R T Vittalmurthy Column: ಜನವರಿ ಒಂಬತ್ತಕ್ಕೆ ದಿಲ್ಲಿಯಲ್ಲಿ ಫೈನಲ್
ಯಾವಾಗ ಸಿದ್ದರಾಮಯ್ಯನವರು ಈ ಪ್ರಸ್ತಾಪ ಮಂಡಿಸಿದರೋ, ಆಗ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ವೈ ನಾಟ್ ಸಿದ್ರಾಮಯ್ಯಾಜೀ? ಸಂಪುಟ ಪುನಾರಚನೆಯ ಸ್ವರೂಪ ಹೇಗಿರಬೇಕು? ಮಂತ್ರಿಮಂಡಲ ದಿಂದ ಹೊರಹೋಗಬೇಕಾದವರು ಯಾರು? ಸೇರ್ಪಡೆ ಅಗಬೇಕಾದವರು ಯಾರು? ಎಂಬ ಬಗ್ಗೆ ವಿವರವಾಗಿ ಚರ್ಚಿಸಿ ಜನವರಿ 9ರಂದು ದಿಲ್ಲಿಗೆ ಬನ್ನಿ. ಫೈನಲ್ ಮಾಡೋಣ" ಎಂದಿದ್ದಾರೆ.
-
ಮೂರ್ತಿಪೂಜೆ
ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದಾದ ನಂತರ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜತೆ ಮಾತನಾಡಿದ ಅವರು ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ. ಕರ್ನಾಟಕದಲ್ಲಿ ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಸಚಿವ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಡಿ ಎಂಬುದು ಈ ಪ್ರಸ್ತಾಪ.
ವಾಸ್ತವವಾಗಿ ಹಲವು ದಿನಗಳ ಹಿಂದೆಯೇ ರಾಜ್ಯ ಸಚಿವ ಸಂಪುಟದ ಪುನಾರಚನೆ ಕಾರ್ಯ ಪೂರ್ಣ ವಾಗಬೇಕಿತ್ತು. ಆದರೆ ದಿಢೀರನೆ ಉದ್ಭವಿಸಿದ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಇದಕ್ಕೆ ಬ್ರೇಕ್ ಹಾಕಿದ್ದಲ್ಲದೆ ಮುಂದೇನು ಎನ್ನುವ ಆತಂಕ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು. ಈ ಹಂತದಲ್ಲಿ ಸಿಎಂ ಹುದ್ದೆ ತಮಗೆ ಬೇಕೇ ಬೇಕು ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದರೆ, ಯಾವ ಕಾರಣಕ್ಕೂ ಪಟ್ಟ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಅಂತ ಸಿದ್ದರಾಮಯ್ಯ ಪ್ರತಿಪಟ್ಟು ಹಾಕಿ ಕುಳಿತರು.
ಹೀಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪಟ್ಟು, ಪ್ರತಿಪಟ್ಟುಗಳ ನಡುವೆ ಸೋನಿ ಯಾ ಗಾಂಧಿ, ರಾಹುಲ್ ಗಾಂಧಿ ಕಸಿವಿಸಿಗೊಂಡರೂ ಅಂತಿಮವಾಗಿ ಎರಡೂ ಅಭಿಪ್ರಾಯ ಗಳಿಗೆ ಕಿವಿ ತೆರೆದು ಕುಳಿತರು. ಮೊದಲನೆಯದು, ಈ ವಿಷಯದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಏನು ಹೇಳುತ್ತಾರೆ ಎಂಬುದಾದರೆ, ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ರಾಹುಲ್ ಗಾಂಧಿ ಯವರ ಪರ್ಸನಲ್ ಸರ್ವೆ ಟೀಮು ಏನು ಹೇಳುತ್ತದೆ ಎಂಬುದು ಮತ್ತೊಂದು. ಈ ಪೈಕಿ ಖರ್ಗೆ ಯವರು, “ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡುವುದು ನ್ಯಾಯವಾದರೂ ಅ ಪಟ್ಟವನ್ನು ಸಿದ್ದರಾಮಯ್ಯ ಅವರಿಂದ ಬಲವಂತವಾಗಿ ಕಿತ್ತುಕೊಳ್ಳುವುದು ಅಪಾಯಕಾರಿ" ಎಂದಿದ್ದಾರೆ.
ಇದನ್ನೂ ಓದಿ: R T Vittalmurthy Column: ಬಜೆಟ್ ಮಂಡಿಸಲು ಸಿದ್ದು-ಡಿಕೆಶಿ ರೆಡಿ
ಎಷ್ಟೇ ಆದರೂ ಸಿದ್ದರಾಮಯ್ಯ ಟಫ್ ನಾಯಕ. ಅಂಥವರ ಜತೆ ವ್ಯವಹರಿಸುವಾಗ ಗೌರವಯುತ ಮಾರ್ಗದ ಹೋಗಬೇಕು. ಅರ್ಥಾತ್, ಅಧಿಕಾರ ಹಂಚಿಕೆ ವಿಷಯದಲ್ಲಿ ಸಹಕಾರ ನೀಡುವಂತೆ ಅವರ ಮನವೊಲಿಸಬೇಕು. ಹೀಗೆ ಮಾಡದೆ ಮುಖ್ಯಮಂತ್ರಿ ಹುದ್ದೆಯನ್ನು ಕಿತ್ತುಕೊಳ್ಳುವುದು ದೀರ್ಘಕಾಲೀನ ಅಪಾಯಕ್ಕೆ ಕಾರಣವಾಗಬಹುದು ಎಂಬುದು ಮಲ್ಲಿಕಾರ್ಜುನ ಖರ್ಗೆಯವರ ವಾದ.
ಇದೇ ರೀತಿ ಅಹಿಂದ ವರ್ಗಗಳ ಮತ ಹೆಚ್ಚಿರುವ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ಸಿದ್ದರಾಮಯ್ಯ ಅವರಂಥ ನಾಯಕ ರನ್ನು ಮುಟ್ಟುವುದು ಕಷ್ಟ. ಹೀಗಾಗಿ ಅವರ ಮನವೊಲಿಕೆ ಕಾರ್ಯ ಪೂರ್ಣವಾಗುವವರೆಗೆ ದುಡುಕುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ.
ಇದು ಒಂದು ಕಡೆಗಾದರೆ, ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಹುಲ್ ಗಾಂಧಿಯವರ ಪರ್ಸನಲ್ ಸರ್ವೆ ಟೀಮು ಕೂಡಾ ವಿವರವಾದ ವರದಿಯನ್ನು ಸಿದ್ಧಪಡಿಸಿತ್ತಲ್ಲದೆ, ಸಿದ್ದರಾಮಯ್ಯ ಅವರು ಪಟ್ಟ ಬಿಟ್ಟುಕೊಡಲು ಒಪ್ಪಿದರೆ ಮಾತ್ರ ಅಧಿಕಾರ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು; ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರಿಯಬೇಕು ಎಂದಿದೆ.
ಅಷ್ಟೇ ಅಲ್ಲ, ಕರ್ನಾಟಕದ ಮತಬ್ಯಾಂಕ್ ಸ್ವರೂಪದ ಬಗ್ಗೆ ಸ್ಪಷ್ಟವಾಗಿ ವಿವರಿಸಿದೆ. ಇವತ್ತು ರಾಜ್ಯದ ಪ್ರತಿಕ್ಷೇತ್ರದಲ್ಲೂ ಪರಿಶಿಷ್ಟರಿzರೆ, ಮುಸ್ಲಿಮರಿದ್ದಾರೆ. ಕುರುಬರು ಇವರಷ್ಟು ಪ್ರಮಾಣ ದಲ್ಲಿಲ್ಲದಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ಸಾಲಿಡ್ಡಾಗಿದ್ದಾರೆ.
ಇದರರ್ಥ, ಅಹಿಂದ ವರ್ಗದ ಮತಗಳು ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ದಟ್ಟವಾಗಿವೆ. ಇಂಥ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಪಕ್ಷದ ಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ. ಅಂದ ಹಾಗೆ, 2029ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷಕ್ಕಿರುವ ಪ್ರಬಲ ಸೇನಾನೆಲೆ ಎಂದರೆ ಕರ್ನಾಟಕ.
ಇವತ್ತು ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಇಳಿಸಲು ಮುಂದಾದರೆ ಈ ಸೇನಾನೆಲೆ ಕುಸಿಯುವುದಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸೈನ್ಯವನ್ನು ಮುನ್ನಡೆಸುವುದು ಕಷ್ಟಕರ ವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನಾವು ಕರ್ನಾಟಕದ ಒಕ್ಕಲಿಗ ಮತಬ್ಯಾಂಕ್ ಅನ್ನು ಆಧರಿಸ ಬಹುದಾ ಎಂದರೆ ಅದೂ ಅಸಾಧ್ಯ.
ಯಾಕೆಂದರೆ ಒಕ್ಕಲಿಗ ಮತಬ್ಯಾಂಕಿನ ಶೇಕಡಾ 50ರಷ್ಟು ಮತಗಳು ಕುಮಾರಸ್ವಾಮಿ-ದೇವೇಗೌಡರ ನೇತೃತ್ವದ ಜಾತ್ಯತೀತ ದಳದ ಜತೆ ನಿಂತರೆ, 25ರಷ್ಟು ಮತಗಳು ಬಿಜೆಪಿ ಜತೆಗಿವೆ. ಹೀಗಾಗಿ ಅಹಿಂದ ಮತಬ್ಯಾಂಕಿನಿಂದ ಬೀಳುವ ಹೊಡೆತವನ್ನು ಒಕ್ಕಲಿಗ ಮತಬ್ಯಾಂಕ್ ನೆರವಿನಿಂದ ತೂಗಿಸಲು ಸಾಧ್ಯವಿಲ್ಲ ಎಂದು ಈ ಟೀಮು ಸ್ಪಷ್ಟವಾಗಿ ಹೇಳಿದೆ.
ಯಾವಾಗ ಎರಡೂ ಕೋನಗಳಿಂದ ಬಂದ ಅಭಿಪ್ರಾಯ ಸಿದ್ದರಾಮಯ್ಯ ಅವರ ಪರವಾಗಿತ್ತೋ, ಅಗ ರಾಹುಲ್ ಗಾಂಧಿ ಸ್ಪಷ್ಟವಾದ ನಿಲುವಿಗೆ ಬಂದಿzರೆ. ಅಂದರೆ, ಸಿದ್ದರಾಮಯ್ಯ ಅವರು ಒಪ್ಪಿದರೆ ಮಾತ್ರ ಬೇರೊಬ್ಬರು ಮುಖ್ಯಮಂತ್ರಿ ಆಗಬಹುದು, ಇಲ್ಲದಿದ್ದರೆ ಇಲ್ಲ ಎಂಬುದು. ಯಾವಾಗ ಅವರ ನಿಲುವು ಸ್ಪಷ್ಟವಾಯಿತೋ, ಅಜ ಕರ್ನಾಟಕದಲ್ಲಿ ನಡೆಯುತ್ತಿದ್ದ ಅಧಿಕಾರ ಹಂಚಿಕೆಯ ಹಗ್ಗ ಜಗ್ಗಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗೆ ಬ್ರೇಕ್ ಬಿದ್ದ ಬೆನ್ನ ಶನಿವಾರ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಹೋಗಿದ್ದ ಸಿದ್ದರಾಮಯ್ಯ ಅವರು ಸಭೆಯ ನಂತರ ರಾಹುಲ್ ಗಾಂಧಿಯವರ ಜತೆ ಮಾತುಕತೆ ನಡೆಸಿದ್ದಾರೆ.
ಈ ವೇಳೆ ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯನವರು, “ಸರಕಾರಕ್ಕೆ ಶಕ್ತಿ ತುಂಬುವ ದೃಷ್ಟಿಯಿಂದ ಪುನಾರಚನೆ ಪ್ರಕ್ರಿಯೆ ಬೇಗ ಮುಗಿಯುವುದು ಒಳ್ಳೆಯದು" ಎಂದಿದ್ದಾರೆ. ಯಾವಾಗ ಸಿದ್ದರಾಮಯ್ಯನವರು ಈ ಪ್ರಸ್ತಾಪ ಮಂಡಿಸಿದರೋ, ಆಗ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ವೈ ನಾಟ್ ಸಿದ್ರಾಮಯ್ಯಾಜೀ? ಸಂಪುಟ ಪುನಾರಚನೆಯ ಸ್ವರೂಪ ಹೇಗಿರಬೇಕು? ಮಂತ್ರಿಮಂಡಲದಿಂದ ಹೊರಹೋಗಬೇಕಾದವರು ಯಾರು? ಸೇರ್ಪಡೆ ಅಗಬೇಕಾದವರು ಯಾರು? ಎಂಬ ಬಗ್ಗೆ ವಿವರವಾಗಿ ಚರ್ಚಿಸಿ ಜನವರಿ 9ರಂದು ದಿಲ್ಲಿಗೆ ಬನ್ನಿ. ಫೈನಲ್ ಮಾಡೋಣ" ಎಂದಿದ್ದಾರೆ. ಮೂಲಗಳ ಪ್ರಕಾರ, ದಿಲ್ಲಿಯಿಂದ ವಾಪಸ್ಸಾದ ನಂತರ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ಸ್ವರೂಪದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಸಾವಂತ್ ಆಕ್ಟಿವ್ ಆಗಿದ್ದೇಕೆ?: ಇನ್ನು ಗೋವಾದ ಮುಖ್ಯಮಂತ್ರಿ, ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಫುಲ್ಲು ಆಕ್ಟಿವ್ ಆಗಿದ್ದಾರೆ. ಹೀಗೆ ಅವರು ಆಕ್ಟಿವ್ ಆಗಿರುವುದು ಕರ್ನಾಟಕದ ರಾಜಕಾರಣದ ಬಗ್ಗೆ. ವಾಸ್ತವವಾಗಿ, ಕರ್ನಾಟಕದಲ್ಲಿ ನವೆಂಬರ್ ಹೊತ್ತಿಗೆ ಕ್ರಾಂತಿ ಸಂಭವಿಸುತ್ತದೆ. ಇದರ ಫಲವಾಗಿ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಗಾದಿಯ ಮೇಲೆ ಕೂರಿಸುತ್ತಾರೆ.
ಹೀಗೆ ಸಿದ್ದರಾಮಯ್ಯ ಅವರು ಕೆಳಗಿಳಿದು ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕೆ ಏರಿದರೆ ರಾಜ್ಯ ಕಾಂಗ್ರೆಸ್ನ ಹಲವು ಮಂತ್ರಿಗಳು, ಶಾಸಕರನ್ನು ಒಳಗೊಂಡ ಪಡೆ ತಿರುಗಿ ಬೀಳುತ್ತದೆ. ಹೀಗೆ ತಿರುಗಿ ಬೀಳುವ ಪಡೆಯನ್ನು ಬಿಜೆಪಿಯ ಕಡೆ ಸೆಳೆದರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಉರುಳು ತ್ತದೆ ಎಂಬುದು ಪ್ರಮೋದ್ ಸಾವಂತ್ ಅವರ ಲೆಕ್ಕಾಚಾರವಾಗಿತ್ತು.
ತಮ್ಮ ಈ ಲೆಕ್ಕಾಚಾರಕ್ಕೆ ಪೂರಕವಾಗಿ ಮೋದಿ-ಅಮಿತ್ ಶಾ ಅವರಿಂದ ಸಿಗ್ನಲ್ಲು ಪಡೆದ ಪ್ರಮೋದ್ ಸಾವಂತ್ ಅವರು ಸಿದ್ದರಾಮಯ್ಯ ಅವರ ಸಂಪುಟದ ಬ್ರಿಗೇಡಿಯರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಂಡ್ ಗ್ಯಾಂಗಿನ ಸಂಪರ್ಕದಲ್ಲಿದ್ದರು ಎಂಬುದು ಮೂಲಗಳ ಹೇಳಿಕೆ. ಅಂದ ಹಾಗೆ, ಪ್ರಮೋದ್ ಸಾವಂತ್ ಅವರ ಲೆಕ್ಕಾಚಾರಕ್ಕೆ ನವೆಂಬರ್ ತಿಂಗಳಲ್ಲಿ ಬಲ ಸಿಕ್ಕಿದ್ದಷ್ಟೇ ಅಲ್ಲ, ಇನ್ನೇನು ಸಿದ್ದರಾಮಯ್ಯ ಕೆಳಗೆ ಇಳಿದು ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕದ ಮುಹೂರ್ತ ಫಿಕ್ಸಾಗಬಹುದು ಎಂಬ ಮಾತು ಕೇಳಿಬರತೊಡಗಿತು.
ಒಂದು ಹಂತದವರೆಗೆ ಈ ಮಾತು ಪವರ್ ಫುಲ್ಲಾಗಿ ಕೇಳಿ ಬಂತಾದರೂ ಡಿಸೆಂಬರ್ 4ನೇ ವಾರದ ಹೊತ್ತಿಗೆ ಕಾವು ಕಳೆದುಕೊಳ್ಳತೊಡಗಿತು.ಯಾವಾಗ ಸಿದ್ದರಾಮಯ್ಯ ಅವರು ಕೆಳಗೆ ಇಳಿಯುವುದಿಲ್ಲ ಎಂಬುದು ನಿಕ್ಕಿಯಾಯಿತೋ, ಆಗ ಪ್ರಮೋದ್ ಸಾವಂತ್ ಅವರ ಗೇಮ್ ಪ್ಲಾನು ಬದಲಾಯಿತು. ಅರ್ಥಾತ್, ಮೊನ್ನೆ ಮೊನ್ನೆಯ ತನಕ ಸಿದ್ದರಾಮಯ್ಯ ಟೀಮಿನ ಸಂಪರ್ಕದಲ್ಲಿದ್ದ ಪ್ರಮೋದ್ ಸಾವಂತ್ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ವಿರೋಽ ಬಣದ ಪ್ರಮುಖ ನಾಯಕರೊಬ್ಬರನ್ನು ಭೇಟಿ ಮಾಡಿ ಚರ್ಚಿಸಿದರು.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಪಟ್ಟ ಬಿಟ್ಟುಕೊಡದೆ ಇರುವುದರಿಂದ ಹತಾಶ ರಾಗಿರುವ ಕೆಲ ಶಾಸಕರನ್ನು ಹೊರಗೆಳೆಯುವುದು ಪ್ರಮೋದ್ ಸಾವಂತ್ ಲೆಕ್ಕಾಚಾರ. ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತದೋ? ಅದು ಬೇರೆ ವಿಷಯ. ಆದರೆ ಪ್ರಮೋದ್ ಸಾವಂತ್ ಇದ್ದಕ್ಕಿದ್ದಂತೆ ಆಕ್ಟಿವ್ ಆಗಿರುವ ಬೆಳವಣಿಗೆ ಬರೀ ಕಾಂಗ್ರೆಸ್ ಮಾತ್ರವಲ್ಲ, ಜೆಡಿಎಸ್ ಪಾಳಯವನ್ನೂ ಬಡಿ ದೆಬ್ಬಿಸಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೊನ್ನೆ, “ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ" ಎಂದರಲ್ಲ? ಈ ಬೆಳವಣಿಗೆಗೂ, ವಿಜಯೇಂದ್ರ ಅವರ ಹೇಳಿಕೆಗೂ ಸಂಬಂಧವಿದೆ ಅಂತ ವಿಶ್ಲೇಷಿಸಲಾಗುತ್ತಿದೆಯಾದರೂ ಸಾವಂತ್ರ ಹೊಸ ಗೇಮಿನ ಪಾತ್ರ ಇದರಲ್ಲಿದೆ ಎಂಬ ಅನುಮಾನವೂ ಹಲವರಲ್ಲಿದೆ.
ಲಾಸ್ಟ್ ಸಿಪ್: ರಾಜ್ಯ ರಾಜಕಾರಣ ಪಡೆಯುತ್ತಿರುವ ತಿರುವು, ತಲುಪಿರುವ ಘಟ್ಟದಿಂದ ಕಿರಿಕಿರಿ ಅನುಭವಿಸುತ್ತಿರುವ ಹಲವು ನಾಯಕರು, ಶಾಸಕರು ಇಂಡಸ್ಟ್ರಿಯಲಿಸ್ಟುಗಳಾಗಲು ಹೊರಟಿದ್ದಾರೆ. ಈ ಪೈಕಿ ಚನ್ನಪಟ್ಟಣ ಕ್ಷೇತ್ರದ ಶಾಸಕ, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ನೀರಾ ಫ್ಯಾಕ್ಟರಿ ಸ್ಥಾಪಿಸುವ ತಯಾರಿ ಮುಂದುವರಿಸಿದ್ದರೆ, ಕಾಂಗ್ರೆಸ್ನ ಮತ್ತೊಬ್ಬ ಅತಿರಥ ನಾಯಕರು ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ತಯಾರಿ ನಡೆಸಿದ್ದಾರೆ.
ಸವದತ್ತಿ-ಬೆಳಗಾವಿ ಮಾರ್ಗದಲ್ಲಿ ತಲೆ ಎತ್ತಲಿರುವ ಈ ಸಕ್ಕರೆ ಕಾರ್ಖಾನೆ ದಕ್ಷಿಣ ಭಾರತದ ಅತ್ಯಂತ ದೊಡ್ಡ ಸಕ್ಕರೆ ಕಾರ್ಖಾನೆಯಾಗಲಿದೆ ಎಂಬುದು ಲೇಟೆಸ್ಟು ಸುದ್ದಿ.