ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಸಿಜೆಐಗೇ ಚಪ್ಪಲಿ ಎಸೆಯುವುದರ ಹಿಂದೆ ದುಷ್ಟ ಧಾರ್ಷ್ಟ್ಯ

ನಮಗೆಲ್ಲಾ ಗೊತ್ತಿರುವಂತೆ ಅಂದು ಶೂ ಎಸೆಯಲು ಪ್ರಯತ್ನಿಸಿದ್ದು 71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್. ಮುಖ್ಯ ನ್ಯಾಯಮೂರ್ತಿಗಳು ತಮ್ಮ ಪೀಠದಲ್ಲಿ ಕುಳಿತು ಕೋರ್ಟ್‌ನ ಕಲಾಪ ದಲ್ಲಿ ಪಾಲ್ಗೊಂಡಿದ್ದಾಗಲೇ ಅವರು ಈ ದುಸ್ಸಾಹಸ ಮಾಡಿದರು. ತಕ್ಷಣ ಭದ್ರತಾ ಸಿಬ್ಬಂದಿಗಳು ಎಚ್ಚೆತ್ತು ಕೊಂಡು ಅವರನ್ನು ತಡೆದರು. ಆ ಕೃತ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕವೂ ಸದರಿ ವಕೀಲರು ತಾವು ಮಾಡಿದ ಘನಂದಾರಿ ಕೆಲಸವನ್ನು ಸಮರ್ಥನೆ ಮಾಡಿಕೊಂಡರು.

ಸಂಗತ

ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಅವಮಾನಿಸುವ ಪ್ರಯತ್ನ ಖಂಡನೀಯ. ದೇಶದಲ್ಲಿ ಹೆಚ್ಚುತ್ತಿರುವ ಹುಚ್ಚು ಮನಸ್ಥಿತಿಯ ದ್ಯೋತಕವಿದು. ನ್ಯಾಯಾಂಗವನ್ನು ಬೆದರಿಸುವ ಇಂತಹ ಪ್ರಯತ್ನಗಳನ್ನು ನಾವು ಭಾರತೀಯರು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು.

ಕಳೆದ ವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ಘಟನೆಯನ್ನು ನೀವೆಲ್ಲ ನೋಡಿರುತ್ತೀರಿ. ಖಂಡಿತ ಇದೊಂದು ನಾಚಿಕೆಗೇಡಿನ ವಿಷಯ. ದೇಶದ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ವಿರುದ್ಧ ವಕೀಲರೊಬ್ಬರು ತೋರಿದ ಅಸಹನೆ ಮತ್ತು ದುರಹಂಕಾರದ ಪ್ರವೃತ್ತಿ ಕೇವಲ ಆ ವಕೀಲರ ಕೆಟ್ಟ ಮನಸ್ಥಿತಿಯ ಪ್ರತಿಫಲವೋ ಅಥವಾ ದೇಶದಲ್ಲಿ ಹೆಚ್ಚುತ್ತಿರುವ ಇಂತಹ ಮಾನಸಿಕತೆಯ ಪರಿಣಾಮವೋ ಗೊತ್ತಿಲ್ಲ.

ಎರಡನೆಯದೇನಾದರೂ ಆಗಿದ್ದರೆ ಇದು ದೇಶದ ಸಾಮಾಜಿಕ ಸಂರಚನೆಗೇ ಅಪಾಯ ತಂದೊ ಡ್ಡುವ ಸಾಧ್ಯತೆಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುವಂತಹ ಹೇಯ ಕೃತ್ಯ. ಆ ಘಟನೆ ಎಷ್ಟೊಂದು ಅವಮಾನಕಾರಿಯಾಗಿತ್ತು ಅಂದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಖಾಸಗಿಯಾಗಿ ನ್ಯಾ.ಭೂಷಣ್ ಗವಾಯಿ ಜೊತೆಗೆ ಮಾತನಾಡಿ ಸಾಂತ್ವನ ಹೇಳಿದರು.

ನಮಗೆಲ್ಲಾ ಗೊತ್ತಿರುವಂತೆ ಅಂದು ಶೂ ಎಸೆಯಲು ಪ್ರಯತ್ನಿಸಿದ್ದು 71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್. ಮುಖ್ಯ ನ್ಯಾಯಮೂರ್ತಿಗಳು ತಮ್ಮ ಪೀಠದಲ್ಲಿ ಕುಳಿತು ಕೋರ್ಟ್‌ನ ಕಲಾಪ ದಲ್ಲಿ ಪಾಲ್ಗೊಂಡಿದ್ದಾಗಲೇ ಅವರು ಈ ದುಸ್ಸಾಹಸ ಮಾಡಿದರು. ತಕ್ಷಣ ಭದ್ರತಾ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಅವರನ್ನು ತಡೆದರು. ಆ ಕೃತ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕವೂ ಸದರಿ ವಕೀಲರು ತಾವು ಮಾಡಿದ ಘನಂದಾರಿ ಕೆಲಸವನ್ನು ಸಮರ್ಥನೆ ಮಾಡಿ ಕೊಂಡರು.

ಇದನ್ನೂ ಓದಿ: Dr Vijay Darda Column: ಪುಟಿನ್‌ ಬೀಸಿದ ಬಲೆಯಲ್ಲಿ ಟ್ರಂಪ್‌ ಸಿಕ್ಕಿಬಿದ್ದಿದ್ದಾರಾ ?

‘ಹಿಂದೂಸ್ತಾನದಲ್ಲಿ ಸನಾತನ ಧರ್ಮದ ಅಪಮಾನವನ್ನು ನಾವು ಸಹಿಸಿಕೊಳ್ಳುವುದಿಲ್ಲ’ ಎಂದು ಅವರು ಘೋಷಿಸಿದರು. ಆ ಮಾತೇ ಸಾಕು ಅವರ ಮನಸ್ಥಿತಿಯೇನು ಎಂಬುದನ್ನು ಹೇಳುವುದಕ್ಕೆ. ವಾಸ್ತವ ಏನೆಂದರೆ, ಮುಖ್ಯ ನ್ಯಾಯಮೂರ್ತಿಗಳು ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತಂದಿರಲಿಲ್ಲ. ನನಗೆ ಎಲ್ಲಾ ಧರ್ಮಗಳ ಬಗ್ಗೆಯೂ ಗೌರವವಿದೆ ಎಂದು ಅವರೇ ಹೇಳಿಕೊಂಡಿದ್ದರು.

ಈ ಪ್ರಕರಣದ ಹಿನ್ನೆಲೆ ಗೊತ್ತಿಲ್ಲದವರಿಗಾಗಿ ಅದನ್ನು ಮತ್ತೊಮ್ಮೆ ಹೇಳುತ್ತೇನೆ. ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಜವಾರಿ ದೇವಸ್ಥಾನದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹ ವೊಂದಿದೆ. ಅದರ ಕೈ, ಕಾಲು, ದೇಹವೆಲ್ಲ ಸುಸ್ಥಿತಿಯಲ್ಲಿದ್ದು, ತಲೆ ಮಾತ್ರ ಇಲ್ಲ. ಅದು ಎಲ್ಲಿದೆಯೋ ಯಾರಿಗೂ ಗೊತ್ತಿಲ್ಲ.

ಸುಪ್ರೀಂಕೋರ್ಟ್‌ನಲ್ಲಿ ಒಬ್ಬರು ಅರ್ಜಿಯೊಂದನ್ನು ಸಲ್ಲಿಸಿ, ಆ ವಿಗ್ರಹದ ತಲೆಯನ್ನು ಮರು ಸ್ಥಾಪನೆ ಮಾಡಬೇಕು ಎಂದು ಕೋರಿದ್ದರು. ಸಾಮಾನ್ಯವಾಗಿ ಪುರಾತತ್ವ ಇಲಾಖೆಯವರು (ಎಎಸ್‌ಐ) ಹೀಗೆ ಪ್ರಾಚೀನ ವಿಗ್ರಹಗಳು ಭಗ್ನ ಸ್ಥಿತಿಯಲ್ಲಿ ಲಭಿಸಿದ್ದರೆ ಅವುಗಳನ್ನು ಹಾಗೇ ಸಂರಕ್ಷಿಸಿ ಇಡುತ್ತಾರೆ. ದುರಸ್ತಿ ಮಾಡಲು ಹೋಗುವುದಿಲ್ಲ.

Darda 16

ಹೀಗಾಗಿ ನ್ಯಾ.ಭೂಷಣ್ ಗವಾಯಿಯವರ ಪೀಠ ಈ ಅರ್ಜಿಯನ್ನು ವಜಾಗೊಳಿಸಿ, ಇದು ಪ್ರಚಾರ ಕ್ಕಾಗಿ ಸಲ್ಲಿಸಿದ ಅರ್ಜಿ ಎಂದು ಹೇಳಿತು. ಅಲ್ಲದೆ, ಪ್ರಾಚೀನ ಮೂರ್ತಿ ಹೇಗಿದೆಯೋ ಹಾಗೇ ಇರಬೇಕು ಎಂದು ತಿಳಿಸಿತು. ಅರ್ಜಿಯನ್ನು ವಜಾಗೊಳಿಸುವಾಗ ನ್ಯಾ.ಗವಾಯಿಯವರು, ಅರ್ಜಿದಾರರಿಗೆ ಶೈವ ಪಂಥದ ಬಗ್ಗೆ ಏನೂ ಸಮಸ್ಯೆಯಿಲ್ಲ ಅಂತಾದರೆ ಅವರು ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬಹುದು ಎಂದು ಹೇಳಿದರು.

ಆದರೆ ಕೆಲ ಯೂಟ್ಯೂಬ್ ಚಾನಲ್‌ನವರು ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿ ಅವರ ವಿರುದ್ಧ ಕೆಟ್ಟ ಪ್ರಚಾರಾಂದೋನ ಆರಂಭಿಸಿದರು. ಅಂತಹ ಒಬ್ಬ ಯೂಟ್ಯೂಬರ್ ಮಾಡಿದ ಕಮೆಂಟ್ ಎಷ್ಟು ದುರುದ್ದೇಶದಿಂದ ಕೂಡಿತ್ತು ಮತ್ತು ಎಷ್ಟು ಅಸಭ್ಯ ವಾಗಿತ್ತು ಅಂದರೆ ನಾನಿಲ್ಲಿ ಅದನ್ನು ಮತ್ತೊಮ್ಮೆ ಹೇಳಲು ಹೋಗುವುದಿಲ್ಲ.

ಇನ್ನೂ ದುಃಖಕರ ಸಂಗತಿಯೆಂದರೆ, ವಕೀಲ ರಾಕೇಶ್ ಕಿಶೋರ್ ಚಪ್ಪಲಿ ಎಸೆದ ಬಳಿಕ ಇನ್ನೊಬ್ಬ ಯೂಟ್ಯೂಬರ್ ಅಜಿತ್ ಭಾರ್ತಿ ಎಂಬಾತ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಾವೆಲ್ಲ ತಲೆ ತಗ್ಗಿಸುವಂತೆ, ‘ಇದು ಆರಂಭವಷ್ಟೆ ’ಎಂದು ಬರೆದು ಸಾರ್ವಜನಿಕವಾಗಿ ಜಡ್ಜ್‌ಗಳಿಗೆ ಧಮಕಿ ಹಾಕಿದರು. ಅದನ್ನು ಸಮರ್ಥಿಸಿಕೊಳ್ಳಲು ಪುರಾಣದ ಉಲ್ಲೇಖವನ್ನೂ ಮಾಡಿದರು. ಅಲ್ಲದೆ, ಮುಖ್ಯ ನ್ಯಾಯಮೂರ್ತಿಗಳು ಎಲ್ಲೇ ಹೋದರೂ ಅವರ ಕಾರಿಗೆ ಘೆರಾವ್ ಹಾಕಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಕರೆ ನೀಡಿದರು.

ಅದೇ ರೀತಿ, ಹಿಂದು ಕೆಫೆ ಎಂಬ ಸಂಸ್ಥೆಯನ್ನು ನಡೆಸುವ ಕೌಶಲೇಶ್ ರಾಯ್ ಎಂಬುವರು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗವಾಗಿ ವಿಷ ಕಾರಿ, ನೇರವಾಗಿ ಬೆದರಿಕೆ ಹಾಕಿದರು. ವಕೀಲ ರನ್ನು ರೊಚ್ಚಿಗೆಬ್ಬಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತೆ ಅವರ ಮಾತುಗಳಿದ್ದವು. ಆಶ್ಚರ್ಯಕರ ಸಂಗತಿಯೆಂದರೆ, ದೇಶದ ಮುಖ್ಯ ನ್ಯಾಯಮೂರ್ತಿಗಳಾದ ಭೂಷಣ್ ಗವಾಯಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ದುರಹಂಕಾರದ ಹಾಗೂ ಹಿಂಸಾತ್ಮಕ ಮಾತುಗಳು ಹರಿದಾಡುತ್ತಿದ್ದರೂ ನಮ್ಮ ಆಡಳಿತ ಯಂತ್ರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿತ್ತು.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ವಿದೆ ಎಂಬುದನ್ನು ನಾನೂ ಒಪ್ಪುತ್ತೇನೆ ಸಂವಿಧಾನವೇ ನಮಗೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ನೀಡಿದೆ. ಆದರೆ ಅದಕ್ಕೊಂದು ಮಿತಿ ಇಲ್ಲವೇ? ಬೆದರಿಕೆ ಹಾಕುವುದಕ್ಕೆ ಯಾರು ಸ್ವಾತಂತ್ರ್ಯ ನೀಡಿದ್ದಾರೆ? ಯಾರಿಗೆ ಬೇಕಾದರೂ ಬಹಿರಂಗವಾಗಿ ಹೀಗೆ ಧಮಕಿ ಹಾಕುವುದು ಅಭಿವ್ಯಕ್ತಿ ಸ್ವಾತಂತ್ರ್ಯವೇ? ದೇಶದ ಮುಖ್ಯ ನ್ಯಾಯಮೂರ್ತಿಯಂತಹ ಅತ್ಯುನ್ನತ ಹುದ್ದೆಯಲ್ಲಿ ಇರುವವರಿಗೇ ಹೀಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದರೂ ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯ ಯಾವುದೇ ಒಬ್ಬ ಅಧಿಕಾರಿ ಏನೂ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದ್ದುದನ್ನು ನೋಡಿದರೆ ಸಹಜವಾಗಿಯೇ ಅನುಮಾನಗಳು ಮೂಡುತ್ತವೆ.

ಅಧಿಕಾರಿಗಳು ಇದರ ವಿರುದ್ಧ ಆರಂಭದಲ್ಲೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ನ್ಯಾ.ಭೂಷಣ್ ಗವಾಯಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹದ್ದು ಮೀರಿ ವರ್ತಿಸಿದರು ಎಂಬುದೂ ವೇದ್ಯವಾಗುತ್ತದೆ. ನನ್ನ ಪ್ರಕಾರ, ನಿಸ್ಸಂಶಯವಾಗಿಯೂ ಇದೊಂದು ಪೂರ್ವನಿಯೋಜಿತ ಸಂಚು. ಅಜಿತ್ ಭಾರ್ತಿ ಮತ್ತು ಕೌಶಲೇಶ್ ರಾಯ್ ರೀತಿಯ ವ್ಯಕ್ತಿಗಳ ವಿರುದ್ಧ ಸರಿಯಾದ ಸಮಯಕ್ಕೆ ಸರ್ಕಾರ ಅಥವಾ ಪೊಲೀಸರು ಕ್ರಮ ಕೈಗೊಂಡಿದ್ದರೆ ರಾಕೇಶ್ ಕಿಶೋರ್‌ ರಂತಹ ಯಾವೊಬ್ಬ ವ್ಯಕ್ತಿಯೂ ಮುಖ್ಯ ನ್ಯಾಯಮೂರ್ತಿಗೆ ಚಪ್ಪಲಿ ಎಸೆಯುವಂತಹ ಘೋರ ಕೃತ್ಯಕ್ಕೆ ಕೈಹಾಕುತ್ತಿರಲಿಲ್ಲ.

ನ್ಯಾಯಾಂಗವನ್ನು ಬೆದರಿಸುವ ಮತ್ತು ಜಡ್ಜ್ ಗಳನ್ನು ಅವಮಾನಿಸಿ ಅವರ ನೈತಿಕ ಸ್ಥೈರ್ಯ ಕುಗ್ಗಿಸುವಂತಹ ಕೃತ್ಯಗಳು ನಮ್ಮ ದೇಶದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲೂ ಸಾಕಷ್ಟು ನಡೆದಿವೆ. ಮೆಕ್ಸಿಕೋದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ದಂಧೆ ನಡೆಯುತ್ತದೆ. ಅಲ್ಲಿ ಡ್ರಗ್ಸ್ ಮಾಫಿಯಾದವರು ನ್ಯಾಯಾಂಗವನ್ನು ಬೆದರಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದರು.

ಆದರೆ ಇತ್ತೀಚೆಗೆ ಸರ್ಕಾರ ದೃಢವಾಗಿ ಮಾದಕ ದ್ರವ್ಯ ದಂಧೆಕೋರರ ವಿರುದ್ಧ ನಿಂತಿರುವ ಹಿನ್ನೆಲೆ ಯಲ್ಲಿ ನ್ಯಾಯಾಂಗವನ್ನು ಬೆದರಿಸುವ ಮಾಫಿಯಾದ ಕೈ ಕಟ್ಟಿಹಾಕಿದಂತಾಗಿದೆ. ಹಿಂದೆ ಪಾಕಿಸ್ತಾನ ದಲ್ಲಿ ಜನರಲ್ ಪರ್ವೇಜ್ ಮುಷರ್ರ- ಅವರು ಸೇನೆಯ ಮುಖ್ಯಸ್ಥನಾಗಿದ್ದಾಗ ಮತ್ತು ನಂತರ ಪ್ರಧಾನಿಯಾಗಿ ಸರ್ವಾಧಿಕಾರ ನಡೆಸುತ್ತಿದ್ದ ವೇಳೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನೂ, ನ್ಯಾಯಾಂಗವನ್ನೂ ಬೆದರಿಸುವ ಬೇಕಾದಷ್ಟು ಪ್ರಯತ್ನಗಳನ್ನು ಮಾಡಿದ್ದರು.

ಇತ್ತೀಚೆಗೆ ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ನ್ಯಾಯಾಂಗದ ಮೇಲೆ ಒತ್ತಡ ಹೇರುವ ಬಹಿರಂಗ ಪ್ರಯತ್ನ ಮಾಡಿರುವುದು ನಮ್ಮ ಕಣ್ಮುಂದೆಯೇ ಇದೆ. ನಮ್ಮ ದೇಶದಲ್ಲಿ ನ್ಯಾಯಾಂಗವನ್ನು ಸಂವಿಧಾನದ ಪವಿತ್ರ ಅಂಗವೆಂಬಂತೆ ಗೌರವಿಸಲಾಗುತ್ತದೆ. ನ್ಯಾಯಮೂರ್ತಿ ಗಳನ್ನು ಜನಸಾಮಾನ್ಯರು ದೇವರಿಗೆ ಸಮಾನವಾಗಿ ನೋಡುತ್ತಾರೆ.

ಹೀಗಾಗಿ, ನ್ಯಾಯಮೂರ್ತಿ ಭೂಷಣ್ ಗವಾಯಿ ಮೇಲೆ ನಡೆದ ದಾಳಿಯ ಯತ್ನ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೇ ನಡೆಸಿದ ದಾಳಿ ಎಂದು ನಾನು ಹೇಳುತ್ತೇನೆ. ಹುಚ್ಚುತನದ ಮೊದಲ ತತ್ವವೇ ಹೆದರಿಕೆ. ಮೂರ್ಖರು ಯಾವತ್ತೂ ತಮ್ಮ ನಿಲುವೇ ಸರಿ ಮತ್ತು ತಮ್ಮನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಮನಸಾರೆ ನಂಬಿರುತ್ತಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವುದರೊಳಗೆ ಅಂತಹವರನ್ನು ನಿಯಂತ್ರಿಸಬೇಕು.

ಇಲ್ಲದಿದ್ದರೆ ಸಮಾಜದಲ್ಲಿ ಅದು ಅಶಾಂತಿಗೆ ಕಾರಣವಾಗುತ್ತದೆ. ಆದರೆ, ನ್ಯಾಯಾಂಗವನ್ನು ಬೆದರಿಸುವ ಪುಂಡರು ಒಂದು ಸಂಗತಿಯನ್ನು ಯಾವತ್ತೂ ನೆನಪಿಟ್ಟುಕೊಳ್ಳಬೇಕು. ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಜಬರದಸ್ತಾಗಿದೆ ಅಂದರೆ, ಇದು ಎಂತಹುದೇ ಸಂದರ್ಭದಲ್ಲೂ ನಿರ್ಭೀತಿಯಿಂದ ಮತ್ತು ಘನತೆಯಿಂದ ಕಾರ್ಯನಿರ್ವಹಿಸುತ್ತದೆ.

ನೀವೇ ನೋಡಿ- ತಮ್ಮ ಮೇಲೆ ಬೂಟು ಎಸೆಯುವಂತಹ ಹೇಯ ಕೃತ್ಯ ನಡೆದ ಮೇಲೂ ನ್ಯಾಯ ಮೂರ್ತಿ ಭೂಷಣ್ ಗವಾಯಿ ಬಹಳ ತಾಳ್ಮೆಯಿಂದ ನಡೆದುಕೊಂಡು, ಕಲಾಪವನ್ನು ಸುಗಮವಾಗಿ ಮುಂದುವರೆಸಿದರು. ಅವರಲ್ಲಿರುವ ಧೈರ್ಯ ಮತ್ತು ಸೂಕ್ಷ್ಮಮತಿಗೆ ಇದು ನಿದರ್ಶನ. ಅವರ ತಂದೆ ಆರ್.ಎಸ್. ಗವಾಯಿ ಸಂಸದರೂ, ರಾಜ್ಯಪಾಲರೂ ಆಗಿದ್ದವರು.

ತಾಯಿ ಕಮಲಾ ಗವಾಯಿ ಬಹಳ ಬುದ್ಧಿವಂತ ಮಹಿಳೆ. ತಮ್ಮ ತಂದೆ ಮತ್ತು ತಾಯಿಯಿಂದಲೇ ನ್ಯಾ.ಗವಾಯಿ ಸಾಕಷ್ಟು ತಾಳ್ಮೆ, ಕರುಣೆ ಮತ್ತು ಧೈರ್ಯವನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದಾರೆ. ಬಾಲ್ಯದಿಂದಲೇ ಸಾಮಾಜಿಕ ತಾರತಮ್ಯವನ್ನು ಅನುಭವಿಸಿದ ಕಾರಣ ಅವರಿಗೆ ಸಮಾಜದಲ್ಲಿರುವ ಕುತ್ಸಿತ ಮನಸ್ಥಿತಿಯ ವ್ಯಕ್ತಿಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ.

ತನ್ನತ್ತ ಶೂ ಎಸೆಯಲು ಯತ್ನಿಸಿದ ವ್ಯಕ್ತಿ ಎಷ್ಟು ಕ್ಷುಲ್ಲಕ ಮನಸ್ಥಿತಿಯವನಿರಬಹುದು ಎಂಬು ದನ್ನು ಅವರು ಚೆನ್ನಾಗಿಯೇ ಅರಿತಿರುತ್ತಾರೆ. ಹೀಗಾಗಿ ಅವನನ್ನು ಕ್ಷಮಿಸುವುದಕ್ಕೆ ಅವರಿಗೆ ಸಾಧ್ಯ ವಾಯಿತು. ತನಗೆ ಬಹಿರಂಗವಾಗಿ ಬೆದರಿಕೆ ಹಾಕಿದವನನ್ನು ಅವರು ಕ್ಷಮಿಸಿದ್ದಷ್ಟೇ ಅಲ್ಲ, ಆತನ ವಿರುದ್ಧ ಕಾನೂನಿನ ರೀತ್ಯಾ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿ ಅವರು ದೊಡ್ಡತನ ವನ್ನು ಮೆರೆದರು.

ಅದೇನೇ ಇರಲಿ, ಇನ್ನೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ. ನ್ಯಾಯಾಂಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡುವ ಅಥವಾ ನ್ಯಾಯಾಂಗವನ್ನು ಬೆದರಿಸುವ ಯಾರನ್ನೇ ಆದರೂ ನಾವು ಭಾರತೀಯರು ಬಲವಾಗಿ ವಿರೋಽಸಬೇಕು. ನಮಗೆ ನಮ್ಮ ದೇಶದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಬಹಳ ಹೆಮ್ಮೆಯಿದೆ. ಅವರನ್ನು ಅವಮಾನಿಸುವ ಯಾವುದೇ ಪ್ರಯತ್ನವನ್ನೂ ನಾವು ಸಹಿಸಿ ಕೊಳ್ಳುವುದಿಲ್ಲ.

ಡಾ.ವಿಜಯ್‌ ದರಡಾ

View all posts by this author