ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪರಿಶಿಷ್ಟರ ಅನುದಾನ: ಮುಗಿಯದ ಜಟಾಪಟಿ

ಎಸ್ ಸಿಪಿ, ಟಿಎಸ್ ಪಿ ಗೆ ನೀಡಬೇಕಿದ್ದ ಸುಮಾರು 27000 ಕೋಟಿ ರು.ಗಳನ್ನು ಬಿಡುಗಡೆ ಮಾಡು ವುದರಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಈ ವಿಚಾರ ದಲಿತ ಸಮುದಾಯದ ಸಚಿವರು ಮತ್ತು ಶಾಸಕರನ್ನು ಕೆರಳಿಸಿದೆ. ಹೀಗಾಗಿಯೇ ಕಳೆದ ಸಚಿವ ಸಂಪುಟ ದಲ್ಲಿ ಪರಿಶಿಷ್ಟರ ಅನುದಾನ ಹಂಚಿಕೆ ವಿಚಾರವಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ವಿಚಾರ ಪ್ರಸ್ತಾಪಿಸಿ ಭಾರೀ ಚರ್ಚೆಗೆ ಗ್ರಾಸವಾ ಗಿತ್ತು.

ಪರಿಶಿಷ್ಟರ ಅನುದಾನ: ಮುಗಿಯದ ಜಟಾಪಟಿ

-

Ashok Nayak
Ashok Nayak Nov 7, 2025 6:33 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಬಳಕೆಯಾಗದ 2158 ಕೋಟಿ ಕಲ್ಯಾಣನಿಧಿ ವಾಪಸ್ ಕೋರಿ ಎಚ್‌ಸಿಎಂ ಪತ್ರ

ರಾಜ್ಯ ಸಚಿವ ಸಂಪುಟದಲ್ಲಿ ಕಳೆದ ಬಾರಿ ನಡೆದಿದ್ದ ಪರಿಶಿಷ್ಟರ ಅನುದಾನ ಗದ್ದಲ ಸದ್ದಿಲ್ಲದೇ ಪತ್ರ ಸಮರಕ್ಕೆ ದಾರಿ ಮಾಡಿದೆ. ಕಾರಣ ಅನೇಕ ಮಂತ್ರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನವನ್ನು ಅನಗತ್ಯವಾಗಿ ಪಡೆದು ಖರ್ಚನ್ನೂ ಮಾಡದೆ ಉಳಿಸಿಕೊಂಡಿರುವುದು. ಸುಮಾರು 2158 ಕೋಟಿ ರು. ಅನುದಾನ ಬಳಕೆಯಾಗದೆ ಉಳಿದಿದೆ. ಇದನ್ನು ಸಂಬಂಧಿಸಿದ ಸಮಾಜ ಕಲ್ಯಾಣ ಇಲಾಖೆಗೆ ವಾಪಸ್ ಕೂಡ ನೀಡುತ್ತಿಲ್ಲ.

ಇದರ ಮಧ್ಯೆ, ಎಸ್ ಸಿಪಿ, ಟಿಎಸ್ ಪಿ ಗೆ ನೀಡಬೇಕಿದ್ದ ಸುಮಾರು 27000 ಕೋಟಿ ರು.ಗಳನ್ನು ಬಿಡುಗಡೆ ಮಾಡುವುದರಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಈ ವಿಚಾರ ದಲಿತ ಸಮುದಾಯದ ಸಚಿವರು ಮತ್ತು ಶಾಸಕರನ್ನು ಕೆರಳಿಸಿದೆ. ಹೀಗಾಗಿಯೇ ಕಳೆದ ಸಚಿವ ಸಂಪುಟದಲ್ಲಿ ಪರಿಶಿಷ್ಟರ ಅನುದಾನ ಹಂಚಿಕೆ ವಿಚಾರವಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ವಿಚಾರ ಪ್ರಸ್ತಾಪಿಸಿ ಭಾರೀ ಚರ್ಚೆಗೆ ಗ್ರಾಸವಾ ಗಿತ್ತು.

ಗಂಗಾ ಕಲ್ಯಾಣ ಯೋಜನೆ ನೆಪದಲ್ಲಿ ಆರಂಭವಾದ ಚರ್ಚೆ, ಸಚಿವ ಜಾರ್ಜ್ ವಿರುದ್ಧ ಮಹಾದೇವಪ್ಪ ಆಕ್ರೋಶಗೊಳ್ಳುವುದಕ್ಕೂ ದಾರಿ ಮಾಡಿತ್ತು. ಇದಕ್ಕೆ ಹಣಕಾಸು ಇಲಾಖೆ ಯಿಂದ ಪರಿಹಾರ ಸಿಗದ ಕಾರಣ ಈಗ ಸಚಿವರ ಆಕ್ರೋಶ ಇತರ ಇಲಾಖೆಗಳ ಕಡೆಗೆ ತಿರುಗಿದೆ ಎನ್ನಲಾಗಿದೆ. ಈ ವಿಚಾರದಲ್ಲಿ ವಿವಿಧ ಇಲಾಖೆಗಳ ಸಚಿವರು ಹಾಗೂ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಅಽಕಾರಿಗಳ ನಿರ್ಲಕ್ಷ್ಯ ದಲಿತ ಸಚಿವರನ್ನು ಸಿಟ್ಟಿಗೆಬ್ಬಿಸಿದೆ.

ಇದನ್ನೂ ಓದಿ: Dr Vijay Darda Column: ಅಪರೂಪದ ಖನಿಜಗಳ ಅತಿದೊಡ್ಡ ಜಾಗತಿಕ ಮೇಲಾಟ

ಈ ಸಮಸ್ಯೆ ಸದ್ಯಕ್ಕೆ ಪರಿಹಾರವಾಗದಿದ್ದರೆ ಈ ವಿಚಾರ ಮುಂಬರುವ ಬೆಳಗಾವಿ ಅಧಿವೇಶನ ದಲ್ಲೂ ಪ್ರಸ್ತಾಪವಾಗಿ, ಗದ್ದಲಕ್ಕೂ ಕಾರಣವಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಇದರ ಮಧ್ಯೆ, ಗ್ಯಾರಂಟಿ ಯೋಜನೆಗಳಲ್ಲಿ ಸವಲತ್ತು ಪಡೆಯುತ್ತಿರುವ ಪರಿಶಿಷ್ಟಜಾತಿ, ಪಂಗಡಗಳ ಫಲಾನುಭವಿಗಳ ಅಂಕಿ, ಸಂಖ್ಯೆ ಮತ್ತು ಮಾಹಿತಿ ಸಂಬಂಽಸಿದ ಇಲಾಖೆಗಳ ಸರಿಯಾಗಿ ಸಿಗುತ್ತಿಲ್ಲ.

ಇದರಿಂದ ಇಲಾಖೆಗಳಿಗೆ ನೀಡಿರುವ ಅನುದಾನ ಖರ್ಚಾಗದೇ ಉಳಿಯುತ್ತಿದ್ದು ಇದನ್ನು ಸಮಾಜ ಕಲ್ಯಾಣ ಇಲಾಖೆಗೆ ವಾಪಸ್ ನೀಡಿ ಸರಿಪಡಿಸುವಲ್ಲಿ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ದಲಿತ ಸಚಿವರ ಆಕ್ರೋಶ.

ಹಾಗೆ ಇದನ್ನು ಸಮನ್ವಯದೊಂದಿಗೆ ಸರಿಪಡಿಸಬೇಕಾದ ಸಿಎಂ ಪ್ರಧಾನ ಕಾರ್ಯದರ್ಶಿ ಅಂಜುಮ್ ಫರ್ವೇಜ್ ಜಾಣ ಮೌನ ವಹಿಸಿರುವುದು ಸಚಿವರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ. ಅಂದರೆ ಈ ಹಿಂದೆ ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರ ಅವಧಿಯಲ್ಲಿ ಇದ್ದ ಸಮನ್ವಯ ಮತ್ತು ಅನುದಾನದ ಸಮರ್ಪಕ ಹಂಚಿಕೆಯಲ್ಲಿ ಈಗ ಬಾರಿ ತಾರತಮ್ಯ ಮತ್ತು ಸಮಸ್ಯೆಗಳು ತಲೆದೋರಿದ್ದು, ಇದು ಬರಿ ದಲಿತ ಮಂತ್ರಿಗಳು ಮಾತ್ರವಲ್ಲದೆ ಇತರ ಮಂತ್ರಿಗಳಿಗೂ ಕೋಪ ಬರುವಂತೆ ಮಾಡಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಅಧಿಕಾರಿಗಳ ಮೇಲೂ ಆಕ್ರೋಶ

ಸರಕಾರದ ಎಸ್.ಸಿಪಿ,ಟಿಎಸ್ ಪಿ ಕಾಯ್ದೆ ಪ್ರಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 42000 ಕೋಟಿ ರು.ಗಳನ್ನು ಪರಿಶಿಷ್ಟಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ನಿಗದಿ ಮಾಡಲಾಗಿದೆ. ನಿಗದಿತ ಅನುದಾನದಲ್ಲಿ ಈ ತನಕ (ನವೆಂಬರ್ ೪ರ ವರೆಗೂ ) 15328 ಕೋಟಿ ರು. ಹಣಕಾಸು ಇಲಾಖೆಯಿಂದ ಬಿಡುಗಡೆಯಾಗಿದ್ದು, ಇದರಲ್ಲಿ 12138 ಕೋಟಿ ರು. ವೆಚ್ಚ ಮಾಡಲಾಗಿದೆ. ಅಂದರೆ ಎಸ್ ಸಿಪಿ, ಟಿಎಸ್ ಪಿಗೆ ಬಿಡುಗಡೆಯಾಗಿರುವ ಹಣದಲ್ಲಿ ಶೇ.೮೦ ರಷ್ಟು ವೆಚ್ಚ ಮಾಡಿ ಸಾಧನೆ ಮಾಡಲಾಗಿದೆ. ಆದರೆ ಉಳಿದ ಅನುದಾನ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಅಧಿಕಾರಿಗಳ ಅದರಲ್ಲೂ ಹಣಕಾಸು ಇಲಾಖೆ ಪ್ರಧಾನ ಕಾರ‍್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರ ವಿಳಂಬ ಧೋರಣೆ ತೋರಿಸುತ್ತಿದ್ದು, ಈ ಬಗ್ಗೆ ಶಾಸಕರು ಅಸಮಾಧಾನಗೊಂಡಿದ್ದಾರೆ.

ಇಂಥ ವಿಚಾರದಲ್ಲಿ ಸಿಎಂ ಅವರೊಂದಿಗೆ ಸಮನ್ವಯ ಮಾಡಿ ಸಮಸ್ಯೆ ಬಗೆಹರಿಸಬೇಕಾದ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರ ಅಲಕ್ಷ್ಯದ ಬಗ್ಗೆಯೂ ಅನೇಕ ದಲಿತ ಸಚಿವರೂ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಫಲಾನುಭವಿಗಳ ಕೊರತೆ!

ಅಧಿಕಾರಿಗಳ ನಿರ್ಲಕ್ಷ ಮತ್ತು ಗೊಂದಲದಿಂದ ಸರಕಾರದ ಸುಮಾರು ೧೦ಕ್ಕೂ ಹೆಚ್ಚು ಇಲಾಖೆಗಳಲ್ಲಿ ಸುಮಾರು 2158 ಕೋಟಿ ರು. ಗಳು ವೆಚ್ಚ ಮಾಡಲಾಗದೆ ಹಾಗೆಯೇ ಉಳಿಯುವ ಸಾಧ್ಯತೆ ಎದುರಾಗಿದೆ. ಅನೇಕ ಇಲಾಖೆಗಳಲ್ಲಿ ರೂಪಿಸಲಾಗಿರುವ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳೇ ಸಿಗುತ್ತಿಲ್ಲ. ಕೆಲವು ಇಲಾಖೆಗಳಲ್ಲಿ ಅಗತ್ಯ ಕ್ಕಿಂತಲೂ ಹೆಚ್ಚಿನ ಅನುದಾನ ನೀಡಲಾಗಿದೆ. ಹೀಗೆ ವೆಚ್ಚವಾಗದೆ ಉಳಿದಿರುವ ಅನುದಾನ ವನ್ನು ಪರಿಶಿಷ್ಟರ ಅನುದಾನ ನೋಡಲ್ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಗೆ ವಾಪಸ್ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಎಲ್ಲ ಇಲಾಖೆಗಳ ಸಚಿವರು ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಯಾವ ಇಲಾಖೇಲಿ ಎಷ್ಟು ಬಾಕಿ?

ಆಹಾರ ಇಲಾಖೆಯಲ್ಲಿ 400 ಕೋಟಿ ರು., ಇಂಧನ ಇಲಾಖೆಯಲ್ಲಿ 500 ರು. ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 300 ಕೋಟಿ ರು., ವಸತಿ ಇಲಾಖೆಯಲ್ಲಿ 500 ಕೋಟಿ ಯೋಜನಾ ಇಲಾಖೆಯಲ್ಲಿ 500 ಕೋಟಿ ರು. ಸೇರಿ ಎಲ್ಲಾ ಇಲಾಖೆಗಳಲ್ಲೂ ವೆಚ್ಚವಾಗದೆ ಸಾವಿರಾರು ಕೋಟಿ ರು. ಉಳಿಯಲಿದೆ. ಆದರೆ ಇದನ್ನು ಇಲಾಖೆಗಳು ವೆಚ್ಚ ಮಾಡದೆ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ದಲಿತ ಸಮುದಾಯದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.