ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Naveen Sagar Column: ಕುತ್ತೇ...ವಿಜಯ್‌ ನಹೀ...ಜೋಸೆಫ್‌ ವಿಜಯ್‌ ಬೋಲೋ !

ವಿಜಯ್ ತನ್ನ ಶುರುವಿನ ದಿನಗಳಲ್ಲಿ ಅವಮಾನಕ್ಕೊಳಗಾಗಿದ್ದ, ಹಟ ಹೊತ್ತು ಮುಖ್ಯಮಂತ್ರಿಯಾಗಿ ಉತ್ತರಿಸಿದ್ದಾನೆ ಅಂತ, ಆತ ಒಳಗೆ ಬೇರುಬಿಟ್ಟು ಬೆಳೆದ, ಹಾಗೆ ಬೆಳೆದ ಹೀಗೆ ಬೆಳೆದ ಅಂತೆಲ್ಲ ಅವನನ್ನು ಹೊಗಳಲಾಗುತ್ತಿದೆ. ವಿಜಯ್ ಗೆಲುವನ್ನು ಅನುಮಾನಿ ಸಿದ್ದವರೇ ಈಗ ವಿಜಯ್ ಗೆಲ್ಲದಿರಲು ಸಾಧ್ಯವೇ ಇರಲಿಲ್ಲ ಅಂತ ಗೆದ್ದೆತ್ತಿನ ಬಾಲ ಹಿಡಿದಂತೆ ಮಾತನಾಡುತ್ತಿದ್ದಾರೆ.

ಪದಸಾಗರ

ತಮಿಳುನಾಡಿನ ಚುನಾವಣಾ ಫಲಿತಾಂಶ ಮತ್ತು ಜೋಸೆಫ್ ವಿಜಯ್‌ನ ಗೆಲುವಿನ ಕುರಿತಾದ ಚರ್ಚೆಗಳು ಹಾಗೂ ವಿಶ್ಲೇಷಣೆಗಳು ಇನ್ನಾದರೂ ಮುಗಿಯುತ್ತಿಲ್ಲ. ಹಲವು ಎಕ್ಸಿಟ್ ಪೋಲ್‌ಗಳ, ಮಾಧ್ಯಮಗಳ ಮತ್ತು ರಾಜಕೀಯ ಪಂಟರ್‌ಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಫಲಿತಾಂಶವಿದು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ವಿಜಯ್ ಗೆದ್ದಾದ ನಂತರ ಆತನ ವಿಜಯದ ಬಗ್ಗೆ ಇನ್ನಿಲ್ಲದ ಅತಿರೇಕದ ಹೊಗಳಿಕೆ ಗಳು ಮತ್ತು ಅತಿರಂಜಿತ ಕಥೆಗಳು ಶುರುವಾಗಿವೆ.

ವಿಜಯ್ ತನ್ನ ಶುರುವಿನ ದಿನಗಳಲ್ಲಿ ಅವಮಾನಕ್ಕೊಳಗಾಗಿದ್ದ, ಹಟ ಹೊತ್ತು ಮುಖ್ಯಮಂತ್ರಿಯಾಗಿ ಉತ್ತರಿಸಿದ್ದಾನೆ ಅಂತ, ಆತ ಒಳಗೆ ಬೇರುಬಿಟ್ಟು ಬೆಳೆದ, ಹಾಗೆ ಬೆಳೆದ ಹೀಗೆ ಬೆಳೆದ ಅಂತೆಲ್ಲ ಅವನನ್ನು ಹೊಗಳಲಾಗುತ್ತಿದೆ. ವಿಜಯ್ ಗೆಲುವನ್ನು ಅನುಮಾನಿ ಸಿದ್ದವರೇ ಈಗ ವಿಜಯ್ ಗೆಲ್ಲದಿರಲು ಸಾಧ್ಯವೇ ಇರಲಿಲ್ಲ ಅಂತ ಗೆದ್ದೆತ್ತಿನ ಬಾಲ ಹಿಡಿದಂತೆ ಮಾತನಾಡುತ್ತಿದ್ದಾರೆ.

ಅಸಲಿಗೆ ತಮಿಳುನಾಡಿನಲ್ಲಿ ಯಾವ ಮಹಾನ್ ಕ್ರಾಂತಿಯೂ ನಡೆದಿಲ್ಲ. ವಿಜಯ್ ಗೆಲುವಿನ ಹಿಂದೆ ಇರೋದು ಕೇವಲ ಸಿನಿಮಾ ನಟನ ಮೇಲಿನ ಅಭಿಮಾನವಂತೂ ಅಲ್ಲವೇ ಅಲ್ಲ. ಅಲ್ಲಿ ಕೇವಲ ಅಧಿಕಾರ ಹಿಡಿದ ಪಕ್ಷದ ಹೆಸರು ಬದಲಾಗಿದೆ. ಅದರ ಹೊರತಾಗಿ ನಿರೀಕ್ಷೆ ಇಟ್ಟುಕೊಳ್ಳುವಂಥ ಇನ್ಯಾವ ಬದಲಾವಣೆಗಳೂ ಆಗುವ ಸೂಚನೆ ಇಲ್ಲ.

ಡಿಎಂಕೆ ಅಧಿಕಾರ ಹಿಡಿಯುವಲ್ಲಿ ಬೆಂಬಲಕ್ಕೆ ನಿಂತಿದ್ದ ಅದೇ ಕಾಂಗ್ರೆಸ್, ಅದೇ ಕಮ್ಯು ನಿಸ್ಟ್ ಮತ್ತು ಮುಸ್ಲಿಂ ಲೀಗ್ ಈಗ ಟಿವಿಕೆ ಪಕ್ಷಕ್ಕೂ ಬೆಂಬಲ ಕೊಟ್ಟಿವೆ. ಸ್ಟಾಲಿನ್ ಎಂಬ ಹೆಸರಿನ ಬದಲು ಜೋಸೆಫ್ ಹೆಸರು ಪ್ರತಿಷ್ಠಾಪನೆಯಾಗಿದೆ. ‌

ಡಿಎಂಕೆ ಮತ್ತು ಟಿವಿಕೆ ತಮ್ಮ ಎದುರಾಳಿಯೆಂದು ಪರಿಗಣಿಸಿದ್ದು ಬಿಜೆಪಿಯನ್ನು ಮಾತ್ರ. ಹೀಗಾಗಿ ಟಿವಿಕೆ ಎಂಬುದು ಡಿಎಂಕೆಯ ಬಿ ಟೀಮ್‌ನಂತೆ ಕಾಣುತ್ತಿದೆಯಷ್ಟೆ. ಪ್ರಮಾಣ ವಚನದ ಸಮಯದಲ್ಲಿ ಜೋಸೆಫ್‌ ವಿಜಯ್ ಆಡಿದ ಮಾತುಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿದರೆ ಅವರಿಗಿಂತ ಮೂರ್ಖರು ಇನ್ನೊಬ್ಬರಿರಲಿಕ್ಕಿಲ್ಲ.

ಇದನ್ನೂ ಓದಿ: Naveen Sagar Column: ಶತಕವಂಚಿತ ರಾಹುಲ್‌ ಗಾಂಧಿಯೇ ಅಸಲಿ ಧುರಂಧರ್‌ !

ಅದನ್ನೆಲ್ಲ ಸಿನಿಮಾ ಡೈಲಾಗ್ ಎಂದು ಅರ್ಥ ಮಾಡಿಕೊಂಡು ವಾಸ್ತವದಲ್ಲಿ ಆತನನ್ನು ಸ್ಕ್ಯಾನರ್ ಅಡಿ ಇಡದೇ ಹೋದರೆ ತಮಿಳುನಾಡು ಹಿಂದೆಂದಿಗಿಂತ ಅತಿ ದೊಡ್ಡ ಅಪಾಯಕ್ಕೆ ಸಿಲುಕುವುದು ಖಚಿತ. ವಿಜಯ್‌ನನ್ನು ಪರಮಪ್ರಾಮಾಣಿಕನೆಂದೂ, ಕೇವಲ ಅಭಿಮಾನಿಗಳ ಶ್ರಮದಿಂದ ಪ್ರೀತಿಯಿಂದ ಗೆದ್ದು ಬಂದಿದ್ದಾನೆಂದು ಭಾವಿಸುವುದು ಅಮಾಯಕತೆಯ ಪರಮಾವಧಿ.

ವಿಜಯ್ ಗೆಲುವಿನ ಹಿಂದೆ ಡಿಎಂಕೆ ವಿರುದ್ಧದ ಆಡಳಿತ ವಿರೋಧಿ ಅಲೆ ಇತ್ತಾ? ಇದ್ದಿದ್ದರೆ ಡಿಎಂಕೆ ಇನ್ನೂ ದೊಡ್ಡ ಮಟ್ಟದಲ್ಲಿ ವಾಶೌಟ್ ಆಗಿರುತ್ತಿತ್ತು. ವಿಜಯ್ ನೀಡಿದ್ದ ಭರಪೂರ ಗ್ಯಾರಂಟಿ ಆಶ್ವಾಸನೆಗಳು ವರವಾದವಾ? ಅಂಥ ಗ್ಯಾರಂಟಿಯನ್ನು ಡಿಎಂಕೆ ಕೂಡ ಕೊಟ್ಟಿತ್ತು.

ಹಾಗಾದರೆ ವರ್ಕ್ ಆಗಿದ್ದು ಏನು? ವಿಜಯ್ ಹಣ ಸುರಿಯದೆಯೇ ಗೆದ್ದು ಬಿಟ್ಟಿದ್ದಾನೆ ಅಂದರೆ ನಂಬುವ ಮಾತಾ? ಜೀವಕ್ಕೆ ಜೀವ ಕೊಡುವ ಅಭಿಮಾನ ಇದ್ದರೂ ಇಲ್ಲಿ ಹಣ ಸುರಿಯದೆಯೇ ಜಯಲಲಿತಾ, ಕರುಣಾನಿಧಿ, ಸ್ಟಾಲಿನ್ ಹೀಗೆ ಯಾರಂದ್ರೆ ಯಾರೂ ಗೆದ್ದಿಲ್ಲ. ಇದು ವಿಜಯ್‌ಗೂ ಗೊತ್ತು.

ಹಾಗಾದರೆ ಪ್ರಥಮ ಪ್ರಯತ್ನದ ಹಣ ಸುರಿದು ಗೆಲ್ಲುವಷ್ಟು ದುಡ್ಡಿತ್ತಾ ವಿಜಯ್ ಬಳಿ? ಇಲ್ಲಿಂದ ಒಂದಷ್ಟು ಅನುಮಾನಗಳು ಹೊಗೆ ಆಡತೊಡಗುತ್ತವೆ. ಜೋಸೆಫ್ ವಿಜಯ್ ಹಿಂದೆ ಇರುವ ಕೈಗಳು, ಫಂಡರ್‌ಗಳು, ಧಾರ್ಮಿಕ ಶಕ್ತಿಗಳು, ಮಿಷನರಿಗಳು ಎಲ್ಲವನ್ನೂ ಒಮ್ಮೆ ಗಮನಿಸಬೇಕಾಗುತ್ತದೆ. ‌ಇದು ಜೋಸೆಫ್ ವಿಜಯ್ ಎಂಬ ನಟ ತನ್ನ ಸಿನಿಮಾಗಳ ಇಮೇಜ್ ಇಟ್ಟುಕೊಂಡು, ಒಂದು ಕೈ ನೋಡೋಣ ಅಂತ ರಾಜಕೀಯಕ್ಕೆ ಬಂದ ಕಥೆ ಅಲ್ಲ. ಸಿನಿಮಾ ಕೇವಲ ಒಂದು ಮೆಟ್ಟಿಲಷ್ಟೇ. ಅಸಲಿಗೆ ಇದು ಅತ್ಯಂತ ವ್ಯವಸ್ಥಿತವಾಗಿ ಕೋಟ್ಯಂ ತರ ರುಪಾಯಿಗಳ ಹೂಡಿಕೆಯೊಂದಿಗೆ ಮತ್ತು ಜಾಗತಿಕ ಶಕ್ತಿಗಳ ಬೆಂಬಲದೊಂದಿಗೆ ಸಿದ್ಧಗೊಂಡಿರುವ ಒಂದು ‘ಪೊಲಿಟಿಕಲ್ ಪ್ರಾಜೆಕ್ಟ್’.

Screenshot_3

ಯಾವುದೇ ಒಂದು ರಾಜಕೀಯ ಪಕ್ಷ ಕಟ್ಟಿ, ಅದನ್ನು ಬೂತ್ ಮಟ್ಟದಲ್ಲಿ ಸಂಘಟಿಸೋಕೆ ಮಿನಿಮಮ್ ಅಂದ್ರೆ ಹತ್ತು ವರ್ಷವಾದರೂ ಬೇಕು. ಬಿಜೆಪಿಯಂಥ ಬಿಜೆಪಿಗೆ ತಮಿಳುನಾಡಿ ನಲ್ಲಿ ಒಂದು ಸಣ್ಣ ನೆಲೆ ಕಂಡುಕೊಳ್ಳೋದಕ್ಕೆ ಇನ್ನಾದರೂ ಸಾಧ್ಯವಾಗಿಲ್ಲ. ಆದರೆ, ಕೇವಲ 26 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ, ಬರೋಬ್ಬರಿ 108 ಕ್ಷೇತ್ರಗಳಲ್ಲಿ ಗೆದ್ದದ್ದು ಹೇಗೆ? 70000 ಬೂತ್ ಏಜೆಂಟ್‌ಗಳನ್ನು ನೇಮಿಸಿಕೊಳ್ಳುವ ಮಟ್ಟಕ್ಕೆ ನೆಟ್ ವರ್ಕ್ ಆಗಿದ್ದು ಹೇಗೆ? ಡಿಜಿಟಲ್ ವಾರ್ ಫೇರ್, ಮೆಗಾ ರ‍್ಯಾಲಿಗಳು, ಪ್ರತಿ ಕ್ಷೇತ್ರದಲ್ಲೂ ಕೋಟಿಗಟ್ಟಲೆ ಹಣ ಸುರಿದು ಪ್ರಚಾರ, ಇವೆಲ್ಲವನ್ನೂ ನೋಡಿದರೆ ಇದನ್ನು ಯಾರಾದರೂ ಪ್ರಾಮಾಣಿಕ ಪಕ್ಷ ಅಥವಾ ಬಡವರ ಪಕ್ಷ ಅನ್ನಲು ಸಾಧ್ಯವಾ? ಪಕ್ಕಾ ಕಾರ್ಪೊರೆಟ್ ಮೆಷಿನ್ ಮಾದರಿಯಲ್ಲಿ ಚುನಾ ವಣೆ ಎದುರಿಸಿದ ಟಿವಿಕೆ ಕೇವಲ ವಿಜಯ್ ಇಮೇಜ್ ಮತ್ತು ಪ್ರಶಾಂತ್ ಕಿಶೋರ್‌ನ ಸ್ಟ್ರಾಟಜಿಯಿಂದ ಗೆದ್ದಿದೆ ಅಂದರೆ ನಗದೇ ಇರಲು ಸಾಧ್ಯವೇ? ಒಂದು ಅಂದಾಜಿನ ಪ್ರಕಾರ ಟಿವಿಕೆ ಪ್ರಸ್ತುತ ಚುನಾವಣೆಗೆ ಮಾಡಿರುವ ಖರ್ಚು ಸುಮಾರು ಒಂದೂವರೆ ಸಾವಿರ ಕೋಟಿ. ಹಾಗಾದರೆ ಇಷ್ಟೊಂದು ಭಾರೀ ಮೊತ್ತದ ಹಣ ಬಂದದ್ದೆಲ್ಲಿಂದ? ವಿಜಯ್ ಸಿನಿಮಾ ದುಡಿಮೆಯ ಭಾಗವಾ? ಖಂಡಿತ ಅಲ್ಲ.

ಚುನಾವಣಾಪೂರ್ವದ ಕೆಲವು ತಿಂಗಳೇನೋ ಎಲೆಕ್ಷನ್ ಕಮಿಷನ್ ಅಥವಾ ಇಡಿ/ಐಟಿ ಗಳು ಇಂಥವುಗಳ ಮೇಲೆ ಕಣ್ಣಿಡುತ್ತವೆ. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಗುಪ್ತಗಾಮಿನಿ ಯಂತೆ ನಡೆದ ಚುನಾವಣಾ ತಯಾರಿ, ಹಣದ ವಿಲೇವಾರಿ ಕಡೆಗೆ ಯಾರೂ ಗಮನವೇ ಹರಿಸಿದಂತಿಲ್ಲ. ಈಗಾಗಲೇ ಎಸ್ಟಾಬ್ಲಿಷ್ ಆಗಿರುವ ಪಕ್ಷಗಳ ಪಾರ್ಟಿ ಫಂಡ್, ಫಂಡಿಂಗ್ ಮ್ಯಾಪ್, ಲೆಕ್ಕಪತ್ರ ಇವೆಲ್ಲವೂ ಹದ್ದಿನ ಕಣ್ಣಿನಡಿ ಇರುತ್ತವೆ. ಆದರೆ ವಿಜಯ್ ಪಕ್ಷ ಅದೆಲ್ಲ ದರಿಂದ ತಪ್ಪಿಸಿಕೊಂಡುಬಿಟ್ಟಿತು.

ಇಲ್ಲಿ ಪಾರದರ್ಶಕ ಫಂಡಿಂಗ್ ಮ್ಯಾಪ್ ಕಾಣಿಸಲಿಲ್ಲ. ದೊಡ್ಡ ದಾನಿಗಳ ವಿವರಗಳೂ ಕಾಣಲಿಲ್ಲ. ಲೆಕ್ಕಪತ್ರಗಳಂತೂ ಇಲ್ವೇ ಇಲ್ಲ. ಹಣ ಮಾತ್ರ ಕಾವೇರಿಗಿಂತ ಜೋರಾಗಿ ಹರಿದಾಡಿತು. ಅದು ಯಾರ ಹಣ? ಯಾರ್ಯಾರ ಹಣ? ಇತ್ತೀಚಿನ ದಿನಗಳಲ್ಲಿ ಟಿವಿಕೆ ಪಕ್ಷದ ಪ್ರತಿ ವಿಡಿಯೋ ಮತ್ತು ಫೋಟೋ ಗಮನಿಸಿದರೆ ಅಲ್ಲಿ ಒಬ್ಬ ವ್ಯಕ್ತಿ ವಿಜಯ್ ಪಕ್ಕದ ಸದಾ ಕಾಣಿಸಿಕೊಳ್ಳುತ್ತಾನೆ.

ಹೆಸರು ಆದವ್ ಅರ್ಜುನ. ಸದ್ಯಕ್ಕೆ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ. ವಿಜಯ್ ಬಿಟ್ಟರೆ ನಂತರದ ಸ್ಥಾನ ಈತನದ್ದೇ. ಈಗ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೂ ಆಗಿದೆ. ವಿಜಯ್ ಹಿಂದಿರುವ ಅತಿದೊಡ್ಡ ಫೈನಾನ್ಷಿಯಲ್ ಶಕ್ತಿ ಈ ಆದವ್ ಅರ್ಜುನ. ಈತನ ಬ್ಯಾಗ್ರೌಂಡಲ್ಲಿ ಇನ್ನೊಬ್ಬನಿದ್ದಾನೆ. ಹೆಸರು ಸ್ಯಾಂಟಿಯಾಗೋ ಮಾರ್ಟಿನ್.

ಆದವ್ ಅರ್ಜುನ್‌ಗೆ ಹೆಣ್ಣು ಕೊಟ್ಟ ಮಾವ ಸ್ಯಾಂಟಿಯಾಗೋ ಮಾರ್ಟಿನ್, ದೇಶದ ಅತಿ ದೊಡ್ಡ ಶ್ರೀಮಂತರಬ್ಬ. ಲಾಟರಿ ಕಿಂಗ್ ಎಂದೇ ಖ್ಯಾತನಾಗಿರುವ ಮಾರ್ಟಿನ್ ಒಬ್ಬ ಸಾಕು ವಿಜಯ್ ಎಂಥ ಪ್ರಾಮಾಣಿಕ ಅಥವಾ ವಿಜಯ್ ಕಟ್ಟಿರುವ ಪಕ್ಷದ ಫೌಂಡೇಶನ್ ಎಂಥದ್ದು ಎಂದು ತಿಳಿಯಲು.

ಚುನಾವಣಾ ಬಾಂಡ್ ಹಗರಣದಲ್ಲಿ ಕೇಳಿ ಬಂದ ಅತಿ ಮುಖ್ಯ ಹೆಸರು ಸ್ಯಾಂಟಿಯಾಗೋ ಮಾರ್ಟಿನ್ ನದ್ದು. 1368 ಕೋಟಿ ರುಪಾಯಿ ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದ್ದ ಈ ಕಪಟ ದಾನಿಯನ್ನು ಇ.ಡಿ. ಹಿಂಬಾಲಿಸುತ್ತಿದೆ. ಈತನ ವಿರುದ್ಧ ಮನಿಲಾಂಡರಿಂಗ್ ಪ್ರಕರಣ ದಾಖಲಾಗಿದೆ. ಒಂದಷ್ಟು ಆಸ್ತಿ ಮುಟ್ಟುಗೋಲು ಹಾಕಿಕೊಂಡದ್ದೂ ಆಗಿದೆ. ಆದರೆ ಅವೆಲ್ಲ ಸಮುದ್ರದ ನೀರಲ್ಲಿ ಒಂದು ಹನಿ ಎತ್ತಿಟ್ಟಂತೆ ಅಷ್ಟೆ. ಆತನ ಸಾಮ್ರಾಜ್ಯಕ್ಕೆ ಯಾವ ಹಾನಿಯೂ ಆಗಿಲ್ಲ. ಇಷ್ಟಕ್ಕೂ ಮಾರ್ಟಿನ್ ಕುಟುಂಬ ಒಂದು ಪಕ್ಷಕ್ಕೆ ಸೀಮಿತ ವಾಗೇನೂ ಇಲ್ಲ.

ಅಧಿಕಾರ ಹಿಡಿದ ಯಾವುದೇ ಭ್ರಷ್ಟ ಪಕ್ಷವಿದ್ದರೂ ಅದರ ಜತೆಗೆ ಮಾರ್ಟಿನ್ ಕುಟುಂಬ ಇರುತ್ತದೆ ಎಂಬ ಮಾತಿದೆ. ಆದರೆ ಈಗ ಟಿವಿಕೆ ಗೆಲುವಿನ ಹಿಂದೆ ಇರುವುದು ಮಾರ್ಟಿನ್‌ನ ಲಾಟರಿ ಹಣ ಎಂಬ ಬಲವಾದ ಅನುಮಾನ ಇದ್ದರೂ ಈ ಬಗ್ಗೆ ತನಿಖೆಗೆ ಆಗ್ರಹಿಸುವವ ರಾರು? ಮಾರ್ಟಿನ್ ಮತ್ತು ಆದವ್ ಅರ್ಜುನ್ ವಿಜಯ್ ಬೆನ್ನಿಗೆ ನಿಂತು ಗೆಲ್ಲಿಸಿದ್ದೇಕೆ? ಅವರು ಮನಸು ಮಾಡಿದ್ದರೆ ಸ್ಟಾಲಿನ್‌ನನ್ನೇ ಗೆಲ್ಲಿಸಬಹುದಿತ್ತಲ್ಲ ಅಥವಾ ಕಾಂಗ್ರೆಸ್ಸನ್ನು ಗೆಲ್ಲಿಸಬಹುದಿತ್ತಲ್ಲವಾ ಎಂಬ ಪ್ರಶ್ನೆಗೆ ಉತ್ತರವಾಗಿರುವುದು ಕ್ರೈಸ್ತ ಧರ್ಮ. ‌

ಜೋಸೆಫ್ ವಿಜಯ್ ಒಬ್ಬ ಕನ್ವರ್ಟೆಡ್ ಕ್ರಿಶ್ಚಿಯನ್ ಮಾತ್ರವಲ್ಲ, ಆತನಿಗೆ ಕ್ರೈಸ್ತಮತವನ್ನು ವ್ಯಾಪಕವಾಗಿಸುವ ಮಹತ್ವಾಕಾಂಕ್ಷೆ ಇದೆ. ಮತಾಂತರಕ್ಕೆ ಆತನಿಂದ ಅತಿದೊಡ್ಡ ಮಟ್ಟದ ಬೆಂಬಲ ಸಿಗುವುದು ಖಚಿತ. ಆತನ ಪಾಪ್ಯುಲಾರಿಟಿ ಬಳಸಿ ಮತಾಂತರ ಜಾಲವನ್ನು ಹಿರಿದಾಗಿಸುವುದು ಸುಲಭ ಎಂದು ಮಾರ್ಟಿನ್‌ಗೆ ಚೆನ್ನಾಗಿ ಗೊತ್ತಿದೆ. ಮಾರ್ಟಿನ್ ಕೇವಲ ಲಾಟರಿ ಕಿಂಗ್ ಅಲ್ಲ. ಆತನಿಗೆ ಕ್ರೈಸ್ತ ವಲಯದಲ್ಲಿ ಮತ್ತು ರಾಜತಾಂತ್ರಿಕ ಸ್ತರದಲ್ಲಿ ಭಾರೀ ಭಾರೀ ಸಂಪರ್ಕಗಳಿವೆ.

ಮಾಜಿ ಪೋಪ್ ಬೆನೆಡಿP ಗ್ಖಿಐ ಮಾರ್ಟಿನ್ ಕುಟುಂಬದ ಪರಮಾಪ್ತರು.. ಕ್ಯಾಥೋಲಿಕ್ ಸಮುದಾಯದಲ್ಲಿ ದೊರೆಯುವ ಅತ್ಯುನ್ನತ ಗೌರವ ಮಾರ್ಟಿನ್ ಕುಟುಂಬಕ್ಕೆ ಸಿಕ್ಕಿದೆ. ಒಂದು ಕಾಲದಲ್ಲಿ ಮಾರ್ಟಿನ್ ಲೈಬೀರಿಯಾದ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸಿ ದವನಾದ್ದರಿಂದ ಅಂತಾರಾಷ್ಟ್ರೀಯ ವಲಯದಲ್ಲೂ ಒಂದಿಷ್ಟು ದೊಡ್ಡಮಟ್ಟದ ಸಂಪರ್ಕ ಸಾಧಿಸಿದಾತ.

ಒಬ್ಬ ಲಾಟರಿ ಉದ್ಯಮಿಗೆ ಜಾಗತಿಕ ಮಟ್ಟದ ಧಾರ್ಮಿಕ ಮತ್ತು ರಾಜತಾಂತ್ರಿಕ ಬೆಂಬಲ ಸಿಗುತ್ತದೆ ಎಂದರೆ, ಅದರ ಹಿಂದೆ ಎಷ್ಟು ದೊಡ್ಡ ಜಾಲವಿರಬಹುದು ಎಂದು ಊಹಿಸಿ. ಇನ್ನು ವಿಜಯ್ ಅವರ ಹಿನ್ನೆಲೆಯನ್ನು ಗಮನಿಸಿದರೆ ಇದೊಂದು ವ್ಯವಸ್ಥಿತ ಜಾಲ ಅಂತ ಅನಿಸದೇ ಇರದು. ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಅವರ ಕಾಲದಿಂದಲೂ ಮಿಷನರಿ ಪ್ರಭಾವದ ಪ್ರದೇಶಗಳಲ್ಲಿ ಬೆಳೆದವರು.

ವಿಜಯ್ ಚಿಕ್ಕಪ್ಪ ಕ್ಸೇವಿಯರ್ ಅಲೋ, ಪ್ರಸಿದ್ಧ ಲೋಯೋಲಾ ಕಾಲೇಜಿನ ಪ್ರಮುಖ ರಾಗಿದ್ದವರು. ಮತ್ತೊಬ್ಬ ಚಿಕ್ಕಪ್ಪ ಕ್ಸೇವಿಯರ್ ಬ್ರಿಟ್ಟೋ, ವಿಜಯ್ ಅವರ ಆರಂಭಿಕ ಚಿತ್ರಗಳ ನಿರ್ಮಾಪಕರು. ಟಿವಿಕೆ ಪಕ್ಷ ಘೋಷಣೆಯಾಗ್ತಾ ಇದ್ದ ಹಾಗೆ, ಲೋಯೋಲಾ ಕಾಲೇಜಿನ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಂಘಟನೆ ಇದ್ದಕ್ಕಿದ್ದಂತೆ ಸಕ್ರಿಯವಾಗಿದೆ. ವಿಶ್ವದ ವಿವಿಧ ಮೂಲೆಗಳಲ್ಲಿ ನಿಧಿ ಸಂಗ್ರಹ ಮತ್ತು ನೆಟ್ವರ್ಕಿಂಗ್ ಚಟುವಟಿಕೆಗಳು ನಡೆದಿದೆ ಮತ್ತು ಇಂದಿಗೂ ನಡೆಯುತ್ತಿವೆ.

ಜೆಸ್ಯೂಟ್‌ಳ ಬಗ್ಗೆ ನಿಮಗೆ ತಿಳಿದಿರಬಹುದು. ಇವು ಕೇವಲ ಧಾರ್ಮಿಕ ಸಂಘಟನೆಯಲ್ಲ; ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದಶಕಗಳ ಕಾಲ ಕೆಲಸ ಮಾಡಿ, ಅಧಿಕಾರದ ಮೇಲೆ ಹಿಡಿತ ಸಾಧಿಸುವುದು ಇವುಗಳ ಮೊದಲ ಗುರಿ. ಈ ಶಕ್ತಿ ಇಂದು ವಿಜಯ್ ಅವರ ಬೆನ್ನ ಹಿಂದೆ ನಿಂತಿದೆಯೇ? ಇಲ್ಲ ಅನ್ನಲಾಗದು.

ನಾವು ಕಂಡ ಹಾಗೆ ಚುನಾವಣಾ ವಾರದಲ್ಲಿ ತಮಿಳುನಾಡಿನ ಚರ್ಚ್‌ಗಳಲ್ಲಿ ವಿಚಿತ್ರ ಬೆಳವಣಿಗೆಗಳು ನಡೆದವು. ಭಾನುವಾರದ ಪ್ರಾರ್ಥನೆಯ ಸಮಯದಲ್ಲಿ ಕೆಲವು ಬಿಷಪ್‌ಗಳು ಕರಪತ್ರಗಳನ್ನು ಹಂಚಿ, ‘ಬಿಜೆಪಿ ವಿರುದ್ಧ ಮತ ಚಲಾಯಿಸಿ’ ಎಂಬ ಸಂದೇಶ ನೀಡಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಬಂದವು.

ಇದಕ್ಕೆ ಪುಷ್ಟಿ ನೀಡುವಂತೆ, ಟಿವಿಕೆ ಪಕ್ಷ, ‘ದಲಿತ ಕ್ರಿಶ್ಚಿಯನ್ನರಿಗೆ ಎಸ್ಸಿ ಮೀಸಲಾತಿ ನೀಡಲಾಗುವುದು’ ಎಂಬ ಭರವಸೆ ಕೂಡ ಕೊಟ್ಟಿತ್ತು. ಇದು ಕೇವಲ ಮೀಸಲಾತಿಯ ವಿಷಯವಲ್ಲ, ಇದು ಮತಾಂತರದ ಸಮೀಕರಣವನ್ನೇ ಬದಲಿಸುವ ಹುನ್ನಾರ. ಮತಾಂತರ ಗೊಳ್ಳಲು ನೀಡುತ್ತಿರುವ ನೇರ ಆಮಿಷ. ಇದು ಭಾರತದ ಸಂವಿಧಾನದ ಮೂಲ ಆಶಯಕ್ಕೇ ಕೊಡಲಿ ಪೆಟ್ಟು ನೀಡುವಂಥ ನಡೆ.

ತಮಿಳುನಾಡು ಯಾವತ್ತಿಗೂ ಮಿಷನರಿಗಳ ಮತ್ತು ದ್ರಾವಿಡ ಸಿದ್ಧಾಂತದ ಪ್ರಬಲ ಕೇಂದ್ರ. ಈಗ ಅಲ್ಲಿ ‘ದ್ರಾವಿಡ’ ಎಂಬ ಲೇಪನದ ಅಡಿಯಲ್ಲಿ ಮತ್ತೊಂದು ಹೊಸ ಶಕ್ತಿಯನ್ನು ತರಲಾಗುತ್ತಿದೆ. ಅದು ಕ್ರೈಸ್ತ ಮತ. ವಿಜಯ್ ಜೋಸೆಫ್‌ʼನ ಹಿಂದೆ ಅಡಗಿರುವ ಈ ಅಗಾಧ ವಾದ ಹಣದ ಹರಿವು, ಅಂತಾರಾಷ್ಟ್ರೀಯ ಸಂಪರ್ಕಗಳು ಮತ್ತು ಧಾರ್ಮಿಕ ಸಂಘಟನೆಗಳ ಹಸ್ತಕ್ಷೇಪವನ್ನು ಪ್ರಶ್ನೆ ಮಾಡುವವರಾರು? ಅಣ್ಣಾಮಲೈ ಅವರನ್ನು ತಮಿಳುನಾಡಿನಿಂದ ಹೊರಗಿಡಲಾಗಿದೆ.

ಹುಡುಕಿದರೂ ಇದನ್ನು ಕೆದಕುವ ಇನ್ನೊಬ್ಬ ವ್ಯಕ್ತಿ ಅಲ್ಲಿ ಕಾಣುತ್ತಿಲ್ಲ. ಮೂರು ದ್ರಾವಿಡ ಪಕ್ಷಗಳು ಸೇರಿಕೊಂಡು ಅವುಗಳ ಜತೆ ಕಾಂಗ್ರೆಸ್ಸನ್ನೂ ಇಟ್ಟುಕೊಂಡಿರುವಾಗ ಇಂಥ ಧ್ವನಿಗಳು ಹುಟ್ಟಲಾದರೂ ಸಾಧ್ಯವೇ? ಒಟ್ಟಾರೆ ಇದು ಕೇವಲ ಒಬ್ಬ ನಟ ಮುಖ್ಯಮಂತ್ರಿ ಯಾಗಲು ಕನಸು ಕಂಡ ಕಥೆಯಲ್ಲ. ಇದು ದಶಕಗಳಿಂದ ತಯಾರಾಗಿರುವ ಬೃಹತ್ ಯೋಜನೆ. ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿ, ಜಾಗತಿಕ ಶಕ್ತಿಗಳು ತಮಗೆ ಬೇಕಾದವರನ್ನು ಕೂರಿಸುವ ಪ್ರಯತ್ನವಿದು.

ವಿಜಯ್ ಜೋಸೆಫ್ ಬಂದಿದ್ದು ಜನರಿಗಾಗಿ ಎಂದು ನಂಬುವುದು ಮುಗ್ಧತೆ. ಏಕೆಂದರೆ, ವಿಜಯ್ ಹಿಂದೆ ಹರಿಯುತ್ತಿರುವ ಹಣ ‘ಬೆವರ ಹನಿ’ಯದಲ್ಲ, ಅದು ಲಾಟರಿ ಸಾಮ್ರಾಜ್ಯದ ಲಾಭ ಮತ್ತು ಜಾಗತಿಕ ಸಂಚಿನ ಫಲ.

ನವೀನ್‌ ಸಾಗರ್‌

View all posts by this author