ವೀಕೆಂಡ್ ವಿತ್ ಮೋಹನ್
ಎಡಚರ ಪಟಾಲಂ, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ನಿದ್ದೆ ಇಲ್ಲದಂತೆ ಮಾಡಿದೆ ‘ದುರಂಧರ್’ ಸಿನಿಮಾ. ಮತಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ವೈಫಲ್ಯಗಳನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ತೆರೆಯ ಮೇಲೆ ತೋರಿಸಲಾಗಿದೆ.
1980ರ ದಶಕದಲ್ಲಿ ಬಾಲಿವುಡ್ ಅಂಗಳದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಿಡಿತದಲ್ಲಿ ‘ಓಲೈಕೆಯ’ ಸಿನಿಮಾಗಳು ತಯಾರಾಗುತ್ತಿದ್ದವು. ಇಂದು ಅದೇ ಬಾಲಿವುಡ್ ನಲ್ಲಿ ನೈಜ ಕಥೆ ಮತ್ತು ದೇಶಭಕ್ತಿ ಆಧಾರಿತ ಸಿನಿಮಾಗಳು ತೆರೆಯ ಮೇಲೆ ಬರುತ್ತಿವೆ. ಭಾರತ ಸರಕಾರವು ಕೈಗೊಂಡ ಹಳೆಯ ನೋಟು ರದ್ದತಿಯ ನಿರ್ಧಾರದಿಂದ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗುವ ದೃಶ್ಯಗಳನ್ನು ‘ದುರಂಧರ್’ ಸಿನಿಮಾದಲ್ಲಿ ತೋರಿಸಲಾಗಿದೆ.
ಚಲನಚಿತ್ರದಲ್ಲಿ ತೋರಿಸಿರುವುದು ಒಂದು ಸಣ್ಣ ಝಲಕ್ ಮಾತ್ರ. 2016ರ ನವೆಂಬರ್ 8ರಂದು ಕೇಂದ್ರ ಸರಕಾರವು 500 ಮತ್ತು 1000 ರುಪಾಯಿ ಮುಖಬೆಲೆಯ ಹಳೆಯ ನೋಟು ಗಳನ್ನು ಬ್ಯಾನ್ ಮಾಡಿದ್ದರಿಂದ ಪಾಕಿಸ್ತಾನ ಅಕ್ಷರಶಃ ಬರ್ಬಾದ್ ಆಗಿ, ಇಂದಿಗೂ ಚೇತರಿಸಿ ಕೊಂಡಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನುಸುಳಿಸಿ ಭಾರತದಲ್ಲಿ ದುಷ್ಕೃತ್ಯ ಗಳನ್ನು ನಡೆಸಲು ಪಾಕಿಸ್ತಾನಕ್ಕೆ ಬೇಕಿದ್ದ ಹಣದ ಮೂಲ ನಕಲಿ ನೋಟುಗಳು. ಈ ನಕಲಿ ನೋಟಿನ ಬಹುದೊಡ್ಡ ಜಾಲವನ್ನು ಹೊಂದಿದ್ದ ಪಾಕಿಸ್ತಾನದ ಏಜೆಂಟ್‌ಗಳು ಸಾವಿರಾರು ಕೋಟಿ ರು. ಮೌಲ್ಯದ ನಕಲಿ ನೋಟುಗಳನ್ನು ‘ಹವಾಲಾ’ ವ್ಯವಸ್ಥೆಯ ಮೂಲಕ ಭಾರತದ ವಿವಿಧೆಡೆಗೆ ಕಳುಹಿಸುತ್ತಿದ್ದರು.
ಇದನ್ನೂ ಓದಿ: Mohan Vishwa Column: ಇಂಧನ ನಿರ್ವಹಣೆ: ಯುಪಿಎ V/s ಎನ್ʼಡಿಎ
2008ರ ನವೆಂಬರ್ 26ರಂದು ಮುಂಬೈ ನಗರದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ವೇಳೆ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಉತ್ತುಂಗದಲ್ಲಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಪಾಕಿಸ್ತಾನದಲ್ಲಿ ನಕಲಿ ನೋಟಿನ ದಂಧೆ ಒಂದು ಸಮಾನಾಂತರ ಆರ್ಥಿಕ ವ್ಯವಸ್ಥೆಯನ್ನೇ ಸೃಷ್ಟಿಸಿತ್ತು.
2008ರ ಮುಂಬೈ ಭಯೋತ್ಪಾದಕ ದಾಳಿಯ ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶದ ‘ದೊಮಾರಿಯ ಗಂಜ್’ನ ಭಾರತೀಯ ಸ್ಟೇಟ್ ಬ್ಯಾಂಕಿನ ಬ್ರಾಂಚಿನಿಂದ ದೊಡ್ಡಮಟ್ಟದ ನಕಲಿ ನೋಟುಗಳು ಸೋರಿಕೆಯಾಗಿರುವುದು ನಂತರದ ತನಿಖೆಯಿಂದ ತಿಳಿಯಿತು. ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದ ಗಡಿಗಳ ಮೂಲಕ ನಕಲಿ ನೋಟುಗಳನ್ನು ಭಾರತದೊಳಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಮಾರ್ಗಗಳು ಬೇರೆಯಾಗಿದ್ದರೂ ನೋಟುಗಳ ಮೂಲಗಳನ್ನು ಪಾಕಿಸ್ತಾನದ ಕರಾಚಿ ಮತ್ತು ಪೇಶಾವರದಲ್ಲಿ ಪತ್ತೆ ಹಚ್ಚಲಾಗಿತ್ತು. ಅಲ್ಲಿನ ನಕಲಿ ನೋಟುಗಳ ಮುದ್ರಣಾಲಯಗಳ ಸಾಮರ್ಥ್ಯ ಮೈಸೂರಿನಲ್ಲಿರುವ ಆರ್‌ಬಿಐನ ಪ್ರೆಸ್ ಅಥವಾ ನಾಸಿಕ್‌ನ ಬ್ಯಾಂಕ್ ನೋಟ್ ಪ್ರೆಸ್‌ನ ಸಾಮರ್ಥ್ಯಕ್ಕಿಂತ ಹೆಚ್ಚಿತ್ತೆಂದು ಕೆಲವು ವರದಿಗಳು ಹೇಳಿದ್ದವು.
ನರೇಂದ್ರ ಮೋದಿ ನೇತೃತ್ವದ ಸರಕಾರ ಸೆಪ್ಟೆಂಬರ್ 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಗಳಿಗೆ ತಕ್ಕ ಪಾಠ ಕಲಿಸಿ ಮತ್ತೊಮ್ಮೆ ಭಾರತದ ತಂಟೆಗೆ ಬರದಂತೆ ಸರಿಯಾದ ಹೊಡೆತವನ್ನೇ ನೀಡಿತ್ತು. ಇದರಿಂದ ಅವಮಾನಕ್ಕೊಳಗಾದ ಪಾಕಿಸ್ತಾನ ಸುಮ್ಮನೆ ಕೂರುವುದಿಲ್ಲವೆಂದು ತಿಳಿದಿತ್ತು.
ಅವರಿಗೆ ಯುದ್ಧ ಮಾಡಲು ಧೈರ್ಯವಿಲ್ಲ, ತಮ್ಮ ಸ್ಲೀಪರ್ ಸೆಲ್‌ಗಳ ಮೂಲಕ ಭಾರತ ದಲ್ಲಿ ಬಹುದೊಡ್ಡ ಭಯೋತ್ಪಾದಕ ಕೃತ್ಯವನ್ನು ನಡೆಸುವ ಹುನ್ನಾರಕ್ಕೆ ಕೈಹಾಕಿದ್ದಾ ರೆಂದು ಬಲ್ಲ ಮೂಲಗಳು ಹೇಳುತ್ತವೆ. ತಮ್ಮ ಹುನ್ನಾರಕ್ಕೆ ಧನಸಹಾಯ ಮಾಡಲು ನಕಲಿ ನೋಟುಗಳ ಕಳ್ಳಸಾಗಣೆಯ ಮಾರ್ಗದ ಮೂಲಕ ಭಾರಿ ಮೊತ್ತದ ಹಣವನ್ನು ಭಾರತಕ್ಕೆ ಪಂಪ್ ಮಾಡಲು ಪಾಕಿಸ್ತಾನ ಯೋಚಿಸಿತ್ತು. ಆದರೆ ರಾತ್ರೋರಾತ್ರಿ ಭಾರತದಲ್ಲಿ ಹಳೇ ನೋಟುಗಳ ಅಮಾನ್ಯೀಕರಣವಾಗಿತ್ತು,
ಇದರಿಂದ ಜರ್ಜರಿತವಾದ ಪಾಕಿಸ್ತಾನದ ಹಣದ ಮೂಲವೇ ಸರ್ವನಾಶವಾಗಿ ಹೋಯಿತು. 2004 ಮತ್ತು 2014ರ ನಡುವೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ತಿಂಗಳಿ ಗೊಮ್ಮೆಯೆಂಬಂತೆ ದೇಶದಾದ್ಯಂತ ನಡೆಯುತ್ತಿದ್ದವು. ಈ ಅವಧಿಯಲ್ಲಿ ಜೈಪುರ, ದೆಹಲಿ, ಮುಂಬೈ, ವಾರಾಣಸಿ, ಅಹಮದಾಬಾದ್, ಬೆಂಗಳೂರು, ಪುಣೆ, ಹೈದರಾಬಾದ್ ಮುಂತಾದ ನಗರಗಳಲ್ಲಿ ಸಾವಿರಾರು ಮಂದಿ ಅಮಾಯಕರು ಬಾಂಬ್ ಬ್ಲಾನಿಂದ ಜೀವ ಕಳೆದುಕೊಂಡಿ ದ್ದಾರೆ.
ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಹವಾಲಾ ಮೂಲಕ ಭಾರತಕ್ಕೆ ಕಳುಹಿಸಿದ ಮೇಲೆ ಅಧಿಕೃತ ನೋಟುಗಳೊಂದಿಗೆ ವಿನಿಮಯ ಮಾಡಿಕೊಂಡು ಪಾಕಿಸ್ತಾನಕ್ಕೆ ಕಳುಹಿಸ ಲಾಗುತ್ತಿತ್ತು. ಮತ್ತೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಕಲಿ ಭಾರತೀಯ ನೋಟು ಗಳನ್ನು ಅಮೆರಿಕನ್ ಡಾಲರ್ ಎದುರು ವಿನಿಮಯ ಮಾಡಿಕೊಂಡು ತನ್ನ ವಿದೇಶಿ ವಿನಿಮಯವನ್ನು ಪಾಕಿಸ್ತಾನ ಹೆಚ್ಚಿಸಿಕೊಳ್ಳುತ್ತಿತ್ತು ಹಾಗೂ ವಿತ್ತೀಯ ಕೊರತೆಯನ್ನು ಕಡಿಮೆ ಮಾಡಿಕೊಳ್ಳುತ್ತಿತ್ತು.
ಪಾಕಿಸ್ತಾನವು ನಕಲಿ ನೋಟುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ರಫ್ತು’ ಮಾಡಿ ತನ್ನ ನಿಧಿಯನ್ನು ಹೆಚ್ಚಿಸಿಕೊಂಡಿತ್ತು. ಭಾರತದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಈ ವಿಷಯ ತಿಳಿದಿದ್ದರೂ ಕೈ ಕಟ್ಟಿ ಕುಳಿತಿತ್ತು. ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ನಕಲಿ ನೋಟಿನ ಹಾವಳಿಯಿಂದಾಗಿ ಭಾರತದಲ್ಲಿನ ಹಣದುಬ್ಬರ ದರ ಎರಡಂಕಿಗೆ ತಲುಪಿತ್ತು.
2016ರ ನವೆಂಬರ್ ನಂತರ ಪಾಕಿಸ್ತಾನದ ಸ್ಥಿತಿ ಬದಲಾಯಿತು. ಭಾರತದಲ್ಲಿ ಹಳೆಯ ನೋಟುಗಳು ಬ್ಯಾನ್ ಆದ ನಂತರ ಪಾಕಿಸ್ತಾನದ ವಿದೇಶಿ ವಿನಿಮಯದ ನಿಧಿ ಕುಸಿಯಿತು. ಸಾವಿರಾರು ಕೋಟಿ ರು. ಮುಖಬೆಲೆಯ ನಕಲಿ ನೋಟುಗಳು ರಾತ್ರೋರಾತ್ರಿ ರದ್ದಿ ಕಾಗದ ಗಳಾದವು. ಈ ನೋಟುಗಳನ್ನು ಮುದ್ರಣ ಮಾಡಿದವರು ಬೀದಿಗೆ ಬಂದರು.
ಭಯೋತ್ಪಾದಕರಿಗೆ ತಲುಪಿಸಲು ಶೇಖರಿಸಿದ್ದಂಥ ನಕಲಿ ನೋಟುಗಳಿಗೆ ಬೆಲೆಯಿಲ್ಲದಂತಾ ಯಿತು. ನೋಟು ಅಮಾನ್ಯೀಕರಣ ಮಾಡಿದ ನಾಲ್ಕು ವಾರದಲ್ಲಿ ಪಾಕಿಸ್ತಾನದ ಕರಾಚಿ ಯಲ್ಲಿ ವಿದೇಶಿ ವಿನಿಮಯ ಸಂಸ್ಥೆಯನ್ನು ನಡೆಸುತ್ತಿದ್ದ ಜಾವೇದ್ ಕನಾನಿ ಎಂಬಾತ ಬಹುಮಹಡಿ ಕಟ್ಟಡದಿಂದ ಜಿಗಿದು ಸತ್ತುಹೋದ.
ಪಾಕಿಸ್ತಾನದ ಪ್ರತಿಷ್ಠಿತ ದಿನಪತ್ರಿಕೆ ‘ಡಾನ್’ ಈತನ ಸಾವನ್ನು, ತನಿಖಾ ಸಂಸ್ಥೆಯೊಂದು ಹವಾಲಾ ಹಗರಣದಲ್ಲಿ ಈತ ಸಿಲುಕಿದ್ದರ ಸಲುವಾಗಿ ಸತ್ತಿರಬಹುದೆಂದು ಬರೆದಿತ್ತು. ಆದರೆ ಈತ ಕರಾಚಿಯಲ್ಲಿ ಬಹುದೊಡ್ಡ ನಕಲಿ ನೋಟು ಮುದ್ರಣಾಲಯವನ್ನು ನಡೆಸುತ್ತಿದ್ದ. ಅಷ್ಟೊಂದು ದೊಡ್ಡ ಮಟ್ಟದ ನಕಲಿ ನೋಟುಗಳನ್ನು ಆತ ಮುದ್ರಿಸಿ ಅಕ್ರಮವಾಗಿ ಭಾರತಕ್ಕೆ ಸಾಗಿಸಬೇಕೆಂದರೆ ಪಾಕಿಸ್ತಾನ ಸರಕಾರದ ಬೆಂಬಲವಿಲ್ಲದೆ ಮಾಡಲು ಸಾಧ್ಯ ವಿಲ್ಲ, ಅಲ್ಲಿನ ಕಾರ್ಯಾಂಗ ವ್ಯವಸ್ಥೆಯ ಸಂಪೂರ್ಣ ಬೆಂಬಲದಿಂದ ಮಾತ್ರ ಅದನ್ನು ಮಾಡಲು ಸಾಧ್ಯ.
ನಕಲಿ ನೋಟುಗಳ ಮಾರಾಟದಲ್ಲಿ ತನ್ನ ವಿದೇಶಿ ವಿನಿಮಯವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಪಾಕಿಸ್ತಾನ, ನೋಟು ಅಮಾನ್ಯೀಕರಣದ ನಂತರ ವಿದೇಶಿ ಕರೆನ್ಸಿ ಎದುರು ಅವಮಾನ ವನ್ನು ಅನುಭವಿಸಬೇಕಾಯಿತು. ನವೆಂಬರ್ 2016ರ ನಂತರ ಪಾಕಿಸ್ತಾನದ ರುಪಾಯಿ ಡಾಲರ್ ಎದುರು ಸತತ ಕುಸಿತಗೊಳ್ಳತೊಡಗಿತು. ಅಮೆರಿಕ ನೀಡಿದ ಅಲ್ಪ ನೆರವಿನಿಂದ ಕೆಲ ತಿಂಗಳುಗಳ ಕಾಲ ಸ್ಥಿರವಾಗಿದ್ದದ್ದು ಬಿಟ್ಟರೆ ನಂತರ 2017 ಮತ್ತು 2018ರಲ್ಲಿ ಸತತ ವಾಗಿ ಕುಸಿಯಿತು.
ಪಾಕಿಸ್ತಾನಿ ರುಪಾಯಿಯ ಕುಸಿತ ಕೇವಲ ಡಾಲರ್‌ಗೆ ಸೀಮಿತವಾಗಿರಲಿಲ್ಲ, ಯುರೋ ಕರೆನ್ಸಿ ಎದುರು ಸತತವಾಗಿ ಅಂದಿನಿಂದ ಇಂದಿನವರೆಗೂ ಕುಸಿತಗೊಳ್ಳುತ್ತಿದೆ. ಬ್ರಿಟನ್ನಿನ ಪೌಂಡ್ ಎದುರೂ ಸತತವಾಗಿ ಕುಸಿಯುತ್ತಿದೆ ಮತ್ತು ಭಾರತದ ರುಪಾಯಿಯ ಎದುರು ಕೂಡ ಸತತವಾಗಿ ಕುಸಿಯುತ್ತಿದೆ.
ಪಾಕಿಸ್ತಾನದ ರುಪಾಯಿಯ ಕುಸಿತದ ಸಮಯವನ್ನು ಗಮನಿಸಿದರೆ ಭಾರತದಲ್ಲಿ ಕೈಗೊಂಡ ನೋಟು ಅಮಾನ್ಯೀಕರಣದ ದೃಢ ನಿರ್ಧಾರದ ನೇರ ಪರಿಣಾಮವು ಪಾಕಿಗಳು ನಂಬಿ ಕೊಂಡಿದ್ದಂಥ ನಕಲಿ ನೋಟುಗಳ ಆರ್ಥಿಕತೆಯನ್ನು ಹಳ್ಳ ಹಿಡಿಸಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವು ಪಡಪೋಶಿಗಳು ಇದನ್ನು ಕಾಕತಾಳೀಯವೆಂಬಂತೆ ಸಬೂಬನ್ನು ನೀಡುತ್ತಾರೆ. ಆದರೆ ಆ ಸಮಯ ಮತ್ತು ಸತತ ಹತ್ತು ವರ್ಷಗಳ ಕುಸಿತವು ಅವರ ಸಬೂಬನ್ನು ಸುಳ್ಳು ಮಾಡುತ್ತದೆ.
ಇದಕ್ಕೆ ಪುಷ್ಟಿ ನೀಡುವಂತೆ ಕಾಶ್ಮೀರದಲ್ಲಿ ನಡೆಯುತ್ತಿದ್ದ ಸೈನಿಕರ ಮೇಲಿನ ಕಲ್ಲು ತೂರಾಟ ಸಂಪೂರ್ಣವಾಗಿ ನಿಂತುಹೋಯಿತು. ಅಲ್ಲಿನ ಯುವಕರ ತಲೆ ಕೆಡಿಸಿ ಪ್ರತ್ಯೇಕತಾ ವಾದದ ಅಮಲನ್ನು ಅವರ ತಲೆಗೆ ತುಂಬಿ ಸೈನಿಕರನ್ನು ಶತ್ರುಗಳಂತೆ ನೋಡುವ ಮನಸ್ಥಿತಿಗೆ ತರಲಾಗುತ್ತಿತ್ತು.
ಒಂದು ಕಾಲದಲ್ಲಿ ಸ್ಥಳೀಯರ ಕಲ್ಲು ತೂರಾಟದಿಂದ ಸುಮಾರು ನೂರಾರು ಉಗ್ರಗಾಮಿ ಗಳು ಸೈನಿಕ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆಂಬ ವರದಿಯಿದೆ. ಕಲ್ಲು ತೂರುವ ಯುವಕರಿಗೆ ನೀಡುತ್ತಿದ್ದ ಪುಡಿಗಾಸಿನ ಮೂಲವೂ ನಕಲಿ ನೋಟುಗಳ ಮುದ್ರಣ ಮತ್ತು ಮಾರಾಟ, ಕಣಿವೆ ರಾಜ್ಯಕ್ಕೆ ಗಡಿಯ ಮೂಲಕ ಹಣ ಕಳ್ಳಸಾಗಣೆ ಮಾಡು ತ್ತಿದ್ದ ಜಾಲ ಸಂಪೂರ್ಣವಾಗಿ ನಿಷ್ಕ್ರಿಯವಾದಾಗ ನಿಂತುಹೋಯಿತು.
ನೋಟು ಅಮಾನ್ಯೀಕರಣದ ನಂತರ ಭಾರತದಲ್ಲಿ ಹಲವು ಸಮಸ್ಯೆಗಳು ಉಂಟಾದವೆಂಬ ಹಸಿ ಸುಳ್ಳುಗಳನ್ನು ಹಬ್ಬಿಸಲಾಯಿತು. ದೇಶಕ್ಕೆ ಕಂಟಕ ತರುವಂಥ ಸಮಸ್ಯೆ ಎಂದಿಗೂ ಉದ್ಭವಿಸಲಿಲ್ಲ. ಅವೈಜ್ಞಾನಿಕವಾಗಿ ನೋಟು ಅಮಾನ್ಯೀಕರಣ ಮಾಡಿದ್ದ ವೆನಿಜುವೆಲ ದೇಶದ ಆರ್ಥಿಕತೆ ಪಾತಾಳ ಕಂಡು ಇಂದಿಗೂ ಮೇಲೇಳಲಿಲ್ಲ.
ಪಾಕಿಸ್ತಾನದ ಅಂತ್ಯವು ನೋಟು ಅಮಾನ್ಯೀಕರಣದ ದಿನದಿಂದ ಪ್ರಾರಂಭವಾಗಿದೆ ಯೆನ್ನಲು ಹಲವು ಸಾಕ್ಷಿಗಳು ಕಣ್ಣ ಮುಂದಿದ್ದರೂ ಎಡಚರ ಬುದ್ದಿಜೀವಿಗಳು ಸತ್ಯವನ್ನು ಒಪ್ಪುವುದಿಲ್ಲ. ಭಯೋತ್ಪಾದಕರನ್ನು ಸೃಷ್ಟಿಸುವ ಪ್ರಯೋಗಾಲಯವಾಗಿದ್ದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ಪ್ರಮುಖ ಹಣದ ಮೂಲವನ್ನೇ ನೋಟು ಅಮಾನ್ಯೀಕರಣ ತುಂಡರಿಸಿ ಯಾಗಿತ್ತು.
ಅಂದು ಪ್ರಾರಂಭವಾದ ಪಾಕಿಸ್ತಾನದ ಆರ್ಥಿಕ ಅಧಃಪತನ ಇಂದಿಗೂ ಮುಂದುವರಿಯು ತ್ತಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತು ಜನರು ನೆಮ್ಮದಿಯಾಗಿ ಇರುವಂತಾಗಿದೆ.