ವಿಶ್ವರಂಗ
ನಾವು ಸಮಯದ ಮೇಲೆ ನಿಯಂತ್ರಣ ತೆಗೆದುಕೊಳ್ಳದೆ ಹೋದರೆ ನಮ್ಮ ಬದುಕು ಸೂತ್ರ ಕಿತ್ತ ಗಾಳಿಪಟದಂತೆ ಲಾಗ ಹೊಡೆಯಲು ಶುರುವಾಗುತ್ತದೆ. ನಮ್ಮ ಮೌಲ್ಯ ನಾವು ಅರಿತು ಕೊಳ್ಳಬೇಕು, ಆಗ ಸಮಯದ ಮೌಲ್ಯ ತಿಳಿಯುತ್ತದೆ. ಎಲ್ಲಿಯವರೆಗೆ ನಮಗೆ ಸಮಯದ ಮೌಲ್ಯ ತಿಳಿಯುವುದಿಲ್ಲ, ಅಲ್ಲಿಯವರೆಗೆ ಸಮಯದಿಂದ ನಾವೇನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಬಹಳ ಚೆನ್ನಾಗಿ ಗೊತ್ತಿರುತ್ತದೆ.
ಭಾನುವಾರ ಬೆಳಿಗ್ಗೆ ಎಂದಿನಂತೆ ಎದ್ದು ಬೆಳಗಿನ ವಾಕ್ ಹೊರಟಿದ್ದೆ. ಮನಸ್ಸಿನಲ್ಲಿ ವಿಶ್ವವಾಣಿಯ ಅಂಕಣ ಬರಹಕ್ಕೆ ಈ ವಾರ ಯಾವ ವಿಚಾರ ಬರೆಯುವುದು ಎನ್ನುವು ದನ್ನು ಯೋಚಿಸುತ್ತಿದ್ದೆ. ಅಂಕಣ ಬರಹ ಎನ್ನುವುದು ಒಂದು ರೀತಿಯ ತಪಸ್ಸು ಇದ್ದಹಾಗೆ.
ವಾರ ಎನ್ನುವುದು ಚಿಟಿಕೆ ಹೊಡೆಯುವಷ್ಟರಲ್ಲಿ ಕಳೆದು ಹೋಗುತ್ತದೆ. ಇನ್ನೊಂದು ಹೊಸ ವಿಚಾರದೊಂದಿಗೆ ಬರಹ ಸಿದ್ಧಪಡಿಸಿ ಕಳುಹಿಸಬೇಕಾದ ಡೆಡ್‌ಲೈನ್ ಅಂಕಣಕಾರರ ಮುಂದಿರುತ್ತದೆ. ಬಹುತೇಕರು ಅಂಕಣ ಬರಹಗಳ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ ದಿರುವುದಕ್ಕೆ ಕಾರಣ ಅದು ಟೈಮ್ ಬೌಂಡ್. ಸಮಯದ ಪರಿಮಿತಿಯಲ್ಲಿ ಇದನ್ನು ನಿಭಾಯಿಯಿಸಬೇಕಾಗುತ್ತದೆ. ಆನ್‌ಲೈನ್ ಯುಗದಲ್ಲಿ ಆನ್‌ಲೈನ್ ಪತ್ರಿಕೆಗಳಿಗೆ ಬರೆಯುವುದು ಬೇರೆಯ ತರಹದ ಸವಾಲು ಒಡ್ಡಿದರೆ, ಪ್ರಿಂಟ್ ಮೀಡಿಯಾಗೆ ಬರೆಯುವಾಗ ಸಮಯ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸುದ್ದಿಮನೆಯಲ್ಲಿನ ತಾಕಲಾಟಗಳನ್ನು ಕೇಳಿದ್ದೇನೆ. ಪ್ರತ್ಯಕ್ಷ ಕಾಣುವ, ಅನುಭವಿಸುವ ಅವಕಾಶವಾಗಿಲ್ಲ ಎನ್ನುವುದು ಬಿಟ್ಟರೆ, ಕೊನೆಯ ಕ್ಷಣದವರೆಗೂ ಅಲ್ಲಿನ ಧಾವಂತಗಳು ಎಷ್ಟು ಎನ್ನುವುದರ ಅಂದಾಜು ಮಾಡಲು ಸಾಧ್ಯವಾಗಿದೆ.
ಅಂಕಣ ಬರಹ ಕೊನೆಗಳಿಗೆಯವರೆಗೂ ಕಳುಹಿಸದವರ ಬೆನ್ನ ಹಿಂದೆ ಬಿದ್ದು ತರಿಸಿಕೊಳ್ಳು ವುದು, ಕೊನೆಯ ಕ್ಷಣದ ಸುದ್ದಿಯನ್ನು ಬಿಡದೆ ಕವರ್ ಮಾಡಬೇಕಾಗುವುದು, ಹೀಗೆ ಒಂದೇ ಎರಡೇ ಸುದ್ದಿಮನೆಯ ಸಮಯದ ಜೊತೆಗಿನ ಗುದ್ದಾಟ ಬಲ್ಲವರೇ ಬಲ್ಲರು.
ಇದನ್ನೂ ಓದಿ: Rangaswamy Mookanahalli Column: ಎಐ ಎಂಬುದು ಗುಮ್ಮನ ಕಥೆಯಾಗಿ ಉಳಿದಿಲ್ಲ !
ಈ ವಾರ ಏನು ಬರೆಯುವುದು ಎನ್ನುವ ವಿಚಾರವನ್ನು ಮನಸ್ಸಿನಲ್ಲಿ ಒಂದೆಡೆ ಚಿಂತಿಸಲು ಬಿಟ್ಟು, ಗೆಳೆಯ ನವೀನ್ ಕಟ್ಟಿಯವರಿಗೆ ಫೋನ್ ಮಾಡಿದೆ. ಮಾತು ಎಂದರೆ ಗೊತ್ತಲ್ಲ ಶುರು ಮಾಡಿದ ವಿಚಾರ ಯಾವುದು ಎನ್ನುವುದು ಮರೆತು ಹೋಗಿರುತ್ತೆ.
ಇನ್ನ್ಯಾವುದೋ ಹೊಸ ವಿಚಾರ ಬಂದಿರುತ್ತೆ. ಈ ವಿಚಾರ ಏಕೆ ಮಾತಾಡುತ್ತಿದ್ದೇವೆ ಎನ್ನು ವುದು ಗೊತ್ತಿಲ್ಲದೇ ಅದರ ಬಗ್ಗೆ ಚರ್ಚೆ ಕೂಡ ಆಗುತ್ತೆ. ಇದು ನನ್ನೊಬ್ಬನ ಕಥೆಯಲ್ಲ ಎಂದುಕೊಳ್ಳುವೆ. ಮಾತಿನ ಮಧ್ಯದಲ್ಲಿ ನವೀನ್ ‘ಇವತ್ತು ಜಗತ್ತು ಸುಮ್ಮನೆ ಕುಳಿತು ಒಣ ಮಾತಾಡುವ ಜನರಿಗೆ ಸೇರಿದ್ದಲ್ಲ, ಈ ಸಮಯವನ್ನು ದುಡಿಸಿಕೊಂಡು ಕಾರ್ಯೋನ್ಮುಖ ರಾಗುವವರಿಗೆ ಸೇರಿದ್ದು’ ಎಂದರು. ಮುಂದುವರಿದು’ ಎವೆರಿ ಥಿಂಗ್ ಇಸ್ ಆ ಪ್ರಾಡಕ್ಟ್ ಆಫ್ ಟೈಮ್’ ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚೆ ಇದ್ದ ಸಂವಹನದ ರೀತಿಗೂ ಇವತ್ತಿಗೂ ಜಗತ್ತು ಹೇಗೆ ಬದಲಾಗಿದೆ ನೋಡಿ, ಯಾವುದೇ ಒಂದು ನರೇಟಿವ್ ಕಟ್ಟುವುದು ಇವತ್ತಿಗೆ ಸುಲಭದ ಮಾತಲ್ಲ.
ಎಲ್ಲವೂ ಕಾಲದ ಮಹಿಮೆ. ಬೆಳಿಗ್ಗೆ ಎಳೆಬಿಸಿಲಿನಲ್ಲಿ ಹಸಿರು ಹೊದ್ದ ಹೊಲಗದ್ದೆ ಚಂದ ಕಂಡರೆ, ಮುಳುಗುವ ಸೂರ್ಯನ ಹೊಂಬಿಸಿಲಿನಲ್ಲಿ ಹಣ್ಣಾದ ಎಲೆ ಸುಂದರವಾಗಿ ಕಾಣುತ್ತದೆ ಎಂದರು. ಎವೆರಿ ಥಿಂಗ್ ಇಸ್ ಆ ಪ್ರಾಡಕ್ಟ್ ಆಫ್ ಟೈಮ್ ಎನ್ನುವ ಪದ ಮನಸ್ಸಿ ನಲ್ಲಿ ಕುಳಿತು ಬಿಟ್ಟಿತು. ಆ ಕ್ಷಣದಲ್ಲಿ ಕಟ್ಟಿ ಸಾಹೇಬರಿಗೆ ಈ ವಾರದ ನನ್ನ ವಿಶ್ವವಾಣಿಯ ಅಂಕಣ ಬರಹದ ವಸ್ತುವನ್ನು ನೀವು ನೀಡಿದಿರಿ ಧನ್ಯವಾದ ಎಂದು ಹೇಳಿದೆ.
ಹೌದಲ್ಲ, ನೀವೇ ಯೋಚಿಸಿ ನೋಡಿ ಎಲ್ಲವೂ ಸಮಯದ ಮೇಲೆ ಆಧಾರಿತವಾಗಿದೆ. ಅಮೆರಿಕನ್ ಬರಹಗಾರ್ತಿ ಲಿಂಡಿ ವೆಸ್ಟ್ ಎನ್ನುವವರು Everything is a product of its time, and the whole point of progress is to make the future better than the present. People make mistakes, and people grow, and culture grows along with them ಎಂದಿದ್ದಾರೆ.
ಸಮಯ ಏರಿದ್ದನ್ನು ಇಳಿಸುತ್ತದೆ, ಇಳಿದದ್ದನ್ನು ಏರಿಸುತ್ತದೆ. ಈ ಜಗತ್ತಿನಲ್ಲಿ ಪರ್ಮನೆಂಟ್ ಎನ್ನವುದು ಬದಲಾವಣೆ ಮತ್ತು ವೇಳೆ ಮಾತ್ರ. ಈ ಸತ್ಯ ನಮಗೆ ಅರಿವಾಗುವುದಿಲ್ಲ. ಇದನ್ನು ಅರಿತುಕೊಂಡರೆ ಸಾಕು ‘ನಾನು ಎನ್ನುವ ನಾನು’ ಅದೆಷ್ಟು ತೃಣ ಎನ್ನುವುದರ ಅರಿವಾಗುತ್ತದೆ.
ಸಮಯದ ಮುಂದೆ ನಮ್ಮೆ ಸಾಧನೆಗಳು ಅದೆಷ್ಟು ಗೌಣ ಎನ್ನುವುದರ ಅರಿವಾದರೆ ಅಹಂ ಎನ್ನುವುದು ಇದ್ದಲ್ಲಿ ಅದು ಕರಗಿ ಹೋಗುತ್ತದೆ. ನಾವು ಇನ್ನಷ್ಟು ಮನುಷ್ಯರಾಗಬಹುದು. ನಾವು ಸಮಯದ ಮೇಲೆ ನಿಯಂತ್ರಣ ತೆಗೆದುಕೊಳ್ಳದೆ ಹೋದರೆ ನಮ್ಮ ಬದುಕು ಸೂತ್ರ ಕಿತ್ತ ಗಾಳಿಪಟದಂತೆ ಲಾಗ ಹೊಡೆಯಲು ಶುರುವಾಗುತ್ತದೆ.
ನಮ್ಮ ಮೌಲ್ಯ ನಾವು ಅರಿತುಕೊಳ್ಳಬೇಕು, ಆಗ ಸಮಯದ ಮೌಲ್ಯ ತಿಳಿಯುತ್ತದೆ. ಎಲ್ಲಿಯ ವರೆಗೆ ನಮಗೆ ಸಮಯದ ಮೌಲ್ಯ ತಿಳಿಯುವುದಿಲ್ಲ, ಅಲ್ಲಿಯವರೆಗೆ ಸಮಯದಿಂದ ನಾವೇನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಬಹಳ ಚೆನ್ನಾಗಿ ಗೊತ್ತಿರುತ್ತದೆ. ಸಮಯ ವನ್ನು ಯಾರು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ, ಅವರಿಗೆ ಈ ಬದುಕು, ಸಮಾಜ ಗೌರವ ನೀಡುತ್ತದೆ. ಅವರು ಯಶಸ್ವಿ ಎನ್ನಿಸಿಕೊಳ್ಳುತ್ತಾರೆ.
ಅಮೆರಿಕನ್ ಸೈಕಾಲಜಿಸ್ಟ್ ಮತ್ತು ರೋಡ್‌ಲೆಸ್ ಟ್ರಾವೆಲ್ಡ್ ಪುಸ್ತಕದ ಲೇಖಕ ಸ್ಕಾಟ್ ಪೆಕ್ ಎನ್ನುವರು ಹೇಳುತ್ತಾರೆ, ‘Until you value yourself, you will not value your time. Until you value your time, you will not do anything with it .’. ಸಮಯದ ಮೌಲ್ಯ ಎಲ್ಲಕಿಂತ ಹೆಚ್ಚು ಎನ್ನುವುದು ಇದರ ಸಾರ.
ಇಂತಹ ಅತಿ ಅಮೂಲ್ಯ ಸಮಯವನ್ನು ಹೇಗೆ ನಮ್ಮ ಒಳಿತಿಗೆ ದುಡಿಸಿಕೊಳ್ಳುತ್ತೇವೆ ಎನ್ನು ವುದು ನಮಗೆ ಬಿಟ್ಟದ್ದು. ಜಗತ್ತು ಕಂಡ ಅತ್ಯಂತ ಯಶಸ್ವಿ ವ್ಯಕ್ತಿಗಳು ಈ ಸಮಯವನ್ನು ತಮ್ಮ ಒಳಿತಿಗೆ ದುಡಿಸಿಕೊಂಡದ್ದು ಮಾತ್ರವಲ್ಲದೆ ಅದಕ್ಕೆ ತಮ್ಮ ಹೆಸರಿಟ್ಟು ಅದಕ್ಕೊಂದು ಥಿಯರಿ ಕೂಡ ಸೃಷ್ಟಿಸಿದ್ದಾರೆ. ಅವುಗಳಲ್ಲಿ ಒಂದಷ್ಟು ಪ್ರಮುಖವಾದವನ್ನು ಇಲ್ಲಿ ಹೇಳುವ ಪ್ರಯತ್ನ ಮಾಡುವೆ.
ಐಸೆನ್ ಹೊವೆರ್ ಮ್ಯಾಟ್ರಿಕ್ಸ್: ಅಮೇರಿಕಾ ದೇಶದ 34ನೇ ಅಧ್ಯಕ್ಷನಾಗುವ ಮೊದಲು ಐಸೆನ್ ಮಿಲಿಟರಿ ಅಧಿಕಾರಿಯಾಗಿದ್ದವರು. ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರತಿ ಕ್ಷಣವೂ ಆತನ ಮುಂದೆ ಒಂದಲ್ಲ ಒಂದು ಸಮಸ್ಯೆ ಬಂದು ನಿಲ್ಲುತ್ತಿತ್ತು. ಪ್ರತಿ ಕ್ಷಣವೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ಆತ ಅರ್ಜೆಂಟ್ ಇಂಪಾರ್ಟೆಂಟ್ ಮ್ಯಾಟ್ರಿಕ್ಸ್ ಬಳಸುತ್ತಾರೆ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನೋಡೋಣ.
1) ಮೊದಲಿಗೆ ಸಮಸ್ಯೆ ಅಥವಾ ಕೆಲಸವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಬೇಕು .
2) ಪ್ರಮುಖ, ಅಪ್ರಮುಖ, ಅರ್ಜೆಂಟ್ (ತುರ್ತು ), ನಾಟ್ ಸೋ ಅರ್ಜೆಂಟ್ .
3) ಈ ನಾಲ್ಕು ವರ್ಗಿಕರಣದಲ್ಲಿ ಬರದೆ ಇರುವ ವಿಷಯಗಳನ್ನು ಬೇರೆಯವರಿಗೆ ಡಿಲಿಗೇಟ್ ಮಾಡುವುದು ಅಥವಾ ಡಿಲೀಟ್ ಮಾಡುವುದನ್ನು ಮಾಡಬಹುದು.
ಇದು ಬಹಳಷ್ಟು ಸಮಯವನ್ನು ಉಳಿತಾಯ ಮಾಡುತ್ತದೆ. ಏಕೆಂದರೆ ಇಂಪಾರ್ಟೆಂಟ್ ಎನ್ನಿಸಿಕೊಂಡದ್ದು ಅರ್ಜೆಂಟ್ ಆಗಿರಬೇಕು ಎಂದಿಲ್ಲ. ಅದೇ ಸಮಯದಲ್ಲಿ ನಾಟ್ ಸೋ ಇಂಪಾರ್ಟೆಂಟ್ ಎನ್ನಿಸಿಕೊಂಡದ್ದು ತುರ್ತಾಗಿ ಸಮಯವನ್ನು, ನಿರ್ಧಾರವನ್ನು ಬೇಡಬಹುದು. ಕ್ರಿಟಿಕಲ್ ಥಿಂಕರ್ಸ್, ದೊಡ್ಡ ನಾಯಕರಿಗೆ ಈ ಟೆಕ್ನಿಕ್ ಬಹಳ ಉಪಯುಕ್ತ.
ಪಾರ್ಕಿನ್‌ಸನ್ ಲಾ: ಹೆಸರೇ ಹೇಳುವಂತೆ ಇದು ಟೆಕ್ನಿಕ್ ಅಲ್ಲ. ಇದು ಹೀಗೆ ಮಾಡಬೇಕು ಎಂದು ವಿಧಿಸಿರುವ ಶಾಸನ. ಬ್ರಿಟಿಷ್ ಇತಿಹಾಸಕಾರ ಪಾರ್ಕಿನ್ʼಸನ್ ಇದರ ಜನಕ. ಈತನ ಪ್ರಕಾರ ನಾವು ಕೆಲಸಕ್ಕೆ ಎಷ್ಟು ವೇಳೆ ನೀಡುತ್ತೇವೆಯೋ ಅಷ್ಟೂ ಸಮಯ ಕೆಲಸವಿದ್ದೇ ಇರುತ್ತದೆ. ಅಂದರೆ ನಾವು ಒಂದು ಕೆಲಸವನ್ನು ಐದು ತಾಸು ಮಾಡಿದರೆ ಅದು ಐದು ತಾಸು ಎಳೆಯುತ್ತದೆ.
ಕೆಲಸವನ್ನು ಮುಂದೂಡುವ ಸೋಮಾರಿಗಳಿಗೆ, ಒತ್ತಡದಲ್ಲಿ ಕೆಲಸ ಮಾಡುವರಿಗೆ ಇದು ಹೇಳಿ ಮಾಡಿಸಿ ದಂತಿದೆ. ಇದು ಹೇಗೆ ಕೆಲಸ ಮಾಡುತ್ತದೆ? ಕೆಳಗಿನ ಅಂಶಗಳು ಉತ್ತರಿಸು ತ್ತವೆ.
1) ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದಿದ್ದರೆ ಅದನ್ನು ಚಾರ್ಜ್‌ಗೆ ಹಾಕಬಾರದು. ಚಾರ್ಜ್ ಮುಗಿಯುವುದರಲ್ಲಿ ಕೆಲಸ ಮುಗಿಸಬೇಕು. ಅಥವಾ ಮಧ್ಯಾಹ್ನ 12ಕ್ಕೆ ಕೆಲಸ ಕೈಗೆತ್ತಿಕೊಂಡರೆ ಊಟದ ಸಮಯದಲ್ಲಿ ಮುಗಿಸಬೇಕು.
2) ಬೇಗ ಮಾಡಿ ಮುಗಿಸುವುದು. ಅಂದರೆ ಸಂಜೆಯೊಳಗೆ ಮುಗಿಸಬೇಕಾಗಿರುವ ಕೆಲಸವನ್ನು ಮಧ್ಯಾಹ್ನ ಮುಗಿಸುವುದು.
3) ಪ್ರತಿ ಕೆಲಸಕ್ಕೂ ಸಮಯವನ್ನು ನಿಗದಿಪಡಿಸಿವುದು. ಉದಾಹರಣೆಗೆ ಪ್ರತಿದಿನ ಬೆಳಿಗ್ಗೆ 20 ನಿಮಿಷ ಇಮೇಲ್ ನೋಡುವುದು, ಉತ್ತರಿಸುವುದು. ಹೀಗೆ ಪ್ರತಿಯೊಂದು ಕೆಲಸಕ್ಕೂ ಸಮಯ ನಿಗದಿಪಡಿಸುವುದು
4) ಪ್ರತಿ ಕೆಲಸಕ್ಕೂ ಡೆಡ್‌ಲೈನ್ ನಿಗದಿಪಡಿಸುವುದು ಮತ್ತು ನಿಗದಿಪಡಿಸಿದ ಸಮಯಕ್ಕಿಂತ ಬಹುಬೇಗ ಮುಗಿಸುವುದು. ಅಂದರೆ ಒಂದು ಕೆಲಸಕ್ಕೆ ಐದಾರು ತಾಸು ಎಂದು ನಿಗದಿ ಪಡಿಸುವುದು ಮತ್ತು ಕೆಲಸವನ್ನು 3/4 ತಾಸಿನಲ್ಲಿ ಮುಗಿಸುವುದು ಮಾಡಬೇಕು.
ಟೈಮ್ ಬ್ಲಾಕಿಂಗ್ ಮೆಥಡ್: ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್. ಆತ ಪಾಲಿಸುವ ಈ ವಿಧಾನವನ್ನು ಟೈಮ್ ಬ್ಲಾಕಿಂಗ್ ವಿಧಾನ ಎನ್ನಲಾಗಿದೆ. ಇದನ್ನು ನಾವು ಎಲಾನ್ ಮಸ್ಕ್ ಮೆಥಡ್ ಎಂದು ಕೂಡ ಕರೆಯಬಹುದು. ಇದು ವಿದ್ಯಾರ್ಥಿಗಳಿಗೆ , ಕಲಿಕೆ ಯಲ್ಲಿ ಅತೀವ ಆಸಕ್ತಿ ಇರುವವರಿಗೆ ಮತ್ತು ಅನಾಲಿಟಿಕಲ್ ಥಿಂಕರ್ಸ್‌ಗಳಿಗೆ ಹೊಂದುತ್ತದೆ. ಸಾಮಾನ್ಯ ಜನರಿಗೆ ಇದು ಬಹಳ ಕಷ್ಟ. ನಾನು ಈ ವಿಧಾನವನ್ನು ಕಳೆದ 8 ವರ್ಷದಿಂದ ಪಾಲಿಸುತ್ತ ಬಂದಿದ್ದೇನೆ.
ವಾರದ ಏಳು ದಿನದಲ್ಲಿ ಐದು ಅಂಕಣ ಬರಹವನ್ನು ನಾಡಿನ ಎಲ್ಲಾ ಪ್ರಮುಖ ಪತ್ರಿಕೆ ಗಳಿಗೆ ಬರೆಯುತ್ತಿದ್ದೇನೆ. ಯೂಟ್ಯೂಬ್ ವಿಡಿಯೋಗಳು, ಪಾಡ್‌ಕ್ಯಾಸ್ಟ್, ದಿನಕ್ಕೊಂದು ಕಿವಿಮಾತು ಸತತವಾಗಿ ಒಂದು ದಿನವೂ ತಪ್ಪಿಸದೇ ಕಳೆದ ಮೂರು ವರ್ಷದಿಂದ ಮಾಡಿ ಕೊಂಡು ಬರುತ್ತಿದ್ದೇನೆ.
ಹಣಕ್ಲಾಸು ಅಂಕಣ ಕಳೆದ ಹತ್ತು ವರ್ಷದಿಂದ ಒಂದು ವಾರವೂ ಮಿಸ್ ಮಾಡಿಕೊಳ್ಳದೆ ಬರೆಯುತ್ತ ಬಂದಿದ್ದೇನೆ. ಇದರ ಜೊತೆಗೆ ನನ್ನ ವೃತ್ತಿ ಜೀವನವನ್ನೂ ಕೂಡ ಸಾಗಿಸಿ ಕೊಂಡು ಬರುತ್ತಿದ್ದೇನೆ. ಇದರ ಮಧ್ಯೆ ಫೇಸ್‌ಬುಕ್ ಬರಹಗಳಿಗೂ ಕೊರತೆಯಿಲ್ಲ !
ಈ ಮೆಥಡ್ ಪ್ರಕಾರ ದಿನದ 24 ಗಂಟೆಯನ್ನು 24 ಭಾಗಗಳಾಗಿ ವಿಭಜಿಸುವುದು ಅಥವಾ ಅರ್ಧ ಗಂಟೆಗೆ ಒಂದು ವಿಭಾಗವಾಗಿ ವಿಂಗಡಿಸುವುದು. ಈ ದಿನದಲ್ಲಿ ಮಾಡಬೇಕಾದ ಪ್ರತಿ ಕೆಲಸವನ್ನೂ ಮತ್ತು ಅದಕ್ಕೆ ಬೇಕಾದ ಸಮಯವನ್ನು ಅಂದಾಜಿಸುವುದು ಮತ್ತು ಅದಕ್ಕೆ ವಿನಿಯೋಗಿಸುವುದು.
ಅರ್ಧಗಂಟೆಯ ಅಥವಾ ಒಂದು ಗಂಟೆಯ ಬ್ಲಾಕ್ ಮುಂದೆ ಅದನ್ನು ಹೇಗೆ ಉಪಯೋಗಿಸಿ ಕೊಂಡೆವು ಎನ್ನುವುದನ್ನು ಒಂದೆರೆಡು ನಿಮಿಷದಲ್ಲಿ ನೋಡುವುದು. ಹೀಗೆ ಮಾಡುವು ದರಿಂದ ಹತ್ತಾರು ಗಂಟೆಗಳು ವ್ಯರ್ಥವಾಗುವುದಿಲ್ಲ. ಅಕಸ್ಮಾತ್ ಅರ್ಧ ಗಂಟೆಯ ಅಥವಾ ಒಂದು ಗಂಟೆಯ ಒಂದು ಬ್ಲಾಕ್ ಎಣಿಸಿದ ರೀತಿಯಲ್ಲಿ ಬಳಸಿಕೊಂಡಿಲ್ಲ ಎಂದರೆ ಮನಸ್ಸಿ ನಲ್ಲಿ ಆ ಬ್ಲಾಕ್ ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು ರಿಜಿಸ್ಟರ್ ಆಗುತ್ತದೆ. ಮುಂದಿನ ಬ್ಲಾಕ್ʼಗಳನ್ನು ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಿ ಕೊಳ್ಳಲು ಅದು ಪ್ರೇರಣೆ ನೀಡುತ್ತದೆ.
ಒಮ್ಮೆ ಬ್ಲಾಕ್ ಸಿದ್ಧಪಡಿಸಿದ ಮೇಲೆ ದಿನದ ಷೆಡ್ಯೂಲ್ ಯಾವ ಕಾರಣಕ್ಕೂ ಬದಲಾಗು ವಂತಿಲ್ಲ. ಕಾರಣ ಕೊಡುತ್ತ ಹೋದರೆ ನಿತ್ಯವೂ ಒಂದಲ್ಲ ಒಂದು ಅಂಶ ಮುಂದೆ ಬಂದು ನಿಲ್ಲುತ್ತದೆ, ಬದಲಾವಣೆ ಅನಿವಾರ್ಯ ಎನಿಸುತ್ತದೆ. ಹೀಗಾಗಿ ಶಿಸ್ತು ಬಹಳ ಮುಖ್ಯ. ದಿನ ಪ್ಲಾನ್ ಆದ ಮೇಲೆ ಅಂದು ಎದುರಾಗುವ ಎಷ್ಟೇ ಮುಖ್ಯ ಅಂಶವಿದ್ದರೂ ಅದನ್ನು ನಾಳೆಯ ಬ್ಲಾಕ್‌ನಲ್ಲಿ ಹಾಕಬೇಕು.
ಸಾವು ಬದುಕಿನ ನಡುವಿನ ಪ್ರಶ್ನೆ ಎಂದಾಗ ಅದು ಬೇರೆಯ ಕಥೆ.ನನ್ನ ನೆಚ್ಚಿನ ಸಂಪಾದಕ ರಾದ ವಿಶ್ವೇಶ್ವರ ಭಟ್ಟರು ಸಮಯವನ್ನು ದುಡಿಸಿಕೊಳ್ಳುವ ರೀತಿ ಕೂಡ ನನ್ನನ್ನು ಸದಾ ವಿಸ್ಮಿತನನ್ನಾಗಿಸಿಸುತ್ತದೆ. ಭಗವಂತ ಎಲ್ಲರಿಗೂ 24 ತಾಸು ನೀಡಿ, ಭಟ್ಟರಿಗೆ ಮಾತ್ರ 48 ತಾಸು ನೀಡಿದ್ದಾನೆ ಎನ್ನಿಸುವಷ್ಟರ ಮಟ್ಟಿಗೆ ಅವರು ವೇಳೆಯನ್ನು ದುಡಿಸಿಕೊಳ್ಳುತ್ತಾರೆ.
ಇಷ್ಟೆ ಮಾಡಿ ಕೂಡ ಅವರು ಬೇಜಾರು, ಸುಸ್ತು ಎಂದು ಕುಳಿತದ್ದು ಕಾಣುವುದಿಲ್ಲ. ಸಮಯ ವನ್ನು ಸರಿಯಾಗಿ ದುಡಿಸಿಕೊಂಡು ಸದಾ ಬ್ಯುಸಿ ಇರುವವರಿಗೆ ಎಲ್ಲವನ್ನೂ ಮಾಡಲು ಸಾಕಷ್ಟು ವೇಳೆಯಿರುತ್ತದೆ ಎನ್ನುವ ಮಾತನ್ನು ಭಟ್ಟರಂತಹ ವ್ಯಕ್ತಿಗಳನ್ನು ನೋಡಿ ಹೇಳಿದ್ದಾರೆ ಎನ್ನಿಸುತ್ತದೆ. ಅದು ಇನ್ನಷ್ಟು ಬರೆಯಲು, ಕೆಲಸ ಮಾಡಲು ಪ್ರೇರಣೆ ನೀಡು ತ್ತದೆ.