ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಎಥೆನಾಲ್:‌ ರೈತ ಹಿತದ ದೂರದೃಷ್ಟಿಗೆ ಇಷ್ಟೊಂದು ತಾತ್ಸಾರವೇ !

ಎಥೆನಾಲ್ ಬಳಕೆಗೆ ಬ್ರೆಜಿಲ್ ಹಾಗೂ ಅಮೇರಿಕ ಮಾದರಿ: ಭಾರತದಲ್ಲಿ ಎಥೆನಾಲ್ ಮಿಶ್ರಣದ ಕುರಿತು ಅನುಮಾನಗಳು ವ್ಯಕ್ತವಾಗುತ್ತಿದ್ದರೂ, ಅಮೆರಿಕ ಮತ್ತು ಬ್ರೆಜಿಲ್‌ನಂತಹ ಮುಂದುವರಿದ ರಾಷ್ಟ್ರಗಳು ದಶಕಗಳ ಹಿಂದೆಯೇ ಇದನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ. ಇದು ವಾಹನಗಳಿಗೆ ಸುರಕ್ಷಿತ ಎಂಬುದನ್ನು ಸ್ವತಂತ್ರ ಜಾಗತಿಕ ಅಧ್ಯಯನಗಳು ದೃಢಪಡಿಸಿವೆ.

ಗಂಟಾಘೋಷ

ಮುಂದುವರಿದ ರಾಷ್ಟ್ರಗಳ ಯಶಸ್ವಿ ಉದಾಹರಣೆಗಳು ಪೆಟ್ರೋಲ್‌ನಲ್ಲಿ ಎಥೆನಾಲ್ ಬಳಕೆಯ ಸುರಕ್ಷತೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿವೆ. ರೈತರ ಬದುಕನ್ನು ಹಸನಾಗಿಸುವ ಇಂತಹ ಮಹತ್ವಾಕಾಂಕ್ಷಿ ದೂರದೃಷ್ಟಿಯ ಯೋಜನೆಯ ಬಗ್ಗೆ ವಿಪಕ್ಷಗಳಿಗೆ ಇಷ್ಟೊಂದು ತಾತ್ಸಾರವೇಕೆ? ಎಥೆನಾಲ್ ಖಂಡಿತವಾಗಿಯೂ ದೇಶದ ಭವಿಷ್ಯದ ಇಂಧನವಾಗಿದೆ. ಆದರೆ, ಕೇವಲ ರಾಜಕೀಯ ಲಾಭಕ್ಕಾಗಿ, ಶೇ.30 ಎಥೆನಾಲ್ ಬೆರೆಸಲಾಗಿದೆ ಎಂಬ ಸುಳ್ಳು ಸುದ್ದಿಗಳನ್ನು ಹರಡಿ ಅನ್ನದಾತನ ಆರ್ಥಿಕ ಪ್ರಗತಿಗೆ ಕಲ್ಲು ಹಾಕುತ್ತಿರುವ ಈ ನಡೆ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮತ್ತೊಂದು ದೊಡ್ಡ ಕಳಂಕವಾಗಿ ದಾಖಲಾಗಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ರೈತಪರ ಯೋಜನೆಯೊಂದರ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರವೊಂದು ನಡೆಯುತ್ತಿದೆ. ಪೆಟ್ರೋಲ್‌ನಲ್ಲಿ ಶೇ. 30ರಷ್ಟು ಮಿತಿಮೀರಿದ ಎಥೆನಾಲ್ ಬೆರೆಸಿ ಗ್ರಾಹಕರಿಗೆ ಮೋಸ ಮಾಡಲಾಗು ತ್ತಿದೆ, ಇದರಿಂದ ಮೈಲೇಜ್ ಕುಸಿದು ವಾಹನದ ಎಂಜಿನ್‌ಗಳು ಹಾಳಾಗುತ್ತಿವೆ ಎಂದು ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ.

ರೈತರ ಕಿಸೆಗೆ ನೇರ ಲಾಭ ತಂದುಕೊಡುತ್ತಿರುವ ಈ ಕ್ರಾಂತಿಕಾರಿ ನೀತಿಯನ್ನು ಸಹಿಸಲಾಗದ ವಿಪಕ್ಷಗಳು, ಕೇವಲ ರಾಜಕೀಯ ದುರುದ್ದೇಶದಿಂದ ಇಂತಹ ಆಧಾರರಹಿತ ಆರೋಪಗಳ ಮೂಲಕ ವಾಹನ ಸವಾರರಲ್ಲಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿವೆ. ಆದರೆ ವಾಸ್ತವದಲ್ಲಿ, ತನ್ನ ಇಂಧನ ಅಗತ್ಯದ ಶೇ. 88.5ರಷ್ಟು ಕಚ್ಚಾ ತೈಲಕ್ಕಾಗಿ ಅರಬ್ ರಾಷ್ಟ್ರಗಳತ್ತ ಮುಖಮಾಡುವ ಭಾರತಕ್ಕೆ ಆಮದು ಅವಲಂಬನೆ ತಗ್ಗಿಸಲು ಹಾಗೂ ದೇಶದ ಅನ್ನದಾತರಿಗೆ ಆರ್ಥಿಕ ಬಲ ತುಂಬಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಹೆಜ್ಜೆಯೇ ಈ ‘ಎಥೆನಾಲ್ ಮಿಶ್ರಣ’ ಯೋಜನೆ.

ಇದನ್ನೂ ಓದಿ: Gururaj Gantihole Column: ಕಾಂಗ್ರೆಸ್‌ ನಿಯಂತ್ರಣ ಮೀರಿ ಹಬ್ಬುತ್ತಿದೆ ಬೆಲೆಯೇರಿಕೆ

ಹಾಗಾದರೆ, ವಿಪಕ್ಷಗಳು ಹಬ್ಬಿಸುತ್ತಿರುವ ಈ ‘ಶೇ. 30ರ ಮಿಶ್ರಣ’ದ ಸುದ್ದಿಯ ಹಿಂದಿನ ಅಸಲಿ ಯತ್ತೇನು? ಎಥೆನಾಲ್ ಬಳಕೆಯ ಬಗ್ಗೆ ವಿಜ್ಞಾನ ಹೇಳುವುದೇನು ಹಾಗೂ ಇದು ದೇಶದ ಕೃಷಿ ಆರ್ಥಿಕತೆಯನ್ನು ಹೇಗೆ ಬದಲಾಯಿಸುತ್ತಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.

ಎಥೆನಾಲ್ ಬಳಕೆಗೆ ಬ್ರೆಜಿಲ್ ಹಾಗೂ ಅಮೇರಿಕ ಮಾದರಿ: ಭಾರತದಲ್ಲಿ ಎಥೆನಾಲ್ ಮಿಶ್ರಣದ ಕುರಿತು ಅನುಮಾನಗಳು ವ್ಯಕ್ತವಾಗುತ್ತಿದ್ದರೂ, ಅಮೆರಿಕ ಮತ್ತು ಬ್ರೆಜಿಲ್‌ನಂತಹ ಮುಂದುವರಿದ ರಾಷ್ಟ್ರಗಳು ದಶಕಗಳ ಹಿಂದೆಯೇ ಇದನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ. ಇದು ವಾಹನ ಗಳಿಗೆ ಸುರಕ್ಷಿತ ಎಂಬುದನ್ನು ಸ್ವತಂತ್ರ ಜಾಗತಿಕ ಅಧ್ಯಯನಗಳು ದೃಢಪಡಿಸಿವೆ.

ಎಥೆನಾಲ್ ಬಳಕೆಯಲ್ಲಿ ಬ್ರೆಜಿಲ್ ಜಗತ್ತಿಗೇ ಮಾದರಿ. ಅಲ್ಲಿ ಕನಿಷ್ಠ ಇ-27 (ಶೇ. 27 ಎಥೆನಾಲ್) ಮಿಶ್ರಣ ಕಡ್ಡಾಯವಾಗಿದೆ ಮತ್ತು ಇದನ್ನು ಶೇ. 35ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಬ್ರೆಜಿಲ್‌ನಲ್ಲಿ ಮಾರಾಟವಾಗುವ ಶೇ. 80ಕ್ಕೂ ಹೆಚ್ಚು ಕಾರುಗಳು ‘ಫ್ಲೆಕ್ಸ್‌-ಫ್ಲುಯೆಲ್’ ವಾಹನ ಗಳಾಗಿದ್ದು, ಇವು ಶೇ. 100ರಷ್ಟು ಎಥೆನಾಲ್ ಅಥವಾ ಯಾವುದೇ ಪ್ರಮಾಣದ ಮಿಶ್ರಣದಲ್ಲಿ ಓಡಬಲ್ಲವು. ಅಮೆರಿಕದಲ್ಲಿ ಇ-10 (ಶೇ.10 ಮಿಶ್ರಣ) ದೇಶಾದ್ಯಂತ ಕಡ್ಡಾಯ ಮಾನದಂಡವಾಗಿದೆ.

G Gantihole 1911

ಸರ್ಕಾರಿ ಬೆಂಬಲದೊಂದಿಗೆ ಇ-15 ವೇಗವಾಗಿ ವಿಸ್ತರಿಸುತ್ತಿದ್ದು, ಲಕ್ಷಾಂತರ ಫ್ಲೆಕ್ಸ್‌-ಫ್ಲುಯೆಲ್ ವಾಹನಗಳು ಇ-85 (ಶೇ. 85 ಎಥೆನಾಲ್) ಇಂಧನದಲ್ಲಿ ಚಲಿಸುತ್ತವೆ. ಈ ದೇಶಗಳ ದಶಕಗಳ ಅನುಭವವು, ಸೂಕ್ತ ಎಂಜಿನ್ ವಿನ್ಯಾಸ ಮತ್ತು ಗುಣಮಟ್ಟ ನಿಯಂತ್ರಣವಿದ್ದರೆ ಎಥೆನಾಲ್ ಮಿಶ್ರಣವು ಸಂಪೂರ್ಣವಾಗಿ ಸುರಕ್ಷಿತ ಎಂಬುದನ್ನು ಸಾಬೀತುಪಡಿಸುತ್ತದೆ. ‌

ಕಾರ್ಯಕ್ಷಮತೆ ಮತ್ತು ಮೈಲೇಜ್: ಎಥೆನಾಲ್ (Bioethanol) ಅನ್ನು ಪ್ರಧಾನವಾಗಿ ಕಬ್ಬು, ಮೆಕ್ಕೆಜೋಳ ಮತ್ತು ಹಾನಿಗೊಳಗಾದ ಅಕ್ಕಿಯಿಂದ ತಯಾರಿಸಲಾಗುತ್ತದೆ. ಪ್ರಸ್ತುತ ಭಾರತದಲ್ಲಿ ‘ಇ-20’ (ಶೇ.20 ಎಥೆನಾಲ್ ಮತ್ತು ಶೇ.80 ಪೆಟ್ರೋಲ್) ಮಿಶ್ರಣವನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ವಿರೋಧ ಪಕ್ಷಗಳು ಮತ್ತು ಕೆಲವು ಗ್ರಾಹಕರು ಇ-20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಶೇ.30ರಷ್ಟು ಕುಸಿಯುತ್ತದೆ ಮತ್ತು ಎಂಜಿನ್‌ಗಳು ಹಾಳಾಗುತ್ತವೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ವೈಜ್ಞಾನಿಕ ಸತ್ಯವೇ ಬೇರೆ. ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯವು (Calorific Value) ಪೆಟ್ರೋಲ್‌ಗಿಂತ ಶೇ.30ರಷ್ಟು ಕಡಿಮೆ ಇರುವುದು ನಿಜ. ಆದರೆ ಇದರರ್ಥ ವಾಹನದ ಮೈಲೇಜ್ ಶೇ.30ರಷ್ಟು ಕುಸಿಯುತ್ತದೆ ಎಂದಲ್ಲ.

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಮತ್ತು SIAM ನಂತಹ ಸ್ವತಂತ್ರ ಸಂಸ್ಥೆಗಳ ಅಧ್ಯಯನಗಳ ಪ್ರಕಾರ, ಇ-20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ (Calibrated) ಹೊಸ ವಾಹನಗಳಲ್ಲಿ ಮೈಲೇಜ್ ಕುಸಿತವು ಕೇವಲ ಶೇ. 1ರಿಂದ 2ರಷ್ಟು ಮಾತ್ರ ವಿರುತ್ತದೆ. ಹಳೆಯ, ಇ-10 ಅಥವಾ ಇಥೆನಾಲ್‌ಗೆ ಹೊಂದಿಕೊಳ್ಳದ (Uncalibrated) ವಾಹನಗಳಲ್ಲಿ ಈ ಕುಸಿತವು ಶೇ. 3ರಿಂದ 6ರಷ್ಟು ಇರಬಹುದಷ್ಟೆ.

ಜೊತೆಗೆ, ಎಥೆನಾಲ್ ಪೆಟ್ರೋಲ್‌ಗಿಂತ ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿರುವುದರಿಂದ, ವಾಹನದ ಪಿಕ್-ಅಪ್ ಮತ್ತು ಎಂಜಿನ್‌ನ ಸುಗಮ ಕಾರ್ಯನಿರ್ವಹಣೆಯನ್ನು (Engine knocking ತಡೆಗಟ್ಟುವ ಮೂಲಕ) ಇದು ಸುಧಾರಿಸುತ್ತದೆ. ಆಕ್ಟೇನ್ ರೇಟಿಂಗ್ ಎಂದರೆ ವಾಹನದ ಎಂಜಿನ್‌ನ ಒಳಗೆ ಉರಿಯುವ ಇಂಧನವು ಎಂಜಿನ್‌ನ ವಿಪರೀತ ಒತ್ತಡ ಮತ್ತು ಶಾಖವನ್ನು ಎಷ್ಟು ಸಮರ್ಥ ವಾಗಿ ತಡೆದುಕೊಳ್ಳಬಲ್ಲದು ಎಂಬುದನ್ನು ಅಳೆಯುವ ವೈಜ್ಞಾನಿಕ ಮಾಪನವಾಗಿದೆ.

ಪೆಟ್ರೋಲ್ ಎಂಜಿನ್‌ಗಳಲ್ಲಿ, ಇಂಧನ ಮತ್ತು ಗಾಳಿಯ ಮಿಶ್ರಣವು ‘ಸ್ಪಾರ್ಕ್ ಪ್ಲಗ್’ ನೀಡುವ ಕಿಡಿಯಿಂದ ಮಾತ್ರ ನಿಖರವಾದ ಸಮಯಕ್ಕೆ ಹೊತ್ತಿಕೊಂಡು ಸರಾಗವಾಗಿ ಉರಿಯಬೇಕು. ಆದರೆ, ಇಂಧನದ ಆಕ್ಟೇನ್ ರೇಟಿಂಗ್ ಕಡಿಮೆಯಿದ್ದರೆ, ಆ ಮಿಶ್ರಣವು ಸ್ಪಾರ್ಕ್ ಪ್ಲಗ್ ಕಿಡಿ ಹೊಮ್ಮಿಸುವ ಮುನ್ನವೇ ಎಂಜಿನ್‌ನ ಒಳಗಿನ ಉಷ್ಣಾಂಶಕ್ಕೆ ಸಿಲುಕಿ ತಾನಾಗಿಯೇ ಅಕಾಲಿಕವಾಗಿ ಸಿಡಿಯುತ್ತದೆ. ಹೀಗೆ ತಪ್ಪಾದ ಸಮಯದಲ್ಲಿ ಆಗುವ ಈ ಸಣ್ಣ ಸ್ಫೋಟವು ಎಂಜಿನ್‌ನೊಳಗೆ ಟಕ್-ಟಕ್ ಎಂಬ ಶಬ್ದವನ್ನು ಉಂಟುಮಾಡುವುದಲ್ಲದೆ, ಪಿಸ್ಟನ್ ಗಳ ಚಲನೆಗೆ ಅಡ್ಡಿಪಡಿಸುತ್ತದೆ. ಇದನ್ನೇ ತಾಂತ್ರಿಕ ಭಾಷೆಯಲ್ಲಿ ‘ಎಂಜಿನ್ ನಾಕಿಂಗ್’ ಎಂದು ಕರೆಯಲಾಗುತ್ತದೆ.

ನಿರಂತರವಾದ ನಾಕಿಂಗ್‌ನಿಂದ ಎಂಜಿನ್ ಬಿಡಿಭಾಗಗಳು ಹಾಳಾಗುವುದರ ಜೊತೆಗೆ ವಾಹನದ ಪಿಕ್-ಅಪ್ ಗಣನೀಯವಾಗಿ ಕುಸಿಯುತ್ತದೆ. ಈ ಸಮಸ್ಯೆಗೆ ಎಥೆನಾಲ್ ಅತ್ಯುತ್ತಮ ಪರಿಹಾರವನ್ನು ಒದಗಿಸುತ್ತದೆ. ಏಕೆಂದರೆ ಸಾಮಾನ್ಯ ಪೆಟ್ರೋಲ್‌ನ ಆಕ್ಟೇನ್ ರೇಟಿಂಗ್ ಸುಮಾರು 87ರಿಂದ 91ರಷ್ಟಿದ್ದರೆ, ಶುದ್ಧ ಎಥೆನಾಲ್‌ನ ಆಕ್ಟೇನ್ ರೇಟಿಂಗ್ 109ರಿಂದ 113ರವರೆಗೂ ಇರುತ್ತದೆ.

ಪೆಟ್ರೋಲ್ ಜೊತೆ ಎಥೆನಾಲ್ ಅನ್ನು ಬೆರೆಸಿದಾಗ ಆ ಒಟ್ಟು ಮಿಶ್ರಿತ ಇಂಧನದ ಆಕ್ಟೇನ್ ರೇಟಿಂಗ್ ಸಹಜವಾಗಿಯೇ ಏರಿಕೆಯಾಗುತ್ತದೆ. ಈ ಹೆಚ್ಚಿನ ಆಕ್ಟೇನ್ ರೇಟಿಂಗ್‌ನಿಂದಾಗಿ, ಎಂಜಿನ್‌ನೊಳಗೆ ಇಂಧನವು ಅಕಾಲಿಕವಾಗಿ ಸ್ಫೋಟಗೊಳ್ಳುವ ಪ್ರಕ್ರಿಯೆ ಸಂಪೂರ್ಣವಾಗಿ ನಿಂತುಹೋಗುತ್ತದೆ ಮತ್ತು ಇಂಧನವು ನಿಖರವಾದ ಸಮಯಕ್ಕೆ ಸಂಪೂರ್ಣವಾಗಿ ದಹನವಾಗುತ್ತದೆ.

ಶೇ.30ರಷ್ಟು ಎಥೆನಾಲ್ ಮಿಶ್ರಣದ ಆರೋಪ; ವಾಸ್ತವವೇನು?: ಇತ್ತೀಚೆಗೆ (ನವೆಂಬರ್ 2026), ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದ್ದು, ಪೆಟ್ರೋಲ್‌ನಲ್ಲಿ ಶೇ. 26ರಿಂದ 31ರಷ್ಟು ಎಥೆನಾಲ್ ಬೆರೆಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಹಾಗೂ ಕೆಲವು ಸಾಮಾಜಿಕ ಜಾಲತಾಣದ ಹೋರಾಟಗಾರರು ಗಂಭೀರ ಆರೋಪ ಮಾಡಿದ್ದರು. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ತೈಲ ಮಾರಾಟ ಕಂಪನಿಗಳು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿವೆ. ‌

27 ರಾಜ್ಯಗಳಲ್ಲಿ ಸಂಗ್ರಹಿಸಿದ 893 ಸ್ಯಾಂಪಲ್‌ಗಳನ್ನು (ಕರ್ನಾಟಕದ 56 ಸ್ಯಾಂಪಲ್ ಗಳು ಸೇರಿ) ಪರೀಕ್ಷಿಸಿದಾಗ ಎಲ್ಲದರಲ್ಲೂ ಎಥೆನಾಲ್ ಪ್ರಮಾಣವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿಗದಿಪಡಿಸಿದ ಶೇ.19-20ರ ಮಿತಿಯ ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಪೆಟ್ರೋಲ್‌ನಲ್ಲಿ ರಹಸ್ಯವಾಗಿ ಶೇ.30ರಷ್ಟು ಎಥೆನಾಲ್ ಬೆರೆಸುವುದು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಏಕೆ ಅಸಾಧ್ಯ ಎಂಬುದಕ್ಕೆ ಈ ಕೆಳಗಿನ ವೈಜ್ಞಾನಿಕ ಕಾರಣಗಳಿವೆ:

ಸಾಂದ್ರತೆಯ ವಿಜ್ಞಾನ (Physics of Density): ಎಥೆನಾಲ್ ನ ಸಾಂದ್ರತೆಯು ಪೆಟ್ರೋಲ್‌ಗಿಂತ ಹೆಚ್ಚಿರುತ್ತದೆ (ಎಥೆನಾಲ್ ಹೆಚ್ಚು ಭಾರ). ಹೀಗಾಗಿ, ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾದಷ್ಟೂ ಇಂಧನದ ಒಟ್ಟು ಸಾಂದ್ರತೆಯು ಹೆಚ್ಚಾಗಬೇಕು. ಆದರೆ ಆರೋಪ ಮಾಡಿದವರು ತಾವು ಪರೀಕ್ಷಿಸಿದ ಇಂಧನದ ಸಾಂದ್ರತೆಯು ಕೇವಲ 0.742 - 0.49 g/cc ಇದೆ ಎಂದು ಹೇಳಿದ್ದರು. ವೈಜ್ಞಾನಿಕವಾಗಿ ಇ-20 ಇಂಧನದ ಸಾಂದ್ರತೆಯೇ 0.752ರಿಂದ 0.760 g/cc ಇರುತ್ತದೆ. ಕಡಿಮೆ ಸಾಂದ್ರತೆ ಇರುವ ಇಂಧನದಲ್ಲಿ ಶೇ.30 ಎಥೆನಾಲ್ ಇರಲು ಭೌತಶಾಸದ ನಿಯಮಗಳ ಪ್ರಕಾರವೇ ಸಾಧ್ಯವಿಲ್ಲ.

ಆಟೊಮೇಟೆಡ್ ಬ್ಲೆಂಡಿಂಗ್: ಪ್ರಸ್ತುತ ತೈಲ ಸಂಸ್ಕರಣಾಗಾರಗಳಲ್ಲಿ ಎಥೆನಾಲ್ ಮಿಶ್ರಣವನ್ನು ಗಣಕೀಕೃತ ಮತ್ತು ಸಂಪೂರ್ಣ ಯಾಂತ್ರೀಕೃತ ವ್ಯವಸ್ಥೆಯ ಮೂಲಕ ಮಾಡಲಾಗುತ್ತದೆ. ಮನುಷ್ಯರು ಕೈಯಾರೆ ಹೆಚ್ಚು-ಕಡಿಮೆ ಮಾಡಲು ಇಲ್ಲಿ ಅವಕಾಶವೇ ಇರುವುದಿಲ್ಲ.

ಆರ್ಥಿಕ ತರ್ಕ: ತೈಲ ಕಂಪನಿಗಳು ಎಥೆನಾಲ್ ಅನ್ನು ಮಾರುಕಟ್ಟೆಯಿಂದ ದುಬಾರಿ ಬೆಲೆಗೆ ಖರೀದಿಸುತ್ತವೆ. ಸರ್ಕಾರ ನಿಗದಿಪಡಿಸಿದ ಶೇ.20ರ ಮಿತಿಯನ್ನು ಮೀರಿ, ಹೆಚ್ಚುವರಿಯಾಗಿ ಎಥೆನಾಲ್ ಬೆರೆಸಿದರೆ, ತೈಲ ಕಂಪನಿಗಳ ಖರೀದಿ ವೆಚ್ಚ ವಿಪರೀತವಾಗಿ ಹೆಚ್ಚಾಗುತ್ತದೆ. ಇದು ಕಂಪನಿಗಳಿಗೆ ವಾಣಿಜ್ಯಿಕ ನಷ್ಟವನ್ನು ತರುತ್ತದೆಯೇ ಹೊರತು ಲಾಭವನ್ನಲ್ಲ. ಹೀಗಾಗಿ ಅನಿಯಂತ್ರಿತ ಮಿಶ್ರಣ ಅಸಾಧ್ಯ.

ಹಾಗಾದರೆ ಶೇ.30ರ ಬಿಐಎಸ್ ಮಾನದಂಡಗಳೇಕೆ ಬಂದಿವೆ? 2026ರ ಮೇ ತಿಂಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇ-22, ಇ-27 ಮತ್ತು ಇ-30 (ಶೇ.30 ಮಿಶ್ರಣ) ಇಂಧನಗಳಿಗೆ ಹೊಸ ಮಾನದಂಡಗಳನ್ನು ಅಧಿಸೂಚನೆ ಹೊರಡಿಸಿದೆ. ಇದರರ್ಥ, ಈಗಲೇ ಎಲ್ಲಾ ಪೆಟ್ರೋಲ್‌ ನಲ್ಲಿ ಶೇ. 30ರಷ್ಟು ಬೆರೆಸಲಾಗುತ್ತಿದೆ ಎಂದಲ್ಲ.

ಭವಿಷ್ಯದಲ್ಲಿ ವಾಹನ ತಯಾರಕರು ಬ್ರೆಜಿಲ್ ಮಾದರಿಯ ‘ಫ್ಲೆಕ್ಸ್‌-ಫ್ಲುಯೆಲ್’ ಎಂಜಿನ್ ಗಳನ್ನು ತಯಾರಿಸಿದಾಗ, ಆ ವಿಶೇಷ ಎಂಜಿನ್‌ಗಳಿಗೆ ಒದಗಿಸಲು ಗುಣಮಟ್ಟದ ಮಾನದಂಡಗಳನ್ನು ಈಗಲೇ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ ಅಷ್ಟೆ. ಗುಣಮಟ್ಟದ ನಿಯಂತ್ರಣಕ್ಕೆ ಕಟ್ಟುನಿಟ್ಟಾದ BIS ನಿಯಮಾವಳಿಗಳಿವೆ.

ರೈತರಿಗೆ ಆರ್ಥಿಕ ಬಲ ಹಾಗೂ ಪೆಟ್ರೋಲಿಯಂ ಆಮದು ಅವಲಂಬನೆ ಇಳಿಕೆ: ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಕೇವಲ ಇಂಧನ ನೀತಿಯಲ್ಲ, ಇದು ಭಾರತದ ಕೃಷಿ ವಲಯದ ಆರ್ಥಿಕತೆ ಯನ್ನು ಬದಲಾಯಿಸುತ್ತಿರುವ ಕ್ರಾಂತಿಯಾಗಿದೆ. ಶೇ. 88.5ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, 2014-15ರಿಂದ ಈವರೆಗೆ (2026ರ ಹೊತ್ತಿಗೆ) ಎಥೆನಾಲ್ ಮಿಶ್ರಣ ದಿಂದಾಗಿ ಬರೋಬ್ಬರಿ 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲದ ಬಳಕೆಯನ್ನು ತಗ್ಗಿಸಿದೆ.

ಇದರಿಂದಾಗಿ ದೇಶದ ಅಮೂಲ್ಯವಾದ 1.97 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಈ ಹಿಂದೆ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ತಮಗೆ ಬರಬೇಕಾದ ಬಾಕಿ ಹಣಕ್ಕಾಗಿ ವರ್ಷಗಟ್ಟಲೆ ಕಾಯಬೇಕಿತ್ತು, ಬೀದಿಗಿಳಿದು ಹೋರಾಡಬೇಕಿತ್ತು. ಆದರೆ ಎಥೆನಾಲ್ ನೀತಿಯಿಂದಾಗಿ ಕಾರ್ಖಾನೆಗಳಿಗೆ ವರ್ಷಪೂರ್ತಿ ಆದಾಯ ಬರಲು ಶುರುವಾಯಿತು.

ಪರಿಣಾಮವಾಗಿ, ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿದೆ. ಇದುವರೆಗೆ 1.66 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ನೇರವಾಗಿ ಕೃಷಿ ವಲಯಕ್ಕೆ (ರೈತರಿಗೆ) ಪಾವತಿಸಲಾಗಿದೆ. ಕೇವಲ ಕಬ್ಬು ಮಾತ್ರವಲ್ಲದೆ, ಹೆಚ್ಚುವರಿ ಮೆಕ್ಕೆಜೋಳ ಮತ್ತು ಹಾಳಾದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸುತ್ತಿರುವುದರಿಂದ ಭತ್ತ ಮತ್ತು ಜೋಳ ಬೆಳೆಯುವ ರೈತರಿಗೂ ಹೊಸ ಮತ್ತು ಬೃಹತ್ ಮಾರುಕಟ್ಟೆ ಸೃಷ್ಟಿಯಾಗಿದೆ.

ಎಥೆನಾಲ್ ಬಳಕೆಯಿಂದ ನವೀಕರಿಸಲಾಗದ ಇಂಧನದ ದಹನ ಕಡಿಮೆಯಾಗಿ, ಈವರೆಗೆ ಸುಮಾರು 952 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ (CO) ಹೊರಸೂಸುವಿಕೆಯನ್ನು ತಡೆಯಲಾಗಿದೆ. ಪೆಟ್ರೋಲ್‌ನಲ್ಲಿ ಶೇ.30ರಷ್ಟು ರಹಸ್ಯ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಗಳು ಕೇವಲ ಭೌತಶಾಸದ ನಿಯಮಗಳಿಗೆ ಮಾತ್ರವಲ್ಲ, ಮಾರುಕಟ್ಟೆಯ ಆರ್ಥಿಕ ತರ್ಕಕ್ಕೂ ಸಂಪೂರ್ಣ ವಿರುದ್ಧವಾಗಿವೆ.

ಸ್ವತಂತ್ರ ಅಧ್ಯಯನಗಳು ಮತ್ತು ಮುಂದುವರಿದ ರಾಷ್ಟ್ರಗಳ ಯಶಸ್ವಿ ಉದಾಹರಣೆಗಳು ಎಥೆನಾಲ್ ಬಳಕೆಯ ಸುರಕ್ಷತೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿವೆ. ಹೀಗಿರುವಾಗ, ರೈತರ ಬದುಕನ್ನು ಹಸನಾಗಿಸುವ ಇಂತಹ ಮಹತ್ವಾಕಾಂಕ್ಷಿ ದೂರದೃಷ್ಟಿಯ ಯೋಜನೆಯ ಬಗ್ಗೆ ವಿಪಕ್ಷಗಳಿಗೆ ಇಷ್ಟೊಂದು ತಾತ್ಸಾರವೇಕೆ? ಎಥೆನಾಲ್ ಖಂಡಿತವಾಗಿಯೂ ದೇಶದ ಭವಿಷ್ಯದ ಇಂಧನವಾಗಿದೆ; ಆದರೆ, ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಅನ್ನದಾತನ ಆರ್ಥಿಕ ಪ್ರಗತಿಗೆ ಕಲ್ಲು ಹಾಕುತ್ತಿರುವ ಈ ನಡೆ, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮತ್ತೊಂದು ದೊಡ್ಡ ಕಳಂಕವಾಗಿ ದಾಖಲಾಗಲಿದೆ.

ಗುರುರಾಜ್ ಗಂಟಿಹೊಳೆ

View all posts by this author