ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಗಿಡವೊಂದು ಸುಪುಷ್ಟವಾಗಿ ಬೆಳೆಯಲು ಬೇರು ಗಟ್ಟಿಯಾಗಬೇಕು

ಮಾವೋನ ಈ ಮಾತಿಗೆ ನಸುನಕ್ಕ ತಾಯಿ, “ಅಯ್ಯೋ ದಡ್ಡಾ, ಗಿಡಗಳ ಜೀವ ಇರುವುದು ಅವುಗಳ ಹೂವು ಅಥವಾ ಎಲೆಗಳಲ್ಲಿ ಅಲ್ಲ; ಬದಲಿಗೆ ಬುಡದಲ್ಲಿರುವ ಬೇರುಗಳಲ್ಲಿ. ನೀನು ಹೂವನ್ನು ಎಷ್ಟೇ ಪ್ರೀತಿಯಿಂದ ಮುದ್ದಿಸಿ, ಎಲೆಗಳ ಮೇಲಿನ ಧೂಳನ್ನು ತೆಗೆದರೂ, ಗಿಡಗಳ ಬೇರಿನ ಆರೈಕೆ ಮಾಡದಿದ್ದರೆ ಏನೂ ಪ್ರಯೋಜನವಿಲ್ಲ.

ಒಂದೊಳ್ಳೆ ಮಾತು

ಚೀನಿ ನಾಯಕ ‘ಮಾವೋ ತ್ಸೇ ತುಂಗ್’ ಅವರಿನ್ನೂ ಚಿಕ್ಕ ಹುಡುಗನಾಗಿದ್ದಾಗ, ಅವರ ತಾಯಿ ಮನೆ ಯ ಮುಂದೆ ಸುಂದರವಾದ ಹೂದೋಟವೊಂದನ್ನು ರೂಪಿಸಿದ್ದರು. ಅದರಲ್ಲಿ ಅತ್ಯಂತ ಸುಂದರ ವಾದ, ವಿವಿಧ ಪ್ರಭೇದದ ಬಣ್ಣದ ಹೂವುಗಳು ಅರಳುತ್ತಿದ್ದವು. ಅದರಲ್ಲೂ ನಿರ್ದಿಷ್ಟವಾಗಿ ಗುಲಾಬಿ ಹೂವುಗಳು ತುಂಬಾ ಆಕರ್ಷಣೀಯವಾಗಿ ಕಾಣುತ್ತಿದ್ದವು. ಅವನ್ನು ನೋಡಲು ದೂರ ದೂರದಿಂದ ಜನರು ಬಂದುಹೋಗುತ್ತಿದ್ದರು.

ಮಾವೋ ಅವರ ತಾಯಿಗೆ ತಮ್ಮ ವಯಸ್ಸಿನ ಬಗ್ಗೆಯಾಗಲೀ, ತಮಗಿರುವ ಕಾಯಿಲೆಯ ಬಗ್ಗೆಯಾ ಗಲೀ ಚಿಂತೆಯಿರಲಿಲ್ಲ; ಆ ಚಿಂತೆಯೆಲ್ಲಾ ಇದ್ದುದು ತಾವು ನೆಟ್ಟ ಹೂವಿನ ಗಿಡಗಳ ಬಗ್ಗೆಯೇ!

ಇದನ್ನು ಗಮನಿಸಿಕೊಂಡೇ ಬಂದಿದ್ದ ಮಾವೋ, ತಾಯಿಯನ್ನು ಸಮಾಧಾನಪಡಿಸುತ್ತಾ, “ಅಮ್ಮಾ, ನೀನು ಹೂವಿನ ಗಿಡಗಳ ಬಗ್ಗೆ ಚಿಂತಿಸಬೇಡ, ಅವನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಆಶ್ವಾಸನೆ ನೀಡಿದ. ಹಾಗೆಯೇ ತೋಟವನ್ನು ನೋಡಿಕೊಳ್ಳತೊಡಗಿದ. ಪ್ರತಿದಿನ ಬೆಳಗಿ ನಿಂದ ಸಂಜೆಯವರೆಗೆ ತೋಟದಲ್ಲೇ ಓಡಾಡುತ್ತಿದ್ದ. ದಿನಗಳು ಹೀಗೆಯೇ ಸಾಗುತ್ತಿದ್ದವು.

ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಕೆವಟನ ಭಕ್ತಿ ಮತ್ತು ಪಾದಪೂಜೆ

ಸ್ವಲ್ಪ ದಿನಗಳ ನಂತರ ಅವನ ತಾಯಿ ಚೇತರಿಸಿಕೊಂಡು, ತಾನು ಬೆಳೆಸಿದ ತೋಟವನ್ನು ನೋಡ ಲೆಂದು ಬಂದಳು. ಅಲ್ಲಿನ ದೃಶ್ಯವನ್ನು ನೋಡುತ್ತಿದ್ದಂತೆ ಅವಳಿಗೆ ತುಂಬಾ ದುಃಖವಾಯಿತು. ಕಾರಣ, ಅಲ್ಲಿದ್ದ ಗಿಡಗಳೆಲ್ಲವೂ ಹಾಳಾಗಿ ಹೋಗಿದ್ದವು; ಅವುಗಳ ಎಲೆ-ಹೂವುಗಳೆಲ್ಲಾ ಒಣಗಿ ಬಿಟ್ಟಿದ್ದವು. ಇದನ್ನು ಕಂಡು ಅವಳು ಬಹಳ ಬೇಸರದಿಂದಲೇ, “ನೀನು ಇಡೀ ದಿನ ತೋಟದಲ್ಲಿಯೇ ಇರುತ್ತಿದ್ದೆ. ಇದೇ ಏನು ನೀನು ಗಿಡಗಳನ್ನು ನೋಡಿಕೊಂಡಿದ್ದು? ಒಣಗಿ ಹಾಳಾಗಿ ಹೋಗಿರುವ ಅವೆಲ್ಲವೂ ಇನ್ನೇನು ಸಾಯುವ ಸ್ಥಿತಿಯಲ್ಲಿವೆ.

ಈ ಗಿಡಗಳನ್ನೆಲ್ಲಾ ನಾನು ಎಷ್ಟು ಕಷ್ಟಪಟ್ಟು ಬೆಳೆಸಿದ್ದೆ ಎಂಬುದು ನಿನಗೆ ಗೊತ್ತೇ?" ಎಂದು ಮಗನನ್ನು ಕೇಳಿ ತರಾಟೆಗೆ ತೆಗೆದುಕೊಂಡಳು. ಆಗ ಅಳತೊಡಗಿದ ಮಗ ಮಾವೋ, “ಅಮ್ಮಾ ನಾನು ತುಂಬಾ ಶ್ರಮಪಟ್ಟು ಎಲ್ಲ ಗಿಡಗಳನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದೆ. ಆದರೂ ಈ ಗಿಡಗಳ ಸ್ಥಿತಿ ಈ ರೀತಿ ಆಗಿದೆ.

ನಾನು ಗಿಡದ ಹೂವುಗಳಿಗೆಲ್ಲಾ ಪ್ರತಿದಿನವೂ ಪ್ರೀತಿಯಿಂದ ಮುತ್ತಿಟ್ಟೇ ಮಾತನಾಡಿಸುತ್ತಿದ್ದೆ. ಪ್ರತಿ ಎಲೆಯ ಮೇಲಿನ ಧೂಳನ್ನು ಒರೆಸಿ ಸ್ವಚ್ಛವಾಗಿಸುತ್ತಿದ್ದೆ. ಆದರೂ ಹೀಗಾಗಿದ್ದೇಕೆ ಅಂತ ನನಗೂ ಗೊತ್ತಾಗುತ್ತಿಲ್ಲ. ಇದರಿಂದ ನನಗೂ ಬಹಳ ಬೇಸರವಾಗುತ್ತಿದೆ ಅಮ್ಮಾ" ಎಂದ ಗದ್ಗದಿತನಾಗಿ.

ಮಾವೋನ ಈ ಮಾತಿಗೆ ನಸುನಕ್ಕ ತಾಯಿ, “ಅಯ್ಯೋ ದಡ್ಡಾ, ಗಿಡಗಳ ಜೀವ ಇರುವುದು ಅವುಗಳ ಹೂವು ಅಥವಾ ಎಲೆಗಳಲ್ಲಿ ಅಲ್ಲ; ಬದಲಿಗೆ ಬುಡದಲ್ಲಿರುವ ಬೇರುಗಳಲ್ಲಿ. ನೀನು ಹೂವನ್ನು ಎಷ್ಟೇ ಪ್ರೀತಿಯಿಂದ ಮುದ್ದಿಸಿ, ಎಲೆಗಳ ಮೇಲಿನ ಧೂಳನ್ನು ತೆಗೆದರೂ, ಗಿಡಗಳ ಬೇರಿನ ಆರೈಕೆ ಮಾಡದಿದ್ದರೆ ಏನೂ ಪ್ರಯೋಜನವಿಲ್ಲ.

ಬೇರುಗಳಿಗೆ ಆಹಾರ ಮತ್ತು ನೀರನ್ನು ಕೊಟ್ಟಾಗ ಮಾತ್ರವೇ ಅವು ಬದುಕುಳಿಯುವುದು, ಹೂವು ಮತ್ತು ಎಲೆಗಳು ನಳನಳಿಸುವುದು" ಎಂದು ಹೇಳಿದಳು. ‘ಇಷ್ಟು ಸರಳವಾದ ವಿಚಾರ ತನಗೆ ಹೊಳೆದೇ ಇಲ್ಲವಲ್ಲಾ?’ ಎಂದುಕೊಳ್ಳುತ್ತಾ ಮಾವೋ ನಾಚಿಕೊಂಡ.

ಗಿಡಗಳ ಜೀವವಿರುವುದು ಯಾರಿಗೂ ಕಾಣಿಸದೆ ನೆಲದೊಳಗೆ ಅವಿತಿರುವ ಅವುಗಳ ಬೇರುಗಳಲ್ಲಿ. ಯಾರು ಬೇರುಗಳನ್ನು ಪೋಷಿಸುವರೋ ಅವರು ಹೂವು ಮತ್ತು ಎಲೆಗಳ ಬಗ್ಗೆ ಅಷ್ಟೇನೂ ಕಾಳಜಿ ವಹಿಸಬೇಕಾಗುವುದಿಲ್ಲ. ಈ ಗ್ರಹಿಕೆಯನ್ನು ನಮ್ಮ ಬದುಕಿಗೂ ಅನ್ವಯಿಸಿಕೊಳ್ಳಬೇಕು.

ನಮ್ಮ ಮಕ್ಕಳನ್ನು ನೋಡಿಕೊಳ್ಳುವಾಗಲೂ ಅವರಿಗೆ ಮೊದಲು ಜೀವನಕಲೆಯನ್ನು ಕಲಿಸಿ, ಅವರನ್ನು ಬೇರಿನಿಂದ ಗಟ್ಟಿಯಾಗಿಸಬೇಕು. ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕೊಟ್ಟು ಚೆನ್ನಾಗಿ ಬದುಕುವ ದಾರಿಯನ್ನು ತೋರಿಸಿಕೊಡಬೇಕು.

ನಾವು ಮಾಡುವ ಮುದ್ದು, ನೀಡುವ ಉಡುಗೊರೆಗಳು ಅವರಲ್ಲಿ ಒಂದು ಹಂತಕ್ಕೆ ಪ್ರೀತಿಯ ಸೆಲೆ ಯನ್ನು ಚಿಮ್ಮಿಸಿದರೂ, ಅವು ಅವರನ್ನು ಬದುಕಿನಲ್ಲಿ ಬೆಳೆಸುವುದಿಲ್ಲ. ಮಕ್ಕಳಿಗೆ ನಾವು ಕಲಿಸುವ ಶಿಸ್ತು ಮತ್ತು ಮನೆಗೆಲಸ, ನೀಡುವ ಒಳ್ಳೆಯ ವಿದ್ಯಾಭ್ಯಾಸ ಮತ್ತು ಸಂಸ್ಕಾರ, ಉಣಿಸುವ ಪೌಷ್ಟಿಕ ಆಹಾರ ಮುಂತಾದವು ಅವರನ್ನು ನಾಳಿನ ಉತ್ತಮ ಮತ್ತು ಜವಾಬ್ದಾರಿಯುತ ಪ್ರಜೆಗಳನ್ನಾಗಿಸು ತ್ತವೆ ಎಂಬುದನ್ನು ಮರೆಯದಿರೋಣ...

ರೂಪಾ ಗುರುರಾಜ್

View all posts by this author