ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಟಿ ಮತ್ತು ಎಐ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ಕ್ರಾಂತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ದಿಗ್ಗಜ ಕಂಪನಿಗಳಿಗೆ, ತವರಿನಲ್ಲಿಯೇ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡಿ ಎಂದು ಒತ್ತಾ ಯಿಸಿದ್ದರೂ, ಅಮೆರಿಕದ ಕಂಪನಿಗಳು ಭಾರತ ದಲ್ಲಿ ಹಿಂದೆಂದೂ ಕಂಡರಿಯದಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರುವುದು ಗಮನಾರ್ಹ. ಈ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ, ಉಜ್ವಲ ಪ್ರಗತಿಯ ಮುನ್ನೋಟವನ್ನು ಅಕ್ಷರಶಃ ಮನಗಂಡಿವೆ.

ಐಟಿ ಮತ್ತು ಎಐ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ಕ್ರಾಂತಿ

-

Ashok Nayak Ashok Nayak Oct 25, 2025 1:10 PM

ಗೂಗಲ್‌ʼನಿಂದ ಭಾರೀ ಹೂಡಿಕೆ, ಜಗತ್ತಿನ ಎಐ ಹಬ್‌ ಆಗುತ್ತಿದೆ ಭಾರತ

ಜಾಗತಿಕ ತಂತ್ರಜ್ಞಾನ ನಕಾಶೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅಸ್ತಿತ್ವಕ್ಕೆ ಬರಲಿರುವ ಗೂಗಲ್ ಎಐ ಹಬ್ ಯೋಜನೆಯ ಪರಿಣಾಮ ಟೆಕ್ನಾಲಜಿಯ ಅಭಿವೃದ್ಧಿ ಮಾತ್ರವಲ್ಲದೆ ಹೇರಳ ಉದ್ಯೋಗಗಳು ಸಿಗಲಿವೆ. ಸ್ಟಾರ್ಟಪ್ ಇಕೊ ಸಿಸ್ಟಮ್ ಬೆಳೆಯಲಿದೆ. ಹೆಲ್ತ್ ಕೇರ್, ಶಿಕ್ಷಣ, ಕೃಷಿ, ಉದ್ದಿಮೆ, ಆತಿಥ್ಯೋದ್ಯಮ ಮೊದಲಾದ ವಲಯಗಳಿಗೂ ಬೆಳೆಯಲು ಅವಕಾಶ ಸೃಷ್ಟಿಯಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ತಂತ್ರಜ್ಞಾನ ಜಗತ್ತಿನಲ್ಲಿ ಈಗ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಇಂಟರ್‌ನೆಟ್ ದಿಗ್ಗಜ ಗೂಗಲ್‌ನ ಈ ನಿರ್ಧಾರ ಇಡೀ ಜಗತ್ತಿನ ಗಮನ ಸೆಳೆದಿದೆ. ಅಮೆರಿಕದ ಇಂಟರ್‌ನೆಟ್ ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಕೂಡ ಭಾರತ ದಲ್ಲಿ ಲಕ್ಷಾಂತರ ಕೋಟಿ ರುಪಾಯಿ ಬಂಡವಾಳ ಹೂಡಿಕೆ ಮಾಡುತ್ತಿರುವುದು ಗಮನಾರ್ಹ.

ಗೂಗಲ್ ನಮ್ಮ ದೇಶದಲ್ಲಿ ಮಾಡುತ್ತಿರುವ ಇದುವರೆಗಿನ ಅತಿ ದೊಡ್ಡ ಹೂಡಿಕೆ ಇದಾಗಿದೆ. ಇದರೊಂದಿಗೆ ಭಾರತ ಈಗ ಜಾಗತಿಕ ಮಟ್ಟದಲ್ಲಿ ಎಐ ಹಬ್ ಆಗಿ ಹೊರಹೊಮ್ಮುತ್ತಿದೆ. ಮೋದಿ ಸರಕಾರಕ್ಕೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ದಿಗ್ಗಜ ಕಂಪನಿಗಳಿಗೆ, ತವರಿನಲ್ಲಿಯೇ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡಿ ಎಂದು ಒತ್ತಾ ಯಿಸಿದ್ದರೂ, ಅಮೆರಿಕದ ಕಂಪನಿಗಳು ಭಾರತದಲ್ಲಿ ಹಿಂದೆಂದೂ ಕಂಡರಿಯದಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರು ವುದು ಗಮನಾರ್ಹ. ಈ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ, ಉಜ್ವಲ ಪ್ರಗತಿಯ ಮುನ್ನೋಟವನ್ನು ಅಕ್ಷರಶಃ ಮನಗಂಡಿವೆ.

ಇದನ್ನೂ ಓದಿ: ‌Mohan Vishwa Column: ಆರೆಸ್ಸೆಸ್‌ನ ಕಾರ್ಮಿಕ ಮತ್ತು ಮಹಿಳಾ ಸಂಘಟನೆ

ಆದ್ದರಿಂದಲೇ ಗೂಗಲ್ ಕೂಡ ಭಾರತದಲ್ಲಿ ಮಹತ್ವದ ಎಐ ಹಬ್ ನಿರ್ಮಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಇದು ಜಾಗತಿಕ ತಂತ್ರಜ್ಞಾನ ನಕಾಶೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಕಲ್ಪಿಸಲಿದೆ. ಇದರ ಮುಖ್ಯಾಂಶಗಳನ್ನು ತಿಳಿಯೋಣ ಬನ್ನಿ.

ಗೂಗಲ್‌ನಿಂದ ದಾಖಲೆಯ ೧.೨೫ ಲಕ್ಷ ಕೋಟಿ ಹೂಡಿಕೆ: ಆಂಧ್ರಪ್ರದೇಶದಲ್ಲಿ ಸ್ಥಾಪಿಸುತ್ತಿರುವ ಮಹತ್ವದ ಎಐ ಹಬ್, ಅಮೆರಿಕದ ಹೊರಗೆ ಗೂಗಲ್ ನಿರ್ಮಿಸುತ್ತಿರುವ ಅತ್ಯಂತ ದೊಡ್ಡ ಎಐ ಕೇಂದ್ರ ವಾಗಿರುವುದು ವಿಶೇಷ. ವಿಶಾಖಪಟ್ಟಣಂನಲ್ಲಿ ಇದು ನಿರ್ಮಾಣವಾಗುತ್ತಿದ್ದು, ೧ ಗಿಗಾ ವ್ಯಾಟ್ ಸಾಮರ್ಥ್ಯದ ಭವ್ಯ ಡೇಟಾ ಸೆಂಟರ್ ಕ್ಯಾಂಪಸ್ ತಲೆ ಎತ್ತಲಿದೆ.

ಗೂಗಲ್‌ನ ಪೂರ್ಣ ಪ್ರಮಾಣದ ಎಐ ಯೋಜನೆಯ ಭಾಗವಾಗಿ ಇದು ನಿರ್ಮಾಣವಾಗಲಿದೆ. ಆದ್ದರಿಂದ ಸಮಗ್ರ ಕ್ಲೌಡ್ ಮೂಲಸೌಕರ್ಯಗಳು, ಡೇಟಾ ಸಲ್ಯೂಷನ್ಸ್, ಎಐ ಮಾದರಿಗಳು ಭಾರತ ದಲ್ಲಿ ನಿರ್ಮಾಣವಾಗಲಿದೆ.

ಗೂಗಲ್ ಈ ಎಐ ಹಬ್ ಯೋಜನೆಯ ಸಲುವಾಗಿ, ಮುಂದಿನ ಐದು ವರ್ಷಗಳಲ್ಲಿ ೧೫ ಶತಕೋಟಿ ಡಾಲರ್ (ಸುಮಾರು ೧.೨೫ ಲಕ್ಷ ಕೋಟಿ ರುಪಾಯಿ) ಹೂಡಿಕೆಯನ್ನು ಮಾಡಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಎಐ ಬೇಡಿಕೆಯನ್ನುಪೂರೈಸಲು ಇದರಿಂದ ಪ್ರಯೋಜನವಾಗಲಿದೆ.

ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿದೆ. ಇಲ್ಲಿ ಹೂಡಿಕೆಯು ಕೇವಲ ಸರ್ವರ್ ಗಳು ಮತ್ತು ಡೇಟಾ ಸೆಂಟರ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಐ ಕೌಶಲಾಭಿವೃದ್ಧಿ, ಸಂಶೋಧನೆ, ಸ್ಥಳೀಯ ಸ್ಟಾರ್ಟಪ್‌ಗಳು, ಡಿಜಿಟಲ್ ತಂತ್ರಜ್ಷಾನದ ಅಭಿವೃದ್ಧಿಗೆ ಹೂಡಿಕೆ ವಿಸ್ತರಣೆಯಾಗಲಿದೆ. ಭಾರತದಲ್ಲಿ ಡಿಜಿಟಲ್ ಮೂಲಸೌಕರ್ಯದ ಪ್ರಗತಿಗೆ ಇದು ಪುಷ್ಟಿ ನೀಡಲಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅಸ್ತಿತ್ವಕ್ಕೆ ಬರಲಿರುವ ಗೂಗಲ್ ಎಐ ಹಬ್ ಯೋಜನೆಯ ಪರಿಣಾಮ ಟೆಕ್ನಾಲಜಿಯ ಅಭಿವೃದ್ಧಿ ಮಾತ್ರವಲ್ಲದೆ ಹೇರಳ ಉದ್ಯೋಗಗಳು ಸಿಗಲಿವೆ. ಸ್ಟಾರ್ಟಪ್ ಇಕೊ ಸಿಸ್ಟಮ್ ಬೆಳೆಯಲಿದೆ.

ಹೆಲ್ತ್ ಕೇರ್, ಶಿಕ್ಷಣ, ಕೃಷಿ, ಉದ್ದಿಮೆ, ಆತಿಥ್ಯೋದ್ಯಮ ಮೊದಲಾದ ವಲಯಗಳಿಗೂ ಬೆಳೆಯಲು ಅವಕಾಶ ಸೃಷ್ಟಿಯಾಗಲಿದೆ. ಭಾರತ ಈಗ ಕೇವಲ ಗ್ರಾಹಕವಲ್ಲ, ಎಐ ಉತ್ಪಾದಕ ಮತ್ತು ಸಂಶೋ ಧಕ ರಾಷ್ಟ್ರವಾಗಿಯೂ ವಿಕಾಸವಾಗುತ್ತಿರುವುದು ವಿಶೇಷ.

2025ರ ಅಕ್ಟೋಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ‘ಭಾರತ್ ಎಐ ಶಕ್ತಿ’ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಟಿ ಸಚಿವ ಅಶ್ವಿನಿ ವೈಷ್ಣವ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ, ರಾಜ್ಯ ಐಟಿ ಸಚಿವ ನಾರಾ ಲೋಕೇಶ್ ಅವರು ಈ ಕುರಿತ ಘೋಷಣೆಯನ್ನು ಮಾಡಿದರು. ಗೂಗಲ್ ಕ್ಲೌಡ್ ಸಿಒಒ ಥಾಮಸ್ ಕುರಿಯನ್ ಸಮಾರಂಭದಲ್ಲಿ ಮಾತನಾಡುತ್ತಾ, ಗೂಗಲ್ ಕಂಪನಿಯು ಭಾರತದಲ್ಲಿ ಕಳೆದ ೨೧ ವರ್ಷದಿಂದ ಅಸ್ತಿತ್ವದಲ್ಲಿದ್ದು ೧೪,೦೦೦ ಭಾರತೀಯ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಗೂಗಲ್‌ನ ಐದು ಎಐ ಹಬ್‌ಗಳು ಈಗಾಗಲೇ ಭಾರತದಲ್ಲಿ ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚ್ಬೈ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಲ್ಲಿ, ವಿಶಾಖಪಟ್ಟಣಂನಲ್ಲಿ ಸ್ಥಾಪನೆಯಾಗುತ್ತಿರುವ ಎಐ ಹಬ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡಿರುವುದಾಗಿ ತಿಳಿಸಿದ್ದಾರೆ.

ಪಿಚ್ಬೈ ಅವರ ಪ್ರಕಾರ ಎಐ ಹಬ್ ಗಿಗಾವ್ಯಾಟ್ ಸಾಮರ್ಥ್ಯದ ಕಂಪ್ಯೂಟ್ ಕೆಪಾಸಿಟಿಯನ್ನು ಒಳಗೊಳ್ಳಲಿದೆ. ಅಂತಾರಾಷ್ಟ್ರೀಯ ಸಬ್‌ಸೀ ಗೇಟ್ ವೇ, ದೊಡ್ಡ ಮಟ್ಟದ ಇಂಧನ ಮೂಲ ಸೌಕರ್ಯವನ್ನು ಒಳಗೊಳ್ಳಲಿದೆ. ಇದರಿಂದಾಗಿ ಭಾರತದ ಉದ್ಯಮಿಗಳು, ತಂತ್ರಜ್ಞಾನ ವಲಯ ಮತ್ತು ಜನರಿಗೆ ಎಐ ತಂತ್ರಜ್ಞಾನದ ಪ್ರಯೋಜನಗಳು ಹೆಚ್ಚು ಲಭಿಸಲಿದೆ. ದೇಶದ ಆರ್ಥಿಕ ಪ್ರಗತಿಗೂ ಇದು ಕಾರಣವಾಗಲಿದೆ.

ಲಕ್ಷಾಂತರ ನೇರ-ಪರೋಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ: ಈ ಡೇಟಾ ಸೆಂಟರ್‌ಗಳು ಸಂಪೂರ್ಣ ವಾಗಿ ಪರಿಸರಸ್ನೇಹಿಯಾಗಿರುವ ಸ್ವಚ್ಛ ಮತ್ತು ಹಸಿರು ಇಂಧನವನ್ನು ಬಳಸಿಕೊಳ್ಳಲಿದೆ. ಹೆಚ್ಚುವರಿಯಾಗಿ ಹೊಸ ಅಂತಾರಾಷ್ಟ್ರೀಯ ಜಲಾಂತರ್ಗಾಮಿ ಕೇಬಲ್ ಗಳು ಗೂಗಲ್‌ನ ಗ್ಲೋಬಲ್ ನೆಟ್‌ವರ್ಕ್ ಜತೆಗೆ ಭಾರತವನ್ನು ನೇರವಾಗಿ ಸಂಪರ್ಕಿಸಲಿದೆ. ಗೂಗಲ್ ೧೨ ದೇಶಗಳಲ್ಲಿ ಎಐ ಸೆಂಟರ್‌ಗಳ ಜಾಗತಿಕ ನೆಟ್‌ವರ್ಕ್ ಹೊಂದಿದ್ದು, ಭಾರತವೂ ಇದರಲ್ಲಿ ಸೇರ್ಪಡೆಯಾಗಲಿದೆ.

ಹೀಗಾಗಿ ಗೂಗಲ್‌ನ ಶಕ್ತಿಶಾಲಿ ಎಐ ತಂತ್ರಜ್ಞಾನದ ನೆರವು ಭಾರತೀಯ ಬಿಸಿನೆಸ್ ಮತ್ತು ಡೆವಲಪರ್‌ ಗಳಿಗೆ ದೊರೆಯಲಿದೆ. ಟೆಲಿಕಾಂ ದಿಗ್ಗಜ ಭಾರ್ತಿ ಏರ್‌ಟೆಲ್ ವಿಶಾಖಪಟ್ಟಣಂನಲ್ಲಿ ವಿಶೇಷ ಡೇಟಾ ಸೆಂಟರ್ ಮತ್ತು ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಅನ್ನು ನಿರ್ಮಿಸಲಿದೆ. ಭಾರತದಾದ್ಯಂತ ಪ್ರಬಲ ಫೈಬರ್ ನೆಟ್ ವರ್ಕ್ ಅನ್ನೂ ಅಭಿವೃದ್ಧಿಪಡಿಸಲಿದೆ.

ಇದು ವೇಗದ ಮತ್ತು ವಿಶ್ವಾಸಾರ್ಹ ಇಂಟರ್ ನೆಟ್ ಸಂಪರ್ಕವನ್ನು ಒದಗಿಸಲಿದೆ. ಅದಾನಿ ಸಮೂಹದ ಕಂಪನಿಯಾಗಿರುವ ಅದಾನಿ ಕೊನ್ನೆಕ್ಸ್, ಬೃಹತ್ ಎಐ ಡೇಟಾ ಸೆಂಟರ್‌ನ ಫೌಂಡೇ ಷನ್ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದೆ. ಇದು ಅದಾನಿ ಎಂಟರ್ ಪ್ರೈಸಸ್ ಮತ್ತು ಎಡ್ಜ್ ಕೊನೆಕ್ಸ್ ಜತೆ ಸಹಭಾಗಿತ್ವವನ್ನು ಹೊಂದಿದೆ. ಈ ಜಂಟಿ ಸಹಭಾಗಿತ್ವದಲ್ಲಿ ಹೊಸ ಪವರ್ ಲೈನ್‌ ಗಳನ್ನು ಮತ್ತು ಸ್ಟೋರೇಜ್ ಟೆಕ್ನಾಲಜಿಗಳನ್ನು ಅಳವಡಿಸಲಾಗುವುದು.

ಕ್ಲೀನ್ ಮತ್ತು ಗ್ರೀನ್ ಎನರ್ಜಿ ತಂತ್ರಜ್ಞಾನವನ್ನು ಇದು ಅವಲಂಬಿಸಿದೆ, ಅಂದರೆ ಇಡೀ ಯೋಜನೆ ಯು ಪರಿಸರ ಸ್ನೇಹಿಯಾಗಿದೆ. ಈ ಬೃಹತ್ ಯೋಜನೆಯು 2026 ಮತ್ತು 2030ರೊಳಗೆ ಪೂರ್ಣ ವಾಗುವ ನಿರೀಕ್ಷೆ ಇದೆ. ಈ ಎಐ ಹಬ್‌ನ ಪರಿಣಾಮ ತಂತ್ರಜ್ಞಾನ, ನಿರ್ಮಾಣ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ.

ವರದಿಗಳ ಪ್ರಕಾರ ೧ ಲಕ್ಷದ ೮೮ ಸಾವಿರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿ ಯಾಗಲಿದೆ. ಹಲವಾರು ಪ್ರಮುಖ ತಂತ್ರಜ್ಞಾನ ಕಂಪನಿಗಳು ಹೊಸ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಪೈಪೋಟಿ ನಡೆಸುತ್ತಿರುವ ಸಂದರ್ಭದಲ್ಲಿ ಗೂಗಲ್‌ನ ಈ ನಡೆ ಮಹತ್ವಪೂರ್ಣವಾಗಿದೆ. ಎಐ ಸೇವೆ ಕ್ಷೇತ್ರದಲ್ಲಿ ಅಭೂತಪೂರ್ವ ಬೇಡಿಕೆ ಸೃಷ್ಟಿಯಾಗಿರುವುದನ್ನೂ ಇಲ್ಲಿ ಗಮನಿಸಬಹುದು.

ಮೈಕ್ರೊಸಾಫ್ಟ್ ಮತ್ತು ಅಮೆಜಾನ್ ಈಗಾಗಲೇ ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ನಿರ್ಮಿಸಲು ಬಿಲಿಯನ್ ಡಾಲರ್‌ಗಟ್ಟಲೆ ಹೂಡಿಕೆಯನ್ನು ಮಾಡಿವೆ. ಓಪನ್ ಎಐ ಕೂಡ ಭಾರತದಲ್ಲಿ ಈ ವರ್ಷಾಂತ್ಯಕ್ಕೆ ಕೇಂದ್ರವನ್ನು ತೆರೆಯುವುದಾಗಿ ಘೋಷಿಸಿದೆ. ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ಅಭಿವೃದ್ಧಿಯಿಂದ ಆರ್ಥಿಕ, ಸಾಮಾಜಿಕ, ವ್ಯೂಹಾತ್ಮಕ ಪ್ರಗತಿಗೆ ಸಹಕಾರಿ ಎಂಬುದು ಮೋದಿ ಸರಕಾರದ ಇಂಗಿತವಾಗಿದೆ. ಭಾರತದಲ್ಲಿ ಡಿಜಿಟಲ್ ಮೂಲ ಸೌಕರ್ಯ ಅಭಿ ವೃದ್ಧಿಗೆ, ಉದ್ಯೋಗಾವಕಾಶಕ್ಕೂ ಸಹಕರಿಸಲಿದೆ. ದೂರ ದೃಷ್ಟಿ, ಮಹತ್ತ್ವಾಕಾಂಕ್ಷೆ ಇದ್ದಾಗ ಇಂಥ ಸಾಧನೆಗಳು ಸಾಧ್ಯವಾಗುತ್ತವೆ ಎಂಬುದಕ್ಕಿ ಇದು ಸಾಕ್ಷಿಯಾಗಿದೆ.

ಇಂಟರ್‌ನೆಟ್ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ಏಕೆ ಇಷ್ಟ?: ಪ್ರಧಾನಿ ನರೇಂದ್ರ ಮೋದಿ ಯವರಿಗೆ ೨೦೪೭ ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ವಿಕಾಸಗೊಳಿಸುವ ದೂರದೃಷ್ಟಿ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದ್ದು, ಎಲ್ಲಾ ವಲಯ ಗಳಲ್ಲಿಯೂ ಅಭಿವೃದ್ಧಿಯ ಮಂತ್ರ ಅನುರಣಿಸುತ್ತಿದೆ. ಐಟಿ, ಎಐ ಮತ್ತು ಡೇಟಾ ಸೆಂಟರ್ ಗಳು ಭವಿಷ್ಯದ ಜಗತ್ತಿನ ಡಿಜಿಟಲ್ ಮೂಲ ಸೌಕರ್ಯಗಳಾಗಿವೆ.

ಭಾರತದ ಡಿಜಿಟಲ್ ಭವಿಷ್ಯದ ಸುವರ್ಣಯುಗ ಈಗ ಆರಂಭವಾಗಿದೆ. ಭಾರತದಲ್ಲಿ ಡೇಟಾಗಳಿಗೆ ತಗಲುವ ವೆಚ್ಚ ಕಡಿಮೆಯಾಗಿರುವುದು ಮತ್ತು ಇಂಟರ್‌ನೆಟ್ ಬಳಕೆದಾರರ ದೊಡ್ಡ ನೆಲೆ ಇರುವುದು ಗೂಗಲ್‌ನಂತಹ ತಂತ್ರಜ್ಞಾನ ಕಂಪನಿಗಳಿಗೆ ಇಲ್ಲಿ ಬೃಹತ್ ಹೂಡಿಕೆ ಮಾಡಲು ಆಕರ್ಷಕ ಅಂಶಗಳಾಗಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಎಐ ಸಂಶೋಧನೆ ಮತ್ತು ಅಭಿವೃದ್ಧಿಯೂ ಹೆಚ್ಚಲಿದೆ. ಕಳೆದ ಐದು ವರ್ಷಗಳಿಂದೀಚೆಗೆ ಭಾರತದ ಡೇಟಾ ಸೆಂಟರ್ ಇಂಡಸ್ಟ್ರಿಯು ತ್ವರಿತವಾಗಿ ಬೆಳೆಯುತ್ತಿದೆ.

2024ರಲ್ಲಿ ಇದು ೧ ಗಿಗಾವ್ಯಾಟ್ ಸಾಮರ್ಥ್ಯದ ಮೈಲುಗಲ್ಲನ್ನು ದಾಟಿದೆ. 2019ರ ಮಟ್ಟಕ್ಕೆ ಹೋಲಿಸಿದರೆ ಮೂರು ಪಟ್ಟು ವೃದ್ಧಿಸಿದೆ. ಕೇಂದ್ರ ಐಟಿ ಸಚಿವ ಅಶ್ವಿನ್ ವೈಷ್ಣವ್ ಅವರು ಈ ಬೆಳವಣಿಗೆಯನ್ನು ಸ್ವಾಗತಿಸಿ ನೀಡಿರುವ ಹೇಳಿಕೆ ಮಹತ್ವಪೂರ್ಣ. ದೇಶದಲ್ಲಿ ಎಐ ಪ್ರಗತಿಗೆ ಇದು ನಿರ್ಣಾಯಕವಾಗಲಿದೆ, ಜತೆಗೆ ಸಮುದ್ರದ ಒಳಗೆ ಕೇಬಲ್ ನೆಟ್‌ವರ್ಕ್ ಸಂಪರ್ಕ ವ್ಯವಸ್ಥೆಯಿಂದ ಅಂq ಮಾನ್ ನಿಕೋಬಾರ್ ದ್ವೀಪ ಸ್ತೋಮಗಳು ಗ್ಲೋಬಲ್ ಇಂಟರ್‌ನೆಟ್ ಡೇಟಾ ವರ್ಗಾವಣೆಗೆ ಆಯಕಟ್ಟಿನ ಹಬ್ ಆಗಲಿದೆ.

ಗೂಗಲ್ ಮತ್ತು ಇತರ ಇಂಟರ್‌ನೆಟ್ ಆಧರಿತ ಕಂಪನಿಗಳಿಗೆ ಏಷ್ಯಾ, ಆಸ್ಟ್ರೇಲಿಯಾ ಮತ್ತು ಇತರ ವಲಯಗಳನ್ನು ಸಂಪರ್ಕಿಸಲು ಅಂಡಮಾನ್ ದ್ವೀಪಸ್ತೋಮಗಳು ಸಹಕರಿಸಲಿವೆ. ಭಾರತದ ಡೇಟಾ ಸಾಮರ್ಥ್ಯವೂ ಹೊಸ ಎತ್ತರಕ್ಕೇರಲಿದೆ, ಆದ್ದರಿಂದ ಸರಕಾರ ಈ ಕ್ರಮಗಳಿಗೆ ಬೆಂಬಲಿಸಲಿದೆ ಎಂದು ಅವರು ವಿವರಿಸಿದ್ದಾರೆ.