Dr Vijay Darda Column: ಬೆಂಕಿಗೆ ಹಿಂದು ಮುಸ್ಲಿಂ ವ್ಯತ್ಯಾಸ ತಿಳಿಯದು !
ವಿಡಿಯೋವನ್ನು ತಿರುಚಿದ, ಸುಳ್ಳು ಸುದ್ದಿಗಳನ್ನು ಹರಡಿದ ಹಾಗೂ ಜನರನ್ನು ಅಕ್ರಮ ವಾಗಿ ಒಂದೆಡೆ ಸೇರಿಸಿದ ಆರೋಪವನ್ನು ಅವನ ಮೇಲೆ ಹೊರಿಸಲಾಗಿದೆ. ಹಿಂಸಾಚಾರ ಸೃಷ್ಟಿಸಲೆಂದೇ ಅವನು ಈ ಕೃತ್ಯಗಳನ್ನು ಎಸಗಿದ್ದಾನೆಂದು ಆರೋಪಿಸಲಾಗಿದೆ. ಚಾದರ ಸುಟ್ಟವನ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇನ್ನೊಂದು ವದಂತಿ ಯನ್ನೂ ಹರಡಲಾಗಿತ್ತು.

ಲೇಖಕರು ಹಿರಿಯ ಪತ್ರಿಕೋದ್ಯಮಿ ಡಾ.ವಿಜಯ್ ದರಡಾ

ಸಂಗತ
ಡಾ.ವಿಜಯ್ ದರಡಾ
ನನಗೆ ನಿಜಕ್ಕೂ ಆಘಾತವಾಗಿದೆ. ಬಹಳ ಬೇಸರ ಕೂಡ ಆಗಿದೆ. ಮಹಾರಾಷ್ಟ್ರದ ಎರಡನೇ ರಾಜಧಾನಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ಹಾಗೂ ನನ್ನ ಪ್ರೀತಿಯ ನಗರ ಏಕೆ ದಂಗೆಯ ಬೆಂಕಿಯಲ್ಲಿ ಉರಿದುಹೋಗಿದೆ? ನಾಗ್ಪುರದ ಮಹಲ್ ಪ್ರದೇಶದಲ್ಲಿ 1923, 1927 ಹಾಗೂ 1991ರಲ್ಲೂ ಗಲಭೆಗಳು ನಡೆದಿದ್ದವು. ಆಗಲೂ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವುಂಟಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಒಂದಷ್ಟು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ನಾಗ್ಪುರ ಬಹುತೇಕ ಶಾಂತವಾಗಿಯೇ ಇತ್ತು. ಹಾಗಿದ್ದರೆ ಈಗೇಕೆ ಇದ್ದಕ್ಕಿದ್ದಂತೆ ಮತ್ತೆ ಬೆಂಕಿ ಹೊತ್ತಿಕೊಂಡಿತು? ನಾಗ್ಪುರವನ್ನು ಕಟ್ಟಿದ್ದು ಗೊಂಡ ರಾಜಮನೆತನದ ಭಕ್ತ್ ಬುಲಂದ್ ಶಾ ಮತ್ತು ಭೋಂಸ್ಲೆ ಮನೆತನದ ರಾಜರು. ಅವರು ಎಷ್ಟು ಚೆನ್ನಾಗಿ ಈ ನಗರವನ್ನು ನಿರ್ಮಾಣ ಮಾಡಿದ್ದಾರೆಂದರೆ, ಜನರು ಅನಾದಿ ಕಾಲದಿಂದಲೂ ಇಲ್ಲಿ ಧರ್ಮ ಸಾಮರಸ್ಯ ದಿಂದ ಶಾಂತ ಜೀವನ ನಡೆಸುತ್ತಿದ್ದರು.
ಹಿಂದುಗಳ ರಾಮನವಮಿಯ ಮೆರವಣಿಗೆಯ ವೇಳೆ ಇಲ್ಲಿ ಮುಸ್ಲಿಮರು ಮತ್ತು ಸಿಖ್ಖರು ಸೇವೆ ಸಲ್ಲಿಸಿ, ಶರಬತ್ ವಿತರಿಸುತ್ತಾರೆ. ಮುಸ್ಲಿಮರ ರಂಜಾನ್ ಮತ್ತು ಈದ್ ಆಚರಣೆಯಲ್ಲಿ ಹಿಂದುಗಳೂ ಸಕ್ರಿಯವಾಗಿ ಪಾಲ್ಗೊಂಡು, ಸಂಭ್ರಮಾಚರಣೆಗೆ ಕೈ ಜೋಡಿಸುತ್ತಾರೆ. ಹೀಗೆ ನಾಗ್ಪುರದಲ್ಲಿ ಸಾಮಾನ್ಯವಾಗಿ ಯಾವುದೇ ಧರ್ಮದ ಆಚರಣೆಯಲ್ಲಿ ಇನ್ನುಳಿದ ಧರ್ಮೀಯರು ಭಾಗವಹಿಸಿ ಸಾಮಾಜಿಕ ಸಾಮರಸ್ಯವನ್ನು ಪ್ರದರ್ಶಿಸುತ್ತಾರೆ.
ಇದನ್ನೂ ಓದಿ: Dr Vijay Darda Column: ರೈಲಿಗೆ ರೈಲೇ ಹೈಜಾಕ್ ಮತ್ತು ರಕ್ತದ ಹೊಳೆ
ತಾಜುದ್ದೀನ್ ಬಾಬಾನ ನಗರ ಇರುವುದೇ ಹೀಗೆ. ಸಬ್ ಕಾ ಮಾಲಿಕ್ ಏಕ್ (ದೇವರು ಒಬ್ಬನೇ) ಎಂದು ಬೋಧಿಸಿದ ಸಾಯಿಬಾಬಾನ ಭಕ್ತರು ಇರುವ ನಗರ ಇರುವುದೇ ಹೀಗೆ. ಮಹಾವೀರ ಜಯಂತಿಯಂದು ಇಲ್ಲಿ ಜೈನ ಧರ್ಮೀಯರು ದೊಡ್ಡ ಮೆರವಣಿಗೆ ಆಯೋಜಿಸುತ್ತಾರೆ.
ಅವರನ್ನು ರಸ್ತೆಯ ಬದಿಗಳಲ್ಲಿ ನಿಂತು ಸ್ವಾಗತಿಸಲು ಇನ್ನುಳಿದ ಎಲ್ಲಾ ಧರ್ಮೀಯರೂ ಬರುತ್ತಾರೆ. ಹೀಗಾಗಿ ನಾಗ್ಪುರ ನಗರ ಯಾವಾಗಲೂ ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸುವ, ಎಲ್ಲಾ ನಂಬಿಕೆಗಳ ಜನರಿಗೂ ಆತಿಥ್ಯ ನೀಡುವ, ದ್ವೇಷ ಮತ್ತು ವೈಷಮ್ಯಕ್ಕೆ ಅವಕಾಶವಿಲ್ಲದಂತೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಸೌಹಾರ್ದ ನಗರವೆಂದೇ ಪ್ರಸಿದ್ಧಿ ಪಡೆದಿದೆ. ಇಂತಹ ನಗರದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ಕೆಲ ವ್ಯಕ್ತಿಗಳ ಷಡ್ಯಂತ್ರದ ಪರಿಣಾಮ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅವರು ಸುಳ್ಳು ವದಂತಿಗಳನ್ನು ಹರಡಿದ್ದರು. ಪೊಲೀಸರು ಪ್ರಮುಖ ಷಡ್ಯಂತ್ರಗಾರನನ್ನು ಬಂಧಿಸಿದ್ದಾರೆ. ಅವನ ಹೆಸರು ಫಾಹಿಮ್ ಖಾನ್.
ವಿಡಿಯೋವನ್ನು ತಿರುಚಿದ, ಸುಳ್ಳು ಸುದ್ದಿಗಳನ್ನು ಹರಡಿದ ಹಾಗೂ ಜನರನ್ನು ಅಕ್ರಮ ವಾಗಿ ಒಂದೆಡೆ ಸೇರಿಸಿದ ಆರೋಪವನ್ನು ಅವನ ಮೇಲೆ ಹೊರಿಸಲಾಗಿದೆ. ಹಿಂಸಾಚಾರ ಸೃಷ್ಟಿಸಲೆಂದೇ ಅವನು ಈ ಕೃತ್ಯಗಳನ್ನು ಎಸಗಿದ್ದಾನೆಂದು ಆರೋಪಿಸಲಾಗಿದೆ. ಚಾದರ ಸುಟ್ಟವನ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇನ್ನೊಂದು ವದಂತಿಯನ್ನೂ ಹರಡಲಾಗಿತ್ತು.
ಆದರೆ, ಅದಕ್ಕೂ ಮೊದಲೇ ಪೊಲೀಸರು ಚಾದರ ಸುಟ್ಟವನ ವಿರುದ್ಧ ಕೇಸು ದಾಖಲಿಸಿದ್ದರು. ಹೀಗಾಗಿ ಸುಳ್ಳು ವದಂತಿಯಿಂದ ಬೆಂಕಿ ಹೊತ್ತಿಕೊಂಡಿತು ಎಂಬುದು ಸ್ಪಷ್ಟ. ನಾಗ್ಪುರದಲ್ಲಿ ಶಾಂತಿ ಕದಡಿದವರು ಯಾವುದೇ ಸಮುದಾಯಕ್ಕೆ ಸೇರಿದವರಾಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು. ತಪ್ಪಿತಸ್ಥರು ಯಾರೋ ಅವರನ್ನು ಹುಡುಕಿ, ಬಂಧಿಸಿ, ಶಿಕ್ಷಿಸುವ ಕೆಲಸವಾಗಬೇಕು. ಮುಂದೆ ಇಂತಹ ಘಟನೆಗಳು ನಡೆಯಬಾರದು ಅಂದರೆ ಪೊಲೀಸರು ಅತ್ಯಂತ ದಕ್ಷವಾಗಿ ಈ ಪ್ರಕರಣವನ್ನು ಇತ್ಯರ್ಥಪಡಿಸಬೇಕು.
ಅದೇ ವೇಳೆ, ತನಿಖೆಯ ನೆಪದಲ್ಲಿ ಮುಗ್ಧ ಜನರಿಗೆ ಕಿರುಕುಳವಾಗದಂತೆ ನೋಡಿಕೊಳ್ಳಬೇಕು. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಜನರ ಸಂಭ್ರಮಾಚರಣೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಈ ಘಟನೆಯಲ್ಲಿ ಗುಪ್ತಚರ ದಳಗಳು ಸಂಪೂರ್ಣ ವಿಫಲವಾಗಿವೆ ಎಂದೇನೂ ನಾನು ಹೇಳುವುದಿಲ್ಲ.
ಆದರೆ ಅವು ಮೊದಲೇ ಎಚ್ಚೆತ್ತುಕೊಂಡು ಇನ್ನಷ್ಟು ನಿಖರವಾದ ಮಾಹಿತಿ ನೀಡಿದ್ದರೆ ಇಷ್ಟೊಂದು ಹಿಂಸಾಚಾರ ನಡೆಯುವುದನ್ನು ತಪ್ಪಿಸಬಹುದಿತ್ತು. ಆದರೂ ನಾನು ನಾಗ್ಪುರ ಸಿಟಿ ಪೊಲೀಸರ ಶ್ರಮವನ್ನು ಶ್ಲಾಸುತ್ತೇನೆ. ಅದರಲ್ಲೂ ಪೊಲೀಸ್ ಆಯುಕ್ತ ರವಿಂದರ್ ಸಿಂಘಲ್ ಮತ್ತು ಅವರ ತಂಡವರು ಪರಿಸ್ಥಿತಿಯನ್ನು ಬಹಳ ನಾಜೂಕಾಗಿ ನಿಭಾಯಿಸಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಪರಿಸ್ಥಿತಿಯನ್ನು ಸಹಜಗೊಳಿಸಲು ಅವರು ಯತ್ನಿಸಿದ್ದಾರೆ.
ಅದೇ ವೇಳೆ, ಎರಡೂ ಸಮುದಾಯಗಳಲ್ಲಿರುವ ಶಾಂತಿಪ್ರಿಯ ಜನರು ಈ ಸಂಘರ್ಷವನ್ನು ಕೊನೆಗೊಳಿಸಲು ಪೊಲೀಸರಿಗೆ ಸಾಕಷ್ಟು ಸಹಕಾರ ನೀಡಿದರು. ಮತೀಯ ದಂಗೆಯು ನಗರದ ಇನ್ನಷ್ಟು ಭಾಗಗಳಿಗೆ ಹರಡುವುದನ್ನು ತಡೆಯುವಲ್ಲಿ ಅವರ ಶ್ರಮ ಬಹಳ ಮುಖ್ಯವಾಗಿತ್ತು.
ಉಭಯ ಧರ್ಮಗಳ ಮುಖಂಡರು ಶಾಂತಿ ಸ್ಥಾಪನೆಗೆ ಪ್ರಯತ್ನಿಸದೆ ಇದ್ದಿದ್ದರೆ ಈ ಘಟನೆ ಎಲ್ಲಿಗೆ ಹೋಗಿ ತಲುಪುತ್ತಿತ್ತೋ ಬಲ್ಲವರಾರು. ಧರ್ಮಗಳಿಗೆ ಸಂಬಂಧಿಸಿದ ವಿಷಯದಲ್ಲಿ ನಾನು ಯಾವಾಗಲೂ ಭಾವಜೀವಿ. ಹಾಗೆಯೇ ಧಾರ್ಮಿಕ ಸಂಘರ್ಷಗಳು ನಡೆಯುತ್ತಿರುವುದನ್ನು ನೋಡಿದರೆ ನನ್ನ ಕರುಳು ಹಿಚುಕಿದಂತಾಗುತ್ತದೆ. ಏಕೆಂದರೆ ಕೋಮುಗಲಭೆಗಳು ಹೇಗೆ ಜನಸಾಮಾನ್ಯರ ಬದುಕನ್ನು ನಾಶ ಮಾಡುತ್ತವೆ ಎಂಬುದನ್ನು ನನ್ನ ರಾಜಕೀಯ ಮತ್ತು ಪತ್ರಿಕಾ ಜೀವನದ ಅನುಭವದಲ್ಲಿ ಸಾಕಷ್ಟು ಬಾರಿ ಪ್ರತ್ಯಕ್ಷವಾಗಿ ನೋಡಿದ್ದೇನೆ.
ಆದ್ದರಿಂದಲೇ ಕೋವಿಡ್-19 ಸಮಯದಲ್ಲಿ ನಾನು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕಾಗಿ ‘ಧರ್ಮ, ಸಂಘರ್ಷ ಮತ್ತು ಶಾಂತಿ ಎಂಬ ವಿಷಯದಲ್ಲಿ ವಿಸ್ತೃತವಾದ ಮತ್ತು ಆಳವಾದ ಅಧ್ಯಯನ ವರದಿಯೊಂದನ್ನು ತಯಾರಿಸಿ ಕೊಟ್ಟಿದ್ದೇನೆ. ನನ್ನ ಸಂಶೋಧನಾ ವರದಿಯ ಪ್ರಮುಖ ಅಂಶವೆಂದರೆ, ಧರ್ಮವು ಅತ್ಯಂತ ಖಾಸಗಿ ವಿಚಾರ. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಧರ್ಮವು ವೈಯಕ್ತಿಕವಾಗಿ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ.
ಹೀಗಾಗಿ ಅದನ್ನು ಬಳಸಿಕೊಂಡು ಪ್ರೀತಿಯನ್ನು ಹರಡಬೇಕೋ ಅಥವಾ ದ್ವೇಷದ ಬೆಂಕಿಯನ್ನು ಹೊತ್ತಿಸಬೇಕೋ ಎಂಬುದು ನಮಗೆ ಬಿಟ್ಟದ್ದು. ಎಲ್ಲಾ ಧರ್ಮಗಳೂ ಶಾಂತಿ ಮತ್ತು ಸಹೋದರತ್ವವನ್ನು ಬೋಧಿಸುತ್ತವೆ. ಆದರೆ ಕೆಲವರ ಸ್ವಾರ್ಥದಿಂದ ದ್ವೇಷ ಹುಟ್ಟಿಕೊಳ್ಳುತ್ತದೆ. ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಸೇರಿಕೊಂಡು ಧರ್ಮದ ಹೆಸರಿನಲ್ಲಿ ಎಂತಹುದೇ ಸಂದರ್ಭದಲ್ಲೂ ನಾವು ಅಶಾಂತಿ ಮೂಡಲು ಅವಕಾಶ ನೀಡುವುದಿಲ್ಲ ಎಂದು ಕಠಿಣವಾದ ನಿಲುವು ತಾಳಿದರೆ ಆಗ ಸಹಜವಾಗಿಯೇ ಇಂತಹ ಹಿಂಸಾಚಾರಗಳು ಭುಗಿಲೇಳುವುದೇ ಇಲ್ಲ.
ಆದರೆ ನಾವು ವಾಸಿಸುತ್ತಿರುವ ಸಮಾಜದಲ್ಲಿನ ವಾಸ್ತವ ಸ್ಥಿತಿ ಹೀಗೆ ಇಲ್ಲ. ಇಲ್ಲಿ ದುರದೃಷ್ಟವಶಾತ್ ಕ್ಷುಲ್ಲಕ ರಾಜಕಾರಣವೇ ಎಲ್ಲೆಡೆ ವಿಜೃಂಭಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಶೋಷಣೆ ಮಾಡುವ ಕುತ್ಸಿತ ವ್ಯಕ್ತಿಗಳು ನಮ್ಮ ಸುತ್ತಮುತ್ತಲೂ ಇದ್ದಾರೆ. ಧರ್ಮವನ್ನು ಶೋಷಿಸುವುದರಲ್ಲಿ ಅವರಿಗೆ ವೈಯಕ್ತಿಕ ಲಾಭವಿದೆ.
ಹೀಗಾಗಿ ಯಾವಾಗಲೂ ಅವರು ಏನಾದರೊಂದು ವಿವಾದವನ್ನು ಹುಟ್ಟುಹಾಕುತ್ತಲೇ ಇರುತ್ತಾರೆ. ನಾಗ್ಪುರದಲ್ಲಿ ನಡೆದ ಇತ್ತೀಚಿನ ಗಲಭೆಗೆ ಮೂಲ ಕಾರಣ ಔರಂಗಜೇಬನ ಗೋರಿ. ಆದರೆ, ಎಲ್ಲರೂ ಕೇಳಿಕೊಳ್ಳಬೇಕಾದ ನಿಜವಾದ ಪ್ರಶ್ನೆ ಏನೆಂದರೆ, 21ನೇ ಶತಮಾನದಲ್ಲಿ ನಾವು ಯಾವುದೋ ಹಳೆಯ ಕಾಲದ ಸಮಾಽಯೊಂದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಮತ್ತೆ ಮಧ್ಯ ಯುಗಕ್ಕೆ ಹೋಗಿ ಬದುಕಲು ನಮ್ಮಿಂದ ಸಾಧ್ಯವಿದೆಯೇ? ಅಲ್ಲಿ ಪ್ರತಿಯೊಬ್ಬ ಸುಲ್ತಾನನೂ, ಪ್ರತಿಯೊಬ್ಬ ರಾಜನೂ ದಬ್ಬಾಳಿಕೆಯ ಹೊಸ ಹೊಸ ಕತೆಗಳನ್ನು ಬರೆಯುತ್ತಿದ್ದರು.
ಮತ್ತೆ ಆ ಕಾಲಕ್ಕೆ ಹೋಗಿ ಅವರ ಕತೆಗಳಲ್ಲಿ ನಾವೂ ಪಾತ್ರವಾಗೋಣವೇ? ತಂತ್ರಜ್ಞಾನದ ಆಧುನಿಕ ಯುಗದಲ್ಲಿ ಬದುಕುತ್ತಿರುವ ನಾವು ಮತ್ತೆ ಮಾನಸಿಕವಾಗಿ ಬುಡಕಟ್ಟು ಅಥವಾ ಗುಡ್ಡಗಾಡು ಜನರ ನಾಗರಿಕತೆಯ ವಿಕಾಸಕ್ಕೂ ಮುಂಚಿನ ಕಾಲದಲ್ಲಿ ಬದುಕಲು ಸಾಧ್ಯವಿದೆಯೇ? ಹಿಂದೆ ಪರಸ್ಪರ ದ್ವೇಷಕಾರಿಕೊಳ್ಳುತ್ತಿದ್ದ ಬುಡಕಟ್ಟು ಸಮುದಾಯಗಳು ಕೂಡ ಇಂದು ಶಾಂತಿ ಮತ್ತು ಸಹಬಾಳ್ವೆಯನ್ನು ಅಪ್ಪಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿವೆ.
ಒಂದು ಕಾಲವಿತ್ತು; ಆಗ ನಾಗಾಲ್ಯಾಂಡಿನ ಬುಡಕಟ್ಟು ಸಮುದಾಯವೊಂದು ತನ್ನ ವೈರಿ ಸಮುದಾಯದ ವ್ಯಕ್ತಿಯೊಬ್ಬ ಕಂಡರೆ ತಲೆ ಕಡಿದು, ಅವನ ಬುರುಡೆಯನ್ನು ತಮ್ಮ ಮನೆಯ ಮುಂದೆ ನೇತು ಹಾಕುತ್ತಿತ್ತು. ಆದರೆ ಈಗ ಅವರೂ ಕೂಡ ಅಂತಹ ಕ್ರೂರ ಮನಸ್ಥಿತಿಯನ್ನೂ, ಆಚರಣೆಗಳನ್ನೂ ಕೈಬಿಟ್ಟು ಮುಂದೆ ಸಾಗಿದ್ದಾರೆ. ಅವರ ಕತೆ ಹಾಗಿರಲಿ, ನಾವಂತೂ ಆಧುನಿಕ ಸಮಾಜದಲ್ಲಿ ಬದುಕುತ್ತಿದ್ದೇವೆ.
ನಮ್ಮ ಯೋಚನೆಗಳು ಪುರೋಗಾಮಿಯಾಗಿ ಮತ್ತು ವಿಶಾಲವಾಗಿ ಇರಬೇಕೇ ಹೊರತು ಸಂಕುಚಿತವಾಗಬಾರದು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ ಎಸ್)ದ ಅಖಿಲ ಭಾರತ ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೇಕರ್ ಅವರ ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಔರಂಗಜೇಬ ಇಂದು ಪ್ರಸ್ತುತವೇ ಅಲ್ಲ, ಹೀಗಾಗಿ ಅವನ ಕಾರಣಕ್ಕೆ ಯಾವುದೇ ರೀತಿಯಲ್ಲಿ ಸಂಘರ್ಷ ನಡೆಯುತ್ತಿದ್ದರೂ ಮೊದಲು ಅದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದರು.
ಆದರೇನು ಮಾಡೋಣ, ದೇಶದಲ್ಲಿ ಮತೀಯ ಹಿಂಸಾಚಾರಗಳು ನಡೆಯುತ್ತಲೇ ಇವೆ. ನಾನು ಅವುಗಳ ಅಂಕಿಅಂಶಗಳನ್ನು ಮತ್ತೆ ನಿಮ್ಮ ಮುಂದಿಡಲು ಹೋಗುವುದಿಲ್ಲ. ಯಾವ ವರ್ಷ ಎಷ್ಟು ಮತೀಯ ಗಲಭೆಗಳು ನಡೆದಿವೆ, ಈಗಿನ ಪರಿಸ್ಥಿತಿ ಏನಿದೆ ಎಂಬುದನ್ನೆಲ್ಲ ಇಲ್ಲಿ ಚರ್ಚಿಸುವ ಅಗತ್ಯವಿಲ್ಲ.
ಕೆಲ ಸಮಯದ ಹಿಂದೆ ಸಂಭಲ್‌ನಲ್ಲಿ ನಡೆದ ಘಟನೆಯ ಚರ್ಚೆಯೂ ಇಲ್ಲಿ ಬೇಕಿಲ್ಲ. ನಾನು ಹೇಳುವುದು ಇಷ್ಟೆ. ಎಲ್ಲೇ ಮತೀಯ ಗಲಭೆಗಳು ಉಂಟಾದರೂ ಅದರ ಜ್ವಾಲೆ ಸಮಾಜವನ್ನು ಸುಡುತ್ತದೆ. ತನ್ಮೂಲಕ ದೇಶವನ್ನೂ ಸುಡುತ್ತದೆ. ಹೀಗಾಗಿ ಎಲ್ಲರೂ ಸಂಯಮದಿಂದ ನಡೆದುಕೊಳ್ಳಬೇಕು. ಇಂತಹ ಸೂಕ್ಷ್ಮ ವಿಷಯದಲ್ಲಿ ತಾಳ್ಮೆಯಿಂದ ವರ್ತಿಸೋಣ. ನನಗಿಲ್ಲಿ ಬಶೀರ್ ಬದರ್‌ನ ಒಂದು ಶೇರ್ ನೆನಪಾಗುತ್ತಿದೆ: ಜನರು ಸುಸ್ತಾಗಿ ಹೋಗುತ್ತಾರೆ ಒಂದು ಮನೆಯನ್ನು ಕಟ್ಟುವುದಕ್ಕೆ, ನೀನು ಹಿಂದೆಮುಂದೆ ನೋಡುವುದಿಲ್ಲ ಇಡೀ ಓಣಿಗೆ ಬೆಂಕಿ ಹಚ್ಚುವುದಕ್ಕೆ!
(ಲೇಖಕರು ಹಿರಿಯ ಪತ್ರಿಕೋದ್ಯಮಿ)