ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಆಪತ್ಕಾಲದ ನಂಬಿಕೆಯ ಹುಂಡಿ - PM-NRF

ಶಾಸಕರ ಮನೆ, ಕಛೇರಿಯ ಮುಂದೆ ನಿಂತಿರುವ ಜನಸಾಮಾನ್ಯ, ತನ್ನ ಆಪತ್ಕಾಲಕ್ಕೆ, ಅಪಘಾತ ದಂತಹ ಚಿಕಿತ್ಸೆಗೆ ಖಂಡಿತ ಸಹಾಯ ದೊರಕುವುದು ಎಂಬ ನಂಬಿಕೆ ಹೊಂದಿರುತ್ತಾನೆ. ನೂರೆಂಟು ಒತ್ತಡಗಳ ನಡುವೆ ಆ ಜನಪ್ರತಿನಿಧಿಯೂ ಸಹ ಖಂಡಿತವಾಗಿಯೂ ನಿನ್ನ ಸಂಕಷ್ಟ ಸರಿಯಾಗುತ್ತದೆ ಎಂದು ಬೆನ್ನು ತಟ್ಟಿ ಧೈರ್ಯ ಹೇಳುತ್ತಾನೆ. ಹೀಗೆ ಮಾಡುವವರಿಗೂ, ಇದರ ಸಹಾಯ ಪಡೆಯು ವವರಿಗೂ ಒಟ್ಟಿಗೇ ನಂಬಿಕೆ ಮೂಡಿಸಿರುವ ವಿಶಿಷ್ಟ ಯೋಜನೆ ನಮ್ಮ ಪ್ರಧಾನಮಂತ್ರಿ ಪರಿಹಾರನಿಧಿ!

ಆಪತ್ಕಾಲದ ನಂಬಿಕೆಯ ಹುಂಡಿ - PM-NRF

ಗಂಟಾಘೋಷ

ಆರಂಭಿಕ ಕಾಲದಿಂದಲೂ ನಮ್ಮ ಸಮಾಜದಲ್ಲಿ ದೇಗುಲಕ್ಕೆ ಭೇಟಿಕೊಟ್ಟಾಗ ಸಹಜವಾಗಿಯೇ ದಕ್ಷಿಣೆ ರೂಪದಲ್ಲಿ ಹುಂಡಿಗೆ ತಮ್ಮ ಯೋಗ್ಯತಾನುಸಾರ ಹಣವನ್ನೋ, ಚಿನ್ನವನ್ನೋ, ದಾನಪತ್ರ ವನ್ನೋ ಹಾಕಿ ಕೃತಾರ್ಥಭಾವ ಹೊಂದುತ್ತಿದ್ದರು ಮತ್ತು ಈಗಲೂ ಸಹ ಇದು ನಡೆದುಕೊಂಡು ಬರುತ್ತಿದೆ. ಕಾರಣ, ಇಂತಹ ಒಂದು ಸಂಗ್ರಹವನ್ನು ವಿದ್ಯಾದಾನಕ್ಕಾಗಿ, ಅನ್ನದಾನಕ್ಕಾಗಿ ಅಥವಾ ದೇಗುಲ ನಿರ್ಮಾಣಕ್ಕೆ ಶಾಲಾ ಕಟ್ಟಡ, ಮಕ್ಕಳ ವಿದ್ಯಾಭ್ಯಾಸಗಳಂತಹ ಪವಿತ್ರಕಾರ್ಯಕ್ಕೆ ಬಳಸಲಾಗುತ್ತದೆ ಎಂಬ ಆಶಯ ದಾನ ಮಾಡುವವರಲ್ಲಿ ಇರುತ್ತದೆ. ಅದರಂತೆಯೇ ಈ ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ. ದೇಶದ ಕೋಟ್ಯಂತರ ನಾಗರಿಕರಲ್ಲಿ ಸಾಧನೆಗೈ ದವರು, ವಾಣಿಜ್ಯ ಕ್ಷೇತ್ರ ದಲ್ಲಿ, ಹಣಕಾಸು ರಂಗದಲ್ಲಿ ಉನ್ನತಕ್ಕೇರಿದವರು ಕಿಂಚಿತ್ತಾದರೂ ತಮ್ಮಿಂದ ಈ ಸಮಾಜಕ್ಕೆ, ದೇಶಕ್ಕೆ, ದೇಶದ ನಾಗರಿಕರಿಗೆ ಆಪತ್ಕಾಲದಲ್ಲಿ ಸಹಾಯಕ್ಕೆ ಒದಗಿಬರಲಿ ಎಂಬ ಉದ್ದೇಶದಿಂದ ’ PM-NRF’ ಟ್ರಸ್ಟ್‌ಗೆ ತಮಗಾದಷ್ಟು ದಾನ/ ದೇಣಿಗೆ ಕೊಡುತ್ತ ಬರುತ್ತಿದ್ದಾರೆ. ಈ ಮೂಲಕ ಅಗತ್ಯ ವಿರುವ ಬಡತನ ರೇಖೆಯಲ್ಲಿನ ಜನಸಾಮಾನ್ಯರಿಗೆ ವಿವಿಧ ರೂಪದಲ್ಲಿ ಈ ನಿಧಿಯು ನೆರವಾಗುತ್ತಿದೆ.

ಪ್ರವಾಹ, ಚಂಡಮಾರುತಗಳು ಮತ್ತು ಭೂಕಂಪಗಳು ಮುಂತಾದ ನೈಸರ್ಗಿಕ ವಿಕೋಪಗಳಲ್ಲಿ ಸತ್ತವರ ಕುಟುಂಬಗಳಿಗೆ ಮತ್ತು ಪ್ರಮುಖ ಅಪಘಾತಗಳು ಮತ್ತು ಗಲಭೆಗಳ ಬಲಿಪಶುಗಳಿಗೆ ತಕ್ಷಣದ ಪರಿಹಾರವನ್ನು ನೀಡಲು ಪಿಎಂಎನ್‌ಆರ್‌ಎಫ್‌ ನ ಸಂಪನ್ಮೂಲಗಳನ್ನು ಈಗ ಪ್ರಾಥಮಿಕವಾಗಿ ಬಳಸಲಾಗುತ್ತಿದೆ.

ಇದನ್ನೂ ಓದಿ: Gururaj Gantihole Column: ಕೊರಗ ಜನಾಂಗದ ಅಭಿವೃದ್ಧಿಗೆ ಮೋದಿ ಸರಕಾರದ ಕಾಳಜಿ !

ಅಂದಿನ ಸಾರ್ವಜನಿಕರ ಆರ್ಥಿಕ ಪರಿಸ್ಥಿತಿ ಅರಿತು, 1948ರಲ್ಲಿ ಪಾಕಿಸ್ತಾನದಿಂದ ಸ್ಥಳಾಂತರ ಗೊಂಡ ವ್ಯಕ್ತಿಗಳಿಗೆ ಸಹಾಯ ಮಾಡಲು ಸಾರ್ವಜನಿಕ ಕೊಡುಗೆಗಳೊಂದಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್) ಅನ್ನು ಸ್ಥಾಪಿಸಲಾಯಿತು.

ಹೃದಯ ಶಸ್ತ್ರಚಿಕಿತ್ಸೆಗಳು, ಮೂತ್ರಪಿಂಡ ಕಸಿ, ಕ್ಯಾನ್ಸರ್ ಚಿಕಿತ್ಸೆ ಮತ್ತು ಆಸಿಡ್ ದಾಳಿಯಂತಹ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭಾಗಶಃ ಭರಿಸಲು ಪಿಎಂಎನ್‌ಆರ್‌ಎಫ್ ನಿಂದ ಸಹಾಯ‌ ವನ್ನು ಸಹ ನೀಡಲಾಗುತ್ತದೆ. ನಿಧಿಯು ಸಂಪೂರ್ಣವಾಗಿ ಸಾರ್ವಜನಿಕ ಕೊಡುಗೆಗಳನ್ನು ಒಳಗೊಂಡಿದ್ದು, ಯಾವುದೇ ಬಜೆಟ್ ರೀತಿಯ ಬೆಂಬಲವನ್ನು ಹೊಂದಿರುವುದಿಲ್ಲ.

ನಿಧಿಯ ಕಾರ್ಪಸ್ ಅನ್ನು ನಿಗದಿತ ವಾಣಿಜ್ಯ ಬ್ಯಾಂಕುಗಳು ಮತ್ತು ಇತರ ಏಜೆನ್ಸಿಗಳೊಂದಿಗೆ ವಿವಿಧ ರೂಪಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರಧಾನ ಮಂತ್ರಿಯವರ ಅನುಮೋದನೆಯೊಂದಿಗೆ ವಿನಿಯೋಗ ಮಾಡಲಾಗುತ್ತದೆ. ಪಿಎಂಎನ್‌ಆರ್‌ಎಫ್ ಅನ್ನು ಸಂಸತ್ತಿನಿಂದ ರಚಿಸದೇ ಇರುವ ಒಂದು ವಿಶಿಷ್ಟ ಯೋಜನೆಯಾಗಿದ್ದು, ಈ ನಿಧಿಯನ್ನು ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ‘ಟ್ರಸ್ಟ್’ ಎಂದು ಗುರುತಿಸಲಾಗಿದೆ ಮತ್ತು ರಾಷ್ಟ್ರೀಯ ಕಾರಣಗಳಿಗಾಗಿ ಪ್ರಧಾನಮಂತ್ರಿ ಅಥವಾ ಬಹುಪ್ರತಿನಿಧಿಗಳು ಇದನ್ನು ನಿರ್ವಹಿಸುತ್ತಾರೆ.

PMR R

ಪಿಎಂಎನ್‌ಆರ್ ಎಫ್‌ -ಪ್ರಧಾನಮಂತ್ರಿಗಳ ಕಚೇರಿಯ ಮೂಲಕ ತನ್ನ ಕಾರ್ಯ ನಿರ್ವಹಿಸುತ್ತಿದ್ದು, ಆದಾಯ ತೆರಿಗೆ ಕಾಯಿದೆ, 1961ರ ಅಡಿಯಲ್ಲಿ ಸೆಕ್ಷನ್ 10 ಮತ್ತು 139ರ ಅಡಿಯಲ್ಲಿ ಪಿಎಂಎನ್‌ ಆರ್‌ಎಫ್‌ ರಿಟರ್ನ್ ಉದ್ದೇಶಗಳಿಗಾಗಿ ವಿನಾಯಿತಿ ಹೊಂದಿದೆ. ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 80(ಜಿ) ಅಡಿಯಲ್ಲಿ ತೆರಿಗೆಗೆ ಒಳಪಡುವ ಆದಾಯದಿಂದ 100% ಕಡಿತಕ್ಕೆ ಪಿಎಂಎನ್‌ ಆರ್‌ಎಫ್ ಗೆ ಕೊಡುಗೆಗಳನ್ನು ಸೂಚಿಸಲಾಗಿದೆ. ಪ್ರಧಾನಮಂತ್ರಿ ಪಿಎಂಎನ್ ಆರ್‌ಎಫ್ ನ ಅಧ್ಯಕ್ಷರಾಗಿದ್ದಾರೆ ಮತ್ತು ಗೌರವ ಆಧಾರದ ಮೇಲೆ ಸಂಬಂಧಿತ ಅಧಿಕಾರಿಗಳು/ಸಿಬ್ಬಂದಿಯಿಂದ ಸಹಾಯ ಮಾಡುತ್ತಾರೆ.

ಸರಕಾರ ದ ಬಜೆಟ್ ಮೂಲಗಳಿಂದ ಅಥವಾ ಸಾರ್ವಜನಿಕ ವಲಯದ ಉದ್ಯಮಗಳ ಬ್ಯಾಲೆನ್ಸ್‌ ಶೀಟ್‌ಗಳಿಂದ ಕೊಡುಗೆಗಳನ್ನು ಸ್ವೀಕರಿಸಲಾಗುವುದಿಲ್ಲ. ಷರತ್ತುಬದ್ಧ ಕೊಡುಗೆಗಳು, ದಾನಿಗಳು ನಿರ್ದಿಷ್ಟವಾಗಿ ನಿರ್ದಿಷ್ಟ ಉದ್ದೇಶಕ್ಕಾಗಿ ಮೊತ್ತವನ್ನು ಸೂಚಿಸಿದರೆ, ನಿಧಿಯಲ್ಲಿ ಸ್ವೀಕರಿಸಲಾಗುವು ದಿಲ್ಲ.

ಯಾವುದೇ ಪಿಎಂಎನ್‌ಆರ್‌ಎಫ್ ಸಂಗ್ರಹಣೆಯ ಬ್ಯಾಂಕ್ ಗಳಲ್ಲಿ ದಾನಿಯು ನೇರವಾಗಿ ದೇಣಿಗೆ‌ ಗಳನ್ನು ಠೇವಣಿ ಮಾಡಬಹುದಾಗಿದೆ. ನಿಧಿಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಸಾರ್ವಜನಿಕ ದೇಣಿಗೆಗಳನ್ನು ಅವಲಂಬಿಸಿದೆ. ಇದು ಸರ್ಕಾರದಿಂದ ಬಜೆಟ್ ಹೊರತುಪಡಿಸಿ, ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಕೊಡುಗೆಗಳ ಮೂಲಕ ನಿರ್ವಹಿಸಲ್ಪ ಡುತ್ತದೆ.

ಸಾರ್ವಜನಿಕರ ಸಂಕಷ್ಟದ ಕಾಲದಲ್ಲಿ ಆರಂಭವಾದ ಈ ಒಂದು ಟ್ರಸ್ಟ್ ರೀತಿಯ ಯೋಜನೆಯು, ಪ್ರಸ್ತುತ ದೇಶದ ವಿವಿಧ ಭಾಗದ ಅಸಹಾಯಕ, ಬಡತನ ರೇಖೆಗಿಂತ ಕೆಳಗಿರುವ, ತುರ್ತುಚಿಕಿತ್ಸೆಯ ಅಗತ್ಯವಿರುವ ಜನರಿಗೆ ಸಂಜೀವಿನಿಯಂತೆ ಸಹಾಯಕ್ಕೆ ನಿಲ್ಲುವ ಆಪತ್ಕಾಲದ ಸಹಾಯನಿಧಿ ಯಾಗಿದೆ ಎನ್ನಬಹುದು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಪ್ರಾಥಮಿಕ ಉದ್ದೇಶಗಳನ್ನು ಗಮನಿಸಿದಾಗ,

? ಪ್ರವಾಹಗಳು, ಚಂಡಮಾರುತಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳಲ್ಲಿ ಸತ್ತವರ ಕುಟುಂಬಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸುವುದು.

? ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ಚಿಕಿತ್ಸೆ, ಮೂತ್ರಪಿಂಡ ಕಸಿ ಮತ್ತು ಇತರ ಗಂಭೀರ ಕಾಯಿಲೆಗಳು ಸೇರಿದಂತೆ ವೈದ್ಯಕೀಯ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡುವುದು.

? ರೈಲು ಅಥವಾ ಕೈಗಾರಿಕಾ ದುರಂತಗಳಂತಹ ಪ್ರಮುಖ ಅಪಘಾತಗಳ ಬಲಿಪಶುಗಳನ್ನು ಬೆಂಬಲಿಸುವುದು.

? ಕೇಸ್-ಬೈ-ಕೇಸ್ ಆಧಾರದ ಮೇಲೆ ಸಂಕಷ್ಟದ ಅಸಾಧಾರಣ ಸಂದರ್ಭಗಳಲ್ಲಿ ವ್ಯಕ್ತಿಗಳಿಗೆ ಸಹಾಯ ಮಾಡುವುದು ಸೇರಿದಂತೆ, ಇದರ ಗುರಿಯು ಪೀಡಿತರಿಗೆ ತಕ್ಷಣದ ಮತ್ತು ನೇರ ಪರಿಹಾರ ವಾಗಿದೆ.

ಹಾಗಾಗಿ, ಇದು ಪ್ರಧಾನಮಂತ್ರಿಯವರ ನೇರ ಮೇಲ್ವಿಚಾರಣೆಯಲ್ಲಿ ಪ್ರಧಾನಮಂತ್ರಿ ಕಚೇರಿ ( PMO ) ನಿರ್ವಹಿಸುತ್ತದೆ. ಪ್ರಧಾನಮಂತ್ರಿಯ ಜಂಟಿ ಕಾರ್ಯದರ್ಶಿ ಈ ನಿಧಿಯ ದೈನಂದಿನ ಆಡಳಿತದ ಉಸ್ತುವಾರಿ ವಹಿಸುತ್ತಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವ ಎಲ್ಲಾ ದೇಣಿಗೆಗಳನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೮೦ಎ ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡ ಲಾಗಿದೆ.

ಖಾತೆಗಳನ್ನು ಸ್ವತಂತ್ರ ಲೆಕ್ಕಪರಿಶೋಧಕರು ಆಡಿಟ್ ಮಾಡುತ್ತಾರೆ, ಪಾರದರ್ಶಕತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಖಾತ್ರಿ ಪಡಿಸುತ್ತಾರೆ. ವಿವರವಾದ ವಾರ್ಷಿಕ ವರದಿಗಳನ್ನು ಅಧಿಕೃತ ಖಾತೆಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಯಾರು ಬೇಕಾದರೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕೊಡುಗೆ ನೀಡಬಹುದು. ಪ್ರಸ್ತುತ ಬ್ಯಾಂಕಿಂಗ್ ವ್ಯವಸ್ಥೆಗೆ ಆಧುನಿಕರಣಗೊಳಿಸಿದ್ದು, ಆನ್‌ಲೈನ್ ವರ್ಗಾವಣೆಗಳು (ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ) ಚೆಕ್ ಗಳು/ಡಿಮಾಂಡ್ ಡ್ರಾಫ್ಟ್‌ ಗಳು ಮತ್ತು FEMA ಮಾರ್ಗಸೂಚಿಗಳಿಗೆ ಒಳಪಟ್ಟ ಅಂತಾರಾಷ್ಟ್ರೀಯ ದೇಣಿಗೆಗಳನ್ನು ಈ ಮೂಲಕ ಸ್ವೀಕರಿಸಲಾಗುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗೆ, ಅಧಿಕೃತ ವೆಬ್‌ಸೈಟ್ https:// pmnrf.gov.in ಗೆ ಬೇಟಿನೀಡಿ, ದಾನ ಮಾಡುವುದು ಹೇಗೆ ಎಂಬುದರ ಕುರಿತು ನವೀಕರಿಸಿದ ಮಾಹಿತಿಯನ್ನು ಪಡೆಯಬ ಹುದಾಗಿದೆ. ಪಿಎಂಎನ್‌ಆರ್‌ಎಫ್ ಅನ್ನು ಮನವಿಯ ಮೂಲಕ ರಚಿಸಲಾಗಿದೆ. ಸಂಸತ್ತಿನ ಕಾಯಿದೆಯಂತಹ ಯಾವುದೇ ಕಾನೂನು ಚೌಕಟ್ಟಿನಿಂದ ನಿಯಂತ್ರಿಸಲ್ಪಡುವ ಶಾಸನಬದ್ಧ ನಿಧಿಯಾಗಿಲ್ಲ ಮತ್ತು ಪ್ರಧಾನಮಂತ್ರಿ ಇದರ ಅಧ್ಯಕ್ಷರಾಗಿದ್ದು, ಸಾರ್ವಜನಿಕ ಟ್ರಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ.

2018ರಲ್ಲಿ, ಕೇಂದ್ರ ಮಾಹಿತಿ ಆಯೋಗವು ಪಿಎಂಎನ್‌ಆರ್‌ಎಫ್ ಆರ್.ಟಿ.ಐ ಕಾಯಿದೆಯ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರ ಅಲ್ಲ ಎಂದು ತೀರ್ಪು ನೀಡಿತಲ್ಲದೆ, ಇದನ್ನು ಖಾಸಗಿ ಟ್ರಸ್ಟ್ ಎಂದು ಉಲ್ಲೇಖಿಸಿದೆ. ದೇಶದ ಬಹುತೇಕ ಆಡಳಿತಾತ್ಮಕ ಸಂಸ್ಥೆಗಳು, ಸಾರ್ವಜನಿಕ ಉತ್ತರದಾಯಿತ್ವ ಇಲಾಖೆಗಳು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ನಿಂದ ಲೆಕ್ಕ ಪರಿಶೋ ಧನೆಗೆ ಒಳಪಟ್ಟಿದ್ದರೆ, ಈ ಟ್ರಸ್ಟ್ ಮಾತ್ರ ಸ್ವತಂತ್ರ ಲೆಕ್ಕ ಪರಿಶೋಧಕರಿಂದ ಆಡಿಟ್ ಮಾಡಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾದ ಕಾರ್ಪಸ್ ಅನ್ನು ಪರಿಹಾನಿಧಿಯು ಸಂಗ್ರಹಿಸಿದೆ. ವಾರ್ಷಿಕ ಡೇಟಾವನ್ನು ಸಂಪೂರ್ಣ ವಾಗಿ ಬಹಿರಂಗಪಡಿಸದಿದ್ದರೂ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಂತೆ ಹೆಚ್ಚಾಗಿ ರು. 3800 ಕೋಟಿಯಷ್ಟು ನಿಧಿ ಸಂಗ್ರಹವಿದೆ. ಹಾಗಾಗಿ, ಇದನ್ನು ಪ್ರಾಥಮಿಕವಾಗಿ ಬ್ಯಾಂಕ್‌ಗಳು ಮತ್ತು ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ, ಈ ಮೂಲಕ ನಿಧಿಯು ಬಡ್ಡಿಯ ಆದಾಯವನ್ನು ಸಹ ಗಳಿಸುತ್ತದೆ. ತ್ವರಿತ ತುರ್ತು ವಿತರಣೆಗಳು, ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಹಾಯ, ದುರಂತಕ್ಕೊಳಗಾದವರನ್ನು ಬೆಂಬಲಿಸುವುದು ಸೇರಿದಂತೆ, 2001 ಗುಜರಾತ್ ಭೂಕಂಪ, 2013 ಉತ್ತರಾಖಂಡ್ ಪ್ರವಾಹ, 2008ರ ಮುಂಬೈ ದಾಳಿಗಳು, PM CARES ಪ್ರಾರಂಭಿಸುವ ಮುನ್ನ COVID-19 ಆರಂಭಿಕ ನೆರವು ಮುಂತಾ ದವುಗಳನ್ನು ಪಿಎಂಎನ್‌ಆರ್‌ಎಫ್ ಸಮರ್ಪಕವಾಗಿ ನೆರವೇರಿಸಿದೆ ಎನ್ನಬಹುದು.‌

ಇದರ ನೆರವು ಕೋರಿ ಸಾರ್ವಜನಿಕರು ಚಿಕಿತ್ಸೆಯ ನಂತರ ಅರ್ಜಿ ಸಲ್ಲಿಸಲು ಕೆಲ ಅಗತ್ಯವಿರುವ ದಾಖಲೆಗಳ ಪಟ್ಟಿಗಳನ್ನು ಒದಗಿಸಬೇಕಾಗುತ್ತದೆ. ಅವುಗಳೆಂದರೆ, ಬಡ ಕುಟುಂಬ ವರ್ಗದವರು (ಬಿ.ಪಿ.ಲ್) ಆಗಿದ್ದು, 1) ಅರ್ಜಿದಾರರ ಭಾವಚಿತ್ರ, 2) ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಅಂತಿಮ ಮೂಲ ಬಿಲ್ಲುಗಳು, 3) ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರ, 4) ಬಿ.ಪಿ.ಎಲ್ ಪಡಿತರ ಚೀಟಿ, 5) ಆಧಾರ್ ಗುರುತಿನ ಚೀಟಿ, 6) ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪ್ರತಿ, 7) ವಿಳಾಸ ದೃಢೀಕರಣ ದಾಖಲೆಗಳು, 8) ಅರ್ಜಿದಾರರ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಸೇರಿದಂತೆ ಪೂರಕ ದಾಖಲಾತಿ ಗಳನ್ನು ಸಲ್ಲಿಸಬೇಕಾಗುತ್ತದೆ.

ಇದರ ಹೊರತಾಗಿ, 2020ರಲ್ಲಿ COVID-19 ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ನರೇಂದ್ರ ಮೋದಿ ಸರ್ಕಾರವು PM CARES ನಿಧಿಯನ್ನು (ಪ್ರಧಾನ ಮಂತ್ರಿಯ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿ ಪರಿಹಾರ) ಪ್ರಾರಂಭಿಸಿತು. ಎರಡೂ ನಿಧಿಗಳು ತುರ್ತು ಪರಿಹಾರವನ್ನು ಒದಗಿಸು ವ ಗುರಿಯನ್ನು ಹೊಂದಿದ್ದರೂ, PM CARES ನಿಧಿಯನ್ನು ನಿರ್ದಿಷ್ಟವಾಗಿ ದೊಡ್ಡ ಪ್ರಮಾಣದ ರಾಷ್ಟ್ರೀಯ ತುರ್ತು ಪರಿಸ್ಥಿತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ, ಆದರೆ PM ಪರಿಹಾರ ನಿಧಿಯು ವೈಯಕ್ತಿಕ ಸಂಕಷ್ಟ ಮತ್ತು ಸಾಂಪ್ರದಾಯಿಕ ವಿಪತ್ತು ಪ್ರತಿಕ್ರಿಯೆಗಳನ್ನು ನಿರ್ವಹಿಸುತ್ತದೆ.

ಆದ್ದರಿಂದ, ಪ್ರಧಾನಮಂತ್ರಿಗಳ ಪರಿಹಾರ ನಿಧಿಯು ಭಾರತದ ಮಾನವೀಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಒಂದು ಪ್ರಮುಖ ಸಂಸ್ಥೆಯಾಗಿ ಉಳಿದಿದೆ. ಸಾರ್ವಜನಿಕ ಬೆಂಬಲದಲ್ಲಿ ಬೆಳೆಯುತ್ತ ಬರುತ್ತಿದೆ ಮತ್ತು ತ್ವರಿತ ನೆರವಿನ ಉದ್ದೇಶದಿಂದ ಪ್ರಾರಂಭಿಸಲ್ಪಟ್ಟಿದ್ದು, ಇದು ರಾಷ್ಟ್ರದ ಸಹಾನುಭೂತಿ ಮತ್ತು ಒಗ್ಗಟ್ಟಿನ ಸಾಮೂಹಿಕ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರವಾಹಗಳು, ಭೂಕಂಪಗಳು ಅಥವಾ ವೈಯಕ್ತಿಕ ವೈದ್ಯಕೀಯ ಬಿಕ್ಕಟ್ಟುಗಳ ಸಮಯದಲ್ಲಿ, ಪಿಎಂಎನ್‌ಆರ್‌ಎಫ್ ದೇಶದಾದ್ಯಂತ ಅಸಂಖ್ಯಾತ ನಾಗರಿಕರಿಗೆ ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ.‌

ಸಾಮಾನ್ಯ ನಾಗರಿಕ ಈ ನಿಧಿಯ ಮೂಲಕ, ತನ್ನ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಪಡೆದು ಧನ್ಯತಾಭಾವ ಹೊಂದುತ್ತಾನೆ. ಆ ಭಗವಂತನೇ ನನ್ನ ಕಷ್ಟಕಾಲದಲ್ಲಿ ಕೈಹಿಡಿದ ಎಂದೆನ್ನುತ್ತಾನೆ. ಹಾಗಾಗಿ, ಪ್ರಧಾನಮಂತ್ರಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ PM-NRF ಇರಬಹದು ಅಥವಾ PM-CARES ಇರಬಹುದು, ಎರಡೂ ಟ್ರಸ್ಟ್ ಗಳು ತಮ್ಮ ವ್ಯಾಪ್ತಿಯಲ್ಲಿ ಜನರ ಸೇವೆಗೆ ಕಟಿಬದ್ಧ ವಾಗಿರುವುದು ನಮ್ಮ ವ್ಯವಸ್ಥೆಯ ಹೆಮ್ಮೆ ಎಂದೆನ್ನಬಹುದು.

ದೇಶದ ಯಾವುದೇ ಮೂಲೆಯ ನಾಗರಿಕ, ತನ್ನ ವ್ಯಾಪ್ತಿಯ ಶಾಸಕರ, ಜನಪ್ರತಿನಿಧಿಗಳ ಮೂಲಕ, ಇಂತಹ ಯೋಜನೆಗಳನ್ನು ಪಡೆಯುವಲ್ಲಿ ಸಫಲವಾದಾಗ, ಸ್ಥಳೀಯ ಶಾಸಕರಾಗಿ ತನ್ನ ಜನರಿಗೆ ಸೇವೆ ಮಾಡಿದ ತೃಪ್ತಿಯೂ ಸಿಗುತ್ತದೆ ಜೊತೆಗೆ, ಫಲಾನುಭವಿಯಾದವರಿಗೆ ’ನಾವು ಯೋಗ್ಯರನ್ನು ಚುನಾಯಿಸಿದ್ದೇವೆ. ನಮ್ಮ ಸಂಕಷ್ಟದ ಕಾಲಕ್ಕೆ ಆಗುವವರೇ ನಮ್ಮ ನಿಜವಾದ ಪ್ರತಿನಿಧಿಗಳು’ ಎಂಬ ಭಾವ ಬರದೇ ಇರದು.

ಇಷ್ಟೆಲ್ಲದರ ನಡುವೆ, ತುರ್ತುಪರಿಸ್ಥಿತಿ ಮತ್ತು ಆಕ್ಷಣದ ಆಪತ್ಕಾಲೀನ ಅಗತ್ಯಗಳನ್ನು ಮಾತ್ರವೇ ಪೂರೈಸುವ ಈ ವಿಪತ್ತು ಪರಿಹಾರನಿಧಿಯ ಸೇವಾವ್ಯಾಪ್ತಿಯ ಪರಿಧಿಯನ್ನು ಮತ್ತಷ್ಟು ವಿಸ್ತರಿಸಿ, ವಿವಿಧ ಸ್ಥರಗಳ ಮೂಲಕ ಬಹು ಆಯಾಮದ ಪರಿಹಾರಕ್ಕೆ ಒತ್ತುಕೊಟ್ಟರೆ ಸಮಾಜದ, ದೇಶದ ಹಿತ ಕಾಯ್ದಂತಾಗುತ್ತದೆ.