Dr Parinita Ravi Column: ಸೂರ್ಯನೆಡೆ ಮುನ್ನುಗ್ಗಲು ಮಕ್ಕಳಿಗೆ ಹೇಳಬೇಕಾಗಿಲ್ಲ
ಸಮಾನ ವಯಸ್ಕರೆಲ್ಲ ಜತೆಗೂಡಿ ಕುಡಿತ, ಧೂಮಪಾನ, ಮಾದಕ ವಸ್ತುಗಳ ವ್ಯಸನಕ್ಕೆ ಒಡ್ಡಿ ಕೊಳ್ಳು ವುದು ಬಹಳಷ್ಟು ಕಡೆ ಕಂಡುಬರುತ್ತಿದೆ. ಯಾಕೆ ಹೀಗೆ? ರುಚಿಯಾದ ಅಡುಗೆ ತಯಾರಿಸು ವುದು ಹೇಗೆ, ಉಡುಪನ್ನು ನವವಿನ್ಯಾಸದಲ್ಲಿ ಹೊಲಿಯುವುದು ಹೇಗೆ ಎಂಬೆಲ್ಲ ವಿಷಯಗಳನ್ನು ಪುಸ್ತಕ ಓದಿ ಕಲಿಯಬಹುದು. ಇಂಥ ಯಾವುದೇ ವಿಚಾರ ಕೇಳಿದರೂ ‘ಗೂಗಲ್ ಭಗವಾನ್’ ನಮಗೆ ದಾರಿ ತೋರದಿರ ಲಾರ. ಈಗ ಬಂದಿರುವ ‘ಚಾಟ್ ಜಿಪಿಟಿ’ಯಂತೂ ಏನು ಕೇಳಿದರೂ ಪುಟಗಟ್ಟಲೆ ಉತ್ತರವನ್ನು ಹೆಕ್ಕಿ ಕೊಡುತ್ತದೆ
ಒಡಲಾಳ
ಡಾ.ಪರಿಣಿತ ರವಿ
ಕೆಲ ವಿದ್ಯಾರ್ಥಿಗಳ ಮನೆಯಲ್ಲಿ ತೀರಾ ಬಡತನ, ತಮ್ಮ ಯಾವುದೇ ಬಯಕೆಗಳನ್ನು ಈಡೇರಿಸಿ ಕೊಳ್ಳಲಾಗುತ್ತಿಲ್ಲ ಎಂಬ ಹತಾಶೆ. ಮತ್ತೆ ಕೆಲವರ ಹೆತ್ತವರಲ್ಲಿ ಸಾಮರಸ್ಯವಿಲ್ಲ, ದಿನಾ ಜಗಳ. ಇನ್ನು ಕೆಲವರ ಮನೆಗಳಲ್ಲಿ ಹೆತ್ತವರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಒಂದೂ ಗೊತ್ತಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಅವರಿಗೆ ವ್ಯವಧಾನವಿಲ್ಲ. ಹೀಗಾದಲ್ಲಿ ಮಕ್ಕಳು ದಾರಿ ತಪ್ಪುವುದು ಸಹಜ ತಾನೇ ?
ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಪರಿಚಯದವರು, ಬಂಧುಗಳು ಎದುರಾದಾಗ, “ಅಬ್ಬಾ! ಈಗಿನ ಮಕ್ಕಳು ದಿನದ 24 ಗಂಟೆ ಮೊಬೈಲಿಂದ ಕಣ್ಣು ತೆಗೆಯೋದಿಲ್ಲ, ಗುರು-ಹಿರಿಯರು, ಹೆತ್ತವರು ಅನ್ನುವ ಗೌರವವಿಲ್ಲ. ಬುದ್ಧಿಮಾತು ಹೇಳಿದರೆ ಉರಿದುಬೀಳ್ತಾರೆ. ಹೇಗೆ ಸಂಭಾಳಿಸು ವುದೋ ಗೊತ್ತಾಗ್ತಿಲ್ಲ. ಈಗಲೇ ಹೀಗಾದರೆ ಮುಂದೆ ಹೇಗೋ?" ಎಂಬಂಥ ಮಾತುಗಳು ಸಾಧಾರಣ ವಾಗಿ ಕೇಳಿ ಬರುವು ದುಂಟು. ಇದು ವಾಸ್ತವ ಕೂಡ. ಹಾಗಂತ, ಇದಕ್ಕೆ ಮಕ್ಕಳನ್ನೇ ಸಂಪೂರ್ಣ ಹೊಣೆ ಮಾಡಿ, ‘ನಮ್ಮ ದೇನೂ ಪಾತ್ರವಿಲ್ಲ’ ಎಂದು ಕೈತೊಳೆದುಕೊಳ್ಳಲಾದೀತೇ? ಇಂದಿನ ಮಕ್ಕಳು, ಅದರಲ್ಲೂ 18-22ರ ವಯೋಮಾನದವರು ಯಾವುದೋ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ.
ಇದನ್ನೂ ಓದಿ: Prakash Hegde Column: ಪಾಂಗೊಂಗ್ ಸರೋವರದ ಮೇಲೆ ಮ್ಯಾರಥಾನ್ !
ಸಮಾನ ವಯಸ್ಕರೆಲ್ಲ ಜತೆಗೂಡಿ ಕುಡಿತ, ಧೂಮಪಾನ, ಮಾದಕ ವಸ್ತುಗಳ ವ್ಯಸನಕ್ಕೆ ಒಡ್ಡಿ ಕೊಳ್ಳುವುದು ಬಹಳಷ್ಟು ಕಡೆ ಕಂಡುಬರುತ್ತಿದೆ. ಯಾಕೆ ಹೀಗೆ? ರುಚಿಯಾದ ಅಡುಗೆ ತಯಾರಿಸು ವುದು ಹೇಗೆ, ಉಡುಪನ್ನು ನವವಿನ್ಯಾಸದಲ್ಲಿ ಹೊಲಿಯುವುದು ಹೇಗೆ ಎಂಬೆಲ್ಲ ವಿಷಯಗಳನ್ನು ಪುಸ್ತಕ ಓದಿ ಕಲಿಯಬಹುದು. ಇಂಥ ಯಾವುದೇ ವಿಚಾರ ಕೇಳಿದರೂ ‘ಗೂಗಲ್ ಭಗವಾನ್’ ನಮಗೆ ದಾರಿ ತೋರದಿರಲಾರ. ಈಗ ಬಂದಿರುವ ‘ಚಾಟ್ ಜಿಪಿಟಿ’ಯಂತೂ ಏನು ಕೇಳಿದರೂ ಪುಟಗಟ್ಟಲೆ ಉತ್ತರವನ್ನು ಹೆಕ್ಕಿ ಕೊಡುತ್ತದೆ.
ಆದರೆ, ನಮ್ಮ ಮಕ್ಕಳನ್ನು ಬೆಳೆಸುವುದು ಹೇಗೆಂಬುದನ್ನು ಪುಸ್ತಕ ಓದಿಯೋ, ಗೂಗಲ್ ಸಹಾಯ ದಿಂದಲೋ ಕಲಿಯಲಾಗದು. ಈ ಕುರಿತಾಗಿ ಮಾರುಕಟ್ಟೆಯಲ್ಲಿ ಹಲವು ಪುಸ್ತಕಗಳು ಲಭ್ಯವಿರ ಬಹುದು; ಆದರೆ ಅದರಲ್ಲಿ ಹೇಳಿದ ವಿಚಾರಗಳನ್ನು ಎಲ್ಲ ಮಕ್ಕಳಿಗೂ ಅನ್ವಯಿಸಲಾದೀತೇ?ಪ್ರತಿಯೊಂದು ಮಗುವೂ ವಿಭಿನ್ನ. ಒಂದೇ ತಾಯಿಯ ಇಬ್ಬರು ಮಕ್ಕಳು ಭಿನ್ನವಾಗಿರುವುದನ್ನೂ ತದ್ವಿರುದ್ಧವಾಗಿರುವುದನ್ನೂ ಕಂಡಿದ್ದೇವೆ. ಅನುಭವದಿಂದ ಬಲ್ಲವರೂ ಆಗಿದ್ದೇವೆ.
ಮೊದಲ ಮಗುವನ್ನು ಬೆಳೆಸಲು ಅನುಸರಿಸಿದ ರೀತಿಗಳೆಲ್ಲವೂ ಎರಡನೇ ಮಗುವಿಗೂ ಸರಿ ಹೊಂದುತ್ತವೆ ಎನ್ನಲಾಗದು. ಹೀಗಿರುವಾಗ, ಜಗತ್ತಿನ ಮಕ್ಕಳ ವಿಭಿನ್ನತೆಯನ್ನು ಒಂದೇ ಮಾಪಕ ದಿಂದ ಅಳೆಯಲಾದೀತೇ? ಪ್ರತಿಯೊಂದು ಮಗುವಿನ ಭಾವನೆಗಳು ಮತ್ತು ಆಲೋಚನೆಗಳು, ಮನೆಯ ಹಾಗೂ ಸುತ್ತಮುತ್ತಲಿನ ಪರಿಸರ, ಅದು ಎದುರಿಸುವ ಸವಾಲುಗಳು ಎಲ್ಲವೂ ಭಿನ್ನ ವಾಗಿರುವ ಕಾರಣ ಇದಕ್ಕೊಂದು ‘ಸಾಮಾನ್ಯೀಕರಿಸಿದ ಸಿದ್ಧಾಂತ’ವನ್ನು ಹೇಳಲಾಗದು.
ವಿವಿಧ ಸ್ತರದ ಬೋಧನಾ ವೃತ್ತಿಯಲ್ಲಿ ಸಾಕಷ್ಟು ವರ್ಷಗಳನ್ನು ಕಳೆದಿರುವ ನನಗೆ ಎಲ್ಲ ಹಂತದ ಮಕ್ಕಳ ಸ್ವಭಾವ ಮತ್ತು ಒಡನಾಟದ ಅನುಭವವಿದೆ. ಇದರ ಆಧಾರದ ಮೇಲೆ ಒಂದಿಷ್ಟು ಸಂಗತಿ ಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಅದು ಡಿಗ್ರಿ 6ನೇ ಸೆಮಿಸ್ಟರ್ ಮಕ್ಕಳಿಗೆ ಯೂನಿವರ್ಸಿಟಿ ಪರೀಕ್ಷೆಯ ಸಮಯವಾದ್ದರಿಂದ ಒಂದು ವಾರ ‘ಸ್ಟಡಿ ಲೀವ್’ ನೀಡಲಾಗಿತ್ತು.
ಪರೀಕ್ಷೆ ಆರಂಭವಾಗಲು 2 ದಿನವಷ್ಟೇ ಉಳಿದಿತ್ತು. ನಾವು ಬಿ.ಎ. ಇಂಗ್ಲಿಷ್ ವಿದ್ಯಾರ್ಥಿಗಳಿಗೆ, “ಯಾರೂ ಕಾಲೇಜು ಪರಿಸರದಲ್ಲಿ ಕಾಣಿಸಿಕೊಳ್ಳಬಾರದು, ಮನೆಯಲ್ಲಿದ್ದು ಕೊನೆಯ ಒಂದು ವಾರವಾದರೂ ಓದಬೇಕು" ಎಂದು ತಿಳಿಸಿದ್ದೆವು. ಜತೆಗೆ, ಸೆಕ್ಯುರಿಟಿಯವರಲ್ಲಿ ಕೆಲ ವಿದ್ಯಾರ್ಥಿಗಳ ಹೆಸರು ಹೇಳಿ, “ಅವರೇನಾದರೂ ಬಂದರೆ ವಿಭಾಗದ ಮುಖ್ಯಸ್ಥರ ಅನುಮತಿಯಿಲ್ಲದೆ ಒಳಗೆ ಬಿಡಬಾರದು" ಎಂದು ಹೇಳಿದ್ದೆವು.
ಮರುದಿನ ಸುಮಾರು 11 ಗಂಟೆಯ ಹೊತ್ತಿಗೆ, ನಾವು ಹೆಸರಿಸಿದ್ದವರು ಕಾಲೇಜಿನ ಇತರ ವಿಭಾಗದ ವಿದ್ಯಾರ್ಥಿಗಳ ಜತೆ ಬಂದರು. ಸೆಕ್ಯುರಿಟಿಯವರು ಒಳಗೆ ಬಿಡಲಿಲ್ಲವೆಂದು ರೊಚ್ಚಿಗೆದ್ದ ಇಬ್ಬರು ವಿದ್ಯಾರ್ಥಿಗಳು ಕಾಲೇಜಿನ ಗೋಡೆ ಹಾರಿ, ದೊಡ್ಡದೊಂದು ಕಲ್ಲಿನಿಂದ ಗೇಟಿನ ಬೀಗ ಮುರಿದರು. ತಡೆಯಲು ಬಂದ ಸೆಕ್ಯುರಿಟಿಯವರಿಗೆ ಹೊಡೆದು ಗೇಟು ತೆರೆದರು. ಹೊರಗೆ ಕಾದಿದ್ದ ವಿದ್ಯಾರ್ಥಿ ಗಳೆಲ್ಲ ಒಳನುಗ್ಗಿದರು. ಗಲಾಟೆ ಜೋರಾಗಿ, ಪ್ರಿನ್ಸಿಪಾಲ್, ಡೈರೆಕ್ಟರ್, ಡೀನ್, ಎಚ್‌ಒಡಿ, ಕೆಲವು ಪ್ರಾಧ್ಯಾಪಕರು ಇವರನ್ನು ತಡೆಯಲು ಬಂದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಆ ವಿದ್ಯಾರ್ಥಿಗಳು. ಪೊಲೀಸರು ಬಂದರು, ಕೇಸ್ ಆಯಿತು.
ಕೊನೆಗೆ, ಗಲಾಟೆಯ ಮುಖ್ಯ ಪಾತ್ರಧಾರಿಗಳಾದ ನಾಲ್ವರು ಹುಡುಗರು ಮತ್ತು ಮೂವರು ಹುಡುಗಿ ಯರನ್ನು ಗುರುತಿಸಿ ಕೇಸ್ ಸ್ಟಡಿ ಮಾಡಲೆಂದು ಪ್ರಾಧ್ಯಾಪಕರ ತಂಡವೊಂದನ್ನು ಕಾಲೇಜು ಆಡಳಿತ ಮಂಡಳಿಯು ನಿಯೋಜಿಸಿತು. ತಂಡದಲ್ಲಿ ನಾನೂ ಒಬ್ಬಳಾಗಿದ್ದೆ, ಹೀಗಾಗಿ ಆ ವಿದ್ಯಾರ್ಥಿ ಗಳ ಹೆತ್ತವರನ್ನು ಕರೆಸಿ ಮಾತನಾಡಬೇಕಿತ್ತು.
ಆಗ, ಬೀಗ ಒಡೆದ ವಿದ್ಯಾರ್ಥಿಯ ಪೋಷಕರೆಂದರು- “ನಮ್ಮ ಮಗ ಬಹಳ ಒಳ್ಳೆಯವನು, ಸ್ನೇಹಿತರ ಜತೆ ಸೇರಿ ಹಾಳಾಗಿದ್ದಾನೆ. ಅವನದ್ದೇನೂ ತಪ್ಪಿಲ್ಲ. ಮನೆಯಲ್ಲಿ ನಾವು ತುಂಬಾ ಕಟ್ಟುನಿಟ್ಟು". ಆತನಿಗೆ ಕುಡಿತ, ಧೂಮಪಾನ, ಡ್ರಗ್ಸ್ ಚಟಗಳಿರುವುದರ ಬಗ್ಗೆ ಅವರಿಗೆ ಹೇಳಿದಾಗ, “ಅವನು ಮೊದ ಲು ಹಾಗಿರಲಿಲ್ಲ, ಎಲ್ಲವೂ ಸ್ನೇಹಿತರಿಂದ ಕಲಿತದ್ದು. ನೀವು ಮೊದಲು ಅವರಿಗೆ ಬುದ್ಧಿ ಹೇಳಿ" ಅಂದರು. ಎರಡನೇ ವಿದ್ಯಾರ್ಥಿಯ ಹೆತ್ತವರು, “ಸಮಾಜದಲ್ಲಿ ಮರ್ಯಾದಸ್ಥರಾಗಿರುವ ನಾವು ಇವನಿಂದ ತಲೆ ತಗ್ಗಿಸುವಂತಾಯಿತು.
ಮನೆಯಲ್ಲಿ ನಾವು ಹೇಳಿದ್ದನ್ನು ಇವನು ಕೇಳುವುದಿಲ್ಲ, ನಿಮ್ಮಿಂದಲೂ ಇವನನ್ನು ಬಗ್ಗಿಸಲು ಆಗುವುದಿಲ್ವಾ?" ಎಂದು ಮರುಪ್ರಶ್ನಿಸಿದರು. ಮೂರನೇ ವಿದ್ಯಾರ್ಥಿಯ ಮನೆಯವರು, “ನೋಡಿ ಮೇಡಮ್, ಒಂದು ಹಂತದವರೆಗೆ ಮಕ್ಕಳಿಗೆ ಬುದ್ಧಿ ಹೇಳಬಹುದು. ಇಷ್ಟು ದೊಡ್ಡವನಾಗಿದ್ದಾನೆ, ಮರ್ಯಾದೆಯಿಂದ ಬದುಕಬೇಕೆಂದು ಅವನಿಗೇ ಗೊತ್ತಿರಬೇಡವೇ? ಕಾಲೇಜು ಫೀಸ್ ಕಟ್ಟುವು ದಷ್ಟೇ ನಮ್ಮ ಕೆಲಸ. ಹಾಳಾದರೆ ಅವನಿಗೆ ತಾನೇ ನಷ್ಟ.. ನಾವೇನೂ ಮಾಡಲಾಗದು" ಅಂದರು. ನಾಲ್ಕನೆಯ ವಿದ್ಯಾರ್ಥಿಯ ಮನೆಯವರು, “ಇದೇನು ಶಾಲೆಯೋ ಕಾಲೇಜೋ? ಇಷ್ಟು ದೊಡ್ಡ ಮಕ್ಕಳ ಹೆತ್ತವರನ್ನು ಹೀಗೆ ಕರೆಸಿಕೊಳ್ಳುವುದು ನಾಚಿಕೆಗೇಡು ಅಲ್ಲವೇ? ನಾವು ಮಗನನ್ನು ಸ್ವತಂತ್ರ ವಾಗಿ ಬೆಳೆಯಲು ಬಿಟ್ಟಿದ್ದೇವೆ, ಅವನ ವಿಷಯದಲ್ಲಿ ಹೆಚ್ಚು ಮೂಗು ತೂರಿಸುವುದಿಲ್ಲ.
ನಮಗಿಲ್ಲದ ಕಾಳಜಿ ನಿಮಗ್ಯಾಕೆ?" ಎಂದುಬಿಟ್ಟರು. ಇನ್ನುಳಿದ ಮೂವರು ವಿದ್ಯಾರ್ಥಿನಿಯರ ಪೋಷಕರ ಮಾತುಗಳೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ! ಯಾವುದೇ ಪದವಿ ಕೋರ್ಸ್ ಆದರೂ ಮೊದಲ ವರ್ಷದ ಎರಡು ಸೆಮಿಸ್ಟರ್ ಪೇಪರ್ ಇಂಗ್ಲಿಷ್ ಇದೆಯಾದ್ದರಿಂದ ಬಹುತೇಕ ವಿದ್ಯಾರ್ಥಿಗಳು ನನಗೆ ಪರಿಚಿತರೇ. ಆದರೆ ಅವರು ಅಂತಿಮ ವರ್ಷಕ್ಕೆ ತಲುಪಿದಾಗ ಬಹಳಷ್ಟು ಬದಲಾಗಿರುತ್ತಾರೆ. ಆ ಪೈಕಿ ಕೆಲವರಾದರೂ ಮಾತಿಗಿಳಿದಾಗ ಮನದಾಳದ ಸತ್ಯಗಳನ್ನು ಹೇಳಿದ್ದಿದೆ.
ಅದನ್ನು ಕೇಳಿ ನಾನು ದಿಗಿಲುಗೊಂಡಿದ್ದಿದೆ. ಕೆಲವರಿಗೆ ಮನೆಯಲ್ಲಿ ತೀರಾ ಬಡತನ, ತಮ್ಮ ಯಾವುದೇ ಬಯಕೆಗಳನ್ನು ಈಡೇರಿಸಿಕೊಳ್ಳಲಾಗುತ್ತಿಲ್ಲ ಎಂಬ ಹತಾಶೆ. ಮತ್ತೆ ಕೆಲವರ ಹೆತ್ತವರಲ್ಲಿ ಸಾಮರಸ್ಯವಿಲ್ಲ, ದಿನಾ ಜಗಳ. ಇನ್ನು ಕೆಲವರ ಮನೆಗಳಲ್ಲಿ ಹೆತ್ತವರಿಗೆ ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಒಂದೂ ಗೊತ್ತಿಲ್ಲ.
ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಅವರಿಗೆ ವ್ಯವಧಾನವಿಲ್ಲ. ಹೆಚ್ಚಿನ ಮನೆಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು. 18 ದಾಟಿದ ಮಕ್ಕಳ ಬಗ್ಗೆ ಇನ್ನೇನು ಕಾಳಜಿ ಮಾಡುವುದಿದೆ ಎಂಬುದು ಅವರ ಧೋರಣೆ. ಇನ್ನು ಕೆಲವೊಂದು ಮನೆಗಳಲ್ಲಿ ಹೆತ್ತವರು ಅವಿದ್ಯಾವಂತರು, ಈಗಿನ ತಂತ್ರಜ್ಞಾನ ಯುಗ ಅವರಿಗೆ ಹೊಸದು. ಹಾಗಾಗಿ ಮಕ್ಕಳು ಏನು ಹೇಳಿದರೂ ಕೇಳುತ್ತಾರೆ, ನಂಬುತ್ತಾರೆ.
ಮಕ್ಕಳಿಗೆ ತಮಗಿಂತಲೂ ಹೆಚ್ಚು ಗೊತ್ತು ಎಂಬ ಭಾವ. ಈ ಅಮಾಯಕತೆಯನ್ನೇ ಮಕ್ಕಳು ದುರುಪಯೋಗಪ ಡಿಸಿಕೊಳ್ಳುತ್ತಾರೆ. ಅಪ್ಪ-ಅಮ್ಮನ ಮುಖವನ್ನೇ ಸರಿಯಾಗಿ ನೋಡಿರದ ಮಕ್ಕಳೂ ಇದ್ದಾರೆ. ಏಕೆಂದರೆ, ಮಕ್ಕಳು ಬೆಳಗ್ಗೆ ಏಳುವಷ್ಟರಲ್ಲಿ ಅವರು ಕೆಲಸಕ್ಕೆ ಹೋಗಿರುತ್ತಾರೆ, ಕೆಲಸ ಮುಗಿದು 11 ಗಂಟೆಗೆ ಮನೆಗೆ ಮರಳುವಷ್ಟರಲ್ಲಿ ಮಕ್ಕಳು ಮಲಗಿರುತ್ತಾರೆ.
“ಅಮ್ಮ ಇಡೀ ದಿನ ಸೀರಿಯಲ್ ನೋಡ್ತಾ ಇರ‍್ತಾರೆ, ನಾನು ಮನೆಯಲ್ಲಿದ್ದೀನೋ ಇಲ್ಲವೋ ಎಂಬು ದೂ ಅವರಿಗೆ ಗೊತ್ತಿರುವುದಿಲ್ಲ. ಮಾತಿಲ್ಲ, ಕಥೆಯಿಲ್ಲ. ಜೀವನ ಬರೀ ಬೋರು" ಎಂಬುದು ವಿದ್ಯಾರ್ಥಿನಿಯೊಬ್ಬಳ ಅಳಲು. “ನನಗೆ ಮನೆಯಿಂದ ಒಮ್ಮೆ ತೊಲಗಿದರೆ ಸಾಕೆನಿಸಿದೆ, ಮನೆಯಲ್ಲಿ ಎಲ್ಲದಕ್ಕೂ ಬೈತಾರೆ, ರೇಗುತ್ತಾರೆ" ಎಂಬುದು ಮತ್ತೊಬ್ಬನ ಮಾತು.
“ಈಗಿನ ಮಕ್ಕಳಿಗೆ ಯಾವುದೇ ಸಮಾರಂಭ ಬೇಕಿಲ್ಲ. ಪೂಜೆಯಲ್ಲಿ, ದೇಗುಲ ಭೇಟಿಯಲ್ಲಿ ಆಸಕ್ತಿ ಯಿಲ್ಲ. ಸಂಸ್ಕೃತಿ-ಮೌಲ್ಯಗಳೆಂದರೆ ಅಲರ್ಜಿ. ಅಡ್ವೈಸ್ ಮಾಡಿದರೆ ಆಗುವುದಿಲ್ಲ. ಹೀಗಾಗಿ, ದಿನವಿಡೀ ಗೆಳೆಯರೊಂದಿಗೆ ಇರುವುದೆಂದರೆ ಓಕೆ, ಮೊಬೈಲ್ ಹಿಡಿದು ದಿನವಿಡೀ ಕೋಣೆಯೊ ಳಗಿರುವುದೆಂದರೆ ಪರಮಸುಖ"- ಈಗಿನ ಮಕ್ಕಳ ಬಗೆಗಿನ ಇಂಥ ಎಲ್ಲ ದೂರುಗಳನ್ನೂ ಒಪ್ಪಿ ಕೊಳ್ಳೋಣ; ಆದರೆ ಅವರು ಹಾಗಿರುವುದೇಕೆ ಎಂಬುದರ ಕುರಿತೂ ಆಲೋಚಿಸಬೇಕಲ್ಲವೇ? ಅಮೆರಿಕನ್ ಕಾದಂಬರಿಗಾರ್ತಿ ಜೊಯ್ಸ್ ಮೆನಾರ್ಡ್ ಹೇಳುತ್ತಾರೆ, “ಕೇವಲ ಮಕ್ಕಳಷ್ಟೇ ಬೆಳೆಯು ವುದಿಲ್ಲ, ಅವರ ಜತೆಗೆ ಪೋಷಕರೂ ಬೆಳೆಯುತ್ತಾರೆ.
ಮಕ್ಕಳು ತಮ್ಮ ಜೀವನದಲ್ಲಿ ಏನು ಮಾಡುತ್ತಾರೆಂಬುದನ್ನು ನಾವು ನೋಡುವ ಹಾಗೆ, ನಮ್ಮ ಜೀವನದಲ್ಲಿ ನಾವೇನು ಮಾಡುತ್ತಿದ್ದೇವೆ ಎಂಬುದನ್ನೂ ಅವರು ನೋಡುತ್ತಿರುತ್ತಾರೆ. ನನ್ನ ಮಕ್ಕಳಿಗೆ ಸೂರ್ಯನ ಕಡೆಗೆ ಮುನ್ನುಗ್ಗುವಂತೆ ನಾನು ಹೇಳಲಾರೆ, ನಾನು ಅದನ್ನು ಮುಟ್ಟಲು ಪ್ರಯತ್ನವನ್ನಷ್ಟೇ ಮಾಡಬಹುದು" ಅಂತ. ಮಕ್ಕಳ ಬದುಕಲ್ಲಿ ಹೆತ್ತವರಿಗೆ ಇರುವ ಮಹತ್ತರ ಪಾತ್ರವನ್ನು ಹೇಳುವ ಅರ್ಥಗರ್ಭಿತ ಮಾತುಗಳಿವು.
Show interest in what your children are interested in ಎಂದಿದ್ದಾರೆ ಮಹತ್ರಿಯ ರಾ ಅವರು. ಮಕ್ಕಳಿಗೆ ರಜನಿಕಾಂತ್ ಇಷ್ಟವಾದರೆ ನಾವೂ ಇಷ್ಟಪಡಬೇಕಂತೆ, ಅವರಿಗೆ ಐಪಿಎಲ್ ಇಷ್ಟವಾದರೆ ನಾವೂ ಆಸಕ್ತಿ ತೋರಿಸಬೇಕಂತೆ. ಮಕ್ಕಳ ದಿಕ್ಕಿನಲ್ಲಿ ನಾವು ಎರಡು ಹೆಜ್ಜೆಗಳನ್ನಿಟ್ಟರೆ, ಅವರು ನಮ್ಮ ದಿಕ್ಕಿನಲ್ಲಿ ಹತ್ತು ಹೆಜ್ಜೆಗಳನ್ನಿಡಲು ಆಸಕ್ತಿ ತೋರುತ್ತಾರೆ ಎನ್ನುತ್ತಾರೆ ಮಹತ್ರಿಯ ರಾ. ಮಕ್ಕಳು ದಾರಿತಪ್ಪುವುದಕ್ಕೆ ಸಮಾಜ, ಸಹವಾಸ, ಸನ್ನಿವೇಶ ಎಲ್ಲವೂ ಅವುಗಳದ್ದೇ ಆದ ಪಾತ್ರ ವನ್ನು ನಿರ್ವಹಿಸುತ್ತವೆ.
ಡಿವಿಜಿಯವರು ಹೇಳಿದಂತೆ, “ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು| ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ || ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ| ಎಲ್ಲರೊಳಗೊಂದಾಗು ಮಂಕುತಿಮ್ಮ||" ಎಂಬ ನೀತಿಸಾಲುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಮನೆಯ ಮಕ್ಕಳಿಗೆ ತಿಳಿಹೇಳಲು ಪ್ರಯತ್ನಿಸುವುದಷ್ಟೇ ನಮ್ಮ ಕರ್ತವ್ಯ.
(ಲೇಖಕಿ ಸಹ ಪ್ರಾಧ್ಯಾಪಕಿ)