಮಿತಿಯನ್ನು ತಂದದ್ದಾದರೂ ಏಕೆ? ನೌಕರಿಯ ವಿಷಯದ್ದಾದರೆ ಹೌದಪ್ಪ, ‘ನೀವು ಸಲ್ಲಿಸಿದ ಸೇವೆಗೆ ಧನ್ಯವಾದಗಳು, ಇನ್ನು ಮುಂದೆ ನೀವು ವಿಶ್ರಾಂತಿ ತೆಗೆದುಕೊಳ್ಳಿ, ಬೇರೆಯವರಿಗೂ ಅವಕಾಶ ಕೊಡಿ’ ಎಂದಾದೀತು. ಪ್ರಶಸ್ತಿ ಪಡೆಯುವವರಿಗೂ ಇದು ಲಾಗೂ ಆಗಬೇಕೇ? ಅಂದರೆ ಅವರೂ ಇನ್ನು ಮುಂದೆ ವಿಶ್ರಾಂತಿ ಪಡೆಯಬೇಕು ಎಂಬ ಅರ್ಥವೇ? ಹಾಗಾದರೆ, ‘ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚುತ್ತದೆ’, ‘ಇನ್ನಷ್ಟು ಕೆಲಸ ಮಾಡಲು ಸ್ಪೂರ್ತಿ ಸಿಗುತ್ತದೆ’ ಎಂಬುದೆಲ್ಲ ಬರೀ ಬೊಗಳೆಯೇ? ಆದ್ದರಿಂದ ವಯೋಮಿತಿಯ ನಿಯಮವನ್ನೂ ತೆಗೆಯಬೇಕು.

ಪ್ರತಿಯೊಬ್ಬ ಮಂತ್ರಿಗೂ, ಶಾಸಕರಿಗೂ, ಮೇಯರ್, ಕಾರ್ಪೊರೇಟರ್, ಪಂಚಾಯ್ತಿ-ಗ್ರಾಮಾಧ್ಯಕ್ಷ ರಿಗೂ, ಒಬ್ಬರೋ-ಇಬ್ಬರೋ ಎಂಬಂತೆ ಕೋಟಾ ಇಡಬೇಕು. ಮಠದ ಸ್ವಾಮೀಜಿಗಳು, ಚಲನ ಚಿತ್ರರಂಗದ ತಾರೆಯರು ಮೊದಲಾದವರನ್ನು ಈ ಪಟ್ಟಿಗೆ ಸೇರಿಸಿಕೊಳ್ಳಬೇಕು. ಇದರಿಂದ ಪ್ರತಿ ಜಿಗಷ್ಟೇ ಅಲ್ಲ, ವಿಧಾನಸಭೆಯ ಕ್ಷೇತ್ರಕ್ಕಷ್ಟೇ ಅಲ್ಲ, ಪ್ರತಿ ತಾಲೂಕಿಗೂ, ಸಾಧ್ಯವಾದರೆ ಪ್ರತಿ ಮಂಡಳಕ್ಕೂ, ಪಂಚಾಯಿತಿಗೂ, ಗ್ರಾಮಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬಹುದು.

ಇದರ ಜತೆಗೆ ಹೈಕಮಾಂಡ್‌ಗೆ ಎಂದು ಒಂದಷ್ಟು, ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿಗಳು, ಸಾಧ್ಯ ವಾದರೆ ಅವರ ಕಾರ್ಯದರ್ಶಿಗಳು, ಅವರ ಹೆಂಡತಿ (ಅಥವಾ ಗಂಡ), ಮಕ್ಕಳು, ಇತರೆ ಪ್ರಭಾವಿ ಗಳಿಗೂ ಒಂದಷ್ಟು ಕೋಟಾ ಇಟ್ಟು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳ ಮೇಲೆ ಇರುವ ಒತ್ತಡವನ್ನು ಕಡಿಮೆಮಾಡಿಕೊಳ್ಳಬೇಕು.

ಊಹೂಂ... ಅಷ್ಟೆಲ್ಲ ಜನರಿಗೆ ಪ್ರಶಸ್ತಿ ಕೊಡಬೇಕೆಂದರೆ ಅಷ್ಟು ಖರ್ಚಾಗುತ್ತದೆ ಅಂದು ಸಬೂಬು ಹೇಳಬಾರದು. ಸರಕಾರ ಖರ್ಚು ಮಾಡಿದಷ್ಟೂ ಮಂತ್ರಿಗಳಿಗೆ ಲಾಭ ಎಂದು ಜನರು ಮಾತನಾಡಿ ಕೊಳ್ಳುತ್ತಾರೆ ಎಂದು ತಿಳಿಯಬಾರದು. ಮಾತಾಡುವವರು ಮಾತಾಡಿಕೊಳ್ಳಲಿ. ಮಾತಾಡುವವರು ನಿಮ್ಮ ಮನೆಗೆ ರೇಷನ್ ತಂದುಹಾಕುವುದಿಲ್ಲ, ನಿಮ್ಮ ಖರ್ಚು-ವೆಚ್ಚ ನೋಡಿಕೊಳ್ಳುವುದಿಲ್ಲ.

ನಿಮ್ಮ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ. ಇನ್ನು ಪ್ರಶಸ್ತಿಯ ಆಕಾಂಕ್ಷಿಗಳಿಗೂ ಒಂದಷ್ಟು ನಿಯಮಗಳನ್ನು ಹಾಕಿಕೊಡಬೇಕು. ಆಯ್ಕೆ ಸಮಿತಿಯ ಸದಸ್ಯರು, ಮಂತ್ರಿಗಳು, ಶಾಸಕರು, ಇತ್ಯಾದಿ ಯಾರzದರೂ ಒಬ್ಬರ ಕೋಟಾದಲ್ಲಿ ಪ್ರಶಸ್ತಿ ಸಿಗುತ್ತದೆ ಎಂದಾದರೆ ಮಾತ್ರ ಅವರು ತಮ್ಮ ಅರ್ಜಿ ಸಲ್ಲಿಸಬೇಕು.

ಹಾಗೆ ಇಲ್ಲದಿದ್ದಲ್ಲಿ, ಅರ್ಜಿ ಸಲ್ಲಿಸಿ, ಸಮಯ, ಹಣ ಬರ್ಬಾದು ಮಾಡಬಾರದು. ಅರ್ಜಿಯಾದರೂ ಅಷ್ಟೇ, ಅನವಶ್ಯಕ, ಉದ್ದುದ್ದ ಬರೆದು ಕಾಗದ ಹಾಳುಮಾಡಬಾರದು. ಅರ್ಜಿ ಉದ್ದ ಇದ್ದಷ್ಟೂ ಹೆಚ್ಚು ಪರಿಸರ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅರ್ಜಿ ಒಂದು ಪುಟಕ್ಕೆ ಮೀಸಲಾಗಿರಬೇಕು. ಎರಡು ಪುಟದ ಅರ್ಜಿಯನ್ನು ಅಲ್ಲಿಯೇ ತಿರಸ್ಕರಿಸಬೇಕು, ಅಮಾನ್ಯ ಮಾಡಬೇಕು. ಒಂದು ಪುಟಕ್ಕಿಂತ ಹೆಚ್ಚಿನ ಅರ್ಜಿ ತಂದವರಿಗೆ ದಂಡ ಹಾಕಬೇಕು. ಆ ಹಣವನ್ನು ಬೇಕಾದರೆ ಶಾಲು, ಹಾರದ ಖರ್ಚಿಗೆ ಅಥವಾ ಅಂಚೆ ಇಲಾಖೆಗೆ ನೀಡುವ ಮೊತ್ತವನ್ನು ಭರಿಸಲು ಬಳಸಿಕೊಳ್ಳಬೇಕು.

ಎರಡು ಪುಟಕ್ಕಿಂತ ಹೆಚ್ಚಿನ ಅರ್ಜಿ ಕೊಟ್ಟವರ ವಿರುದ್ಧ, ಅದನ್ನು ಸ್ವೀಕರಿಸಿದರೆ ಸ್ವೀಕರಿಸಿದವರ ವಿರುದ್ಧ ಪರಿಸರವಾದಿಗಳು ಹೋರಾಟ ಮಾಡಬೇಕು. ಅದರಿಂದ ಖಾಲಿ ಕುಳಿತ ಕೆಲವು ಪರಿಸರ ವಾದಿಗಳಿಗೂ ಕೆಲಸ ಸಿಕ್ಕಂತಾಗುತ್ತದೆ.

ಯಾರ ಬಗ್ಗೆ ಗೊತ್ತಿಲ್ಲವೋ, ಅರ್ಜಿ ಓದಿ ಅವರ ಬಗ್ಗೆ ತಿಳಿದುಕೊಳ್ಳಬೇಕೋ, ಅಂಥವರಿಗೆ ಪ್ರಶಸ್ತಿ ಕೊಡಬಾರದು. ಅದಕ್ಕಿಂತ, ಕಾಲು ಸುತ್ತುವವರಿಗೆ, ಜೈಕಾರ ಹಾಕುವವರಿಗೆ, ಉಘೇ ಎನ್ನುವವರಿಗೆ, ಬೆಣ್ಣೆ ಹೊಸೆಯುವವರಿಗೆ, ಋಣ ತೀರಿಸಬೇಕು ಅಂದುಕೊಂಡವರಿಗೆ, ಪಕ್ಷಕ್ಕಾಗಿ ದುಡಿದವರಿಗೆ, ಚುನಾವಣೆಯಲ್ಲಿ ಸಹಾಯ ಮಾಡಿದವರಿಗೆ ಪ್ರಶಸ್ತಿ ಕೊಡಬೇಕು. ಅದರಿಂದ ಋಣ ಸಂದಾಯವೂ ಆಗುತ್ತದೆ, ಮುಂದಿನ ದಿನಗಳಲ್ಲಿ ಅವರು ಇನ್ನೂ ಹೆಚ್ಚು ‘ಈ’ ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗುತ್ತದೆ.

ಅವೆಲ್ಲ ಗ್ಯಾರಂಟಿ ಅಲ್ಲದಿದ್ದರೂ, ಪ್ರಯತ್ನಿಸುವುದರಲ್ಲಿ ಏನೂ ತಪ್ಪಿಲ್ಲ. ಏಕೆಂದರೆ, ಒಂದು ಕಾಲದಲ್ಲಿ ಪರಿಸರ ರಕ್ಷಣೆಗೆ ಹೋರಾಡಿ ಪ್ರಶಸ್ತಿ ಪಡೆದು ಈಗ ಸುಮ್ಮನೆ ಕುಳಿತಿರುವವರು, ಒಮ್ಮೆ ಮಾನವ ಹಕ್ಕಿಗೆ ಹೋರಾಡಿ ಈಗ ತೆಪ್ಪಗೆ ಬಿದ್ದಿರುವವರು, ಜ್ಞಾನಪೀಠದಂಥ ಪ್ರಶಸ್ತಿ ಸಂದ ನಂತರ ಒಂದು ಕಾಳಕ್ಷರ ಬರೆಯದೇ ಕೈಚೆಲ್ಲಿ ಕುಳಿತವರ ಉದಾಹರಣೆಯೂ ನಮ್ಮಲ್ಲಿದೆ.

ಆದ್ದರಿಂದ ಇಂಥ ಅಪವಾದಗಳಿಗೆಲ್ಲ ಕಿವಿ ಕೊಡಬಾರದು. ಹಾಗೆಯೇ, ಮುಂದೆ ಇದರ ಕುರಿತು ಯಾರೂ ತಕರಾರು ಮಾಡದಂತೆ ಇವನ್ನೆಲ್ಲ ಅಧಿಕೃತವಾಗಿಸಬೇಕು. ಇಷ್ಟಾಗಿಯೂ ಪ್ರಶಸ್ತಿ ಪ್ರಕಟ ವಾದ ನಂತರ ಅದರ ಕುರಿತಾಗಿ ಅಪಸ್ವರ ಎದ್ದರೆ, ತಲೆ ಕೆಡಿಸಿಕೊಳ್ಳಬೇಡಿ, ‘ಅರ್ಹರಿಗೆ ಮುಂದಿನ ಬಾರಿ’ ಎಂಬ ಮಾತನ್ನು ಹೇಳುತ್ತಿರಬೇಕು.

ಕೊನೆಯದಾಗಿ, ನಾನು ಕಳೆದ ಮೂರು ದಶಕಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿದ್ದೇನೆ. ಈ ರಾಷ್ಟ್ರಗಳೆಲ್ಲ ಇನ್ನೂ ಎಷ್ಟು ಹಿಂದಿವೆ ಎಂದೆನಿಸುತ್ತದೆ. ಈ ದೇಶಗಳಲ್ಲ ಇನ್ನೂ ‘ಈ’ ರೀತಿಯ ಪ್ರಶಸ್ತಿಗಳಿಲ್ಲ. ವರ್ಷಕ್ಕೊಮ್ಮೆ ಒಂದಷ್ಟು ಜನರನ್ನು ಆರಿಸುವುದು, ಅವರನ್ನೆಲ್ಲ ಒಂದು ಸಭಾಂಗಣಕ್ಕೆ ಕರೆದು ತರುವುದು, ಕುರ್ಚಿಯಲ್ಲಿ ಕೂರಿಸುವುದು, ಹಾರತುರಾಯಿ ತೊಡಿಸುವುದು, ಅವರಿಗೆ ಪ್ರೋತ್ಸಾಹಿಸು ವುದು, ಉತ್ತೇಜಿಸುವುದು.... ಛೇ, ಇದ್ಯಾವುದೂ ಇಲ್ಲಿ ಇಲ್ಲ.

ಅದಕ್ಕಾಗಿ ಆಯ್ಕೆ ಸಮಿತಿ, ಲಾಬಿ, ವಸೂಲಿ, ಬೆಣ್ಣೆ ಹೊಸೆಯುವಿಕೆ ಏನೂ ಇಲ್ಲ. ಇಲ್ಲ ಸರಕಾರ ಹೇಗೆ ನಡೆಯುತ್ತದೆಯೋ, ಜನ ಹೇಗೆ ಬದುಕುತ್ತಾರೆಯೋ ಆ ದೇವರೇ ಬಲ್ಲ. ಇಲ್ಲೂ ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಇಲ್ಲಿಯೂ ಕಲಾವಿದರಿದ್ದಾರೆ, ಸಾಹಿತಿಗಳಿದ್ದಾರೆ, ಸಾಧಕರಿದ್ದಾರೆ. ಸರಕಾರದ ಪ್ರಶಸ್ತಿಗಳಿಲ್ಲದೆಯೇ ಬದುಕುತ್ತಿzರೆ, ಚೆನ್ನಾಗಿಯೇ ಬದುಕುತ್ತಿದ್ದಾರೆ.

ಇಲ್ಲಿಯ ಸರಕಾರಗಳೂ ಅಷ್ಟೇ, ರಾಷ್ಟ್ರೀಯ ದಿವಸದಂದು ಪ್ರಶಸ್ತಿ ನೀಡುವ ಪದ್ಧತಿ ಇಟ್ಟು ಕೊಳ್ಳಲಿಲ್ಲ. ಆದರೂ ದೇಶ ಮುಂದೆ ಸಾಗುತ್ತಿದೆ. ಚೆನ್ನಾಗಿಯೇ ಮುಂದೆ ಸಾಗುತ್ತಿದೆ.