ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Leena Joshi Column: ಒಪ್ಪಂದ ಮಾಡಿಕೊಂಡಿದ್ದಕ್ಕೆ ಹತ್ಯೆಯಾದ ಈಜಿಪ್ಟ್‌ ಅಧ್ಯಕ್ಷ

ಒಪ್ಪಂದದ ಪ್ರಕಾರ 1967ರ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಸಿನಾಯ್ ಪರ್ಯಾಯ ದ್ವೀಪದಿಂದ ಇಸ್ರೇಲ್ ತನ್ನ ಸೈನ್ಯ ಮತ್ತು ನಾಗರಿಕರನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕಿತ್ತು. ಈ ಒಪ್ಪಂದವು ಸೂಯೆಜ್ ಕಾಲುವೆಯ ಮೂಲಕ ಇಸ್ರೇಲಿ ಹಡಗುಗಳ ಮುಕ್ತ ಸಾಗಣೆಗೆ ಮತ್ತು ತಿರಾನ್ ಜಲಸಂಧಿ ಹಾಗೂ ಅಕಾಬಾ ಕೊಲ್ಲಿಯನ್ನು ಅಂತಾರಾಷ್ಟ್ರೀಯ ಜಲಮಾರ್ಗ ಗಳೆಂದು ಗುರುತಿಸಲು ಅವಕಾಶ ಮಾಡಿಕೊಟ್ಟಿತು.

ಯುದ್ದಕಾಂಡ

ಲೀನಾ ಜೋಶಿ

ಈಜಿಪ್ಟಿನ ಕ್ರಾಂತಿಕಾರಿ ನಾಯಕ ಗಮಾಲ್ ಅಬ್ದುಲ್ ನಾಸರ್ ಸಾವಿನ ನಂತರ, ಅನ್ವರ್ ಸಾದತ್ 1970ರಲ್ಲಿ ಈಜಿಪ್ಟಿನ ಅಧ್ಯಕ್ಷರಾದರು. ಸಾದತ್ ಅಧಿಕಾರಕ್ಕೆ ಬಂದಾಗ ಮಧ್ಯಪ್ರಾಚ್ಯ ದಲ್ಲಿ ಇಸ್ರೇಲ್ ವಿರುದ್ಧದ ಸಂಘರ್ಷ ತೀವ್ರವಾಗಿತ್ತು. 1967ರ ಯುದ್ಧದಲ್ಲಿ ಇಸ್ರೇಲ್, ಈಜಿಪ್ಟಿನ ಕೆಲವು ಪ್ರದೇಶ ಗಳನ್ನು ವಶಪಡಿಸಿಕೊಂಡಿತ್ತು. ಈ ಪ್ರದೇಶಗಳನ್ನು ಮರಳಿ ಪಡೆಯುವುದು ಸಾದತ್ ಅವರ ಪ್ರಮುಖ ಗುರಿಯಾಗಿತ್ತು.

ಈಜಿಪ್ಟ್‌ನ ರಾಷ್ಟ್ರಪತಿ ಅನ್ವರ್ ಸಾದತ್ ಅಂದು ಬೆಳಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ಪರೇಡ್‌ಗೆ ಸಿದ್ಧವಾಗುತ್ತಿದ್ದರು. ಅನ್ವರ್ ಸಾದತ್ ಅವರಿಗೆ ತಾವು ಧರಿಸುವ ಉಡುಪುಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ತಾವು ತುಂಬಾ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಬೇಕು ಅಂತ ಇಷ್ಟಪಡುತ್ತಿದ್ದರು. ಸೇನಾ ಉಡುಪು- ಸೆರೆಮೋನಿಯಲ್ ಯೂನಿಫಾರ್ಮ್- ಇದನ್ನು ವಿಶೇಷವಾಗಿ ಲಂಡನ್‌ನ Savile Row ಸ್ಟ್ರೀಟ್‌ನಿಂದ ಹೊಲಿಸಿ ತರಲಾಗಿತ್ತು.

ಪರೇಡ್ ಒಂದು ಅಧಿಕೃತ ಮತ್ತು ಗೌರವದ ಕಾರ್ಯಕ್ರಮವಾಗಿದ್ದರಿಂದ ಅವರು ತಮ್ಮನ್ನು ಆಕರ್ಷಕವಾಗಿ ಇರಿಸಿಕೊಳ್ಳಲು ಬಯಸಿದ್ದರು. ಸಾದತ್ ಕನ್ನಡಿಯಲ್ಲಿ ತಮ್ಮನ್ನು ನೋಡುತ್ತ ಸಂತೋಷಪಟ್ಟರು. ಪರೇಡಿಗೆ ಸಜ್ಜಾಗುತ್ತಿದ್ದಾಗ ಅವರ ಹೆಂಡತಿ ಜೆಹಾನ್, “ಬುಲೆಟ್ ಪ್ರೂಫ್‌ ಮರೆತುಬಿಟ್ಟಿದ್ದೀರಾ" ಎಂದಾಗ, “ನಾನು ಬುಲೆಟ್ ಪ್ರೂಫ್ ಯೂನಿಫಾರ್ಮ್‌ನಲ್ಲಿ ದಪ್ಪವಾಗಿ ಕಾಣಿಸುತ್ತೇನೆ.

ಇದನ್ನೂ ಓದಿ: Leena Joshi Column: ಇರಾನ್‌ʼನಲ್ಲಿ ಅಮೆರಿಕನ್ನರ 444 ದಿನಗಳ ಬಂಧನದ ಕರಾಳ ಅಧ್ಯಾಯ

ಜೆರುಸಲೆಮ್‌ಗೆ ಹೋ‌ದಾಗ ಅಲ್ಲಿನ ಫೋಟೋಗಳಲ್ಲಿ ನಾನು ದಪ್ಪವಾಗಿ ಕಾಣಿಸುತ್ತಿದ್ದೆ. ಇವತ್ತು ನಮ್ಮದೇ ಫಂಕ್ಷನ್, ಇವತ್ತು ನಾನೇ ಆಕರ್ಷಕವಾಗಿ ಕಾಣಬೇಕು ಅಲ್ವಾ" ಎಂದರು. ಅದೇ ಅವರ ಕೊನೆಯ ಸರಕಾರಿ ಕಾರ್ಯಕ್ರಮವಾಯಿತು. ಆ ಪರೇಡ್ ಸಂಪೂರ್ಣವಾಗಿ ಈಜಿಪ್ಟ್ ಸೇನೆಯ ಕಾರ್ಯಕ್ರಮವಾಗಿದ್ದರಿಂದ ತಮ್ಮದೇ ಸೇನೆಯ ನಡುವೆ ಇಷ್ಟು ದೊಡ್ಡ ಅಪಾಯ ಸಂಭವಿಸ ಬಹುದು ಎಂದು ಅವರು ಕಲ್ಪಿಸಲಿಲ್ಲ. ‌

ಸೈನಿಕರ ಮೇಲೆ ಅವರಿಗೆ ತುಂಬಾ ನಂಬಿಕೆ ಇತ್ತು. ಈಜಿಪ್ಟಿನ ಕ್ರಾಂತಿಕಾರಿ ನಾಯಕ ಗಮಾಲ್ ಅಬ್ದುಲ್ ನಾಸರ್ ಸಾವಿನ ನಂತರ, ಅನ್ವರ್ ಸಾದತ್ 1970ರಲ್ಲಿ ಈಜಿಪ್ಟಿನ ಅಧ್ಯಕ್ಷರಾದರು. ಸಾದತ್ ಅಧಿಕಾರಕ್ಕೆ ಬಂದಾಗ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ವಿರುದ್ಧದ ಸಂಘರ್ಷ ತೀವ್ರವಾಗಿತ್ತು. 1967ರ ಯುದ್ಧದಲ್ಲಿ ಇಸ್ರೇಲ್, ಈಜಿಪ್ಟಿನ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ‌

Screenshot_2 R

ಈ ಪ್ರದೇಶಗಳನ್ನು ಮರಳಿ ಪಡೆಯುವುದು ಸಾದತ್ ಅವರ ಪ್ರಮುಖ ಗುರಿಯಾಗಿತ್ತು. 1973ರಲ್ಲಿ ಈಜಿಪ್ಟ್ ಮತ್ತು ಸಿರಿಯಾ ಸೇರಿ ಇಸ್ರೇಲ್ ವಿರುದ್ಧ ಯುದ್ಧ ನಡೆಸಿದವು. ಇದನ್ನು ಯೋಮ್ ಕಿಪ್ಪೂರ್ ವಾರ್ (Yom Kippur War) ಎಂದು ಕರೆಯುತ್ತಾರೆ. ಈ ಯುದ್ಧದಲ್ಲಿ ಈಜಿಪ್ಟ್ ಸಂಪೂರ್ಣ ಜಯ ಸಾಧಿಸಿಲ್ಲವಾದರೂ, ಸೋತ ಕೆಲವು ಪ್ರದೇಶಗಳನ್ನು ಮರಳಿ ಪಡೆದು ತನ್ನ ಗೌರವವನ್ನು ಪುನಃ ಸ್ಥಾಪಿಸಿತು.

ಈ ಯುದ್ಧದ ನಂತರ ಸಾದತ್ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. 1977ರಲ್ಲಿ ಅವರು ಇಸ್ರೇಲಿಗೆ ಭೇಟಿ ನೀಡಿ, “ಜೆರುಸಲೆಮ್‌ನಲ್ಲಿ ಯುದ್ಧದ ಮಾರ್ಗಕ್ಕಿಂತ, ಶಾಂತಿಯ ಮಾರ್ಗವನ್ನು ಈಜಿಪ್ಟ್ ನಂಬುತ್ತದೆ, ಇಸ್ರೇಲ್ ಇನ್ನು ಮುಂದೆ ನಮ್ಮ ಮಿತ್ರರಾಷ್ಟ್ರ" ಎಂದು ಘೋಷಿಸಿದರು.

ಜನಿಸಿದ 30 ವರ್ಷಗಳ ನಂತರ, ಇಸ್ರೇಲಿಗೆ ಭೇಟಿ ನೀಡಿದ ಮಧ್ಯಪ್ರಾಚ್ಯದ ಮೊಟ್ಟಮೊದಲ ನಾಯಕ ಅನ್ವರ್ ಸಾದತ್. 1978ರಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕ್ಯಾಂಪ್ ಡೆವಿಡ್ ಅಕಾರ್ಡ್ಸ್( Camp David Accords) ಎಂಬ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು ಇಸ್ರೇಲಿನ ಆಗಿನ ಪ್ರಧಾನಿ ಮೆನಾಚೆಮ್ ಬೆಗಿನ್ ಮತ್ತು ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್.

ಒಪ್ಪಂದದ ಪ್ರಕಾರ 1967ರ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಸಿನಾಯ್ ಪರ್ಯಾಯ ದ್ವೀಪದಿಂದ ಇಸ್ರೇಲ್ ತನ್ನ ಸೈನ್ಯ ಮತ್ತು ನಾಗರಿಕರನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕಿತ್ತು. ಈ ಒಪ್ಪಂದವು ಸೂಯೆಜ್ ಕಾಲುವೆಯ ಮೂಲಕ ಇಸ್ರೇಲಿ ಹಡಗುಗಳ ಮುಕ್ತ ಸಾಗಣೆಗೆ ಮತ್ತು ತಿರಾನ್ ಜಲಸಂಧಿ ಹಾಗೂ ಅಕಾಬಾ ಕೊಲ್ಲಿಯನ್ನು ಅಂತಾರಾಷ್ಟ್ರೀಯ ಜಲಮಾರ್ಗಗಳೆಂದು ಗುರುತಿಸಲು ಅವಕಾಶ ಮಾಡಿಕೊಟ್ಟಿತು.

Screenshot_3 R

ಈ ಒಪ್ಪಂದವು ಈಜಿಪ್ಟ್, ಇಸ್ರೇಲ್ ಅನ್ನು ಅಧಿಕೃತವಾಗಿ ಗುರುತಿಸಿದ ಮೊದಲ ಅರಬ್ ರಾಷ್ಟ್ರ ವನ್ನಾಗಿ ಮಾಡಿತು. ಇದು ಇಸ್ರೇಲ್ ಮತ್ತು ಅರಬ್ ದೇಶದ ನಡುವೆ ನಡೆದ ಮೊದಲ ಶಾಂತಿ ಒಪ್ಪಂದವಾಗಿತ್ತು. ಈ ಪ್ರಯತ್ನಕ್ಕಾಗಿ ಸಾದತ್ ಮತ್ತು ಬೆಗಿನ್‌ರವರಿಗೆ 1978ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿ ಕೂಡ ಲಭಿಸಿತು. ಈ ಘಟನೆಯನ್ನು ಬಹುತೇಕ ಅರಬ್ ದೇಶಗಳು ದ್ರೋಹ ಎಂದು ಪರಿಗಣಿಸಿದವು.

ಈಜಿಪ್ಟ್ ಅನ್ನು ಅರಬ್ ಲೀಗ್‌ನಿಂದ ಹೊರಗಿಡಲಾಯಿತು. ಮಧ್ಯಪ್ರಾಚ್ಯದ ಎಲ್ಲ ರಾಷ್ಟ್ರಗಳಿಗೆ ಇಸ್ರೇಲೇ ಪ್ರಮುಖ ವಿರೋಧಿ ದೇಶ. ಅಂಥ ಇಸ್ರೇಲ್ ದೇಶದೊಂದಿಗೆ ಶಾಂತಿ ಒಪ್ಪಂದ ಮಾಡಿ ಕೊಂಡಿದ್ದನ್ನು, ಯಾವುದೇ ಅರಬ್ ನಾಯಕನು ಒಪ್ಪಲಿಲ್ಲ.

ಈಜಿಪ್ಟಿನ ಹೊರಗಷ್ಟೇ ಅಲ್ಲ, ಈಜಿಪ್ಟಿನ ಒಳಗೂ ವಿರೋಧ ಹೆಚ್ಚಾಯಿತು. ಕಟ್ಟರ್ ಇಸ್ಲಾಮಿಕ್ ಸಂಘಟನೆಗಳು ಸಾದತ್ ಅವರನ್ನು ವಿರೋಧಿಸಲು ಆರಂಭಿಸಿದವು. “ಇಸ್ರೇಲ್ ಜತೆಗೂಡಿ ಈಜಿಪ್ಟ ನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ, ಅಮೆರಿಕ ಹೇಳಿದಂತೆ ಕೇಳುತ್ತಿದ್ದಾರೆ, ಅಮೆರಿಕದ ಅಡಿಯಾಳಾ ಗಿದ್ದಾರೆ" ಎಂದು ಅವು ಆರೋಪಿಸಿದವು.

1980ರ ವೇಳೆಗೆ ಸಾದತ್ ಸರಕಾರದ ವಿರುದ್ಧ ಪ್ರತಿಭಟನೆಗಳು ಹೆಚ್ಚಾದವು. ಪ್ರತಿಭಟನೆ ಹತ್ತಿಕ್ಕಲು, ಸೆಪ್ಟೆಂಬರ್ 1981ರಲ್ಲಿ ಸಾದತ್, ದೇಶಾದ್ಯಂತ ವಿರೋಧಿಗಳನ್ನು ಬಂಧಿಸಿದರು. ಅವರಲ್ಲಿ ವಿರೋಧಿ ಪಕ್ಷದ ರಾಜಕೀಯ ನಾಯಕರು, ಪತ್ರಕರ್ತರು, ಧಾರ್ಮಿಕ ಮುಖಂಡರು ಸೇರಿದ್ದರು. ಈ ಕ್ರಮ ಸರಕಾರದ ವಿರುದ್ಧ ಜನರ ಕೋಪವನ್ನು ಹೆಚ್ಚಿಸಿತು ಮತ್ತು ದೇಶದೊಳಗೆ ಅಸಮಾಧಾನ ತೀವ್ರ ಗೊಂಡಿತು.

1981ರ ಅಕ್ಟೋಬರ್ 6ರಂದು ಕೈರೋದಲ್ಲಿ ಈಜಿಪ್ಟ್ ಸೇನೆಯ ವಾರ್ಷಿಕ ಪರೇಡ್ ಅನ್ನು ನಡೆಸಲು ಯೋಜಿಸಲಾಯಿತು. 1973ರ ಇಸ್ರೇಲ್ ವಿರುದ್ಧದ ಯುದ್ಧದ ಜಯದ ಸ್ಮರಣೆಗಾಗಿ ಈ ಪರೇಡ್ ಆಯೋಜನೆಗೊಂಡಿತ್ತು. ಸಾದತ್ ತಮ್ಮ ದೇಶದ ರಾಜಕೀಯ ಮತ್ತು ಸಮಾಜದ ಒಳಗಿನ ಒತ್ತಡ ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಅವರು ಜಾಗತಿಕ ನಾಯಕರಾಗಿ ಹೊರಹೊಮ್ಮಿ ದ್ದರು.

ತಾವೊಬ್ಬ ಸ್ಟೇಟ್ಸ್‌ಮನ್ ಎಂದು ಕರೆಸಿಕೊಳ್ಳಬೇಕೆಂಬ ಅವರ ಅತೀವ ತುಡಿತ ಕೊನೆಗೆ ಅವರ ಅಂತ್ಯಕ್ಕೂ ಕಾರಣವಾಯಿತು. ಇಸ್ರೇಲ್ ಜತೆಗೆ ಒಪ್ಪಂದ ಮಾಡಿಕೊಂಡು ಅರಬ್ ಏಕತೆಯನ್ನು ದುರ್ಬಲಗೊಳಿಸಿದರು ಎಂಬ ಆಪಾದನೆ ಅವರ ಅಂತ್ಯಕ್ಕೆ ಕಾರಣವಾಯಿತು. 1979ರಲ್ಲಿ ನಡೆದ ಶಾಂತಿ ಒಪ್ಪಂದವು ಈಜಿಪ್ಟ್ ಮತ್ತು ಇಸ್ರೇಲ್ ನಡುವೆ ಇಂದಿಗೂ ಜಾರಿಯಲ್ಲಿದೆ. ‌

ಇದು ಮಧ್ಯಪ್ರಾಚ್ಯದ ದೀರ್ಘಕಾಲದ ಶಾಂತಿ ಪ್ರಯತ್ನಗಳ ಒಂದು ಪ್ರಮುಖ ಅಧ್ಯಾಯ. ಆದರೆ ಶಾಂತಿಯ ಮಾರ್ಗವನ್ನು ಆರಿಸುವುದು ಕೂಡ ಕೆಲವೊಮ್ಮೆ ಯುದ್ಧಕ್ಕಿಂತಲೂ ಅಪಾಯಕಾರಿ ಆಗಬಹುದು ಎನ್ನುವುದಕ್ಕೆ ಸಾದತ್ ಅವರ ಹತ್ಯೆಯೇ ಸಾಕ್ಷಿ. ಹತ್ಯೆಯ ಕೆಲವೇ ದಿನಗಳ ಮುಂಚೆ ಸಾದತ್ ಅವರಿಗೆ ಉಪರಾಷ್ಟ್ರಪತಿ ಹೊಸ್ನಿ ಮುಬಾರಕ್, “ಸೇನೆಯಲ್ಲಿ ಕ್ಷಿಪ್ರಕಾಂತಿಯಾಗಬಹುದು, ನಿಮ್ಮ ಮೇಲೆ ಹತ್ಯೆಯ ಪ್ರಯತ್ನವಾಗಬಹುದು" ಎಂಬ ಸಣ್ಣ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದರು.

ಆಗ ಸಾದತ್ ಹೇಳಿದ್ದು, “ನನಗೇನೂ ಆಗುವುದಿಲ್ಲ. ಅವರೆಲ್ಲ ಮೈ ಬಾಯ್ಸ್" ಅಂತ. ಸಾದತ್ ಅವರ ಸ್ವಂತ ನಿರ್ಧಾರವಲ್ಲದೆ ಭದ್ರತಾ ವ್ಯವಸ್ಥೆಯ ದೋಷಗಳು ಕೂಡ ಅವರ ಹತ್ಯೆಗೆ ಕಾರಣವಾದವು. 1981ರ ಅಕ್ಟೋಬರ್ 6ರಂದು ಕೈರೋದಲ್ಲಿ ನಡೆದ ಸೇನಾ ಪರೇಡ್ ಸಂದರ್ಭದಲ್ಲಿ ಅನ್ವರ್ ಸಾದತ್ ಅವರ ಹತ್ಯೆ ನಡೆದದ್ದು ಕೇವಲ ಕೆಲವೇ ಕ್ಷಣಗಳಲ್ಲಿ ಸಂಭವಿಸಿದ ದಾಳಿಯಿಂದ. ಆದರೆ ಆ ಘಟನೆಗೆ ಕಾರಣವಾದುದು ದೊಡ್ಡ ಭದ್ರತಾ ವೈಫಲ್ಯಗಳ ಒಂದು ಸರಣಿ.

ಪರೇಡ್ ವ್ಯವಸ್ಥೆ, ಭದ್ರತಾ ನಿಯಮಗಳು ಮತ್ತು ಆ ದಿನ ತೆಗೆದುಕೊಂಡ ಕೆಲವು ನಿರ್ಧಾರಗಳು- ಎಲ್ಲ ಸೇರಿ ದಾಳಿಕೋರರಿಗೆ ಅವಕಾಶ ನೀಡಿದವು. ದಾಳಿಯನ್ನು ಮುನ್ನಡೆಸಿದ ವ್ಯಕ್ತಿ ಸೇನೆಯ ಕೆಳದರ್ಜೆಯ ಅಧಿಕಾರಿ ಖಾಲಿದ್ ಇಸ್ಲಾಂಬೋಲಿ.

ಆ ದಿನದ ಪ್ರಮುಖ ಭದ್ರತಾ ದೋಷಗಳು

೧. ಸಾಮಾನ್ಯವಾಗಿ ರಾಷ್ಟ್ರಪತಿ ಭದ್ರತೆಯು ಅತ್ಯಂತ ಪ್ರಮುಖ ವ್ಯವಸ್ಥೆ. ಆದರೆ ಆ ದಿನ ನಡೆದ ಕಾರ್ಯಕ್ರಮವು ಸೇನೆಯ ಪರೇಡ್ ಆಗಿದ್ದರಿಂದ, ದಾಳಿಕೋರರು ಅಧಿಕೃತವಾಗಿ ಪರೇಡ್ ನಲ್ಲಿ ಭಾಗವಹಿಸುವ ಸೈನಿಕರೇ ಆಗಿದ್ದರಿಂದ ಅವರು ವಾಹನದಲ್ಲಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬರಲು ಸಾಧ್ಯವಾಯಿತು.

ಮೊದಲನೇ ಎಂಟ್ರಿಯಲ್ಲಿ ಖಾಲಿದ್ ಟ್ರಕ್ ಏರಿ ಬಂದಾಗ, ಅವರ ಜತೆ ಮೂರು ಜನರಿದ್ದರು, ಅವರು ಮಿಲಿಟರಿ ಯೂನಿಫಾರ್ಮ್‌ನಲ್ಲಿ ಇದ್ದಿದ್ದರಿಂದ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಲಿಲ್ಲ. ಅವರು ನಾಲ್ವರು ಸಜೀವ ಗುಂಡುಗಳನ್ನು ಇಟ್ಟುಕೊಂಡು ಪಿಸ್ತೂಲ್, ಗ್ರನೇಡ್‌ಗಳನ್ನು ತಮ್ಮೊಟ್ಟಿಗೆ ತಂದಿದ್ದರು.

೨. ಪರೇಡ್‌ನಲ್ಲಿ ಸೈನಿಕ ಟ್ರಕ್‌ಗಳು ಮತ್ತು ಯುದ್ಧ ವಾಹನಗಳು ಅಧ್ಯಕ್ಷರ ವೇದಿಕೆಯ ಮುಂದೆ ತುಂಬ ಹತ್ತಿರವಾಗಿ ಸಾಗುತ್ತವೆ. ಇದು ಸಾಮಾನ್ಯವಾಗಿ ಗೌರವ ಪ್ರದರ್ಶನದ ಭಾಗ. ಆದರೆ ಇದೇ ವ್ಯವಸ್ಥೆ ದಾಳಿಕೋರರಿಗೆ ಪ್ರಮುಖ ಅವಕಾಶ ನೀಡಿತು.

೩. ಖಾಲಿದ್ ಇಸ್ಲಾಂಬೋಲಿ ಇದ್ದ ಟ್ರಕ್ ವೇದಿಕೆಯ ಮುಂದೆ ಬಂದಾಗ ಯಾರಿಗೂ ಅನುಮಾನ ವಾಗಲಿಲ್ಲ. ವಾಹನವು ನಿಂತಾಗ ಅದನ್ನು ಪರೇಡ್‌ನ ಭಾಗವೆಂದು ಎಲ್ಲರೂ ಭಾವಿಸಿದರು.

೩. ಪರೇಡ್ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಖಾಲಿಗುಂಡುಗಳನ್ನು (blank ammunition) ಮಾತ್ರ ಬಳಸಲಾಗುತ್ತದೆ. ಆದರೆ ದಾಳಿಕೋರರ ಬಳಿ ಅಸಲಿ ಗುಂಡುಗಳು ಮತ್ತು ಗ್ರೆನೇಡ್ ಇದ್ದವು.

೪. ಅಧ್ಯಕ್ಷರ ವೇದಿಕೆಯ ಮುಂದೆ ಭದ್ರತಾ ಸಿಬ್ಬಂದಿ ಇದ್ದರೂ, ಅವರು ಹೆಚ್ಚಿನದಾಗಿ ವೀಕ್ಷಣಾ ಭದ್ರತೆ ನೀಡುತ್ತಿದ್ದರು. ವೇದಿಕೆಯ ಬಳಿ ಇದ್ದ ಕೆಲವು ಭದ್ರತಾ ಸಿಬ್ಬಂದಿಯ ಪಿಸ್ತೂಲ್‌ಗಳಲ್ಲಿ ನಿಜವಾದ ಗುಂಡುಗಳು ಇರಲಿಲ್ಲ

೫. ಟ್ರಕ್ ವೇದಿಕೆಯ ಮುಂದೆ ನಿಂತ ನಂತರ ಖಾಲಿದ್ ಇಸ್ಲಾಂಬೋಲಿ ತಕ್ಷಣ ಅದರಿಂದ ಜಿಗಿದು ಗ್ರೆನೇಡ್ ಎಸೆದ; ಅದು ಚೀನಾ ಗ್ರೆನೇಡ್, ಸ್ಪೋಟಗೊಳ್ಳಲಿಲ್ಲ! ಕೂಡಲೇ ಖಾಲಿದ್ ಮತ್ತು ಅವನ ಜತೆಗಿದ್ದ ಮೂವರು ಸಹಚರರು ಸ್ವಯಂಚಾಲಿತ ರೈಫಲ್‌ಗಳಿಂದ ಗುಂಡು ಹಾರಿಸಲು ಆರಂಭಿಸಿ ದರು. ಆ ಸಮಯದಲ್ಲಿ ಅಧ್ಯಕ್ಷ ಸಾದತ್ ವೇದಿಕೆಯಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸು ತ್ತಿದ್ದರು.

ಮೊದಲ ಕೆಲವು ಸೆಕೆಂಡುಗಳಲ್ಲಿ ವೇದಿಕೆಯಲ್ಲಿ ಕುಳಿತಿದ್ದ ಅನೇಕರು ಇದನ್ನು ಪರೇಡ್ ಪ್ರದರ್ಶನ ದ ಭಾಗ ಎಂದು ಭಾವಿಸಿದರು. ಪರೇಡ್‌ನಲ್ಲಿ ಸೈನಿಕರು ಓಡಾಡುವುದು, ಗುಂಡಿನ ಶಬ್ದಗಳು ಕೇಳುವುದು ಸಾಮಾನ್ಯ ದೃಶ್ಯವಾಗಿರುವುದರಿಂದ ಮೊದಲಿಗೆ ದಾಳಿ ಎಂದು ಯಾರೂ ಗುರುತಿಸ ಲಿಲ್ಲ. ಅದು ನಿಜವಾದ ದಾಳಿ ಎಂಬುದನ್ನು ಅರಿಯುವಷ್ಟರಲ್ಲಿ ಬಹಳ ಸಮಯ ಕಳೆದು ಹೋಗಿತ್ತು.

ಅಧ್ಯಕ್ಷರ ಸುತ್ತಲೂ ವೈಯಕ್ತಿಕ ಭದ್ರತಾ ಸಿಬ್ಬಂದಿ ಇದ್ದರೂ ಅವರು ವೇದಿಕೆಯ ಹಿಂದೆ ಅಥವಾ ಪಕ್ಕದಲ್ಲಿ ನಿಂತಿದ್ದರು. ಆದರೆ ದಾಳಿ ನಡೆದ ಸಮಯ ತುಂಬಾ ಕಡಿಮೆ. ಕೆಲವೇ ಕೆಲವು ಸೆಕೆಂಡು ಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಯಿತು. ಸಾದತ್ ಅ ಕುಸಿದರು. ಅವರನ್ನು ಹೆಲಿಕಾಪ್ಟರ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ತಲುಪುವ ಮುಂಚೆಯೇ ಅವರು ಅಸುನೀಗಿದ್ದರು.

ಈ ಹತ್ಯೆಯು ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಒಂದು ದೊಡ್ಡ ದುರಂತ ಎನಿಸಿಕೊಂಡಿತು. ಅವರ ಅಂತ್ಯಕ್ರಿಯೆಯಲ್ಲಿ ಅಮೆರಿಕದ ಮೂವರು ಮಾಜಿ ಅಧ್ಯಕ್ಷರು (ರಿಚರ್ಡ್ ನಿಕ್ಸನ್, ಗೆರಾರ್ಡ್ ಫೋರ್ಡ್ ಮತ್ತು ಜಿಮ್ಮಿ ಕಾರ್ಟರ್) ಭಾಗವಹಿಸಿದ್ದರು. ಇಸ್ರೇಲಿನ ಆಗಿನ ಪ್ರಧಾನಿ ಬೆಗಿನ್ ಕೂಡ ಭಾಗವಹಿಸಿದ್ದರು.

ಸುಡಾನ್ ಅಧ್ಯಕ್ಷ ಗಫರ್ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಅರಬ್ ರಾಷ್ಟ್ರದ ಏಕೈಕ ಮುಖ್ಯಸ್ಥರಾಗಿದ್ದರು. ಪಾಶ್ಚಾತ್ಯ ಜಗತ್ತು ಸಾದತ್‌ರನ್ನು ತುಂಬಾ ಗೌರವದಿಂದ ಕಾಣುತ್ತದೆ. ಅವರೊಬ್ಬ ಮುತ್ಸದ್ದಿ, ಮಧ್ಯಪ್ರಾಚ್ಯದ ಶಾಂತಿಗಾಗಿ ತಮ್ಮ ಜೀವವನ್ನೇ ಕೊಟ್ಟರು ಎಂಬ ಗೌರವ ಇದೆ.

ಸೇನಾ ಪರೇಡ್ ಎಂಬ ಗೌರವದ ಕಾರ್ಯಕ್ರಮವೇ ಆ ದಿನ ಒಂದು ದುರಂತಕ್ಕೆ ಕಾರಣವಾಯಿತು. ಈ ಘಟನೆ ಇತಿಹಾಸದಲ್ಲಿ ಭದ್ರತಾ ವೈಫಲ್ಯದ ಅತ್ಯಂತ ದೊಡ್ಡ ಉದಾಹರಣೆಗಳಲ್ಲಿ ಒಂದಾಗಿ ಉಳಿದಿದೆ. ಬಹುಶಃ ಸಾದತ್ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದರೆ , ಬದುಕಿ ಉಳಿಯುತ್ತಿದ್ದಾರೆನೋ?

(ಲೇಖಕಿ ಹವ್ಯಾಸಿ ಬರಹಗಾರ್ತಿ)