ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr D C Nanjunda Column: ಇಂದಿಗೂ ಸಲ್ಲುವ ಡಾ.ಅಂಬೇಡ್ಕರ್‌ ಸಂಶೋಧನೆ

ಪ್ರಾಂತ್ಯೀಯ ಹಣಕಾಸಿನ ಹಂಚಿಕೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರದ ಅಸಮ ತೋಲನ, ಹಾಗೂ ಆಡಳಿತದ ಅಸಮರ್ಥತೆಗಳನ್ನು ಅವರು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರು ಪ್ರಾರಂಭದಲ್ಲಿ ಅಂದಿನ ಭಾರತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣದಲ್ಲಿದ್ದುದನ್ನು ವಿವರಿಸುತ್ತಾರೆ.

ಸಮ ಸಮಾಜ

ಡಾ.ಡಿ.ಸಿ.ನಂಜುಂಡ

ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ನೀತಿ ರೂಪಿಸುವ ಸಂಸ್ಥೆಗಳು ಅಂಬೇಡ್ಕರ್ ಅವರ ಪಿಎಚ್.ಡಿ ಕೃತಿಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ಈ ಸಂಬಂಧ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ಪ್ರಕಟಣೆಗಳು ಆಯೋಜನೆ ಯಾಗಬೇಕು. ಅವರ ಆಲೋಚನೆಗಳನ್ನು ಈ ಕಾಲದ ಸವಾಲುಗಳೊಂದಿಗೆ ಸಂಪರ್ಕಿಸುವ, ಕೃತಿಯನ್ನು ವ್ಯಾಪಕವಾಗಿ ಜನರಿಗೆ ತಲುಪಿಸುವ ಪ್ರಯತ್ನ ನಡೆಯಬೇಕು.

2026ನೇ ವರ್ಷದ ಜೂನ್ ಭಾರತೀಯ ಇತಿಹಾಸದಲ್ಲಿ ಒಂದು ಮಹತ್ವದ ಬೌದ್ಧಿಕ ಮೈಲುಗಲ್ಲಿನ 99ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. 1927ರ ಜೂನ್'ನಲ್ಲಿ ಡಾ. ಅಂಬೇಡ್ಕರ್ ಅವರಿಗೆ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ ಪದವಿ ಕೊಡಲಾಯಿತು. ಇದು ಕೇವಲ ಒಂದು ವೈಯಕ್ತಿಕ ಶೈಕ್ಷಣಿಕ ಸಾಧನೆಯ ಸ್ಮರಣೆ ಮಾತ್ರವಲ್ಲ; ಇದು ಭಾರತದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಚಿಂತನೆಗಳ ಹೊಸ ಯುಗಕ್ಕೆ ಚಾಲನೆ ನೀಡಿದ ಬೌದ್ಧಿಕ ಕ್ರಾಂತಿಯ ಸ್ಮರಣೆಯಾಗಿದೆ ಎನ್ನಬಹುದು.

ಡಾ.ಅಂಬೇಡ್ಕರ್ ಅವರ ಪಿಎಚ್.ಡಿ. ಪ್ರಬಂಧ ‘ಬ್ರಿಟಿಷ್ ಭಾರತದಲ್ಲಿ ಪ್ರಾಂತ್ಯೀಯ ಹಣಕಾಸಿನ ವಿಕಾಸ’ (The Evolution of Provincial Finance in British India) ಎಂಬ ವಿಷಯದ ಮೇಲೆ ಆಧಾರಿತವಾಗಿತ್ತು. ಈ ಕೃತಿ ಆರ್ಥಿಕ ಶಾಸ್ತ್ರ ಮತ್ತು ಸಾರ್ವಜನಿಕ ಹಣಕಾಸು ಕ್ಷೇತ್ರಗಳಲ್ಲಿ ಮಹತ್ವದ ಸಂಶೋಧನಾ ಕೃತಿಯಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತದ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಸ್ಥೆಗಳ ಬಗ್ಗೆ ಅವರು ನೀಡಿದ ವಿಶ್ಲೇಷಣೆ ಆ ಕಾಲದ ಶೋಷಣಾತ್ಮಕ ನೀತಿಗಳನ್ನು ಬಹಿರಂಗಪಡಿಸಿತು.

ಪ್ರಾಂತ್ಯೀಯ ಹಣಕಾಸಿನ ಹಂಚಿಕೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರದ ಅಸಮ ತೋಲನ, ಹಾಗೂ ಆಡಳಿತದ ಅಸಮರ್ಥತೆಗಳನ್ನು ಅವರು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರು ಪ್ರಾರಂಭದಲ್ಲಿ ಅಂದಿನ ಭಾರತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರದ ನಿಯಂತ್ರಣದಲ್ಲಿದ್ದುದನ್ನು ವಿವರಿಸುತ್ತಾರೆ. ನಂತರ ಕ್ರಮೇಣ ಪ್ರಾಂತ್ಯ ಗಳಿಗೆ ಕೆಲವು ಅಧಿಕಾರಗಳನ್ನು ಹಂಚಿಕೆಯಾಗಿದೆಯಾದರೂ ಅದು ನಿಜವಾದ ಸ್ವಾಯತ್ತತೆ ಯಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಅವರ ವಿಶ್ಲೇಷಣೆಯ ಪ್ರಕಾರ, ಪ್ರಾಂತ್ಯಗಳಿಗೆ ಶಿಕ್ಷಣ, ಆರೋಗ್ಯ, ಆಡಳಿತ ಮುಂತಾದ ಪ್ರಮುಖ ಹೊಣೆಗಾರಿಕೆಗಳನ್ನು ನೀಡಲಾಗಿದ್ದರೂ, ಅವುಗಳಿಗೆ ಅಗತ್ಯವಾದ ಆದಾಯ ಮೂಲಗಳನ್ನು ನೀಡಲಾಗಲಿಲ್ಲ, ಇದರಿಂದಾಗಿ ಪ್ರಾಂತ್ಯಗಳು ಆರ್ಥಿಕವಾಗಿ ದುರ್ಬಲವಾಗಿದ್ದು ಕೇಂದ್ರದ ಮೇಲೆ ಅವಲಂಬಿತವಾಗುವ ಪರಿಸ್ಥಿತಿ ನಿರ್ಮಾಣ ವಾಯಿತು ಎಂದು ಅಂಬೇಡ್ಕರ್ ಹೇಳುತ್ತಾರೆ.

ಇದನ್ನೂ ಓದಿ: Dr D C Nanjunda Column: ಮಾರಾಟಕ್ಕಿವೆ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್‌ʼಗಳು !?

ಅಂಬೇಡ್ಕರ್ ಅವರು ಈ ಸ್ಥಿತಿಯನ್ನು ಕೇವಲ ಆಡಳಿತಾತ್ಮಕ ವ್ಯವಸ್ಥೆಯ ಭಾಗವಲ್ಲ, ಆದರೆ ಒಂದು ಉದ್ದೇಶಿತ ಕಾಲನಿಯ ನೀತಿಯ ಪರಿಣಾಮವೆಂದು ವಿಮರ್ಶಿಸುತ್ತಾರೆ. ಏಕೆಂದರೆ ಬ್ರಿಟಿಷರು ಭಾರತದ ಪ್ರಾಂತ್ಯಗಳಿಗೆ ಸಂಪೂರ್ಣ ಹಣಕಾಸು ಸ್ವಾತಂತ್ರ್ಯ ನೀಡಲು ಇಚ್ಛಿಸಿರಲಿಲ್ಲ. ಅವರು ಆದಾಯ ಹಂಚಿಕೆ ವ್ಯವಸ್ಥೆಯಲ್ಲಿ ಸಮತೋಲನದ ಕೊರತೆ ಇದೆ ಎಂದು ಸೂಚಿಸಿ, ಕೇಂದ್ರ ಮತ್ತು ಪ್ರಾಂತ್ಯಗಳ ನಡುವಿನ ಹಣಕಾಸಿನ ಸಂಬಂಧವು ನ್ಯಾಯಸಮ್ಮತವಾಗಿರಬೇಕು ಎಂದು ವಾದಿಸು ತ್ತಾರೆ.

ಪ್ರಾಂತ್ಯಗಳಿಗೆ ನೀಡಲಾದ ಆದಾಯ ಮೂಲಗಳು ಕಡಿಮೆಯಾಗಿದ್ದು, ಹೆಚ್ಚಿನ ಆದಾಯ ತರುವ ಮೂಲಗಳು ಕೇಂದ್ರದ ಹಸ್ತದಲ್ಲಿಯೇ ಉಳಿದಿದ್ದರಿಂದ, ಇದು ಲಂಬ ಅಸಮಾನತೆಯನ್ನು (vertical imbalance) ಉಂಟುಮಾಡಿದೆ ಎಂದು ಅಂಬೇಡ್ಕರ್ ವಿವರಿಸುತ್ತಾರೆ. ಈ ಹಿನ್ನೆಲೆಯಲ್ಲಿ, ಅಂಬೇಡ್ಕರ್ ಅವರು ಉತ್ತಮ ಸಾರ್ವಜನಿಕ ಹಣಕಾಸು ವ್ಯವಸ್ಥೆಗೆ ಸಮಾನತೆ, ಹೊಣೆಗಾರಿಕೆ ಮತ್ತು ಪರಿಣಾಮಕಾರಿತ್ವ ಎಂಬ ತತ್ವಗಳು ಅವಶ್ಯಕವೆಂದು ಸೂಚಿಸುತ್ತಾರೆ.

ಅವರ ಪ್ರಬಂಧವು ಕೇವಲ ಆರ್ಥಿಕ ವಿಶ್ಲೇಷಣೆಯಷ್ಟೇ ಅಲ್ಲ, ಅದು ಸಾಮಾಜಿಕ ನ್ಯಾಯದ ದೃಷ್ಟಿ ಕೋನದಿಂದ ಕೂಡಿತ್ತು ಎನ್ನಬಹುದು. ಏಕೆಂದರೆ ಆರ್ಥಿಕ ಅಸಮಾನತೆ ಸಮಾಜದ ಅನ್ಯಾಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು. ಅವರ ಈ ಸಂಶೋಧನೆ ಮುಂದಿನ ದಿನಗಳಲ್ಲಿ ಭಾರತದ ಸಂವಿಧಾನ ರಚನೆಯಲ್ಲಿ ಅವರ ಪಾತ್ರಕ್ಕೆ ಬಲವಾದ ಬೌದ್ಧಿಕ ನೆಲೆಯನ್ನು ಒದಗಿಸಿತು.

Dr-Babasaheb-Ambedkar-

ವಿಶೇಷವಾಗಿ ಕೇಂದ್ರ-ರಾಜ್ಯ ಆಡಳಿತಾತ್ಮಕ ಸಂಬಂಧಗಳ ವಿನ್ಯಾಸದಲ್ಲಿ ಅವರ ಆಲೋಚನೆಗಳು ಇಂದಿಗೂ ಪ್ರತಿಫಲಿಸುತ್ತವೆ. ಒಟ್ಟಾರೆ, ಈ ಪ್ರಬಂಧದ ಮುಖ್ಯ ಅರ್ಥವೆಂದರೆ ನಿಜವಾದ ವಿಕೇಂದ್ರೀ ಕರಣ ಎಂದರೆ ಕೇವಲ ಆಡಳಿತಾಧಿಕಾರ ಹಂಚಿಕೆ ಅಲ್ಲ, ಆದರೆ ಪ್ರಾಂತ್ಯಗಳಿಗೆ/ ರಾಜ್ಯಗಳಿಗೆ ಸಮರ್ಪಕ ಹಣಕಾಸು ಸ್ವಾಯತ್ತತೆ ಮತ್ತು ನ್ಯಾಯಯುತ ಸಂಪನ್ಮೂಲ ಹಂಚಿಕೆ ಒದಗಿಸುವು ದಾಗಿದೆ ಎಂಬುದಾಗಿದೆ. ಆದರೆ ಇದು ಇಂದಿಗೂ ಭಾರತದಲ್ಲಿ ಸರಿಯಾಗಿ ಜಾರಿಗೆ ಬಂದಿಲ್ಲ.

ಅಂಬೇಡ್ಕರ್ ಅವರ ಪಿಎಚ್.ಡಿ. ಸಂಶೋಧನೆಯು ಇಂದಿನ ಕಾಲದಲ್ಲಿಯೂ ಅತ್ಯಂತ ಪ್ರಸ್ತುತ ವಾಗಿದ್ದು, ವಿಶೇಷವಾಗಿ ಭಾರತದ ಹಣಕಾಸು ವ್ಯವಸ್ಥೆ, ರಾಜ್ಯ-ರಾಜ್ಯಗಳ ನಡುವಿನ ವ್ಯಾಜ್ಯ, ಕೇಂದ್ರ ರಾಜ್ಯ ಸಂಬಂಧಗಳು ಮತ್ತು ಸಾಮಾಜಿಕ ನ್ಯಾಯದ ಚರ್ಚೆಗಳಲ್ಲಿ ಅದರ ಪ್ರಭಾವ ಸ್ಪಷ್ಟ ವಾಗಿ ಕಾಣಿಸುತ್ತದೆ. ಅವರ ಪ್ರಬಂಧದಲ್ಲಿ ಪ್ರಾಂತ್ಯಗಳಿಗೆ ನೀಡಲಾದ ಹೊಣೆಗಾರಿಕೆಗಳಿಗೆ ಅನುಗುಣ ವಾಗಿ ಹಣಕಾಸು ಸಂಪನ್ಮೂಲಗಳನ್ನು ನೀಡದಿರುವ ಸಮಸ್ಯೆಯನ್ನು ಅವರು ಎತ್ತಿ ಹಿಡಿದಿದ್ದು, ಇದೇ ಸಮಸ್ಯೆ ಇಂದಿಗೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸಿನ ಹಂಚಿಕೆ ವಿಚಾರದಲ್ಲಿ ಕಾಣಿಸುತ್ತದೆ.

ಉದಾಹರಣೆಗೆ, ತೆರಿಗೆ ಸಂಗ್ರಹಣೆಯಲ್ಲಿ ಕೇಂದ್ರದ ಪಾಲು ಹೆಚ್ಚಾಗಿದ್ದು, ರಾಜ್ಯಗಳು ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಪರಿಸ್ಥಿತಿ ಅಂಬೇಡ್ಕರ್ ಅವರು ಸೂಚಿಸಿದ್ದ ಅಸಮತೋಲನವನ್ನು ನೆನಪಿಸುತ್ತದೆ ಎನ್ನಬಹುದು.

ಅಂಬೇಡ್ಕರ್ ಅವರ ಆಲೋಚನೆಗಳು ಇಂದಿನ ಹಣಕಾಸು ಆಯೋಗ ಶಿಫಾರಸುಗಳು, ಜಿಎಸ್‌ಟಿ ವ್ಯವಸ್ಥೆ ಮತ್ತು ಕೇಂದ್ರ- ರಾಜ್ಯ ಆರ್ಥಿಕ ಸಂಬಂಧಗಳ ಚರ್ಚೆಗಳಲ್ಲಿ ಪ್ರತಿಧ್ವನಿಸುತ್ತವೆ. ಏಕೆಂದರೆ ಅವರು ತಮ್ಮ ಮಹಾ ಪ್ರಬಂಧದಲ್ಲಿ ಒತ್ತಿ ಹೇಳಿದ ‘ಹೊಣೆಗಾರಿಕೆಗೆ ಅನುಗುಣವಾದ ಸಂಪನ್ಮೂಲ ಹಂಚಿಕೆ’ ಎಂಬ ತತ್ವವು ಇಂದಿನ ಸಾರ್ವಜನಿಕ ನೀತಿ ಚರ್ಚೆಗಳ ಕೇಂದ್ರ ಬಿಂದುವಾಗಿದೆ.

ಅಂಬೇಡ್ಕರ್ ಅವರು ನಿಜವಾದ ವಿಕೇಂದ್ರೀಕರಣಕ್ಕೆ ಕೇವಲ ಅಧಿಕಾರ ಹಂಚಿಕೆ ಸಾಕಾಗುವುದಿಲ್ಲ, ಹಣಕಾಸು ಸ್ವಾಯತ್ತತೆಯೂ ಅಗತ್ಯವೆಂದು ಹೇಳಿದ ವಿಚಾರ ಇಂದಿನ ಆಡಳಿತದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ ಅದನ್ನು ಗಮನಿಸಿದವರ ಸಂಖ್ಯೆ ಕಡಿಮೆ. ಇದರ ಜೊತೆಗೆ, ಅವರ ಸಂಶೋಧನೆ ಸಾಮಾಜಿಕ ನ್ಯಾಯದ ದೃಷ್ಟಿಕೋನಕ್ಕೂ ಸಹ ಸಂಬಂಧಿಸಿದೆ.

ಆರ್ಥಿಕ ಅಸಮಾನತೆ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂಬ ಅವರ ವಾದಇಂದಿನ ಭಾರತದಲ್ಲಿ ಬಡತನ, ಪ್ರಾದೇಶಿಕ ಅಂತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಕುರಿತ ಚರ್ಚೆ ಗಳಲ್ಲಿ ಪ್ರಸ್ತುತವಾಗುತ್ತದೆ. ಸರ್ಕಾರದ ಜನಕಲ್ಯಾಣ ಯೋಜನೆಗಳು, ಸಮಾನ ಅವಕಾಶಗಳ ನೀತಿಗಳು ಮತ್ತು ಒಳಗೊಂಡ ಅಭಿವೃದ್ಧಿಯ ಪರಿಕಲ್ಪನೆಗಳು ಅಂಬೇಡ್ಕರ್ ಅವರ ಆಲೋಚನೆ ಗಳನ್ನೇ ಪ್ರತಿಬಿಂಬಿಸುತ್ತವೆ ಎನ್ನಬಹುದು.

ಅಂಬೇಡ್ಕರ್‌ರವರ ಸಾಧನೆಯ ಮಹತ್ವವನ್ನು ನಾವು ಆ ಕಾಲದ ಸಾಮಾಜಿಕ ಹಿನ್ನೆಲೆಯ ಬೆಳಕಿ ನಲ್ಲಿ ನೋಡುವುದಾದರೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಅತೀ ಹಿಂದುಳಿದ ಮತ್ತು ಸಾಮಾಜಿಕವಾಗಿ ತಿರಸ್ಕೃತ ವರ್ಗದಲ್ಲಿ ಜನಿಸಿದ ಅಂಬೇಡ್ಕರ್ ಅವರು ವಿಶ್ವದ ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾಲಯ ಗಳಲ್ಲಿ ಒಂದಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುವುದು ಸ್ವತಃ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು.

ಅವರ ವಿದ್ಯಾಭ್ಯಾಸದ ಪಯಣವು ಕೇವಲ ವೈಯಕ್ತಿಕ ಸಾಧನೆಯಲ್ಲ, ಅದು ಸಮಾಜದ ಕಟ್ಟು ನಿಟ್ಟಿನ ಜಾತಿ ವ್ಯವಸ್ಥೆಗೆ ಸವಾಲು ಹಾಕಿದ ಒಂದು ಬಲವಾದ ಘೋಷಣೆ ಮತ್ತು ಅದನ್ನು ಅಂಬೇಡ್ಕರ್ ಮೀರಿದ್ದರು. ಅಂಬೇಡ್ಕರ್ ಅವರ ಪಿಎಚ್.ಡಿ. ಸಾಧನೆಯು ಅಂದು ಅನೇಕರಿಗೆ ಪ್ರೇರಣೆಯಾಯಿತು.

ವಿಶೇಷವಾಗಿ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಅದು ಶಿಕ್ಷಣದ ಮೂಲಕ ಸಾಮಾಜಿಕ ಮುಕ್ತಿ ಸಾಧ್ಯವೆಂಬ ವಿಶ್ವಾಸವನ್ನು ಮೂಡಿಸಿತು. ‘ಶಿಕ್ಷಣವೇ ಶಕ್ತಿ’ ಎಂಬ ಅವರ ನಂಬಿಕೆ ಈ ಸಾಧನೆಯ ಮೂಲಕ ಸ್ಪಷ್ಟವಾಗಿ ವ್ಯಕ್ತವಾಯಿತು. ಜ್ಞಾನವನ್ನು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬಳಸಬೇಕೆಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ನೀಡಿದ್ದರು.

ಅಂಬೇಡ್ಕರ್ ಅವರ ಪಿಎಚ್.ಡಿಯ 99ನೇ ವಾರ್ಷಿಕೋತ್ಸವವು ಕೇವಲ ಒಂದು ಆಚರಣೆಗಷ್ಟೇ ಸೀಮಿತವಾಗಿರಬಾರದು. ಅದು ಚಿಂತನೆಗೆ ಪ್ರೇರಣೆ ನೀಡುವ ಸಂದರ್ಭವಾಗಬೇಕು. ಅಂಬೇಡ್ಕರ್ ಅವರ ಆಲೋಚನೆಗಳು ಇಂದಿಗೂ ಸಮಕಾಲೀನವಾಗಿವೆ. ಭಾರತವು ಇನ್ನೂ ಸಾಮಾಜಿಕ ಅಸಮಾ ನತೆ, ಆರ್ಥಿಕ ಅಂತರ, ಹಾಗೂ ಶಿಕ್ಷಣದ ಅಸಮಾನ ಪ್ರವೇಶ ಇಂತಹ ಸಮಸ್ಯೆಗಳನ್ನು ಎದುರಿಸು ತ್ತಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ತತ್ವಗಳು ಮತ್ತು ಅವರ ಸಂಶೋಧನಾ ದೃಷ್ಟಿಕೋನ ವು ನಮಗೆ ಮಾರ್ಗದರ್ಶನ ನೀಡುತ್ತವೆ.

ಅವರ ಪಿಎಚ್.ಡಿ. ಸಂಶೋಧನೆಯು ನಂತರ ಅವರ ರಾಜಕೀಯ ಮತ್ತು ಕಾನೂನು ಕ್ಷೇತ್ರದ ಕಾರ್ಯಗಳಿಗೆ ಬಲವಾದ ನೆಲೆಯಾಯಿತು. ಭಾರತದ ಸಂವಿಧಾನದ ಶಿಲ್ಪಿಯಾಗಿ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರತಿಷ್ಠಾಪಿಸಿದರು. ಅವರ ಬೌದ್ಧಿಕ ಸಾಮರ್ಥ್ಯವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ; ಅದು ಸಮಾಜದ ವಿವಿಧ ಆಯಾಮಗಳನ್ನು ಸ್ಪರ್ಶಿಸಿತು ಎನ್ನಬಹುದು.

2027ರಲ್ಲಿ ನಡೆಯಲಿರುವ ಶತಮಾನೋತ್ಸವದ ಹಿನ್ನೆಲೆಯಲ್ಲಿ 2026ನೇ ವರ್ಷದ 99ನೇ ವಾರ್ಷಿಕೋತ್ಸವವು ಒಂದು ಪೂರ್ವಭಾವಿ ಚಿಂತನೆಯ ಕಾಲವಾಗಿದೆ. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ನೀತಿ ರೂಪಿಸುವ ಸಂಸ್ಥೆಗಳು ಅಂಬೇಡ್ಕರ್ ಅವರ ಪಿಎಚ್.ಡಿ. ಕೃತಿಯನ್ನು ಪುನರ್ ಪರಿಶೀಲನೆ ಮಾಡುವ ಅಗತ್ಯವಿದೆ. ಈ ಸಂಬಂಧ ಸಮ್ಮೇಳನಗಳು, ಕಾರ್ಯಾ ಗಾರಗಳು ಮತ್ತು ಪ್ರಕಟಣೆಗಳು ಆಯೋಜನೆಯಾಗಬೇಕು. ಅವರ ಆಲೋಚನೆಗಳನ್ನು ಇಂದಿನ ಕಾಲದ ಸವಾಲುಗಳೊಂದಿಗೆ ಸಂಪರ್ಕಿಸುವ ಪ್ರಯತ್ನಗಳು ನಡೆಯಬೇಕು.

ಇಂದಿನ ಡಿಜಿಟಲ್ ಯುಗದಲ್ಲಿ, ಅಂಬೇಡ್ಕರ್ ಅವರ ಕೃತಿಗಳನ್ನು ಹೆಚ್ಚು ವ್ಯಾಪಕವಾಗಿ ಜನರಿಗೆ ತಲುಪಿಸುವ ಅವಕಾಶವಿದೆ. ಅವರ ಸಂಶೋಧನಾ ಕೃತಿಗಳನ್ನು ಕನ್ನಡ ಸೇರಿದಂತೆ ವಿವಿಧ ಭಾಷೆ ಗಳಿಗೆ ಅನುವಾದಿಸುವುದು ಅಗತ್ಯವಾಗಿದೆ. ಇದು ಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸು ವಲ್ಲಿ ಸಹಾಯಕವಾಗುತ್ತದೆ.

ಅಂಬೇಡ್ಕರ್ ಅವರ ಪಿಎಚ್.ಡಿ. ಸಾಧನೆಯ 99 ವರ್ಷಗಳನ್ನು ನಾವು ಸ್ಮರಿಸುವಾಗ, ಅದು ಕೇವಲ ಒಂದು ಇತಿಹಾಸದ ಘಟನೆಯಾಗಿ ಉಳಿಯಬಾರದು. ಅದು ಇಂದಿನ ಮತ್ತು ಭವಿಷ್ಯದ ಪೀಳಿಗೆಗಳಿಗೆ ದಿಕ್ಕು ತೋರಿಸುವ ದೀಪವಾಗಬೇಕು. ಅವರ ಜೀವನವು ನಮಗೆ ಒಂದು ಸ್ಪಷ್ಟ ಸಂದೇಶ ನೀಡುತ್ತದೆ. ಶಿಕ್ಷಣ, ಪರಿಶ್ರಮ ಮತ್ತು ದೃಢನಿಶ್ಚಯದಿಂದ ಯಾವುದೇ ಅಡೆತಡೆಗಳನ್ನು ಜಯಿಸಬಹುದು.

ಕೊನೆಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪಿಎಚ್.ಡಿ. ಸಾಧನೆಯ 99ನೇ ವಾರ್ಷಿಕೋತ್ಸವವು ಭಾರತಕ್ಕೆ ಕೇವಲ ಗೌರವ ಮತ್ತು ಹೆಮ್ಮೆ ನೀಡುವುದಲ್ಲ, ಅದು ನಮ್ಮ ಹೊಣೆಗಾರಿಕೆಯನ್ನು ಕೂಡ ನೆನಪಿಸುತ್ತದೆ. ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸುವ ಸಮಾಜ ನಿರ್ಮಾಣದಲ್ಲಿ ನಾವು ಎಲ್ಲರೂ ಪಾಲ್ಗೊಳ್ಳಬೇಕೆಂಬ ಕರೆಯನ್ನು ಇದು ನೀಡುತ್ತದೆ. ಅವರ ಬೌದ್ಧಿಕ ಪರಂಪರೆಯನ್ನು ಮುಂದುವರಿಸುವುದು ನಮ್ಮ ಕರ್ತವ್ಯವಾಗಿದೆ.

ಅಂಬೇಡ್ಕರ್ ಅವರ ದಾರಿಯನ್ನು ಅನುಸರಿಸುವುದು ಎಂದರೆ ಕೇವಲ ಅವರನ್ನು ಸ್ಮರಿಸುವುದಲ್ಲ, ಅವರ ಆಲೋಚನೆಗಳನ್ನು ಜೀವನದಲ್ಲಿ ಅನುಸರಿಸುವುದಾಗಿದೆ. ಇದೇ ಅವರ ಪಿಎಚ್.ಡಿ. ಸಾಧನೆಯ ನಿಜವಾದ ಸ್ಮರಣೆ ಮತ್ತು ಗೌರವವಾಗಿದೆ.