ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ರೈಲಿಗೆ ರೈಲೇ ಹೈಜಾಕ್‌ ಮತ್ತು ರಕ್ತದ ಹೊಳೆ

ಬ್ರಿಟಿಷರು ಸ್ವಾತಂತ್ರ್ಯ ನೀಡಿ ಬ್ರಿಟನ್ನಿಗೆ ಮರಳಿದ ಮೇಲೆ ಬಲೂಚಿಸ್ತಾನ 227 ದಿನಗಳ ಕಾಲ ಸ್ವತಂತ್ರ ದೇಶವಾಗಿತ್ತು. ನಂತರ ಅದನ್ನು ಪಾಕಿಸ್ತಾನ ವಶಪಡಿಸಿಕೊಂಡಿತು. ಅಂದಿನಿಂದ ಈವರೆಗೂ ಬಲೂಚಿ ಸ್ತಾನದ ಮೇಲೆ ಪಾಕಿಸ್ತಾನ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಇದಕ್ಕೆ ಕೊನೆ ಯಾವಾಗ?

ರೈಲಿಗೆ ರೈಲೇ ಹೈಜಾಕ್‌ ಮತ್ತು ರಕ್ತದ ಹೊಳೆ

ಡಾ.ವಿಜಯ್‌ ದರಡಾ ಅವರ ಅಂಕಣ

Profile Ashok Nayak Mar 20, 2025 6:13 AM

ಹಿಂದೊಮ್ಮೆ ನಾನು ದಕ್ಷಿಣ ಏಷ್ಯಾದ ಪತ್ರಕರ್ತರ ವೇದಿಕೆಯ ಅಧ್ಯಕ್ಷನಾಗಿ ಪಾಕಿಸ್ತಾನಕ್ಕೆ ಹೋಗಿದ್ದೆ. ಅಲ್ಲಿ ಕೆಲ ಬಲೂಚಿ ಪ್ರೊಫೆಸರ್‌ಗಳನ್ನು ಭೇಟಿಯಾಗಿದ್ದೆ. ಅವರಲ್ಲೊಬ್ಬರು ಮಹಿಳಾ ಪ್ರೊಫೆಸರ್ ಸುಂದರವಾದ ಆಭರಣಗಳನ್ನು ಧರಿಸಿದ್ದರು. ನಾನು ಅದನ್ನು ಹೊಗಳಿದೆ. ಆಗ ಆಕೆ, ‘ನಮ್ಮಲ್ಲಿ ತುಂಬಾ ಸುಂದರವಾದ ಆಭರಣಗಳನ್ನು ತಯಾರಿಸುವ ಕಲೆಗಾರರಿದ್ದಾರೆ. ಆದರೆ ದುರದೃಷ್ಟವಶಾತ್ ನಾವು ಬಲೂಚಿಗಳು ಎಲ್ಲವನ್ನೂ ಕಳೆದುಕೊಂಡಿದ್ದೇವೆ’ ಎಂದು ಬೇಸರದಿಂದ ಹೇಳಿದರು. ಬಲೂಚಿಸ್ತಾನದ ಜನರಿಗೆ ಪಾಕಿಸ್ತಾನದ ಬಗ್ಗೆ ಇರುವ ಬೇಸರ ನನಗೆ ಮನವರಿಕೆಯಾ ಗಿದ್ದು ಅದೇ ಮೊದಲು. ಆಕೆ ತಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ‘ಅಲ್ಲೇನಾಗುತ್ತಿದೆ ಎಂಬುದನ್ನು ನೀವೇ ಒಮ್ಮೆ ಬಂದು ನೋಡಿ. ನಿಮ್ಮನ್ನು ಭೇಟಿಯಾಗುವ ಪ್ರತಿಯೊಬ್ಬ ವಿದ್ಯಾ ರ್ಥಿಯೂ ಪ್ರತ್ಯೇಕ ಬಲೂಚಿಸ್ತಾನಕ್ಕಾಗಿ ಆಗ್ರಹಿಸುತ್ತಾರೆ’ ಎಂದರು.

ಮೊನ್ನೆ ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಮಾಡಿದ ಘಟನೆ ನಡೆದಾಗ ನನಗೆ ಆ ಪ್ರೊಫೆಸರ್ ಆಡಿದ ಮಾತುಗಳು ನೆನಪಾದವು. ಬಲೂಚಿಗಳ ಮೇಲೆ ಪಾಕಿಸ್ತಾನ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ. ಬಲೂಚಿಸ್ತಾನದಲ್ಲಿ ಅದು ಅಮಾನುಷವಾಗಿ ರಕ್ತದ ಹೊಳೆಯನ್ನೇ ಹರಿಸುತ್ತಿದೆ. ಅದನ್ನು ಇನ್ನೂ ಎಷ್ಟು ದಿನ ಬಲೂಚಿಗಳು ಸಹಿಸಿಕೊಳ್ಳಬೇಕು? ಕಳೆದ ವಾರ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ)ಯವರು ಒಂದಿಡೀ ರೈಲನ್ನೇ ಅಪಹರಣ ಮಾಡಿದ್ದರು.

ಇದನ್ನೂ ಓದಿ: Dr Vijay Darda Column: ಆಸ್ಪತ್ರೆಗಳಿಗೆ ನುಸುಳಿದ ಸಾವಿನ ವ್ಯಾಪಾರಿಗಳು

ಅದು ಬಲೂಚಿಸ್ತಾನದ ಸಮಸ್ಯೆಯನ್ನು ಜಗತ್ತಿಗೇ ತಿಳಿಸಿತು. ನಿಮಗೊಂದು ಸಂಗತಿ ಗೊತ್ತೆ? ಪಾಕಿ ಸ್ತಾನಕ್ಕೆ ಸ್ವಾತಂತ್ರ್ಯ ಬಂದಾಗ ಬಲೂಚಿಸ್ತಾನ ಕೂಡ ಸ್ವತಂತ್ರ ದೇಶವಾಗಿತ್ತು. ಆದರೆ ಅದು ಸ್ವತಂತ್ರ ವಾಗಿ ಇದ್ದುದು ಕೇವಲ ೨೨೭ ದಿನಗಳು. ನಂತರ ಅದನ್ನು ಪಾಕಿಸ್ತಾನ ಕಬಳಿಸಿತು. ಇಂದಿಗೂ ಬಲೂಚಿ ಜನರು ಹಿಂದೆ ಕಳೆದುಕೊಂಡ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ.

ಬಲೂಚಿಸ್ತಾನದ ಕತೆಯನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ ನಾವು ಇತಿಹಾಸದ ಪುಟಗಳನ್ನು ತಿರುವಿ ಹಾಕಬೇಕು. ಹೆಚ್ಚು ಕಮ್ಮಿ 150 ವರ್ಷಗಳ ಹಿಂದೆ ಬಲೂಚಿಸ್ತಾನ ಪ್ರಾಂತವನ್ನು ಕಲಾಟ್‌ನ ಖಾನ್ ರಾಜಮನೆತನದವರು ಆಳುತ್ತಿದ್ದರು. 1876ರಲ್ಲಿ ಬ್ರಿಟಿಷರು ಖಾನ್‌ಗಳ ಜೊತೆ ಒಪ್ಪಂದ ಮಾಡಿಕೊಂಡು, ಬಲೂಚಿಸ್ತಾನಕ್ಕೆ ಸಂರಕ್ಷಿತ ರಾಜ್ಯ ಎಂಬ ಸ್ಥಾನಮಾನ ನೀಡಿದರು. 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ಖಚಿತವಾಯಿತು. ಅದೇ ವೇಳೆ, ಪಾಕಿಸ್ತಾನವೆಂಬ ಹೊಸ ದೇಶ ರಚನೆಯಾಗುವುದೂ ನಿಶ್ಚಿತವಾಗಿತ್ತು.

ಆಗ ಕಲಾಟ್‌ನ ಖಾನ್‌ಗಳು ಕೂಡ ತಮಗೆ ಪ್ರತ್ಯೇಕ ದೇಶದ ಮಾನ್ಯತೆ ನೀಡಬೇಕೆಂದು ಪಟ್ಟು ಹಿಡಿದರು. ಕಲಾಟ್‌ನ ರಾಜ ಮೀರ್ ಅಹ್ಮದ್ ಖಾನ್ ಅವರು ಮೊಹಮ್ಮದ್ ಅಲಿ ಜಿನ್ನಾರನ್ನು ತಮ್ಮ ಕಾನೂನು ಸಲಹೆಗಾರರನ್ನಾಗಿ ನೇಮಿಸಿಕೊಂಡು, ತಮ್ಮ ಪರವಾಗಿ ಬ್ರಿಟಿಷರ ಜೊತೆಗೆ ಮಾತುಕತೆ ನಡೆಸುವ ಜವಾಬ್ದಾರಿ ನೀಡಿದರು. 1947ರ ಆಗಸ್ಟ್ 6ರಂದು, ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಕೆಲವೇ ದಿನಗಳ ಮೊದಲು ದೆಹಲಿಯಲ್ಲಿ ಒಂದು ಸಭೆ ನಡೆಯಿತು.

ಇದನ್ನೂ ಓದಿ: Dr Vijay Darda Column: ಗಾಜಾಪಟ್ಟಿಯಲ್ಲಿ ಟ್ರಂಪ್‌ ಟವರ್ಸ್‌ ನಿರ್ಮಾಣ ?

ಲಾರ್ಡ್ ಮೌಂಟ್‌ಬ್ಯಾಟನ್, ಜವಾಹರಲಾಲ್ ನೆಹರು, ಮೊಹಮ್ಮದ್ ಅಲಿ ಜಿನ್ನಾ, ಮೀರ್ ಅಹ್ಮದ್ ಖಾನ್ ಆ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಲಾಟ್ ಕೂಡ ಪ್ರತ್ಯೇಕ ದೇಶವಾಗಲು ಮೌಂಟ್‌ಬ್ಯಾಟನ್ ಒಪ್ಪಿಗೆ ನೀಡಿದರು. ಮೊಹಮ್ಮದ್ ಅಲಿ ಜಿನ್ನಾ ಕೂಡ ಕಲಾಟ್, ಖರಾನ್, ಲಾಸ್ ಬೇಲಾ, ಮಕ್ರಾನ್ ಪ್ರಾಂತಗಳನ್ನು ಒಳಗೊಂಡ ಬಲೂಚಿಸ್ತಾನವೆಂಬ ದೇಶದ ರಚನೆಗೆ ಒಪ್ಪಿಗೆ ನೀಡಿದರು.

ಕಲಾಟ್ ಹಾಗೂ ಮುಸ್ಲಿಂ ಲೀಗ್‌ನ ನಡುವೆ ಏರ್ಪಟ್ಟ ಒಪ್ಪಂದದಂತೆ ಆಗಸ್ಟ್ 12, 1947ರಂದು ಕಲಾಟ್‌ನ ಖಾನ್ ರಾಜರು ಬಲೂಚಿಸ್ತಾನ ಸ್ವತಂತ್ರ ದೇಶವೆಂದು ಘೋಷಣೆ ಮಾಡಿದರು. ಆ ದೇಶದ ರಕ್ಷಣೆಯ ಹೊಣೆ ಪಾಕಿಸ್ತಾನದ್ದಾಗಿತ್ತು. ಆದರೆ ಬ್ರಿಟನ್ ಇಲ್ಲೂ ಕಳ್ಳಾಟವಾಡಿತು. ಸೆಪ್ಟೆಂಬರ್ 12, 1947ರಂದು ಬಲೂಚಿಸ್ತಾನಕ್ಕೆ ಸ್ವತಂತ್ರ ದೇಶವಾಗಿ ಉಳಿಯುವ ಶಕ್ತಿ ಇಲ್ಲವೆಂದು ಬ್ರಿಟನ್ ಘೋಷಣೆ ಹೊರಡಿಸಿಬಿಟ್ಟಿತು.

ಈ ಷಡ್ಯಂತ್ರದ ಹಿಂದೆ ಇದ್ದುದು ಜಿನ್ನಾ ಎಂದು ಹೇಳಲಾಗುತ್ತದೆ. ಮಾರ್ಚ್ 18, 1948ರಂದು ಜಿನ್ನಾ ಅವರು ಖರಾನ್, ಲಾಸ್ ಬೇಲಾ ಹಾಗೂ ಮಕ್ರಾನ್‌ನ ಬುಡಕಟ್ಟು ನಾಯಕರಿಗೆ ಆಮಿಷವೊಡ್ಡಿ ಅವರ ಪ್ರಾಂತಗಳನ್ನೆಲ್ಲ ಕಲಾಟ್‌ನಿಂದ ಬೇರ್ಪಡಿಸಿಬಿಟ್ಟರು. ಆಗ ಇನ್ನುಮುಂದೆ ಯಾವುದೇ ಕಾರಣಕ್ಕೂ ಬಲೂಚಿಸ್ತಾನಕ್ಕೆ ಸ್ವತಂತ್ರ ದೇಶವಾಗಿ ಉಳಿಯಲು ಪಾಕಿಸ್ತಾನ ಅನುವು ಮಾಡಿ ಕೊಡು ವುದಿಲ್ಲ ಎಂಬುದು ಖಚಿತವಾಯಿತು.

ಬಲೂಚಿಸ್ತಾನದ ಮೇಲೆ ಪಾಕಿಸ್ತಾನದ ಸೇನೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಮೀರ್ ಅಹ್ಮದ್ ಖಾನ್ ತನ್ನ ಸೇನಾಪಡೆಯ ಮುಖ್ಯಸ್ಥ ಬ್ರಿಗೇಡಿಯರ್ ಜನರಲ್ ಪರ್ವೇಜ್‌ಗೆ ಯುದ್ಧಕ್ಕೆ ಸನ್ನದ್ಧರಾಗುವಂತೆ ಆದೇಶ ನೀಡಿದರು. ಸೈನಿಕರನ್ನು ಕಲೆಹಾಕಿ, ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದರು. ಆದರೆ ಅಷ್ಟೊತ್ತಿಗೆ ತಡವಾಗಿತ್ತು.

ಮಾರ್ಚ್ 26, 1948ರಂದು ಪಾಕಿಸ್ತಾನದ ಸೇನೆ ಬಲೂಚಿಸ್ತಾನವನ್ನು ವಶಪಡಿಸಿಕೊಂಡಿತು. ಅಲ್ಲಿಗೆ ಬಲೂಚಿಸ್ತಾನದ 227 ದಿನಗಳ ಸ್ವಾತಂತ್ರ್ಯವೂ ಅಂತ್ಯವಾಯಿತು. ಸ್ವತಂತ್ರವಾಗಿದ್ದ ದೇಶವು ಮತ್ತೊಮ್ಮೆ ಪರತಂತ್ರಕ್ಕೆ ಹೊರಳಿತು! ಈ ಘಟನೆ ಬಲೂಚಿಸ್ತಾನಿಗಳನ್ನು ರೊಚ್ಚಿಗೇಳಿಸಿತು. ಬಹಳ ಬೇಗ ಅಲ್ಲಿ ಪಾಕಿಸ್ತಾನದ ಆಳ್ವಿಕೆಯ ಬಗ್ಗೆ ದ್ವೇಷ ಮತ್ತು ದಳ್ಳುರಿಗಳು ಆರಂಭವಾದವು.

ಅದೇ ವರ್ಷ ಮೀರ್ ಅಹ್ಮದ್ ಖಾನನ ಸಹೋದರ ರಾಜಕುಮಾರ ಕರೀಂ ಖಾನ್ ತನ್ನದೇ ಸೇನೆ ಯನ್ನು ಕಟ್ಟಿಕೊಂಡು ಹೋಗಿ ಪಾಕಿಸ್ತಾನಿ ಸೇನೆಯ ವಿರುದ್ಧ ಯುದ್ಧಕ್ಕಿಳಿದ. ಆದರೆ ಕ್ಷಣಮಾತ್ರ ದಲ್ಲಿ ಪಾಕಿಸ್ತಾನ ಅವನ ಸೇನೆಯನ್ನು ಹೊಸಕಿ ಹಾಕಿತು. ಆದರೆ ಅದರ ನಂತರವೂ ಬಲೂಚಿಗಳು ಅವಕಾಶ ಸಿಕ್ಕಾಗಲೆಲ್ಲ ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ.

2005ರ ವೇಳೆಗೆ ಅಲ್ಲಿ ಪಾಕ್ ವಿರುದ್ಧ ನಾಲ್ಕು ದೊಡ್ಡ ಮಟ್ಟದ ಹೋರಾಟಗಳು ನಡೆದಿದ್ದವು. 2005ರಲ್ಲಿ ಐದನೇ ಅತಿದೊಡ್ಡ ಕ್ರಾಂತಿ ನಡೆಯಿತು. ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್‌ ಗೆ ಆಪ್ತನಾಗಿದ್ದ ಹಿರಿಯ ಸೇನಾ ಅಽಕಾರಿಯೊಬ್ಬ ಬಲೂಚಿಸ್ತಾನದ ಮಹಿಳಾ ಡಾಕ್ಟರ್ ಒಬ್ಬರ ಮೇಲೆ ಅತ್ಯಾಚಾರ ಎಸಗಿದ್ದ. ಅವನ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪಾಕಿಸ್ತಾನದ ಅಧಿಕಾರಿಗಳು ವೈದ್ಯೆಗೆ ಇನ್ನಷ್ಟು ಕಿರುಕುಳ ನೀಡಿದ್ದರು.

ಆ ಘಟನೆಯು ಬಲೂಚಿಸ್ತಾನದ ಬುಗ್ತಿ ಬುಡಕಟ್ಟು ಜನಾಂಗದ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿಯನ್ನು ಸಿಟ್ಟಿಗೇಳಿಸಿತು. ಬುಕ್ತಿ ಹಿಂದೊಮ್ಮೆ ಪಾಕಿಸ್ತಾನದ ರಕ್ಷಣಾ ಸಚಿವನಾಗಿ ಕೆಲಸ ಮಾಡಿ ದ್ದ. ಆದರೆ 2005ರಲ್ಲಿ ಆತ ಬಲೂಚಿಸ್ತಾನ ವಿಮೋಚನೆ ಸೇನೆಯ ನಾಯಕತ್ವ ವಹಿಸಿ ಕೊಂಡಿದ್ದ.

ಆತನ ನೇತೃತ್ವದಲ್ಲಿ ಬಲೂಚಿಗಳು ಪಾಕಿಸ್ತಾನದ ವಿರುದ್ಧ ಐದನೇ ದಂಗೆ ನಡೆಸಿದರು. ಪಾಕಿಸ್ತಾನದ ಸೇನೆ ಎಂದಿನಂತೆ ಬಹಳ ಕ್ರೂರವಾಗಿ ಅದಕ್ಕೆ ಪ್ರತಿಕ್ರಿಯಿಸಿ ಅಕ್ಬರ್ ಬುಗ್ತಿಯ ನಿವಾಸದ ಮೇಲೆ ಬಾಂಬ್ ದಾಳಿ ನಡೆಸಿತು. 67 ಮಂದಿ ಮೃತಪಟ್ಟರು. ಆ ನರಮೇಧದಿಂದ ಬಲೂಚಿಗಳು ಇನ್ನಷ್ಟು ರೊಚ್ಚಿಗೆದ್ದು, ಪಾಕಿಸ್ತಾನದ ಸರಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದರು. ಆದರೆ 2006ರಲ್ಲಿ ಅಕ್ಬರ್ ಬುಕ್ತಿ ಮತ್ತು ಅವನ ಡಜನ್‌ಗಟ್ಟಲೆ ಬೆಂಬಲಿಗರನ್ನು ಹತ್ಯೆಗೈಯಲಾಯಿತು.

ಒಂದು ಮೂಲದ ಪ್ರಕಾರ ಕಳೆದ ಒಂದೂವರೆ ದಶಕದಲ್ಲಿ ಪಾಕಿಸ್ತಾನದ ಸೇನೆಯು ಬಲೂಚಿಸ್ತಾನದ 5000ಕ್ಕೂ ಹೆಚ್ಚು ಜನರನ್ನು ಹತ್ಯೆಗೈದಿದೆ ಅಥವಾ ಕಾಣೆಯಾಗುವಂತೆ ಮಾಡಿದೆ.

ನಿಮಗೆ ಆಶ್ಚರ್ಯವಾಗಬಹುದು, ಪಾಕಿಸ್ತಾನದ ಶೇ.46ರಷ್ಟು ಭೂಭಾಗ ಬಲೂಚಿಸ್ತಾನದಲ್ಲಿದೆ. ಆದರೂ ಅದರ ಜನಸಂಖ್ಯೆ ಕೇವಲ 1.5 ಕೋಟಿ. ಆ ಪ್ರದೇಶದಲ್ಲಿ ಚಿನ್ನ, ತಾಮ್ರ, ತೈಲ ಹಾಗೂ ಇನ್ನಿತರ ಅಸಂಖ್ಯಾತ ಖನಿಜಗಳ ದೊಡ್ಡ ದೊಡ್ಡ ನಿಕ್ಷೇಪಗಳಿವೆ. ಚೀನಾ ಕೂಡ ಆ ಸಂಪನ್ಮೂ ಲಗಳನ್ನು ಕಬಳಿಸಿಕೊಳ್ಳಲು ಹೊಂಚುಹಾಕುತ್ತಿದೆ. ಆದರೂ ಬಲೂಚಿಸ್ತಾನದ ಜನರು ಅತ್ಯಂತ ಕಡುಬಡತನದಲ್ಲಿ ಬೇಯುತ್ತಿದ್ದಾರೆ.

ಪಾಕಿಸ್ತಾನದ ಸರಕಾರ ಮತ್ತು ಸೇನೆ ಬಲೂಚಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿವೆ. ಆದ್ದ ರಿಂದಲೇ ಬಲೂಚಿಗಳು ಗ್ವದಾರ್ ಬಂದರೂ ಸೇರಿದಂತೆ ಚೀನಾದ ನೆರವಿನ ಎಲ್ಲಾ ಯೋಜನೆ ಗಳನ್ನು ಇನ್ನಿಲ್ಲದಂತೆ ವಿರೋಧಿಸುತ್ತಿದ್ದಾರೆ. ಆದರೆ ಅವರು ಎಷ್ಟೇ ಪ್ರತಿರೋಧ ತೋರಿದರೂ ಪಾಕಿಸ್ತಾನ ಅದಕ್ಕಿಂತ ತೀವ್ರವಾಗಿ ಅದನ್ನು ಹತ್ತಿಕ್ಕುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಬಲೂಚಿಸ್ತಾನದ ಜನರು ರೈಲನ್ನು ಹೈಜಾಕ್ ಮಾಡಿದ್ದಾರೆ ಅಂದರೆ ಜಗತ್ತು ಅವರ ದುಮ್ಮಾನಗಳನ್ನು ಆಲಿಸಬೇಕು ಎಂಬುದೇ ಅದರರ್ಥ. ಆದರೆ ಬಲೂಚಿಸ್ತಾನದ ವಿಷಯ ದಲ್ಲಿ ಹಾಗಾಗುತ್ತಿಲ್ಲ. ಅದೊಂದು ನತದೃಷ್ಟ ಪ್ರದೇಶ. ಪಾಕಿಸ್ತಾನದ ದುಷ್ಟ ಸರ್ಕಾರ ಮತ್ತು ಸೇನಾ ಪಡೆಗಳು ಬಲೂಚಿಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಾ, ಅಲ್ಲಿನ ಜನರನ್ನು ಗುಲಾಮ ರಂತೆ ಶೋಷಣೆಗೆ ಒಳಪಡಿಸುತ್ತಾ ದರ್ಪ ಮೆರೆಯುತ್ತಿದ್ದಾರೆ.

ಆದರೆ, ಬಲೂಚಿಗಳು ಅದಕ್ಕೆ ಪ್ರತಿರೋಧ ತೋರಿದಾಗ ಭಾರತವನ್ನು ದೂರುತ್ತಾರೆ. ಪಾಕಿಸ್ತಾನದ ಸುಳ್ಳುಗಳ ಬಗ್ಗೆ ಬಲೂಚಿಗಳಿಗೆ ಚೆನ್ನಾಗಿ ಅರಿವಿದೆ. ಆದ್ದರಿಂದಲೇ ಪಾಕಿಸ್ತಾನಿ ಸೇನೆಯ ಬಲೂಚ್ ರೆಜಿಮೆಂಟ್‌ನ ಯೋಧರು ಒಂದಲ್ಲಾ ಒಂದು ದಿನ ತನ್ನ ವಿರುದ್ಧ ದಂಗೆಯೇಳುತ್ತಾರೆ ಎಂಬ ಭೀತಿ ಪಾಕಿಸ್ತಾನದ ಪ್ರಧಾನ ಮಂತ್ರಿಗೆ ಇದೆ. ಆ ಭೀತಿಯಿಂದಲೇ ಅವರು ಇತ್ತೀಚೆಗೆ ಬಲೂಚಿಸ್ತಾನಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಸಂಕಷ್ಟ ಆಲಿಸುವ ನಾಟಕವಾಡಿದ್ದರು.

ಇಂತಹ ಪ್ರಹಸನಗಳು ಈ ಹಿಂದೆಯೂ ನಡೆದಿದೆ. ದಿನಾ ಬೆಳಿಗ್ಗೆ ಎದ್ದು ಬೆನ್ನಿಗೆ ಬಾರುಕೋಲಿನಿಂದ ಬಾರಿಸಿ, ಬಳಿಕ ಕಣ್ಣೀರು ಒರೆಸುವ ಡ್ರಾಮಾ ಮಾಡಿದರೆ ಯಾರು ತಾನೇ ನಂಬುತ್ತಾರೆ? ಪಾಕಿಸ್ತಾನಕ್ಕೆ ನಾನು ಹೇಳುವುದಿಷ್ಟೆ: ಭಾರತದ ಕಡೆಗೆ ಬೆರಳು ತೋರಿಸುವುದರ ಬದಲು ನಿಮ್ಮ ಪರಿಸ್ಥಿತಿಯನ್ನು ಇನ್ನೊಮ್ಮೆ ಸರಿಯಾಗಿ ಅವಲೋಕನ ಮಾಡಿಕೊಳ್ಳಿ.

ನೀವೆಲ್ಲಿದ್ದೀರಿ ಮತ್ತು ನಾವೆಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಜಗತ್ತಿನಲ್ಲಿ ಪಾಕಿಸ್ತಾನದ ಬಗ್ಗೆ ಯಾವ ಅಭಿಪ್ರಾಯವಿದೆ ಮತ್ತು ಭಾರತದ ಬಗ್ಗೆ ಯಾವ ಅಭಿಪ್ರಾಯವಿದೆ ಎಂಬುದು ನಿಮಗೆ ಗೊತ್ತಿಲ್ಲವೇ? ಇನ್ನೂ ಎಷ್ಟು ವರ್ಷ ನೀವು ಬಲೂಚಿಸ್ತಾನದಲ್ಲಿ ರಕ್ತದ ಹೊಳೆ ಹೊರಿಸುತ್ತೀರಿ? ಬಲೂಚಿಗಳು ಬಹಳ ಶೂರರು. ಒಂದಲ್ಲಾ ಒಂದು ದಿನ ಅವರು ನಿಮ್ಮ ದಬ್ಬಾಳಿಕೆಯನ್ನು ಕೊನೆ ಗೊಳಿಸುತ್ತಾರೆ, ಹುಷಾರ್.