ಅಭಿಮತ
ಡಾ.ಜಗದೀಶ್ ಮಾನೆ, ಧಾರವಾಡ
ಭಾರತದ ಅಭಿವೃದ್ಧಿಯ ಪಯಣವು ಇಂದು ಕೇವಲ ಕನಸಿನ ಹಂತದಲ್ಲಿಲ್ಲ; ಅದನ್ನು ಜಾಗತಿಕ ಶಕ್ತಿಯಾಗಿ ರೂಪಿಸುವ ಮಹತ್ವದ ಘಟ್ಟದಲ್ಲಿದೆ. ವಿಶ್ವದ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿ ರುವ ಭಾರತಕ್ಕೆ ತನ್ನ ಜನಸಂಖ್ಯೆಯನ್ನೇ ಅಭಿವೃದ್ಧಿಯ ಮಹಾಶಕ್ತಿಯನ್ನಾಗಿ ಪರಿವರ್ತಿಸುವ ಅಪೂರ್ವ ಅವಕಾಶವಿದೆ. ಯುವಕರ ಕೈಗಳಿಗೆ ಉದ್ಯೋಗ, ರೈತರ ಉತ್ಪನ್ನಗಳಿಗೆ ಮೌಲ್ಯ, ಉದ್ಯಮಗಳಿಗೆ ಉತ್ತೇಜನ, ತಂತ್ರಜ್ಞಾನಕ್ಕೆ ವೇಗ ಮತ್ತು ದೇಶದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ದೊರೆತಾಗ ಮಾತ್ರ ಅಭಿವೃದ್ಧಿಯ ನಿಜವಾದ ಅರ್ಥ ಸಾಕಾರವಾಗುತ್ತದೆ.
ಈ ಹಿನ್ನೆಲೆಯಲ್ಲಿ ಇತ್ತೀಚಿನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಭವಿಷ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಕ್ಷೇತ್ರಗಳ ಕುರಿತು ಗಮನ ಸೆಳೆದಿದ್ದಾರೆ. ಅವುಗಳಲ್ಲಿ ಉತ್ಪಾದನಾ ಕ್ಷೇತ್ರ, ಕೃಷಿ ಮತ್ತು ಆಹಾರ ಸಂಸ್ಕರಣೆ, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ, ಮೂಲಸೌಕರ್ಯ, ರಕ್ಷಣಾ ಸ್ವಾವಲಂಬನೆ, ಹಸಿರು ಮತ್ತು ನೀಲಿ ಆರ್ಥಿಕತೆ ಹಾಗೂ ಸಾಂಸ್ಕೃತಿಕ ರಾಜತಾಂತ್ರಿಕತೆ ಪ್ರಮುಖವಾಗಿವೆ.
ಉತ್ಪಾದನಾ ಕ್ಷೇತ್ರ: ಉದ್ಯೋಗ ಸೃಷ್ಟಿಯ ದೊಡ್ಡ ಶಕ್ತಿ. ಭಾರತ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಯುವಕ ರನ್ನು ಹೊಂದಿರುವ ರಾಷ್ಟ್ರ. ಈ ಯುವಶಕ್ತಿಯನ್ನು ದೇಶದ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸಬೇಕಾದರೆ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಭಾರತದಲ್ಲಿ ಉತ್ಪಾದನೆ ಮತ್ತು ಕಾರ್ಖಾನೆಗಳ ಸ್ಥಾಪನೆ ಹೆಚ್ಚಾದಂತೆ ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ. ಕಾರ್ಖಾನೆಗಳು ಸ್ಪರ್ಧಾತ್ಮಕವಾಗಿದ್ದರೆ ಉತ್ಪಾದನೆ ಹೆಚ್ಚಾಗುತ್ತದೆ. ಉತ್ಪಾದನೆ ಉತ್ತಮ ಗುಣಮಟ್ಟದ್ದಾಗಿದ್ದು, ಗ್ರಾಹಕ ಸ್ನೇಹಿಯಾಗಿದ್ದರೆ ಅದರ ಮಾರಾಟವೂ ಸಹಜವಾಗಿ ಹೆಚ್ಚಾಗುತ್ತದೆ.
ಮಾರಾಟ ಹೆಚ್ಚಾದಂತೆ ದೇಶೀಯ ಮಾರುಕಟ್ಟೆಯ ಜೊತೆಗೆ ರಫ್ತು ಪ್ರಮಾಣವೂ ಹೆಚ್ಚಾಗುತ್ತದೆ. ರಫ್ತು ಹೆಚ್ಚಾದರೆ ವಿದೇಶಿ ವಿನಿಮಯ ಗಳಿಕೆ ಹೆಚ್ಚುವುದರ ಜೊತೆಗೆ ವ್ಯಾಪಾರ ಕೊರತೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಿಂದ ದೇಶದ ಆರ್ಥಿಕತೆಯೂ ಮತ್ತಷ್ಟು ಬಲಗೊಳ್ಳುತ್ತದೆ. ಅದೇ ರೀತಿ ನಾವು ಕೂಡ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಬೇಕಾಗಿದೆ.
ಇದನ್ನೂ ಓದಿ: Dr Jagadeesh Maane Column: ಸಂಕಲ್ಪಕ್ಕೆ ರೆಕ್ಕೆ ಬಂದಾಗ ವಿಶ್ವದಾಖಲೆ ಹುಟ್ಟುತ್ತದೆ!
ಸಾಧ್ಯವಾದಷ್ಟು ಸ್ಥಳೀಯ ಸಂಪನ್ಮೂಲಗಳು, ಸ್ಥಳೀಯ ಉತ್ಪನ್ನಗಳು ಮತ್ತು ಸ್ಥಳೀಯ ಕೈಗಾರಿಕೆ ಗಳಿಗೆ ಉತ್ತೇಜನ ನೀಡಿದರೆ ಆಮದುಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದು ದೇಶೀಯ ಉತ್ಪಾದನೆ, ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನ ನೀಡುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಉತ್ಪಾದನಾ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ‘ಉತ್ಪಾದಿಸುವ ಭಾರತ’ ಮಾತ್ರವಲ್ಲ, ‘ವಿಶ್ವಕ್ಕೆ ಉತ್ಪಾದಿಸುವ ಭಾರತ’ ಎಂಬ ಗುರಿಯತ್ತ ಸಾಗಬೇಕಾಗಿದೆ.
ಕೃಷಿ ಮತ್ತು ಆಹಾರ ಸಂಸ್ಕರಣ ಕ್ಷೇತ್ರ; ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ದೊಡ್ಡ ಪ್ರಮಾಣದ ಜನಸಂಖ್ಯೆ ಕೃಷಿ ಮತ್ತು ಕೃಷಿಯಾಧಾರಿತ ಉದ್ಯೋಗಗಳ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಯುವ ಮತ್ತು ಮಹಿಳಾ ಶಕ್ತಿಯ ಪ್ರಮಾಣ ಹೆಚ್ಚಿನದಾಗಿದೆ. ಆದ್ದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ಎಂದರೆ ಕೇವಲ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು ಮಾತ್ರವಲ್ಲ; ಕೃಷಿ ಉತ್ಪನ್ನಗಳ ಗುಣಮಟ್ಟ, ಸಂಸ್ಕರಣೆ, ಸಂಗ್ರಹಣೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಕೂಡ ಬಲಪಡಿಸುವುದಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಆಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಕೆಲವು ಕೃಷಿ ಉತ್ಪನ್ನಗಳು ವಿದೇಶಿ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಕಾರಣ ತಿರಸ್ಕೃತವಾಗುತ್ತಿರುವ ಸಂದರ್ಭಗಳು ಕಂಡುಬರುತ್ತಿವೆ.
ಅತಿಯಾದ ರಾಸಾಯನಿಕ ಔಷಧ ಮತ್ತು ಕೀಟನಾಶಕಗಳ ಬಳಕೆ, ಗುಣಮಟ್ಟದ ಕೊರತೆ, ಸಂಗ್ರಹಣಾ ವ್ಯವಸ್ಥೆಯ ದುರ್ಬಲತೆ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟದ ಮಾನದಂಡಗಳ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಬಹುದು. ಹೀಗಾಗಿ ಅಂತರರಾಷ್ಟ್ರೀಯ ಮಾರು ಕಟ್ಟೆಯನ್ನು ಗೆಲ್ಲಬೇಕಾದರೆ ಉತ್ಪಾದನೆಯ ಪ್ರಮಾಣದ ಜೊತೆಗೆ ಉತ್ಪನ್ನದ ಗುಣಮಟ್ಟವೂ ಅತ್ಯಂತ ಮುಖ್ಯ. ಅತಿಯಾದ ರಾಸಾಯನಿಕ ಬಳಕೆಯನ್ನು ನಿಯಂತ್ರಿಸಿ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಕೃತಕ ಬುದ್ಧಿಮತ್ತೆ ಮತ್ತು ತಾಂತ್ರಿಕ ಕ್ರಾಂತಿ: ಈಗ ಜಗತ್ತು ಎಐ ಜಮಾನೆಯಲ್ಲಿದೆ. ಆಧುನಿಕ ಜಗತ್ತಿನ ವೇಗದೊಂದಿಗೆ ಭಾರತವೂ ಹೆಜ್ಜೆ ಹಾಕಬೇಕಾಗಿದೆ. ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಆಟೋಮೇಷನ್ ಮತ್ತು ಇತರ ಆಧುನಿಕ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುನ್ನಡೆಯುತ್ತಿವೆ. ಈ ಕ್ಷೇತ್ರದಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ.
ಸೆಮಿಕಂಡಕ್ಟರ್ ಉತ್ಪಾದನೆ, ಎಐ, ರೋಬೋ ಟಿಕ್ಸ್, ಎಲೆಕ್ಟ್ರಾನಿಕ್ಸ್, ಡಿಜಿಟಲ್ ತಂತ್ರಜ್ಞಾನ ಮತ್ತು ಆಧುನಿಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭಾರತ ತಾಂತ್ರಿಕವಾಗಿ ಸ್ವಾವಲಂಬಿ ಆಗಬೇಕಾಗಿದೆ.
ಮುಂದಿನ ವರ್ಷದೊಳಗಾಗಿ ಸುಮಾರು ಒಂದು ಕೋಟಿಯಷ್ಟು ಯುವಕರಿಗೆ ಎಐ ತರಬೇತಿ ನೀಡುವ ಘೋಷಣೆಯನ್ನೂ ಪ್ರಧಾನಿ ಮಾಡಿzರೆ. ಇದು ಕೇವಲ ಉದ್ಯೋಗಕ್ಕಾಗಿ ತರಬೇತಿ ನೀಡುವ ಯೋಜನೆ ಯಾಗದೆ, ಭಾರತದ ಯುವಕರನ್ನು ಭವಿಷ್ಯದ ತಂತ್ರಜ್ಞಾನ ಆರ್ಥಿಕತೆಗೆ ಸಿದ್ಧಗೊಳಿಸುವ ಮಹತ್ವದ ಹೆಜ್ಜೆಯಾಗಬೇಕಾಗಿದೆ.
ಮೂಲಸೌಕರ್ಯ ಅಭಿವೃದ್ಧಿ: ಯಾವುದೇ ರಾಷ್ಟ್ರದ ಅಭಿವೃದ್ಧಿಯನ್ನು ಅಳೆಯುವ ಪ್ರಮುಖ ಮಾನದಂಡಗಳಲ್ಲಿ ಮೂಲಸೌಕರ್ಯವೂ ಒಂದು. ಉತ್ತಮ ರಸ್ತೆಗಳು, ರೈಲು ಮಾರ್ಗಗಳು, ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ವ್ಯವಸ್ಥೆ, ಡಿಜಿಟಲ್ ಸಂಪರ್ಕ ಮತ್ತು ನಗರ-ಗ್ರಾಮೀಣ ಸಂಪರ್ಕ ವ್ಯವಸ್ಥೆಗಳು ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿವೆ.
ಉತ್ಪಾದನಾ ಘಟಕಗಳು ಸ್ಥಾಪನೆಯಾಗಬೇಕಾದರೆ ಅವುಗಳಿಗೆ ಉತ್ತಮ ರಸ್ತೆ, ರೈಲು, ವಿದ್ಯುತ್, ನೀರು, ಬಂದರು ಮತ್ತು ಡಿಜಿಟಲ್ ಸಂಪರ್ಕ ಅಗತ್ಯ. ಆದ್ದರಿಂದ ಮೂಲಸೌಕರ್ಯ ಅಭಿವೃದ್ಧಿಯ ಗತಿಶಕ್ತಿ ಯೋಜನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಮೂಲಸೌಕರ್ಯ ಅಭಿವೃದ್ಧಿ ಕೇವಲ ಸರ್ಕಾರದ ಯೋಜನೆಯಾಗಿರದೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಬೆಳವಣಿಗೆಯ ಮೂಲ ವೇದಿಕೆಯಾಗಬೇಕು.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ: ಭಾರತಕ್ಕೆ ಹೊರಗಿನ ಭದ್ರತಾ ಸವಾಲುಗಳ ಜೊತೆಗೆ ಆಂತರಿಕ ಭದ್ರತಾ ಸವಾಲುಗಳೂ ಇವೆ. ದೀರ್ಘಕಾಲದಿಂದ ಭಾರತ ರಕ್ಷಣಾ ಸಾಮಗ್ರಿಗಳ ಆಮದಿನ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿತ್ತು. ಇತ್ತೀಚಿನ ಜಾಗತಿಕ ಸಂಘರ್ಷಗಳು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಯ ಅಗತ್ಯವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ. ಹೀಗಾಗಿ ದೇಶೀಯವಾಗಿ ಶಸ್ತ್ರಾಸ್ತ್ರಗಳು, ರಕ್ಷಣಾ ಉಪಕರಣಗಳು, ಡ್ರೋನ್‌ಗಳು, ರಕ್ಷಣಾ ತಂತ್ರಜ್ಞಾನ ಮತ್ತು ಇತರ ಅಗತ್ಯ ಸಾಮಗ್ರಿಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ದೇಶದ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಹೊಸ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಬಹುದು.
ಹಸಿರು ಮತ್ತು ನೀಲಿ ಆರ್ಥಿಕತೆ: ಮುಂದಿನ ಭಾರತದ ಅಭಿವೃದ್ಧಿ ಪರಿಸರ ಸ್ನೇಹಿಯಾಗಿರಬೇಕಾಗಿದೆ. ಹಸಿರು ಆರ್ಥಿಕತೆ, ನವೀಕರಿಸಬಹುದಾದ ಇಂಧನ, ಸೌರಶಕ್ತಿ, ಗಾಳಿಶಕ್ತಿ ಹಾಗೂ ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅದೇ ರೀತಿ ಭಾರತದ ವಿಶಾಲ ಕರಾವಳಿ ಮತ್ತು ಸಮುದ್ರ ಸಂಪನ್ಮೂಲಗಳನ್ನು ಬಳಸಿಕೊಂಡು ‘ನೀಲಿ ಆರ್ಥಿಕತೆ’ಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಮೀನುಗಾರಿಕೆ, ಸಮುದ್ರ ಸಾರಿಗೆ, ಬಂದರುಗಳು, ಸಮುದ್ರಾಧಾರಿತ ಕೈಗಾರಿಕೆಗಳು ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಮೂಲಕ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಬಹುದು.
ಕಳೆದ ವರ್ಷಗಳ ಸಾಧನೆ: ಸಂಖ್ಯೆಗಳು ಹೇಳುವ ಬದಲಾವಣೆ. ಕಳೆದ 12 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ. ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಸುಮಾರು ಏಳು ಪಟ್ಟು, ರೈಲು ಬೋಗಿಗಳ ಉತ್ಪಾದನೆಯಲ್ಲಿ ಸುಮಾರು 21 ಪಟ್ಟು ಹಾಗೂ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಸುಮಾರು 33 ಪಟ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ವಹಿವಾಟುಗಳೂ ಅತ್ಯಂತ ವೇಗವಾಗಿ ವಿಸ್ತರಿಸಿವೆ. ಈ ಅಂಕಿಅಂಶಗಳು ಭಾರತದ ಆರ್ಥಿಕತೆಯಲ್ಲಿ ನಡೆಯುತ್ತಿರುವ ಬದಲಾವಣೆಯ ಚಿತ್ರಣವನ್ನು ನೀಡುತ್ತವೆ. ಆದರೆ ಮುಂದಿನ ಹಂತದಲ್ಲಿ ಈ ಬೆಳವಣಿಗೆಯನ್ನು ದೇಶದ ಪ್ರತಿಯೊಂದು ರಾಜ್ಯ, ಜಿಲ್ಲೆ, ಗ್ರಾಮ ಮತ್ತು ಕುಟುಂಬದ ಜೀವನಮಟ್ಟದ ಸುಧಾರಣೆಯೊಂದಿಗೆ ಜೋಡಿಸುವುದು ಅತ್ಯಂತ ಮುಖ್ಯ. ಭಾರತದಲ್ಲಿ ಶೇಕಡಾ 50ರಷ್ಟು ಜನರಿಗೆ ಉದ್ಯೋಗ ಕಲ್ಪಿಸುವ ಕೃಷಿ ಕ್ಷೇತ್ರವು ಇಂದಿಗೂ ಕೂಡಾ ಒಂದು ಉದ್ಯಮವಾಗಿ ಬೆಳೆಯಲು ಸಾಧ್ಯವಾಗಿಲ್ಲ.
ನಮ್ಮ ಅತಿ ಹೆಚ್ಚಿನ ಪ್ರಮಾಣದ ಭೂಮಿಯು ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿದೆ. ಪ್ರಕೃತಿಯ ಮೇಲೆ ಕೃಷಿ ಮತ್ತು ಮಳೆಯ ಮುನಿಸಿನ ಮೇಲೆ ರೈತರ ಬದುಕು ಆಧಾರಪಟ್ಟಿದೆ. ಹೀಗಾಗಿ ರೈತರು ಕೃಷಿ ಆದಾಯದಲ್ಲಿ ಅತಿ ಹೆಚ್ಚು ಅನಿಶ್ಚಿತತೆಯನ್ನು ಅನುಭವಿಸುತ್ತಿದ್ದಾರೆ. ನಮ್ಮಲ್ಲಿ ಯಾವ ಸರ್ಕಾರವೂ ಬೆಳೆ ಮತ್ತು ಬೆಲೆ ನೀತಿಯ ಬಗ್ಗೆ ಹೆಚ್ಚಿನ ಗಮನಹರಿಸುವುದಿಲ್ಲ. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿವೆ; ಆದರೆ ಅವುಗಳ ಸಿಬ್ಬಂದಿ ಹಾಗೂ ಅಲ್ಲಿನ ತಜ್ಞರು ರೈತರ ಬಳಿ ಹೋಗಿ ಅವರ ಸಮಸ್ಯೆಗಳನ್ನು ನೇರವಾಗಿ ಅರ್ಥಮಾಡಿಕೊಳ್ಳುವ ವ್ಯವಸ್ಥೆ ಇನ್ನಷ್ಟು ಬಲಪಡಿಸ ಬೇಕಾಗಿದೆ.
ಮೋದಿಯವರು ಒಂದು ವರ್ಷದಲ್ಲಿ ಸುಮಾರು ಒಂದು ಕೋಟಿಯಷ್ಟು ಜನರಿಗೆ ಎಐ ತರಬೇತಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಎಐ ತರಬೇತಿ ನೀಡುವುದಕ್ಕೂ ಕೂಡಾ ಒಂದಷ್ಟು ಸ್ಪಷ್ಟವಾದ ಮತ್ತು ಕಠಿಣವಾದ ಮಾನದಂಡಗಳನ್ನು ರೂಪಿಸಬೇಕು. ಆದರೆ ಈಗಾಗಲೇ ಇರುವ ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳ ಅನುಭವವನ್ನು ನಾವು ಮರೆಯಬಾರದು.
‘ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ’ 2015ರಲ್ಲಿ ಶುರುವಾಯಿತು. ಮತ್ತು ಇದು ಮೂರು ಹಂತಗಳಲ್ಲಿ 14450 ಕೋಟಿ ರೂಪಾಯಿ ವೆಚ್ಚದಲ್ಲಿ 1.32 ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು. ಆ ಪೈಕಿ 1.10 ಲಕ್ಷ ಜನರಿಗೆ ಪ್ರಮಾಣಪತ್ರಗಳನ್ನು ಕೂಡ ವಿತರಿಸಲಾಯಿತು.
ಅಂದರೆ ಅಷ್ಟು ಜನರಿಗೆ ತರಬೇತಿ ನೀಡಿರುವುದಾಗಿ ವರದಿಯಾಯಿತು. ಆದರೆ ಡಿಸೆಂಬರ್ 2025ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಮಹಾಲೇಖಪಾಲರ (ಸಿಎಜಿ) ಲೆಕ್ಕಪರಿಶೋಧನಾ ವರದಿಯಲ್ಲಿ ಈ ಯೋಜನೆಯಲ್ಲಿನ ಹಲವು ಗಂಭೀರ ಲೋಪಗಳು ಬಯಲಾದವು. ಅಲ್ಲಿ ತರಬೇತಿ ನೀಡಲು ಆಯ್ಕೆಯಾಗಿದ್ದ ಸಂಸ್ಥೆಗಳೇ ದೊಡ್ಡ ಮಟ್ಟದಲ್ಲಿ ಅಕ್ರಮಗಳನ್ನು ನಡೆಸಿರುವುದು ವರದಿಯಲ್ಲಿ ಉಲ್ಲೇಖವಾಗಿತ್ತು.
ಯಾರೆಲ್ಲರನ್ನು ಫಲಾನುಭವಿಗಳೆಂದು ತೋರಿಸಲಾಗಿತ್ತೋ, ಅವರ ಬ್ಯಾಂಕ್ ಖಾತೆಗಳ ವಿವರಗಳು ಸರಿಯಾಗಿ ಲಭ್ಯವಿರಲಿಲ್ಲ. ಕೆಲ ಕಡೆಗಳಲ್ಲಿ ನಕಲಿ ಖಾತೆಗಳನ್ನು ನೀಡಲಾಗಿತ್ತು. 12 ಸಾವಿರಕ್ಕೂ ಹೆಚ್ಚು ಬ್ಯಾಂಕ್ ಖಾತೆ ಸಂಖ್ಯೆಗಳನ್ನು 52 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಮರುಬಳಕೆ ಮಾಡಲಾಗಿತ್ತು.
ಅಸ್ತಿತ್ವದ ಇಲ್ಲದ ತರಬೇತಿ ಸಂಸ್ಥೆಗಳು, ತರಬೇತಿಗೆ ಬಾರದ ಯುವಕರಿಗೂ ತರಬೇತಿ ನೀಡಿರುವು ದಾಗಿ ದಾಖಲೆಗಳನ್ನು ಸೃಷ್ಟಿಸಿರುವುದು ವರದಿಯ ಮೂಲಕ ಬೆಳಕಿಗೆ ಬಂದಿತ್ತು. ಪಿ.ಎಂ.ಕೆ.ವಿ.ವೈ-4 ರ ಅಡಿಯಲ್ಲಿ 1180 ಅಪ್ರಾಪ್ತ ವಯಸ್ಕರಿಗೆ ತರಬೇತಿ ನೀಡಿರುವ ಬಗ್ಗೆಯೂ ಸಿಎಜಿ ವರದಿಯಲ್ಲಿ ಉಲ್ಲೇ ಖಿಸಲಾಗಿದೆ.
ಇಂತಹ ಘಟನೆಗಳು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತವೆ: ಯೋಜನೆಯ ಘೋಷಣೆ ಎಷ್ಟು ದೊಡ್ಡದಾಗಿದೆ ಎಂಬುದಕ್ಕಿಂತ, ಅದರ ಅನುಷ್ಠಾನ ಎಷ್ಟು ಪಾರದರ್ಶಕವಾಗಿದೆ ಎಂಬುದೇ ಮುಖ್ಯ. ತರಬೇತಿ ಪಡೆದ ಯುವಕನ ಕೈಗೆ ಪ್ರಮಾಣಪತ್ರ ಕೊಡುವುದಷ್ಟೇ ಸಾಕಾಗುವುದಿಲ್ಲ; ಆ ಪ್ರಮಾಣಪತ್ರವು ಅವನಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗದ ಬಾಗಿಲು ತೆರೆಯುತ್ತದೆಯೇ ಎಂಬುದು ಮುಖ್ಯ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸುಮಾರು 33 ಲಕ್ಷ ಕೋಟಿ ರುಪಾಯಿಗಳಷ್ಟು ಹಣವನ್ನು ಈ ಯೋಜನೆಯಡಿ ಸಾಲವಾಗಿ ನೀಡಿರುವ ಬಗ್ಗೆ ಸರ್ಕಾರಿ ಅಂಕಿ-ಅಂಶಗಳು ಹೇಳುತ್ತವೆ. ಮತ್ತು ಈ ಯೋಜನೆಯಡಿ ಪಡೆದಂತಹ ಸಾಲಗಳು ವಸೂಲಾಗುತ್ತಿಲ್ಲ ಎಂದು ರಿಸರ್ವ್ ಬ್ಯಾಂಕ್ ಪದೇಪದೇ ಎಚ್ಚರಿಸುತ್ತದೆ.
ಇದರರ್ಥ; ನಮ್ಮಲ್ಲಿ ದೊಡ್ಡ ಪ್ರಮಾಣದ ಘೋಷಣೆಗಳು ಮತ್ತು ಯೋಜನೆಗಳು ಇದ್ದರೂ, ಅವುಗಳ ಅನುಷ್ಠಾನದ ಹಂತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಪರಿಣಾಮಕಾರಿ ಮೇಲ್ವಿಚಾರಣೆ ಇರಬೇಕು. ಅದು ಇಲ್ಲದೆ ಹೋದರೆ, ಅವು ವಿಫಲ ಯೋಜನೆಗಳಾಗಿ, ಅರ್ಹ ಫಲಾನುಭವಿಗಳ ಬದಲಿಗೆ ಅಪಾತ್ರರ ಜೇಬಿಗೆ ಹಣ ಸೇರುತ್ತದೆ.
ಸರ್ಕಾರದ ಪ್ರತಿಯೊಂದು ರೂಪಾಯಿಯೂ ತೆರಿಗೆದಾರರ ಹಣವಾಗಿರುವುದರಿಂದ, ಅದರ ಬಳಕೆಯ ಬಗ್ಗೆ ಉತ್ತರದಾಯಿತ್ವವೂ ಅಷ್ಟೇ ಮುಖ್ಯವಾಗಿದೆ. 2025ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿಎಸ್‌ಟಿ ಸುಧಾರಣೆ ಹಾಗೂ ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸುವ ಕುರಿತು ಮಹತ್ವದ ಘೋಷಣೆಗಳನ್ನು ಮಾಡಿದ್ದರು. ಈ ಸುಧಾರಣೆಗಳ ಬಹುಪಾಲು ಇದೀಗ ಜಾರಿಗೆ ಬಂದಿರುವುದು ಗಮನಾರ್ಹ ಬೆಳವಣಿಗೆ. 2025ರ ಸೆಪ್ಟೆಂಬರ್ 25ರಿಂದ ಜಿಎಸ್‌ಟಿ ಸ್ಲ್ಯಾಬ್ ಗಳನ್ನು ಮುಖ್ಯವಾಗಿ ಶೇ.5, ಶೇ.18 ಮತ್ತು ಕೆಲವು ಆಯ್ದ ವಸ್ತುಗಳಿಗೆ ಶೇ.40ರ ಮಟ್ಟದಲ್ಲಿ ಸರಳೀಕರಿಸುವ ಕ್ರಮ ಕೈಗೊಳ್ಳಲಾಗಿದೆ.
ಇದರ ಪರಿಣಾಮವಾಗಿ ಎಸಿ, ಟಿವಿ, ಔಷಧಗಳು, ವಿಮೆ ಸೇರಿದಂತೆ ಹಲವು ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆಭಾರ ಕಡಿಮೆಯಾಗಿದ್ದು, ಗ್ರಾಹಕರಿಗೂ ಇದರ ಪ್ರಯೋಜನ ತಲುಪಿದೆ. ಇದೇ ರೀತಿ ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನೆ ಹಾಗೂ ಸ್ವದೇಶಿ ಚಿಪ್ ತಯಾರಿಕೆಗೆ ಸಂಬಂಧಿಸಿ ದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳೂ ಮಹತ್ವದ್ದಾಗಿವೆ.
ಈ ಕ್ಷೇತ್ರದಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಕೆಲವು ಘಟಕಗಳು ಈಗಾಗಲೇ ವಾಣಿಜ್ಯ ಉತ್ಪಾದನೆಯತ್ತ ಹೆಜ್ಜೆ ಇಟ್ಟಿವೆ. ಇದು ಭಾರತದ ತಂತ್ರಜ್ಞಾನ ಕ್ಷೇತ್ರದ ಆತ್ಮನಿರ್ಭರತೆಯ ದೃಷ್ಟಿಯಿಂದ ಮಹತ್ವದ ಆರಂಭ. ಆದರೆ ಇಲ್ಲಿ ನಾವು ಒಂದು ವಾಸ್ತವವನ್ನು ಮರೆಯಬಾರದು. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುವುದು ಮಾತ್ರ ಆತ್ಮನಿರ್ಭರತೆ ಅಲ್ಲ; ಅದಕ್ಕೆ ಅಗತ್ಯವಿರುವ ಯಂತ್ರೋಪಕರಣಗಳು, ವಿಶೇಷ ರಾಸಾಯನಿಕಗಳು, ಅಪರೂಪದ ಖನಿಜಗಳು ಮತ್ತು ಇತರ ಮೂಲ ಸಾಮಗ್ರಿಗಳಲ್ಲಿಯೂ ದೇಶೀಯ ಸಾಮರ್ಥ್ಯವನ್ನು ಬೆಳೆಸ ಬೇಕಾಗಿದೆ.
ಪ್ರಸ್ತುತ ಈ ಕ್ಷೇತ್ರದ ಹಲವು ಪ್ರಮುಖ ಅಗತ್ಯಗಳಿಗೆ ಭಾರತ ಇನ್ನೂ ಆಮದುಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವುದು ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ಪ್ರಕ್ರಿಯೆಯಲ್ಲ. ಇದು ದೀರ್ಘಾವಧಿಯ ತಂತ್ರಜ್ಞಾನ, ಸಂಶೋಧನೆ, ಬಂಡವಾಳ ಹೂಡಿಕೆ, ಕೌಶಲ್ಯಾಭಿವೃದ್ಧಿ ಮತ್ತು ಮೂಲಸೌಕರ್ಯ ನಿರ್ಮಾಣವನ್ನು ಬೇಡುವುದಾಗಿದೆ. ಆ ಪ್ರಯತ್ನ ಈಗ ಆರಂಭಗೊಂಡು ವೇಗವಾಗಿ ಮುಂದುವರಿ ಯುತ್ತಿದೆ.
ಈ ಕ್ಷೇತ್ರದಲ್ಲಿ ಮುಂದಿನ ಹಂತದ ಹೂಡಿಕೆಗೂ ಸರ್ಕಾರ ಒತ್ತು ನೀಡಿದೆ. ಸೆಮಿಕಂಡಕ್ಟರ್ ಕ್ಷೇತ್ರದ ಎರಡನೇ ಹಂತದ ಯೋಜನೆಗಳಿಗೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಘೋಷಿಸಿರುವುದು, ಭಾರತವನ್ನು ಜಾಗತಿಕ ಚಿಪ್ ಉತ್ಪಾದನಾ ಸರಪಳಿಯಲ್ಲಿ ಪ್ರಮುಖ ರಾಷ್ಟ್ರವನ್ನಾಗಿ ರೂಪಿಸುವ ಪ್ರಯತ್ನದ ಭಾಗವಾಗಿದೆ. ಅದೇ ರೀತಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗಳ ಮೂಲಕ ಕೋಟ್ಯಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಮುಂದಿಟ್ಟಿದೆ.