ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahally Column: ಸಮಾನತೆ ಎನ್ನುವುದು ಮಾತಿಗೆ ಸೀಮಿತವಾಗಬಾರದು

ಸಮಾಜದ ಒಂದು ವರ್ಗದ ಜನರಲ್ಲಿ ಇದ್ಯಾವುದೂ ಬದಲಾಗುವುದಿಲ್ಲ ಎನ್ನುವ ನಂಬಿಕೆ ಬಲ ಪಡೆದು ಕೊಳ್ಳುತ್ತಿದೆ. ನಾವು ಸಮಾಜವಾಗಿ ಹೀಗಿರಲಿಲ್ಲ. ನಮ್ಮಲ್ಲಿ ನೈತಿಕತೆಗೆ ಬಹಳಷ್ಟು ಮಹತ್ವವನ್ನು ನೀಡುತ್ತಿದ್ದರು. ನಿಜವಾದ ಅಶಕ್ತರಿಗೆ ಸಹಾಯ ಮಾಡುವುದು ದೇವರ ಪೂಜೆಗೆ ಸಮವೆಂದು ಭಾವಿಸ ಲಾಗುತ್ತಿತ್ತು.

ವಿಶ್ವರಂಗ

ಭಾರತದಲ್ಲಿ ಸಮಾನತೆ ಎನ್ನುವ ಪದ ಅದೆಷ್ಟು ಸವಕಲಾಗಿದೆ ಎನ್ನುವುದನ್ನು ನಾನು ವಿಶೇಷವಾಗಿ ಹೇಳ ಬೇಕಾಗಿಲ್ಲ. ಆದರೂ ಇಂದಿಗೂ ಆ ಪದವನ್ನೇ ಚಲಾಯಿಸುತ್ತಾ ಬಂದಿದ್ದೇವೆ. ಅದು ಇನ್ನೂ ಚಲಾವಣೆ ಆಗುತ್ತಲೂ ಇದೆ ಎನ್ನುವುದು ಮಾತ್ರ ಇವತ್ತಿನ ಕಾಲಘಟ್ಟದ ಅತಿದೊಡ್ಡ ದುರಂತ. ಬಡವರು, ಅಶಕ್ತರು, ನಿರ್ಗತಿಕರು, ಹಿಂದುಳಿದವರು ಹೀಗೆ ಇನ್ನಷ್ಟು ವರ್ಗಗಳ ಹೆಸರು ಹೇಳುತ್ತಾ, ಅವರನ್ನು ಉದ್ಧರಿಸಬೇಕು, ಸಮಾನತೆಗಾಗಿ ಹೋರಾಟ ಎನ್ನುವ ಮಾತುಗಳನ್ನು ಕೇಳಿದಾಗ ಮನಸ್ಸು ಮೆಲ್ಲಗೆ ರೋದಿಸುತ್ತದೆ.

ಹೀಗೆ ಸಮಾನತೆಯ ಮಾತಾಡುವವರು ತಮ್ಮ ಉದ್ಧಾರವನ್ನು ಮಾಡಿಕೊಳ್ಳುತ್ತಾ ಇದ್ದಾರೆಯೇ ಹೊರತು ಅವರಿಗೆ ಬೇರೆ ಯಾರ ಉದ್ಧಾರದ ಬಗ್ಗೆ ಕಾಳಜಿಯಿಲ್ಲ. ಆದರೆ ನಮ್ಮ ಸಮಾಜ ಹೇಗಾಗಿದೆ ಎಂದರೆ ಯಾರಾದರೊಬ್ಬರು ನಿಜಕ್ಕೂ ಕಾಳಜಿಯಿಂದ ಸಮಾಜ ಬದಲಿಸಬೇಕು ಎಂದು ಬಂದರೆ ಅವರನ್ನೂ ಸಂದೇಹದಿಂದ ನೋಡುವಂತಾಗಿದೆ. ಅಲ್ಲದೆ ಅವರೂ ಕೂಡ ನಮ್ಮ ಸಮಾಜದ ವ್ಯವಸ್ಥೆಯ ಅಡಿಯಲ್ಲಿ ಕೊಚ್ಚಿ ಹೋಗುತ್ತಾರೆ. ವ್ಯವಸ್ಥೆ ಬದಲಿಸುವುದು ದೊಡ್ಡ ಮಾತು. ಸಣ್ಣ ಬದಲಾವಣೆ ಕೂಡ ಅಸಾಧ್ಯ ಎನ್ನುವ ಮಟ್ಟಕ್ಕೆ ನಾವು ಬಂದು ನಿಂತಿದ್ದೇವೆ.

ಸಮಾಜದ ಒಂದು ವರ್ಗದ ಜನರಲ್ಲಿ ಇದ್ಯಾವುದೂ ಬದಲಾಗುವುದಿಲ್ಲ ಎನ್ನುವ ನಂಬಿಕೆ ಬಲ ಪಡೆದುಕೊಳ್ಳುತ್ತಿದೆ. ನಾವು ಸಮಾಜವಾಗಿ ಹೀಗಿರಲಿಲ್ಲ. ನಮ್ಮಲ್ಲಿ ನೈತಿಕತೆಗೆ ಬಹಳಷ್ಟು ಮಹತ್ವವನ್ನು ನೀಡುತ್ತಿದ್ದರು. ನಿಜವಾದ ಅಶಕ್ತರಿಗೆ ಸಹಾಯ ಮಾಡುವುದು ದೇವರ ಪೂಜೆಗೆ ಸಮವೆಂದು ಭಾವಿಸಲಾಗುತ್ತಿತ್ತು. ಅವತ್ತಿಗೂ ಸಮಾಜದಲ್ಲಿ ಇವತ್ತಿನಂತೆ ಜಾತಿ, ಉಪಜಾತಿ, ಪಂಗಡಗಳು, ಬೇರೆ ಬೇರೆ ಭಾಷೆಗಳು ಇದ್ದವು. ಇವೆಲ್ಲವುಗಳ ನಡುವೆ ಮನುಷ್ಯತ್ವಕ್ಕೆ ಬಹಳ ದೊಡ್ಡ ಮರ್ಯಾದೆಯಿತ್ತು. ತಪ್ಪು ಮಾಡಿದರೆ ಸಮಾಜ, ಜನ ಏನೆಂದುಕೊಂಡಾರು? ಎನ್ನುವ ಪ್ರಜ್ಞೆ ಜಾಗ್ರತವಾಗಿತ್ತು. ಅದಕ್ಕಿಂತ ಹಿಂದಿನ ಸಮಯದಲ್ಲಿ ಭಾರತ ಇನ್ನೂ ಭವ್ಯವಾಗಿತ್ತು.

ಇದನ್ನೂ ಓದಿ: Rangaswamy Mookanahalli Column: ಇಷ್ಟವಾದ್ದು ಮಾಡು, ಮಾಡುವುದನ್ನು ಇಷ್ಟಪಡು

ನಾಲ್ಕು ದಶಕದ ಹಿಂದೆ ನಾನು ಪ್ರೈಮರಿ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಶಾಲೆಯಲ್ಲಿ ಗುರುಗಳು ಹೇಳುತ್ತಿದ್ದ ಒಂದು ಕಥೆ ನೆನಪಾಗುತ್ತಿದೆ. ಗುರುವೊಬ್ಬರು ತನ್ನೆ ಶಿಷ್ಯರನ್ನು ಕರೆದು ಅವರೆಲ್ಲರ ಕೈಯಲ್ಲಿ ಒಂದು ಬಾಳೆಹಣ್ಣು ಕೊಟ್ಟು, ಯಾರೂ ನೋಡದ ಜಾಗದಲ್ಲಿ ತಿಂದು ಬರಬೇಕು ಎಂದು ಹೇಳುತ್ತಾರೆ. ಎ ಮಕ್ಕಳೂ ತಿಂದು ಬರುತ್ತಾರೆ. ಒಬ್ಬ ಮಾತ್ರ ಹಾಗೇ ವಾಪಸ್ಸು ಬರುತ್ತಾನೆ. ಏಕೆ ಎನ್ನುವ ಗುರುವಿನ ಪ್ರಶ್ನೆಗೆ ‘ಎಡೆ ಭಗವಂತನಿದ್ದಾನೆ, ಆತ ನೋಡುತ್ತಲೆ ಇರುತ್ತಾನೆ, ಹೀಗಾಗಿ ಯಾರಿಗೂ ಕಾಣದಂತೆ ತಿನ್ನುವುದು ಅಸಾಧ್ಯ’ ಎನ್ನುವ ಮಾತನ್ನು ಹೇಳುತ್ತಾನೆ.

ಈ ನೀತಿ ಕಥೆ ಹೇಳಿ ನಮ್ಮ ಗುರುಗಳು ಸುಳ್ಳು ಹೇಳಬಾರದು, ಮೋಸ ಮಾಡಬಾರದು, ಸಮಾಜದ ರೀತಿನೀತಿಗಳನ್ನು ಮೀರಿ ಸ್ವೇಚ್ಛಾಚಾರ ಮಾಡಬಾರದು ಎಂದೆ ಬುದ್ದಿ ಹೇಳುತ್ತಿದ್ದರು. ಅವತ್ತಿಗೆ ಅದು ನನ್ನ ಪಾಲಿಗೆ ಕಥೆ ಮಾತ್ರವಾಗಿತ್ತು. ಇವತ್ತಿಗೆ ಈ ಆಲೋಚನೆ, ಅಂತಹ ಒಳ್ಳೆ ಸಮಾಜದ ಪರಿಕಲ್ಪನೆ, ಅಂತಹ ಗುರುಗಳು ಎಲ್ಲವೂ ಅದ್ಭುತ ಎನ್ನಿಸುತ್ತದೆ.

ಕಳೆದ ಹತ್ತನ್ನೆರಡು ದಿನ ನೆದರ್ಲ್ಯಾಂಡ್ ಮತ್ತು ಫಿನ್‌ಲ್ಯಾಂಡ್ ದೇಶಗಳಲ್ಲಿ ಸುತ್ತಾಡುವ ಅವಕಾಶ ನನ್ನದಾಗಿತ್ತು. ನೆದರ್ಲ್ಯಾಂಡ್ ಅನೇಕ ಬಾರಿ ಹೋಗಿದ್ದೇನೆ. ಅದು ನನಗೆ ಇಂಗ್ಲೆಂಡ್ ದೇಶದ ಮುಂದುವರಿದ ಭಾಗದಂತೆ ಕಾಣುತ್ತದೆ. ಡಚ್ಚರು ಇಂಗ್ಲಿಷ್ ಜನರಿಗಿಂತ ಸಾವಿರಪಾಲು ವಾಸಿ ಎನ್ನುವ ಸಮಾಧಾನ ಕೂಡ ಇದೆ. ಆದರೂ ಇಲ್ಲಿನ ಸಮಾಜದಲ್ಲಿ ನಮ್ಮ ಸಮಾಜದ ಛಾಯೆ ಯನ್ನು ಕಾಣಬಹುದು. ಫಿನ್‌ಲ್ಯಾಂಡ್ ನನಗೆ ಹೊಸತು. ಹೊಸತು ಎನ್ನುವ ಕಾರಣಕ್ಕಾಗಿ ಅದನ್ನು ಹೊಗಳುತ್ತಿದ್ದೇನೆ ಎಂದುಕೊಳ್ಳಬೇಡಿ. ಎಲ್ಲಾ ಸಮಾಜದಲ್ಲೂ ಒಳಿತು, ಕೆಡುಕು ಇದ್ದೇ ಇರುತ್ತದೆ. ಆದರೆ ಫಿನ್‌ಲ್ಯಾಂಡ್ ಬೇರೆ ಜಗತ್ತು. ಅದು ನಾಗರಿಕತೆಯ ಉನ್ನತಮಟ್ಟವನ್ನು ಮುಟ್ಟಿಯಾಗಿದೆ.

RM 13

ಜಪಾನ್ ವಿಚಾರದಲ್ಲೂ ನನ್ನದು ಇದೇ ಅಭಿಪ್ರಾಯ. ಆದರೆ ಜಪಾನಿಗಿಂತ ಫಿನ್ ಲ್ಯಾಂಡ್ ಇನ್ನೊಂದು ಉನ್ನತ ಹಂತವನ್ನು ತಲುಪಿದೆ. ಜಪಾನೀಯರಿಗೆ ವರ್ಕ್ ಲೈಫ್ ಬ್ಯಾಲೆನ್ಸ್ ಅರ್ಥವೇ ಗೊತ್ತಿಲ್ಲ. ದುಡಿಯುವುದೇ ಬದುಕು ಎಂದುಕೊಂಡಿದ್ದಾರೆ. ಆ ಲೆಕ್ಕಾಚಾರದಲ್ಲಿ ನೋಡಿದಾಗ ಫಿನ್‌ಲ್ಯಾಂಡ್ ಅತೀ ಕಡಿಮೆ ಕೆಡಕುಗಳಿರುವ ದೇಶ ಎಂದು ಧಾರಾಳವಾಗಿ ಹೇಳಬಹುದು.

ಅಲ್ಲಿ ನನಗಾದ ಅನುಭವಗಳ ಆಧಾರದ ಮೇಲೆ ಈ ಸಾಲುಗಳನ್ನು ಬರೆಯುತ್ತಿದ್ದಾನೆ. ಫಿನ್‌ ಲ್ಯಾಂಡ್‌ನ ರಾಜಧಾನಿ ಹೆಲ್ಸಿಂಕಿಯಲ್ಲಿ ರಸ್ತೆ ದಾಟಲು ನಿಂತಿದ್ದೆ. ನನ್ನ ಪಕ್ಕದಲ್ಲಿ ಇಬ್ಬರು ಫಿನ್ನಿಷ್ ನಾಗರಿಕರು ನಿಂತಿದ್ದರು. ರಸ್ತೆಯಲ್ಲಿ ಯಾವುದೇ ವಾಹನ ಬರುತ್ತಿರಲಿಲ್ಲ. ಆದರೂ ಪಾದಚಾರಿಗಳಿಗೆ ಹಸಿರು ಸಿಗ್ನಲ್ ಬರುವವರೆಗೂ ಅವರು ರಸ್ತೆ ದಾಟಲಿಲ್ಲ. ಅವರ ಊರು, ಅವರು ದಾಟಲಿಲ್ಲ ಎಂದ ಮೇಲೆ ನಾನು ಹೇಗೆ ದಾಟಲಿ? ಇದು ದಿನದಲ್ಲಿ ಹತ್ತಾರು ಬಾರಿ ಪುನರಾವರ್ತನೆ ಆಯ್ತು.

ಫಿನ್ನಿಶರು ಎಂದಿಗೂ, ಯಾವುದೇ ಕಾರಣಕ್ಕೂ ಕಾನೂನು ಮುರಿಯುವುದಿಲ್ಲ ಎನ್ನುವುದು ತಿಳಿದು ಬಂತು. ನನ್ನ ಮಗಳು ಅನನ್ಯಳ ಯೂನಿವರ್ಸಿಟಿ ಪ್ರವೇಶ ಕುರಿತು ಒಂದಷ್ಟು ಯೂನಿವರ್ಸಿಟಿಗಳಿಗೆ ಭೇಟಿ ನೀಡಿ, ಅಲ್ಲಿನ ಗುಣಮಟ್ಟ, ಜೀವನಶೈಲಿ ಇತ್ಯಾದಿಗಳನ್ನು ತಿಳಿದುಕೊಂಡು ಬರುವ ಉದ್ದೇಶ ದಿಂದ ಅಲ್ಲಿನ ಹತ್ತಾರು ಯೂನಿವರ್ಸಿಟಿ ಭೇಟಿ ನೀಡಿದೆ.

ಹತ್ತಾರು ಫಿನ್ನಿಷ್ ಜನರನ್ನು, ವಿದ್ಯಾರ್ಥಿಗಳನ್ನು ಮಾತಾಡಿಸುವ ಅವಕಾಶ ಕೂಡ ಸುಲಭವಾಗಿ ಈ ಕಾರಣದಿಂದ ಸಿಕ್ಕಿತು. ಕೆಂಪು ಸಿಗ್ನಲ್ ಇದ್ದಾಗ ರಸ್ತೆ ದಾಟುವುದು ಫಿನ್ನಿಷ್ ಜನ ಮಾಡುವುದಿಲ್ಲ. ರಸ್ತೆಯಲ್ಲಿ ವಾಹನ ಬರುತ್ತಿದೆ, ಬರುತ್ತಿಲ್ಲ ಎನ್ನುವುದು ಮುಖ್ಯವಲ್ಲ. ಬೇಡ ಎಂದಿದ್ದಾರೆ ಅದನ್ನು ಪಾಲಿಸಬೇಕು ಎನ್ನುವುದು ಮುಖ್ಯ ಎನ್ನುವುದು ಅವರ ಜೊತೆಯ ಮಾತಿನಲ್ಲಿ ತಿಳಿದು ಬಂತು.

ನಮ್ಮ ಮೇಷ್ಟ್ರು ಹೇಳುತ್ತಿದ್ದ ಬಾಳೆಹಣ್ಣಿನ ಕಥೆಯ ಆ ಒಬ್ಬ ಒಳ್ಳೆ ಹುಡುಗ ಎಲ್ಲೂ ಭಗವಂತ ನಿದ್ದಾನೆ, ಹೇಗೆ ಯಾರೂ ನೋಡದೆ ತಿನ್ನುವುದು? ಎಂದುದರ ಹಿಂದಿನ ನೈತಿಕತೆ ಇಲ್ಲಿಯ ಜನ ಬದುಕುತ್ತಿದ್ದಾರೆ! ರೆಡ್ ಸಿಗ್ನಲ್ ಇದ್ದಾಗ ದಾಟಬಾರದು ಎನ್ನುವುದಷ್ಟೆ ಮುಖ್ಯ. ಯಾರೂ ನೋಡುತ್ತಿಲ್ಲ, ರಸ್ತೆ ಖಾಲಿಯಿದೆ, ವಾಹನ ಬರುತ್ತಿಲ್ಲ ಎನ್ನುವುದು ಅಮುಖ್ಯ!

ಅದೆಷ್ಟು ಅಚ್ಚುಕಟ್ಟಾಗಿ ಪಾಲಿಸುತ್ತಾರೆ. ಯಾವುದೇ ದೇಶವಿರಲಿ, ಯಾವುದೇ ನಗರವಿರಲಿ ಅಲ್ಲಿನ ಶಾಲೆಗಳಿಗೆ ಭೇಟಿ ನೀಡುವುದು ಅಲಿಖಿತ ನಿಯಮ ನನ್ನ ಪಾಲಿಗೆ. ಆ ದೇಶದ ಭವಿಷ್ಯ ತಯಾರಾ ಗುವ ಸ್ಥಳವದು! ಈ ಬಾರಿ ವಿಶೇಷವಾಗಿ ಯೂನಿವರ್ಸಿಟಿ ಭೇಟಿಗೆಂದು ಹೋಗಿದ್ದು, ಹೀಗಾಗಿ ಅಲ್ಲಿನ ವಿದ್ಯಭ್ಯಾಸದ ಬಗ್ಗೆ ಇನ್ನಷ್ಟು ಕಾಳಜಿಯಿಂದ ಮಾಹಿತಿಯನ್ನು ಸ್ಥಳೀಯರಿಂದಲೇ ತಿಳಿಯುವ ಸುಕೃತ ನನ್ನದಾಗಿತ್ತು.

ಏಳು ವರ್ಷದ ವರೆಗೆ ಶಾಲೆ ಎನ್ನುವ ಕಾನ್ಸೆಪ್ಟ್ ಇಲ್ಲಿಲ್ಲ. ಆರರ ವಯಸ್ಸಿನಲ್ಲಿ ಪ್ರಿಸ್ಕೂಲ್‌ಗೆ ಸೇರಿಸಬಹುದು. ಮಕ್ಕಳ ಕಲಿಕೆ ಹೇಗಿದೆ ಎನ್ನುವುದನ್ನು ನಿರ್ಣಯಿಸಲು ಕೆಲವೊಂದು ಟೆಸ್ಟುಗಳು ಇರುತ್ತವೆ. ಆದರೆ 18ರ ವರೆಗೆ ಯಾವುದೇ ಪರೀಕ್ಷೆ , ಗ್ರೇಡಿಂಗ್ ಇಲ್ಲಿಲ್ಲ. ಮಗು ವರ್ಷದ ಆರಂಭದಲ್ಲಿ ಹೇಗಿತ್ತು? ಕೊನೆಯಲ್ಲಿ ಹೇಗಿದೆ? ಎಷ್ಟರ ಮಟ್ಟಿಗೆ ಕಲಿಕೆಯಲ್ಲಿ ಇಂಪ್ರೂವ್‌ಮೆಂಟ್ ಆಗಿದೆ ಎನ್ನುವುದಷ್ಟೆ ಮುಖ್ಯವಾಗುತ್ತದೆ. ‌ರಮೇಶ ರ್ಯಾಂಕ್ ಬಂದಿದ್ದಾನೆ ನೀನೇಕೆ ಅವನಷ್ಟು ಮಾರ್ಕ್ಸ್ ತೆಗೆದಿಲ್ಲ ಎಂದು ಸುರೇಶನನ್ನು ಅಲ್ಲಿ ಯಾರೂ ಕೇಳುವುದಿಲ್ಲ. ಶಾಲೆಯ ಅವಧಿ ಕೂಡ ದಿನಕ್ಕೆ ಕೇವಲ ನಾಲ್ಕು ತಾಸು!

ಪರೀಕ್ಷೆಯಿಲ್ಲ, ಒತ್ತಡವಿಲ್ಲ, ದಿನದಲ್ಲಿ ಕೇವಲ ನಾಲ್ಕು ತಾಸು, ಹೀಗಿದ್ದೂ ಫಿನ್‌ಲ್ಯಾಂಡ್ ಜಗತ್ತಿನ ಅತ್ಯುತ್ತಮ ಶಿಕ್ಷಣ ಹೊಂದಿರುವ ದೇಶ ಎಂದು ಜಗತ್‌ಪ್ರಸಿದ್ಧವಾಗಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಈ ಪುಟಾಣಿ ದೇಶದ ಸಾಧನೆ ಜಗತ್ತು ಅದರತ್ತ ನೋಡುವಷ್ಟಿದೆ. ಇನ್ನು ಯೂನಿವರ್ಸಿಟಿ ವಿದ್ಯಾಭ್ಯಾಸ ಕೂಡ ಸಹ ಕ್ರೆಡಿಟ್ ಆಧಾರದ ಮೇಲೆ ನಿರ್ಣಯವಾಗುತ್ತದೆ. ಯಾವುದಕ್ಕೂ ಒತ್ತಡ ಹೇರುವುದು, ಇನ್ನೊಬ್ಬ ವಿದ್ಯಾರ್ಥಿಯ ಜೊತೆಗೆ ಹೋಲಿಕೆ ಮಾಡುವುದು ಇಲ್ಲಿಲ್ಲ. ಗಂಟೆಗಟ್ಟಲೆ ಯಾರೂ ಇಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುವುದಿಲ್ಲ.

ಕಲಿಕೆಯ ಒಂದು ಸ್ಥೂಲ ರೂಪುರೇಷೆಯನ್ನು ಹೇಳಲಾಗುತ್ತದೆ. ಮಿಕ್ಕದ್ದೆಲ್ಲ ವಿದ್ಯಾರ್ಥಿಗಳು ಮಾಡಬೇಕು. ಸಂಶಯ ಬಂದಾಗ ಮಾತ್ರ ಅದನ್ನು ನಿವಾರಿಸುವ ಕೆಲಸ ಗುರುವಿನದು. ಇವರು ಪಾಠ ಮಾಡುವ ಮೇಷ್ಟು ಮಾತ್ರವಲ್ಲ. ನಿಜವಾದ ಮೆಂಟರ್ಸ್. ಇಲ್ಲಿ ಇನ್ನೊಂದು ವಿಚಾರ ಹೇಳಬೇಕು. ಯಾವುದೇ ಕೋರ್ಸ್ ಇರಲಿ ಇಂತಿಷ್ಟು ಎನ್ನುವ ಸಂಖ್ಯೆಯಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುತ್ತಾರೆ.

ಬೇಕಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರ್, ವೈದ್ಯರು ಯಾರನ್ನೂ ಅವರು ಸೃಷ್ಟಿ ಮಾಡುವುದಿಲ್ಲ. ವಿದ್ಯಾರ್ಥಿಯ ಅಭಿರುಚಿ ಮೇರೆಗೆ ಅವರಿಗೆ ಬೇಕಾದ ಕೋರ್ಸ್ ತೆಗೆದುಕೊಳ್ಳ ಬಹುದು. ಒಂದು ಕೋರ್ಸಿಗೆ 35 ಜನ ಮಾತ್ರ ತೆಗೆದುಕೊಳ್ಳುತ್ತೇವೆ ಎಂದಾಗ ಮತ್ತು ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಂದಾಗ ಮಾತ್ರ ಅವರಲ್ಲಿ ಯಾರು ಉತ್ತಮರು ಎನ್ನುವ ಸ್ಪರ್ಧೆ ಶುರುವಾಗುತ್ತೆ.

ಇಲ್ಲವಾದಲ್ಲಿ ಸ್ಪರ್ಧೆ ಎನ್ನುವುದಕ್ಕೆ ಇಲ್ಲಿ ಜಾಗವಿಲ್ಲ. ಇದಕ್ಕೂ ಕಾರಣವಿದೆ. ಸುಮ್ಮನೆ ಓದಿ, ಪದವಿ ಪಡೆದು ಒಂದೊಳ್ಳೆ ಜೀವನ ನಡೆಸಲು ಬೇಕಾಗುವ ಕೆಲಸ ಮತ್ತು ಆದಾಯ ಇಲ್ಲದೆ ಹೋದರೆ ಆಗೇನು ಮಾಡುವುದು? ಇದನ್ನು ಮನಗಂಡು ಸರಕಾರ ಮುಂದಿನ ವರ್ಷಗಳಲ್ಲಿ ಯಾವ ವೃತ್ತಿಗೆ ಎಷ್ಟು ಜನ ಬೇಕು ಎನ್ನುವ ಅಂದಾಜು ಮಾಡುತ್ತದೆ. ಅದಕ್ಕೆ ತಕ್ಕಂತೆ ಯೂನಿವರ್ಸಿಟಿಗಳು ಅವಕಾಶ ಸೃಷ್ಟಿಸುತ್ತವೆ.

ಹೇಳುವುದಕ್ಕೆ ಹತ್ತಾರು ಕಥೆಗಳಿವೆ, ಮುಂದಿನ ಕೆಲವು ವಾರ ಅವುಗಳನ್ನು ಹಂಚಿಕೊಳ್ಳುವೆ. ಬೆಂಗಳೂರಿಗೆ ಬಂದಿಳಿದೆ. ಡ್ರೈವರ್ ಮತ್ತು ಕಾರು ನನ್ನನ್ನು ಮೈಸೂರಿಗೆ ಕರೆದೊಯ್ಯಲು ಸಿದ್ಧವಿತ್ತು. ಬೆಳಗಿನ ಜಾವ ಎರಡೂವರೆ ಇರಬಹುದು. ತೀರಾ ಕೆಟ್ಟದಾಗಿ ಸದ್ದು ಮಾಡುತ್ತಾ ಬೈಕ್ ಒಂದು ನಮ್ಮ ಕಾರನ್ನು ದಾಟಿಕೊಂಡು ಹೋಯ್ತು. ನಮ್ಮ ಕಾರು 80/90ರ ವೇಗದಲ್ಲಿ ಹೋಗುತ್ತಿತ್ತು.

ಬೈಕಿನವನ ವೇಗ ಎಷ್ಟಿರಬಹುದು? ಏನಾಯ್ತು ಎಂದು ನೋಡುವುದಕ್ಕೆ ಮುಂಚೆ ಆತ ಮರೆಯಾಗಿದ್ದ. 150ಕ್ಕೂ ಹೆಚ್ಚಿನ ವೇಗದಲ್ಲಿ ಇರುವುದು ಗ್ಯಾರಂಟಿ! ನನಗೆ ನನ್ನ ದೇಶವನ್ನು ಬೇರೆಯ ದೇಶದ ಜೊತೆಗೆ ಹೋಲಿಕೆ ಮಾಡುವುದು, ಅಲ್ಲಿ ಹೀಗೆ, ನಾವು ಸರಿಯಿಲ್ಲ ಎನ್ನುವುದು ಇಷ್ಟವಿಲ್ಲದ ವಿಚಾರ.

ಮೂಲಭೂತವಾಗಿ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗದೆ ದೇಶ ಬದಲಾಗುವುದಿಲ್ಲ ಎನ್ನುವುದನ್ನು ಯಾವತ್ತೋ ಮನಗಂಡಾಗಿದೆ. ಹೀಗಾಗಿ ಅನವಶ್ಯಕ ಹೋಲಿಕೆಯಿಂದ ಮನಸ್ಸಿಗೆ ಬೇಸರವಾಗುತ್ತದೆ ವಿನಃ ಅದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಿದ್ದೂ ನಮಗೆ ಫಿನ್‌ಲ್ಯಾಂಡ್‌ನ ಟ್ರಾಫಿಕ್ ಪೆನಾಲ್ಟಿ ಒಂದು ಕಥೆ ನೆನಪಿಗೆ ಬಂತು. ಅದನ್ನು ನಿಮಗೆ ಹೇಳಿ ವಿರಮಿಸುವೆ. ಅಂದ್ರೆಸ್ ವಿಕ್ಲೊ- ಎನ್ನುವ ವ್ಯಕ್ತಿ ಫಿನ್‌ಲ್ಯಾಂಡ್ ದೇಶದ ಅತಿ ಶ್ರೀಮಂತರ ಪಟ್ಟಿಯಲ್ಲಿ ಕೇಳಿಬರುವ ಹೆಸರು.

ಜೂನ್ 2023ರಂದು ಕಾರು ಡ್ರೈವ್ ಮಾಡುತ್ತಿರುತ್ತಾರೆ. ಅವರು ಹೋಗುತ್ತಿದ್ದ ರಸ್ತೆಯಲ್ಲಿ 50 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಹೋಗಬಾರದು ಎಂದಿರುತ್ತದೆ. ಆತ 82 ಕಿಲೋಮೀಟರ್ ವೇಗದಲ್ಲಿ ಹೋಗುತ್ತಾರೆ. ಅವರಿಗೆ ಬರೋಬ್ಬರಿ 1,21,000 ಸಾವಿರ ಯುರೋ ದಂಡ ಹಾಕಲಾಗು ತ್ತದೆ. ಭಾರತೀಯ ರೂಪಾಯಿಯಲ್ಲಿ ಸರಿಸುಮಾರು ಒಂದು ಕೋಟಿ ಇಪ್ಪತೈದು ಲಕ್ಷ ರೂಪಾಯಿ!

ಇದರ ಜೊತೆಗೆ ಹತ್ತು ದಿನ ಕಾರು ಓಡಿಸದಂತೆ ಲೈಸನ್ಸ್ ರದ್ದು ಮಾಡಲಾಗುತ್ತದೆ. ಫಿನ್ ಲ್ಯಾಂಡ್‌ ನಲ್ಲಿ ಟ್ರಾಫಿಕ್ ಪೆನಾಲ್ಟಿ ಹಾಕುವುದು ಪ್ರೋಗ್ರಸಿವ್ ಇನ್ಕಮ್ ಬೇ ಪೆನಾಲ್ಟಿ ಆಧಾರದ ಮೇಲೆ. ಅಂದರೆ ಇಬ್ಬರು ವ್ಯಕ್ತಿಗಳು ಒಂದೇ ಸಮಯದಲ್ಲಿ ಟ್ರಾಫಿಕ್ ನಿಯಮ ಮುರಿಯುತ್ತಾರೆ ಎಂದುಕೊಳ್ಳಿ. ಒಬ್ಬ ಆಗರ್ಭ ಶ್ರೀಮಂತ ಎಂದುಕೊಳ್ಳಿ, ಇನ್ನೊಬ್ಬ ಮಾಸಿಕ 3 ಸಾವಿರ ಯುರೋ ದುಡಿಯುವ ಸಾಮಾನ್ಯ ಪ್ರಜೆ ಎಂದುಕೊಳ್ಳಿ. ‌

ಶ್ರೀಮಂತ ಸಾವಿರಗಳಲ್ಲಿ ಲಕ್ಷಗಳಲ್ಲಿ ಪೆನಾಲ್ಟಿ ಕಟ್ಟಿದರೆ, ಸಾಮಾನ್ಯ ಪ್ರಜೆ 50 ಅಥವಾ 100 ಯುರೋ ಮಾತ್ರ ಕಟ್ಟುತ್ತಾನೆ. ಇದಲ್ಲವೇ ನಿಜವಾದ ಸಮಾನತೆ? ಉಳಿದಂತೆ ಇಬ್ಬರಿಗೂ ಹತ್ತು ಅಥವಾ ಹದಿನೈದು ದಿನ ಲೈಸೆನ್ಸ್ ರದ್ದಾಗುವುದು ತಪ್ಪಿಸಲಾಗುವುದಿಲ್ಲ. ಬೇಡವೆಂದರೂ ನಮ್ಮಲ್ಲಿ ಸೆಲೆಬ್ರೆಟಿಗಳು ಮಾಡಿರುವ ಅಪಘಾತಗಳು ನೆನಪಿಗೆ ಬಂದವು.

ಓವರ್‌ಸ್ಪೀಡ್ ವಿಷಯ ಪಕ್ಕಕ್ಕಿರಲಿ, ಸಾಮಾನ್ಯ ಮನುಷ್ಯರ ಜೀವ ತೆಗೆದು ಕೂಡ ಇಂದಿಗೂ ರಾಜಾರೋಷ ವಾಗಿ ಓಡಾಡಿಕೊಂಡು, ಇಂಚು ಕರಗದ ಅಹಮಿಕೆಯಲ್ಲಿ ತೇಲಾಡುವುದು ಕಂಡಾಗ ಹೋಲಿಕೆ ಬರದೆ ಇರಲು ಹೇಗೆ ಸಾಧ್ಯ? ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

ತೋರಿಕೆಯ ಮಾತುಗಳಿಂದ ಯಾವುದೇ ಪ್ರಯೋಜನವಿಲ್ಲ. ನಮ್ಮ ಸಮಾಜ ಕೂಡ ನಾಗರಿಕತೆಯ ಉನ್ನತ ಮಟ್ಟಕ್ಕೆ ಏರಬೇಕು ಎನ್ನುವ ಅದಮ್ಯ ಬಯಕೆ ಮಾತ್ರ ಅದನ್ನು ಸಾಕಾರಗೊಳ್ಳಿಸಬಹುದು. ಸ್ವಾರ್ಥದ ಪರಮಾವಧಿ ಮುಟ್ಟುತ್ತಿರುವ ಈ ಸಮಾಜದಲ್ಲಿ ಇಂತಹ ಮಾತುಗಳಿಗೂ ಜಾಗವಿಲ್ಲ ಎನ್ನುವುದರ ಅರಿವಿದ್ದೂ ಇಷ್ಟೆಲ್ಲಾ ಬರೆದಿದ್ದೇನೆ. ಒಂದಷ್ಟು ಜನರ ಮನಸ್ಸಿಗೆ ತಟ್ಟಿದರೂ ಅಲ್ಲಿಗೆ ಇದು ಸಾರ್ಥಕ.

ರಂಗಸ್ವಾಮಿ ಎಂ

View all posts by this author