ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಅನುಭವವೇ ಬದುಕು, ಅದೇ ಮಹಾಗುರು !

ಒಮ್ಮೆ ಬೆಳಿಗ್ಗೆ ಆಡಲು ಹೋದವನು ಸಂಜೆಯಾದರೂ ಮನೆಗೆ ಹೋಗಿರಲಿಲ್ಲ. ಎಲ್ಲಿಗೆ ಹೋಗು ತ್ತೇನೆ ಎಂದು ಕೂಡ ಹೇಳದೆ ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಹೊರಟು ಹೋಗಿದ್ದೆ. ಸಾಯಂಕಾಲ ಮನೆ ತಲುಪಿದಾಗ ಅಮ್ಮನ ಮುಖವನ್ನು ನೋಡುವಂತಿರಲಿಲ್ಲ. ಅಷ್ಟೊಂದು ಯಾಕೆ ಟೆನ್ಶನ್ ಮಾಡ್ಕೊ ತೀಯ ? ಎಲ್ಲಿ ಹೋಗುತ್ತೇನೆ ? ಎನ್ನುವ ನನ್ನ ಮಾತಿಗೆ ಅಮ್ಮ ಹೇಳಿದ್ದು ಅದೇ ಮಾತು ‘ನಿನಗೆ ಮಕ್ಕಳಾದಾಗ ಗೊತ್ತಾಗುತ್ತೆ ’

ವಿಶ್ವರಂಗ

ಸ್ಪೇನ್ ದೇಶದ ಮ್ಯಾಡ್ರಿಡ್ ಅಥವಾ ಬಾರ್ಸಿಲೋನಾ ಇರಬಹುದು , ಫ್ರಾನ್ ನ ಪ್ಯಾರಿಸ್ , ಜರ್ಮನಿಯ –ಫ್ರಾಂಕ್ ಫರ್ಟ್ ಹೀಗೆ ಯೂರೋಪಿನ ಬಹುತೇಕ ದೊಡ್ಡ ನಗರಗಳಲ್ಲಿ ನಿಮಗೆ ಕಾಣ ಸಿಗುವ ಒಂದು ಸಾಮಾನ್ಯ ದೃಶ್ಯವೇನು ಗೊತ್ತೇ ? ಈ ನಗರಗಳ ರಸ್ತೆಯಲ್ಲಿ ಮಾರಾಟ ಮಾಡುವ ವಲಸಿಗರು. ಈ ಹಿಂದೆ ವಿಶ್ವವಾಣಿಯಲ್ಲಿ ವಲಸಿಗರ ಬಗ್ಗೆ ಬರೆದಿದ್ದೆ. ಆದರೆ ಇಂದಿನ ನೆನಪು ವಲಸಿಗರ ಬದುಕಿನ ಇನ್ನೊಂದು ಮಜಲನ್ನು ನೋಡುವುದು. ರಸ್ತೆಯಲ್ಲಿ ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತ ವಸ್ತುಗಳ ಮಾರಾಟ ಮಾಡುತ್ತಾ ಹೀಗೆ ಜೀವನ ಸವೆಸುವ ಬಹುತೇಕರು ಇಲ್ಲೀಗಲ್ , ಅಂದರೆ ಕಾನೂನು ಬಾಹಿರ ವಾಸಿಗಳು. ಹಾಗೆ ನೋಡಲು ಹೋದರೆ ಅವರ ಬದುಕು ಹೇಗಿರಬಹುದು ? ಅವರ ಮನಸ್ಸಿನಲ್ಲಿ ಆಗುತ್ತಿರುವ ತಲ್ಲಣಗಳೇನು ? ಎನ್ನುವುದರ ಬಗ್ಗೆ ಬಹಳ ಚಿಂತಿಸಲು ಹೋಗಿರಲಿಲ್ಲ.

ಅಂದಿನ ದಿನದಲ್ಲಿ ಕೈಲಾದ ಒಂದಷ್ಟು ಜನರಿಗೆ ಸಹಾಯ ಮಾಡಿದ್ದು ಬಿಟ್ಟರೆ , ತೀರಾ ಅವರ ಬದುಕು ಹೇಗಿರಬಹದು ಎನ್ನವುದರ ಬಗ್ಗೆ ಯೋಚಿಸುವ ಸಂದರ್ಭ ಬಂದಿರಲಿಲ್ಲ. ವಿಷಯ ಯಾವುದೇ ಇರಲಿ ಅದು ನಮಗೆ ನೇರವಾಗಿ ತಟ್ಟದ ಹೊರತು ಅದರ ಅಗಾಧತೆಯ ಪೂರ್ಣ ಅರಿವು ನಮಗಾಗುವುದಿಲ್ಲ.

ನಾವು ಸಾಮಾನ್ಯವಾಗಿ ಎಳವೆಯಲ್ಲಿ ಏನಾದರೂ ತಪ್ಪು ಮಾಡಿದರೆ, ಅಂದರೆ ಅಪ್ಪ ಅಮ್ಮನಿಗೆ ನೋವುಂಟು ಮಾಡುವ ರೀತಿಯಲ್ಲಿ ನಡೆದುಕೊಂಡರೆ ಆಗ ಸಾಮಾನ್ಯವಾಗಿ ಕೇಳಿ ಬರುವ ಮಾತು ‘ನಿನಗೆ ಮಕ್ಕಳಾಗಲಿ ಆಗ ನೋವು ಏನು ಎಂದು ಗೊತ್ತಾಗುತ್ತದೆ ’ ಎನ್ನುವುದು.

ಇದನ್ನೂ ಓದಿ: Rangaswamy Mookanahalli Column: ಬಣ್ಣ ಕಳೆದು ಕಪ್ಪು ಬಿಳುಪಾಗುತ್ತಿದೆ ಬದುಕು !

ಒಮ್ಮೆ ಬೆಳಿಗ್ಗೆ ಆಡಲು ಹೋದವನು ಸಂಜೆಯಾದರೂ ಮನೆಗೆ ಹೋಗಿರಲಿಲ್ಲ. ಎಲ್ಲಿಗೆ ಹೋಗು ತ್ತೇನೆ ಎಂದು ಕೂಡ ಹೇಳದೆ ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಹೊರಟು ಹೋಗಿದ್ದೆ. ಸಾಯಂಕಾಲ ಮನೆ ತಲುಪಿದಾಗ ಅಮ್ಮನ ಮುಖವನ್ನು ನೋಡುವಂತಿರಲಿಲ್ಲ. ಅಷ್ಟೊಂದು ಯಾಕೆ ಟೆನ್ಶನ್ ಮಾಡ್ಕೊತೀಯ ? ಎಲ್ಲಿ ಹೋಗುತ್ತೇನೆ ? ಎನ್ನುವ ನನ್ನ ಮಾತಿಗೆ ಅಮ್ಮ ಹೇಳಿದ್ದು ಅದೇ ಮಾತು ‘ನಿನಗೆ ಮಕ್ಕಳಾದಾಗ ಗೊತ್ತಾಗುತ್ತೆ ’ . ಅವತ್ತಿಗೆ ಅಮ್ಮ ಏನೂ ಹೇಳುತ್ತಾಳೆ ಎನ್ನುವುದು ಬಿಟ್ಟರೆ ಆ ಪದಗಳ ಅರ್ಥ ತಿಳಿದಿರಲೇ ಇಲ್ಲ .

ಆ ಅಕ್ಷರಕ್ಕೆ ಜೀವ ತುಂಬಿದ್ದು ನನ್ನ ಮಗಳು ಅನನ್ಯ . ನಾವಿದ್ದ ಊರಿನಲ್ಲಿ ಭಾರತಕ್ಕಿಂತ ಒಂದಷ್ಟು ಬದಲಾವಣೆಯಿದೆ. ಅಂದರೆ ಸತಿ ಪತಿ ಅಪ್ಪ ಅಮ್ಮನಾಗಿ ಬದಲಾಗುತ್ತಾರೆ ಎನ್ನುವುದು ತಿಳಿದ ನಂತರ ಒಂದು ವಾರ ‘ಅಪ್ಪ ಅಮ್ಮನ ಕಾರ್ಯ ನಿರ್ವಹಿಸುವ’ ಬಗ್ಗೆ ಆಸ್ಪತ್ರೆಯವರೇ ಒಂದು ಸಣ್ಣ ಸೆಮಿನಾರ್ ನಡೆಸುತ್ತಾರೆ. ಇದು ಕಡ್ಡಾಯ.

ಯಾರೂ ತಪ್ಪಿಸುವಂತಿಲ್ಲ. ಸರಕಾರವೂ ಈ ವಿಷಯದಲ್ಲಿ ಸಾಥ್ ನೀಡುತ್ತದೆ. ಮೂರು ತಿಂಗಳ ವೇಳೆಗೆ ಗರ್ಭವನ್ನು ಪರೀಕ್ಷಿಸಿ ಮಗು ಹೆಣ್ಣೋ ಅಥವಾ ಗಂಡೋ ಎನ್ನುವುದನ್ನ ಕೂಡ ಹೇಳುತ್ತಾರೆ. ಮಗುವಿನ ಹೆಸರನ್ನು ಇಟ್ಟು ಕೊಳ್ಳಲು ಕೂಡ ಸೂಚಿಸುತ್ತಾರೆ. ನಾವು ಮಗುವಿನ ಹೆಸರನ್ನು ಹೇಳಿದರೆ ಸಾಕು , ಮಗುವಿನ ಹೆಸರಲ್ಲಿ ಆ ತಕ್ಷಣವೇ ಒಂದು ಹೆಲ್ತ್ ಬುಕ್ ಸಿದ್ದ ಪಡಿಸುತ್ತಾರೆ. ಪ್ರತಿ ಬಾರಿ ತಪಾಸಣೆಗೆ ಹೋದಾಗ ಮಗುವಿನ ಬೆಳವಣಿಗೆಯನ್ನು ದಾಖಲಿಸುತ್ತ ಹೋಗುತ್ತಾರೆ.

ಇದೊಂದು ವಿಶೇಷ ಅನುಭವ. ಇನ್ನು ಇಲ್ಲಿ ಅಂದರೆ ಬಾರ್ಸಿಲೋನಾದಲ್ಲಿ ಅಪ್ಪನನ್ನು ಕೂಡ ವೈದ್ಯರ ಜೊತೆಗೆ ಹೆರಿಗೆಯಲ್ಲಿ ಭಾಗವಹಿಸಲು ಬಿಡುತ್ತಾರೆ. ಅನನ್ಯಳನ್ನು ಮತ್ತು ರಮ್ಯಳನ್ನು ಸ್ವಲ್ಪ ಹೆಚ್ಚು ಎನ್ನುವಷ್ಟು ಸೂಕ್ಷ್ಮವಾಗಿ ನೋಡಿಕೊಂಡಿದ್ದೇನೆ. ಇದಕ್ಕೆ ಕಾರಣ ಅಲ್ಲಿ ನಮ್ಮವರು ಎನ್ನುವರು ಯಾರೂ ಇರಲಿಲ್ಲ. ಮಗು ಜನಿಸಿದ ತಕ್ಷಣ ಒಂದಷ್ಟು ಮಾತ್ರ ಸ್ವಚ್ಛಗೊಳಿಸಿ ’ ತೋಮ ಪಾಪಿ ತು ಹೀಹಾ’ (ಅಪ್ಪ , ನಿನ್ನ ಮಗಳನ್ನ ತೆಗೆದುಕೋ ) ಎಂದು ವೈದ್ಯರು ಅನನ್ಯಳನ್ನ ನನ್ನ ಕೈಗಿತ್ತ ದಿನವನ್ನ ಮರೆಯುವುದಾದರೂ ಹೇಗೆ ? ಮಗು ಹುಟ್ಟುವ ಮುನ್ನವೇ ನಾನೊಬ್ಬ ಬದಲಾದ ವ್ಯಕ್ತಿಯಾಗಿದ್ದೆ.

71 ಒಕ

ಇನ್ನು ಅನನ್ಯ ಹುಟ್ಟಿದ ಮೇಲಿನ ಕಥೆಯೇ ಬೇರೆ. ಯಾವುದೇ ಮಗುವನ್ನು ನೋಡಲಿ ಆ ಮಗುವಿ ನಲ್ಲಿ ನಾನು ಅನನ್ಯಳನ್ನು ಕಾಣಲು ಶುರು ಮಾಡಿದೆ. ಅಬ್ಬಾ ಅದೆಂತಹ ಶಕ್ತಿಯಿದೆ ಈ ಮಮಕಾರ ದಲ್ಲಿ ಎನ್ನಿಸಿದ್ದು ಉಂಟು. ಅಲ್ಲಿಯವರೆಗೆ ಎಷ್ಟೋ ಮಕ್ಕಳನ್ನು ನೋಡಿದ್ದೆ. ನನ್ನ ಮನೆಯಲ್ಲಿ ನನ್ನ ಅಣ್ಣನ ಮಗುವನ್ನು ಕೂಡ ಕಂಡವನು .., ಉಹೂ ಅದ್ಯಾವುದೂ ನಮಗೆ ಮಗುವಾದಾಗ ಅನುಭವದ ಮುಂದೆ ಸೊನ್ನೆ. ಆ ಮಕ್ಕಳನ್ನು ಪ್ರೀತಿಸಲಿಲ್ಲ ಎಂದಲ್ಲ. ಆದರೆ ಇದು ಅಕ್ಷರದಲ್ಲಿ ಬರೆಯಲಾಗದ ಸಂವೇದನೆ. ಮತ್ತದೇ ಹೇಳುತ್ತೇನೆ , ನಮಗೆ ನೇರವಾಗಿ ತಟ್ಟಿದಾಗಿ ಆಗುವ ಅನುಭವ ವನ್ನು ಕಂಡದ್ದು, ಕೇಳಿದ್ದು ತಂದು ಕೊಡುವುದಿಲ್ಲ. ಅನುಭವಿಸಿದಾಗ ಮಾತ್ರ ಗೊತ್ತಾಗುತ್ತದೆ.

ಅನುಭವವೇ ಜೀವನ, ಮಿಕ್ಕೆಲ್ಲವೂ ಶೂನ್ಯ. ಯಾವುದೇ ಕೆಲಸವಿರಲಿ , ಅದೆಷ್ಟೇ ಮುಖ್ಯವಾಗಿರಲಿ ಮೊದಲು ಮಗಳು ನಂತರ ಎಲ್ಲವೂ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿ ಹೋಯ್ತು. ಅನನ್ಯ ಳನ್ನು ಮೊದಲ ಬಾರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಲು ಬಿಟ್ಟಾಗ ಅವಳಿಗೆ ಕೇವಲ ಹದಿನೆಂಟು ತಿಂಗಳು. ಅವಳ ಪ್ರೀ ಸ್ಕೂಲ್ ಟೀಚರ್ ಅವಳಿಗೆ ಸ್ವಿಮ್ಮಿಂಗ್ ಕಲಿಸುವ ಜವಾಬ್ದಾರಿ ಕೂಡ ಹೊತ್ತಿದ್ದರು. ಅವರು ಸರಾಗವಾಗಿ ಮಗುವನ್ನು ನೀರಿಗೆ ಹಾಕಿ ಕೈಕಾಲಾಡಿಸಲು ಹೇಳುತ್ತಿದ್ದರು. ಅನನ್ಯ ಖುಷಿಯಿಂದ ಇರುತ್ತಿದ್ದಳು. ನನಗೆ ಮಾತ್ರ ಜೀವ ಬಾಯಿಗೆ ಬಂದಿರುತ್ತಿತ್ತು .

ಒಂದೆರೆಡು ತರಗತಿಯ ನಂತರ ರಮ್ಯ ಒಬ್ಬಳೇ ಹೋಗುತ್ತಿದ್ದಳು. ಶಾಲೆಗೆ ಬಿಡುವುದಕ್ಕೆ ನನ್ನ ಮತ್ತು ರಮ್ಯಳ ನಡುವೆ ಪುಟಾಣಿ ಕದನ ಏರ್ಪಡುತ್ತಿತ್ತು. ಶಾಲೆಗೆ ಬಿಡುವಾಗ ಕಣ್ತುಂಬ ನೀರು ತುಂಬಿ ಕೊಂಡು ‘ಪಪ್ಪಾ ಬಿಟ್ಟು ಹೋಗಬೇಡ ’ ಎಂದಾಗ ಕರುಳು ಕಿತ್ತು ಬರುತ್ತಿತ್ತು. ರಮ್ಯ ಮಾತ್ರ ನಿತ್ಯವೂ ಶಾಲೆಯಿಂದ ಕರೆತರುವ ಕೆಲಸವನ್ನು ಹೊತ್ತಿದ್ದಳು. ಬರುವಾಗ ಮಕ್ಕಳು ಬಹಳ ಖುಷಿ ಯಾಗಿರುತ್ತವೆ.

ರಮ್ಯಳಿಗೆ ಅನನ್ಯಳನ್ನು ಬೆಂಗಳೂರಿನಲ್ಲಿ ಓದಿಸಬೇಕು, ಕನಿಷ್ಠ ಪ್ರಾಥಮಿಕ ಶಿಕ್ಷಣ ಭಾರತದಲ್ಲಿ ಆದರೆ ಮಗುವಿಗೆ ಸರಿ, ತಪ್ಪುಗಳ ನಡುವಿನ ಅಂತರವನ್ನು ಕಲಿಸಲು ಸಾಧ್ಯ ಎನ್ನುವ ಮನೋ ಭಾವ. ಅವರಿಬ್ಬರೂ ಬೆಂಗಳೂರನ್ನು ಸೇರಿದರು. ಕೆಲಸದ ನಿಮಿತ್ತ ನಾನು ತಕ್ಷಣ ಬರಲಾಗಲಿಲ್ಲ. ಆ ಒಂದು ವರ್ಷ ನನ್ನ ಜೀವನದ ಅತ್ಯಂತ ಕಠಿಣ ವರ್ಷ. ನನ್ನ ಕೆರಿಯರ್‌ನ ಉತ್ತುಂಗ ಸ್ಥಿತಿಯನ್ನು ಬಿಟ್ಟು ಮರಳಿ ಭಾರತಕ್ಕೆ ಬರಲು ನನ್ನ ಮಗಳು ಕಾರಣ. ನನ್ನ ಮುಂದೆ ಎರಡು ಆಯ್ಕೆಯಿತ್ತು ಒಂದು ಹಣ, ಕೆರಿಯರ್ ಮತ್ತು ಎರಡನೆಯದಾಗಿ ನನ್ನ ಪರಿವಾರ , ಮಗಳು. ನಾನು ಎರಡನೆಯದನ್ನು ಆಯ್ಕೆ ಮಾಡಿಕೊಂಡೆ.

ಸರಳವಾಗಿ ಹೇಳಬೇಕೆಂದರೆ ಜೀವನದಲ್ಲಿ ನಾನು ಬಹಳಷ್ಟು ಸಿಂಪಥಿಯ ಮಾತುಗಳನ್ನು ಬೇರೆಯವರ ಕುರಿತು ಆಡಿದ್ದೇನೆ. ಯಾರದಾದರೂ ಕಷ್ಟ ಕಂಡಾಗ ಮರುಗುವುದು ಅಯ್ಯೋ ಪಾಪ ಎನ್ನುವುದು ಮಾಡಿದ್ದೇನೆ. ಅದು ಸಿಂಪಥಿ. ಆದರೆ ಅವರಿರುವ ಸ್ಥಿತಿಯಲ್ಲಿ ನಮ್ಮನ್ನು ಊಹಿಸಿ ಕೊಂಡರೆ ಮಾತ್ರ ನಿಜವಾದ ನೋವಿನ ಅರ್ಥವಾಗುತ್ತದೆ. ಬಾಯಿ ಮಾತಿಗೆ ಅಯ್ಯೋ ಪಾಪ ಎನ್ನುವುದಕ್ಕೂ ನಿಜವಾಗಿ ಮರುಕ ಪಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಅಂತಹ ಒಂದು ವ್ಯತ್ಯಾಸವನ್ನ ನನ್ನಲ್ಲಿ ತಂದಿದ್ದು ನನ್ನ ಮಗಳು. ಜಗತ್ತಿನ ಜನರಿಗೆ ಸಹಾಯ ಮಾಡುತ್ತೇನೆ ಎನ್ನುವ ಸಿನಿಕತನವಿಲ್ಲ. ಆದರೆ ನನ್ನ ಮಗಳ ವಯಸ್ಸಿನ ಮಕ್ಕಳು ಕಷ್ಟದಲ್ಲಿರುವುದು ಕಂಡಾಗ ಮನಸ್ಸು ಕರಗಿಹೋಗುತ್ತದೆ. ಅದು ಎಂಪಥಿ. ಮನುಷ್ಯ ಅದು ಯಾರೇ ಆಗಿರಲಿ ಹೆಣ್ಣು ಅಥವಾ ಗಂಡು , ಪರಿಪೂರ್ಣತೆಯ ಅನುಭವ ಪಡೆಯಲು ಅವರ ಬಾಳಿನಲ್ಲಿ ಮಕ್ಕಳು ಬರಬೇಕು. ಎಂತಹ ದುಷ್ಟರನ್ನೂ ಬದಲಾಯಿಸುವ ದೈವತ್ವ ಮಕ್ಕಳಿಗಿದೆ. ಅಂದ ಮೇಲೆ ಸಾಮಾನ್ಯ ಜನರ ಮಾತೇನು ? ಪೋಷಕರ ಜೀವನ ಪೂರ್ತಿ ಮಕ್ಕಳ ಸುತ್ತಮುತ್ತ ತಿರುಗುತ್ತಿರುತ್ತದೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ಕೇವಲ ಭಾವನೆ , ಪ್ರೀತಿ ಮಾತ್ರ ಕೆಲಸಕ್ಕೆ ಬರುವುದಿಲ್ಲ.

ಪ್ರೀತಿಯ ಜೊತೆಗೆ ಕಲಿಕೆಯ ಬಗ್ಗೆ ಕೂಡ ಗಮನವನ್ನ ಹರಿಸಬೇಕಾಗುತ್ತದೆ. ಈ ಜಗತ್ತಿನಲ್ಲಿ ಮುಕ್ಕಾಲು ಮೂರುಪಾಲು ಜನ ಮಕ್ಕಳನ್ನ ಹೆತ್ತ ಮೇಲೆ ಗೆದ್ದೆವು ಎನ್ನುವ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ನಿಮಗೆ ತಿಳಿದಿರಲಿ ಮಕ್ಕಳನ್ನ ಸಾಕುವುದು , ಬೆಳೆಸುವುದು ಹೆಚ್ಚೇನಿಲ್ಲ ಕೇವಲ 18/20 ವರ್ಷದ ತಪಸ್ಸು. ಮಕ್ಕಳು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ನಾವು ಹೇಳಿದ್ದು ಅವು ಮಾಡುವುದಿಲ್ಲ . ನಾವು ಮಾಡಿದ್ದನ್ನು ಖಂಡಿತ ಅವು ನಕಲು ಮಾಡುತ್ತವೆ.

ಈ ನಿಟ್ಟಿನಲ್ಲಿ ಮೊದಲೇ ಹೇಳಿದಂತೆ ಒಂದು ಮಗು ಎಂದರೆ ಅದು 20 ವರ್ಷದ ಪ್ರಾಜೆಕ್ಟ್. ಅವೇನು ಈ ಭೂಮಿಗೆ ಬರುತ್ತೇವೆ ಎಂದು ಬಯಸಿರುವುದಿಲ್ಲ , ನಾವು ನಮ್ಮ ಇಚ್ಛೆಯಿಂದ ಅವುಗಳನ್ನು ಈ ಭೂಮಿಗೆ ತಂದಿರುತ್ತೇವೆ. ಹೀಗಾಗಿ ಅವುಗಳನ್ನು ಉನ್ನತಿಯ ಕಡೆಗೆ ನಡೆಸುವ ಜವಾಬ್ದಾರಿ ನಮ್ಮದು. ನಮ್ಮ ಅಪ್ಪ ಅಮ್ಮ ಎಷ್ಟೆ ಕಷ್ಟ ಪಟ್ಟಿರಬಹುದು , ನಮ್ಮ ಭವಿಷ್ಯ , ಆರೋಗ್ಯ ಇತ್ಯಾದಿ ಕುರಿತು ಅವರೆಷ್ಟು ಚಿಂತಿಸಿರಬಹುದು ಎನ್ನುವ ಯೋಚನೆಗಳನ್ನು ಕೂಡ ಬಂದದ್ದು ಮಗಳು ಬಂದ ನಂತರವೇ! ಹೀಗೆ ಭಾರತಕ್ಕೆ ವಾಪಸ್ಸು ಬಂದ ಮೇಲೆ ಜೀವನ ಸಾಗುತ್ತಿತ್ತು. ಕರೋನ ಬದುಕಿನ ಇನ್ನೊಂದು ಮಜಲನ್ನು ಕೂಡ ನಮಗೆ ಪರಿಚಯಿಸಿತು.

ಫಾರಿನ್ ನ್ಯಾಷನಲ್ ರಿಜಿಸ್ಟ್ರೇಷನ್ ಆಫೀಸ್, “ ನಿಮ್ಮ ಮಗಳು ಭಾರತದಲ್ಲಿ ಇಲ್ಲೀಗಲ್ , ಅವಳ ಸ್ಪ್ಯಾನಿಷ್ ಪಾಸ್‌ಪೋರ್ಟ್ ವಾಯಿದೆ ಮುಗಿದ ನಂತರ ನೀವು ಅದನ್ನು ನವೀಕರಿಸಲು 8 ತಿಂಗಳು ಹೆಚ್ಚುವರಿ ತೆಗೆದುಕೊಂಡಿದ್ದೀರಿ. ಹೀಗಾಗಿ ಅವಳು ಈ ಎಂಟು ತಿಂಗಳ ಕಾಲ ಭಾರತದಲ್ಲಿ ಕಾನೂನು ಬಾಹಿರವಾಗಿ ಜೀವಿಸಿದ್ದಾಳೆ . ಇದನ್ನು ನೀವು ತಿದ್ದಿಕೊಳ್ಳಲು ಅವಕಾಶವಿದೆ. ನೋಟರಿ ಬಳಿ ಹೋಗಿ ಒಂದು ಅಫಿಡವಿಟ್ ಮಾಡಿಸಿ , ಅದರಲ್ಲಿ ಈ ರೀತಿಯ ಹೆಚ್ಚುವರಿ ಸಮಯಕ್ಕೆ ಕಾರಣವೇನು ಎನ್ನುವುದನ್ನು ನಮೂದಿಸಿ , ಹೊಸ ಪಾಸ್‌ಪೋರ್ಟ್ ಮತ್ತು ಹಳೆ ಪಾಸ್‌ಪೋರ್ಟ್ ಕಾಪಿಗಳನ್ನ ಕಳುಹಿಸಿ ನಂತರ ಪರಿಶೀಲನೆ ಮಾಡಿ ಜುಲ್ಮಾನೆಯ ಮೊತ್ತವನ್ನು ಹೇಳುತ್ತೇವೆ.

ನೀವು ಕಟ್ಟಿದರೆ ಎರಡು ದಿನದಲ್ಲಿ ಹೊಸ ಸರ್ಟಿಫಿಕೇಟ್ ನೀಡುತ್ತೇವೆ ಎನ್ನುವ ನೋಟೀಸು ಮತ್ತು ಮಾಹಿತಿ ಹೊತ್ತ ಮೈಲ್ ಇನ್ಬಾಕ್ಸ್‌ನಲ್ಲಿ ಬಂದು ಕುಳಿತ್ತಿತ್ತು. ಬದುಕು ಎಷ್ಟೊಂದು ಸ್ವಾರ್ಥದಿಂದ ತುಂಬಿದೆ ಅಲ್ಲವೇ ? ಕಣ್ಣೆದೆರು ಅಷ್ಟೊಂದು ಜನ ಕಾನೂನುಬಾಹಿರ ವಲಸಿಗರನ್ನು ಕಂಡು ಮರುಗಿರಲಿಲ್ಲ , ಮಗಳು ಕೇವಲ ಎಂಟು ತಿಂಗಳು ಭಾರತದಲ್ಲಿ ಮಾಹಿತಿ ನೀಡದೆ ಹೆಚ್ಚುವರಿ ಜೀವಿಸಿದ್ದಾಳೆ ಎನ್ನುವುದು ಮನಸ್ಸಿಗೆ ಕಿರಿಕಿರಿ ಮಾಡಿತು. ಇದಕ್ಕೆಲ್ಲವೂ ಕಾರಣ ಕರೋನ . ಟ್ರಾವೆಲ್ ಮಾಡಲಾಗದ ಪರಿಸ್ಥಿತಿ ಇದ್ದುದರಿಂದ ನಾವು ಪಾಸ್‌ಪೋರ್ಟ್ ರಿನ್ಯೂಯಲ್ ಮಾಡುವುದು ತಡವಾಯಿತು.

ಸ್ಪೇನ್ ಗೆ ಹೊರಡಲು ತಯಾರಾಗಿದ್ದ ನಮಗೆ ಲಾಕ್‌ಡೌನ್ ನಿಂದ ಟಿಕೆಟ್ , ಹೋಟೆಲ್ ಬುಕಿಂಗ್ ಹೀಗೆ ಎಲ್ಲದಕ್ಕೂ ಒಂದಷ್ಟು ದಂಡವನ್ನು ಕಟ್ಟುವಂತಾಯಿತು. ಜೊತೆಗೆ ೮ ತಿಂಗಳ ನಂತರ ಹೊಸ ಸಮಸ್ಯೆ ಬೇರೆ. ನೋಟರಿಯವನು ನನ್ನ ಮುಖವನ್ನೇ ನೋಡಲಿಲ್ಲ , ಇನ್ನು ನಾನು ತೆಗೆದುಕೊಂಡು ಹೋಗಿದ್ದ ಪಾಸ್‌ಪೋರ್ಟ್ ಪರಿಶೀಲನೆ ಎಲ್ಲಿಂದ ಮಾಡುತ್ತಾರೆ ? ಕೇವಲ 50 ರೂಪಾಯಿ ಪಡೆದು ಸೈನ್ ಮತ್ತು ಸೀಲ್ ಹಾಕಿ ಕೈಯಾಡಿಸಿ ಬೀಳ್ಕೊಟ್ಟಿದ್ದರು.

ನಮ್ಮ ದೇಶದ ನೋಟರಿಯ ಅವಸ್ಥೆ ತಿಳಿದಿದ್ದೂ ಅದೇಕೆ ನಮ್ಮ ಫಾರಿನ್ ನ್ಯಾಷನಲ್ ರಿಜಿಸ್ಟ್ರೇಷನ್ ಆಫೀಸ್‌ನವರು ಇಂತಹ ಪತ್ರಗಳನ್ನ ಕೇಳುತ್ತಾರೆ ಭಗವಂತ ಬಲ್ಲ. ಜೊತೆಗೆ ಮಗಳ ಎಲ್ಲಾ ಖರ್ಚನ್ನು ನೋಡಿಕೊಳ್ಳುತ್ತೇವೆ ಎನ್ನುವ ಮುಚ್ಚಳಿಕೆ ಬೇರೆ ಬರೆದುಕೊಡಬೇಕಂತೆ ! ನನ್ನ ದೇಶದಲ್ಲಿ ನನ್ನ ಮಗಳು ಒಂದಷ್ಟು ತಿಂಗಳು ಇಲ್ಲೀಗಲ್ ಆಗುತ್ತಾಳೆ ಎನ್ನುವುದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಅಂತಹ ಅನುಭವವನ್ನೂ ಕರೋನ ನಮಗೆ ದಯಪಾಲಿಸಿತು. ಅದು ಇಲ್ಲೀಗಲ್ ವಲಸಿಗರ ಮನಸ್ಸಿನಲ್ಲಿ ಏನಾಗುತ್ತಿರಬಹುದು ಎನ್ನುವುದರ ಸಣ್ಣ ಪರಿಚಯವನ್ನೂ ಮಾಡಿಸಿತು.

ರಂಗಸ್ವಾಮಿ ಎಂ

View all posts by this author