ನೂರೆಂಟು ವಿಶ್ವ
ಭಾಷೆ ನಿಂತ ನೀರಲ್ಲ, ಅದು ಹರಿಯುವ ನದಿ. ಕಾಲ ಬದಲಾದಂತೆ, ಮನುಷ್ಯನ ಜೀವನಶೈಲಿ ಬದಲಾದಂತೆ ಭಾಷೆಯೂ ರೂಪಾಂತರ ಗೊಳ್ಳುತ್ತದೆ. ತಂತ್ರಜ್ಞಾನ ಬದಲಾದಂತೆ, ಭಾಷೆ ಯಲ್ಲಿಯೂ ಅಗಾಧ ಬದಲಾವಣೆ ಆಗುತ್ತಿರುವುದುನ್ನು ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ಸಂವಹನ ಮಾಧ್ಯಮವಾಗಿರುವ ಇಂಗ್ಲಿಷ್ ಭಾಷೆಯಲ್ಲಿ ಭಾರಿ ಬದಲಾವಣೆಗಳು ಕಂಡುಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಇಂಟರ್ನೆಟ್ ಸಂಸ್ಕೃತಿ ಮತ್ತು ಸಾಮಾಜಿಕ ಜಾಲತಾಣಗಳು. ತಂತ್ರಜ್ಞಾನದ ಹರಿವು ಭಾಷೆಯ ಚೌಕಟ್ಟನ್ನು ಮುರಿದು, ಅದಕ್ಕೆ ಸಂಪೂರ್ಣ ಹೊಸ ಆಯಾಮವನ್ನು ನೀಡುತ್ತಿದೆ.
ಇಂಟರ್ನೆಟ್ ಲೋಕದಲ್ಲಿ ಸಂವಹನವು ಅತ್ಯಂತ ವೇಗವಾಗಿರಬೇಕು. ಸುದೀರ್ಘ ವಾಕ್ಯಗಳನ್ನು ಬರೆಯುವ ತಾಳ್ಮೆ ಇಂದಿನ ತಲೆಮಾರಿಗೆ ಇಲ್ಲ. ಈ ಕಾರಣಕ್ಕಾಗಿಯೇ ಪದಗಳನ್ನು ಸಂಕ್ಷಿಪ್ತಗೊಳಿ ಸುವ ಸಂಸ್ಕೃತಿ ಬೆಳೆಯಿತು.
ಟಿಕ್‌ಟಾಕ್, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಂಥ ವೇದಿಕೆಗಳಲ್ಲಿ ಹುಟ್ಟಿಕೊಂಡ "Rizz' (Charisma), 'Delulu' (Delusional) ನಂಥ ಪದಗಳು ಇಂದು ಜಾಗತಿಕವಾಗಿ ಯುವ ಪೀಳಿಗೆಯ ಆಡುಭಾಷೆಯಾಗಿ ಮಾರ್ಪಟ್ಟಿವೆ. ಕೇವಲ ಭಾವನೆಗಳನ್ನು ವ್ಯಕ್ತಪಡಿಸಲು ಇಮೋಜಿಗಳು ಮತ್ತು ಮೀಮ್ ಗಳು ಹೊಸ ಮಾಧ್ಯಮವಾಗಿ ಬೆಳೆದಿವೆ.
ಇದು ಲಿಖಿತ ಭಾಷೆಯ ಅಗತ್ಯವನ್ನೇ ಕೆಲವು ಕಡೆ ಕಡಿಮೆ ಮಾಡಿದೆ. ಮತ್ತೊಂದು ಮುಖ್ಯ ವಿಚಾರ ವೆಂದರೆ, ತಂತ್ರಜ್ಞಾನ ಮತ್ತು ಹೊಸ ಆಲೋಚನೆಗಳು ತರುವ ಜಾಗತಿಕ ಸವಾಲುಗಳನ್ನು ವರ್ಣಿಸಲು ಇಂಟರ್ನೆಟ್ ಸಂಸ್ಕೃತಿಯು ಹೊಸ ಪದಗಳನ್ನು ಸೃಷ್ಟಿಸುತ್ತಿದೆ. ಉದಾಹರಣೆಗೆ, ಕೃತಕ ಬುದ್ಧಿಮತ್ತೆ (ಎಐ) ತಂದ ಕಸದಂಥ ಮಾಹಿತಿಯನ್ನು ‘Slop’ ಎನ್ನಲಾಗುತ್ತಿದೆ. ಇಂಟರ್ನೆಟ್ ನಲ್ಲಿ ನೆಗೆಟಿವ್ ಸುದ್ದಿಗಳನ್ನು ಓದುತ್ತಾ ಸಮಯ ಕಳೆಯುವುದನ್ನು ‘Doomscrolling’ ಎನ್ನಲಾಗುತ್ತಿದೆ.
ಇದನ್ನೂ ಓದಿ: Vishweshwar Bhat Column: ಪೆಸಿಫಿಕ್ ಎಂಬ ನಿಗೂಢ ಸಾಗರ
ಮಾನವನ ಇಂದಿನ ಮಾನಸಿಕ ಸ್ಥಿತಿ, ವರ್ತನೆ ಹಾಗೂ ಡಿಜಿಟಲ್ ಲೋಕದ ಪ್ರಭಾವವನ್ನು ಕರಾರು ವಾಕ್ಕಾಗಿ ಹಿಡಿದಿಡಲು ಈ ಹೊಸ ಪದಗಳು ನೆರವಾಗುತ್ತಿವೆ. ಇದರ ಜತೆಗೆ, ನೈಜ ಅನುಭವಗಳಿಗಿಂತ ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿಕೊಳ್ಳುವ ಆಸೆಯನ್ನು ವರ್ಣಿಸುವ ‘Clout chasing’, ಪ್ರತಿಯೊಂದಕ್ಕೂ ಗಮನ ಹಂಚಿ ಕೊನೆಗೆ ಮಾನಸಿಕವಾಗಿ ದಣಿಯುವ ‘Brainrot’ ನಂಥ ಪದಗಳು ಡಿಜಿಟಲ್ ಯುಗದ ಕಟು ವಾಸ್ತವಕ್ಕೆ ಕನ್ನಡಿ ಹಿಡಿಯುತ್ತವೆ. ಈ ಹೊಸ ಪದಗಳು ಕೇವಲ ಭಾಷಾ ಶೈಲಿಯಲ್ಲ, ಬದಲಿಗೆ ಇಂದಿನ ನಾವು ಅನುಭವಿಸುತ್ತಿರುವ ಮಾನಸಿಕ ಒತ್ತಡ, ಏಕಾಂಗಿತನ ಮತ್ತು ತಂತ್ರಜ್ಞಾನದ ಅತಿಯಾದ ದಾಸ್ಯವನ್ನು ಗುರುತಿಸಲು ನೆರವಾಗುವ ಸಂಕೇತಗಳಾಗಿವೆ.
ಡಿಜಿಟಲ್ ಪ್ರಪಂಚದ ಈ ಅಡ್ಡಪರಿಣಾಮಗಳನ್ನು ನಿಖರವಾಗಿ ಅರ್ಥೈಸಿಕೊಳ್ಳಲು ಮತ್ತು ಜಾಗೃತಿ ಮೂಡಿಸಲು ಇಂಥ ನವ್ಯ ಪದಗಳ ಅಗತ್ಯ ಖಂಡಿತವಾಗಿಯೂ ಇದೆ. ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಇಂಟರ್ನೆಟ್ ಕೇವಲ ಮಾಹಿತಿಯನ್ನು ಹಂಚಿಕೊಳ್ಳುವ ಸಾಧನವಾಗಿ ಉಳಿದಿಲ್ಲ. ಬದಲಿಗೆ ಅದು ಭಾಷೆಯನ್ನು ಮರುರೂಪಿಸುವ ಬೃಹತ್ ಜಾಗತಿಕ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಅಮೆರಿಕದ ಯಾವುದೋ ಒಂದು ಮೂಲೆಯಲ್ಲಿ ಸಾಮಾಜಿಕ ಜಾಲತಾಣ ಬಳಸುವ ಯುವಕ ನೊಬ್ಬ ಸೃಷ್ಟಿಸುವ ಒಂದು ಪುಟ್ಟ ‘ಸ್ಲ್ಯಾಂಗ್’ (Slang), ಕೇವಲ ಕೆಲವೇ ಗಂಟೆಗಳಲ್ಲಿ ಸಾಂಪ್ರದಾಯಿಕ ಗಡಿಗಳನ್ನು ದಾಟಿ ಭಾರತದ ಹಳ್ಳಿ-ನಗರಗಳ ಯುವಕರ ಆಡುಭಾಷೆಯಾಗಿ ಬದಲಾಗುತ್ತಿದೆ.
ಟಿಕ್‌ಟಾಕ್, ಇನ್ಸ್ಟಾಗ್ರಾಮ್ ರೀಲ್ಸ್ ಮತ್ತು ಎಕ್ಸ್ (ಟ್ವಿಟರ್) ನಂಥ ವೇದಿಕೆಗಳು ಜಾಗತಿಕ ಸಂವಹನದ ವೇಗವನ್ನು ಎಷ್ಟು ಹೆಚ್ಚಿಸಿವೆ ಎಂದರೆ, ಇಂದು ಭಾಷೆಯ ಬೆಳವಣಿಗೆಯು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿಲ್ಲ, ಬದಲಿಗೆ ಸ್ಮಾರ್ಟ್ ಫೋನ್ ಪರದೆಯ ಮೇಲೆ ನಡೆಯುತ್ತಿದೆ. ಈ ಪ್ರಕ್ರಿಯೆಯು ಇಂಗ್ಲಿಷ್ ಭಾಷೆಯನ್ನು ಅತ್ಯಂತ ವೇಗವಾಗಿ ಪ್ರಜಾಪ್ರಭುತ್ವೀಕರಣಗೊಳಿಸಿದೆ.
ಹಿಂದೆಲ್ಲ ಹೊಸ ಪದವೊಂದು ಭಾಷೆಗೆ ಸೇರ್ಪಡೆಯಾಗಬೇಕಾದರೆ ಅದು ಸಾಹಿತಿಗಳು, ಭಾಷಾ ತಜ್ಞರು ಅಥವಾ ಆಕ್ಸ್ʼಫರ್ಡ್- ಮೆರಿಯಮ್ ವೆಬ್‌ಸ್ಟರ್‌ನಂಥ ಪ್ರತಿಷ್ಠಿತ ಡಿಕ್ಷನರಿಗಳನ್ನು ರೂಪಿಸು ವವರ ಒಪ್ಪಿಗೆಯ ಚೌಕಟ್ಟನ್ನು ದಾಟಿ ಬರಬೇಕಾಗುತ್ತಿತ್ತು. ಅಂದರೆ ಭಾಷೆಯ ಮೇಲಿನ ಹಿಡಿತ ಕೆಲವೇ ಕೆಲವು ಗಣ್ಯರ (Elites) ಕೈಯಲ್ಲಿತ್ತು. ಆದರೆ ಇಂದು ಇಂಟರ್ನೆಟ್ ಸಂಸ್ಕೃತಿಯು ಸಾಮಾನ್ಯ ಜನರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಭಾಷೆಯನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ಮುಕ್ತ ಸ್ವಾತಂತ್ರ್ಯ ನೀಡಿದೆ.
ಯಾರೋ ಒಬ್ಬರು ಸೃಷ್ಟಿಸಿದ ಪದ ಜಗತ್ತಿನ ಕೋಟ್ಯಂತರ ಜನರಿಗೆ ಇಷ್ಟವಾದರೆ, ಅದು ತಾನಾಗಿಯೇ ಭಾಷೆಯ ಭಾಗವಾಗಿಬಿಡುತ್ತದೆ. ಡಿಕ್ಷನರಿಗಳೇ ಇಂದು ಇಂಟರ್ನೆಟ್ ಟ್ರೆಂಡ್ ನೋಡಿ, ಪದಗಳನ್ನು ಸೇರಿಸುವ ಅನಿವಾರ್ಯತೆ ಎದುರಾಗಿದೆ. ಇದರೊಂದಿಗೆ, ಸಾಂಪ್ರದಾಯಿಕ ವ್ಯಾಕರಣದ ಬಿಗಿ ನಿಯಮಗಳು ಸಡಿಲಗೊಳ್ಳುತ್ತಿವೆ. ಕಟ್ಟುನಿಟ್ಟಾದ ನಿಯಮಗಳಿಗಿಂತ ‘ಭಾವನೆ ಮತ್ತು ಸಂದೇಶ ಎದುರಿಗಿರುವವನಿಗೆ ತಲುಪಿತೇ?’ ಎನ್ನುವುದಷ್ಟೇ ಇಂದಿನ ಇಂಟರ್ನೆಟ್ ಸಂವಹನದ ಮಾನದಂಡ ವಾಗಿದೆ. ಉದಾಹರಣೆಗೆ, ಸುದೀರ್ಘವಾದ ವಾಕ್ಯಗಳ ಜಾಗವನ್ನು ಇಮೋಜಿಗಳು, ಮೀಮ್‌ಗಳು ಮತ್ತು ಶಾರ್ಟ್ ಫಾರ್ಮ್‌ಗಳು ಆಕ್ರಮಿಸಿಕೊಂಡಿವೆ.
ಕರಣದ ದೃಷ್ಟಿಯಿಂದ ತಪ್ಪಾಗಿ ಕಾಣುವ ‘Delulu’ ಅಥವಾ ‘Brain rot’ ನಂಥ ಪದಗಳು ಇಂದು ಯಾವ ಅಡೆತಡೆಯಿಲ್ಲದೇ ಜಾಗತಿಕ ಸಂವಹನದಲ್ಲಿ ಬಳಕೆಯಾಗುತ್ತಿವೆ. ಇದು ಭಾಷೆಯ ಶುದ್ಧತೆ ಯನ್ನು ಕೆಡಿಸುತ್ತಿದೆ ಎಂಬ ವಾದ ಒಂದೆಡೆಯಿದ್ದರೂ, ಇದು ಭಾಷೆಗೆ ಹೊಸ ಜೀವವನ್ನು ನೀಡುತ್ತಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಇಂಟರ್ನೆಟ್ ಸಂಸ್ಕೃತಿಯು ಇಂಗ್ಲಿಷ್ ಭಾಷೆಯನ್ನು ಕೇವಲ ಸಾಹಿತ್ಯಕ, ಕಾವ್ಯಾತ್ಮಕ ಅಥವಾ ಗಂಭೀರ ಶೈಕ್ಷಣಿಕ ಚೌಕಟ್ಟಿನಿಂದ ಹೊರ ತಂದು, ಅದನ್ನು ಅತ್ಯಂತ ಚಲನಶೀಲ (Dynamic) ಮತ್ತು ವಿನೋದಮಯವಾಗಿಸಿದೆ.
ಭಾಷೆ ಎನ್ನುವುದು ಕೇವಲ ಕಚೇರಿಗಳ ಅಥವಾ ತರಗತಿಗಳ ಬಳಸುವ ಬಿಗಿ ಉಡುಪಿನಂತಿರದೇ, ದಿನನಿತ್ಯದ ಬದುಕಿನಲ್ಲಿ ಧರಿಸುವ ಆರಾಮದಾಯಕ, ದೊಗಳೆ ಉಡುಪಿನಂತಾಗಬೇಕು ಎಂಬ ಧೋರಣೆ ಇಂದಿನ ಯುವ ಪೀಳಿಗೆಯದ್ದಾಗಿದೆ. ಸಂಕೀರ್ಣವಾದ ಮಾನಸಿಕ ಸ್ಥಿತಿಗಳನ್ನು ವರ್ಣಿ ಸಲು ಇಂಟರ್ನೆಟ್ ಭಾಷೆ ಅತ್ಯಂತ ಸರಳ ಮತ್ತು ತಮಾಷೆಯಾದ ಹಾದಿಗಳನ್ನು ಕಂಡುಕೊಂಡಿದೆ.
ಉದಾಹರಣೆಗೆ, ಒಂಬತ್ತರಿಂದ ಐದರ ಸಾಂಪ್ರದಾಯಿಕ ಕೆಲಸದ ಅವಧಿಯ ಬದಲಾಗಿ, ಒಬ್ಬ ವ್ಯಕ್ತಿಯ ಮಿದುಳು ಅತ್ಯಂತ ಚುರುಕಾಗಿರುವ ಸಮಯವನ್ನು (ಕೆಲವರಿಗೆ ಮುಂಜಾನೆ, ಕೆಲವರಿಗೆ ತಡರಾತ್ರಿ) ಆಧರಿಸಿ ಕೆಲಸದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವ ಹೊಸ ಟ್ರೆಂಡ್‌ಗೆ Chronoworking ಎನ್ನುವುದು ಹಾಗೂ ಹಾಲಿವುಡ್ ಅಥವಾ ಉದ್ಯಮ ರಂಗದಲ್ಲಿ ಕೇವಲ ತಮ್ಮ ಪೋಷಕರ ಪ್ರಭಾವ ಮತ್ತು ವಂಶಪಾರಂಪರ್ಯ ಹಿನ್ನೆಲೆಯಿಂದಾಗಿ ಸುಲಭವಾಗಿ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಭಾವಿ ವ್ಯಕ್ತಿಗಳ ಮಕ್ಕಳಿಗೆ Neppo Baby ಈ ಪದ ಬಳಸುತ್ತಿರುವುದು. ಅಂದರೆ ಭಾಷೆಯು ಬದಲಾಗುತ್ತಿರುವ ಮನುಷ್ಯನ ಡಿಜಿಟಲ್ ಬದುಕಿನ ನಿಖರವಾದ ಪ್ರತಿಬಿಂಬವಾಗಿ ಆಯಾಮ ಪಡೆದುಕೊಳ್ಳುತ್ತಿದೆ. ಮನುಷ್ಯ ಇಂದು ಭೌತಿಕ ಪ್ರಪಂಚಕ್ಕಿಂತ ಹೆಚ್ಚು ಡಿಜಿಟಲ್ ಪ್ರಪಂಚದಲ್ಲಿ ಬದುಕುತ್ತಿದ್ದಾನೆ.
ಆತನ ಏಕಾಂಗಿತನ, ಆತನ ಆತಂಕಗಳು, ಕೃತಕ ಬುದ್ಧಿಮತ್ತೆಯ (ಎಐ) ಆಕ್ರಮಣದಿಂದ ಆತ ಅನುಭವಿಸುತ್ತಿರುವ ಗೊಂದಲಗಳು- ಇವೆಲ್ಲವನ್ನೂ ಇಂಟರ್ನೆಟ್ ಭಾಷೆಯು ತಕ್ಷಣವೇ ಗ್ರಹಿಸಿ ಹೊಸ ಪದಗಳ ರೂಪದಲ್ಲಿ ಸಮಾಜಕ್ಕೆ ದಾಟಿಸುತ್ತಿದೆ. ಹೀಗಾಗಿ, ಇಂದಿನ ಇಂಗ್ಲಿಷ್ ಭಾಷೆಯು ಕೇವಲ ಅಮೆರಿಕನ್ನರದ್ದೋ ಅಥವಾ ಬ್ರಿಟಿಷರದೋ ಆಗಿ ಉಳಿದಿಲ್ಲ.
ಅದು ಇಂಟರ್ನೆಟ್ ಬಳಸುವ ಪ್ರತಿಯೊಬ್ಬ ಜಾಗತಿಕ ಪ್ರಜೆಯ ಡಿಜಿಟಲ್ ಸಂಸ್ಕೃತಿ, ಮನಸ್ಥಿತಿ ಮತ್ತು ಅಸ್ತಿತ್ವವನ್ನು ಜಗತ್ತಿಗೆ ಸಾರುವ ಜೀವಂತ ಮಾಧ್ಯಮವಾಗಿ ರೂಪಾಂತರಗೊಂಡಿದೆ. ಇಂದು ನಾವು- ನೀವು ಹುಟ್ಟು ಹಾಕುವ ಅಥವಾ ಟಂಕಿಸುವ ಒಂದು ಪದವನ್ನು ನಾಳೆ ಅಮೆರಿಕದ ಅಧ್ಯಕ್ಷರೋ, ಬ್ರಿಟನ್ ಪ್ರಧಾನಿಯೋ, ಗೂಗಲ್ ಮುಖ್ಯಸ್ಥರೋ ಬಳಸಬಹುದು.
ಸಾಂಪ್ರದಾಯಿಕ ವಾಗಿ ಕಚೇರಿಗಳಲ್ಲಿ ಅಥವಾ ಉದ್ಯಮ ರಂಗದಲ್ಲಿ ಅತ್ಯಂತ ಗಂಭೀರ ಹಾಗೂ ಔಪಚಾರಿಕ ( Formal ) ಇಂಗ್ಲಿಷ್ ಬಳಸಲಾಗುತ್ತಿತ್ತು. ಆದರೆ ಇಂಟರ್ನೆಟ್ ಹಾಗೂ ಸೋಷಿಯಲ್ ಮೀಡಿಯಾ ಸಂಸ್ಕೃತಿ ಯ ಪ್ರಭಾವದಿಂದಾಗಿ ಈಗ ಇಮೇಲ್ ಹಾಗೂ ಬಿಸಿನೆಸ್ ಸಂವಹನಗಳ ಶೈಲಿಯೇ ಬದಲಾಗುತ್ತಿದೆ. ಲಿಂಕ್ಡ್ ಇನ್ (LinkedIn) ನಂಥ ವೃತ್ತಿಪರ ವೇದಿಕೆಗಳಲ್ಲೂ ಯುವ ಉದ್ಯೋಗಿಗಳು ಮತ್ತು ಸಿಇಒಗಳು ಈಗ ಮುಕ್ತವಾಗಿ ಸ್ಲ್ಯಾಂಗ್‌ಗಳನ್ನು ಬಳಸುತ್ತಿದ್ದಾರೆ.
ಗಂಭೀರವಾದ ವರದಿಗಳ ಬದಲಾಗಿ ಮೀಮ್‌ಗಳ ಮೂಲಕ ಕಂಪನಿಯ ಹೊಸ ನಿರ್ಧಾರಗಳನ್ನು ಪ್ರಕಟಿಸುವ ಟ್ರೆಂಡ್ ಹೆಚ್ಚಾಗಿದೆ. ಇದು ಉದ್ಯಮ ರಂಗದ ಕೃತಕ ಗಾಂಭೀರ್ಯವನ್ನು ಕಡಿಮೆ ಮಾಡಿ, ಗ್ರಾಹಕರು ಮತ್ತು ಉದ್ಯೋಗಿಗಳ ನಡುವೆ ಹೆಚ್ಚು ಆಪ್ತತೆಯನ್ನು ತರುತ್ತಿದೆ. ಇಂಟರ್ನೆಟ್ ಭಾಷಾ ಬೆಳವಣಿಗೆಯ ಇತ್ತೀಚಿನ ಅತ್ಯಂತ ಆಘಾತಕಾರಿ ಮತ್ತು ಆಸಕ್ತಿದಾಯಕ ವಿದ್ಯಮಾನ ವೆಂದರೆ ‘ಅಲ್ಗೋಸ್ಪೀಕ್’. ಯೂಟ್ಯೂಬ್, ಟಿಕ್‌ಟಾಕ್ ಅಥವಾ ಇನ್ಸ್ಟಾಗ್ರಾಮ್‌ಗಳು ಕೆಲವು ನೆಗೆಟಿವ್ ಅಥವಾ ಸೂಕ್ಷ ಪದಗಳನ್ನು (ಉದಾಹರಣೆಗೆ, ಸಾವು, ಕೊಲೆ, ಖಿನ್ನತೆ, ಯುದ್ಧ) ಬಳಸಿದರೆ ಆ ವಿಡಿಯೋಗಳನ್ನು ಸೆನ್ಸಾರ್ ಮಾಡುತ್ತವೆ ಅಥವಾ ಅವುಗಳ ರೀಚ್ ಕಡಿಮೆ ಮಾಡುತ್ತವೆ. ಇದನ್ನು ತಪ್ಪಿಸಲು ಇಂಟರ್ನೆಟ್ ಬಳಕೆದಾರರು ಹೊಸ ಸಂಕೇತ ಪದಗಳನ್ನು ಸೃಷ್ಟಿಸಿಕೊಂಡಿದ್ದಾರೆ.
ಕಂಟೆಂಟ್ ಕ್ರಿಯೇಟರ್‌ಗಳು ತಾವು ಪಟ್ಟ ಶ್ರಮ ವ್ಯರ್ಥವಾಗಬಾರದು ಮತ್ತು ತಮ್ಮ ವಿಡಿಯೋಗಳು ಡಿ-ಮಾನಿಟೈಸ್ (Ad revenue ಕಳೆದುಕೊಳ್ಳುವುದು) ಆಗಬಾರದು ಎಂಬ ಕಾರಣಕ್ಕೆ ಅಲ್ಗಾರಿದಮ್ ಅನ್ನು ವಂಚಿಸಲು ಹೊಸ ಸಂಕೇತ ಭಾಷೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಅಲ್ಗೋಸ್ಪೀಕ್‌ನ ಜಾಣ್ಮೆ ಇರುವುದು ಪದಗಳ ಪರ್ಯಾಯ ರೂಪಾಂತರದಲ್ಲಿ. ಉದಾಹರಣೆಗೆ, ‘Dead’ (ಸಾವು) ಅಥವಾ ‘ Suicide ’ ಎಂಬ ಪದವನ್ನು ಬಳಸಿದರೆ ವಿಡಿಯೋ ಬ್ಯಾನ್ ಆಗಬಹುದು ಎಂಬ ಭೀತಿಯಿಂದ ಬಳಕೆದಾರರು ‘ Unalive ’ ಎಂಬ ಹೊಸ ಪದವನ್ನು ಟ್ರೆಂಡ್ ಮಾಡಿದರು. ಹಾಗೆಯೇ ಜಾಗತಿಕವಾಗಿ ತಲ್ಲಣ ಮೂಡಿಸಿದ್ದ ‘ Pandemic ’ (ಸಾಂಕ್ರಾಮಿಕ) ಪದದ ಬಳಕೆಯನ್ನು ಸೆನ್ಸಾರ್ ಮಾಡತೊಡಗಿದಾಗ, ಜನರು ಅದಕ್ಕೆ ಪರ್ಯಾಯವಾಗಿ ಇಟಾಲಿಯನ್ ಸ್ಯಾಂಡ್‌ವಿಚ್ ಹೆಸರಾದ ‘ Panini’ ಅಥವಾ ‘Panda express’ ಎಂದು ಬಳಸಲು ಶುರು ಮಾಡಿದರು.
ಲೈಂಗಿಕ ದೌರ್ಜನ್ಯದಂಥ ಗಂಭೀರ ವಿಷಯಗಳ ಚರ್ಚೆಯಲ್ಲಿ ʼAssault’ ಎನ್ನುವ ಬದಲು ‘ Spicy eggplant’ ಎಂದು ಬರೆಯುವ ಟ್ರೆಂಡ್ ಕೂಡ ಇದೆ. ಇವು ಕೇವಲ ಪದಗಳಲ್ಲ, ಅಲ್ಗಾರಿದಮ್‌ನ ಕಣ್ಣಿಗೆ ಮಣ್ಣೆರಚಲು ಮನುಷ್ಯ ಕಂಡುಹಿಡಿದ ಭಾಷಾ ಸುರಂಗ ಮಾರ್ಗಗಳು. ಮಾನವ ಇತಿಹಾಸ ದಲ್ಲಿ ಭಾಷೆಯು ಭೌಗೋಳಿಕತೆ, ಅಗತ್ಯತೆ ಮತ್ತು ಸಂಸ್ಕೃತಿಗೆ ತಕ್ಕಂತೆ ಬದಲಾಗುತ್ತಾ ಬಂದಿತ್ತು.
ಆದರೆ ಇಂದು ಇತಿಹಾಸದ ಮೊದಲ ಬಾರಿಗೆ, ಮನುಷ್ಯರು ತಮ್ಮ ಅಸ್ತಿತ್ವಕ್ಕಾಗಿ ಮತ್ತು ಇಂಟರ್ನೆಟ್ ಲೋಕದಲ್ಲಿ ಬದುಕಿ ಉಳಿಯಲು ಒಂದು ನಿರ್ಜೀವ ಸಾಫ್ಟ್ʼವೇರ್ ಕೋಡ್‌ಗೆ ತಕ್ಕಂತೆ ತಮ್ಮ ಭಾಷೆ ಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಡಿಜಿಟಲ್ ದಾಳಿಯಂತೆ ಕಂಡರೂ, ತಂತ್ರಜ್ಞಾನದ ಬಿಗಿ ಹಿಡಿತದ ನಡುವೆಯೂ ಮನುಷ್ಯನ ಸೃಜನಶೀಲತೆ ಹೇಗೆ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತದೆ ಎಂಬುದಕ್ಕೆ ಇದು ಅತ್ಯಂತ ಸ್ವಾರಸ್ಯಕರ ಉದಾಹರಣೆಯಾಗಿದೆ.
ಭಾಷೆಯು ಕೇವಲ ಭಾವನೆಗಳ ಅಭಿವ್ಯಕ್ತಿಯಾಗಿ ಉಳಿಯದೇ, ಡಿಜಿಟಲ್ ಯುಗದ ಬದುಕುಳಿಯು ವಿಕೆಯ ತಂತ್ರವಾಗಿ (Survival strategy) ರೂಪಾಂತರಗೊಳ್ಳುತ್ತಿದೆ. ಡಿಜಿಟಲ್ ಸಂವಹನವು ಕೇವಲ ಏಕಮುಖವಾಗಿ ಉಳಿದಿಲ್ಲ. ಇಂಟರ್ನೆಟ್ ಲೋಕದಲ್ಲಿ ಇಂದು ಜಗತ್ತಿನ ವಿವಿಧ ದೇಶಗಳ ಬಳಕೆ ದಾರರು ಸಕ್ರಿಯರಾಗಿದ್ದು, ತಮ್ಮದೇ ಆದ ಸ್ಥಳೀಯ ಸಾಂಸ್ಕೃತಿಕ ಸೊಗಡನ್ನು ಜಾಗತಿಕ ಇಂಗ್ಲಿಷ್ ಭಾಷೆಗೆ ಜೋಡಿಸುತ್ತಿದ್ದಾರೆ. ಈ ವಿಶಿಷ್ಟ ಪ್ರಕ್ರಿಯೆಯನ್ನು ಭಾಷಾ ತಜ್ಞರು ಮತ್ತು ಸಮಾಜಶಾಸ್ತ್ರಜ್ಞರು ‘ಗ್ಲೋಕಲೈಸೇಶನ್’ (Global + Local) ಎಂದು ಕರೆಯುತ್ತಾರೆ.
ಅಂದರೆ ಜಾಗತಿಕವಾದ ಭಾಷೆಯು ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ಹೊಸ ರೂಪ ಪಡೆಯುವ ಪ್ರವೃತ್ತಿ ಇದಾಗಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕೊರಿಯನ್ ಪಾಪ್ (K-Pop) ಮತ್ತು ಕೊರಿಯನ್ ನಾಟಕಗಳ (K-Dramas) ಜಾಗತಿಕ ಕ್ರೇಜ್. ಸಾಮಾಜಿಕ ಜಾಲತಾಣಗಳ ಮೂಲಕ ಹರಡಿದ ಈ ಸಾಂಸ್ಕೃತಿಕ ಅಲೆಯು, ಕೊರಿಯನ್ ಭಾಷೆಯ ‘ Oppa ’ (ಅಣ್ಣ ಅಥವಾ ಪ್ರೀತಿಪಾತ್ರ ವ್ಯಕ್ತಿ) ಮತ್ತು ‘ Aegyo’ (ಮುದ್ದಾಗಿ ವರ್ತಿಸುವುದು) ನಂಥ ಪದಗಳನ್ನು ಅಮೆರಿಕ ಹಾಗೂ ಯೂರೋಪಿನ ಯುವ ಪೀಳಿಗೆಯ ಇಂಗ್ಲಿಷ್ ದಿನಚರಿಯ ಭಾಗವಾಗಿಸಿಬಿಟ್ಟಿದೆ.
ತಂತ್ರಜ್ಞಾನದ ನೆರವಿನಿಂದ ಏಷ್ಯಾದ ಒಂದು ದೇಶದ ಆಡುಭಾಷೆ ಇಡೀ ಪಾಶ್ಚಿಮಾತ್ಯ ಜಗತ್ತಿನ ಇಂಗ್ಲಿಷ್ ಗ್ರಹಿಕೆಯನ್ನು ಬದಲಾಯಿಸುತ್ತಿದೆ. ಮತ್ತೊಂದೆಡೆ, ಭಾರತೀಯ ಮೂಲದ ಇಂಟರ್ನೆಟ್ ಬಳಕೆದಾರರು ಮತ್ತು ಮೀಮ್‌ಗಳ ಕೊಡುಗೆಯೂ ಇದರಲ್ಲಿ ದೊಡ್ಡದಿದೆ. ಇಂಟರ್ನೆಟ್‌ನಲ್ಲಿ ಸಾರ್ವತ್ರಿಕವಾಗಿ ಬಳಕೆಯಾಗುವ ‘ Preach’ (ಉಪದೇಶಿಸುವುದು) ಅಥವಾ ‘ Vibe check’ (ಒಬ್ಬರ ಮನಸ್ಥಿತಿಯನ್ನು ಅಳೆಯುವುದು) ನಂಥ ಪದಗಳ ಜತೆಗೆ, ಭಾರತೀಯರು ಇಂಗ್ಲಿಷ್ ಪದಗಳನ್ನು ಬಳಸುವ ವಿಶಿಷ್ಟ ಶೈಲಿ ಮತ್ತು ಸ್ಥಳೀಯ ಇಂಗ್ಲಿಷ್ ಶಬ್ದಗಳು (Indianisms) ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುವ ತಮಾಷೆಯ ದೇಶಿ ಮೀಮ್‌ಗಳು ಮತ್ತು ವಿಡಿಯೋಗಳು ಪಾಶ್ಚಿಮಾತ್ಯರಿಗೂ ಭಾರತೀಯ ಸಂವಹನದ ಶೈಲಿಯನ್ನು ಪರಿಚಯಿಸುತ್ತಿವೆ. ಈ ಗ್ಲೋಕಲೈಸೇಶನ್ ಪ್ರಕ್ರಿಯೆಯು ಇಂಗ್ಲಿಷ್ ಭಾಷೆಯನ್ನು ಕೇವಲ ಅಮೆರಿಕನ್ನರ ಅಥವಾ ಬ್ರಿಟಿಷರ ಸ್ವತ್ತಾಗಿ ಉಳಿಸಿಲ್ಲ. ಇಂಟರ್ನೆಟ್ ಇಡೀ ಜಗತ್ತನ್ನು ಒಂದು ಪುಟ್ಟ ಹಳ್ಳಿಯನ್ನಾಗಿ ಮಾಡಿರುವ ಕಾರಣ, ವಿವಿಧ ದೇಶಗಳ ಸಂಸ್ಕೃತಿಗಳು ಒಂದಕ್ಕೊಂದು ಸಂಘಟಿತವಾಗಿ ಡಿಜಿಟಲ್ ಇಂಗ್ಲಿಷ್ ಭಾಷೆಗೆ ಹೆಚ್ಚು ಬಹುಸಾಂಸ್ಕೃತಿಕ, ವೈವಿಧ್ಯಮಯ ಮತ್ತು ಜಾಗತಿಕ ಆಯಾಮವನ್ನು ನೀಡುತ್ತಿವೆ.
ಭಾಷೆಯು ಯಾವುದೇ ಒಂದು ದೇಶದ ಹಿಡಿತದಲ್ಲಿರದೇ, ಇಂಟರ್ನೆಟ್ ಬಳಸುವ ಪ್ರತಿಯೊಬ್ಬ ಜಾಗತಿಕ ಪ್ರಜೆಯ ಕೊಡುಗೆಯಿಂದ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ವಿಶ್ವದ ಪ್ರಮುಖ ಪತ್ರಿಕೆಗಳು ಮತ್ತು ಸುದ್ದಿ ಸಂಸ್ಥೆಗಳು (ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳು) ಇಂದು ಯುವ ಓದುಗರನ್ನು ತಲುಪಲು ತಮ್ಮ ಹೆಡ್‌ಲೈನ್‌ಗಳಲ್ಲಿ ಈ ಇಂಟರ್ನೆಟ್ ಪದಗಳನ್ನು ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೇವಲ ಶಿಷ್ಟ ಇಂಗ್ಲಿಷ್ ಬಳಸುವ ಕಾಲ ಮುಗಿದಿದೆ. ಪ್ರಸ್ತುತ ದಿನಗಳಲ್ಲಿ ಹೊರಬರುತ್ತಿರುವ ಕಾದಂಬರಿಗಳು ಹಾಗೂ ಚಲನಚಿತ್ರಗಳ ಸಂಭಾಷಣೆಗಳಲ್ಲೂ ಈ ಡಿಜಿಟಲ್ ಯುಗದ ಸ್ಲ್ಯಾಂಗ್‌ಗಳು ಮುಕ್ತವಾಗಿ ಬಳಕೆಯಾಗುತ್ತಿವೆ.
ಇದು ಸಾಹಿತ್ಯವನ್ನು ಸಮಕಾಲೀನ ಸಮಾಜಕ್ಕೆ ಹೆಚ್ಚು ಹತ್ತಿರವಾಗಿಸುತ್ತಿದೆ. ಹಿಂದೆ ಭಾಷೆಯ ಬದಲಾವಣೆಗೆ ನೂರಾರು ವರ್ಷಗಳು ಬೇಕಾಗುತ್ತಿದ್ದವು. ಆದರೆ ಇಂದು ಬೆಳಗ್ಗೆ ಇಂಟರ್ನೆಟ್‌ನಲ್ಲಿ ಹುಟ್ಟುವ ಪದ ಸಂಜೆಯ ವೇಳೆಗೆ ಕೋಟ್ಯಂತರ ಜನರ ತಲೆಗಳಲ್ಲಿ ಆಶ್ರಯ ಪಡೆದಿರುತ್ತವೆ. ಈ ವೇಗವು ಭಾಷೆಯ ಸಾಂಪ್ರದಾಯಿಕ ಸೊಗಡನ್ನು ಆಳವಿಲ್ಲದಂತೆ ಮಾಡುತ್ತಿದೆ ಎಂಬ ಆತಂಕ ತಜ್ಞರಲ್ಲಿದ್ದರೂ, ಮಾನವನ ಸಂವಹನ ಇತಿಹಾಸದಲ್ಲಿ ಇದೊಂದು ಅತ್ಯಂತ ರೋಮಾಂಚನಕಾರಿ ಮತ್ತು ಕ್ರಾಂತಿಕಾರಿ ಘಟ್ಟ ಎನ್ನುವುದರಲ್ಲಿ ಸಂದೇಹವಿಲ್ಲ