ಮನಿ ಮೈಂಡೆಡ್
ಜಾಗತಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ರಾಂತಿಯ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿದ್ದ ಎನ್‌ವಿಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆನ್ಸನ್ ಹುವಾಂಗ್, ಈಗ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಬಿಕ್ಕಟ್ಟಿಗೆ ಸಿಲುಕಿದ್ದಾರೆ. 1993ರಲ್ಲಿ ಎನ್‌ವಿಡಿಯಾ ಸಂಸ್ಥೆಯನ್ನು ಹುಟ್ಟುಹಾಕಿ, ಅದನ್ನು ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿಗೆ ತಂದು ನಿಲ್ಲಿಸಿದ 63 ವರ್ಷದ ಹುವಾಂಗ್, ಈಗ ಎರಡು ಪ್ರತ್ಯೇಕ ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಸಿಲುಕಿ ತಮ್ಮ ಕುರ್ಚಿಯನ್ನೇ ಕಳೆದುಕೊಂಡಿದ್ದಾರೆ. ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಒಂದೆಡೆ ಕಂಪನಿಯೊಳಗಿನ ಹಿರಿಯ ಅಧಿಕಾರಿಯೊಂದಿಗಿನ ಸಂಬಂಧವಾದರೆ, ಮತ್ತೊಂದೆಡೆ ಚೀನಾದ ಬೇಹುಗಾರ್ತಿ ಎನ್ನಲಾದ, ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗಿನ ಸಂಬಂಧವು ಇಡೀ ಸಿಲಿಕಾನ್ ವ್ಯಾಲಿ ಮತ್ತು ಅಮೆರಿಕದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಅಂತಾರಾಷ್ಟ್ರೀಯ ರಾಜಕೀಯ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಮಾಹಿತಿ ಮತ್ತು ಪ್ರಭಾವವೇ ಅತಿ ದೊಡ್ಡ ಶಕ್ತಿ. ಈ ಶಕ್ತಿಯನ್ನು ಪಡೆಯಲು ಗುಪ್ತಚರ ಸಂಸ್ಥೆಗಳು ಬಳಸುವ ಅತ್ಯಂತ ಹಳೆಯ, ಆದರೆ ಇಂದಿಗೂ ಅಷ್ಟೇ ಪರಿಣಾಮಕಾರಿಯಾಗಿರುವ ಅಸ್ತ್ರವೆಂದರೆ ಅದು ಹನಿಟ್ರ್ಯಾಪ್.
ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಮತ್ತು ಆಲಿಸ್ ಹುವಾಂಗ್ ನಡುವಿನ ಇತ್ತೀಚಿನ ವಿವಾದವು, ಚೀನಾ ಹೇಗೆ ಪ್ರಭಾವಿ ವ್ಯಕ್ತಿಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತದೆ ಎಂಬ ಚರ್ಚೆ ಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಜೆನ್ಸನ್ ಹುವಾಂಗ್ ಅವರ ವಿರುದ್ಧ ಕೇಳಿ ಬಂದಿರುವ ಮೊದಲ ಗಂಭೀರ ಆರೋಪವೆಂದರೆ, ಎನ್‌ವಿಡಿಯಾ ಕಂಪನಿಯ ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಹಿರಿಯ ಅಧಿಕಾರಿಯೊಬ್ಬರೊಂದಿಗೆ ಹೊಂದಿದ್ದ ಅಕ್ರಮ ಸಂಬಂಧ.
ಇದನ್ನೂ ಓದಿ: Keshava Prasad B Column: ಗರೀಬಿ ಹಟಾವೊ, ಪ್ರಧಾನಿ ಮೋದಿ ತಂತ್ರಜ್ಞಾನ ಹಾದಿ !
2008ರಿಂದ ಎನ್‌ವಿಡಿಯಾದಲ್ಲಿ ಕೆಲಸ ಮಾಡುತ್ತಿರುವ, ಪ್ರಸ್ತುತ ಕಂಪನಿಯ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷೆಯಾಗಿರುವ ಕಿಂಬರ್ಲಿ ಪಾವೆಲ್ ಅವರೊಂದಿಗೆ ಹುವಾಂಗ್ ಆತ್ಮೀಯ ಸಂಬಂಧ ಹೊಂದಿದ್ದರು ಎಂಬುದು ಬಹಿರಂಗವಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನಡೆದ ಎನ್‌ವಿಡಿಯಾದ ವಾರ್ಷಿಕ ಡೆವಲಪರ್ ಸಮ್ಮೇಳನದ ಸಂದರ್ಭದಲ್ಲಿ, ಸಮೀಪದ ಹೋಟೆಲ್ ಒಂದರಲ್ಲಿ ಹುವಾಂಗ್ ಮತ್ತು ಪಾವೆಲ್ ಆತ್ಮೀಯವಾಗಿ ವರ್ತಿಸುತ್ತಿದ್ದ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದನ್ನು ಗಮನಿಸಿದ ಹುವಾಂಗ್ ಅವರ ಭದ್ರತಾ ಸಿಬ್ಬಂದಿ ತಕ್ಷಣವೇ ಆ ವ್ಯಕ್ತಿಯನ್ನು ತಡೆದು, ಈ ವಿಷಯವನ್ನು ಬಹಿರಂಗಪಡಿಸದಂತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ವಿವಾಹಿತರಾಗಿರುವ ಹುವಾಂಗ್ ಮತ್ತು ಪಾವೆಲ್ ಅವರ ಈ ನಡೆಯು ಎನ್‌ವಿಡಿಯಾದ ಆಂತರಿಕ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿಂದೆ ಇಂಟೆಲ್ ಸಿಇಒ ಬ್ರಿಯಾನ್ ಕ್ರಜಾನಿಚ್ ಮತ್ತು ಮೆಕ್‌ಡೊನಾಲ್ಡ್ಸ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಕೂಡ ಇದೇ ರೀತಿಯ ಕಾರಣಗಳಿಗೆ ತಮ್ಮ ಹುದ್ದೆ ಕಳೆದುಕೊಂಡಿದ್ದರು. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಎನ್ ವಿಡಿಯಾ ಷೇರುಗಳು ಸುಮಾರು ಶೇ. 8ರಷ್ಟು ಕುಸಿದಿತ್ತು.
ಕಂಪನಿಯೊಳಗಿನ ಸಂಬಂಧಕ್ಕಿಂತಲೂ ಅಮೆರಿಕದ ಭದ್ರತಾ ಸಂಸ್ಥೆಗಳನ್ನು ನಿದ್ದೆಗೆಡಿಸಿರುವುದು ಜೆನ್ಸನ್ ಹುವಾಂಗ್ ಮತ್ತು ಚೀನಾದ ಉದ್ಯಮಿ ಆಲಿಸ್ ಹುವಾಂಗ್ ನಡುವಿನ ಸಂಬಂಧ. ಅಮೆರಿಕದ ಗುಪ್ತಚರ ಸಂಸ್ಥೆಗಳ ಪ್ರಕಾರ, ಆಲಿಸ್ ಹುವಾಂಗ್ ಚೀನಾದ ಪ್ರಮುಖ ಗುಪ್ತಚರ ಸಂಸ್ಥೆಯಾದ ‘ಮಿನಿಷ್ಟ್ರಿ ಆಫ್ ಸ್ಟೇಟ್ ಸೆಕ್ಯುರಿಟಿ’ (ಗೃಹ ಸಚಿವಾಲಯ) ಪರವಾಗಿ ಕೆಲಸ ಮಾಡುವ ಬೇಹುಗಾರ್ತಿ.
ಸ್ವತಃ ಜೆನ್ಸನ್ ಹುವಾಂಗ್ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ, ನಾನು ನನ್ನ ಪತ್ನಿಗೆ ದ್ರೋಹ ಬಗೆದಿದ್ದೇನೆ, ನನ್ನ ನಡೆಗೆ ಯಾವುದೇ ಸಮರ್ಥನೆಯಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಈ ಸಂಬಂಧ ಕೇವಲ ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿರಲಿಲ್ಲ ಎಂಬುದು ಅಮೆರಿಕದ ಆತಂಕಕ್ಕೆ ಕಾರಣವಾಗಿದೆ.
ಜೆನ್ಸನ್ ಹುವಾಂಗ್ ಅವರೊಂದಿಗಿನ ಆತ್ಮೀಯತೆಯ ಫೋಟೋಗಳನ್ನು ವೀಚ್ಯಾಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಆಲಿಸ್, ತನಗೆ ಎನ್‌ವಿಡಿಯಾ ಮುಖ್ಯಸ್ಥರ ನೇರ ಸಂಪರ್ಕವಿದೆ ಎಂದು ಬಿಂಬಿಸಿಕೊಂಡಿದ್ದರು. 2024ರ ಜೂನ್‌ನಲ್ಲಿ ತೈಪೆಯಲ್ಲಿ ನಡೆದ ಭೋಜನಕೂಟವೊಂದರಲ್ಲಿ, ನಾನು ಈಗಲೇ ಜೆನ್ಸನ್ ಅವರನ್ನು ಇಲ್ಲಿಗೆ ಕರೆಸಬ ಎಂದು ಸವಾಲು ಹಾಕಿ ಕೆಲವೇ ಕ್ಷಣಗಳಲ್ಲಿ ಅವರನ್ನು ಅಲ್ಲಿಗೆ ಕರೆಸಿಕೊಂಡಿದ್ದಳು ಎನ್ನಲಾಗಿದೆ. ಈ ಪ್ರಭಾವವನ್ನು ಬಳಸಿಕೊಂಡು ಆಲಿಸ್ ಹುವಾಂಗ್, ಅಮೆರಿಕದ ನಿರ್ಬಂಧಗಳ ನಡುವೆಯೂ ಸುಮಾರು ಅಂದಾಜು 62000 ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಸುಮಾರು 240000 ನಿಷೇಧಿತ ಎನ್‌ವಿಡಿಯಾ ಎಚ್100 ಮತ್ತು ಎಚ್200 ಚಿಪ್‌ಗಳನ್ನು ಚೀನಾಕ್ಕೆ ರವಾನಿಸಲು ನೆರವಾಗಿದ್ದಾಳೆ ಎಂದು ಆರೋಪಿಸಲಾಗಿದೆ.
ಶಾಂಘೈ ಸೆಂಚುರಿ ಲಿಟಾಂಗ್, ಸಿಂಗಾಪುರದ ಮೆಗಾಸ್ಪೀಡ್ ಮತ್ತು ಮಲೇಷ್ಯಾದ ಸ್ಪೀಡ್‌ಮ್ಯಾಟ್ರಿಕ್ಸ್ ನಂತಹ ಕಂಪನಿಗಳ ಜಾಲವನ್ನು ಬಳಸಿಕೊಂಡು ಎನ್‌ವಿಡಿಯಾದ ಪ್ರಿಫರ್ಡ್ ಕ್ಲೌಡ್ ಪಾರ್ಟ್‌ನರ್ ಸ್ಥಾನಮಾನ ಪಡೆದು, ಅಲಿಬಾಬಾ ಮತ್ತು ಟೆನ್ಸೆಂಟ್‌ನಂತಹ ಚೀನೀ ಕಂಪನಿಗಳಿಗೆ ಈ ಚಿಪ್‌ಗಳ ಕಂಪ್ಯೂಟಿಂಗ್ ಶಕ್ತಿಯನ್ನು ಒದಗಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಚೀನಾ ತನ್ನ ಗುಪ್ತಚರ ಕಾರ್ಯಚರಣೆಗಳಿಗೆ ಮಹಿಳೆಯರನ್ನು ಬಳಸಿಕೊಂಡು ಅಮೆರಿಕದ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಬಲೆಗೆ ಬೀಳಿಸಿಕೊಳ್ಳುವುದು ಇದೇ ಮೊದಲಲ್ಲ.
ಆಲಿಸ್ ಹುವಾಂಗ್ ಪ್ರಕರಣಕ್ಕಿಂತ ಸುಮಾರು ಒಂದು ದಶಕದ ಹಿಂದೆ ‘ಫಾಂಗ್ ಫಾಂಗ್’ (ಕ್ರಿಸ್ಟೀನ್ -ಫಾಂಗ್) ಎಂಬ ಚೀನೀ ಮಹಿಳೆ ಇದೇ ರೀತಿಯ ಕಾರ್ಯಾಚರಣೆ ನಡೆಸಿ ಇಡೀ ಅಮೆರಿಕವನ್ನೇ ಬೆಚ್ಚಿಬೀಳಿಸಿದ್ದಳು. 2011ರಲ್ಲಿ ವಿದ್ಯಾರ್ಥಿನಿಯಾಗಿ ಕ್ಯಾಲಿಫೋರ್ನಿಯಾಗೆ ಬಂದಿದ್ದ ಫಾಂಗ್, ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳ ಮೂಲಕ ಅಮೆರಿಕದ ರಾಜಕೀಯ ವಲಯಕ್ಕೆ ಲಗ್ಗೆ ಇಟ್ಟಿದ್ದಳು. ಡೆಮಾಕ್ರಟಿಕ್ ಪಕ್ಷದ ಯುವ ಸಂಸದ ಎರಿಕ್ ಸ್ವಾಲ್‌ವೆಲ್ ಅವರೊಂದಿಗೆ ಸಂಬಂಧ ಹೊಂದಿದ್ದ ಈಕೆ, ಅವರ ಚುನಾವಣಾ ಪ್ರಚಾರಕ್ಕೆ ನಿಧಿ ಸಂಗ್ರಹಿಸುವ ನೆಪದಲ್ಲಿ ಅಕ್ರಮವಾಗಿ ವಿದೇಶಿ ಹಣವನ್ನು ಹರಿಸಿದ್ದಳು ಮತ್ತು ಅವರ ಕಚೇರಿಯಲ್ಲಿ ತನಗೆ ಬೇಕಾದವರನ್ನು ಇಂಟರ್ನ್‌ಗಳಾಗಿ ನೇಮಿಸುವಲ್ಲಿ ಯಶಸ್ವಿಯಾಗಿದ್ದಳು. ನಂತರ ಸ್ವಾಲ್‌ವೆಲ್ ಅಮೆರಿಕದ ಸಂಸತ್ತಿನ ಗುಪ್ತಚರ ಸಮಿತಿಯ ಸದಸ್ಯರಾದರು ಎಂಬುದು ಗಮನಾರ್ಹ.
ಇದಲ್ಲದೆ, ಅಮೆರಿಕದ ಮಧ್ಯಪಶ್ಚಿಮ ಭಾಗದ ಇಬ್ಬರು ಮೇಯರ್‌ಗಳೊಂದಿಗೂ ಫಾಂಗ್ ಸಂಬಂಧ ಹೊಂದಿದ್ದಳು. 2015ರಲ್ಲಿ ಎಫ್ʼಬಿಐ ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ಫಾಂಗ್ ಅಮೆರಿಕದಿಂದ ಪರಾರಿಯಾಗಿ ಚೀನಾಕ್ಕೆ ಮರಳಿದ್ದಳು. ಇತ್ತೀಚೆಗೆ 2026ರ ಆಗಸ್ಟ್‌ನಲ್ಲಿ ಬಿಡುಗಡೆಯಾದ ಎಫ್ʼಬಿಐನ ವರ್ಗೀಕೃತ ದಾಖಲೆಗಳು ಫಾಂಗ್ ಕಾರ್ಯಾಚರಣೆಯ ಆಳವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ.
ಪ್ರಸ್ತುತ ಎನ್‌ವಿಡಿಯಾ ಆಡಳಿತ ಮಂಡಳಿಯು ಈ ಪ್ರಕರಣಗಳ ಕುರಿತು ತನಿಖೆ ನಡೆಸಲು ವಾಚ್‌ಟೆಲ್, ಲಿಪ್ಟನ್, ರೋಸೆನ್ ಕಾಟ್ಜ್ ಎಂಬ ಕಾನೂನು ಸಂಸ್ಥೆಯನ್ನು ನೇಮಿಸಿದೆ. ಅತ್ತ ಅಮೆರಿಕದ ಸಂಸತ್ತಿನ ಮೂರು ಪ್ರಮುಖ ಸಮಿತಿಗಳ ರಿಪಬ್ಲಿಕನ್ ನಾಯಕರು ಜೆನ್ಸನ್ ಹುವಾಂಗ್ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸದ್ಯಕ್ಕೆ ಹುವಾಂಗ್ ಅವರನ್ನು ಸಮರ್ಥಿಸಿ ಕೊಂಡಿದ್ದು, ಆಕೆ ಚೀನಾದ ಏಜೆಂಟ್ ಎಂಬುದು ಹುವಾಂಗ್ ಅವರಿಗೆ ತಿಳಿದಿರಲಿಲ್ಲ, ಅವರೊಬ್ಬ ಗೌರವಾನ್ವಿತ ವ್ಯಕ್ತಿ ಎಂದಿದ್ದಾರೆ. ಆದರೆ, ಜಾಗತಿಕ ಎಐ ಚಿಪ್ ಮಾರುಕಟ್ಟೆಯ ಶೇ.90ರಷ್ಟು ಪಾಲನ್ನು ಹೊಂದಿರುವ ಮತ್ತು ಕಂಪನಿಯಲ್ಲಿ ಶೇ.3.56ರಷ್ಟು ವೈಯಕ್ತಿಕ ಷೇರುಗಳನ್ನು ಹೊಂದಿರುವ ಜೆನ್ಸನ್ ಹುವಾಂಗ್ ಅವರನ್ನು ಎನ್‌ವಿಡಿಯಾದಿಂದ ಬೇರ್ಪಡಿಸಿ ನೋಡುವುದು ಕಷ್ಟ.
ಕಂಪನಿಯಲ್ಲಿ ಅವರಿಗೆ ಸಮರ್ಥ ಉತ್ತರಾಧಿಕಾರಿಯೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಒಂದು ವೇಳೆ ಆಡಳಿತ ಮಂಡಳಿಯು ನೈತಿಕತೆ ಮತ್ತು ಭದ್ರತಾ ಕಾರಣಗಳಿಗಾಗಿ ಹುವಾಂಗ್ ಅವರನ್ನು ಕೆಳಗಿಳಿಸುವ ನಿರ್ಧಾರ ಕೈಗೊಂಡರೆ, ಅದು ಕೇವಲ ಎನ್‌ವಿಡಿಯಾ ಕಂಪನಿಗೆ ಮಾತ್ರವಲ್ಲದೆ, ಇಡೀ ಜಾಗತಿಕ ತಂತ್ರಜ್ಞಾನ ಮತ್ತು ಆರ್ಥಿಕ ವಲಯದಲ್ಲಿ ದೊಡ್ಡ ಮಟ್ಟದ ಅನಿಶ್ಚಿತತೆಗೆ ಕಾರಣ ವಾಗುವುದರಲ್ಲಿ ಸಂದೇಹವಿಲ್ಲ.
ರಾಜಕಾರಣಿಗಳು (ವಿಶೇಷವಾಗಿ ಗುಪ್ತಚರ, ರಕ್ಷಣಾ ಅಥವಾ ವಿದೇಶಾಂಗ ಸಮಿತಿಗಳಲ್ಲಿರುವವರು) ಮತ್ತು ಹುವಾಂಗ್ ಅವರಂಥ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಅತ್ಯಂತ ಸೂಕ್ಷ್ಮ ಮಾಹಿತಿಗಳ ವಾರಸುದಾರ ರಾಗಿರುತ್ತಾರೆ. ವಿವಾಹೇತರ ಅಥವಾ ಅಸ್ಥಿರ ಸಂಬಂಧಗಳು ಶತ್ರು ರಾಷ್ಟ್ರಗಳಿಗೆ ಮತ್ತು ಪ್ರತಿಸ್ಪರ್ಧಿ ಕಂಪನಿಗಳಿಗೆ ಸುಲಭದ ದಾರಿಯಾಗುತ್ತವೆ.
ಭಾವನಾತ್ಮಕ ಮತ್ತು ದೈಹಿಕ ದೌರ್ಬಲ್ಯಕ್ಕೆ ಒಳಗಾದ ವ್ಯಕ್ತಿ, ತನಗರಿವಿಲ್ಲದಂತೆಯೇ ದೇಶದ ಅಥವಾ ಸಂಸ್ಥೆಯ ರಹಸ್ಯಗಳನ್ನು ಬಿಟ್ಟುಕೊಡುವ ಅಪಾಯವಿರುತ್ತದೆ. ವೈಯಕ್ತಿಕ ಜೀವನದಲ್ಲಿ ಪಾರದರ್ಶಕತೆ ಮತ್ತು ನಿಷ್ಠೆ ಇಲ್ಲದಿದ್ದಾಗ, ವ್ಯಕ್ತಿಯು ಸದಾ ಭಯದ ನೆರಳಿನಲ್ಲಿ ಬದುಕಬೇಕಾಗು ತ್ತದೆ. ಫಾಂಗ್ ಫಾಂಗ್ ಪ್ರಕರಣದಲ್ಲಿ ಕಂಡುಬಂದಂತೆ, ಅಕ್ರಮ ಹಣಕಾಸು ವ್ಯವಹಾರಗಳು ಮತ್ತು ದೈಹಿಕ ಸಂಬಂಧಗಳನ್ನು ದಾಳವಾಗಿ ಬಳಸಿಕೊಂಡು ರಾಜಕಾರಣಿಗಳಿಂದ ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವ ತಂತ್ರವನ್ನು ಗುಪ್ತಚರ ಸಂಸ್ಥೆಗಳು ಬಳಸುತ್ತವೆ.
ಏಕಪತ್ನೀ ವ್ರತಸ್ಥನಾದ ವ್ಯಕ್ತಿಗೆ ಇಂತಹ ಯಾವುದೇ ‘ಬ್ಲ್ಯಾಕ್‌ಮೇಲ್’ಗಳಿಗೆ ಮಣಿಯುವ ಅನಿವಾರ್ಯತೆ ಇರುವುದಿಲ್ಲ; ಆತ ನಿರ್ಭೀತಿಯಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ. ಇಂದು ಬೃಹತ್ ಟೆಕ್ ಕಂಪನಿಗಳು ದೇಶಗಳ ಆರ್ಥಿಕತೆಯನ್ನು ನಿರ್ಧರಿಸುವಷ್ಟು ಶಕ್ತಿಶಾಲಿ ಯಾಗಿವೆ. ಸಿಇಒ ಒಬ್ಬರ ವೈಯಕ್ತಿಕ ವಿವಾದವು ಕಂಪನಿಯ ಷೇರು ಮೌಲ್ಯವನ್ನು ಕುಸಿಯುವಂತೆ ಮಾಡಬಹುದು ಮತ್ತು ಬೌದ್ಧಿಕ ಆಸ್ತಿ (Intellectual Property) ಕಳ್ಳತನಕ್ಕೆ ದಾರಿ ಮಾಡಿಕೊಡ ಬಹುದು. ಶಿಸ್ತುಬದ್ಧ ಕೌಟುಂಬಿಕ ಜೀವನವು ಉದ್ಯಮಿಗಳಿಗೆ ಮಾನಸಿಕ ಸ್ಥಿರತೆಯನ್ನು ನೀಡಿ, ದೀರ್ಘಕಾಲೀನ ದೃಷ್ಟಿಕೋನದಿಂದ ಸಂಸ್ಥೆಯನ್ನು ಮುನ್ನಡೆಸಲು ಸಹಾಯ ಮಾಡುತ್ತದೆ.
ಉದಾಹರಣೆಗೆ ಇತ್ತೀಚಿನ ಮಾರುಕಟ್ಟೆ ಅಂದಾಜಿನ ಪ್ರಕಾರ, ಎನ್‌ವಿಡಿಯಾ ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 3.3 ಟ್ರಿಲಿಯನ್‌ನಿಂದ 3.5 ಟ್ರಿಲಿಯನ್ ಆಸುಪಾಸಿನಲ್ಲಿದೆ (ಷೇರು ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಇದು ಬದಲಾಗುತ್ತಿರುತ್ತದೆ). ವಿಶ್ವದ ಸುಮಾರು 190ಕ್ಕೂ ಹೆಚ್ಚು ದೇಶಗಳ ಪೈಕಿ, ಕೇವಲ 5 ರಿಂದ 6 ದೇಶಗಳ (ಅಮೆರಿಕ, ಚೀನಾ, ಜರ್ಮನಿ, ಜಪಾನ್, ಭಾರತ) ವಾರ್ಷಿಕ ಜಿಡಿಪಿ ಮಾತ್ರ ಎನ್‌ವಿಡಿಯಾ ಕಂಪನಿಯ ಮೌಲ್ಯಕ್ಕಿಂತ ಹೆಚ್ಚಾಗಿದೆ.
ಒಂದು ಖಾಸಗಿ ಕಂಪನಿಯು ಎ7 ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾದಂತಹ ದೇಶಗಳ ಆರ್ಥಿಕತೆಗೆ ಸಮನಾಗಿ ಬೆಳೆದು ನಿಂತಿರುವುದು ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಉಳಿದಂತೆ ಎನ್‌ವಿಡಿಯಾ ಜೆನ್ಸನ್ ಹುವಾಂಗ್ ಮೂಲತಃ ತೈವಾನ್ ದೇಶದವರು ಮತ್ತು ಪ್ರಸ್ತುತ ಅಮೆರಿಕದ ಪ್ರಜೆಯಾಗಿದ್ದಾರೆ.
ಸಾಮಾನ್ಯ ವಲಸಿಗ ಕುಟುಂಬದಿಂದ ಬಂದು, ಹೋಟೆಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾ, ಶ್ರಮ, ಬುದ್ಧಿಮತ್ತೆಯಿಂದ ಇಂದು ಜಗತ್ತಿನ ಅತ್ಯಂತ ಶಕ್ತಿಶಾಲಿ ತಂತ್ರಜ್ಞಾನ ಸಾಮ್ರಾಜ್ಯವನ್ನು ಕಟ್ಟಿದ ಅವರ ಜೀವನದ ಹಾದಿ ಅತ್ಯಂತ ಸ್ಪೂರ್ತಿದಾಯಕವಾಗಿದೆ. ಆದರೆ ನೈತಿಕತೆಯ ಪತನ, ದೌರ್ಬಲ್ಯದ ಪರಿಣಾಮ ಏನೆ ಅನಾಹುತವಾಗುತ್ತದೆ ನೋಡಿ. ಭಾರತೀಯ ಸಂಸ್ಕೃತಿಯಲ್ಲಿ ರಾಮನನ್ನು ಏಕಪತ್ನೀ ವ್ರತಸ್ಥ ಎಂದು ಕೊಂಡಾಡುವುದರ ಹಿಂದೆ ಕೇವಲ ಧಾರ್ಮಿಕ ನಂಬಿಕೆಯಿಲ್ಲ, ಬದಲಾಗಿ ಅದೊಂದು ಶ್ರೇಷ್ಠ ಆಡಳಿತಾತ್ಮಕ ಮತ್ತು ನೈತಿಕ ಮೌಲ್ಯವಾಗಿದೆ.
ಅಧಿಕಾರ ಮತ್ತು ಸಂಪತ್ತು ಹೆಚ್ಚಾದಂತೆ ಆಮಿಷಗಳೂ ಹೆಚ್ಚಾಗುತ್ತವೆ. ಆಲಿಸ್ ಹುವಾಂಗ್, ಫಾಂಗ್ ಫಾಂಗ್‌ರಂತಹ ನೂರಾರು ಮುಖವಾಡಗಳು ಅಧಿಕಾರದ ಸುತ್ತ ಗಿರಕಿ ಹೊಡೆಯುತ್ತಲೇ ಇರುತ್ತವೆ. ಇಂತಹ ಸುಳಿಗೆ ಸಿಲುಕದೆ ದೇಶದ ಹಿತಾಸಕ್ತಿ ಮತ್ತು ಸಂಸ್ಥೆಯ ಗೌರವವನ್ನು ಕಾಪಾಡಿಕೊಳ್ಳಲು, ನಾಯಕರು ಮತ್ತು ಉದ್ಯಮಿಗಳಿಗೆ ಸ್ವಯಂ ನಿಯಂತ್ರಣ ಹಾಗೂ ಕೌಟುಂಬಿಕ ನಿಷ್ಠೆಯೇ ಅತ್ಯಂತ ದೊಡ್ಡ ರಕ್ಷಾಕವಚವಾಗಿದೆ.