ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

‌Roopa Gururaj Column: ಅಂಡಮಾನ್‌ ಜರವಾ ಬುಡಕಟ್ಟಿನವರ ಅಶ್ವಿನಿ ದೇವತೆ ಡಾ.ರತನ್‌ ಚಂದ್ರಕರ್

ಸುಮಾರು 150 ವರ್ಷಗಳಿಗೂ ಹೆಚ್ಚು ಕಾಲ ಹೊರಗಿನ ಜಗತ್ತನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ, ಆಧುನಿಕತೆಯ ನೆರಳು ಕಂಡರೆ ತಮ್ಮ ಬಾಣಗಳಿಂದ ದಾಳಿ ಮಾಡುತ್ತಿದ್ದ ‘ಜರವಾ’ (Jarawas) ಬುಡಕಟ್ಟು ಜನಾಂಗ ದವರೊಡನೆ ಸಂಪರ್ಕ ಸಾಧಿಸಲು ಸರ್ಕಾರ ಮುಂದಾಗಿತ್ತು. ಆದರೆ, ಅದು ಸುಲಭದ ಮಾತಾಗಿರಲಿಲ್ಲ. ಈ ಕೆಲಸವನ್ನು ಸಾಧಿಸಲು ದೈತ್ಯ ಮನಸ್ಸಿನ ಒಬ್ಬ ಸಣ್ಣ ಆಕಾರದ ಮನುಷ್ಯ ಅಂಡಮಾನ್‌ನ ತೀರಕ್ಕೆ ಬಂದಿಳಿದರು. ಅವರೇ ಡಾ.ರತನ್ ಚಂದ್ರಕರ್.

ಒಂದೊಳ್ಳೆ ಮಾತು

1998ರ ಸಮಯ ಅಂಡಮಾನ್‌ನ ದಟ್ಟ ಕಾಡುಗಳ ನಡುವೆ ಬೀಸುವ ಗಾಳಿಯಲ್ಲಿ ಭಯ ಮತ್ತು ಅಪನಂಬಿಕೆಯ ವಾಸನೆಯಿತ್ತು. ಸುಮಾರು 150 ವರ್ಷಗಳಿಗೂ ಹೆಚ್ಚು ಕಾಲ ಹೊರಗಿನ ಜಗತ್ತನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ, ಆಧುನಿಕತೆಯ ನೆರಳು ಕಂಡರೆ ತಮ್ಮ ಬಾಣಗಳಿಂದ ದಾಳಿ ಮಾಡುತ್ತಿದ್ದ ‘ಜರವಾ’ (Jarawas) ಬುಡಕಟ್ಟು ಜನಾಂಗ ದವರೊಡನೆ ಸಂಪರ್ಕ ಸಾಧಿಸಲು ಸರ್ಕಾರ ಮುಂದಾಗಿತ್ತು. ಆದರೆ, ಅದು ಸುಲಭದ ಮಾತಾಗಿರಲಿಲ್ಲ. ಈ ಕೆಲಸವನ್ನು ಸಾಧಿಸಲು ದೈತ್ಯ ಮನಸ್ಸಿನ ಒಬ್ಬ ಸಣ್ಣ ಆಕಾರದ ಮನುಷ್ಯ ಅಂಡಮಾನ್‌ನ ತೀರಕ್ಕೆ ಬಂದಿಳಿದರು. ಅವರೇ ಡಾ.ರತನ್ ಚಂದ್ರಕರ್.

ಜರವಾ ಜನಾಂಗದವರು ಹೊರಗಿನವರನ್ನು ತಮ್ಮ ಸಂಸ್ಕೃತಿಯ ಶತ್ರುಗಳೆಂದೇ ಭಾವಿಸಿದ್ದರು. ಅವರು ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ಆದರೆ ಡಾ.ಕರ್ ಅವರು ಅಲ್ಲಿಗೆ ಹೋದದ್ದು ಜರವಾ ಬುಡಕಟ್ಟು ಜನಾಂಗದವರಿಗೆ ನೆರವಾಗಲು, ಹೀಗಾಗಿ ತೆಂಗಿನಕಾಯಿ, ಬಾಳೆಹಣ್ಣು ಗಳು ಮತ್ತು ಅಪಾರವಾದ ತಾಳ್ಮೆಯನ್ನು ಹೊತ್ತು ಅವರು ಅಂಡಮಾನ್ ಪ್ರವೇಶಿಸಿದರು.

ಆರಂಭದಲ್ಲಿ ಜರವಾಗಳು ಇವರನ್ನು ಅನುಮಾನದಿಂದ ನೋಡಿದರು. ಆದರೆ ಡಾ.ಕರ್ ಅವರು ಜರವಾಗಳ ಭಾಷೆಯನ್ನು ಕಲಿಯಲು ಪ್ರಯತ್ನಿಸಿದರು, ಅವರ ಜೀವನಶೈಲಿ ಯನ್ನೂ ಅಳವಡಿಸಿಕೊಂಡರು. ಅವರಲ್ಲಿ ಒಬ್ಬರಾಗಿ ಬೆರೆತರು. ಹಸಿವಿನಿಂದಿದ್ದವರಿಗೆ ಆಹಾರ ನೀಡುತ್ತಾ, ಅಕ್ಕರೆ ಗೌರವದೊಂದಿಗೆ ಹತ್ತಿರವಾಗುತ್ತಾ ಹೋದರು.

ಇದನ್ನೂ ಓದಿ: Roopa Gururaj Column: ಸ್ನೋಮ್ಯಾನ್:‌ ಯಾರೂ ಬೇಡವೆಂದ ಕುದುರೆಯ ವಿಜಯಗಾಥೆ

ಹೊರಗಿದ ಪ್ರಪಂಚದ ಸಂಪರ್ಕವೇ ಇಲ್ಲದ ಆ 150 ವರ್ಷಗಳ ಮೌನವನ್ನು ಅವರು ತಮ್ಮ ಸರಳತೆಯಿಂದ ಮುರಿದರು. 1999ರಲ್ಲಿ ಜರವಾ ಬುಡಕಟ್ಟಿಗೆ ಭೀಕರವಾದ ‘ದಡಾರ’ (Measles) ರೋಗ ಅಪ್ಪಳಿಸಿತು. ಹೊರಗಿನ ಸಂಪರ್ಕವಿಲ್ಲದ ಕಾರಣ ಅವರಲ್ಲಿ ರೋಗ ನಿರೋಧಕ ಶಕ್ತಿ ತೀರಾ ಕಡಿಮೆಯಿತ್ತು.

ಇಡೀ ಜನಾಂಗವೇ ಅಳಿವಿನ ಅಂಚಿಗೆ ಬಂದು ನಿಂತಿತ್ತು. ಡಾ.ರತನ್ ಚಂದ್ರ ಕರ್ ಅವರು ಅಕ್ಷರಶಃ ಹಗಲಿರುಳು ಇವರ ಶುಶ್ರೂಷೆ ಮಾಡಿದರು. ಬುಡಕಟ್ಟಿನ ಗುಡಿಸಲುಗಳಲ್ಲಿ ವಾಸ್ತವ್ಯ ಹೂಡಿ, ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಿದರು. ಆಧುನಿಕ ವೈದ್ಯಕೀಯದ ಮೇಲಿದ್ದ ಭಯವನ್ನು ಹೋಗಲಾಡಿಸಿ, ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು.

ಅಂದು ಡಾ.ಕರ್ ಅಲ್ಲಿರದಿದ್ದರೆ, ಇಂದು ಜರವಾ ಜನಾಂಗ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿರುತ್ತಿತ್ತು. ಇದಕ್ಕಾಗಿ ಡಾ. ರತನ್ ಚಂದ್ರಕರ್ ಅವರನ್ನು ಜರವಾದ ಜೀವದಾತ ಎನ್ನುತ್ತಾರೆ. ಅವರು ತಮ್ಮ ಅನುಭವಗಳನ್ನು ಮತ್ತು ಜರವಾ ಬುಡಕಟ್ಟು ಜನರ ಸಂಸ್ಕೃತಿ ಯನ್ನು ‘ದ ಜರವಾಸ್ ಆಫ್ ದಿ ಅಂಡಮಾನ್ಸ್’ ಎಂಬ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅವರು ತಮ್ಮ ವೃತ್ತಿಜೀವನದ ಬಹುಭಾಗವನ್ನು ಅಂಡಮಾನ್ʼನಲ್ಲಿ ಕಳೆದಿದ್ದರೂ, ಪ್ರಸ್ತುತ ನಿವೃತ್ತರಾಗಿದ್ದು ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬದಲಾವಣೆಯು ಕೇವಲ ಅಧಿಕಾರ ಅಥವಾ ಆದೇಶದಿಂದ ಬರುವುದಿಲ್ಲ. ನಿಜವಾದ ಬದಲಾವಣೆ ಆರಂಭ ವಾಗುವುದು ವಿನಮ್ರತೆಯಿಂದ.

ಒಬ್ಬ ವೈದ್ಯನಾಗಿ ಡಾ.ಕರ್ ಅವರಿಗೆ ಎಸಿ ರೂಮಿನಲ್ಲಿ ಆರಾಮವಾಗಿ ಕೆಲಸ ಮಾಡುವ ಅವಕಾಶವಿತ್ತು. ಆದರೆ ಅವರು ಆಯ್ದುಕೊಂಡದ್ದು ಕಠಿಣವಾದ ಕಾಡಿನ ಹಾದಿಯನ್ನು. ಸರ್ಕಾರವು ಇವರ ಅಪ್ರತಿಮ ಸೇವೆಯನ್ನು ಗುರುತಿಸಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆದರೆ ಡಾ.ಕರ್ ಅವರಿಗೆ ಸಿಕ್ಕ ದೊಡ್ಡ ಪ್ರಶಸ್ತಿ ಎಂದರೆ, ದಶಕಗಳ ಕಾಲ ಮನುಷ್ಯರನ್ನು ಕಂಡು ಓಡುತ್ತಿದ್ದ ಜರವಾ ಮಗುವೊಂದು ಅವರ ಕೈಹಿಡಿದು ನಕ್ಕ ಆ ಕ್ಷಣ.

ಒಮ್ಮೆ ಯೋಚಿಸಿ ನೋಡಿ ಯಾರಾದರೂ ಸಹಾಯ ಕೇಳಿ ಬಂದಾಗ ನಾವು ಅವರಿಗೆ ನಮ್ಮ ಸಮಯ, ತಾಳ್ಮೆಯಿಂದ ಕಿವಿಯಾಗುವುದು ಅಥವಾ ನೆರವಾಗಲು ಎಷ್ಟು ಬಾರಿ ಮನಸ್ಸು ಮಾಡುತ್ತೇವೆ? ಅನೇಕ ಬಾರಿ ನೆಪಗಳನ್ನು ಹೂಡಿ ಅವರ ಒಡನಾಟವನ್ನೇ ಬಿಟ್ಟು ಬಿಡುತ್ತೇವೆ.

ಆದರೆ ಸಂಬಂಧವೇ ಇಲ್ಲದ ಒಂದಿಡೀ ಬುಡಕಟ್ಟು ಜನಾಂಗಕ್ಕಾಗಿ ತಮ್ಮ ಆಯಸ್ಸಿನ ಬಹುಪಾಲನ್ನು ಮೀಸಲಾಗಿಟ್ಟು ಸೇವೆ ಮಾಡಿದ ಡಾ.ರತನ್ ಚಂದ್ರಕರ್‌ರಂತಹ ದೇವತಾ ಮನುಷ್ಯರು ಇದೇ ಭೂಮಿಯಲ್ಲಿ ಇದ್ದಾರೆ ಎಂದರೆ ನಂಬಲು ಸಾಧ್ಯವೇ? ಇನ್ನಾದರೂ ಮನುಷ್ಯರಾಗಿ ಬದುಕುವ ಪ್ರಯತ್ನ ಮಾಡೋಣ. ನಾವು ಯಾರಿಗಾದರೂ ಸಹಾಯ ಮಾಡಬೇಕೆಂದಿದ್ದರೆ ಮೊದಲು ಅವರ ಹೃದಯವನ್ನು ಗೆಲ್ಲಬೇಕು. ನಂಬಿಕೆ ಇಲ್ಲದ ಜಾಗದಲ್ಲಿ ಔಷಧವೂ ಕೆಲಸ ಮಾಡದು.

ರೂಪಾ ಗುರುರಾಜ್

View all posts by this author