ಪದಸಾಗರ
ಕೆಲವು ಕಥೆಗಳಿರ್ತವೆ. ಎಮೋಷನಲ್ ಕಥೆಗಳು ಅಥವಾ ಮೊಟಿವೇಶನಲ್ ಕಥೆಗಳು. ಓದುವ ಆ ಕ್ಷಣಕ್ಕೆ ಭಾವುಕವಾಗಿಸುವ ಅಥವಾ ಸ್ಪೂರ್ತಿ ತುಂಬುವ ಕಥೆಗಳು ಅವು. ವಿಮರ್ಶೆಗಿಳಿಯದೇ ಕೇವಲ ಅದರಲ್ಲಿರುವ ಭಾವುಕ ಅಂಶ ಅಥವಾ ಪ್ರೇರಣಾತ್ಮಕ ಅಂಶಗಳನ್ನಷ್ಟೇ ತೆಗೆದುಕೊಂಡೆವೋ, ಆ ಕಥೆಗಳ ಹಿರಿತನ ಗಟ್ಟಿಯಾಗಿ ಉಳಿದುಕೊಳ್ತವೆ.
ಲಾಜಿಕ್ ಹುಡುಕಿ, ತನಿಖಾ ಪತ್ರಿಕೋದ್ಯಮಕ್ಕೆ ಇಳಿದೆವು ಅಂದುಕೊಳ್ಳಿ, ಆ ಕಥೆಯ ಪಾತ್ರಗಳು ಹಾಸ್ಯಾಸ್ಪದವಾಗುತ್ತವೆ, ಲಾಜಿಕ್‌ಗಳು ಮಿಸ್ ಹೊಡೆದು ಅದೊಂದು ಸುಳ್ಳುಕಥೆ ಅನಿಸತೊಡಗುತ್ತದೆ. ಹೆಜ್ಜೆಹೆಜ್ಜೆಯಲ್ಲೂ ತಪ್ಪುಗಳು ಸುಳ್ಳುಗಳು ಕಾಣಿಸತೊಡಗುತ್ತವೆ.
ಕಡೆಗೆ ‘ಇಂಥ ಭಾವುಕತೆಯಾಗಲೀ, ಇಂಥ ಸ್ಪೂರ್ತಿದಾಯಕ ವಿಷಯವಾಗಲೀ ಪ್ರಾಕ್ಟಿಕಲಿ ಅಸಾಧ್ಯ, ನಿಜಜೀವನದಲ್ಲಿ ನಡೆಯಲು ಸಾಧ್ಯವಿಲ್ಲ, ಸಿನಿಮಾಗೆ ಕಥೆ ಕಾದಂಬರಿಗಷ್ಟೇ ಲಾಯಕ್ಕು’ ಎಂಬ ಷರಾ ಬರೆದು ಅದನ್ನು ಬದಿಗೊತ್ತಲು ಮನಸ್ಸು ದಾರಿ ಹುಡುಕುತ್ತದೆ.
‘ವಿಶ್ವೇಶ್ವರಯ್ಯ ಬೀದಿದೀಪದ ಕೆಳಗೆ ಕೂತು ಓದ್ತಾ ಇದ್ರಂತೆ’ ಅಂತ ಹೇಳಿದ್ರೆ ‘ಹಗಲು ಹೊತ್ತಲ್ಲಿ ಓದೋದ್ ಬಿಟ್ಟು ಏನ್ ಮಾಡ್ತಿದ್ರು?’ ಅಂತ ಕೇಳೋ ಜಮಾನಾ ಇದು. ಅದರಲ್ಲೂ ಸೋಷಿಯಲ್ ಮೀಡಿಯಾ ಎಂಬ ಅತಿರಂಜಿತ ಕರಪ್ಟೆಡ್ ಜಗತ್ತಿನಲ್ಲಿ ಯಾವುದೇ ಮಹಾನ್ ವ್ಯಕ್ತಿಗಳ ಹಿಂದಿನ ಶ್ರಮದ ಕಥೆಗಳನ್ನೂ ಸುಲಭಕ್ಕೆ ನಂಬುವಂತಿಲ್ಲ ವಾಗಿದೆ.
ಇದನ್ನೂ ಓದಿ: Naveen Sagar Column: ಅದೃಷ್ಟ-ದುರದೃಷ್ಟಗಳೆಂದರೇನು ? ಅಟಪಟ್ಟುವನ್ನು ಕೇಳಿ !
ಈಗ ನಾನು ಹೇಳಲು ಹೊರಟಿರುವ ಕಥೆಯನ್ನೂ ಅಂಥದ್ದೇ ಒಂದು ಕಥೆ ಅನ್ನಲಾ? ಅಥವಾ ಆ ನಿರ್ಧಾರವನ್ನು ನಿಮ್ಮ ಮೇಲೆಯೇ ಬಿಡಲಾ? ಇದು ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಎಂಬ ನೊಬೆಲ್ ಗೌರವ ಪುರಸ್ಕೃತನ ಕಥೆ. ಇನ್ ಫ್ಯಾಕ್ಟ್ ಆತನ ಯಶಸ್ಸಿನ ಹಿಂದೆ ಇರುವ ಹೆಣ್ಣಿನ ಕಥೆ.
ಹೆಣ್ಣಂದ್ರೆ ಪರಸೀ ಅಲ್ಲ. ಪತ್ನಿ ಮರ್ಸೆಡಿಸ್‌ಳ ತ್ಯಾಗದ ಸ್ಟೋರಿ. ವಾಟ್ಸಾಪ್ ಯೂನಿ ವರ್ಸಿಟಿಯಲ್ಲಿ ಹುಟ್ಟಿ ಫೇಸ್‌ಬುಕ್ಕಲ್ಲಿ ಹರಿದಾಡುತ್ತಿರುವ ಸ್ಟೋರಿ ಎಂದು ತಳ್ಳಿ ಹಾಕು ವಂಥದ್ದೇನಲ್ಲ. ಯಾವುದಕ್ಕೂ ನಾನು ಕೊಟ್ಟ ಬೃಹತ್ ಪೀಠಿಕೆಯನ್ನು ಮರೆತು ಓದಿದರೆ ಒಳ್ಳೆಯದು.
ವಿದೇಶಿ ಸಾಹಿತ್ಯವನ್ನು ಪಠ್ಯಕ್ಕಷ್ಟೇ ಸೀಮಿತ ಮಾಡಿಕೊಂಡಿದ್ದ ನಮಗೆ ಮಾರ್ಕ್ವೆಜ್‌ರನ್ನೆಲ್ಲ ಓದುವುದು ದೂರದ ಮಾತಾಗಿತ್ತು. ಷೇಕ್ ಸ್ಪಿಯರ್, ವರ್ಡ್ಸ್ ವರ್ಥ್, ಶೆಲ್ಲಿ ಹೀಗೆ ಕೆಲವೇ ಕೆಲವು ಹೆಸರುಗಳು ಸ್ಕೂಲ್ ಲೆವೆಲ್ಲಲ್ಲಿ ಗೊತ್ತಿದ್ದದ್ದು. ಆನಂತರ ಅನುವಾದಗಳನ್ನು ಓದು ವಂತಾದಾಗ ಹಲವು ಹೆಸರುಗಳು ಪರಿಚಯವಾದವು.
ಮಾರ್ಕ್ವೆಜ್ ಪರಿಚಯವಾಗಿದ್ದು ರವಿಬೆಳಗೆರೆಯ ‘ಮಾಂಡೋವಿ’ಯಿಂದಲೇ. ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಮತ್ತು ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಎಂಬ ಕೃತಿಗಳ ಹೆಸರು ಕೇಳಿದ್ದೆನಾದರೂ, ಪುಸ್ತಕದಂಗಡಿಯಲ್ಲಿ ನೋಡಿದ್ದೇನಾದರೂ ಸುಮ್ಮನೆ ಕೂಡ ಕೈಗೆತ್ತಿಕೊಳ್ಳುವ ದುಸ್ಸಾಹಸ ಮಾಡಿರಲಿಲ್ಲ.
‘ಮಾಂಡೋವಿ’ಯನ್ನು ಓದಿದಾಗ ಯಾಕೋ ಮನಸ್ಸು, ಅದೊಂದು ಮಹಾನ್ ಲವ್ ಸ್ಟೋರಿಯೆಂದು ಒಪ್ಪಿಕೊಳ್ಳಲೇ ಇಲ್ಲ. ಪ್ಲೆಟಾನಿಕ್ ಅನಿಸುವಂತಿದ್ದ ಪ್ರೇಮವೊಂದು, ಕ್ಲೈಮ್ಯಾಕ್ಸ್ ನಲ್ಲಿ ಇದು ದೈಹಿಕ ಸಂಬಂಧಕ್ಕಾಗಿ ಕಾದ ಪ್ರೇಮವಾ ಎಂದೆನಿಸಿ ನಿರಾಸೆ ಯಾಗಿತ್ತು.
ಓಕೆ. ಮಾರ್ಕ್ವೆಜ್ ಬಗ್ಗೆ ಅಂದಿಗೆ ಗೊತ್ತಿದ್ದದ್ದು ಅಷ್ಟೇ. ಇಂದು ಹೇಳುತ್ತಿರುವ ಕಹಾನಿ, ಮಾರ್ಕ್ವೆಜ್‌ನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಎಂಬ ಯಶಸ್ವಿ ಕೃತಿಯ ಹಿಂದಿರುವ ಲವ್ ಸ್ಟೋರಿ ಮತ್ತು ಭಾವು-ಕತೆ. ಮಾರ್ಕ್ವೆಜ್‌ಗೆ ಆಗ ಹದಿಮೂರು ವರ್ಷ. ಮರ್ಸೆಡೆಸ್ ಎಂಬ ಪುಟ್ಟ ಹುಡುಗಿಗೆ ಒಂಬತ್ತು ವರ್ಷ. ಕೊಲಂಬಿಯಾದ ಒಂದು ಶಾಲೆಯ ಕಾರ್ಯಕ್ರಮದಲ್ಲಿ ನರ್ತಿಸುತ್ತಿದ್ದ ಆ ಹುಡುಗಿಯ ಸೌಂದರ್ಯಕ್ಕೆ ಈ ಹದಿಹುಡುಗ ಮಾರ್ಕ್ವೆಜ್ ಬಿದ್ದು ಹೋಗಿಬಿಟ್ಟ. ಗೆಳೆಯರ ಗುಂಪಿನಲ್ಲಿ ನಿಂತು ಜೋರಾಗಿ ಉದ್ಗರಿಸಿಬಿಟ್ಟ- “ಐ ಲವ್ ಹರ್. ನಾನು ಮದುವೆ ಅಂತಾದ್ರೆ ಅವಳನ್ನೇ!" ಆಕೆಯೋ ಕೈತೊಳೆದು ಮುಟ್ಟ ಬೇಕೆನ್ನುವಷ್ಟು ಚೆಲುವೆ.
ಒಂದುಮಟ್ಟಿಗೆ ಶ್ರೀಮಂತಳು ಕೂಡ. ಆದರೆ ಮಾರ್ಕ್ವೆಜ್ ಕೆಳಮಧ್ಯಮವರ್ಗದ, ಅಬೋವ್ ಆವರೇಜ್ ಬುದ್ಧಿವಂತಿಕೆಯ ಹುಡುಗ. ತನ್ನ ಓದಿಗೆ ಸ್ಕಾಲರ್‌ಶಿಪ್ ನಂಬಿಕೊಂಡಿದ್ದ, ಶಾಲೆಯಲ್ಲಿ ಒಂದು ಐಡೆಂಟಿಟಿಯೇ ಇಲ್ಲದಂಥ ಹುಡುಗ. ಇನ್ನೂ ಹೈಸ್ಕೂಲ್ ಮೆಟ್ಟಿ ಲಲ್ಲಿರುವಾಗಲೇ ‘ಒನ್ ವೇ ಲವ್ ’ನಲ್ಲಿ ಮದುವೆ ಕನಸು ಕಂಡಿದ್ದಾನೆ. ಹುಡುಗಿಯೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ. ಈತನ ಗೆಳೆಯರೂ ನಕ್ಕು ಗೇಲಿ ಮಾಡಿ ಸುಮ್ಮನಾಗಿದ್ದಾರೆ.
ಆದರೆ ಮಾರ್ಕ್ವೆಜ್ ಮಾತ್ರ ಅದನ್ನು ಶಪಥದಂತೆ ಭಾವಿಸಿದ್ದಾನೆ. ತನ್ನ ಮಾತು ನಿಜವಾಗಿ ಸಲು ಅಂದೇ ಪಣ ತೊಡುತ್ತಾನೆ. ಬರೋಬ್ಬರಿ ಹದಿನೆಂಟು ವರ್ಷಗಳು ಸರಿಯುತ್ತವೆ. ಮಾರ್ಕ್ವೆಜ್ ಗಟ್ಟಿಯಾದ ಉದ್ಯೋಗಕ್ಕಾಗಿ, ಆದಾಯಕ್ಕಾಗಿ, ಸಾಹಿತ್ಯದಲ್ಲಿ, ಪತ್ರಿಕೋದ್ಯಮ ದಲ್ಲಿ ಏನನ್ನೋ ಸಾಧಿಸಲಿಕ್ಕಾಗಿ ಊರೂರು ಅಲೆಯುತ್ತಾನೆ. ಆದರೆ ಅದೆಲ್ಲವನ್ನೂ ಆತ ಮಾಡುತ್ತಿದ್ದುದು ಆ ಗಮ್ಯವನ್ನು ಮುಟ್ಟಲು.
ಮಿಸ್ ಮರ್ಸೆಡೆಸ್! 1958ರ ಹೊತ್ತಿಗೆ ಮಾರ್ಕ್ವೆಜ್ ಒಬ್ಬ ಪತ್ರಕರ್ತನಾಗಿ ಅಸ್ತಿತ್ವ ಕಂಡು ಕೊಂಡಿದ್ದಾನೆ. ಆಕೆಯ ಎದುರು ಪ್ರೇಮನಿವೇದನೆ ಮಾಡುತ್ತಾನೆ. ಹದಿನೆಂಟು ವರ್ಷಗಳ ಈತನ ತಪಸ್ಸಿಗೆ ಮರ್ಸೆಡೆಸ್ ಒಲಿದು ವಧುವಾಗುತ್ತಾಳೆ. ಪ್ರೇಮ ವಿವಾಹಕ್ಕೆ- ವಿವಾಹದ ನಂತರದ ಪ್ರೇಮಕ್ಕೆ ಎರಡು ಮಕ್ಕಳೂ ಆಗುತ್ತವೆ. ಒಟ್ಟಾರೆ ‘ನಮ್ಮ ಸಂಸಾರ ಆನಂದ ಸಾಗರ’.
ಕಾಸೊಂದಕ್ಕೆ ಬರ!
ಮಾರ್ಕ್ವೆಜ್ ಸುಮ್ಮನೆ ಕೂರಲಿಲ್ಲ. ಬರೆದ ಬರೆದ ಬರೆದ. ಕಾದಂಬರಿಗಳನ್ನು ಪ್ರಕಟಿಸಿದ. ದೇಶದ ತುಂಬ ಫೇಮಸ್ಸೂ ಆದ. ಆದರೆ ಅವ್ಯಾವುದೂ ಹಣ ತಂದುಕೊಡಲಿಲ್ಲ. ಕಷ್ಟ ನೋಡದ ಬದುಕಲ್ಲಿ ಬೆಳೆದು ಬಂದಿದ್ದ ಮರ್ಸೆಡೆಸ್, ಮಾರ್ಕ್ವೆಜ್‌ನ ಈ ಸಂಕಷ್ಟ ಸಮಯ ದಲ್ಲಿ ಸಿಡಿಮಿಡಿಗುಟ್ಟಲಿಲ್ಲ. ಪೈಸೆ ಪೈಸೆ ಕೂಡಿಟ್ಟು, ಹಾಸಿಗೆಗಿಂತ ಕಡಿಮೆ ಕಾಲು ಚಾಚುವ ಬದುಕು ಕಲಿತುಕೊಂಡಳು.
ಕಷ್ಟ ಪಡ್ತಾ ಇದೀನಿ ಅಂತ ಕೂಡ ಮಾರ್ಕ್ವೆಜ್‌ಗೆ ತೋರ್ಪಡಿಸದ ಹಾಗೆ ಮನೆ ತೂಗಿಸಲು ಶುರುಮಾಡಿದಳು. ಗಂಡನ ಬ್ಯಾಂಕ್ ಅಕೌಂಟ್ ಖಾಲಿ ಆಗಿರಬಹುದು.. ಆದರೆ ಆತನ ಬರವಣಿಗೆ ಬರಿದಾಗಿಲ್ಲ ಎಂದು ಬಲವಾಗಿ ನಂಬಿದ್ದಳು. ಅದು ಮುಂದೊಂದು ದಿನ ಕೈಹಿಡಿದೇ ಹಿಡಿಯುತ್ತೆ ಎಂದು ಗಂಡನ ಪ್ರತಿಭೆ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಳು.
1965ರ ಒಂದು ದಿನ ಸಂಸಾರ ಸಮೇತ ಕಾರಲ್ಲಿ ಹೊರಟಿದ್ದ ಮಾರ್ಕ್ವೆಜ್‌ಗೆ ದಿಢೀರ್ ಎಂಬಂತೆ, ಒಂದು ಕಾದಂಬರಿಯಾಗಬಲ್ಲ ಸರಕು ತಲೆಯಲ್ಲಿ ಮಿಂಚಿನಂತೆ ಹೊಳೆಯಿತು. ಎಷ್ಟರ ಮಟ್ಟಿಗೆ ಅಂದ್ರೆ ಕಾದಂಬರಿಯ ಪ್ರತಿ ಪಾತ್ರ, ಸ್ಥಳ, ಸನ್ನಿವೇಶ, ಸ್ಟೋರಿ ಸ್ಕ್ರೀನ್‌ಪ್ಲೇ, ಡೈಲಾಗ್ ಎಲ್ಲವೂ ರೆಡಿ. ಅವನ ಕಣ್ಣಮುಂದೆ ಸಿನಿಮಾದಂತೆ ದೃಶ್ಯಗಳು ಬರತೊಡಗಿದವು.
ಮಕಾಂಡೋ ಎಂಬ ನಗರ, ಒಂದು ಕುಟುಂಬದ ಏಳು ತಲೆಮಾರು, ಪ್ರೀತಿ, ಯುದ್ಧ, ಏಕಾಂತ ಹೀಗೆ ಏನೇನೋ ಭಾವುಕತೆ, ರೋಚಕತೆ ತುಂಬಿದ ನೂರು ವರ್ಷಗಳ ಕಥೆ ಯೊಂದು ಅವನಲ್ಲಿ ಮನಸಿನಲ್ಲಿ ಸಿದ್ಧವಾಗಿಯೇ ಬಿಟ್ಟಿತು. ಮಾರ್ಕ್ವೆಜ್ ತಾನು ಹೊರಟಿದ್ದ ಮಾರ್ಗದಿಂದ ಕಾರ್ ವಾಪಸ್ ಮನೆಯ ಕಡೆಗೆ ತಿರುಗಿಸಿದ.
ಮನೆಗೆ ಬಂದವನೇ ಪತ್ನಿ ಎದುರು ನಿಂತು, “ನಾನು ಈ ಪುಸ್ತಕ ಬರೆಯಲೇಬೇಕು. ಅದೆಷ್ಟು ದಿನ ತಗೋತೀನಿ ಗೊತ್ತಿಲ್ಲ. ನಮ್ಮ ಹತ್ರ ಇರೋ ಅಲ್ಪಸ್ವಲ್ಪ ಕಾಸು ಕೂಡ ಕರಗಿ ಹೋಗ ಬಹುದು. ಮುಂದಿನದ್ದೇನೂ ನನಗೆ ಗೊತ್ತಿಲ್ಲ. ಆದರೆ ನಾನು ಇದನ್ನು ಬರೆಯದೇ ಇರಲಾರೆ" ಅಂತ ಹೇಳಿ ಅವಳ ರಿಯಾಕ್ಷನ್ ಗಮನಿಸುತ್ತಾನೆ.
ಮರುಕ್ಷಣದ ಅವಳ ಉತ್ತರ ಬಂದಿರುತ್ತದೆ. ಅದು ಒಂದೇ ಪದದ ಉತ್ತರ- “ಬರಿ". ಆ ಒಂದು ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಮಾರ್ಕ್ವೆಜ್ ಕೋಣೆ ಸೇರಿಕೊಳ್ಳುತ್ತಾನೆ. ಹದಿನೆಂಟು ತಿಂಗಳುಗಳ ಕಾಲ ಮೈಮೇಲೆ ಭೂತ ಹೊಕ್ಕವನಂತೆ, ತನ್ನ ಕಾದಂಬರಿಗೆ ಬೇಕಿರೋದನ್ನೆಲ್ಲ ಓದ್ತಾನೆ, ನೋಟ್ಸ್ ಮಾಡ್ಕೋತಾನೆ, ಇನ್ನೇನೋ ರಿಸರ್ಚ್ ಮಾಡ್ತಾನೆ.
ಕೈಲಿದ್ದ ಜರ್ನಲಿಸ್ಟ್ ಕೆಲಸಕ್ಕೂ ಗುಡ್ ಬೈ ಹೇಳಿಬಿಡ್ತಾನೆ. ಹೊಟ್ಟೆಪಾಡಿಗೆ ಬರ್ತಾ ಇದ್ದ ಸಂಬಳವೂ ನಿಂತು ಹೋಗತ್ತೆ. ಕೂಡಿಟ್ಟಿದ್ದ ಉಳಿಕೆ ಹಣವೂ ಮುಗಿದುಹೋಗತ್ತೆ. ಆದರೆ ಪರಿಸ್ಥಿತಿ ಹೀಗಾಗಿರಬಹುದು ಎಂಬ ಅರಿವೂ ಮಾರ್ಕ್ವೆಜ್‌ಗೆ ಬರದ ಹಾಗೆ ಮರ್ಸೆಡೆಸ್ ತನ್ನ ಸಂಸಾರ ಕಾಯಲು ನಿಂತುಬಿಡುತ್ತಾಳೆ. ಮಾರ್ಕ್ವೆಜ್‌ನನ್ನು ಯಾವ ತೊಂದರೆ, ಚಿಂತೆ ಕೂಡ ಬಾಧಿಸಬಾರದು, ಆತ ಪುಸ್ತಕ ಬಿಟ್ಟು ಬೇರೇನನ್ನೂ ಧೇನಿಸಬಾರದು ಎಂಬಂತೆ ತಾನೇ ಎಲ್ಲವನ್ನೂ ಹೊತ್ತು ಬಿಡುತ್ತಾಳೆ.
ಸಾಲಕೊಟ್ಟವರು, ಬಾಡಿಗೆಯವರು, ಆ ಖರ್ಚು ಈ ಖರ್ಚು ಎಲ್ಲವನ್ನೂ ಮ್ಯಾನೇಜ್ ಮಾಡ್ತಾ ಹೋಗ್ತಾಳೆ. ತೀರಾ ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾದಾಗ, ತಮ್ಮಲ್ಲಿದ್ದ ಏಕೈಕ ಲಕ್ಸುರಿ ಮತ್ತು ದುಬಾರಿ ಎಂಬ ಒಂದು ವಸ್ತುವನ್ನು ಮಾರಲು ಮುಂದಾಗಿ ಬಿಡ್ತಾಳೆ ಮರ್ಸೆಡೆಸ್.
ಹೌದು. ಮಾರ್ಕ್ವೆಜ್ ಕಥೆಯಿಂದ ಆಚೆಗೆ ಬರಕೂಡದು ಎಂಬಂತೆ ಆತನಿಗೆ ಏಕಾಂತ/ಸಾಲಿಟ್ಯೂಡನ್ನು ಕಲ್ಪಿಸುತ್ತಾಳೆ. ಯಾವುದೇ ಕಾರಣಕ್ಕೂ ವಾಸ್ತವದ ಕಷ್ಟಗಳು ಆತನ ಕನಸನ್ನು ನುಚ್ಚುನೂರು ಗೊಳಿಸಬಾರದು ಎಂದು ಹಟತೊಟ್ಟು ಸಂಭಾಳಿಸುತ್ತಾಳೆ. ಕುಟುಂಬದ ಗೆಳೆಯರು, ನೆಂಟರಿಷ್ಟರು ‘ಇವ್ರಿಬ್ಬರಿಗೂ ತಲೆಕೆಟ್ಟಿದೆ’ ಎಂಬಂತೆ ನೋಡಲು ಶುರು ಮಾಡ್ತಾರೆ.
“ಕೆಲಸಕ್ಕೆ ಬಾರದ ಈ ಪುಸ್ತಕ ಬರವಣಿಗೆ ನಿಲ್ಲಿಸಿ ಸಂಬಳ ಸಿಗೋ ಕೆಲಸ ಮಾಡು" ಅಂತ ಬಿಟ್ಟಿ ಅಡ್ವೈಸ್ ಕೊಡ್ತಾರೆ. “ಮಕ್ಕಳಿಗೆ ಹಾಕೋಕೆ ಚಪ್ಪಲಿ ಇಲ್ಲದ ಪರಿಸ್ಥಿತಿ ಬಂದಿದೆ. ಇಂಥ ಟೈಮಲ್ಲಿ ಈ ಶೋಕಿ ಬೇಕಾ?" ಎಂದು ಕೊಂಕನ್ನೂ ನುಡೀತಾರೆ. ಆದರೆ ಮರ್ಸೆಡೆಸ್ ಈ ಯಾವ ಮಾತಿಂದಲೂ ವಿಚಲಿತಳಾಗುವುದಿಲ್ಲ.
1966ರಲ್ಲಿ ಕಾದಂಬರಿ ಪೂರ್ತಿ ಮುಗಿಯುತ್ತದೆ. ಸುಮಾರು ಐನೂರು ಪುಟಗಳ ಹಸ್ತಪ್ರತಿ! ಅದೇ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’! ಬರೆದು ಮುಗಿಸಿ, ಟೈಪ್ ಮಾಡಿ ಪ್ರಕಾಶಕನಿಗೆ ಕಳಿಸಲು ಪುಸ್ತಕ ಸಿದ್ಧವಾಗುತ್ತದೆ. ಪುಸ್ತಕವನ್ನು ಬ್ಯೂನೋ ಏರ್ಸ್‌ಗೆ ಕಳಿಸಬೇಕು. ಆದರೆ ಅಂತಾರಾಷ್ಟ್ರೀಯ ಅಂಚೆಯಲ್ಲಿ ಕಳಿಸುವಷ್ಟು ದುಡ್ಡು ಸಹ ಇಲ್ಲದ ಸ್ಥಿತಿ. ಬರೆದು ಮುಗಿಸಿದ ಖುಷಿ ಅನುಭವಿಸಬೇಕೋ, ಪಬ್ಲಿಷರ್‌ಗೆ ಪೋಸ್ಟ್ ಮಾಡೋಕೂ ಕಾಸಿಲ್ಲದಂಥ ಸ್ಥಿತಿ ತಲುಪಿದ್ದಕ್ಕೆ ಸಂಕಟ ಪಡಬೇಕೋ!
ಮೆಕ್ಸಿಕೋದಿಂದ ಅರ್ಜೆಂಟೀನಾಗೆ ಪೋಸ್ಟ್ ಮಾಡೋದಕ್ಕೆ ಬೇಕಿರೋ ಅಮೌಂಟಿಗಾಗಿ ಇಡೀ ಮನೆ ತಡಕಾಡಿದರೂ ಹಣ ಹೊಂದಲಿಲ್ಲ. ಇಷ್ಟರ ತನಕ ಹೋರಾಡಿದ ಮರ್ಸೆಡೆಸ್ ಈಗ ಕೈಚೆಲ್ಲುತ್ತಾಳಾ? ಇಲ್ಲ. ಮನೆಯಲ್ಲಿರೋ ಚಿಕ್ಕ ಪುಟ್ಟ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿ ಕೊಂಡಳು.
ಒಂದು ಹಳೇ ರೇಡಿಯೋ, ಅಡುಗೆ ಮನೆ ಪಾತ್ರೆಪಡಗ ಎಲ್ಲ ಒಟ್ಟುಗೂಡಿಸಿದಳು. ಇದಿಷ್ಟೂ ಕೊಟ್ಟರೂ ಅಂದುಕೊಂಡ ಮೊತ್ತ ಸಿಗೋದಿಲ್ಲವೆನಿಸಿತು. ತಾನು ಅತಿ ಪ್ರೀತಿಯಿಂದ ಕೊಂಡಿಟ್ಟುಕೊಂಡಿದ್ದ ಹೇರ್ ಡ್ರೈಯರ್ ನೋಡಿದಳು. ಅದನ್ನೂ ಸೇರಿಸಿ ಮಾರಿಯೇ ಬಿಟ್ಟಳು.
ಬಂದಹಣದಲ್ಲಿ ಬಿರಬಿರನೆ ಪುಸ್ತಕ ಪ್ಯಾಕ್ ಮಾಡಿ ಪೋ ಆಫೀಸಿಗೆ ಕೊಟ್ಟಳು. ಆಕೆ ಕೊಟ್ಟಿದ್ದು ಕೇವಲ ಪುಸ್ತಕವನ್ನಲ್ಲ. ಹದಿನೆಂಟು ತಿಂಗಳುಗಳ ಅಖಂಡ ಕಷ್ಟಗಳನ್ನು. ಹಾಗಂತ ನಂತರ ಸುಖವಿದ್ದೇ ಇದೆ ಅನ್ನೋ ಖಾತರಿ ಆ ಕ್ಷಣಕ್ಕಿತ್ತಾ? ಇನ್ನೂ ಅವರ ಜೀವನ ತಳಸೇರಲು ಬಾಕಿ ಇತ್ತಾ? ಅಫ್ ಕೋರ್ಸ್ ಇತ್ತು! ಒಂದು ವೇಳೆ ಪುಸ್ತಕ ಚೆನ್ನಾಗಿಲ್ಲ ಎಂದು ಪಬ್ಲಿಷರ್ ತಿರಸ್ಕರಿಸಿಬಿಟ್ಟರೆ? ತಮ್ಮ ಇಡೀ ಜೀವನವನ್ನೇ ಜೂಜಿನ ಥರ ಪಣಕ್ಕಿಟ್ಟಿದ್ದಾಗಿತ್ತು.
ಅಕ್ಷರರೂಪದಲ್ಲಿ ಪ್ಯಾಕ್ ಮಾಡಿ, ಪೋಸ್ಟ್ ಡಬ್ಬಿಗೆ ಹಾಕಿದ್ದರು! ಮರ್ಸೆಡೆಸ್ ಶ್ರಮ ನೀರಲ್ಲಿ ಹೋಮವಾಗಲಿಲ್ಲ. ಪುಸ್ತಕ ಪ್ರಕಟವಾಗೇ ಬಿಡ್ತು. ಜೂನ್ 1967ರಲ್ಲಿ ಪ್ರಕಟವಾದ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಒಂದೇ ವಾರದಲ್ಲಿ ಇರೋಬರೋ ದಾಖಲೆ ಗಳನ್ನೆಲ್ಲ ಪುಡಿಗಟ್ಟಿಬಿಟ್ಟಿತು.
ಮಾರ್ಕೆಟ್ಟಿಗೆ ಬರುಬರುತ್ತಿದ್ದಂತೆಯೇ ಸೋಲ್ಡೌಟ್ ಕೂಡ ಆಗಿ ಹೋಯ್ತು. ಒಂದಾದ ಮೇಲೊಂದು ಮರುಮುದ್ರಣ. ಹತ್ತಾರು ಭಾಷೆಗಳಿಗೆ ಅನುವಾದ, ಎಲ್ಲಾ ಹೋದರೂ ಈ ಪುಸ್ತಕದ್ದೇ ಮಾತು. ಒಟ್ಟು ನಲವತ್ತಾರು ಭಾಷೆಗಳಿಗೆ ತರ್ಜುಮೆಗೊಂಡಿರುವ ಈ ಪುಸ್ತಕ ಇದುವರೆಗೂ ಮಾರಾಟವಾಗಿರುವುದು ಸುಮಾರು ಐದುಕೋಟಿ ಪ್ರತಿಗಳು!
ಜಗತ್ತಿನ ಅತ್ಯುತ್ತಮ ಮತ್ತು ಶ್ರೇಷ್ಠ ಪುಸ್ತಕಗಳಲ್ಲಿ ಈ ಪುಸ್ತಕವೂ ಒಂದು. ಮಾರ್ಕ್ವೆಜ್‌ಗೆ 1982ರಲ್ಲಿ ನೊಬೆಲ್ ಪ್ರಶಸ್ತಿ ಸಿಗುವಲ್ಲಿ ಈ ಪುಸ್ತಕದ್ದೂ ಒಂದು ಮಹತ್ವದ ಪಾಲಿತ್ತು. ಮಾರ್ಕ್ವೆಜ್‌ನ ಬಡತನವನ್ನು ಇದೊಂದೇ ಪುಸ್ತಕ ನೀಗಿ ಬಿಡುತ್ತದೆ. ಮಾರ್ಕ್ವೆಜ್ ದೊಡ್ಡ ಬಂಗಲೆ ಕೊಳ್ಳುತ್ತಾನೆ. ಜಗತ್ತು ಸುತ್ತುತ್ತಾನೆ. ಮುಂದೆಂದೂ ಆತನಿಗೆ ಹಣದ ಚಿಂತೆ ಕಾಡು ವುದಿಲ್ಲ. ಆದರೆ ಇದೆಲ್ಲ ಸಾಧ್ಯವಾಗಿದ್ದು ಹೇಗೆ?.. ಇದರ ಹಿಂದಿದ್ದ ನೋವು ಕಷ್ಟಗಳೇನು?.. ಪತ್ನಿ ಮರ್ಸೆಡೆಸ್ ಮಾಡಿದ ತ್ಯಾಗಗಳೇನು, ನಿಭಾಯಿಸಿದ ರೀತಿಯೇನು? ಎಲ್ಲವನ್ನೂ ಮಾರ್ಕ್ವೆಜ್ ಅರಿತಿದ್ದ.
ಅಂದಿನಿಂದ ಮಾರ್ಕ್ವೆಜ್ ತಾನು ನೀಡಿದ ಪ್ರತಿ ಸಂದರ್ಶನದಲ್ಲೂ ತನ್ನೆಲ್ಲ ಯಶಸ್ಸಿನ ನಿಜರೂವಾರಿ ಮರ್ಸೆಡೆಸ್ ಎಂದೇ ಹೇಳುತ್ತಾ ಬಂದ. “ಈ ಪುಸ್ತಕದ ನಿಜವಾದ ಕರ್ತೃ ನಾನಲ್ಲ, ಅವಳೇ" ಎಂದು ಸಂಪೂರ್ಣ ಶ್ರೇಯ ನೀಡಿದ. “ಜಗತ್ತಿನ ಅತ್ಯಂತ ಬಲಿಷ್ಠ ವ್ಯಕ್ತಿ ಅಂತ ಯಾರಾದ್ರೂ ಇದ್ರೆ ಅದು ನನ್ನ ಪತ್ನಿ" ಎಂದು ಘೋಷಿಸಿಬಿಟ್ಟ.
ಒಂಬತ್ತು ವರ್ಷದ ಹುಡುಗಿ ಮೇಲೆ ಹದಿಮೂರರ ಹುಡುಗನಿಗೆ ಹುಟ್ಟಿದ ಇನ್‌ಸ್ಟಂಟ್ ಲವ್, ಹದಿನೆಂಟು ವರ್ಷ ಕಾಯಿಸುತ್ತೆ. ಪರೀಕ್ಷಿಸುತ್ತೆ. ಆನಂತರ ಮದುವೆಯ ನಂತರ ಹದಿನೆಂಟು ತಿಂಗಳು ಅವರ ಪ್ರೀತಿಯ ಗಟ್ಟಿತನವನ್ನು ಅಗ್ನಿಪರೀಕ್ಷೆಗೆ ಒಡ್ಡುತ್ತೆ. ಸುಖ ಬಂದ ನಂತರವೂ ಆ ಪ್ರೀತಿ ಬದಲಾಗುವುದಿಲ್ಲ.
ಮಾರ್ಕ್ವೆಜ್ ಸಾಯುವ ತನಕ ಅಂದರೆ 2014ರ ತನಕ ಪತಿ-ಪತ್ನಿ ಬರೋಬ್ಬರಿ ಐವತ್ತಾರು ವರ್ಷಗಳ ದಾಂಪತ್ಯ ಜೀವನ ಅನುಭವಿಸುತ್ತಾರೆ. ಇಡೀ ಜಗತ್ತೇ ನಂಬಲು ಸಿದ್ಧವಿಲ್ಲ ದಿದ್ದಾಗ ಆಕೆ ಗಂಡನ ಪರ ನಿಲ್ಲುತ್ತಾಳೆ. ಜಗತ್ತು ಮೆಚ್ಚುವಂಥ ಒಂದು ಪುಸ್ತಕ ಕೊಡಲು ಪತಿಯ ಅಸಾಧ್ಯ ಕನಸಿಗೆ ನೀರೆರೆಯುತ್ತಾಳೆ. ಈಗ ಹೇಳಿ. ಈ ಕಥೆ ಓದ್ತಾ ಇದ್ದಾಗ ಏನನಿ ಸಿತು. ಓದಿ ಕೊಂಚ ಹೊತ್ತಿನ ನಂತರ ಏನನಿಸಿತು. ನಾ ಕೊಟ್ಟ ಪೀಠಿಕೆಯ ಜತೆಗೆ ಓದಿ ಏನನಿಸಿತು?