ಒಡೆದಾಳುವ ಸ್ವಾರ್ಥಿಗಳನ್ನು ದಿಗ್ಭ್ರಾಂತರಾಗಿಸಿದ ಸಂಘಶಕ್ತಿ
ಪ್ರಾಥಮಿಕ ಶಾಲೆಯಿಂದ ಪದವಿಯವರೆಗಿನ ಶಿಕ್ಷಣದಲ್ಲೆಲ್ಲೂ ದಕ್ಕದ, ರಾಷ್ಟ್ರಕ್ಕಾಗಿ ಸಮರ್ಪಣಾ ಭಾವ ಬೆಳೆಸಿಕೊಳ್ಳಬೇಕೆಂಬ ಆದರ್ಶ ರೂಪುಗೊಂಡಿದ್ದೂ ಅಲ್ಲಿಯೇ. ಶಾಖೆಗೆ ಬರುತ್ತಿದ್ದ ಪ್ರಚಾರಕರ ಚಿಂತನ-ಮಂಥನವು ಎಳೆಯ ಮನಸ್ಸಿನಲ್ಲಿ ‘ರಾಷ್ಟ್ರ ಮೊದಲು, ರಾಷ್ಟ್ರಕ್ಕಾಗಿ ನಾನೇನು ಮಾಡಬಹುದು..’ ಎಂಬ ಚಿಂತನೆಗೆ ಪ್ರೇರೇಪಣೆ ನೀಡುತ್ತಿತ್ತು.
-
Ashok Nayak
Oct 25, 2025 12:30 PM
ಸಂಘದಕ್ಷ
ಬೈಂದೂರು ಚಂದ್ರಶೇಖರ ನಾವಡ
ಅದು 1970-80ರ ದಶಕದ ಕಾಲಘಟ್ಟ. ನಮಗೆ ಆಗಿನ್ನೂ ಹದಿಹರೆಯ. ನಮ್ಮೂರಿನ ಹೃದಯ ಭಾಗ ದಲ್ಲಿದ್ದ ವಿಶಾಲ ಮೈದಾನದ ಒಂದು ಮೂಲೆಯಲ್ಲಿ, ನಮಗಿಂತ ಕೊಂಚ ಹಿರಿಯರಾದ ವ್ಯಕ್ತಿಯೊ ಬ್ಬರು ಹತ್ತಾರು ಹುಡುಗರನ್ನು ಸೇರಿಸಿಕೊಂಡು ಎದುರುಗಡೆ ಧ್ವಜವನ್ನು ನೆಟ್ಟು “ನಮಸ್ತೇ ಸದಾ ವತ್ಸಲೇ ಮಾತೃಭೂಮೇ..." ಎಂದು ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತಿತ್ತು.
ಶರೀರದಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು. ದೇಶಭಕ್ತಿ, ದೇಶಸೇವೆ, ರಾಷ್ಟ್ರ ನಿಷ್ಠೆಗಳ ಪ್ರಥಮ ಪಾಠ ಸಿಕ್ಕಿದ್ದು ಅಲ್ಲೇ. ದೇಶವೆಂದರೆ ಕೇವಲ ಭೂಮಿಯ ಒಂದು ತುಂಡಷ್ಟೇ ಅಲ್ಲ, ಅದು ತಾಯಿಗೆ ಸಮಾನ. ‘ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು’ ಎನ್ನುವ ಮಹೋ ನ್ನತ ಆದರ್ಶದ ಬೀಜವನ್ನು ನಮ್ಮೆದೆಯಲ್ಲಿ ಬಿತ್ತಿದ್ದೂ ಅಲ್ಲಿಯೇ.
ಪ್ರಾಥಮಿಕ ಶಾಲೆಯಿಂದ ಪದವಿಯವರೆಗಿನ ಶಿಕ್ಷಣದಲ್ಲೆಲ್ಲೂ ದಕ್ಕದ, ರಾಷ್ಟ್ರಕ್ಕಾಗಿ ಸಮರ್ಪಣಾ ಭಾವ ಬೆಳೆಸಿಕೊಳ್ಳಬೇಕೆಂಬ ಆದರ್ಶ ರೂಪುಗೊಂಡಿದ್ದೂ ಅಲ್ಲಿಯೇ. ಶಾಖೆಗೆ ಬರುತ್ತಿದ್ದ ಪ್ರಚಾರಕರ ಚಿಂತನ-ಮಂಥನವು ಎಳೆಯ ಮನಸ್ಸಿನಲ್ಲಿ ‘ರಾಷ್ಟ್ರ ಮೊದಲು, ರಾಷ್ಟ್ರಕ್ಕಾಗಿ ನಾನೇನು ಮಾಡಬಹುದು..’ ಎಂಬ ಚಿಂತನೆಗೆ ಪ್ರೇರೇಪಣೆ ನೀಡುತ್ತಿತ್ತು.
ಇದನ್ನೂ ಓದಿ: Janamejaya Umarji Column: ಸಿದ್ಧಾಂತದ ಹೇರಿಕೆಗೆ ಸರಕಾರಿ ಯಂತ್ರದ ದುರ್ಬಳಕೆ
ಸರಳತೆ, ಸೌಜನ್ಯತೆಯ ಸಂಸ್ಕಾರಯುತ, ನಿಸ್ವಾರ್ಥಭಾವದ ವ್ಯಕ್ತಿತ್ವ ನಿರ್ಮಾಣದ ಸೈದ್ಧಾಂತಿಕ ನೆಲೆಗಟ್ಟು ಅಲ್ಲಿ ರೂಪುಗೊಳ್ಳುತ್ತಿತ್ತು. ಬದುಕನ್ನು ದೇಶಹಿತಕ್ಕಾಗಿ ಸಮರ್ಪಿಸುವ ಸಮರ್ಪಣಾ ಭಾವದ ಪರಿಚಯವಾಗಿತ್ತು. ಅವರಿವರ ಮನೆಯಲ್ಲಿ ಉಂಡು ದೇಶಕ್ಕಾಗಿ ದುಡಿಯುವ ತ್ಯಾಗ-ಉದಾತ್ತತೆ ಎಂದರೆ ಏನು ಎಂಬುದರ ಪ್ರಾತ್ಯಕ್ಷಿಕೆ ನೀಡುವಂತಿತ್ತು ಸಂಘ ಪ್ರಚಾರಕರ ನಡೆ-ನುಡಿ. ಬಡತನವನ್ನೇ ಹೊದ್ದುಕೊಂಡಿದ್ದರೂ ಅವರಲ್ಲಿ ಪ್ರಾಮಾಣಿಕತೆ, ಅಚಲ ನಿಷ್ಠೆಗೆ ಕೊರತೆ ಇರಲಿಲ್ಲ.
ನಮಗಂತೂ ಸಂಘಕ್ಕಾಗಿ ಆಜೀವನ ಅವಿವಾಹಿತರಾಗಿ ದುಡಿಯುವ ಕರ್ಮಠ ಯೋಧರ ಪರಿಚಯ ವಾಗುತ್ತಿತ್ತು. ನೈಸರ್ಗಿಕ ವಿಕೋಪಗಳು ಎದುರಾದಾಗ ಧಾವಿಸುವ ಸಂಘಶಕ್ತಿ ಕಂಡು ಪುಳಕಿತ ರಾಗುತ್ತಿದ್ದೆವು. ದೈಹಿಕ ಕಸರತ್ತುಗಳಷ್ಟೇ ಅಲ್ಲದೇ ಸಂಸ್ಕೃತಿ, ಸಂಸ್ಕಾರದ ಜ್ಞಾನಾರ್ಜನೆಗೆ ಅದು ವೇದಿಕೆಯಾಗಿತ್ತು.
ಸ್ವಸ್ಥ ಶರೀರದೊಂದಿಗೆ ಸ್ವಸ್ಥ ಮನಸ್ಸಿಗೆ ಬೇಕಾದ ಜೀವನಪದ್ಧತಿ ಅನುಸರಿಸಲು ಯಥೋಚಿತ ಮಾರ್ಗದರ್ಶನ ಅಲ್ಲಿ ಸಿಕ್ಕಿತ್ತು. ದೇಶಪ್ರೇಮ, ಭ್ರಾತೃತ್ವದ ಅಮೃತಧಾರೆ ದೊರಕಿತ್ತೇ ವಿನಾ, ದ್ವೇಷ, ಹಿಂಸೆಯ ವಿಚಾರ ಅಲ್ಲಿ ಎಂದೂ ಸುಳಿದಿರಲಿಲ್ಲ. ಮುಂದೆ ರಾಷ್ಟ್ರಪ್ರಹರಿಯಾಗಿ ಸೈನ್ಯ ತರಬೇತಿಯ ದಿನಗಳಲ್ಲೂ, ಸೀಮಾಂತ ಪ್ರದೇಶಗಳ ಕಠಿಣ ದಿನಚರಿಗೆ ಅಣಿಗೊಳಿಸಿದ್ದು ಹದಿಹರೆಯದಲ್ಲಿ ದೊರಕಿದ ಸಂಘದ ತರಬೇತಿಯೇ ಎಂದರೆ ತಪ್ಪಾಗದು. ರಾಷ್ಟ್ರಕಟ್ಟುವ ಕಾರ್ಯಕ್ಕಾಗಿ ಬದುಕಿನ ಎಲ್ಲಾ ಐಷಾರಾಮಗಳನ್ನು, ಭೋಗ-ಭಾಗ್ಯಗಳನ್ನು ತ್ಯಜಿಸಿ ಸಾಂಸಾರಿಕ ಜವಾಬ್ದಾರಿಗಳಿಂದ ಮುಕ್ತರಾಗಿ, ಸಮರ್ಪಣಾ ಭಾವದಿಂದ ಸಂಘ ಕಾರ್ಯಕ್ಕಾಗಿ ಹೊರಟ ತ್ಯಾಗಪುರುಷರ ವೃತ್ತಾಂತ ವನ್ನು ಕೇಳಿ ರೋಮಗಳು ಸೆಟೆದು ನಿಲ್ಲುತ್ತಿದ್ದವು.
ಜಾತಿ ತಾರತಮ್ಯದ ಕಾರಣದಿಂದ ಸಮಾಜದಲ್ಲಿ ಮೂಡಿದ್ದ ಬಿರುಕನ್ನು ಅಳಿಸಿ ಒಗ್ಗಟ್ಟಿನ ಮಂತ್ರ ವನ್ನು ಬೋಧಿಸಿದ ಸಂಘಶಕ್ತಿ ಅಭೇದ್ಯ. ಹಳ್ಳಿ ಹಳ್ಳಿಗೆ ವ್ಯಾಪಿಸಿದ ಈ ಸಂಘಟನೆಯು ರಾಜಕೀಯ ಸಂಘಟನೆಯಂತೆ ವ್ಯಕ್ತಿ ಆಧಾರಿತವಾಗಿದ್ದರೆ ಇಷ್ಟು ಪ್ರಬಲ ಶಕ್ತಿಯಾಗುತ್ತಿರಲಿಲ್ಲವೇನೋ.
ಜಾತಿಯ ಆಧಾರದಲ್ಲಿ ನಾಯಕತ್ವದ ಕೋಟೆ ಕಟ್ಟಿಕೊಂಡು ಅಧಿಕಾರದ ಸವಿಯುಣ್ಣುತ್ತಾ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಸಂಘದ ಏಕತೆಯ ಮಂತ್ರ ರುಚಿಸಲಿಲ್ಲ. ಸಂಘ ಬೆಳೆದಷ್ಟೂ ಅವರ ರೋಷ ಹೆಚ್ಚುತ್ತಲೇ ಇದೆ. ಕಾಲಕಾಲಕ್ಕೆ ನಿಯಂತ್ರಿಸುವ ಅನೇಕ ದಾಳಗಳನ್ನು ಉರುಳಿಸುತ್ತಲೇ ಇದ್ದರೂ ಸಂಘದ ತೇಜಸ್ಸಿನ ಮುಂದೆ ತರಗೆಲೆಯಂತೆ ಧೂಳಿಪಟವಾಗುತ್ತಿದೆ ಅವರ ಕುತ್ಸಿತ ಯತ್ನಗಳು.
ಸಂಘಶಕ್ತಿಗೆ ‘ಉಘೇ ಉಘೇ’ ಎನ್ನುವ ಜನಶಕ್ತಿಯನ್ನು ಕಂಡು ಚಿಂತಾಕ್ರಾಂತರಾಗಿದ್ದಾರೆ ಅವರು. ಸನಾತನವನ್ನು ಕ್ಯಾನ್ಸರಿಗೆ ಹೋಲಿಸುವ, ಹಿಂದೂಗಳನ್ನು ಜಾತಿಗಳಲ್ಲಿ ಒಡೆದು ಅಧಿಕಾರವನ್ನು ಸದಾ ತಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಸ್ವಾರ್ಥಿಗಳು ದೇಶಕ್ಕೆ ಆಪತ್ತು-ವಿಪತ್ತು ಎದುರಾದಾಗೆಲ್ಲಾ ಹೇಗೆ ವ್ಯವಹರಿಸಿದ್ದಾರೆ ಎನ್ನುವುದನ್ನು ನಾವು ಮರೆಯಬಾರದು. ಅಧಿಕಾರ ತಮ್ಮ ಕೈಯಲ್ಲಿದ್ದಾಗ, ಪ್ರಜಾಪ್ರಭುತ್ವ ಸುರಕ್ಷಿತ ಎನ್ನುವ ಭ್ರಮೆ ಸೃಷ್ಟಿಸುವಲ್ಲಿ ಸತತವಾಗಿ ಸೋತಾಗ, ಹತಾಶ-ನಿರಾಶ ಮನಸ್ಥಿತಿಯಲ್ಲಿ ಕೋಮುವಾದದ ಹಣೆಪಟ್ಟಿ ಕಟ್ಟಿ ಸಂಘವನ್ನು ದೂಷಿಸುವವರನ್ನು ಜನರು ಹಿಂದೆಂದಿಗಿಂತಲೂ ಇಂದು ಬಹಳ ಚೆನ್ನಾಗಿ ಅರಿತಿದ್ದಾರೆ.
ಭಾರತವನ್ನು ಮಾತೆಯಾಗಿ ಸ್ವೀಕರಿಸದ ಮನಸ್ಥಿತಿಯ, ರಾಷ್ಟ್ರನಿಷ್ಠೆ ಇಲ್ಲದ, ಕೇವಲ ದೇಶದ ಸಂಪತ್ತಿನ ಮೇಲೆ ಅಧಿಕಾರ ಬಯಸುವ, ಸರಕಾರದ ಸವಲತ್ತು ಬಯಸುವ, ಸ್ವಾತಂತ್ರ್ಯದ ಹೆಸರಲ್ಲಿ ಸ್ವಚ್ಛಂದತೆ ಬಯಸುವ ಸ್ವಾರ್ಥಿ ನಾಗರಿಕರ ಸಂತಾನ ಹೆಚ್ಚಿಸುವ ರಾಜಕಾರಣಿಗಳು ಈ ದೇಶದ ಅಭ್ಯುದಯಕ್ಕೆ ದೊಡ್ಡ ಕಂಟಕ.
ಇಂದು ಸರಕಾರಿ ಶಾಲೆಗಳಲ್ಲಿ ಸೆಕ್ಯುಲರ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕಾರ-ಸಂಸ್ಕೃತಿಯ ಅರಿವಿನ ಶಿಕ್ಷಣ ಇಲ್ಲವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತಮ್ಮ ಸ್ವಾರ್ಥದ ಕುರಿತು ಯೋಚಿಸುವಂತೆ ಮಾಡುವ ಶಿಕ್ಷಣ ನೀಡಲಾಗುತ್ತಿದೆ. ದೇಶ ಪ್ರೇಮ-ನಿಷ್ಠೆ ಹಾಗೂ ಕರ್ತವ್ಯದ ಅರಿವು ಮಾಡಿಸುವ ಬದಲು ಕೇವಲ ಹಕ್ಕುಗಳ ಕುರಿತು ಮಾತನಾಡುವಂತೆ ಪ್ರೋತ್ಸಾಹಿಸಲಾಗು ತ್ತಿದೆ.
ಹಾಗಾಗಿಯೇ ಸಂಘ ಇಂದು ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಬಿಸುಪಿನಿಂದ ಧುಮುಕುತ್ತಿದೆ. ಸಂಘದ ಶಾಖೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಒಳ್ಳೆಯ ಸಂಸ್ಕಾರ ಸಿಗುತ್ತದೆಂಬ ನೆಲೆಯಲ್ಲಿಯೇ ಇಂದು ಶಹರದ ಪೋಷಕರು ದೂರದಲ್ಲೆಲ್ಲೋ ಇರುವ ಶಿಕ್ಷಣ ಸಂಸ್ಥೆಗಳತ್ತ ಧಾವಿಸುತ್ತಿದ್ದಾರೆ. ರಾಷ್ಟ್ರವನ್ನು ಬಾಹ್ಯವಾಗಿ ರಕ್ಷಿಸುವ ನಮ್ಮ ದೇಶದ ಸೇನೆಯು ವಿವಿಧ ಸೈನ್ಯೋಪಕರಣ-ಶಸ್ತ್ರಾಸ್ತ್ರಗಳಿಂದ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ ನಿಜ.
ಆದರೆ ಇನ್ನೊಂದೆಡೆ ದೇಶದ ವಿರುದ್ಧ, ಸಾಮಾಜಿಕ ಶಾಂತಿ ಕದಡುವ ದ್ರೋಹಿಗಳ ಸಂಘಟನೆಗಳೂ ಬಲವಾಗುತ್ತಿವೆ. ವೋಟ್ ಬ್ಯಾಂಕ್ ರಾಜಕಾರಣದಿಂದ ಅವುಗಳನ್ನು ತಡೆಯುವ ಶಕ್ತಿ ಪೊಲೀಸರಿಗೂ ಇಲ್ಲವಾಗಿದೆ. ‘ಸೋ ವಾಟ್?’ ಮೆಂಟಾಲಿಟಿಯ ಇಂದಿನ ಯುವಜನರು ಕಿಂಕರ್ತವ್ಯ ಮೂಢ ರಂತಾಗಿದ್ದಾರೆ.
ದೇಶದ ಭವಿಷ್ಯದ ಮತ್ತುಏಕತೆಯ ಕುರಿತು ಚಿಂತಿಸಬೇಕಾದ ನಾಯಕರು ಅದಕ್ಕೆ ಬದಲಾಗಿ ತಮ್ಮ ಸ್ವಾರ್ಥ ಚಿಂತನೆಯಲ್ಲಿ ಮುಳುಗಿದ್ದಾರೆ. ಸುತ್ತಮುತ್ತಲ ದೇಶಗಳ ತಲ್ಲಣಗಳಿಂದಾಗಿ ದೇಶದ ಹಿತ ಬಯಸುವ ನಾಗರಿಕರಿಗೆ, ನನ್ನಂಥ ಮಾಜಿ ಸೈನಿಕರಿಗೆ ದೇಶದ ಭವಿಷ್ಯದ ಚಿಂತೆ ಕಾಡುತ್ತಿದೆ. ಈ ಹೊತ್ತಿನಲ್ಲೂ ಆಸೆಯ ಸಣ್ಣ ಕಿರಣ ಗೋಚರಿಸುತ್ತಿದೆಯಾದರೆ ಅದು ಕೇವಲ ಸಂಘದ ಕಡೆಯಿಂದ. ಸಂಘಶಕ್ತಿ ಚಿರಾಯುವಾಗಲಿ. ದೇಶದ ಏಕತೆಗೆ ಜಯವಾಗಲಿ.
(ಲೇಖಕರು ಮಾಜಿ ಸೈನಿಕರು)