ವೀಕೆಂಡ್ ವಿತ್ ಮೋಹನ್
camohanbn@gmail.com
ಅಖಂಡ ಭಾರತದ ವಿಭಜನೆಯ ನಂತರ ಪಾಕಿಸ್ತಾನ ಭಾಗದಿಂದ ಭಾರತಕ್ಕೆ ಬಂದ ಹಿಂದೂಗಳ ಆಸ್ತಿಯನ್ನು ಆಕ್ರಮಿಸಿಕೊಂಡಿದ್ದು ಅಲ್ಲಿನ ಮುಸ್ಲಿಮರು ಮತ್ತು ಪಾಕಿಸ್ತಾನ ಸರಕಾರ. ಆದರೆ, ಭಾರತದಿಂದ ಪಾಕ್‌ಗೆ ಹೋದ ಮುಸ್ಲಿಮರ ಭೂಮಿಯನ್ನು ಅಂದಿನ ಭಾರತ ಸರಕಾರವು ವಕ್ಫ್ ಮಂಡಳಿಗೆ ನೀಡಿತು. ನಂತರ 1954ರಲ್ಲಿ ವಕ್ಫ್ ಬೋರ್ಡ್ ಕಾಯಿದೆಯನ್ನು ಜಾರಿಗೆ ತರಲಾಯಿತು. 1995ರಲ್ಲಿ ವಕ್ಫ್ ಕಾಯಿದೆಯನ್ನು ಬದಲಾಯಿಸುವ ಮೂಲಕ ವಕ್ಫ್ ಮಂಡಳಿಗಳಿಗೆ ಭೂಮಿ ಯನ್ನು ಸ್ವಾಧೀನಪಡಿಸಿಕೊಳ್ಳುವ ಅನಿಯಮಿತ ಹಕ್ಕುಗಳನ್ನು ನೀಡಲಾಯಿತು. ದೆಹಲಿಯ ಸುಲ್ತಾನರು 2 ಹಳ್ಳಿಗಳನ್ನು ಜಾಮಿಯಾ ಮಸೀದಿಗೆಂದು ನೀಡಿದ್ದರು. ತರುವಾಯದ ಸುಲ್ತಾನರು ತಮ್ಮ ಆಡಳಿತಾವಧಿಯಲ್ಲಿ ಹಲವು ಜಾಗಗಳನ್ನು ವಕ್ಫ್ ಹೆಸರಿನಲ್ಲಿ ನೀಡಿದ್ದರು.
19ನೇ ಶತಮಾನದಲ್ಲಿ, ಬ್ರಿಟಿಷರ ಅವಧಿಯಲ್ಲಿ ವಕ್ಫ್ ಆಸ್ತಿಯ ವಿವಾದವೊಂದು ಲಂಡನ್ನಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ, ನಾಲ್ವರು ಬ್ರಿಟಿಷ್ ನ್ಯಾಯಾಧೀಶರು ‘ವಕ್ಫ್’ನ ಅನಿಯಮಿತ ಅಧಿಕಾರದ ವಿರುದ್ಧ ದನಿಯೆತ್ತಿದ್ದರು. ಆದರೆ, ಬ್ರಿಟಿಷ್ ನ್ಯಾಯಾಧೀಶರ ಆದೇಶ ವನ್ನು ಮುಸಲ್ಮಾನರು ಒಪ್ಪಲಿಲ್ಲ.
ಅಂದು ಕೂಡ 1913ರ ಕಾಯಿದೆಯೊಂದು ವಕ್ಫ್ ಮಂಡಳಿಯನ್ನು ರಕ್ಷಿಸಿತ್ತು. ಹೀಗೆ ಬ್ರಿಟಿಷರ ಕಾಲದಿಂದಲೂ ಮುಸ್ಲಿಮರನ್ನು ಓಲೈಸುವ ಕೆಲಸವು ವಕ್ಫ್ ಕಾಯಿದೆಯ ಮೂಲಕ ನಡೆದು ಕೊಂಡು ಬಂದಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ವಕ್ಫ್ ಬೋರ್ಡ್‌ಗಳು ಅಂದಾಜು 8,94,509 ಆಸ್ತಿಗಳನ್ನು ಹೊಂದಿವೆ. 2013ರಲ್ಲಿ ಅಂದಾಜು 18 ಲಕ್ಷ ಎಕರೆಯಷ್ಟಿದ್ದ ವಕ್ಫ್ ಆಸ್ತಿ, 2025ರ ಹೊತ್ತಿಗೆ 37 ಲಕ್ಷ ಎಕರೆಯಷ್ಟಾಗಿತ್ತು.
ಇದನ್ನೂ ಓದಿ: Mohan Vishwa Column: ಟಾಟಾ ಉಯಿಲಿನಲ್ಲಿ ಸಾಕುನಾಯಿಗೂ ಪಾಲು !
ಕಾಂಗ್ರೆಸ್ ಸರಕಾರವು ಮುಸ್ಲಿಮರನ್ನು ಮತ್ತಷ್ಟು ಓಲೈಸಲೆಂದು 2013ರಲ್ಲಿ ವಕ್ಫ್ ಕಾನೂನಿಗೆ ತಿದ್ದುಪಡಿ ಮಾಡಿದ್ದರ ಪರಿಣಾಮ, ಕೇವಲ 12 ವರ್ಷಗಳಲ್ಲಿ ವಕ್ಫ್ ಮಂಡಳಿಯ ಆಸ್ತಿ ದುಪ್ಪಟ್ಟಾ ಗಿದೆ. ಭಾರತೀಯ ಸೇನೆ ಮತ್ತು ಭಾರತೀಯ ರೇಲ್ವೆ ನಂತರ ಅತಿಹೆಚ್ಚಿನ ಭೂಮಿಯು ವಕ್ಫ್ ಮಂಡಳಿಯ ಬಳಿಯಿದೆ.
2013ರಲ್ಲಿ ಸಾರ್ವತ್ರಿಕ ಚುನಾವಣೆಗೂ ಕೆಲ ತಿಂಗಳ ಹಿಂದೆ, ಕೇಂದ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ದೆಹಲಿಯ ಪಾರ್ಲಿಮೆಂಟ್ ಹೌಸ್, ಕನಾಟ್ ಪ್ಲೇಸ್, ಕರೋಲ್‌ಬಾಗ್, ದರಿಯಾಗಂಜ್, ಲೋಧಿ ರೋಡ್, ಜನಪಥ್, ಮಥುರಾ ಹೌಸ್, ಸದಾರ್ ಬಜಾರ್, ಮಾನ್‌ಸಿಂಗ್ ರಸ್ತೆಯಲ್ಲಿನ ಸುಮಾರು 123 ಸರಕಾರಿ ಆಸ್ತಿಗಳನ್ನು ಡಿನೋಟಿಫೈ ಮಾಡಿ ವಕ್ಫ್ ಮಂಡಳಿಗೆ ನೀಡಲಾಗಿತ್ತು. ಪ್ರಸ್ತುತ ಈ ಬಡಾವಣೆಗಳಲ್ಲಿನ ಆಸ್ತಿಯ ಮಾರುಕಟ್ಟೆ ಮೌಲ್ಯವು ಚದರಡಿಗೆ 75000ದಿಂದ 80000 ರುಪಾಯಿಗೆ ತಲುಪಿದೆ.
1995ರಲ್ಲಿ ಕಾಂಗ್ರೆಸ್ ಸರಕಾರ ಮಾಡಿದ ಮತ್ತೊಂದು ತಿದ್ದುಪಡಿಯಲ್ಲಿ ವಕ್ಫ್ ಕಾಯಿದೆಯ ಸೆಕ್ಷನ್ 3ರ ಪ್ರಕಾರ, ವಕ್ಫ್ ಮಂಡಳಿಯು ಭೂಮಿಯೊಂದು ಮುಸ್ಲಿಮರಿಗೆ ಸೇರಿದ್ದು ಎಂದು ‘ಯೋಚಿಸಿದರೆ’ ಸಾಕು, ಅದನ್ನು ವಕ್ಫ್ ನ ಆಸ್ತಿಯೆಂದು ಪರಿಗಣಿಸಬಹುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ವೆಂದರೆ, ವಕ್ಫ್ ಮಂಡಳಿ ಕೇವಲ ‘ಯೋಚಿಸಿದರೆ’ ಸಾಕು, ಅದರ ಮಾಲೀಕತ್ವದ ಸಾಬೀತಿಗೆ ಪುರಾವೆ ನೀಡಬೇಕಾದ ಅಗತ್ಯವಿಲ್ಲ.
‘ನಿಮ್ಮ ಆಸ್ತಿ ನಿಮ್ಮದಲ್ಲ, ಮಂಡಳಿಯದ್ದು’ ಎಂದು ವಕ್ಫ್ ತೀರ್ಮಾನಿಸಿದರೆ, ನೀವು ನ್ಯಾಯಾಲಯದ ಮೊರೆಹೋಗುವಂತಿಲ್ಲ; ಕೇವಲ ವಕ್ಫ್ ಕಾಯಿದೆಯಡಿಯಲ್ಲಿರುವ ನ್ಯಾಯ ಮಂಡಳಿಯನ್ನು ಮಾತ್ರ ಸಂಪರ್ಕಿಸಬಹುದು. ಅದು ನಿಮ್ಮ ಸ್ವಂತ ಭೂಮಿ ಎಂಬುದನ್ನು ನೀವು ನ್ಯಾಯಮಂಡಳಿಗೆ ಮನವರಿಕೆ ಮಾಡಿ ಕೊಡಲು/ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಹಳೆಯ ವಕ್ಫ್ ಕಾಯಿದೆಯ ಸೆಕ್ಷನ್ 85ರ ಪ್ರಕಾರ ಭೂಮಿಯನ್ನು ಖಾಲಿಮಾಡುವಂತೆ ಆದೇಶಿಸಲಾಗುತ್ತಿತ್ತು.
ಇಲ್ಲಿ ನ್ಯಾಯಮಂಡಳಿಯ ತೀರ್ಮಾನವೇ ಅಂತಿಮವಾಗಿರುತ್ತಿತ್ತು. ಹಳೆಯ ಕಾಯಿದೆಯ ಪ್ರಕಾರ ವಕ್ಫ್ ನ್ಯಾಯಮಂಡಳಿಯ ತೀರ್ಪನ್ನು ನ್ಯಾಯಾಲಯಗಳು ಬದಲಿಸಲು ಸಾಧ್ಯವಿರಲಿಲ್ಲ. ವಕ್ಫ್ ಕಾಯಿದೆಯ ಸೆಕ್ಷನ್ 40ರ ಅನುಸಾರ, ವಕ್ಫ್ ಮಂಡಳಿಯು ವ್ಯಕ್ತಿಯೊಬ್ಬನ ಭೂಮಿಯ ಮೇಲೆ ಹಕ್ಕು ಸಾಧಿಸಿದಾಗ, ಅದು ತನ್ನದೆಂದು ಸಾಬೀತುಪಡಿಸಬೇಕಾದ ಜವಾಬ್ದಾರಿ ಭೂಮಿಯ ನೈಜಮಾಲೀಕನದ್ದೇ ವಿನಾ ವಕ್ಫ್ ಮಂಡಳಿಯದ್ದಾಗಿರಲಿಲ್ಲ.
ಕಾಂಗ್ರೆಸ್ ಪಕ್ಷ 2013ರಲ್ಲಿ ತಂದ ಮತ್ತೊಂದು ತಿದ್ದುಪಡಿಯ ಪ್ರಕಾರ, ವಕ್ಫ್ ಕಾಯಿದೆಯು ಎಲ್ಲ ರಾಜ್ಯಗಳ ಭೂಸುಧಾರಣಾ ಕಾಯಿದೆಗಳಿಗಿಂತಲೂ ಮೇಲ್ಪಟ್ಟಿರುವಂತಿತ್ತು. 2025ರ ನೂತನ ವಕ್ಫ್ ತಿದ್ದುಪಡಿ ಕಾಯಿದೆಯಲ್ಲಿ ಈ ಎಲ್ಲ ಅಂಶಗಳನ್ನು ತೆಗೆದು ಹಾಕಲಾಗಿದೆ. ವಕ್ಫ್ ಮಂಡಳಿಗೆ ದಾನ ನೀಡಿದವರ ಸಂಪೂರ್ಣ ವಿವರವನ್ನು ಹಾಗೂ ದಾನ ಮಾಡಿದ್ದಕ್ಕೆ ಅಗತ್ಯವಿರುವ ದಾಖಲೆಗಳನ್ನು ನೀಡಬೇಕು. ತನಗೆ ನೀಡಿರುವ ಜಾಗವು ದಾನದ ರೂಪದಲ್ಲಿ ಬಂದಿದ್ದೆಂದು ವಕ್ಫ್ ಮಂಡಳಿ ದಾಖಲೆಗಳ ಮೂಲಕ ಸಾಬೀತುಪಡಿಸಬೇಕು.
ಜತೆಗೆ, 2025ರ ನೂತನ ವಕ್ಫ್ ಕಾಯಿದೆಯನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೇರಿದ ಭೂಮಿಯ ಮೇಲೆ ವಕ್ಫ್ ಮಂಡಳಿ ಯಾವುದೇ ಹಕ್ಕನ್ನು ಸಾಧಿಸುವಂತಿಲ್ಲ, ದಲಿತರಿಗೆ ಸೇರಿದ್ದ ಆಸ್ತಿಯನ್ನು ಅದು ಮುಟ್ಟುವಂತಿಲ್ಲ. 2025ರ ತಿದ್ದುಪಡಿಯಲ್ಲಿ ವಕ್ಫ್ ಮಂಡಳಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲಾಗಿದ್ದು, 5 ವರ್ಷಗಳ ಕಾಲ ಮುಸಲ್ಮಾನನಾಗಿ ಧರ್ಮಾಚರಣೆ ಮಾಡಿರುವ ವ್ಯಕ್ತಿ ಮಾತ್ರವೇ ತನ್ನ ಆಸ್ತಿಯನ್ನು ವಕ್ಫ್ ಮಂಡಳಿಗೆ ದಾನ ಮಾಡಬಹುದು.
ಇನ್ನು, ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲೆಂದು, ದಾನ ಮಾಡುವ ವ್ಯಕ್ತಿಯು ಮನೆಯಲ್ಲಿನ ಮಹಿಳೆಯರಿಗೆ ನ್ಯಾಯಯುತವಾಗಿ ನೀಡಬೇಕಿರುವ ಆಸ್ತಿಯ ಪಾಲನ್ನು ನೀಡಿದ ನಂತರವಷ್ಟೇ ವಕ್ಫ್ ಮಂಡಳಿಗೆ ದಾನ ಮಾಡಬೇಕು. ವಿಧವೆಯರು ಮತ್ತು ವಿಚ್ಛೇದಿತ ಮುಸ್ಲಿಂ ಮಹಿಳೆಯರ ಆಸ್ತಿಯ ಹಕ್ಕನ್ನು ರಕ್ಷಿಸಲು ವಿಶೇಷ ತಿದ್ದುಪಡಿಯನ್ನೂ ತರಲಾಗಿದೆ.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಸದಸ್ಯತ್ವ ನೀಡಬೇಕೆಂಬ ತಿದ್ದುಪಡಿ ತರಲಾಗಿದೆ. ಕಾಂಗ್ರೆಸ್ಸಿಗರು ಇದನ್ನು ವಿರೋಧಿಸುವ ಭರದಲ್ಲಿ, ‘ತಿರುಪತಿ-ತಿರುಮಲ ಮಂಡಳಿಯಲ್ಲಿ ಮುಸ್ಲಿಂ ಸದಸ್ಯರನ್ನೇಕೆ ನೇಮಿಸುವುದಿಲ್ಲ’ ಎಂಬ ಬೂಟಾಟಿಕೆಯ ಪ್ರಶ್ನೆ ಹಾಕಿದ್ದರು. ಸಾಮಾನ್ಯ ಜ್ಞಾನ ವಿಲ್ಲದವರಷ್ಟೇ ಹೀಗೆ ಪ್ರಶ್ನಿಸಬಹುದು. ತಿರುಪತಿ-ತಿರುಮಲ ಮಂಡಳಿ ಅಲ್ಲಿನ ದೇವಸ್ಥಾನವನ್ನು ನಿರ್ವಹಿಸುತ್ತದೆ, ಆದರೆ ವಕ್ಫ್ ಮಂಡಳಿಯು ಮಸೀದಿಯನ್ನು ನಿರ್ವಹಿಸುವುದಿಲ್ಲ.
ವಕ್ಫ್ ಮಂಡಳಿಯು ತನಗೆ ದಾನವಾಗಿ ಬಂದ ಆಸ್ತಿಯನ್ನಷ್ಟೇ ನಿರ್ವಹಿಸುತ್ತದೆಯೆಂಬ ಮೂಲ ಸಂಗತಿಯೂ ಇವರಿಗೆ ತಿಳಿದಿಲ್ಲ. ನೂತನ ಕಾಯಿದೆಯಲ್ಲಿ ಇತರರಿಗೆ ಅನ್ವಯವಾಗುವಂತೆ 1963ರ ಕಾಲಮಿತಿ ಕಾಯಿದೆಯನ್ನು ವಕ್ಫ್ ಮಂಡಳಿಗೂ ಅನ್ವಯಿಸಲಾಗಿದ್ದು, ನಿರ್ದಿಷ್ಟ ಸಮಯದಲ್ಲಿ ಮಾತ್ರ ಸಂಬಂಧಪಟ್ಟವರು ದಾವೆ ಹೂಡಬಹುದು. ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ಸರಕಾರಿ ಜಾಗವನ್ನೂ ವಕ್ಫ್ ಮಂಡಳಿ ಕಬಳಿಸಬಹುದಿತ್ತು; ಆದರೆ 2025ರ ತಿದ್ದುಪಡಿಯಲ್ಲಿ ಇದಕ್ಕೆ ಅವಕಾಶವಿಲ್ಲ.
ಜತೆಗೆ ವಕ್ಫ್ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಸ್ವತಂತ್ರವಾಗಿ ಮನವಿ ಸಲ್ಲಿಸಲು ಅನುವುಮಾಡಿಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಜತೆಗೆ ಕಾಲಕಾಲಕ್ಕೆ ವಕ್ಫ್ ಮಂಡಳಿಯ ಲೆಕ್ಕ ಪರಿಶೋಧನೆ ನಡೆಸಿ ವರದಿ ನೀಡಬೇಕಿರುವುದೂ ಈಗ ಅನಿವಾರ್ಯವಾಗಿದೆ.
ಮುಸ್ಲಿಮರ ಅನುಕೂಲಕ್ಕಾಗಿ ವಕ್ಫ್ ಕಾಯಿದೆ ಜಾರಿ ಮಾಡಿದ್ದಾಗಿ ಬೀಗುವ ಕಾಂಗ್ರೆಸ್ಸಿಗರು ಬಡ ಮುಸ್ಲಿಮರ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. 2006ರ ಸಾಚಾರ್ ಸಮಿತಿ ವರದಿಯಲ್ಲಿ, ಸುಮಾರು 4,90,000 ವಕ್ಫ್ ಆಸ್ತಿಗಳಿಂದ ಕೇವಲ 163 ಕೋಟಿ ರು. ಆದಾಯ ಬಂದಿದೆಯೆಂದು ಉಲ್ಲೇಖಿಸಲಾಗಿದೆ ಮತ್ತು ವಕ್ಫ್ ಮಂಡಳಿಯಲ್ಲಿ ಪಾರದರ್ಶಕತೆ ಇಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆ.
ನಂತರ 2008ರ ಜಂಟಿ ಸಂಸತ್ ಸಮಿತಿ ವರದಿಯಲ್ಲಿ, ವಕ್ಫ್ ಮಂಡಳಿಯ ಆಸ್ತಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೆಂದು ಹೇಳಲಾಗಿತ್ತು. ವಕ್ಫ್ ತಿದ್ದುಪಡಿ ಕಾಯಿದೆ ಬಗೆಗಿನ ಚರ್ಚೆ ಇಂದು ನಿನ್ನೆಯದಲ್ಲ. ಬಡ ಮುಸ್ಲಿಮರ ಹೆಸರಿನಲ್ಲಿ ವಕ್ಫ್ ಮಂಡಳಿಗೆ ಬಂದಿರುವ ದಾನದ ಭೂಮಿಯನ್ನು ಕೆಲವೇ ನಾಯಕರು ಅನುಭವಿಸುತ್ತಿದ್ದಾರೆ. ವಕ್ಫ್ ಮಂಡಳಿಯ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಅಸಾದುದ್ದೀನ್ ಒವೈಸಿ ತೆಲಂಗಾಣ ವಿಧಾನಸಭೆಯಲ್ಲಿ 2021ರಲ್ಲಿ ಆಗ್ರಹಿಸಿದ್ದರು.
ವಕ್ಫ್ ಮಂಡಳಿಯ ಅಕ್ರಮದ ಬಗ್ಗೆ ಲಾಲು ಪ್ರಸಾದ್ ಯಾದವ್ 2010ರಲ್ಲಿ ಪ್ರಸ್ತಾಪಿಸಿದ್ದರು. ಇಂದು ಅದೇ ನಾಯಕರು 2025ರ ವಕ್ಫ್ ತಿದ್ದುಪಡಿ ಕಾಯಿದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಡ ಮುಸ್ಲಿಮರ ಅನುಕೂಲಕ್ಕಾಗಿ ದಾನವಾಗಿ ಬಂದ ಲಕ್ಷಾಂತರ ಎಕರೆ ಭೂಮಿಯನ್ನು, ಹಳೆಯ ವಕ್ಫ್ ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡು ಅನೇಕರು ಅನುಭವಿಸುತ್ತಿದ್ದಾರೆ.
ವಕ್ಫ್ ಮಂಡಳಿಯ ಆಸ್ತಿ ಎರಡು ಪಟ್ಟು ಹೆಚ್ಚಾದ ಬಳಿಕವೂ, 2019ರಲ್ಲಿ ಮಂಡಳಿಯ ಆದಾಯ ಕೇವಲ 166 ಕೋಟಿ ರು.ನಷ್ಟಿತ್ತೆಂದು ಹೇಳಲಾಗಿದೆ. ಕರ್ನಾಟಕದಲ್ಲಿ ನಡೆದಿರುವ ವಕ್ಫ್ ಮಂಡಳಿಯ ಅಕ್ರಮದ ಬಗ್ಗೆ ಅನ್ವರ್ ಮಣಪ್ಪಾಡಿ ದೊಡ್ಡ ವರದಿಯನ್ನು ಸಿದ್ಧಪಡಿಸಿದ್ದಾರೆ. ಅದರ ಪ್ರಕಾರ, ಈ ಮಂಡಳಿಯಲ್ಲಿ ಸುಮಾರು 230000 ಕೋಟಿ ರು.ಗಳಷ್ಟು ಅಕ್ರಮ ನಡೆದಿದೆ ಎನ್ನಲಾಗಿದೆ. ಘಟಾನುಘಟಿ ಕಾಂಗ್ರೆಸ್ಸಿಗರ ಹೆಸರುಗಳೂ ಇದರಲ್ಲಿ ಉಲ್ಲೇಖವಾಗಿವೆ.
ಬಡ ಮುಸ್ಲಿಮರ ಅಭಿವೃದ್ಧಿಗೆ ಬಳಸಬೇಕಿದ್ದ ಲಕ್ಷಾಂತರ ಎಕರೆ ಭೂಮಿಯನ್ನು ಕಾಂಗ್ರೆಸ್ಸಿಗರು ಅನುಭವಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನ ಅಧಿಕಾರಾವಧಿಯ 1995 ಮತ್ತು 2013ರ ವಕ್ಫ್ ಕಾಯಿದೆ ಯಲ್ಲಿ, ಬಡ ಮುಸ್ಲಿಮರಿಗೆ ತಮ್ಮವರು ದಾನ ಮಾಡಿರುವ ಭೂಮಿಯಿಂದ ಬರುತ್ತಿರುವ ಆದಾಯದ ಬಗ್ಗೆ ಪಾರದರ್ಶಕ ಮಾಹಿತಿ ಸಿಗುತ್ತಿರಲಿಲ್ಲ. ಲಕ್ಷಾಂತರ ಎಕರೆ ಭೂಮಿಯಿಂದ ಬರುತ್ತಿರುವ ಆದಾಯವನ್ನು ಬಡ ಮುಸ್ಲಿಮರ ಅಭಿವೃದ್ಧಿಗಾಗಿ ವಕ್ಫ್ ಮಂಡಳಿಯು ಸರಿಯಾಗಿ ಬಳಸಿದ್ದಿದ್ದರೆ, ಅವರನ್ನು ಅಲ್ಪಸಂಖ್ಯಾತರೆಂದು ಕರೆಯುವುದು ಬೇಕಿರಲಿಲ್ಲ.
ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬನಾನ್, ಸಿರಿಯಾ, ಜೋರ್ಡಾನ್, ಇರಾಕ್ ಮೊದಲಾದ ಮುಸ್ಲಿಂ ರಾಷ್ಟ್ರಗಳಲ್ಲಿ ವಕ್ಫ್ ಮಂಡಳಿ ಅಥವಾ ವಕ್ಫ್ ಕಾನೂನು ಜಾರಿಯಲ್ಲಿಲ್ಲ. ಆದರೆ ಬಹು ಸಂಖ್ಯಾತ ಹಿಂದೂಗಳ ದೇಶದಲ್ಲಿ ಮುಸ್ಲಿಮರನ್ನು ಓಲೈಸಲು ವಕ್ಫ್ ಕಾನೂನನ್ನು ಕಾಂಗ್ರೆಸ್ ಜಾರಿ ಮಾಡಿತ್ತು. ನಂತರ ಅದೇ ಕಾನೂನನ್ನು ಬಳಸಿಕೊಂಡು ವಕ್ಫ್ ಮಂಡಳಿಯ ಆಸ್ತಿಯನ್ನು ಬಡ ಮುಸ್ಲಿಮರ ಅಭಿವೃದ್ಧಿಗೆ ಬಳಸದೆ ಅವರಿಗೂ ಮೋಸ ಮಾಡಿತ್ತು!