ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಸತ್ಯ ಅಪ್ರಿಯವಾದರೂ, ಔಷಧದಂತೆ

ಇಂದಿನ ವಾಸ್ತವ ಬದುಕಿನಲ್ಲೂ ನಾವು ಇದನ್ನೇ ಕಾಣುತ್ತಿದ್ದೇವೆ. ತಂದೆ ತನ್ನ ಮಗನ ಅನ್ಯಾಯ ಗಳನ್ನು ಪ್ರೀತಿಯ ಹೆಸರಿನಲ್ಲಿ ಸಮರ್ಥಿಸುತ್ತಾನೆ; ಸ್ನೇಹಿತ ದುಶ್ಚಟಗಳಿಗೆ ದಾಸನಾಗುತ್ತಿದ್ದರೂ ‘ಸ್ನೇಹ ಕೆಡಬಾರದು’ ಎಂದು ಸುಮ್ಮನಿರುತ್ತೇವೆ; ಸಂಗಾತಿಯ ತಪ್ಪುಗಳನ್ನು ಮುಚ್ಚಿಟ್ಟು ಬದುಕು ಸಾಗಿಸಲು ನೋಡುತ್ತೇವೆ; ಯಾರಾದರೂ ನಮ್ಮ ಲೋಪಗಳನ್ನು ಎತ್ತಿ ತೋರಿಸಿದರೆ ‘ಅವರು ನನ್ನ ಏಳಿಗೆಯನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆ’ ಎಂದು ದೂರವಿಡುತ್ತೇವೆ.

ಒಂದೊಳ್ಳೆ ಮಾತು

ರಾಮಾಯಣದಲ್ಲಿ ರಾವಣನ ಆಸ್ಥಾನದ ಪ್ರಸಂಗವಿದು. ಸೀತೆಯನ್ನು ಅಪಹರಿಸಿ ತಂದ ರಾವಣನಿಗೆ ಇಡೀ ಸಭೆ ಜಯಘೋಷ ಹಾಕುತ್ತಿತ್ತು. ನೀನು ತ್ರಿಲೋಕ ವಿಜಯಿ, ದೇವತೆಗಳನ್ನೇ ನಡುಗಿಸಿದವನು, ಈ ಮಾನವ ರಾಮ ನಿನಗೊಂದು ಲೆಕ್ಕವೇ? ಎಂದು ಮಂತ್ರಿಗಳು, ಸೇನಾ ಪತಿಗಳು ಹೊಗಳುಭಟ್ಟ ರಂತೆ ನುಡಿಯುತ್ತಿದ್ದರು. ಆ ಸುಳ್ಳು ಹೊಗಳಿಕೆಯೇ ರಾವಣನ ಸರ್ವನಾಶಕ್ಕೆ ಅಡಿಪಾಯವಾಯಿತು.

ಆದರೆ, ಅದೇ ಸಭೆಯಲ್ಲಿ ಒಬ್ಬ ವ್ಯಕ್ತಿ ಧೈರ್ಯದಿಂದ ಎದ್ದು ನಿಂತ- ಅವನೇ ರಾವಣನ ತಮ್ಮ ವಿಭೀಷಣ. ಆತ ರಾವಣನ ಕಾಲಿಗೆ ಬಿದ್ದು ಒಂದು ಕಟು ಸತ್ಯವನ್ನು ಹೇಳಿದ: ಸುಲಭಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ | ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

ರಾಜನ್, ಮನಸ್ಸಿಗೆ ಇಷ್ಟವಾಗುವ ಸಿಹಿ ಮಾತುಗಳನ್ನು ಹೇಳುವ ಜನ ಲೋಕದಲ್ಲಿ ಹೇರಳವಾಗಿ ಸಿಗುತ್ತಾರೆ. ಆದರೆ ಕೇಳಲು ಕಹಿಯಾದರೂ, ಪರಿಣಾಮದಲ್ಲಿ ಹಿತವನ್ನುಂಟುಮಾಡುವ ಸತ್ಯದ ಮಾತನ್ನು ಹೇಳುವವರೂ ವಿರಳ, ಅದನ್ನು ಶಾಂತವಾಗಿ ಕೇಳಿಸಿಕೊಳ್ಳುವವರೂ ವಿರಳ. ಪರಸೀ ವ್ಯಾಮೋಹ ಅಧರ್ಮ, ಅದು ಇಡೀ ಲಂಕೆಯನ್ನೇ ಸುಟ್ಟು ಬೂದಿ ಮಾಡುತ್ತದೆ ಎಂದು ವಿಭೀಷಣ ನೇರವಾಗಿ ಎಚ್ಚರಿಸಿದ.

ಇದನ್ನೂ ಓದಿ: Roopa Gururaj Column: ಸಾಯುವೆನೆಂಬ ಎಂಬ ಮಾತು ಬರದಿರಲಿ ನಾಲಿಗೆಯಲ್ಲಿ

ರಾವಣನಿಗೆ ಸತ್ಯವನ್ನು ಒಪ್ಪಿಕೊಳ್ಳುವ ವಿವೇಕವಿರಲಿಲ್ಲ; ತನ್ನ ಅಹಂಕಾರದ ಮುಂದೆ ಸತ್ಯ ಕಹಿಯಾಗಿ ಕಂಡಿತು. ವಿಭೀಷಣನನ್ನು ಕಾಲಿನಿಂದ ಒದ್ದು ಸಭೆಯಿಂದ ಹೊರಹಾಕಿದ. ರಾವಣ ಕಳೆದುಕೊಂಡದ್ದು ಕೇವಲ ಒಬ್ಬ ತಮ್ಮನನ್ನಲ್ಲ; ಬದಲಿಗೆ ತನ್ನ ವಂಶವನ್ನೇ ರಕ್ಷಿಸಬಲ್ಲ ಏಕೈಕ ಸದ್ಬುದ್ಧಿಯನ್ನು. ಮಹಾಭಾರತದಲ್ಲಿ ವಿದುರನ ಮಾತು ಕೇಳದ ಧೃತರಾಷ್ಟ್ರ ಇಡೀ ಸಾಮ್ರಾಜ್ಯ ವನ್ನೇ ಕಳೆದುಕೊಂಡಂತೆ, ರಾವಣ ಸತ್ಯವನ್ನು ನಿರ್ಲಕ್ಷಿಸಿ ತನ್ನ ಇಡೀ ಕುಲವನ್ನೇ ನಾಶ ಮಾಡಿಕೊಂಡ.

ಕಹಿ ಸತ್ಯವೇ ಬದುಕಿನ ದಿವ್ಯೌಷಧ: ಒಬ್ಬ ಮನುಷ್ಯನನ್ನು ಕಳೆದುಕೊಳ್ಳುವುದು ಆತ ನಮ್ಮನ್ನು ಅಗಲಿ ಹೋದಾಗ ಅಲ್ಲ; ಬದಲಿಗೆ ನಾವು ಆತನ ಮಾತುಗಳನ್ನು ಕೇಳುವುದನ್ನೇ ನಿಲ್ಲಿಸಿದಾಗ. ಬದುಕಿನಲ್ಲಿ ಸತ್ಯ ಕಹಿಯಾಗಿರುತ್ತದೆ, ಸುಳ್ಳು ತತ್ಕಾಲಕ್ಕೆ ಸಿಹಿಯಾಗಿರುತ್ತದೆ. ಆದರೆ ಆ ತಾತ್ಕಾಲಿಕ ಸಿಹಿಗೆ ಮರುಳಾಗಿ, ಸತ್ಯದ ಕಹಿಯನ್ನು ನಿರ್ಲಕ್ಷಿಸಿದರೆ ಎದುರಾಗುವ ಅನಾಹುತ ಕಲ್ಪನೆಗೂ ಮೀರಿದ್ದು.

ಇಂದಿನ ವಾಸ್ತವ ಬದುಕಿನಲ್ಲೂ ನಾವು ಇದನ್ನೇ ಕಾಣುತ್ತಿದ್ದೇವೆ. ತಂದೆ ತನ್ನ ಮಗನ ಅನ್ಯಾಯ ಗಳನ್ನು ಪ್ರೀತಿಯ ಹೆಸರಿನಲ್ಲಿ ಸಮರ್ಥಿಸುತ್ತಾನೆ; ಸ್ನೇಹಿತ ದುಶ್ಚಟಗಳಿಗೆ ದಾಸನಾಗುತ್ತಿದ್ದರೂ ‘ಸ್ನೇಹ ಕೆಡಬಾರದು’ ಎಂದು ಸುಮ್ಮನಿರುತ್ತೇವೆ; ಸಂಗಾತಿಯ ತಪ್ಪುಗಳನ್ನು ಮುಚ್ಚಿಟ್ಟು ಬದುಕು ಸಾಗಿಸಲು ನೋಡುತ್ತೇವೆ; ಯಾರಾದರೂ ನಮ್ಮ ಲೋಪಗಳನ್ನು ಎತ್ತಿ ತೋರಿಸಿದರೆ ‘ಅವರು ನನ್ನ ಏಳಿಗೆಯನ್ನು ಸಹಿಸದೆ ಹೀಗೆ ಹೇಳುತ್ತಿದ್ದಾರೆ’ ಎಂದು ದೂರವಿಡುತ್ತೇವೆ. ಅಂಧ ಮಮತೆ ಕಣ್ಣು ಮುಚ್ಚಿಸಿದಾಗ ಅಧರ್ಮವೂ ಧರ್ಮದಂತೆ ಭಾಸವಾಗುತ್ತದೆ.

ನಮಗೆ ಬೇಕಾಗಿರುವುದು ನಮ್ಮ ತಪ್ಪುಗಳಿಗೂ ಚಪ್ಪಾಳೆ ತಟ್ಟುವ ಜನರಲ್ಲ. ನಮ್ಮ ತಪ್ಪನ್ನು ತಿದ್ದಿ, ನಮ್ಮ ಮುಖದ ಮೇಲೆಯೇ ನೇರವಾಗಿ ಸತ್ಯವನ್ನು ಹೇಳುವ ಒಬ್ಬ ಹಿತೈಷಿ. ಕಹಿ ಮಾತ್ರೆಯನ್ನು ಉಗಿಯದೆ ನುಂಗಿದಾಗ ರೋಗ ವಾಸಿಯಾಗುವಂತೆ, ಹಿತೈಷಿಯ ಕಹಿ ಮಾತನ್ನು ಸ್ವೀಕರಿಸಿದಾಗ ನಮ್ಮ ಬದುಕು ಸರಿಹಾದಿಗೆ ಬರುತ್ತದೆ. ಸುಳ್ಳು ಹೊಗಳಿಕೆಯ ಜೇನು ಹನಿ ಕ್ಷಣಿಕ ಆನಂದ ತರಬಹುದು, ಆದರೆ ಸತ್ಯದ ಕಹಿ ಕಷಾಯವೇ ಜೀವನವನ್ನು ಮಹಾ ದುರಂತಗಳಿಂದ ರಕ್ಷಿಸುತ್ತದೆ. ನಮ್ಮ ಸುತ್ತಲೂ ಸತ್ಯವನ್ನು ನಿರ್ಭಯವಾಗಿ ಹೇಳುವ ಕನಿಷ್ಠ ಒಬ್ಬ ವ್ಯಕ್ತಿಗೆ ಜಾಗವಿರಲಿ. ಅವರ ಮಾತು ಕೆಲವೊಮ್ಮೆ ನಮಗೆ ಅಸಹನೀಯವೆನಿಸಿದರೂ ಸಮಾಧಾನ ದಿಂದ ಯೋಚಿಸಿದಾಗ ಆ ಮಾತಿನ ಹಿಂದಿನ ಮರ್ಮದ ಅರಿವು ನಮಗಾಗುತ್ತದೆ.

ಹೊಗಳಿ ಹೇಳುವವರು ಹಾಳಾಗಲಿಕೆ ಹೇಳುತ್ತಾರೆ, ಉಗಿದು ಹೇಳುವವರು ಉದ್ಧಾರವಾಗಲು ಹೇಳುತ್ತಾರೆ ಎಂದು ನಮ್ಮ ಹಿಂದಿನವರು ಗಾದೆಯನ್ನೇ ಮಾಡಿದ್ದಾರೆ. ಪ್ರತಿ ಬೈಗುಳದ ಹಿಂದೆ ಸಿಟ್ಟಿರು ವುದಿಲ್ಲ, ನಮ್ಮನ್ನು ಚಿಕ್ಕವರಾಗಿಸುವ ಉದ್ದೇಶವಿರುವುದಿಲ್ಲ. ಆದ್ದರಿಂದ ಯಾರು ನಮ್ಮೊಡನೆ ಏಕೆ ಕಹಿಯಾಗಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ಸಮಾಧಾನದಿಂದ ಅರಿತು ಕೊಂಡಾಗ ಬದುಕಲ್ಲಿ ಸರಿದಾರಿಯಲ್ಲಿ ನಡೆಯುವ ದಾರಿದೀಪಗಳನ್ನ ಜೊತೆಯ ಇರಿಸಿಕೊಂಡ ಹಾಗಾಗುತ್ತದೆ. ಇಂತಹವರು ನಮ್ಮ ಸುತ್ತಲೂ ಇದ್ದರೆ ಖಂಡಿತ ಮೈ ಮರೆಯದಂತೆ ನಮ್ಮ ಬೆಳವಣಿಗೆಗೆ ಕಾರಣರಾಗುತ್ತಾರೆ.

ರೂಪಾ ಗುರುರಾಜ್

View all posts by this author