Shishir Hegde Column: ಕ್ಷಮಿಸುವುದು ಎಂದರೆ ಆಲೂಗಡ್ಡೆ ಚೀಲ ಕೆಳಕ್ಕಿಟ್ಟಂತೆ !
ಬಿಟ್ಟರೆ ನನ್ನಲ್ಲಿ ನಿನಗೆ ಪರಿಹಾರವಿಲ್ಲ, ನನಗೆ ಮತ್ತೆ ಮುಖ ತೋರಿಸಬೇಡ. ಏಳನೆಯ ದಿನ ಸಿಕ್ಕಾಗ ನಿನಗೆ ಪರಿಹಾರ ಹೇಳುತ್ತೇನೆ". “ಸರಿ" ಎಂದು ಆ ವ್ಯಕ್ತಿ ಚೀಲ ಹೊತ್ತು ಓಡಾಡಲು ಶುರುಮಾಡಿದ. ಎರಡು ದಿನ ಕಳೆಯುವಾಗಲೇ ಸುಸ್ತೋ ಸುಸ್ತು. ಮೂರನೆಯ ದಿನವಾಗುವಾಗ ಪರ್ಷಿಯಾದ ಬಿಸಿಲಿಗೆ ಆಲೂಗಡ್ಡೆ ಕೊಳೆಯಲು ಆರಂಭವಾಯಿತು
ಶಿಶಿರಕಾಲ
ಶಿಶಿರ್ ಹೆಗಡೆ
ಮುಲ್ಲಾ ನಸ್ರುದ್ದೀನ್‌ನ ಬಳಿ ಊರಿನ ಒಬ್ಬ ವ್ಯಕ್ತಿ ಬಂದು “ಮು, ನನ್ನ ಬದುಕೆಂದರೆ ಬರೀ ನೋವು. ಅದೆಷ್ಟೋ ಜನರಿಗೆ ನನ್ನನ್ನು ಕಂಡರೆ ಅದೇನೋ ದ್ವೇಷ, ಹೊಟ್ಟೆಕಿಚ್ಚು. ಅವರೆಲ್ಲ ನನಗೆ ಸಾಕಷ್ಟು ನೋವನ್ನುಂಟು ಮಾಡಿದ್ದಾರೆ. ಈಗೀಗ ನನಗೆ ಎಲ್ಲರೂ ಕೆಟ್ಟವರೆಂದೇ ಅನಿಸಲು ಶುರುವಾಗಿ ಬಿಟ್ಟಿದೆ. ನನಗೆ ನೋವು ಕೊಟ್ಟವರೆಲ್ಲ ನನ್ನದೇ ಊರಿನವರಾದದ್ದರಿಂದ ಆಗೀಗ ಎದುರಾಗುತ್ತಲೇ ಇರುತ್ತಾರೆ. ಅಂಥವರು ಬಂದು ಮಾತ ನಾಡಿದಾಗಲೆಲ್ಲ ಅವರು ನನಗೆ ಕೊಟ್ಟ ನೋವು, ಕಷ್ಟ ಎಲ್ಲವೂ ನೆನಪಾಗುತ್ತದೆ. ನಖಶಿಖಾಂತ ಸಿಟ್ಟು ಬರುತ್ತದೆ. ನನಗೆ ಊರಲ್ಲಿ ಮನಃಶಾಂತಿಯೇ ಇಲ್ಲದಂತಾಗಿದೆ.
ಊರನ್ನೇ ಬಿಡಬೇಕೆಂದಿದ್ದೇನೆ. ಏನು ಮಾಡಲಿ?" ಎಂದು ಕೇಳಿದ. ಅದನ್ನು ಕೇಳಿದ ಮು ಅಲ್ಲಿಯೇ ಪೇಟೆಯ ಅಂಗಡಿಯೊಂದರಲ್ಲಿದ್ದ ಭಾರದ ಆಲೂಗಡ್ಡೆ ಚೀಲವೊಂದನ್ನು ಖರೀದಿಸಿದ. ಅದನ್ನು ಅವನಿಗೆ ಕೊಡುತ್ತ “ನೋಡು, ನಿನಗೆ ಪರಿಹಾರ ನಾನು ಕೊಡುತ್ತೇನೆ. ಆದರೆ ಅದಕ್ಕಿಂತ ಮೊದಲು ನಾನು ಹೇಳಿದ ಒಂದು ಕೆಲಸವನ್ನು ನೀನು ಮರುಪ್ರಶ್ನಿಸದೆ ಮಾಡಬೇಕು.
ಇದನ್ನೂ ಓದಿ: Shishir Hegde Column: ಶಿಕಾಗೋ ಚಳಿಗಾಲ ಬಂತೆಂದರೆ ತಯಾರಿ ಒಂದೆರಡಲ್ಲ !
ಏಕೆ ಎಂದು ಕೇಳಬಾರದು, ಸುಮ್ಮನೆ ಮಾಡಬೇಕು ಅಷ್ಟೆ. ಅಂಥಾ ದೊಡ್ಡ ಕೆಲಸವೇನಲ್ಲ, ಈ ಆಲೂಗಡ್ಡೆಯ ಚೀಲವನ್ನು ಒಂದು ವಾರ ನೀನು ಎಲ್ಲಿಯೇ ಹೋಗು, ಹೋದಲ್ಲ ಹೊತ್ತು ಒಯ್ಯ ಬೇಕು. ನಿರಂತರ ನಿನ್ನ ಜತೆಯಲ್ಲಿಯೇ ಈ ಚೀಲವನ್ನಿಟ್ಟುಕೊಳ್ಳಬೇಕು. ಚೀಲವನ್ನು ನನ್ನ ಅನ್ನಮತಿಯಿಲ್ಲದೆ ಎಲ್ಲಿಯೂ ಬಿಡುವಂತಿಲ್ಲ.
ಬಿಟ್ಟರೆ ನನ್ನಲ್ಲಿ ನಿನಗೆ ಪರಿಹಾರವಿಲ್ಲ, ನನಗೆ ಮತ್ತೆ ಮುಖ ತೋರಿಸಬೇಡ. ಏಳನೆಯ ದಿನ ಸಿಕ್ಕಾಗ ನಿನಗೆ ಪರಿಹಾರ ಹೇಳುತ್ತೇನೆ". “ಸರಿ" ಎಂದು ಆ ವ್ಯಕ್ತಿ ಚೀಲ ಹೊತ್ತು ಓಡಾಡಲು ಶುರುಮಾಡಿದ. ಎರಡು ದಿನ ಕಳೆಯುವಾಗಲೇ ಸುಸ್ತೋ ಸುಸ್ತು. ಮೂರನೆಯ ದಿನವಾಗುವಾಗ ಪರ್ಷಿಯಾದ ಬಿಸಿಲಿಗೆ ಆಲೂಗಡ್ಡೆ ಕೊಳೆಯಲು ಆರಂಭವಾಯಿತು.
ಮೊದಲೆರಡು ದಿನ ಕೇವಲ ಭಾರವಿತ್ತು, ಈಗ ಹೊಪ್ಪು ವಾಸನೆ. ನಾಲ್ಕನೆಯ ದಿನ ಆಲೂಗಡ್ಡೆ ಕೊಳೆತು ಅವನ ಬೆನ್ನಿನ ಮೇಲೆಲ್ಲ ಇಳಿಯಲು ಆರಂಭವಾಯಿತು. ಐದನೇ ದಿನ ಆ ಕೊಳೆತ ದ್ರವ ಬೆನ್ನಿನ ಚರ್ಮಕ್ಕೆ ತಾಗಿ ಹುಣ್ಣಾಗಲು ಶುರುವಾಯಿತು. ಇನ್ನು ಸಾಧ್ಯವೇ ಇಲ್ಲವೆಂದು ಆ ವ್ಯಕ್ತಿ ಮುನ ಬಳಿ ಓಡಿ ಬಂದ, “ಮು, ಈ ಆಲೂಗಡ್ಡೆ ಚೀಲ ಭಾರ, ದಿನ ಕಳೆದಂತೆ ಇದರ ಭಾರ ಹೆಚ್ಚಾ ದಂತೆ ನಿಸುತ್ತಿದೆ.
ಅಷ್ಟೇ ಅಲ್ಲ, ದುರ್ನಾತ, ಬೆನ್ನೆಲ್ಲ ಗಾಯ, ಹುಣ್ಣು. ನನ್ನ ಬಳಿ ಇದನ್ನು ಇನ್ನು ಒಂದೇ ಕ್ಷಣ ಹೊರ ಲಿಕ್ಕೂ ಸಾಧ್ಯವೇ ಇಲ್ಲ. ನಿನಗೆ ದೊಡ್ಡ ನಮಸ್ಕಾರ. ನಿನ್ನ ಪರಿಹಾರ ನನಗೆ ಬೇಡ, ನೀನೆ ಇಟ್ಟುಕೋ ನಿನ್ನ ಕೊಳೆತ ಆಲೂಗಡ್ಡೆ ಚೀಲವನ್ನ" ಎಂದು ಅಲ್ಲಿಂದ ಸಿಟ್ಟಿನಲ್ಲಿ ಹೊರಡಲು ಮುಂದಾದ. ಮು ಅವನನ್ನು ತಡೆದು “ನೋಡು, ಇದನ್ನೇ ನಾನು ಹೇಳಬೇಕೆಂದಿದ್ದದ್ದು. ಹಗೆತನ, ಸಿಟ್ಟು, ದ್ವೇಷ ಇವೆಲ್ಲವೂ ಈ ಆಲೂಗಡ್ಡೆ ಚೀಲದಂತೆ. ಸ್ವಲ್ಪ ಸಮಯ ಹೊತ್ತರೆ ಭಾರ ಹೆಚ್ಚಾ ದಂತೆನಿಸುತ್ತದೆ.
ಕ್ರಮೇಣ ಕೊಳೆತ ವಾಸನೆ ಇತ್ಯಾದಿ. ಇನ್ನೂ ಹಾಗೇ ಇಟ್ಟುಕೊಂಡರೆ ಅದು ನಿನ್ನನ್ನೇ ರೋಗ ಗ್ರಸ್ತನನ್ನಾಗಿಸುತ್ತದೆ, ಇನ್ನಷ್ಟು ಹಾನಿಯುಂಟುಮಾಡುತ್ತದೆ. ಇದಕ್ಕೆ ಪರಿಹಾರ, ನೀನು ಆಲೂ ಗಡ್ಡೆಯ ಚೀಲವನ್ನು ನೆಲಕ್ಕಿಡುವುದು. ಅದೊಂದೇ ಪರಿಹಾರ. ಅದರಿಂದ ಸಮಸ್ಯೆ ದೂರವಾಗು ವುದು. ಹಗೆತನವೂ ಹಾಗೆಯೇ, ಕೆಳಗಿಟ್ಟುಬಿಟ್ಟರೆ ಆ ಕ್ಷಣದಿಂದಲೇ ನೀನು ಮುಕ್ತ. ನಿನಗೆ ಶಾಂತಿ". ಈ ಕಥೆ ನೆನಪಾಗಲು ಕಾರಣವಿದೆ. ನಾನು ಓದುವಾಗ ಹಾಸ್ಟೆಲ್ ಸ್ನೇಹಿತ-ಸಹವಾಸಿ ಒಬ್ಬನಿದ್ದ.
ನಮ್ಮೆಲ್ಲರಿಗಿಂತ ಶ್ರೀಮಂತನಾಗಿದ್ದರಿಂದ ಅವನಲ್ಲಿ ಮೊಬೈಲ, ಬೈಕು ಇತ್ಯಾದಿಗಳಿದ್ದವು. ಅವನ ತಂದೆ ಹೆಚ್ಚಿನ ಸೌಕರ್ಯವನ್ನೇ ಮಾಡಿಕೊಟ್ಟಿದ್ದರು. ಆದರೆ ಅವನಿಗೆ ತಂದೆಯನ್ನು ಕಂಡರೆ ಏಕೋ ಆಗಿಬರುತ್ತಿರಲಿಲ್ಲ. ದ್ವೇಷ. ನಮ್ಮೆದುರಿಗೆ ದಿನಕ್ಕೆ ಎರಡು ಬಾರಿಯಾದರೂ ತನ್ನ ತಂದೆಯನ್ನು ನೆನಪಿಸಿಕೊಂಡು ಬೈಯುತ್ತಿದ್ದ. ಅದೊಂದು ಬಿಟ್ಟರೆ ಅವನ ಇನ್ನೆ ಗುಣಗಳು ಇಷ್ಟವಾಗುತ್ತಿದ್ದವು. ಅವನನ್ನು 15 ವರ್ಷದ ನಂತರ ಹಿಂದಿನ ಬಾರಿ ಭಾರತಕ್ಕೆ ಬಂದಾಗ ಭೇಟಿಯಾದೆ.
ಮಾತುಕತೆಯೆಲ್ಲ ನಡೆಯಿತು. ಹತ್ತು ನಿಮಿಷ ಕಳೆದಿಲ್ಲ, ಅವನ ತಂದೆಯ ಸುದ್ದಿ ಬಂತು. ಖರೆ ಹೇಳಬೇಕೆಂದರೆ ನಾನೇ ಅವನಲ್ಲಿ ತಂದೆಯ ಬಗ್ಗೆ ಕೇಳಬೇಕೆಂದು ಯೋಚಿಸುತ್ತಿದ್ದೆ. ತನ್ನ ಬದುಕಿನ ಕಷ್ಟ, ಸೋಲುಗಳಿಗೆಲ್ಲ ತಂದೆಯೇ ಕಾರಣ ಎಂದು ಇವನದು ಅಳಲು ಶುರುವಾಯಿತು. ಅವನ ತಂದೆ ತೀರಿಕೊಂಡು ಅದಾಗಲೇ 12 ವರ್ಷವಾಗಿತ್ತು. ಇತ್ತೀಚೆಗೆ ಅಷ್ಟು ಒಡನಾಟವಿಲ್ಲದಿದ್ದರೂ ಒಳ್ಳೆಯ ಸ್ನೇಹಿತ. ಅವನನ್ನು ಒಂದುಕ್ಷಣ ತಡೆದು ನಿಲ್ಲಿಸಬೇಕೆನ್ನಿಸಿತು.
ಆಗ ನೆನಪಾದದ್ದು ಈ ಕಥೆ. “ಮೈ ಫ್ರೆಂಡ್, ಈ ಕಥೆ ಹೇಳಿದ್ದಕ್ಕೆ ಕಾರಣ ನಿನಗೆ ಗೊತ್ತಾಗಿರಬೇಕು. ನಿನ್ನ ಅಪ್ಪ ತೀರಿಕೊಂಡು ದಶಕ ಕಳೆದಿದೆ. ಇನ್ನಾದರೂ ನೀನು ಅವರನ್ನು ಸಾಯಲಿಕ್ಕೆ ಬಿಡಬೇಕು. ಮತ್ತು ನೀನು ಬದುಕಲು ಶುರುಮಾಡು. ಅವರನ್ನು ನೀನು ಈ ಕ್ಷಣವೇ ಕ್ಷಮಿಸಿಬಿಡಬೇಕು. ತಕ್ಷಣ- ಇನ್ನೊಂದೇ ಒಂದು ಸೆಕೆಂಡ್ ತಡಮಾಡಬೇಕಿಲ್ಲ. ನಿನ್ನ ತಂದೆ ಕೆಟ್ಟವರು ಎಂದೇ ಇಟ್ಟುಕೊ ಳ್ಳೋಣ.
ನಿನ್ನ ಕ್ಷಮೆ ಅವರಿಗೆ ಬೇಕಾಗಿಲ್ಲ. ನೀನು ನಿನಗೋಸ್ಕರ ಅವರನ್ನು ಕ್ಷಮಿಸಬೇಕು. ಮತ್ತು ಇನ್ನು ಮೇಲೆ ಅವರ ಬಗ್ಗೆ ಯಾರ ಬಳಿಯೂ ಹೇಳಕೂಡದು. ಸ್ವಗತದಲ್ಲಿಯೂ ಹಳಿಯಕೂಡದು" ಎಂದು ಸ್ವಲ್ಪ ಗಟ್ಟಿಯಾಗಿಯೇ ಹೇಳಿಬಿಟ್ಟೆ. ಅದಾದ ನಂತರ ನಮ್ಮ ಮಾತುಕತೆಯ ಧಾಟಿ ಬದಲಾ ಯಿತು, ಮುಗಿಯಿತು. ಅದಾದ ಮೂರು ತಿಂಗಳ ನಂತರ ಸ್ನೇಹಿತ ಫೋನ್ ಮಾಡಿದ.
ತಂದೆಯನ್ನು ಕ್ಷಮಿಸಿಬಿಟ್ಟಿದ್ದೇನೆ ಎಂದ. ಅವನ ಸ್ವರದಂದು ಅಪರಿಮಿತ ಸಮಾಧಾನವಿತ್ತು. ಸುಮಾರು ಇಪ್ಪತ್ತು ನಿಮಿಷ ಅತ್ತು ನಿರಾಳವಾಗಿ ಫೋನ್ ಇಟ್ಟ. ನಮಗೆ ಯಾರೇ ಬೇಸರ, ಹಾನಿ ಉಂಟುಮಾಡಿದರೆಂದುಕೊಳ್ಳಿ, ನಮ್ಮೊಳಗೆ ಅವರ ಬಗ್ಗೆ ದ್ವೇಷವನ್ನು ಸೃಷ್ಟಿಸಿಕೊಳ್ಳುವುದು ಒಂದು ವಿಚಿತ್ರ ನಿರಾಳತೆಯನ್ನು ಹುಟ್ಟುಹಾಕುತ್ತದೆ.
ದ್ವೇಷಿಸುವುದು ಅವಶ್ಯಕವೆನಿಸುತ್ತದೆ. ಅಷ್ಟೇ ಅಲ್ಲ, ಹಾನಿಗೊಳಗಾದ ತಕ್ಷಣ ನಮ್ಮ ಸುತ್ತಲಿನವರು, ಹಿತೈಷಿಗಳು ಹಾನಿಯುಂಟುಮಾಡಿದವರ ಬಗ್ಗೆ ನಮ್ಮೊಳಗೆ ದ್ವೇಷವನ್ನು ನಿರೀಕ್ಷಿಸುತ್ತಾರೆ ಕೂಡ. ದ್ವೇಷಿಸುವುದೇ ಸರಿ ಎನ್ನುತ್ತಾರೆ, ಒಪ್ಪುತ್ತಾರೆ. ಅಷ್ಟಕ್ಕೇ ಸುಮ್ಮನಾಗುವುದಿಲ್ಲ, ಅವರೂ ಒಂದಿಷ್ಟು ಪುರಾವೆಗಳನ್ನು ಮುಂದಿಟ್ಟು ದ್ವೇಷವನ್ನು ಪೋಷಿಸುತ್ತಾರೆ ಕೂಡ. ಉತ್ತಮ ಸ್ನೇಹದ ನಿರೀಕ್ಷೆ ಅದು. ನಮ್ಮನ್ನು ಪ್ರೀತಿಸುವವರು ನಮ್ಮ ದ್ವೇಷವನ್ನು ಒಪ್ಪಬೇಕು.
ಆದರೆ ಹಗೆತನ, ದ್ವೇಷ ಯಾವತ್ತೂ ಆ ಇನ್ನೊಬ್ಬರಿಗೆ ಹಾನಿಯುಂಟು ಮಾಡುವುದಕ್ಕಿಂತ ನಮಗೇ ಹೆಚ್ಚು ಹಾನಿಮಾಡುತ್ತಿರುತ್ತದೆ. ನಮಗೆ ತೀರಾ ನೋವುಂಟಾದಾಗ, ಬೇಸರವಾದಾಗ ನಮ್ಮ ನೋವಿ ಗೆ ಕಾರಣ ನಾನಲ್ಲ, ಬದಲಿಗೆ ಇನ್ನೊಬ್ಬ ವ್ಯಕ್ತಿ ಎಂಬ ಕಾರಣದಿಂದ ನಾವು ಪ್ರತ್ಯೇಕವಾಗುವುದು ಒಂದಿಷ್ಟು ಸಮಾಧಾನ ಕೊಡುವುದು ಸುಳ್ಳಲ್ಲ. ಮಾನಸಿಕವಾಗಿ ಘಾಸಿಗೊಳಗಾದಾಗ ಮನಸ್ಸು ನಿಯಂತ್ರಣ ತಪ್ಪುವುದು, ಹೆದರುವುದು, ಇನ್ನೊಬ್ಬರನ್ನು ಶಪಿಸುವುದು ಇವೆಲ್ಲ ಆ ಕ್ಷಣದ ಮಾನ ಸಿಕ ಅವಶ್ಯಕತೆಗಳು.
ಅವು ಹುಟ್ಟುಹಾಕುವ ಗೊಂದಲಗಳು ನಮ್ಮ ಮನಸ್ಸು ನೋವಿನ ಮೇಲೆ ಕೇಂದ್ರೀಕೃತಗೊಂಡು ಖಿನ್ನತೆಗೊಳಗಾಗುವುದನ್ನು ತಪ್ಪಿಸುತ್ತವೆ. ನನ್ನ ಪರಿಚಯದವರೊಬ್ಬರಿದ್ದರು. ಅವರದು ಅವಿಭ ಜಿತ ಕೂಡು ಕುಟುಂಬ- ಸುಂದರ ಕುಟುಂಬ. ಅವರು ಆ ಮನೆಗೆ ಮದುವೆಯಾಗಿ ಬಂದ ಕೆಲವು ವರ್ಷಗಳ ನಂತರ ಅವರ ನಾದಿನಿ ಗಂಡನನ್ನು ಕಳೆದುಕೊಂಡರು ಮತ್ತು ಕಾರಣಾಂತರದಿಂದ ತಾಯಿಯ ಮನೆಗೆ ಬಂದು ನೆಲೆಸಿಬಿಟ್ಟರು.
ಅದು ಇವರಿಗೆ ಆಗಿಬರಲಿಲ್ಲ. ಮೊದಮೊದಲು ಆಪ್ತರಲ್ಲಿ ನಾದಿನಿಯ ಬಗ್ಗೆ ದೂರುತ್ತಿದ್ದರು. ಕ್ರಮೇಣ ಅವರ ಈ ಚಾಳಿ ಇನ್ನಷ್ಟು ವ್ಯಾಪಿಸಿತು. ಊರಲ್ಲಿ ಯಾರೇ ಸಿಕ್ಕರೂ ನಾದಿನಿಯ ಬಗ್ಗೆ ಒಂದಿಷ್ಟು ಕಂಪ್ಲೇಂಟ್ ಮಾಡಿಯೇ ಮಾತು ಮುಗಿಸುತ್ತಿದ್ದುದು. ಅವರಿಗೆ ಒಂದಿಷ್ಟು ಸಮಾಧಾನಿ ಸುವ ಮಾತನ್ನು ಎಲ್ಲರೂ ಹೇಳುತ್ತಿದ್ದರು. ಕ್ರಮೇಣ ಅವರಿಗೆ ಅದೊಂದು ಮಾನಸಿಕ ರೋಗ ದಂತಾಗಿಹೋಯ್ತು.
ಇವರು ದೂರ ಬರುತ್ತಿದ್ದರೆ ಊರವರು ಆಡಿಕೊಳ್ಳಲು ಶುರುಮಾಡಿದರು. ಕೆಲವರು ‘ಅಯ್ಯೋ ಇವಳದು ಅದೇ ನಾದಿನಿಯ ಕಥೆ’ ಎಂದು ಜಾರಿಕೊಳ್ಳುತ್ತಿದ್ದರು. ಕೊನೆಕೊನೆಗೆ ಅವರು ಮಾತನ್ನು ಆರಂಭಿಸುತ್ತಿದ್ದುದು ಮತ್ತು ಮುಗಿಸುತ್ತಿದ್ದುದು ನಾದಿನಿಯಿಂದ. ಅವರು ಸಾಯುವವರೆಗೂ ಬದಲಾಗಲೇ ಇಲ್ಲ. ನಿರಂತರ ತಮ್ಮ ದೂರಿನ ಕಥೆಯೊಂದಿಗೇ ಬದುಕು ಕಳೆದುಬಿಟ್ಟರು. ಅವರ ಈ ನಾದಿನಿಯೆಡೆಗಿನ ಅಸಹನೆ, ದ್ವೇಷ ಅಕ್ಷರಶಃ ಅವರ ಜೀವನವನ್ನು ನುಂಗಿಹಾಕಿತ್ತು- ಅವರಿಗೇ ಅರಿವಾಗದಂತೆ.
ಹಾನಿಯಾದಾಗ ಅದಕ್ಕೊಂದು ಕಥೆಯನ್ನು ಹೆಣೆದುಕೊಳ್ಳುವುದು, ನಿರೂಪಣೆ ಕೊಟ್ಟು ತಪ್ಪು ಇನ್ನೊಬ್ಬರದು ಎನ್ನುವುದು ತೀರಾ ಅವಶ್ಯಕ. ಅದು ಮನಸ್ಸಿಗೆ ಸುಧಾರಿಸಿಕೊಳ್ಳಲು ಒಂದಿಷ್ಟು ಸಮಯಾವಕಾಶವನ್ನು ಕಲ್ಪಿಸುತ್ತದೆ. ನಮ್ಮ ಯಾವುದೇ ದೂರಿನ ಕಥೆಯಿರಲಿ, ಅದು ನಮ್ಮೆದು ರಿಗಿನ ಸ್ಥಿತಿಯನ್ನು ಮನದಟ್ಟಾಗಿಸಿಕೊಳ್ಳಲು, ಅರಿವಿಗೆ ತಂದುಕೊಳ್ಳಲು ನಾವೇ ನಮಗೆ ಹೇಳಿ ಕೊಳ್ಳುವ ಕಥೆ.
ಆ ಕಥೆಯನ್ನು ಆಪ್ತರೆದುರಿಗೆ ಹೇಳುವುದು ಎಂದರೆ ಅದನ್ನು ದೃಢೀಕರಿಸಿಕೊಳ್ಳುವುದು. ಅಂಥ ಕಥೆಗೆ ಆಪ್ತರಾದವರು ಸಕಾರಾತ್ಮಕವಾಗಿಯೇ ಸಮಾಧಾನ ಮಾಡುತ್ತಾರೆ. ಇದು ಅಲ್ಪಕಾಲವಷ್ಟೇ ಚಂದ. ಆದರೆ ನಮ್ಮ ದೂರಿನ ಕಥೆಗೆ, ದ್ವೇಷಕ್ಕೆ, ಹಗೆತನಕ್ಕೆ ಒಂದು expiry date ಇರಬೇಕಾಗುತ್ತದೆ.
ಅವುಗಳೇ ನಿತ್ಯಕರ್ಮವಾಗುವಂತಿಲ್ಲ. ಯಾವುದೇ ದ್ವೇಷ, ಅಸಹನೆ, ಬೇಸರ, ಹಗೆತನ ಬೆಳಗಿನ ಜಾವದ ಅರೆನಿದ್ರೆಯಲ್ಲಿಯೂ ನೆನಪಾಗಿ ಕಾಡುತ್ತದೆ ಎಂದರೆ ಅದು ನಮ್ಮನ್ನು ತಿನ್ನುತ್ತಿದೆ ಎಂದೇ ಅರ್ಥ. ಅದು ನಮಗೆ ನಾವೇ ಕೊಟ್ಟುಕೊಳ್ಳುವ ಶಿಕ್ಷೆಯೇ ವಿನಾ ನಾವು ದ್ವೇಷಿಸುವ ಇನ್ನೊಬ್ಬನಿಗೆ ಅದರಿಂದ ಎಂಟಾಣೆ ಹಾನಿಯೂ ಇಲ್ಲ.
ಸಾಮಾನ್ಯವಾಗಿ ಇಂಥ ಬೇಸರಗಳು ಅತಿಯಾಗಿ ಕಾಡುವುದು ಸ್ನೇಹಿತರ ಅಥವಾ ಸಂಬಂಽಕರ ನಡುವೆ. ಅದಕ್ಕೊಂದು ಕಾರಣವಿದೆ. ಸಾಮಾನ್ಯವಾಗಿ ಯಾವುದೇ ಸಂಬಂಧವಿರಲಿ, ಅಂದಿಷ್ಟು ಬಯಕೆಗಳಿರುತ್ತವೆ, ನಿರೀಕ್ಷೆಗಳಿರುತ್ತವೆ. ತನ್ನ ಹೆಂಡತಿಯಾದವಳು, ಗಂಡನಾದವನು ಹೀಗಿರಬೇಕು, ಸ್ನೇಹಿತನಾದವನು, ಅತ್ತೆ, ಮಾವ, ಭಾವ, ಮೈದುನ ಈ ರೀತಿ ಇರಬೇಕು ಹೀಗೆ ತರಹೇವಾರಿ ಸಂಬಂಧಗಳೆಂದರೆ ಹೀಗೆಯೇ ಇರಬೇಕು ಎಂದು ಬಯಸುವುದು ಸಾಮಾನ್ಯ.
ಬಯಕೆಗಳು ತಪ್ಪು ಎಂದು ಬುದ್ಧನಂತಾಗುವುದು ಸಾಧ್ಯವಿಲ್ಲದ ಮಾತು. ಅಂತೆಯೇ ಪ್ರತಿಯೊಬ್ಬರ ಸಂಬಂಧಗಳೆಡೆಗಿನ ಆದರ್ಶ ವಿಭಿನ್ನ, ಅಂತೆಯೇ ಬಯಕೆ ಕೂಡ. ಆದರೆ ಸಂಬಂಧಗಳಲ್ಲಿ ಕಾಲ ಕಳೆದಂತೆ ಬಯಕೆಗಳು ಬೇಕುಗಳಾಗಿಬಿಡುತ್ತವೆ. ಗಂಡನಾದವನು ಹೀಗೆಯೇ ಇರಬೇಕು, ಮಗಳಾ ದವಳು ಹೀಗೆಯೇ ಇರಬೇಕು, ಅಳಿಯನಾದವನು ಈ ರೀತಿಯೇ ಇರಬೇಕು ಇತ್ಯಾದಿ.
ಅಲ್ಲಿಯೇ ಸಂಬಂಧಗಳು ಮುಷ್ಕಿಲ್ ದಾರಿಯನ್ನು ಹಿಡಿಯುವುದು. ಬಯಕೆಗಳು ಬೇಕುಗಳಾದಾಗಲೇ ಸಂಬಂಧಗಳು ಹಳ್ಳ ಹಿಡಿಯುವುದು, ನೋವಾಗುವುದು, ನೋವು ದ್ವೇಷದವರೆಗೂ ಹೋಗಿ ಮುಟ್ಟು ವುದು. ಬಹುತೇಕ ಅತ್ಯುತ್ತಮ ಸ್ನೇಹ, ಸಂಬಂಧಗಳು ಹಾಳಾಗಿ ದ್ವೇಷಕ್ಕೆ ತಿರುಗುವುದೇ ಹೀಗೆ, ಬಯಕೆಗಳು ನಿರೀಕ್ಷೆಗಳಾದಾಗ.
ನನ್ನದೊಂದು ಅನುಭವ ಹಂಚಿಕೊಳ್ಳುತ್ತೇನೆ. ಆತ ನನ್ನ ಆಪ್ತ ಸ್ನೇಹಿತರುಗಳಲ್ಲಿ ಒಬ್ಬ. ಅದೆಷ್ಟೋ ವರ್ಷಗಳ ಕಾಲ ನಮ್ಮಿಬ್ಬರ ಸ್ನೇಹ ಗಳಸ್ಯ-ಕಂಠಸ್ಯ. ಕೆಲ ವರ್ಷಗಳ ಹಿಂದೆ ಅವನಿಗೆ ಮದುವೆ ಯಾಯಿತು. ಅದಾದ ನಂತರ ನಮ್ಮಿಬ್ಬರ ಮಾತುಕತೆ ಕ್ರಮೇಣ ನಿಂತುಬಿಟ್ಟಿತು. ನನಗೆ ಇನ್ನೂ ಸಕಾರಣ ತಿಳಿದಿಲ್ಲ. ತಿಳಿಯಲು ಅವಕಾಶವೇ ಸಿಕ್ಕಿಲ್ಲ. ನಾನು ಫೋನ್ ಮಾಡಿದರೆ ಸ್ವೀಕರಿಸುತ್ತಿರ ಲಿಲ್ಲ, ಫೋನ್ ಮಾಡುವುದನ್ನು ಕೂಡ ನಿಲ್ಲಿಸಿಬಿಟ್ಟ. ಸಂಬಂಧ ಒತ್ತಾಯವೆನಿಸಬಾರದು ಎಂದು ನಾನೂ ಕೆಲ ಪ್ರಯತ್ನಗಳ ನಂತರ ಸುಮ್ಮನಾದೆ.
ಕೆಲವು ತಿಂಗಳ ಹಿಂದೆ ಅವನ ಮನೆಯಂದು ದೊಡ್ಡ ಶುಭಕಾರ್ಯ ನಡೆಯಿತು. ನಮ್ಮಿಬ್ಬರ ಸಾಮಾನ್ಯ ಸ್ನೇಹಿತ ನನಗೆ ಫೋನ್ ಮಾಡಿ ಆ ಕಾರ್ಯಕ್ರಮದ ಬಗ್ಗೆ ಹೇಳಿದ. “ನೀನು ಅವನಿಗೆ ಅದೆಷ್ಟು ಸಹಾಯ ಮಾಡಿದ್ದೀಯಾ. ಇಂಥ ಖುಷಿಯ ಸಮಯದಲ್ಲಿ ಫಾರ್ಮಾಲಿಟಿಗೂ ನಿನಗೆ ಒಂದು ಕರೆ ಮಾಡಿ ಆಹ್ವಾನಿಸಲಿಲ್ಲವಲ್ಲ" ಎಂದ.
ಆ ಕ್ಷಣಕ್ಕೆ ಹೌದೆನ್ನಿಸಿತು, ಬೇಸರವಾಯಿತು. ಏಕೆಂದರೆ ನಮ್ಮಿಬ್ಬರ ಸ್ನೇಹ ಜೀವ ಕಳೆದುಕೊಂಡಿ ದ್ದರೂ ನಿರೀಕ್ಷೆಗಳಾದ ಬಯಕೆಗಳು ನನ್ನಲ್ಲಿ ಇನ್ನೂ ಜೀವಂತವಿದ್ದವು. ಅದು ತಾರ್ಕಿಕ ಅಂತ್ಯ ಕಂಡ ಸಂಬಂಧವಲ್ಲ. ಈ ರೀತಿ, ಅದೆಷ್ಟೋ ಸಂಬಂಧಗಳಲ್ಲಿ ನಿರೀಕ್ಷೆಗಳು ಆಲೂಗಡ್ಡೆ ಚೀಲವಾಗಿ, ಬೆನ್ನ ಭಾರವಾಗಿಬಿಡುವುದಿದೆ.
ನಾವದನ್ನು ಕೊಳೆತಮೇಲೂ, ಎಲ್ಲ ದುರ್ನಾತಗಳನ್ನು ಸಹಿಸಿಕೊಂಡು ಬೆನ್ನಮೇಲೆ ಹೊತ್ತೊಯ್ಯು ತ್ತಲೇ ಇರುತ್ತೇವೆ. ಇತಿಹಾಸದ ಅದೆಷ್ಟೋ ಕಲಹ, ಯುದ್ಧಗಳು ಚಿಕ್ಕ ಚಿಲ್ಲರೆ ಘಟನೆ, ದ್ವೇಷವೊಂದು ಪೋಷಿಸಲ್ಪಟ್ಟು ಹೆಮ್ಮರವಾದವುಗಳು. ಮಹಾಭಾರತ ಯುದ್ಧ ನಡೆದದ್ದೇಕೆ ಹೇಳಿ? ದ್ರೌಪದಿಯು ದುರ್ಯೋಧನನನ್ನು ‘ಕುರುಡನ ಮಗ ಕುರುಡ’ ಎಂದು ಹೀಯಾಳಿಸಿದ್ದು ಏನೆಲ್ಲ ರೂಪ ಪಡೆದುಕೊಂಡಿತು ನೋಡಿ.
ನಮ್ಮ ಸಮಾಜದಲ್ಲಿ ಇಂಥ ಚಿಲ್ಲರೆ ವಿಷಯದಿಂದಾದ ದ್ವೇಷ, ಹಗೆತನ ತಲೆತಲಾಂತರ ಮುಂದು ವರಿಯುವುದಿದೆ. ಅದೆಷ್ಟೋ ಬಾರಿ ಕಾರಣ ಸತ್ತಿದ್ದರೂ ದ್ವೇಷ ಬದುಕಿರುತ್ತದೆ. ನಿಮ್ಮ ಶತ್ರುಗಳನ್ನು, ನೀವು ದ್ವೇಷಿಸುವವರನ್ನು ಕ್ಷಮಿಸಿಬಿಡಿ ಎಂದು ಬುದ್ಧಿವಾದ ಹೇಳುವವರು ಸಾಮಾನ್ಯ. ಆದರೆ ಕ್ಷಮಿಸುವುದು ಎಂದರೆ ಏನು? ಹೇಗೆ? ಕ್ಷಮೆ ಎಂದರೆ ಸಂಬಂಧವನ್ನು ಮರುಸೃಷ್ಟಿಸಿಕೊಳ್ಳುವುದು ಎಂದು ತಪ್ಪರ್ಥೈಸಿಕೊಳ್ಳುವುದು ಸಾಮಾನ್ಯ.
ಆದರೆ ಕ್ಷಮಿಸುವುದೆಂದರೆ ಮತ್ತೆ ಮೊದಲಿಂದಾಗುವುದಲ್ಲ. ಹೆಗಲ ಮೇಲೆ ಕೈ ಇಟ್ಟು ನಡೆಯು ವುದೂ ಅಲ್ಲ. ಸಂಬಂಧಗಳು ಪುನರ್ಜನ್ಮ ಪಡೆದರೆ ಒಳ್ಳೆಯದು- ಆದರೆ ಸಾಧ್ಯತೆ ತೀರಾ ಕಡಿಮೆ. ಹಳಸಿದ ಸಂಬಂಧವನ್ನು ಭೂತಕ್ಕೆ ಮರಳಿಸುವುದು ಕ್ಷಮೆಯ ಸಾರ್ಥಕ್ಯವಲ್ಲ. ‘ಕ್ಷಮಾ’ ಎಂದರೆ ಕ್ಷಮಿಸಿ ತಲೆಯಿಂದ ಭಾರ ಇಳಿಸಿ ಪಕ್ಕಕ್ಕಿಡುವುದು. ಹಾನಿಯನ್ನು ನೆನಪಿಸಿಕೊಂಡು ಇನ್ನಷ್ಟು ಕೆರೆದು ಗಾಯಮಾಡಿಕೊಳ್ಳುವುದು ಕ್ಷಮೆಯಾಗುವುದಿಲ್ಲ.
ಕೆಲವೊಮ್ಮೆ ನಮ್ಮ ಇತಿಹಾಸದ ಕೆಲ ಬಾಗಿಲುಗಳನ್ನು ಶಾಶ್ವತವಾಗಿ ಮುಚ್ಚಿಬಿಡುವುದು ಒಳ್ಳೆಯದು. ಅದು ಬಹಳಷ್ಟು ಬಾರಿ ನಮ್ಮ ಅವಶ್ಯಕತೆಯಾಗಿರುತ್ತದೆ. ದ್ವೇಷ, ಹಗೆತನ, ಮನಸ್ತಾಪ ಇವೆಲ್ಲ ಒಂದು ಹಂತ ಮೀರಿದ ನಂತರ ನಮ್ಮ ನಮ್ಮ ದಾರಿಯಲ್ಲಿ ಹೊರಡುವುದು ಕೂಡ ಕ್ಷಮೆಯ ಪ್ರಕ್ರಿಯೆಯೇ. ಕೆಲವು ಭಾರಗಳನ್ನು ಯಾವತ್ತೋ ಒಂದು ದಿನ ಇಳಿಸುತ್ತೇನೆ ಎಂದರೆ ಆ ದಿನ ಬರುವುದೇ ಇಲ್ಲ.
ಭಾರ ನಮ್ಮ ಭಾರದ ಜತೆಯಾಗಿಬಿಡುತ್ತದೆ. ಸಾಕ್ರೆಟಿಸ್ ಒಮ್ಮೆ ಖಾಲಿ ಗಾಜಿನ ಡಬ್ಬಿಯನ್ನು ಹಿಡಿದು ನದಿಯತ್ತ ಹೊರಟಿದ್ದ. ಅದನ್ನು ಕಂಡ ಅವನ ಸ್ನೇಹಿತ ಏನೆಂದು ವಿಚಾರಿಸಿದ. ಸಾಕ್ರೆಟಿಸ್ “ನನ್ನ ಲ್ಲಿನ ದ್ವೇಷ, ಅಸಹನೆ, ಹಗೆತನ ಯಾವಾಗೆಲ್ಲಾ ಹುಟ್ಟುತ್ತದೆಯೋ, ಆಗೆಲ್ಲ ನಾನು ಅದನ್ನು ಈ ಗಾಜಿನ ಡಬ್ಬಿಯಲ್ಲಿ ತುಂಬಿಸಿಡುತ್ತೇನೆ. ನನ್ನ ಕಷ್ಟಗಳನ್ನೂ ಇದರಲ್ಲಿಯೇ ತುಂಬಿಸುತ್ತೇನೆ. ಡಬ್ಬಿ ತುಂಬಿದಾಗ ನದಿಗೆ ತಂದು ಬಿಟ್ಟುಬಿಡುತ್ತೇನೆ.
ಈಗ ಡಬ್ಬಿ ತುಂಬಿದೆ- ನದಿಗೆ ಬಿಡಲು ಹೊರಟಿದ್ದೇನೆ" ಎಂದ. ಅದಕ್ಕೆ ಸ್ನೇಹಿತ “ಅರೆ, ಆದರೆ ನಿನ್ನ ಗಾಜಿನ ಡಬ್ಬಿ ಖಾಲಿಯಿದೆಯಲ್ಲ. ಅದರಲ್ಲಿ ಏನೂ ಇಲ್ಲವಲ್ಲ?" ಎಂದು ಪ್ರಶ್ನಿಸಿದ. ಅದಕ್ಕೆ ಸಾಕ್ರೆಟಿಸ್ “ನಾನು ಕೂಡ ಅದನ್ನೇ ಹೇಳಲು ಹೊರಟಿದ್ದು. ದ್ವೇಷ, ಹಗೆತನ ಇವ್ಯಾವುದೂ ಅಸಲಿಗೆ ನಿಜವೇ ಅಲ್ಲ. ಅದನ್ನು ನಾವಷ್ಟೇ ನಿಜ ಎಂದು ನಂಬಿಕೊಂಡಿರುತ್ತೇವೆ.
ಯಾವ ದಿನ ಅದನ್ನು ಆಲಿಂಗಿಸುವುದನ್ನು ಬಿಟ್ಟು ಬದಿಗಿಡಲು, ಎಸೆಯಲು ಮುಂದಾಗು ತ್ತೇವೆಯೋ ಆಗ ಡಬ್ಬಿಯಲ್ಲಿ ಏನೆಂದರೆ ಏನೂ ಇಲ್ಲ, ಎಲ್ಲವೂ ಖಾಲಿ ಎಂಬ ಅರಿವು ನಮ್ಮದಾಗು ತ್ತದೆ" ಎಂದ. ಹೀಗೊಂದು ಮಾತಿದೆ: Never let someone stay in your head rent free . ಯಾರಿಗೂ ನಿಮ್ಮ ತಲೆಯಲ್ಲಿ ಬಾಡಿಗೆ ಕೊಡದೆ ಬಹುಕಾಲ ಉಳಿಯಲು ಬಿಡಬೇಡಿ!! ಹೇಳಬೇಕಿ ದ್ದದ್ದು ಇಷ್ಟೆ. ಚೀಯರ್ಸ್...