ಒಂದೊಳ್ಳೆ ಮಾತು
ಶ್ರೀಧಾಮ ಮಾಯಾಪುರದ ಯೋಗಪೀಠ ದೇವಸ್ಥಾನದಲ್ಲಿ ಒಬ್ಬ ಹಿರಿಯ ಅಡುಗೆಯವನು ಸೇವೆ ಮಾಡುತ್ತಿದ್ದ. ಅವನು ತನ್ನ ಕೋಪ ಸ್ವಭಾವದಿಂದಾಗಿ ಭಕ್ತರ ನಡುವೆ ಕುಖ್ಯಾತನಾಗಿದ್ದ. ಕೋಪವು ಅವನ ಮೂಗಿನ ತುದಿಯಲ್ಲಿಯೇ ಇರುತಿತ್ತು, ತಕ್ಷಣ ಜಗಳಕ್ಕೆ ಇಳಿಯುತ್ತಿದ್ದ, ವಾದ ಮಾಡುತ್ತಿದ್ದ. ದೇವಸ್ಥಾನಕ್ಕೆ ಬರುತ್ತಿದ್ದ ಪ್ರತಿಯೊಬ್ಬರಲ್ಲೂ ತಪ್ಪು ಹುಡುಕಿ, ಎಲ್ಲರೊಂದಿಗೂ ಜಗಳವಾಡುತ್ತಿದ್ದ.
ಆದರೆ ಒಂದೇ ಒಂದು ವಿನಾಯಿತಿ ಇತ್ತು- ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕೂರರೊಂದಿಗೆ ಅವನು ಎಂದಿಗೂ ಜಗಳವಾಡಲಿಲ್ಲ. ಆಚಾರ್ಯರ ಸಾನಿಧ್ಯದಲ್ಲಿ ಅವನ ಕೋಪ ಕರಗಿ ಹೋಗು ತ್ತಿತ್ತು. ಬಹುಶಃ ತನ್ನ ಗುರುವರ್ಯರಲ್ಲಿ ದೈವಿಕ ಶಕ್ತಿ ಇರುವುದನ್ನು ಅವನೂ ಅನುಭವಿಸಿದ್ದಿರ ಬಹುದು; ಅವರಲ್ಲಿ ಅಹಂಕಾರಕ್ಕೂ, ಕೋಪಕ್ಕೂ ಸ್ಥಾನವಿರಲಿಲ್ಲ.
ಸ್ವಲ್ಪ ಕಾಲದ ನಂತರ ಆ ಅಡುಗೆಯವ ದೇಹತ್ಯಾಗ ಮಾಡಿದ. ಅವನ ಕೋಪಕ್ಕೆ ಗುರಿಯಾಗಿದ್ದ ಕೆಲವರಿಗೆ ಇದು ನಿರಾಳತೆಯನ್ನು ತಂದಿತು. ಅಂತ್ಯಕ್ರಿಯೆಗಳು ಮುಗಿದ ಬಳಿಕ, ದೇವಸ್ಥಾನದ ನಿವಾಸಿಗಳು ಒಟ್ಟಾಗಿ ಕೂತು ಅವನ ಕುರಿತು ಮಾತನಾಡತೊಡಗಿದರು.
ಆಂಗಳದಲ್ಲಿ ಕುಳಿತಿದ್ದ ಬ್ರಹ್ಮಚಾರಿಗಳು ಅವನುಂಟು ಮಾಡಿದ್ದ ಅನೇಕ ಕಷ್ಟಗಳನ್ನು ನೆನಪಿಸಿ ಕೊಂಡರು. ಒಬ್ಬೊಬ್ಬರಾಗಿ ತಮ್ಮ ತಮ್ಮ ಜಗಳಗಳ ಕಥೆಗಳನ್ನು ಹೇಳಿಕೊಂಡರು. ಕೆಲವನ್ನು ಬೇಸರದಿಂದ, ಕೆಲವನ್ನು ನಗುತ್ತ ಹೇಳುತ್ತಿದ್ದರು. ವಾತಾವರಣ ಸ್ವಲ್ಪ ಹಗುರವಾಗಿದ್ದರೂ, ಒಳಗೆ ಹಳೆಯ ಅಸಮಾಧಾನದ ಛಾಯೆ ಉಳಿದಿತ್ತು. ಅವರು ಮಾತನಾಡುತ್ತಿರಲು ಅಚ್ಚರಿಯೆಂಬಂತೆ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕೂರರು ಬಾಗಿಲಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Roopa Gururaj Column: ಸಮರ್ಪಣಾ ಭಾವ ಇದ್ದಾಗ, ಸಿಗುವ ಭಗವಂತನ ಸಾನಿಧ್ಯ
ಅವರ ಎತ್ತರದ, ಗಂಭೀರ ವ್ಯಕ್ತಿತ್ವ ಮತ್ತು ಶಾಂತ ಮುಖಭಾವವನ್ನು ಕಂಡ ಕ್ಷಣದ ಸಂಪೂರ್ಣ ಮೌನ ಆವರಿಸಿತು. ಬ್ರಹ್ಮಚಾರಿಗಳು ನಿಶ್ಚಲರಾದರು. ತಮ್ಮ ಮಾತುಗಳು ಆಚಾರ್ಯರ ಕಿವಿಗೆ ಬಿದ್ದಿವೆ ಎಂಬ ಅರಿವು ಅವರಿಗೆ ಮೂಡಿತು.
ಶ್ರೀಲ ಸರಸ್ವತೀ ಠಾಕೂರರು ಸೌಮ್ಯವಾಗಿ ಅವರನ್ನು ನೋಡಿ ಕೇವಲ ಒಂದೇ ವಾಕ್ಯ ಹೇಳಿದರು: “ಅವನು ತನ್ನ ಧೋತಿಯನ್ನು ಸದಾ ಚೆನ್ನಾಗಿ ತೊಳೆಯುತ್ತಿದ್ದನು; ತುಂಬಾ ಸ್ವಚ್ಛವಾಗಿದ್ದನು". ಇಷ್ಟನ್ನೇ ಹೇಳಿ, ಮತ್ತೇನೂ ಮಾತಿಲ್ಲದೆ ಹೊರಟುಹೋದರು ಆಚಾರ್ಯರು. ಭಕ್ತರು ಮಾತು ಕಳೆದುಕೊಂಡರು.
ಆಚಾರ್ಯರು ತಮ್ಮನ್ನು ದಂಡಿಸಲು ಬಂದಿಲ್ಲ, ಬದಲಾಗಿ ಹೇಗೆ ನೋಡಬೇಕು ಎಂಬುದನ್ನು ಕಲಿಸಲು ಬಂದಿದ್ದಾರೆ ಎಂಬುದು ಅವರಿಗೆ ತಕ್ಷಣವೇ ಅರ್ಥವಾಯಿತು. ದೇಹತ್ಯಾಗ ಮಾಡಿದ ವ್ಯಕ್ತಿಯ ಕುರಿತು ಟೀಕೆ ಮಾಡಿದ್ದಕ್ಕಾಗಿ ಅವರು ಕಠಿಣವಾಗಿ ಗದರಿಸಬಹುದಾಗಿತ್ತು; ಆದರೆ ಅವರು ಅಡುಗೆಯವನ ಒಂದು ಸಣ್ಣ ಒಳ್ಳೆಯ ಗುಣವನ್ನೇ ಗುರುತಿಸಿ ಹೊಗಳಿದ್ದರು. ಆ ಒಂದೇ ವಾಕ್ಯದಲ್ಲಿ ಅವರು ಎಲ್ಲರ ಹೃದಯವನ್ನೂ ಪರಿವರ್ತಿಸಿದರು.
ಆ ದಿನದಿಂದ ಆ ಅಡುಗೆಯವನ ಕುರಿತು ಯಾರೂ ಕೆಟ್ಟ ಮಾತಾಡಲಿಲ್ಲ. ಬದಲಾಗಿ, ಶ್ರೀಲ ಸರಸ್ವತೀ ಠಾಕೂರರ ಆ ಮಾತನ್ನು ನೆನಪಿಸಿಕೊಳ್ಳುತ್ತಿದ್ದರು. ಅದರೊಂದಿಗೆ ಮತ್ತೊಬ್ಬರ ಬಗ್ಗೆ ಹೇಗೆ ಸಹಾನುಭೂತಿ ಬೆಳೆಸಿಕೊಳ್ಳಬೇಕು ಎಂಬುದನ್ನು ಕೂಡ ಕಲಿತರು.
ಈ ಸಣ್ಣ ಘಟನೆಯು ಒಬ್ಬ ಶುದ್ಧ ಭಕ್ತನ ದೈವಿಕ ದೃಷ್ಟಿಯನ್ನು ಬಹಿರಂಗಪಡಿಸುತ್ತದೆ. ಬೇರೆಯ ವರು ದೋಷವನ್ನ ಕಂಡಲ್ಲಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕೂರರು ಒಂದೊಳ್ಳೆಯ ಗುಣ ವನ್ನೂ ಕಂಡರು. ಅವರು ಯಾರ ದೋಷಗಳನ್ನೂ ನಿರಾಕರಿಸಲಿಲ್ಲ; ಆದರೆ ಹೃದಯದೊಳಗೆ ಇನ್ನೂ ಮಿನುಗುತ್ತಿದ್ದ ಸದ್ಗುಣದ ಕಿರಣದ ಮೇಲೆ ಗಮನ ಹರಿಸಿದರು.
ನಮ್ಮ ಸ್ನೇಹ, ಸಂಸಾರ ವಲಯಗಳಲ್ಲಿ ಕೂಡ ಇಂಥ ಅನೇಕರು ನಮ್ಮ ಸುತ್ತಮುತ್ತಲೂ ಇರುತ್ತಾರೆ. ಅವರ ಯಾವುದೋ ಒಂದು ಗುಣ ನಮಗೆ ನಿರಂತರವಾಗಿ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಆದರೆ ಅದರ ಆಚೆ ಅವರಲ್ಲಿ ಒಳ್ಳೆಯ ಗುಣಗಳನ್ನು ಕೂಡ ಹುಡುಕುವ ಪ್ರಯತ್ನ ಮಾಡಿದಾಗ ಅವರು ಬದಲಾಗದಿದ್ದರೂ, ನಾವು ಬದಲಾಗಿರುತ್ತೇವೆ.
ನಮ್ಮ ಹೃದಯದೊಳಗೆ ಕ್ಷಮಾಗುಣ, ಶಾಂತಿ-ನೆಮ್ಮದಿ ನೆಲೆಸುತ್ತವೆ. ಇದು ಹೇಳಿದಷ್ಟು ಸುಲಭ ವಲ್ಲ, ಆದರೆ ಪ್ರಯತ್ನವನ್ನು ಖಂಡಿತ ಬಿಡಬಾರದು. ಕಾರಣ ಇಷ್ಟೇ! ಎಲ್ಲಿಯವರೆಗೂ ನಾವು ಮತ್ತೊಬ್ಬರಲ್ಲಿ ತಪ್ಪನ್ನು ಹುಡುಕುತ್ತಾ ಇರುತ್ತೇವೋ ಅಲ್ಲಿಯವರೆಗೂ ನಾವು ಬೆಳೆಯಲು ಸಾಧ್ಯ ವಿಲ್ಲ.
ನಮ್ಮಲ್ಲಿ ನೆಮ್ಮದಿ ಇರುವುದಿಲ್ಲ. ಮತ್ತೊಬ್ಬರ ಅವಗುಣಗಳನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿ ಯೊಬ್ಬರಲ್ಲೂ ಏನಾದರೂ ಒಳ್ಳೆಯದನ್ನು ಹುಡುಕುವ ಪ್ರಯತ್ನ ಮಾಡಿದಾಗ ನಾವು ಮನುಷ್ಯ ರಾಗುತ್ತೇವೆ....