ತಿಳಿರು ತೋರಣ
ಅಧಿಕ ವರ್ಷದಲ್ಲಿ 29, ಉಳಿದಂತೆ 28 ದಿನಗಳಿರುವ ತಿಂಗಳು ಎನ್ನುವುದು ಫೆಬ್ರವರಿಯ ಹೆಗ್ಗಳಿಕೆ. ಮಿಕ್ಕ ತಿಂಗಳುಗಳಿಗಿಂತ ಕಡಿಮೆ ದಿನಗಳೆಂದ ಮೇಲೆ ಹೆಗ್ಗಳಿಕೆಯೇನು ಬಂತು? ಅದು ಹಾಗಲ್ಲ. ತಿಂಗಳ ಸಂಬಳ, ನಿವೃತ್ತಿವೇತನ, ಮಾಸಾಶನ ಪಡೆಯುವವರಿಗೆಲ್ಲ ಫೆಬ್ರವರಿಯಲ್ಲಿ ಕಡಿಮೆ ದಿನ ಗಳಲ್ಲಿ ಹೆಚ್ಚು ಗಳಿಕೆ ತಾನೆ? ಅದನ್ನೇ ಫೆಬ್ರವರಿಯ ಹೆಗ್ಗಳಿಕೆ ಎಂದಿದ್ದು.
ಮತ್ತೊಂದೆಡೆ, ಫೆಬ್ರವರಿಯಲ್ಲೂ 30 ದಿನ ಎಂದು ತೋರಿಸುವವರಿದ್ದಾರೆ- ಮೊನ್ನೆ ಕಾಂಗ್ರೆಸ್ ಪಕ್ಷದ ವತಿಯಿಂದ ಮನರೇಗಾ ಬಚಾವ್ ಸಂಗ್ರಾಮ ಫೆಬ್ರವರಿ 30ಕ್ಕೆ ಅಂತೊಂದು ಫ್ಲೆಕ್ಸ್ʼನ ಚಿತ್ರ ಭಾರಿ ವೈರಲ್ ಆಗಿತ್ತಲ್ಲ!? ಹಿಂದೊಮ್ಮೆ 2018ರಲ್ಲಿ ಇಂಡಸ್‌ಇಂಡ್ ಬ್ಯಾಂಕ್‌ನವರು ಮುದ್ರಿಸಿ ವಿತರಿಸಿದ ದಿನದರ್ಶಿಕೆಯಲ್ಲಿ ಫೆಬ್ರವರಿಯಲ್ಲಿ 31 ದಿನಗಳಿದ್ದುವು!
ಆ ಚಿತ್ರ ಕೂಡ ಸಾಕಷ್ಟು ವೈರಲ್ ಆಗಿತ್ತು. ಫೆಬ್ರವರಿ 30 ಎಂಬ ಹೆಸರಿನ ಕನ್ನಡ ಸಿನಿಮಾದ್ದೊಂದು ಟೀಸರ್ ಕಳೆದ ನವೆಂಬರ್‌ನಲ್ಲಿ ಬಂದಿತ್ತು, ಅಸಲಿ ಸಿನಿಮಾ ಬಿಡುಗಡೆಯಾಯ್ತೋ ಇಲ್ಲವೋ ಗೊತ್ತಿಲ್ಲ. ನಿಗೂಢ ಪತ್ತೆದಾರಿ ಕಥೆಯದಿರಬಹುದು. ಅಮೆರಿಕದಲ್ಲಿ ಕೆಲವು ಸಮಾಧಿ ಶಿಲೆಗಳು ಆ ವ್ಯಕ್ತಿ ಸತ್ತ ತಾರೀಕು ಫೆಬ್ರವರಿ 31 ಎಂದು ತೋರಿಸುವಂಥವು ಇರುತ್ತವೆ.
ನಿಧನದ ತಾರೀಕು ನಿಖರವಾಗಿ ಗೊತ್ತಿಲ್ಲದಿದ್ದಾಗ ಹಾಗೆ ಬರೆಸುವುದು ಇಲ್ಲಿನ ಕ್ರಮ ಅಂತೆ. ಇರಲಿ, ಅಂತೂ ಫೆಬ್ರವರಿಯಲ್ಲಿ 29ಕ್ಕಿಂತ ಹೆಚ್ಚು ದಿನಗಳು ಎಂದು ಎಲ್ಲಾದರೂ ಕಾಣಿಸಿಕೊಂಡಾಗಲೆಲ್ಲ ಆ ವೈಚಿತ್ರವನ್ನು ತತ್‌ಕ್ಷಣ ಗಮನಿಸುತ್ತೇವೆ, ಅಷ್ಟರಮಟ್ಟಿಗೆ ನಮ್ಮೆಲ್ಲರ ಬುದ್ಧಿ ಹರಿತವಿದೆ ಎನ್ನು ವುದು ಮೆಚ್ಚತಕ್ಕ ಅಂಶ.
ಇದನ್ನೂ ಓದಿ: Srivathsa Joshi Column: ವನಭೋಜನ ಏಕೆ ವಿಶೇಷ ರುಚಿಕರ ಎಂದೆನಿಸುತ್ತದೆ ?
ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ 29 ದಿನಗಳಿರುತ್ತವೆ, ಅದನ್ನು ಅಧಿಕವರ್ಷ ಎನ್ನುತ್ತೇವೆ, ಭೂಮಿಯು ಸೂರ್ಯನ ಸುತ್ತ ಸುತ್ತಲಿಕ್ಕೆ 365 ದಿನಗಳಿಗಿಂತ ತುಸು ಹೆಚ್ಚು ಸಮಯ ಬೇಕಾಗು ವುದು, ನಾಲ್ಕು ವರ್ಷಗಳಲ್ಲಿ ಆ ಸಮಯವು ಒಂದು ದಿನದಷ್ಟಾಗುವುದು, ಅದೇ ಅಧಿಕ ದಿನ ಫೆಬ್ರವರಿಯ 29ನೆಯ ತಾರೀಕು. ಇಸವಿಯು ನಾಲ್ಕರಿಂದ ನಿಶ್ಶೇಷ ಭಾಗವಾದರೆ ಆ ಇಸವಿ ಅಧಿಕ ವರ್ಷ.
ಈಗ ನಡೆಯುತ್ತಿರುವ 2026ನೆಯ ಇಸವಿಯು 4ರಿಂದ ನಿಶ್ಶೇಷ ಭಾಗವಾಗುವುದಿಲ್ಲ ಆದ್ದರಿಂದ ಇದು ಅಧಿಕವರ್ಷ ಅಲ್ಲ, ಫೆಬ್ರವರಿಯಲ್ಲಿ 29 ದಿನಗಳಿಲ್ಲ. ಮುಂದೆ 2028ನೆಯ ಇಸವಿಯು ಅಧಿಕ ವರ್ಷ ವಾಗಿ ಕಂಗೊಳಿಸಲಿದೆ. ಈ 4ರಿಂದ ನಿಶ್ಶೇಷ ಭಾಗಾಕಾರ ಸ್ಥೂಲ ಲೆಕ್ಕಾಚಾರ ಅಷ್ಟೇ. ಏಕೆಂದರೆ ಅದಕ್ಕೆ ಮತ್ತಷ್ಟು ಫೈನ್ ಟ್ಯೂನಿಂಗ್ ಬೇಕಾಗುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ಒಂದು ದಿನದಂತೆ ಹೆಚ್ಚುತ್ತ ಹೋಗಿ 100 ವರ್ಷಗಳಾದಾಗ ಅದು ತುಸು ಹೆಚ್ಚೇ ಹೆಚ್ಚಾಗುತ್ತದೆ; ಆ 100ನೇ ವರ್ಷದ ಇಸವಿ 4ರಿಂದ ನಿಶ್ಶೇಷ ಭಾಗವಾದರೂ ಅಧಿಕವರ್ಷ ಅಲ್ಲವೆಂದು ಪರಿಗಣಿಸುವುದು.
ಆದ್ದರಿಂದಲೇ 1900, 2100 ಇವೆಲ್ಲ ಅಧಿಕವರ್ಷಗಳಲ್ಲ. ಅಷ್ಟು ಮಾಡಿದರೂ ಎಡ್ಜಸ್ʼಮೆಂಟ್ ಸರಿಯಾಗುವುದಿಲ್ಲ, 400 ವರ್ಷಗಳಾದಾಗ ಒಂದು ದಿನ ಸೇರಿಸಬೇಕಾದ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಇಸವಿಯು 400 ರಿಂದ ನಿಶ್ಶೇಷ ಭಾಗವಾದರೆ ಅಧಿಕವರ್ಷ ಎಂದು ಪರಿಗಣಿಸುವುದು. ಹಾಗಾಗಿಯೇ 2000ನೆಯ ಇಸವಿ ಅಧಿಕವರ್ಷ ಆಗಿದ್ದದ್ದು. ಒಟ್ಟಿನಲ್ಲಿ ಫೆಬ್ರವರಿ ತಿಂಗಳು ಕಿರಿದು ಅಷ್ಟೇ ಅಲ್ಲ ದಿನಗಣನೆಯಲ್ಲಿ ಸ್ವಲ್ಪ ಕಿರಿಕಿರಿಯದು ಕೂಡ!
ಫೆಬ್ರವರಿಯಲ್ಲಿ ಸಾಮಾನ್ಯವಾಗಿ 28 ದಿನಗಳಷ್ಟೇ ಇರುವುದರಿಂದ ಅದಕ್ಕೆ ಇನ್ನೊಂದು ಅನನ್ಯ ಹೆಗ್ಗಳಿಕೆಯೂ ಇದೆ. ಏನೆಂದರೆ, ಹುಣ್ಣಿಮೆ ಬಾರದಿರುವ ತಿಂಗಳೊಂದು ಇಡೀ ಕ್ಯಾಲೆಂಡರ್‌ನಲ್ಲಿ ಸಾಧ್ಯವಿದ್ದರೆ ಅದು ಫೆಬ್ರವರಿ ಮಾತ್ರ! ಅದರರ್ಥ ಫೆಬ್ರವರಿ ತಿಂಗಳಲ್ಲಿ ಹುಣ್ಣಿಮೆ ಬರುವುದಿಲ್ಲ ಎಂದಲ್ಲ.
ಈ ವರ್ಷ ಫೆಬ್ರವರಿ 1ರಂದೇ ಹುಣ್ಣಿಮೆ ಇದೆಯಲ್ಲ! ಒಂದು ವೇಳೆ ಈ ಹುಣ್ಣಿಮೆಯು ಜನವರಿ 31ಕ್ಕೆ ಬಂದಿತ್ತು ಅಂದ್ಕೊಳ್ಳಿ. ಮುಂದಿನ ಹುಣ್ಣಿಮೆ ಮಾರ್ಚ್ 1ಕ್ಕಿಂತ ಮೊದಲು ಬರುವುದು ಸಾಧ್ಯವಿಲ್ಲ. ಆಗ ಫೆಬ್ರವರಿಯು ‘ಹುಣ್ಣಿಮೆರಹಿತ ತಿಂಗಳು’ ಆಗುತ್ತಿತ್ತಲ್ಲವೇ? ಶತಮಾನದಲ್ಲಿ ನಾಲ್ಕೈದು ಸಲ ಹೀಗೆ ಆಗುವುದಿದೆ.
1999ರಲ್ಲಿ, ಅದಾದ ಮೇಲೆ 2018ರಲ್ಲಿ ಫೆಬ್ರವರಿ ಹುಣ್ಣಿಮೆ ರಹಿತ ಆಗಿತ್ತು. ಮುಂದೆ 2037ರ ಫೆಬ್ರವರಿಯೂ ಹುಣ್ಣಿಮೆರಹಿತ ಇರಲಿದೆ. ಅಧಿಕ ವರ್ಷದ ಫೆಬ್ರವರಿ, ಅಂದರೆ 29 ದಿನಗಳುಳ್ಳದ್ದು ಕೂಡ ಹುಣ್ಣಿಮೆರಹಿತ ಆಗುವುದು ಸಾಧ್ಯವಿದೆಯೇ? ಇದೆ, ತೀರಾ ಅಪರೂಪಕ್ಕೊಮ್ಮೆ. ಈಹಿಂದೆ 1608ರ ಫೆಬ್ರವರಿ ಹುಣ್ಣಿಮೆ ರಹಿತ ಆಗಿತ್ತು, ಮುಂದೆ 2527ರ ಫೆಬ್ರವರಿಯೂ ಹುಣ್ಣಿಮೆರಹಿತ ಇರಲಿದೆ ಎಂದು ಬ್ರಿಟಿಷ್ ಅಸ್ಟ್ರಾನಾಮಿಕಲ್ ಅಸೋಸಿಯೇಷನ್‌ನ ಜರ್ನಲ್‌ನಲ್ಲಿ ಪೀಟರ್ ಮೆಕ್ ಡೊನಾಲ್ಡ್ ಎಂಬ ಮೇಧಾವಿ ಖಗೋಳಶಾಸ್ತ್ರಜ್ಞನು ಲೆಕ್ಕಾಚಾರ ಮಾಡಿಟ್ಟಿದ್ದಾನೆ.
ಹುಣ್ಣಿಮೆರಹಿತ ಫೆಬ್ರವರಿ ಬಂದಾಗೆಲ್ಲ ಸಾಮಾನ್ಯವಾಗಿ ಒಂದೋ ಜನವರಿಯಲ್ಲಿ ಅಥವಾ ಮಾರ್ಚ್‌ನಲ್ಲಿ ಎರಡೆರಡು ಹುಣ್ಣಿಮೆಗಳು ಬರುತ್ತವೆ. ಹಾಗೆ ಒಂದು ಕ್ಯಾಲೆಂಡರ್ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬಂದರೆ ಅದನ್ನೇ ಬ್ಲೂಮೂನ್ ಎನ್ನುವುದು. ‘ಒನ್ಸ್ ಇನ್ ಎ ಬ್ಲೂಮೂನ್’ ಎಂಬ ನುಡಿಗಟ್ಟು, ಅಪರೂಕ್ಕೊಮ್ಮೆ ಸಂಭವಿಸುವುದು ಎಂಬರ್ಥದ್ದು, ಬಂದಿರುವುದು ಹಾಗೆ. ಎರಡೆರಡು ಹುಣ್ಣಿಮೆ ಬರುವ ಸಾಧ್ಯತೆ ಜನವರಿ ಅಥವಾ ಮಾರ್ಚ್‌ನಲ್ಲಿ ಮಾತ್ರ ಅಂತೇನಿಲ್ಲ. -ಬ್ರವರಿ ಹೊರತುಪಡಿಸಿ ಯಾವುದೇ ತಿಂಗಳಲ್ಲಾದರೂ ಬರಬಹುದು.
“ಈ ವರ್ಷ ಫೆಬ್ರವರಿ ತಿಂಗಳಲ್ಲಿ ತಲಾ ನಾಲ್ಕು ಭಾನುವಾರ, ಸೋಮವಾರ, ...ಶನಿವಾರ ಇವೆ. ಇದು 823 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ವಿದ್ಯಮಾನ!" ಎಂಬ ಬಂಡಲ್‌ಬಾಜಿ ಫಾರ್ವ ರ್ಡ್ ಮೆಸೇಜು ನಿಮಗೂ ಬಂದಿರಬಹುದು. ಅಧಿಕವರ್ಷವಲ್ಲದ ಪ್ರತಿ ಇಸವಿಯಲ್ಲೂ ಫೆಬ್ರವರಿ ಯಲ್ಲಿ ತಲಾ ನಾಲ್ಕು ಭಾನುವಾರ, ಸೋಮವಾರ, ...ಶನಿವಾರಗಳೇ ಇರುವುದು.
ಆದ್ದರಿಂದ 823ವರ್ಷಗಳಿಗೊಮ್ಮೆ ಎನ್ನುವುದು ಬಕ್ವಾಸ್. ಆದರೆ ಪ್ರತಿ ಆರು ಅಥವಾ ಹನ್ನೊಂದು ವರ್ಷಗಳಿಗೊಮ್ಮೆ ಏನಾಗುತ್ತದೆಂದರೆ ಫೆಬ್ರವರಿ ತಿಂಗಳು ಭಾನುವಾರದಂದು ಆರಂಭವಾಗಿ ಶನಿವಾರದಂದು ಮುಗಿಯುತ್ತದೆ. ಅಂದರೆ ಕ್ಯಾಲೆಂಡರ್‌ನಲ್ಲಿ 28 ದಿನಗಳು ಪರ್ಫೆಕ್ಟ್ ಆಯತಾಕಾರ ದಲ್ಲಿ ಕೂತಿರುತ್ತವೆ.
ಇಂಥದನ್ನು ಪರ್ಫೆಕ್ಟ್ ಫೆಬ್ರವರಿ ಅಥವಾ ರೆಕ್ಟಾಂಗ್ಯುಲರ್ ಫೆಬ್ರವರಿ ಎನ್ನುವುದಿದೆ. ಈ ವರ್ಷದ್ದು (2026) ಪರ್ಪೆಕ್ಟ್ ರೆಕ್ಟಾಂಗ್ಯುಲರ್ ಫೆಬ್ರವರಿ. ಈ ಹಿಂದೆ 2015ರಲ್ಲಿ, ಅದಕ್ಕಿಂತಲೂ ಹಿಂದೆ 2009ರಲ್ಲಿ ಪರ್ಫೆಕ್ಟ್ ರೆಕ್ಟಾಂಗ್ಯುಲರ್ ಫೆಬ್ರವರಿ ಇತ್ತು. ಮುಂದಿನದು 2037ರಲ್ಲಿ. ಮೇಲೆ ಹೇಳಿದಂತೆ ಅದು ಹುಣ್ಣಿಮೆರಹಿತ ಸಹ ಆಗಲಿರುವುದರಿಂದ ಹುಣ್ಣಿಮೆರಹಿತ ಪರ್ಫೆಕ್ಟ್ ರೆಕ್ಟಾಂಗ್ಯುಲರ್ ಫೆಬ್ರವರಿ!
ಇದರ ಆವರ್ತನ ಆರು ಅಥವಾ ಹನ್ನೊಂದು ವರ್ಷಗಳಿಗೊಮ್ಮೆ ಅಂತಾಗುವುದಕ್ಕೆ ಕಾರಣ ನಡುವೆ ಒಂದೆರಡು ಅಧಿಕವರ್ಷಗಳು ಬರುವುದು. ಅಧಿಕ ವರ್ಷ ಗಣನೆಗೆ 100 ಮತ್ತು 400ರ ಅಪವರ್ತ್ಯ ಗಳನ್ನೂ ಪರಿಗಣಿಸುವುದರಿಂದ ಮತ್ತಷ್ಟು ಸಂಕೀರ್ಣವಾಗುತ್ತದೆ. ಆದರೆ 823 ವರ್ಷಗಳಿಗೊಮ್ಮೆ ಎನ್ನುವುದಂತೂ ಸುಳ್ಳು.
ಪರ್ಫೆಕ್ಟ್ ಫೆಬ್ರವರಿಯದೊಂದು ಇಂಪರ್ಫೆಕ್ಷನ್ ಕೂಡ ಇದೆ, ಅದೇನು ಗೊತ್ತೇ? ಪರ್ಫೆಕ್ಟ್ ಫೆಬ್ರವರಿ ಯಲ್ಲಿ ಮತ್ತು ಆ ಇಸವಿಯ ಮಾರ್ಚ್ ಹಾಗೂ ನವೆಂಬರ್ ತಿಂಗಳಲ್ಲೂ 13ನೆಯ ತಾರೀಕು ಶುಕ್ರವಾರವೇ ಬರುತ್ತದೆ! ‘ಫ್ರೈಡೇ ದ ಥರ್ಟೀನ್ತ್’ ಅಪಶಕುನ ಎಂದು ನಂಬುವವರಿಗೆ ಒಂದೇ ವರ್ಷ ದಲ್ಲಿ ಮೂರು ಹೊಡೆತಗಳು. ಇದೂ ಅಷ್ಟೇ. 13ನೆಯ ತಾರೀಕು ಶುಕ್ರವಾರದಂದು ಬರುವುದು ವರ್ಷದ ಯಾವುದೇ ತಿಂಗಳಲ್ಲೂ ಬರಬಹುದು.
ಅಧಿಕವರ್ಷದ ಫೆಬ್ರವರಿಯಲ್ಲಿಯೂ ಬರಬಹುದು. ಆದರೆ ವರ್ಷಕ್ಕೆ ಮೂರು ಸಲ ಬರುತ್ತದೆ ಯೆಂದರೆ ಅದು ಪರ್ಫೆಕ್ಟ್ ಫೆಬ್ರವರಿ ಇಸವಿಗಳಲ್ಲಿ, ಅಥವಾ ಅಧಿಕವರ್ಷದ ಜನವರಿ 1 ಭಾನುವಾರ ಬಂದಿದ್ದರೆ ಆ ವರ್ಷದ ಜನವರಿ, ಏಪ್ರಿಲ್, ಮತ್ತು ಜುಲೈ ತಿಂಗಳಲ್ಲಿ ‘ಫ್ರೈಡೇ ದ ಥರ್ಟೀನ್ತ್’ ಬರುತ್ತದೆ.
ಇಷ್ಟು ಲೆಕ್ಕಾಚಾರಗಳನ್ನು ಓದಿದಾಗ ಬಹುಶಃ ನಿಮ್ಮಲ್ಲಿ ಕೆಲವರಿಗೆ ಕಿರಿಕಿರಿ ಎನಿಸಿರಬಹುದು, ತಲೆಚಿಟ್ಟು ಹಿಡಿದಿರಬಹುದು. ಅದಕ್ಕೋಸ್ಕರ ಕ್ಷಮೆಯಿರಲಿ. ಈಗ ಲೆಕ್ಕಾಚಾರಗಳನ್ನು ಅಲ್ಲಿಗೇ ನಿಲ್ಲಿಸಿ ಫೆಬ್ರವರಿಯ ಇನ್ನೊಂದಿಷ್ಟು ವೈಶಿಷ್ಟ್ಯಗಳನ್ನು ನೋಡೋಣ.
ಫೆಬ್ರವರಿ ತಿಂಗಳಿಗೆ ಆ ಹೆಸರು ಬಂದಿದ್ದು ಹೇಗೆ? ಲ್ಯಾಟಿನ್ ಭಾಷೆಯ ಫೆಬ್ರುವಾ ಎಂಬ ಪದದಿಂದ. ಲ್ಯಾಟಿನ್‌ನಲ್ಲಿ ಅದರ ಅರ್ಥ ನಿರ್ಮಲೀಕರಣ ಎಂದು. ನಿರ್ಮಲೀಕರಣವೆಂದರೆ ಅಂತರಂಗದ ಶುದ್ಧಿ ಮತ್ತು ಬಹಿರಂಗದ ಶುದ್ಧಿ ಎರಡೂ. ಪ್ರಾಚೀನ ರೋಮನ್ನರು ಫೆಬ್ರವರಿಯನ್ನು ಫೆಬ್ರುವಾ ಲಿಯ ಎಂದು ಕರೆಯುತ್ತಿದ್ದರು ಮತ್ತು ಪಾಪಪರಿಹಾರಾರ್ಥ ಪ್ರಾಯಶ್ಚಿತ್ತಗಳಿಗೆ ಬಳಸುತ್ತಿದ್ದರಂತೆ.
ಈಗಲೂ ಯುರೋಪ್, ಅಮೆರಿಕ ದೇಶಗಳಲ್ಲಿ ಫೆಬ್ರವರಿಯಲ್ಲಿ ತೀವ್ರ ಚಳಿಗಾಲ ಇರುವುದರಿಂದ, ಹೊರಾಂಗಣ ಚಟುವಟಿಕೆಗಳು ಸಾಧ್ಯವಿಲ್ಲದಿರುವುದರಿಂದ, ಮನೆ-ಮನ ಚೊಕ್ಕಗೊಳಿಸುವ ಕೆಲಸಗಳನ್ನು ಇಟ್ಟುಕೊಳ್ಳುತ್ತಾರೆ. ಇದು, ಮುಂದೆ ಸ್ಪ್ರಿಂಗ್ ಸೀಸನ್ ಅನ್ನು ಸ್ವಾಗತಿಸಲು ತಯಾರಿ ಯೂ ಹೌದು.
ಚಳಿಗಾಲ ಮತ್ತು ಫೆಬ್ರವರಿಗೆ ಸಂಬಂಧಿಸಿದಂತೆ, ಅಮೆರಿಕದಲ್ಲಿ ಪ್ರತಿವರ್ಷ ಫೆಬ್ರವರಿ 2ರಂದು ಆಚರಿಸುವ ‘ಗ್ರೌಂಡ್‌ಹಾಗ್ ಡೇ’ ಕೂಡ ಸ್ವಾರಸ್ಯಕರ ಸಂಗತಿಯೇ. ಮೂಲತಃ ಜರ್ಮನ್ ದೇಶದವರ ಒಂದು ನಂಬಿಕೆಯಂತೆ ಆರಂಭವಾಗಿರುವ ಇದು ಹೆಚ್ಚು ಪ್ರಸಿದ್ಧವಿರುವುದು ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ.
ಚಳಿಗಾಲದಲ್ಲಿ ಬಿಲದಲ್ಲಿ ನಿಶ್ಚೇಷ್ಟತೆಯಿಂದಿರುವ ಗ್ರೌಂಡ್‌ಹಾಗ್ ಪ್ರಾಣಿಯು (ಹೆಚ್ಚೂಕಡಿಮೆ ಅಳಿಲನ್ನು ಹೋಲುವಂಥದು) ಫೆಬ್ರವರಿ 2ರಂದು ಬಿಲದಿಂದ ಹೊರ ಬಂದು ಇಣುಕಿ ನೋಡುತ್ತದೆ. ಆಗ ಅದಕ್ಕೆ ತನ್ನದೇ ನೆರಳು ಕಂಡರೆ (ಅಂದರೆ ಆವತ್ತು ಬಿಸಿಲಿದ್ದರೆ) ಇನ್ನೂ ಆರು ವಾರಗಳ ಕಾಲ ಚಳಿ ಮುಂದುವರಿಯುತ್ತದೆ ಎಂದು ಲೆಕ್ಕ.
ಒಂದು ವೇಳೆ ಅದಕ್ಕೆ ನೆರಳು ಕಾಣದಿದ್ದರೆ (ಅಂದರೆ ಆವತ್ತು ಮೋಡ ಕವಿದ ವಾತಾವರಣ ಇದ್ದರೆ) ಚಳಿಗಾಲ ಬೇಗ ಮುಗಿಯುತ್ತದೆಂದು ನಂಬಿಕೆ. ಗ್ರೌಂಡ್‌ಹಾಗ್ ಡೇಯ ಅತ್ಯಂತ ಪ್ರಸಿದ್ಧ ಆಚರಣೆ ಪೆನ್ಸಿಲ್ವೇನಿಯಾ ಸಂಸ್ಥಾನದ ಪಂಕ್ಸುಟಾನಿ ಎಂಬ ಪಟ್ಟಣದಲ್ಲಿ ನಡೆಯುತ್ತದೆ. ಅಲ್ಲಿ ‘ಪಂಕ್ಸುಟಾನಿ ಫಿಲ್’ ಎಂಬ ಹೆಸರಿನ ಗ್ರೌಂಡ್‌ಹಾಗ್ ಈ ಕಾರ್ಯಕ್ರಮದ ಮುಖ್ಯ ಪಾತ್ರ. ಜನರು ಫಿಲ್ ತನ್ನ ಬಿಲದಿಂದ ಹೊರಬರುವುದನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ.
ಫಿಲ್‌ನ ವರ್ತನೆಯ ಆಧಾರದ ಮೇಲೆ ಹವಾಮಾನವನ್ನು ಅಂದಾಜಿಸುತ್ತಾರೆ. ಈ ಸಂಪ್ರದಾಯಕ್ಕೆ ವೈಜ್ಞಾನಿಕ ಪ್ರಮಾಣಗಳು ಸ್ಪಷ್ಟವಾಗಿಲ್ಲದಿದ್ದರೂ, ಇದು ಇಂದಿಗೂ ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಉಳಿದಿದೆ. 1993ರಲ್ಲಿ ಇದರ ಬಗ್ಗೆ ಒಂದು ‘ಗ್ರೌಂಡ್‌ಹಾಗ್ ಡೇ’ ಹೆಸರಿನ ಚಲನ ಚಿತ್ರವೂ ನಿರ್ಮಾಣವಾಗಿತ್ತು. ಈಗಲೂ ಫೆಬ್ರವರಿ 2ರಂದು ಅದನ್ನು ಟಿವಿ ವಾಹಿನಿಗಳು ಶ್ರದ್ಧೆ ಯಿಂದ ಬಿತ್ತರಿಸುತ್ತವೆ.
ಅಮೆರಿಕದ ಇನ್ನೊಂದು ಕ್ರೇಜ್ ‘ಸೂಪರ್‌ಬೌಲ್ ಸಂಡೇ’ ಸಹ ಫೆಬ್ರವರಿಯಲ್ಲೇ ಜರುಗುವುದು. ಕಾಲುಗಳಿಂದಲ್ಲದೆ ಕೈಗಳಿಂದ ಚೆಂಡಾಟ ಆಡಿ ಫುಟ್‌ಬಾಲ್ ಎಂದು ಕರೆಯುವುದೇ ಒಂದು ವಿಚಿತ್ರ ವಾದರೆ, ಅಮೆರಿಕದೊಳಗಿನ ವಿವಿಧ ತಂಡಗಳಷ್ಟೇ ಭಾಗವಹಿಸುವುದಾದರೂ ಅದನ್ನು ವರ್ಲ್ಡ್ ಕಪ್ ಎಂದು ಕರೆಯುವುದು ಇನ್ನೊಂದು ವಿಚಿತ್ರ. ಆದರೂ ಕ್ರೀಡಾಭಿಮಾನಿಗಳಿಗೆ ಅದೊಂದು ದೊಡ್ಡ ವಾರ್ಷಿಕ ಜಾತ್ರೆ.
ಟಿವಿಯಲ್ಲಿ ನೇರಪ್ರಸಾರವನ್ನು ಮಿಲಿಯಗಟ್ಟಲೆ ಸಂಖ್ಯೆಯಲ್ಲಿ ನೋಡಲಾಗುತ್ತದೆಂಬ ಅಗ್ಗಳಿಕೆ. ಆ ಸಂದರ್ಭಕ್ಕೆಂದೇ ನಿರ್ಮಾಣವಾಗಿ ಪ್ರಸಾರವಾಗುವ ವಿಶೇಷ ಜಾಹೀರಾತುಗಳು, ಪಂದ್ಯದ ಮಧ್ಯಂತರದಲ್ಲಿ ನಡೆಯುವ ಮನೋರಂಜನಾ ಕಾರ್ಯಕ್ರಮ... ಇವೆಲ್ಲ ಬಹುಚರ್ಚಿತ ಆಗುತ್ತವೆ.
ನವೆಂಬರ್‌ನಲ್ಲಿ ಆಚರಣೆಯಾಗುವ ಥ್ಯಾಂಕ್ಸ್‌ಗಿವಿಂಗ್ ಹಬ್ಬ ಬಿಟ್ಟರೆ ರಾಷ್ಟ್ರಮಟ್ಟದಲ್ಲಿ ಅತಿಹೆಚ್ಚು ಆಹಾರಭಕ್ಷಣ, ಮದ್ಯಸೇವನೆ (ಪಂದ್ಯ ನೋಡುವಾಗ ಸ್ಟೇಡಿಯಂನಲ್ಲಾದರೂ ಸರಿ, ಮನೆಯಲ್ಲಿ ಅಥವಾ ಟಿವಿ-ವೀಕ್ಷಣೆ ಪಾರ್ಟಿಗಳಲ್ಲಾದರೂ ಸರಿ) ಆಗುವುದು ಆ ದಿನದಂದೇ.
ಫೆಬ್ರವರಿ ತಿಂಗಳ ಮೊದಲ ಭಾನುವಾರ ನಡೆಯುತ್ತಿದ್ದ ಸೂಪರ್‌ಬೌಲ್ ಈಗ 2021ರಿಂದೀಚೆಗೆ ಫೆಬ್ರವರಿ ತಿಂಗಳ ಎರಡನೆಯ ಭಾನುವಾರಕ್ಕೆ ಶಿಫ್ಟ್ ಆಗಿದೆ. ಅಬ್ಬರ ಮಾತ್ರ ಹಾಗೆಯೇ ಇದೆ. ಮತ್ತೆ, ಫೆಬ್ರವರಿ 14ರಂದು ಆಚರಿಸುವ ‘ವ್ಯಾಲೆಂಟೈನ್ಸ್ ಡೇ’ ಅರ್ಥಾತ್ ಪ್ರೇಮಿಗಳ ದಿನಾಚರಣೆ ಮರೆಯ ಲಿಕ್ಕುಂಟೇ? ಅಮೆರಿಕದಲ್ಲಷ್ಟೇ ಅಲ್ಲ ಜಗತ್ತಿನ ಹಲವಾರು ದೇಶಗಳಲ್ಲಿ ಆಚರಣೆ. ಹಾಗೆ ನೋಡಿದರೆ ಬಹುಶಃ ಅಮೆರಿಕದಲ್ಲಿರುವುದಕ್ಕಿಂತಲೂ ಭಾರತದಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಈಗ ವ್ಯಾಲೆಂಟೈನ್ಸ್ ಡೇ ಸಂಭ್ರಮ (ಬೇಕಿದ್ದರೆ ಹುಚ್ಚುತನ ಎನ್ನಿ) ಹೆಚ್ಚು!
ಉಡುಗೊರೆಗಳು, ಚಾಕೊಲೇಟ್‌ಗಳು, ಗ್ರೀಟಿಂಗ್ ಕಾರ್ಡ್‌ಗಳು, ಪ್ರೇಮ ಪತ್ರಗಳ (ಈಗ ಪತ್ರಗಳಲ್ಲ, ಮೇಘಸಂದೇಶಗಳ) ಭರಾಟೆ. ಈಗ ಇದು ಬರೀ ಪ್ರೇಮಿಗಳ ದಿನಾಚರಣೆಯಾಗಿರದೆ ಸ್ನೇಹಿತರಿಗೂ ಮತ್ತು ಕುಟುಂಬದ ಸದಸ್ಯರಿಗೂ ತಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೂ ಆಗಿದೆ. ಮೂಲತಃ ಕ್ರಿ.ಶ. ಮೂರನೇ ಶತಮಾನದಲ್ಲಿ ಬದುಕಿದ್ದ ಕ್ರೈಸ್ತ ಧರ್ಮದ ಹುತಾತ್ಮ ಸಂತ ವ್ಯಾಲೆಂಟೈನ್ ಸ್ಮರಣೆಗಾಗಿ ಆರಂಭವಾದದ್ದು, ಈಗ ಧರ್ಮನಿರಪೇಕ್ಷವಾಗಿ ವಿಭಿನ್ನ ಸಂಸ್ಕೃತಿ ಮತ್ತು ನಂಬಿಕೆಗಳ ಜನರು ಕೂಡ ಆಚರಿಸುವ ಹಬ್ಬವಾಗಿ ರೂಪಾಂತರಗೊಂಡಿದೆ.
ಅಮೆರಿಕದ ಮಟ್ಟಿಗೆ ಹೇಳುವುವಾದರೆ ರಾಷ್ಟ್ರದ ಪಿತಾಮಹ ಮೊತ್ತಮೊದಲ ರಾಷ್ಟ್ರಾಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ನ ಜನ್ಮದಿನ ಫೆಬ್ರವರಿ 22ರಂದು. ಈಗ ಅದನ್ನು ತಾರೀಕು ಪ್ರಕಾರ ಆಚರಿಸದೆ ಫೆಬ್ರವರಿ ತಿಂಗಳ ಮೂರನೆಯ ಸೋಮವಾರ ಆಚರಿಸಲಾಗುತ್ತದೆ. ಅಂತೆಯೇ, ಅಮೆರಿಕದ ಇನ್ನೊಬ್ಬ ಪ್ರಸಿದ್ಧ ರಾಷ್ಟ್ರಾಧ್ಯಕ್ಷ ಅಬ್ರಹಾಂ ಲಿಂಕನ್‌ನ ಜನ್ಮದಿನ ತಾರೀಕು ಪ್ರಕಾರ ಫೆಬ್ರವರಿ 12ರಂದು ಆದರೂ, ಜಾರ್ಜ್ ವಾಷಿಂಗ್ಟನ್‌ನ ಜತೆ ಸೇರಿಸಿ ಒಟ್ಟಾಗಿ ‘ಪ್ರೆಸಿಡೆಂಟ್ಸ್ ಡೇ ಎಂದು ಆಚರಿಸಲಾಗು ತ್ತದೆ.
ಆವತ್ತು ಸರಕಾರಿ ರಜಾದಿನ. ಯಥಾಪ್ರಕಾರ ಆ ದಿನದ ಆಸುಪಾಸಿನಲ್ಲಿ ‘ಪ್ರೆಸಿಡೆಂಟ್ಸ್ ಡೇ ಸೇಲ್ಸ್ ಎಂದು ಭರ್ಜರಿ ವ್ಯಾಪಾರ. ಶನಿ-ಭಾನು-ಸೋಮ ಮೂರು ದಿನಗಳ ಲಾಂಗ್ ವೀಕೆಂಡ್ ಆಗುವು ದರಿಂದ, ಹಿಮಪಾತ ಕಾಟದಿಂದಾಗಿ ದೂರದೂರದ ಪ್ರವಾಸ ಸಾಧ್ಯವಾಗದಿದ್ದರೂ ಸೀಮಿತ ಅವಕಾಶದಲ್ಲಿ ರಜೆಯ ಮಜಾ.
ಫೆಬ್ರವರಿಯಲ್ಲೇ ಕೆಲವು ತಮಾಷೆಯ, ಕೆಲವು ಅರ್ಥಪೂರ್ಣ ದಿನಾಚರಣೆಗಳೂ ಇವೆ. ಅಂಚೆಯಣ್ಣ ನಿಗೆ ಕೃತಜ್ಞತೆ ಸಲ್ಲಿಕೆ ದಿನ (ಫೆ.4), ಹವಾಮಾನ ವರದಿಗಾರನ ದಿನ (ಫೆ.5), ಮಿತ್ರನಿಗೊಂದು ಪತ್ರ ಬರೆ ದಿನ (ಫೆ.7), ಯಾದೃಚ್ಛಿಕ ಕರುಣೆ ತೋರುವ ದಿನ (ಫೆ.17), ನಾಯಿಗೆ ಬಿಸ್ಕತ್ತು ಹಾಕು ದಿನ (ಫೆ.23), ಹಿರಿಯರಿಗೊಂದು ಪತ್ರ ಬರೆ ದಿನ (ಫೆ.26), ಪುಷ್ಪಾಲಂಕಾರ ದಿನ (ಫೆ.28) ಇತ್ಯಾದಿ.
ಇದಲ್ಲದೆ ಫೆಬ್ರವರಿ ತಿಂಗಳಿಡೀ ‘ನ್ಯಾಷನಲ್ ಬ್ಲ್ಯಾಕ್ ಹಿಸ್ಟರಿ ಮಂತ್ ಆಚರಿಸಲಾಗುತ್ತದೆ. ರಾಷ್ಟ್ರದ ಅಭ್ಯುದಯದಲ್ಲಿ ಕರಿಯರ ಪಾತ್ರ-ಪ್ರಯತ್ನ-ಸಾಧನೆಗಳನ್ನು ಗುರುತಿಸಿ ಗೌರವಿಸುವ ವಿವಿಧ ಕಾರ್ಯಕ್ರಮಗಳಿರುತ್ತವೆ. 50 ಸಂಸ್ಥಾನಗಳ ಪೈಕಿ ಮಸ್ಸಾಚ್ಯುಸೆಟ್ಸ್, ಮೆಯ್ನ್, ಒರೆಗಾನ್, ಅರಿಝೊನಾ ಮತ್ತು ಮಿಸ್ಸಿಸ್ಸಿಪ್ಪಿ- ಇವುಗಳ ರಾಜ್ಯೋತ್ಸವ ದಿನಗಳೂ ಫೆಬ್ರವರಿಯಲ್ಲೇ ಬರುವುದರಿಂದ ಸ್ಥಳೀಯ ವಾಗಿ ಕೆಲವು ಆಚರಣೆಗಳಿರುತ್ತವೆ.
ಅಮೆರಿಕದ ನ್ಯೂಆರ್ಲಿಯೆನ್ಸ್ ನಗರದಲ್ಲಿ ವಿಶೇಷವಾಗಿ, ಮತ್ತು ದೇಶದ ಇತರೆಡೆಗಳಲ್ಲೂ ಆಚರಿಸ ಲಾಗುವ ‘ಮಾರ್ಡಿ ಗ್ರಾ’ ಹಬ್ಬವೂ ಕೆಲವೊಮ್ಮೆ ಫೆಬ್ರವರಿಯಲ್ಲೇ ಬರುತ್ತದೆ. ಈಸ್ಟರ್‌ನಿಂದ ಹಿಂದಕ್ಕೆ 47 ದಿನಗಳ ಲೆಕ್ಕ ಹಾಕಿದಾಗಿನ ಮಂಗಳವಾರ ಮಾರ್ಡಿ ಗ್ರಾ ಹಬ್ಬ. ಮಾರನೆಯ ದಿನದಿಂದ ಉಪವಾಸ ಅಥವಾ ಮಾಂಸರಹಿತ ಮಿತಾಹಾರ ಸೇವನೆಯ ವ್ರತವಿರುವುದರಿಂದ ಆವತ್ತು ಹೊಟ್ಟೆ ಬಿರಿಯೆ ಭೋಜನ, ಮೋಜುಮಸ್ತಿ.
ಫ್ರೆಂಚ್ ಭಾಷೆಯಲ್ಲಿ ಮಾರ್ಡಿ ಗ್ರಾ ಎಂದರೆ ‘ಕೊಬ್ಬಿದ ಮಂಗಳವಾರ’ ಎಂದೇ ಅರ್ಥ. ಪರೇಡ್‌ಗಳು, ಸಂಗೀತನೃತ್ಯ ಕೂಟಗಳು, ನೇರಳೆ, ಹಸುರು ಮತ್ತು ಬಂಗಾರ ಬಣ್ಣದ ಮಣಿಮಾಲೆಗಳು ಮಾರ್ಡಿ ಗ್ರಾ ಸಂಭ್ರಮದ ಪ್ರಮುಖ ಆಕರ್ಷಣೆ. ಅವು ಅನುಕ್ರಮವಾಗಿ ನ್ಯಾಯ, ವಿಶ್ವಾಸ ಮತ್ತು ಶಕ್ತಿಯ ಪ್ರತೀಕಗಳೆಂಬ ನಂಬಿಕೆ. ಈ ವರ್ಷ ಮಾರ್ಡಿ ಗ್ರಾ ಆಚರಣೆ ಫೆಬ್ರವರಿ 17ರಂದು. ಡಬಲ್ ಧಮಾಕಾ ಎಂಬಂತೆ ಚೈನೀಸ್ ಹೊಸವರ್ಷ ಆಚರಣೆ ಸಹ ಈ ವರ್ಷ ಫೆಬ್ರವರಿ 17ರಂದೇ ಬಂದಿದೆ!
ನೋಡಿ, ಹೇಗಿದೆ ಕಿರಿಯ ತಿಂಗಳ ಹಿರಿಮೆ! ಕೊನೆಯಲ್ಲೊಂದು ಪದವಿನೋದ. ಮಿಕ್ಕ ತಿಂಗಳುಗಳಿ ಗಿಂತ ಫೆಬ್ರವರಿಯಲ್ಲಿ ಕಡಿಮೆ ದಿನಗಳು ಆದ್ದರಿಂದ ಅದು ಕಿರಿದು, ಕೃಶಕಾಯದ್ದು, ಸುಲಭವಾಗಿ ಕುಣಿದಾಡಬಲ್ಲದ್ದು ಎಂಬ ನಿಟ್ಟಿನಲ್ಲಿ “ಫೆಬ್ರವರಿ ಕ್ಯಾನ್ ಮಾರ್ಚ್; ಬಟ್ ಏಪ್ರಿಲ್ ಮೇ ನಾಟ್!" ಇದನ್ನು ಅನುವಾದಿಸಿದರೆ ಸ್ವಾರಸ್ಯ ಹೊರಟುಹೋಗುತ್ತದೆ. ಆದರೂ, “ಫೆಬ್ರವರಿಯು ಲೆಫ್ಟ್-ರೈಟ್ ಎಂದು ಮಾರ್ಚ್‌ಪಾಸ್ಟ್ ಮಾಡಬಲ್ಲದು; ಏಪ್ರಿಲ್‌ಗೆ ಸಾಧ್ಯ ವಾಗಲಿಕ್ಕಿಲ್ಲ" ಎಂದು ಅರ್ಥ.