ಪದಸಾಗರ
ಸುಮಾರು ಎಂಟು ವರ್ಷಗಳ ಹಿಂದೆ ‘ವಿಶ್ವವಾಣಿ’ಯಲ್ಲೇ ಅಂಕಣ ಬರೆದಿದ್ದೆ, ‘ಅಂಗೈ ಅಗಲ ಜಾಗ ಸಾಕು ಅಂದಾತನಿಗೆ ಇದೆಂಥ ಪರಿಸ್ಥಿತಿ?’ ಎಂಬ ಶೀರ್ಷಿಕೆ ಅಡಿಯಲ್ಲಿ. ‘ವಿಷ್ಣು ಚಕ್ರ’ ಒಂದು ಸುತ್ತು ಪೂರ್ತಿ ಸುತ್ತಿ ಮತ್ತೆ ಅ ಬಂದು ನಿಂತಿದೆ. ಆದರೆ ಸ್ಮಶಾನದಲ್ಲಿ(?) ಸ್ಮಶಾನ ಮೌನ ಆವರಿಸಿದೆ!
ವಿಷ್ಣು ಅಸ್ಥಿ ಇಟ್ಟು ಪುಣ್ಯಭೂಮಿ ಎಂದು ಕರೆಯಲ್ಪಟ್ಟಿದ್ದ ಜಾಗ ರಾತ್ರೋರಾತ್ರಿ ನೆಲಸಮವಾಗಿದೆ. ವಿಷ್ಣು ಅಭಿಮಾನಿಗಳು ಭಾವುಕತೆಯ ಪರಾಕಾಷ್ಠೆಯಲ್ಲಿ ಆಕ್ರೋಶ ಮತ್ತು ದುಃಖ ವ್ಯಕ್ತಪಡಿಸು ತ್ತಿದ್ದಾರೆ. ಈ ನಡುವೆ ಅಭಿಮಾನಿಗಳ ಮತ್ತು ವಿಷ್ಣು ಕುಟುಂಬದ ನಡುವೆಯೂ ಭಿನ್ನಾಭಿಪ್ರಾಯ ಗಳು ಎದ್ದು ಕಾಣುತ್ತಿವೆ.
ನಟ ವಿಷ್ಣುವರ್ಧನ್ ಬ್ರಾಹ್ಮಣ ಎಂಬ ಕಾರಣಕ್ಕೆ ಈ ರೀತಿ ಸತತ ನೋವುಣ್ಣುತ್ತಿದ್ದಾರೆ ಎಂಬ ವಾದಕ್ಕೆ ಈ ಲೇಖನ ಬರೆಯುವ ಹೊತ್ತಲ್ಲಿ ನಾನಿಲ್ಲ. ವಿಷ್ಣುವಿಗಾದ ಎಲ್ಲ ನೋವುಗಳಿಗೂ ರಾಜ್ ಕುಟುಂಬವೇ ಕಾರಣ ಎಂಬ ಆರೋಪವನ್ನಂತೂ ನಾನು ಸುತರಾಂ ಒಪ್ಪುವುದೇ ಇಲ್ಲ. ಆದರೆ ವಿಷ್ಣು ನಿಜಾರ್ಥದಲ್ಲಿ ಶಾಪಗ್ರಸ್ತ ಗಂಧರ್ವ. ಇಂಡಸ್ಟ್ರಿಗೆ ಬಂದಾಗಿನಿಂದ ಹಿಡಿದು ಸಮಾಧಿ-ಸ್ಮಾರಕಗಳ ವಿವಾದದ ತನಕ ವಿಷ್ಣುವಿಗೆ ಮತ್ತು ವಿಷ್ಣು ಆತ್ಮಕ್ಕೆ ನೆಮ್ಮದಿಯೇ ಇಲ್ಲದಂತಾಗಿರುವು ದಂತೂ ಸತ್ಯ.
ಇದನ್ನೂ ಓದಿ: Naveen Sagar Column: ನಗುವನ್ನು ಸಾಂಕ್ರಾಮಿಕವಾಗಿಸಿದ ಸುಲೋಚನಾ...
ಆಗಿರುವುದಿಷ್ಟು. ವಿಷ್ಣು ನಿಧನರಾದಾಗ ಸರಕಾರದ ಎಡವಟ್ಟು ಮತ್ತು ವಿಷ್ಣು ಅವರ ಗೆಳೆಯ ಅಂಬರೀಶ್ ಅವರು ತೆಗೆದುಕೊಂಡ ನಿರ್ಧಾರದ ಫಲವಾಗಿ ಅಭಿಮಾನ್ ಸ್ಟುಡಿಯೋದ ಕ್ಯಾಂಪಸ್ಸಿ ನಲ್ಲಿ ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರವಾಯ್ತು. ಅಂತಿಮ ಸಂಸ್ಕಾರ ಆದಾಗಿನಿಂದ ಸಹಜವಾಗಿ ಅದನ್ನು ಪುಣ್ಯಭೂಮಿ ಎಂದು ಅಭಿಮಾನಿಗಳು ನೋಡತೊಡಗಿದರು.
ವಿಷ್ಣು ಸ್ಮಾರಕ ಅ ಆಗಬೇಕೆಂಬ ಕನಸು ಕಂಡರು. ಆದರೆ ಅಭಿಮಾನ್ ಸ್ಟುಡಿಯೋ ಬಾಲಣ್ಣನ ಸ್ವತ್ತು. ಬಾಲಣ್ಣ ಕರ್ನಾಟಕಕ್ಕೊಂದು ಸ್ವತಂತ್ರ ಸ್ಟುಡಿಯೋ ಬೇಕೆಂದು ಕನಸಿಟ್ಟುಕೊಂಡು ಸರಕಾರದಿಂದ ಪಡೆದ ಜಾಗವದು. ಆದರೆ ಜಾಗ ಸಿಕ್ಕಿತೇ ಹೊರತು, ಅದನ್ನು ಸುಸಜ್ಜಿತ ಸ್ಟುಡಿಯೋ ವಾಗಿಸುವುದಕ್ಕೆ ಬಾಲಣ್ಣನಿಂದ ಸಾಧ್ಯ ಆಗಲೇ ಇಲ್ಲ.
ಬಾಲಣ್ಣನ ಸ್ಟುಡಿಯೋ ಯಾವ ಶೂಟಿಂಗಿಗೂ ಸೂಕ್ತವೆನಿಸುವಂತೆ ಇರಲಿಲ್ಲ. ಅದನ್ನು ರೆಡಿ ಮಾಡಲು ಬಾಲಣ್ಣನಿಂದ ಹಣ ಒಟ್ಟುಗೂಡಿಸಲೂ ಆಗಲಿಲ್ಲ. ಚಿತ್ರರಂಗವಾಗಲೀ, ಸರಕಾರ ವಾಗಲೀ ಅಭಿಮಾನ್ ಸ್ಟುಡಿಯೋವನ್ನು ಕಟ್ಟುವ ಬೆಳೆಸುವ ಗೋಜಿಗೇ ಹೋಗಲಿಲ್ಲ. ಅದೊಂದು ಕಳೆಬೆಳೆದ ಕಾಡುಜಾಗದ ಥರ ಉಳಿದುಬಿಟ್ಟಿತು.
ಬಾಲಣ್ಣ ಕೊನೆಗೂ ಸ್ಟುಡಿಯೋ ಕಟ್ಟಿಸಲಾಗದೇ ಹೋಗಿಬಿಟ್ಟರು. ಅಂದಹಾಗೆ ಬಾಲಣ್ಣನ ಅಂತ್ಯಸಂಸ್ಕಾರ ಆದದ್ದೆಲ್ಲಿ? ಅಭಿಮಾನ್ ಸ್ಟುಡಿಯೋದ? ನನ್ನಲ್ಲಿ ಮಾಹಿತಿ ಇಲ್ಲ. ಆನಂತರ ಅಭಿಮಾನ್ ಸ್ಟುಡಿಯೋದ ಜಾಗ ಕಾನೂನಾತ್ಮಕವಾಗಿ ಅವರ ಮಕ್ಕಳ ಕೈ ಸೇರಿತು.
ಬಾಲಣ್ಣ ನಿಧನದ ನಂತರ ಸುಮಾರು 14 ವರ್ಷದಲ್ಲಿ, ಅಭಿಮಾನ್ ಸ್ಟುಡಿಯೋ ಪೂರ್ತಿಯಾಗಿ ಪಾಳುಬಿದ್ದಂತಾಯ್ತು. ಈ ಸಮಯದಲ್ಲಿ ವಿಷ್ಣು ನಿಧನರಾಗಿದ್ದು, ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಅಂತಿಮ ಸಂಸ್ಕಾರವಾದದ್ದು. ಬಾಲಣ್ಣನ ಮಕ್ಕಳಿಗೆ ಈಗ ತಲೆಬಿಸಿ ಶುರುವಾಯ್ತು. ಅರೆ, ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟದ್ದೇ ತಪ್ಪಾಗಿ ಹೋಯ್ತಲ್ಲ, ಈಗ ಪುಣ್ಯಭೂಮಿ ಮಾಡ್ತೀವಿ, ಇಲ್ಲೇ ಸ್ಮಾರಕ ಮಾಡ್ತೀವಿ ಅಂತ ಹೊರಟುಬಿಟ್ಟಿದ್ದಾರಲ್ಲ.
ಇದನ್ನು ಹೇಗೆ ಒಪ್ಪೋದು? ಇದು ಕೇವಲ ಹಣಕ್ಕೆ ಸಂಬಂಧಿಸಿದ ವಿಷಯವಲ್ಲ. ಹಾಗಿದ್ದಿದ್ರೆ ದೊಡ್ಡ ಬೆಲೆ ಕೇಳಿ ಬಾಲಣ್ಣನ ಕುಟುಂಬ ಮಾರಿಬಿಡ್ತಿತ್ತೇನೋ. ಮಾರಲು ಸಿದ್ಧವಿಲ್ಲದ ಜಾಗವನ್ನು ಕೊಳ್ಳಲು ಬಂದರೆ ಯಾರು ತಾನೇ ಕೊಡುತ್ತಾರೆ? ಅಷ್ಟೇ ಅಲ್ಲ, ತಮ್ಮಪ್ಪನ ಸ್ವಂತ ಜಾಗದಲ್ಲಿ ಯಾರದ್ದೇ ಸಮಾಧಿ-ಸ್ಮಾರಕ ನಿರ್ಮಿಸುತ್ತೇವೆ ಅಂದರೆ ಹೇಗೆ ತಾನೇ ಒಪ್ಪೋಕೆ ಸಾಧ್ಯ? ಈ ಮಧ್ಯೆ ಬಾಲಣ್ಣನ ಮಕ್ಕಳು ಈ ಜಾಗವನ್ನು ಕಮರ್ಷಿಯಲ್ ಆಗಿ ಬಳಸಿಕೊಳ್ಳುವ ಯೋಜನೆ ಹಾಕಿರುವುದು ಹೌದು.
ಏತನ್ಮಧ್ಯೆ ವಿಷ್ಣು ತವರು ಮೈಸೂರಿನಲ್ಲಿ ವಿಶಾಲ ಜಾಗದಲ್ಲಿ ಬಹುಕೋಟಿ ವೆಚ್ಚದಲ್ಲಿ ಕುಟುಂಬದ ಮನವಿಯಂತೆ, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಗೊಂಡಿದೆ ಎಂಬುದನ್ನು ನಾವು ನೆನಪಲ್ಲಿಟ್ಟು ಕೊಳ್ಳಬೇಕು. ಈ ಹಂತದಲ್ಲಿ ಪ್ರಕರಣ ಕೋರ್ಟಿಗೆ ಹೋಗಿದೆ- ವಿಷ್ಣು ಪುಣ್ಯಭೂಮಿಗೆ ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಕೊಡಬೇಕೋ ಬೇಡವೋ ಎಂದು.
ವಿಷ್ಣು ಕುಟುಂಬ ಈ ವಿಚಾರದಲ್ಲಿ ಡಿಮ್ಯಾಂಡ್ ಮಾಡಿಲ್ಲ. ಸರಕಾರವಂತೂ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಿ ತನ್ನ ಜವಾಬ್ದಾರಿ ಮುಗಿಸಿತ್ತು. ಚಿತ್ರರಂಗವೂ ಈ ವಿಚಾರದಲ್ಲಿ ಮಾತಿಗೆ ಬರಲಿಲ್ಲ. ನ್ಯಾಯಾಲಯ ತನ್ನ ತೀರ್ಪು ನೀಡಿಯೇ ಬಿಟ್ಟಿತು. ಅಭಿಮಾನಿಗಳು ಹೇಳ್ತಾರೆ ಅನ್ನೋ ಕಾರಣಕ್ಕೆ ಪುಣ್ಯಭೂಮಿಯಲ್ಲಿ ಸ್ಮಾರಕಕ್ಕೆ ಜಾಗ ಕೊಡಲಾಗುವುದಿಲ್ಲ.
ಅಭಿಮಾನಿಗಳಿಗೂ ಇದಕ್ಕೂ ಸಂಬಂಧವಿಲ್ಲ. ಹೀಗೇ ಅಭಿಮಾನಿಗಳು ತಂತಮ್ಮ ನಟ/ನಾಯಕರಿಗೆ ಸ್ಮಾರಕಕ್ಕಾಗಿ ಹಟ ಹಿಡಿದು ಕೂತರೆ ಒಪ್ಪಲು ಸಾಧ್ಯವೇ ಅಂದುಬಿಟ್ಟಿತು. ಅಭಿಮಾನಿಗಳಿಗಾದ ನಿಜವಾದ ಮರ್ಮಾಘಾತವಿದು. ಇಂಥ ಸಂದರ್ಭದಲ್ಲಿ ಒಮ್ಮೆ ಭಾವುಕತೆ ಸೈಡಿಗಿಟ್ಟು ಅಥವಾ ಭಾವುಕತೆ ಎಂಬುದು ಕೇವಲ ಅಭಿಮಾನಿಗಳಿಗೆ ಮಾತ್ರ ಇರೋದಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಒಂದಷ್ಟು ಮಾತನಾಡಬೇಕಾಗುತ್ತದೆ.
ರಾಷ್ಟ್ರಕವಿ ಕುವೆಂಪು ನಿಧನರಾದಾಗ, ಅವರ ಸಮಾಧಿಯನ್ನು ಮಾನಸಗಂಗೋತ್ರಿಯಲ್ಲಿ ನಿರ್ಮಿಸ ಬೇಕು ಎಂಬ ಕೂಗೆದ್ದಿತ್ತು. ಯಾಕಂದ್ರೆ ಕುವೆಂಪು ಮಾನಸಗಂಗೋತ್ರಿಯ ನಿರ್ಮಾತೃ. ಆಗ ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಒಂದು ಮಾತನ್ನು ಹೇಳಿದರು- ಈಗ ಕುವೆಂಪು ಸಮಾಧಿ ಮಾಡುತ್ತೀರಿ. ಮುಂದಿನ ದಿನಗಳಲ್ಲಿ ಯೂನಿವರ್ಸಿಟಿಗೆ ಸಂಬಂಧಿಸಿದ ಯಾವುದೇ ಗಣ್ಯರು,
ಕುಲಪತಿ, ಉಪಕುಲಪತಿಗಳು ತೀರಿಕೊಂಡರೂ, ಅವರ ಸಮಾಧಿಗಾಗಿ ಕೂಗು ಶುರುವಾಗುತ್ತದೆ. ಎಲ್ಲರದೂ ಸಮಾಧಿ ನಿರ್ಮಿಸುತ್ತಾ ಹೋದರೆ, ಯೂನಿವರ್ಸಿಟಿ ಯೂನಿವರ್ಸಿಟಿ ಆಗಿ ಉಳಿಯುವು ದಿಲ್ಲ, ಸ್ಮಶಾನವಾಗುತ್ತದೆ. ಕುವೆಂಪು ಅವರು ಹುಟ್ಟೂರು ಕುಪ್ಪಳ್ಳಿಯ ಇರಲಿ ಎಂದಿದ್ದರು. ಈ ಸೆನ್ಸಿಬಲಿಟಿ ಇಂದಿನ ತುರ್ತು ಅಲ್ಲವೇ? ಸಿನಿಮಾ ನಟರು ಖಂಡಿತವಾಗ್ಯೂ ಸಾಂಸ್ಕೃತಿಕ ರಾಯಭಾರಿಗಳು.
ಅದರಲ್ಲೂ ರಾಜ್‌ರಂಥ ಮೇರುನಟರು ಯಾವತ್ತಿಗೂ ಮನುಕುಲಕ್ಕೆ ಆದರ್ಶವೇ. ವಿಷ್ಣು ಕೂಡ ಅದೇ ಸಾಲಿನಲ್ಲಿ ನಿಲ್ಲಬಲ್ಲ ವ್ಯಕ್ತಿತ್ವ. ಇದನ್ನು ಅವರು ನಟಿಸಿದ ಚಿತ್ರಗಳಿಂದಲೇ ಅಳೆಯಲಾಗ ದಿದ್ದರೂ, ವ್ಯಕ್ತಿಯಾಗಿ ವಿಷ್ಣು ಅನುಕರಣೀಯರಾಗಿದ್ದವರು. ಹಲವು ಅದ್ಭುತ ಚಿತ್ರಗಳಿಂದ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾದವರು, ನಗಿಸಿದವರು, ಕಣ್ಣಂಚಲ್ಲಿ ನೀರು ತರಿಸಿದವರು. ಅವರು ಸದಾ ಸ್ಮರಣೀಯರು.
ನಿಧನದ ನಂತರವೂ ಅವರ ಹೆಸರು ಚಿರಕಾಲ ಉಳಿಯಬೇಕಾದ್ದೇ. ಆದರೆ ಅದಕ್ಕೆ ಸಮಾಧಿ-ಸ್ಮಾರಕ ಗಳೇ ಮಾನದಂಡವಾ? ಅವರ ಹೆಸರು ಚಿರಸ್ಥಾಯಿಯಾಗಿಸಲು ಬೇರೆ ಉದಾತ್ತ ಮಾರ್ಗಗಳೇ ಇಲ್ಲವಾ? ಕೇಳಿಕೊಳ್ಳಬೇಕಾದ ಪ್ರಶ್ನೆ ಅಲ್ಲವೇ? ಕೋರ್ಟ್ ಆರ್ಡರ್ ಬರುತ್ತಿದ್ದಂತೆಯೇ ರಾತ್ರೋರಾತ್ರಿ ಪುಣ್ಯಭೂಮಿಯನ್ನು ನೆಲಸಮ ಮಾಡಿಬಿಟ್ಟರು ಎಂದು ಗೊತ್ತಾದಾಗ, ಮೊದಲ ಪ್ರತಿಕ್ರಿಯೆ ಬರುವುದು ‘ಹೇಯ ನಡೆ, ಹೇಡಿತನದ ನಡೆ ಅಂತಲೇ’.
ಆದರೆ ಅಭಿಮಾನಿಗಳಿಗೆ ಗೊತ್ತಾಗುವ ಹಾಗೆ ಹಗಲುಹೊತ್ತಿನಲ್ಲಿ ತೆರವುಗೊಳಿಸುವುದು ಸಾಧ್ಯವಿತ್ತಾ? ಖಂಡಿತ ಇಲ್ಲ. ಅದೊಂದು ದೊಡ್ಡ ಗಲಭೆಗೆ ಆಸ್ಪದ ಕೊಟ್ಟಿರುತ್ತಿತ್ತು. ರಕ್ತಪಾತಗಳಾಗಿರುತ್ತಿದ್ದವು. ಅಭಿಮಾನ್ ಸ್ಟುಡಿಯೋ ರಣರಂಗವಾಗಿರುತ್ತಿತ್ತು. ಕೋರ್ಟ್ ತೀರ್ಪು ಕೈಲಿದ್ದಾಗಲೂ ರಾತ್ರಿ ಹೊತ್ತು ನೆಲಸಮ ಮಾಡುವ ಪರಿಸ್ಥಿತಿ ಇದೆ ಅಂದರೆ ಅದು ಅಭಿಮಾನಿಗಳಿಂದಾಗಬಹುದಾದ ಅಪಾಯದ ಭಯ ಅಂತಲೇ ಅರ್ಥ.
ಇನ್ನು ಅಭಿಮಾನಿಗಳು ಬಾಲಣ್ಣನ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ- ಇಲ್ಲಿ ಮಾಲ್ ಕಟ್ಟಿಸೋದಕ್ಕೆ ಪುಣ್ಯಭೂಮಿಯನ್ನು ನಾಶಮಾಡಿದ್ದಾರೆ ಅಂತ. ಅಭಿಮಾನಿಗಳ ಸಮಸ್ಯೆ ಏನು? ಈಗ ಬಾಲಣ್ಣನ ಮಕ್ಕಳು ಅಲ್ಲಿ ಮಾಲ್ ನಿರ್ಮಿಸದೇ ಇದ್ದರೆ, ಪುಣ್ಯಭೂಮಿ ತೆರವು ಗೊಳಿಸೋದು ಓಕೆನಾ? ಮೊತ್ತಮೊದಲಿಗೆ ಸಮಸ್ಯೆಯ ಬುಡಕ್ಕೆ ಹೋಗಿ ನೋಡಬೇಕು. ಕಂಠೀರವ ಸ್ಟುಡಿಯೋದ ವಿಷ್ಣು ಸಮಾಧಿ ನಿರ್ಮಿಸುವುದಕ್ಕೆ ಸರಕಾರ ಮುಂದಾಗಿತ್ತು. ಆದರೆ ಆಗ ಕುಟುಂಬವೇ ಅದನ್ನು ನಿರಾಕರಿಸಿತ್ತು. ಕಾರಣ ಇವತ್ತಿಗೂ ಗೊತ್ತಿಲ್ಲ.
ರಾಜ್ ಸಮಾಧಿಯ ಬಳಿಯಲ್ಲಿ ವಿಷ್ಣು ಸಮಾಧಿ ಬೇಡ ಎಂಬ ಉದ್ದೇಶವಿತ್ತಾ? ವಿಷಯ ತಿಳಿಯದ ಅಭಿಮಾನಿಗಳು ಇಲ್ಲಿಯೂ ದೂಷಿಸಿದ್ದು ರಾಜ್ ಕುಟುಂಬವನ್ನು. ರಾಜ್ ಕುಟುಂಬ ವಿಷ್ಣು ಸಮಾಧಿಗೆ ಕಂಠೀರವದಲ್ಲಿ ಜಾಗ ಸಿಗದಂತೆ ಮಾಡಿತು ಎಂಬ ಕಥೆ ಕಟ್ಟಿ ಸಿಂಪಥಿ ಸೃಷ್ಟಿಸಿದ್ದಲ್ಲದೇ, ಇಬ್ಬರೂ ತೀರಿಕೊಂಡ ನಂತರವೂ ಇಬ್ಬರ ನಡುವಣ ಕಂದಕವನ್ನು ಹಾಗೇ ಉಳಿಸಲು ಪ್ರಯತ್ನಿಸಿದರು.
ಅಂದು ಕಂಠೀರವದಲ್ಲಿ ಸಮಾಧಿ/ಸ್ಮಾರಕ ನಿರ್ಮಾಣವಾಗಿಬಿಟ್ಟಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ ವಲ್ಲ. ಕಂಠೀರವ ಸ್ಟುಡಿಯೋ ಜಾಗದಲ್ಲಿ ಬೇಡ ಅಂದ ಮಾತ್ರಕ್ಕೆ ಅದಕ್ಕೆ ಪರ್ಯಾಯವಾಗಿ ಬಾಲಣ್ಣನ ಸ್ಟುಡಿಯೋವೇ ಯಾಕೆ ಚಿತಾಗಾರ ಆಗಬೇಕಿತ್ತು? ಬೇರೆ ಜಾಗವೇ ಇರಲಿಲ್ಲವೇ? ಕಂಠೀರವ ಸರಕಾರಿ ಸ್ವತ್ತು. ಆದರೆ ಅಭಿಮಾನ್ ಬಾಲಣ್ಣನ ಕುಟುಂಬದ ಸ್ವತ್ತು. ಯಾರು ತಾನೇ ತಮ್ಮ ಸ್ವಂತ ಜಾಗದಲ್ಲಿ ಅಂತಿಮ ಸಂಸ್ಕಾರ ಮಾಡೋಕೆ ಅವಕಾಶ ಕೊಡ್ತಾರೆ? ಹುಯಿಲೆಬ್ಬಿಸು ತ್ತಿರುವ ಅಭಿಮಾನಿಗಳನ್ನೇ ಕೇಳ್ತೀನಿ- ಜನಪ್ರಿಯ ವ್ಯಕ್ತಿಯೊಬ್ಬ ಸತ್ತರೆ, ನಿಮ್ಮ ಸ್ವಂತ ಜಾಗದಲ್ಲಿ ಅವನ ಸಂಸ್ಕಾರ ಮಾಡಿ ಸಮಾಧಿ ನಿರ್ಮಿಸಲು ಒಪ್ಪುತ್ತೀರಾ? ಸ್ವಂತ ಜಾಗವನ್ನು ಯಾರು ಯಾಕೆ ಹೀಗೆ ಬಿಟ್ಟುಕೊಡಲು ಒಪ್ತಾರೆ? ಇಷ್ಟವಿಲ್ಲದಿದ್ದರೂ ಬಲವಂತಕ್ಕೆ ಯಾಕೆ ಮಾರುತ್ತಾರೆ? ಬಾಲಣ್ಣನ ಕುಟುಂಬದ ತಪ್ಪೇನಿದೆ ಇದರಲ್ಲಿ? ಸರಕಾರ ಬಾಲಣ್ಣನಿಗೆ ಈ ಜಾಗ ಕೊಟ್ಟದ್ದು ಸ್ಟುಡಿಯೋ ನಿರ್ಮಿಸೋದಕ್ಕೆ. ಅದರ ಹೊರತಾಗಿ ಬೇರೇನಾದರೂ ಕಟ್ಟಿದರೆ, ಸರಕಾರ ಜಾಗವನ್ನು ಮುಟ್ಟು ಗೋಲು ಹಾಕಿಕೊಂಡು ವಾಪಸ್ ಪಡೆಯಬೇಕು ಎಂದು ಕೆಲವರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
ಹಾಗೇನಾದರೂ ಇದ್ದಿದ್ರೆ ಸರಕಾರ ಇಷ್ಟು ದಿನ ಸುಮ್ಮನೆ ಇರ್ತಾ ಇರ್ಲಿಲ್ಲ ಅನ್ನೋ ಸಾಮಾನ್ಯ ಜ್ಞಾನ ಅಭಿಮಾನಿಗಳಿಗೆ ಇರಬೇಕಿತ್ತು. ಬಾಲಣ್ಣ ಸ್ಟುಡಿಯೋ ನಿರ್ಮಿಸಲು ಹರಸಾಹಸ ಪಟ್ಟಾಗ ಯಾರೊಬ್ಬರೂ ಹೆಗಲು ಕೊಡಲಿಲ್ಲ. ಈಗ ಅವರ ಮಕ್ಕಳು ಕೂಡ ಬಾಲಣ್ಣನ ರೀತಿಯ ಒದ್ದಾಡಿ ಸಾಯಬೇಕಾ? ನಾಳೆ ಅಂದು ಮಾಲ್ ತಲೆಯೆತ್ತಿ ನಿಂತರೆ, ಅದರಂದು ಮಲ್ಟಿಪ್ಲೆಕ್ಸೂ ಬರಬಹುದು. ಅದೂ ಸಿನಿಮಾಗೆ ಪೂರಕವೇ ಅಲ್ಲವೇ? ಬಾಲಣ್ಣನ ಮಕ್ಕಳು ಉದ್ಧಾರವಾಗಬಾರದೇ? ಈಗಾಗಲೇ ಕುಟುಂಬದ ಇಚ್ಛೆ ಅನುಸಾರ, ಸರಕಾರ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಿಕೊಟ್ಟಿದೆ.
ಆದರೂ ಬೆಂಗಳೂರಿನಲ್ಲೂ ಬೇಕು ಎಂಬ ಹಟವೇಕೆ? ಇದೇ ರೀತಿ ಅಂಬರೀಶ್, ರಾಜ್, ಪುನೀತ್, ಜಯಂತಿ, ಸರೋಜಾದೇವಿ, ಲೀಲಾವತಿ ಎಲ್ಲರ ಅಭಿಮಾನಿಗಳೂ ತಮ್ಮತಮ್ಮ ಡಿಮ್ಯಾಂಡ್ ಮುಂದಿಡತೊಡಗಿದರೆ? ಎಷ್ಟು ಕಡೆ ಅಂತ ಸ್ಮಾರಕ ಸಮಾಧಿ ನಿರ್ಮಿಸುತ್ತಾ ಹೋಗುವುದು? ಪ್ರಾಕ್ಟಿಕಲ್ ಆಗಿ ಯೋಚಿಸಿದರೆ, ನಟರು ಸಂಭಾವನೆ ಪಡೆದು ನಟಿಸುತ್ತಾರೆ.
ನಾವು ಹಣ ಕೊಟ್ಟು ಟಿಕೆಟ್ ಪಡೆದು ಸಿನಿಮಾ ನೋಡ್ತೀವಿ. ಅಲ್ಲಿಗೆ ಇದೊಂದು ಶುದ್ಧ ವ್ಯವಹಾರದ ಕ್ಷೇತ್ರ. ಸಿನಿಮಾದ ನಟನೆಗೆ ಸಿಗುವ ಬಿರುದು, ಪ್ರಶಸ್ತಿ, ಅಭಿಮಾನ ಇವೆಲ್ಲವೂ ಬೋನಸ್. ಸಿನಿಮಾ ಮೂಲಕ ಸಿಕ್ಕಿರೋ ಜನಪ್ರಿಯತೆ, ಸಿನಿಮಾ ಮೂಲಕ ಸಮಾಜಕ್ಕೆ ನೀಡಿದ ಪಾಸಿಟಿವ್ ಸಂದೇಶ ಇವೆಲ್ಲವನ್ನೂ ಪರಿಗಣಿಸಿ ಗೌರವಿಸುವುದು ಸ್ವಾಗತಾರ್ಹ.
ಆದರೆ ವಿವೇಚನಾರಹಿತ, ಅಹಮಿಕೆಯ ಅಭಿಮಾನ ಖಂಡನಾರ್ಹ. ಸರಕಾರ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಮೂಲಕ ತನ್ನ ಗೌರವ ಸಲ್ಲಿಸಿದೆ, ಜವಾಬ್ದಾರಿಯನ್ನೂ ಮುಗಿಸಿದೆ. ಅಂತೆಯೇ ನ್ಯಾಯಾಲಯದ ಆದೇಶ ಬಾಲಣ್ಣನ ಕುಟುಂಬದ ಪರವಾಗಿದೆ. ಇದರ ಮೇಲೆ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯುವುದಾದರೆ, ಸ್ವಂತ ಹಣದಲ್ಲಿ ಅಥವಾ ದೇಣಿಗೆ ಸಂಗ್ರಹ ಮಾಡಿ ಬೆಂಗಳೂರಿನಲ್ಲಿ ಜಾಗ ಖರೀದಿಸಿ, ಅದ್ಭುತ ಸ್ಮಾರಕ ನಿರ್ಮಿಸಲಿ. ಅದರ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಲಿ.
ಅದು ವಿಷ್ಣುವಿಗೆ ಅಭಿಮಾನಿಗಳು ನೀಡಬಹುದಾದ ಸ್ವಾಭಿಮಾನದ ಕೊಡುಗೆ. ಕುಟುಂಬಕ್ಕಿಂತ ಅಭಿಮಾನಿಗಳು ಹೆಚ್ಚು ಅಂತ ಹೊರ ನೋಟ ಹೇಳಬಹುದು. ಆದರೆ ಕುಟುಂಬವೇ ಅಂತಿಮಸತ್ಯ. ಇದನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳಲಿ. ಸಾಕು ವಿಷ್ಣು ಆತ್ಮ ನರಳಿದ್ದು. ಇನ್ನಾದರೂ ನೆಮ್ಮದಿಯಾಗಿರಲು ಬಿಡಿ. ಸಮಾಧಿ, ಸ್ಮಾರಕ ನಿಮ್ಮ ‘ಇಗೋ’ ತಣಿಸುವ ಸಾಧನಗಳಾಗದಿರಲಿ. ಖುದ್ದು ಸಂತನಂತೆ ತಮ್ಮ ಕೊನೆದಿನಗಳನ್ನು ಬದುಕಿದ ವಿಷ್ಣುಗೆ ಇದ್ಯಾವುದೂ ಬೇಕಿರಲಿಲ್ಲ.
ಅವರೇ ವಿರಕ್ತಿ ತೋರಿದ ವಿಷಯಕ್ಕೆ ನೀವ್ಯಾಕೆ ಬಡಿದಾಡಿ, ಅವರ ಮನ ನೋಯಿಸುತ್ತೀರಿ? ನಾನೂ ವಿಷ್ಣುವರ್ಧನ್ ಚಿತ್ರಗಳ ಅಭಿಮಾನಿ. ವ್ಯಕ್ತಿತ್ವದ ಅಭಿಮಾನಿ. ಆದರೂ ಇಂದು ನಾನಾಡಿದ ಮಾತುಗಳು ಅಭಿಮಾನಿಗಳಿಗೆ ಹಿಡಿಸಿರುವುದಿಲ್ಲ. ದಟ್ಸ್ ಓಕೆ. ಮುಂದೆಂದೋ ಸರಿ ಅನಿಸಬಹುದು.