ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಫ್ರಾಂಜ್ ಕಾಫ್ಕಾ ಮತ್ತು ಒಂದು ಗೊಂಬೆಯ ಕಥೆ

1923ರಲ್ಲಿ, ತಾನು ಸಾಯುವುದಕ್ಕೆ ಕೇವಲ ಒಂದು ವರ್ಷ ಮೊದಲು, ಕಾಫ್ಕಾ ಬರ್ಲಿನ್‌ನ ಸ್ಟೆಗ್ಲಿಟ್ಜ್ ಪಾರ್ಕ್‌ನಲ್ಲಿ ತನ್ನ ಗೆಳತಿ ಡೋರಾ ಡೈಮಂಟ್ ಜತೆ ನಡೆಯುತ್ತಿದ್ದ. ಆಗ ಅವನಿಗೆ ಅಳುತ್ತಿದ್ದ ಸಣ್ಣ ಹುಡುಗಿ ಕಂಡಳು. ವಿಚಾರಿಸಿದಾಗ, ಅವಳು ತನ್ನ ಪ್ರೀತಿಯ ಗೊಂಬೆ ಯನ್ನು ಕಳೆದುಕೊಂಡಿದ್ದಾಳೆಂದು ತಿಳಿಯಿತು. ‌

ಇದೇ ಅಂತರಂಗ ಸುದ್ದಿ

ಫ್ರಾಂಜ್ ಕಾಫ್ಕಾ ಮತ್ತು ಆ ಪುಟ್ಟ ಬಾಲಕಿಯ ಕಥೆ ಸಾಹಿತ್ಯ ಚರಿತ್ರೆಯ ಅತ್ಯಂತ ಆರ್ದ್ರ ವಾದ ಮತ್ತು ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನು ಸಾರುವವಂಥದ್ದು. ಕಾಫ್ಕಾ ನಮಗೆ ನೆನಪಾಗುವುದು ‘ಮೆಟಾಮಾ-ಸಿಸ್’ನಂಥ ಗಂಭೀರ ಅಥವಾ ಅತಿ ವಾಸ್ತವಿಕ ಬರಹಗಳಿಂದ. ಆದರೆ ಈ ಗೊಂಬೆಯ ಕಥೆ ಅವರೊಳಗಿದ್ದ ಅಪಾರ ಕಾರುಣ್ಯವನ್ನು ತೋರಿಸುತ್ತದೆ.

ಅಂದ ಹಾಗೆ ‘ಫ್ರಾಂಜ್ ಕಾಫ್ಕಾ ಮತ್ತು ಒಂದು ಗೊಂಬೆಯ ಕಥೆ’ಯನ್ನು ಕೇಳಿದ್ದೀರಾ? ಇದು ವಿಶ್ವ ಸಾಹಿತ್ಯದ ಅತ್ಯಂತ ಹೃದಯಸ್ಪರ್ಶಿ ಮತ್ತು ಮಾನವೀಯ ಸಂವೇದನೆಯ ಕಥೆಗಳಲ್ಲಿ ಒಂದು. ಇದು ಕಾಫ್ಕಾ ಜೀವನದ ಕೊನೆಯ ದಿನಗಳಲ್ಲಿ ನಡೆದ ಘಟನೆ. ಒಬ್ಬ ಲೇಖಕ ತನ್ನ ಕಲ್ಪನಾಶಕ್ತಿಯ ಮೂಲಕ ಮಗುವಿನ ಮುರಿದ ಹೃದಯವನ್ನು ಹೇಗೆ ಸರಿಪಡಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ.

1923ರಲ್ಲಿ, ತಾನು ಸಾಯುವುದಕ್ಕೆ ಕೇವಲ ಒಂದು ವರ್ಷ ಮೊದಲು, ಕಾಫ್ಕಾ ಬರ್ಲಿನ್‌ನ ಸ್ಟೆಗ್ಲಿಟ್ಜ್ ಪಾರ್ಕ್‌ನಲ್ಲಿ ತನ್ನ ಗೆಳತಿ ಡೋರಾ ಡೈಮಂಟ್ ಜತೆ ನಡೆಯುತ್ತಿದ್ದ. ಆಗ ಅವನಿಗೆ ಅಳುತ್ತಿದ್ದ ಸಣ್ಣ ಹುಡುಗಿ ಕಂಡಳು. ವಿಚಾರಿಸಿದಾಗ, ಅವಳು ತನ್ನ ಪ್ರೀತಿಯ ಗೊಂಬೆ ಯನ್ನು ಕಳೆದುಕೊಂಡಿದ್ದಾಳೆಂದು ತಿಳಿಯಿತು. ‌

ಸಾಮಾನ್ಯವಾಗಿ ಯಾರಾದರೂ ಅಳುವ ಮಗುವನ್ನು ಸಮಾಧಾನಪಡಿಸಲು ‘ಬೇರೆ ಗೊಂಬೆ ಕೊಡಿಸುತ್ತೇನೆ’ ಅಂತಾರೆ. ಆದರೆ ಕಾಫ್ಕಾ ಹಾಗೆ ಮಾಡಲಿಲ್ಲ. ಆತ ಮಗುವಿನ ಕಣ್ಣೊರೆಸಿ, ‘ನಿನ್ನ ಗೊಂಬೆ ಕಳೆದುಹೋಗಿಲ್ಲ, ಅದು ಪ್ರವಾಸಕ್ಕೆ ಹೋಗಿದೆ. ಅದು ನನಗೆ ಪತ್ರ ಬರೆದಿದೆ, ನಾನು ನಾಳೆ ಆ ಪತ್ರವನ್ನು ನಿನಗೆ ತಂದು ತೋರಿಸುತ್ತೇನೆ’ ಎಂದ.

ಇದನ್ನೂ ಓದಿ:Vishweshwar Bhat Column: ಮಂಕಿ ಶೋಲ್ಡರ್‌ ಕುಡಿದಿದ್ದೀರಾ ಅಂತ ಕೇಳಿ, ನಂತರ ಏನಂದ್ರು ಹೇಳಿ !

ಕಾಫ್ಕಾ ನಂಥ ಜನಪ್ರಿಯ ಹಾಗೂ ಗಂಭೀರ ಲೇಖಕ, ಮಗುವಿನ ಕಲ್ಪನಾ ಲೋಕವನ್ನು ಉಳಿಸಲು ಈ ಸಣ್ಣ ಸುಳ್ಳನ್ನು ಹೇಳಿದ. ಮರು ದಿನದಿಂದ ಕಾಫ್ಕಾ ಆ ಮಗುವಿಗೆ ಗೊಂಬೆಯ ಪರವಾಗಿ ಪತ್ರಗಳನ್ನು ಬರೆದು ತರಲು ಪ್ರಾರಂಭಿಸಿದ. ಈ ಕೆಲಸವನ್ನು ಆತ ತನ್ನ ಕಾದಂಬರಿ ಬರೆಯುವಷ್ಟೇ ಗಂಭೀರವಾಗಿ ತೆಗೆದುಕೊಂಡ.

‘ದಯವಿಟ್ಟು ನನಗಾಗಿ ಅಳಬೇಡ, ನಾನು ಪ್ರಪಂಚವನ್ನು ನೋಡಲು ಹೊರಟಿದ್ದೇನೆ. ಇಲ್ಲಿನ ಅನುಭವಗಳನ್ನು ನಿನಗೆ ಪತ್ರದ ಮೂಲಕ ತಿಳಿಸುತ್ತೇನೆ’ ಎಂದು ಗೊಂಬೆ ಬರೆದಂತೆ ಕಾಫ್ಕಾ ಓದಿ ಹೇಳುತ್ತಿದ್ದ. ಸುಮಾರು ಮೂರು ವಾರಗಳ ಕಾಲ ಕಾಫ್ಕಾ ಪ್ರತಿದಿನ ಪಾರ್ಕ್‌ಗೆ ಬಂದು ಹೊಸ ಹೊಸ ಪತ್ರಗಳನ್ನು ಓದುತ್ತಿದ್ದ. ಗೊಂಬೆಯು ಪ್ಯಾರಿಸ್‌ಗೆ ಹೋಗಿರುವುದು, ಅಲ್ಲಿನ ಫ್ಯಾಶನ್, ಲಂಡನ್‌ನ ಪ್ರಯಾಣ, ಸಮುದ್ರದ ಹಾದಿ - ಹೀಗೆ ಗೊಂಬೆಯ ಸಾಹಸ ಗಳನ್ನು ವಿವರಿಸುತ್ತಾ ಮಗುವಿನ ದುಃಖವನ್ನು ಕುತೂಹಲವನ್ನಾಗಿ ಬದಲಿಸಿದ.

ಮಗು ಪತ್ರ ಎಲ್ಲಿದೆ ಎಂದು ಕೇಳಿದಾಗ, ‘ಅದನ್ನು ಮನೆಯಲ್ಲಿ ಮರೆತು ಬಂದಿದ್ದೇನೆ, ನಾಳೆ ತಂದು ಕೊಡುತ್ತೇನೆ’ ಎಂದು ಹೇಳುತ್ತಿದ್ದ. ಈಗ ಗೊಂಬೆ ಎಲ್ಲಿದೆ? ಯಾವ ದೇಶದಲ್ಲಿದೆ? ಅಲ್ಲಿ ಏನು ಮಾಡುತ್ತಿದೆ? ಎಂಬುದನ್ನು ವಿವರಿಸುತ್ತಿದ್ದ. ಪತ್ರಗಳಲ್ಲಿ ಗೊಂಬೆ ತಾನು ಹೇಗೆ ಸ್ವತಂತ್ರವಾಗಿ ಬದುಕುತ್ತಿದ್ದೇನೆ ಮತ್ತು ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ ಎಂದು ಬರೆಯುತ್ತಿತ್ತು.

ಕಾಫ್ಕಾ ಆ ಸಮಯದಲ್ಲಿ ಕ್ಷಯರೋಗದಿಂದ ಬಳಲುತ್ತಿದ್ದ ಮತ್ತು ತನ್ನ ಜೀವನದ ಕೊನೆ ಯ ದಿನಗಳಲ್ಲಿದ್ದ. ತನಗೆ ಸಾವು ಹತ್ತಿರವಾಗುತ್ತಿದೆ ಎಂದು ಕಾಫ್ಕಾʼಗೆ ಅನಿಸಲಾ ರಂಭಿಸಿತು. ಆಗ ಈ ಕಥೆಗೆ ಒಂದು ಸುಂದರ ಅಂತ್ಯ ನೀಡಲು ನಿರ್ಧರಿಸಿದ. ಆತ ಮಗುವಿಗೆ ಒಂದು ಹೊಸ ಗೊಂಬೆಯನ್ನು ತಂದುಕೊಟ್ಟ. ಇದು ನನ್ನ ಗೊಂಬೆಯಂತೆ ಕಾಣುತ್ತಿಲ್ಲ ವಲ್ಲ? ಎಂದು ಮಗು ಹೇಳಿತು.

abe; ok

ಅದಕ್ಕೆ ಲಗತ್ತಿಸಲಾದ ಪತ್ರದಲ್ಲಿ, ನನ್ನ ಪ್ರವಾಸಗಳು ನನ್ನನ್ನು ಬದಲಿಸಿವೆ’ ಎಂದು ಬರೆಯ ಲಾಗಿತ್ತು. ಮಗು ಆ ಹೊಸ ಗೊಂಬೆಯನ್ನು ಸಂತೋಷದಿಂದ ಸ್ವೀಕರಿಸಿತು. ಕೊನೆಯಲ್ಲಿ ಆ ಗೊಂಬೆಗೆ ಮದುವೆಯಾಯಿತು ಎಂಬ ಸಬೂಬು ನೀಡಿ ಕಾಫ್ಕಾ ಆ ಪತ್ರಗಳ ಸರಣಿಯನ್ನು ಮುಗಿಸಿದ.

ಅಂದರೆ, ಬದಲಾವಣೆ ಅನಿವಾರ್ಯ, ಬೆಳೆದಂತೆ ಹಳೆಯದನ್ನು ಬಿಟ್ಟು ಮುಂದೆ ಹೋಗ ಬೇಕು’ ಎಂಬ ಸಂದೇಶವನ್ನು ಆ ಮಗುವಿಗೆ ಮನವರಿಕೆ ಮಾಡಿಕೊಟ್ಟ. ವರ್ಷಗಳ ನಂತರ, ಆ ಹುಡುಗಿ ದೊಡ್ಡವಳಾದಾಗ ಆ ಗೊಂಬೆಯೊಳಗೆ ಅಡಗಿಸಿಟ್ಟಿದ್ದ ಒಂದು ಸಣ್ಣ ಚೀಟಿ ಅವಳಿಗೆ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು - ‘ನೀನು ಪ್ರೀತಿಸುವ ಪ್ರತಿಯೊಂದೂ ಒಂದು ದಿನ ಕಳೆದುಹೋಗಬಹುದು, ಆದರೆ ಕೊನೆಯಲ್ಲಿ ಪ್ರೀತಿಯು ಬೇರೆ ರೂಪದಲ್ಲಿ ನಿನ್ನನ್ನು ಹುಡುಕಿಕೊಂಡು ಬರುತ್ತದೆ.’

ಇಲ್ಲಿಗೆ ಕಥೆ ಮುಗಿಯುತ್ತದೆ.

ಹಾಗಾದರೆ ಈ ಕಥೆಯ ಮಹತ್ವವೇನು? ಈ ಘಟನೆಯು ಕೇವಲ ಒಂದು ಕಥೆಯಲ್ಲ, ಅದು ಜೀವನದ ದೊಡ್ಡ ಸತ್ಯವನ್ನು ಸಾರುತ್ತದೆ - ಕಳೆದುಹೋದ ವಸ್ತುವಿಗಾಗಿ ಅಳುವ ಬದಲು, ಅದರ ನೆನಪುಗಳನ್ನು ಸುಂದರವಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಇದು ಕಲಿಸು ತ್ತದೆ. ಒಬ್ಬ ಬರಹಗಾರ ಕೇವಲ ಕಾಗದದ ಮೇಲೆ ಪದಗಳನ್ನು ಬರೆಯುವುದಿಲ್ಲ, ಬದಲಿಗೆ ಒಬ್ಬರ ಜೀವನದ ಕತ್ತಲೆಯನ್ನು ಹೋಗಲಾಡಿಸಬಲ್ಲ. ನಾವು ಪ್ರೀತಿಸುವ ವ್ಯಕ್ತಿಗಳು ಅಥವಾ ವಸ್ತುಗಳು ಬದಲಾಗಬಹುದು, ಆದರೆ ಆ ಪ್ರೀತಿಯ ಭಾವನೆ ಮಾತ್ರ ಶಾಶ್ವತ.

ಜೀವನದಲ್ಲಿ ನಷ್ಟ ಎನ್ನುವುದು ಅನಿವಾರ್ಯ, ಆದರೆ ಆ ನಷ್ಟವನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಮತ್ತು ಪ್ರೀತಿಯನ್ನು ಹೊಸ ರೂಪದಲ್ಲಿ ಹೇಗೆ ಕಾಣುತ್ತೇವೆ ಎಂಬುದೇ ಈ ಕಥೆಯ ತಿರುಳು. ಫ್ರಾಂಜ್ ಕಾಫ್ಕಾನ ಈ ಗೊಂಬೆಯ ಪತ್ರಗಳು ಇಂದಿಗೂ ಪತ್ತೆಯಾಗಿಲ್ಲ. ಡೋರಾ ಡೈಮಂಟ್ ಅವಳ ನೆನಪುಗಳ ಮೂಲಕ ಮಾತ್ರ ಈ ಕಥೆ ಜಗತ್ತಿಗೆ ತಿಳಿದಿದೆ.

ಇದು ಸಾಹಿತ್ಯ ಲೋಕದ ಅತ್ಯಂತ ಸುಂದರವಾದ ಕಳೆದುಹೋದ ನಿಧಿ’ ಎನ್ನಬಹುದು. ಜೀವನದಲ್ಲಿ ಏನನ್ನಾದರೂ ಕಳೆದುಕೊಂಡಾಗ ಈ ಕಥೆ ನಮಗೆ ಸಾಂತ್ವನ ನೀಡಬಹುದು.

Kafka ok

ಯಾರು ಡೋರಾ ಡೈಮಂಟ್ ?

‘ಈ ಗೊಂಬೆ ಕಥೆ’ ಡೋರಾ ಡೈಮಂಟ್ ಅವಳ ನೆನಪುಗಳ ಮೂಲಕ ಜಗತ್ತಿಗೆ ಗೊತ್ತಾಯಿತು ಅಂತ ಹೇಳಿದೆ ತಾನೇ? ಹಾಗಾದರೆ ಈ ಡೋರಾ ಡೈಮಂಟ್ ಯಾರು ಎಂಬ ಪ್ರಶ್ನೆ ಮೂಡು ವುದು ಸಹಜ. ಈಕೆ ಫ್ರಾಂಜ್ ಕಾಫ್ಕಾ ಜೀವನದ ಕೊನೆಯ ವರ್ಷಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ. ಕಾಫ್ಕಾ ಸಾಹಿತ್ಯಿಕ ಮತ್ತು ವೈಯಕ್ತಿಕ ಬದುಕಿನ ಮೇಲೆ ಆಕೆ ಬೀರಿದ ಪ್ರಭಾವ ಅಪಾರ.

1923ರಲ್ಲಿ ಬಾಲ್ಟಿಕ್ ಸಮುದ್ರ ತೀರದ ರೆಸಾರ್ಟ್ ಒಂದರಲ್ಲಿ ಡೋರಾ, ಕಾಫ್ಕ್‌ ನನ್ನು ಭೇಟಿ ಯಾದಳು. ಆಗ ಡೋರಾಗೆ ಕೇವಲ 25 ವರ್ಷ, ಕಾಫ್ಕ್‌ʼಗೆ 40. ಡೋರಾ ಅಲ್ಲಿ ಮಕ್ಕಳ ಶಿಬಿರ ವೊಂದರಲ್ಲಿ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದಳು. ಕಾಫ್ಕ್‌ ತನ್ನ ಕುಟುಂಬ ಮತ್ತು ತಂದೆಯ ನೆರಳಿನಿಂದ ಹೊರಬಂದು ಬರ್ಲಿನ್ನಲ್ಲಿ ಸ್ವತಂತ್ರವಾಗಿ ಬದುಕಲು ಡೋರಾ ಪ್ರೇರಣೆಯಾದಳು. ಕಾಫ್ಕ್‌ʼನ ಅನಾರೋಗ್ಯದ ಸಮಯದಲ್ಲಿ ಅವನನ್ನು ಒಬ್ಬ ಮಗುವಿ ನಂತೆ ಡೋರಾ ನೋಡಿಕೊಂಡಳು.

ಪಾರ್ಕಿನಲ್ಲಿ ಮಗು ಗೊಂಬೆ ಕಳೆದುಕೊಂಡಾಗ ಕಾಫ್ಕ್ ಪತ್ರ ಬರೆದ ಘಟನೆಗೆ ಡೋರಾ ಏಕೈಕ ಸಾಕ್ಷಿ. ತನ್ನ ನೆನಪುಗಳಿಂದ ಈ ಕಥೆಯನ್ನು ಹೇಳದಿದ್ದರೆ, ಇದು ಜಗತ್ತಿಗೆ ತಿಳಿಯು ತ್ತಲೇ ಇರಲಿಲ್ಲ. ಕಾಫ್ಕ್ ಸಾವಿನ ದವಡೆಯಲ್ಲಿದ್ದಾಗ, ತನ್ನ ಸಾಹಿತ್ಯದ ಕೆಲವು ಭಾಗಗಳನ್ನು ಸುಟ್ಟುಹಾಕುವಂತೆ ಡೋರಾಗೆ ಕೇಳಿಕೊಂಡಿದ್ದ. ಕಾಫ್ಕ್ ಇಚ್ಛೆಯಂತೆ ಡೋರಾ ಅವನ ಕಣ್ಣೆದುರೇ ಕೆಲವು ಹಸ್ತಪ್ರತಿಗಳನ್ನು ಸುಟ್ಟು ಹಾಕಿದಳು.

ಕಾಫ್ಕ್ ಮರಣದ ನಂತರ, ಡೋರಾ ಬಳಿ ಕಾ-ನ ಹಲವು ಪತ್ರಗಳು ಮತ್ತು ನೋಟ್‌ಬುಕ್‌ ಗಳಿದ್ದವು. ಆದರೆ 1933ರಲ್ಲಿ ನಾಜಿ ಪಡೆಯ ದಾಳಿಯ ಸಮಯದಲ್ಲಿ ಅವೆಲ್ಲವನ್ನೂ ವಶಪಡಿಸಿಕೊಳ್ಳಲಾಯಿತು. ಆ ಅಮೂಲ್ಯ ಸಾಹಿತ್ಯ ಇಂದಿಗೂ ಪತ್ತೆಯಾಗಿಲ್ಲ. ಕಾಫ್ಕ್ʼ-ನನ್ನು ಡೋರಾ ಡೈಮಂಟ್ ಕೇವಲ ಒಬ್ಬ ಲೇಖಕ ನನ್ನಾಗಿ ನೋಡದೇ, ಒಬ್ಬ ವ್ಯಕ್ತಿಯಾಗಿ ಪ್ರೀತಿಸಿ ಕೊನೆಯವರೆಗೂ ಜತೆಗಿದ್ದವಳು. ಕಾಫ್ಕ್ʼನ ಸಂಕೀರ್ಣ ಬದುಕಿನಲ್ಲಿ ಡೋರಾ ಒಂದು ಬೆಳಕಿನ ಕಿರಣದಂತಿದ್ದಳು.

ಚರ್ಚಿಲ್ ಮತ್ತು ಜಾನಿ ವಾಕರ್

ಬ್ರಿಟನ್ ಪ್ರಧಾನಿಯಾಗಿದ್ದ ದಿವಂಗತ ವಿನ್ಸ್ಟನ್ ಚರ್ಚಿಲ್, ವಿಸ್ಕಿ ಬಗ್ಗೆ ಹೇಳಿದ ಮಾತು ಬಹು ಪ್ರಸಿದ್ಧ - The water was not fit to drink. To make it palatable, we have to add whisky. By diligent effort, I learned to like it. (ನೀರು ಕುಡಿಯಲು ಯೋಗ್ಯವಾಗಿರುವು ದಿಲ್ಲ. ಅದನ್ನು ಕುಡಿಯುವಂತಾಗಲು (ರುಚಿಯಾಗಿಸಲು), ನಾವು ಅದಕ್ಕೆ ವಿಸ್ಕಿಯನ್ನು ಬೆರೆಸಬೇಕು. ‌ನಿರಂತರ ಪ್ರಯತ್ನದ ಮೂಲಕ, ನಾನು ಅದನ್ನು ಇಷ್ಟಪಡುವುದನ್ನು ಕಲಿತುಕೊಂಡೆ).

ಈ ಮಾತನ್ನು ಚರ್ಚಿಲ್, ಜಾನಿ ವಾಕರ್ ಬ್ಲಾಕ್ ಲೇಬಲ್ ಕುರಿತು ಹೇಳಿದ್ದೆಂದು, ನಿರಂತರ ಐವತ್ತೆಂಟು ವರ್ಷಗಳ ತನಕ ‘ಗುಂಡು’ ಹಾಕಿದ ಪತ್ರಕರ್ತ ವೈಎನ್ಕೆ ಹೇಳುತ್ತಿದ್ದರು. ಚರ್ಚಿಲ್ ದಿನವಿಡೀ ಜಾನಿ ವಾಕರ್ ಬ್ಲಾಕ್ ಲೇಬಲ್‌ನ್ನು ಸಿಪ್ ಮಾಡುತ್ತಿದ್ದರಂತೆ. ‌ಚರ್ಚಿಲ್ ಕೇವಲ ಒಬ್ಬ ದಕ್ಷ ರಾಜಕಾರಣಿಯಷ್ಟೇ ಅಲ್ಲ, ಅವರು ಈ ವಿಸ್ಕಿಯ ಒಬ್ಬ ’ನಿಷ್ಠಾವಂತ ರಾಯಭಾರಿ’ಯೂ ಆಗಿದ್ದರು!

ಚರ್ಚಿಲ್ ಅವರ ದಿನಚರಿ ಶುರುವಾಗುತ್ತಿದ್ದುದೇ ವಿಸ್ಕಿಯೊಂದಿಗೆ. ಬೆಳಗ್ಗೆ ಸುಮಾರು ಎಂಟು ಗಂಟೆಗೆ ಎದ್ದ ತಕ್ಷಣ ಅವರು ಒಂದು ಗ್ಲಾಸ್ ನೀರಿಗೆ ಸ್ವಲ್ಪ ಜಾನಿ ವಾಕರ್ ಬ್ಲಾಕ್ ಲೇಬಲ್ ಬೆರೆಸಿಕೊಂಡು ಕುಡಿಯುತ್ತಿದ್ದರು.

ಇದನ್ನು ಅವರು ‘ಪಾಪಾಸ್ ಕಾಕ್ ಟೇಲ್’ ಎಂದು ಕರೆಯುತ್ತಿದ್ದರು. ವಿಶೇಷವೆಂದರೆ, ಇದು ಪೂರ್ತಿ ಮದ್ಯವಾಗಿರದೇ, ನೀರಿಗೆ ಸ್ವಲ್ಪ ರುಚಿ ಮತ್ತು ಬಣ್ಣ ನೀಡುವಷ್ಟು ಮಾತ್ರ ಇರುತ್ತಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಚರ್ಚಿಲ್ ಅವರು ವಿಪರೀತ ಒತ್ತಡ ದಲ್ಲಿದ್ದಾಗಲೂ ತಮ್ಮ ಪ್ರಿಯವಾದ ಜಾನಿ ವಾಕರ್ ಅನ್ನು ಮರೆಯುತ್ತಿರಲಿಲ್ಲ. ಅವರು ಹೇಳುತ್ತಿದ್ದರಂತೆ - I have taken more out of alcohol than alcohol has taken out of me!

ಚರ್ಚಿಲ್ ಅವರಿಗೆ ಚಿತ್ರಕಲೆ ಎಂದರೆ ಬಹಳ ಇಷ್ಟ. ಅವರು ಬಿಡುವಿನ ಸಮಯದಲ್ಲಿ ಬಿಡಿಸಿದ ಒಂದು ಸುಂದರ ಪೇಂಟಿಂಗ್‌ನ ಹೆಸರು ’The Bottlescape’. ಈ ತೈಲಚಿತ್ರದಲ್ಲಿ ಒಂದು ಜಾನಿ ವಾಕರ್ ಬ್ಲಾಕ್ ಲೇಬಲ್ ಬಾಟಲಿ, ಒಂದು ಬಾಟಲಿ ಬ್ರಾಂಡಿ, ವೈನ್, ಶಾಂಪೇನ್ ಮತ್ತು ಕೆಲವು ಗ್ಲಾಸ್‌ಗಳನ್ನು ಅತ್ಯಂತ ಕಲಾತ್ಮಕವಾಗಿ ಜೋಡಿಸಿರುವುದನ್ನು ಕಾಣಬಹುದು. ಇದು ಜಾನಿ ವಾಕರ್ ಬಗ್ಗೆ ಅವರ ಪ್ರೀತಿ ಎಷ್ಟು ಗಾಢವಾಗಿತ್ತು ಎಂಬುದಕ್ಕೆ ಸಾಕ್ಷಿ.

ಇದನ್ನು ಅವರು 1926 ಅಥವಾ 1930ರ ಸುಮಾರಿಗೆ ಬಿಡಿಸಿದ್ದಿರಬಹುದು. ಅಚ್ಚರಿಯ ವಿಷಯವೆಂದರೆ, ಚರ್ಚಿಲ್ ಸುಮಾರು 500ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿದ್ದಾರೆ, ಆದರೆ ಮದ್ಯದ ಬಾಟಲಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಬಿಡಿಸಿದ ಅಪರೂಪದ ಚಿತ್ರವಿದು. 2020ರಲ್ಲಿ ಲಂಡನ್ನ ಪ್ರಖ್ಯಾತ ಸೋತ್ಬೀಸ್ ಹರಾಜು ಸಂಸ್ಥೆಯಲ್ಲಿ ಈ ಚಿತ್ರವು ಸುಮಾರು 983,000 ಯುರೋ (ಅಂದಾಜು 10 ಕೋಟಿ ರುಪಾಯಿಗೂ ಹೆಚ್ಚು!) ಮೊತ್ತಕ್ಕೆ ಮಾರಾಟ ವಾಯಿತು.

ಬೆಳಗ್ಗೆ ಎದ್ದ ತಕ್ಷಣ ಚರ್ಚಿಲ್ ಒಂದು ಲೋಟಕ್ಕೆ ಸ್ವಲ್ಪ ವಿಸ್ಕಿ ಮತ್ತು ಅತಿ ಹೆಚ್ಚು ನೀರು ಬೆರೆಸುತ್ತಿದ್ದರು. ಇದನ್ನು ನೋಡಿದವರು ’ಇಷ್ಟು ಬೆಳಗ್ಗೆಯೇ ಮದ್ಯಪಾನವೇ?’ ಎಂದು ಕೇಳಿದಾಗ, ಅವರು ಅತ್ಯಂತ ಗಂಭೀರವಾಗಿ ’ಇದು ಮದ್ಯಪಾನವಲ್ಲ, ನನ್ನ ಬಾಯಿಯನ್ನು ಶುಚಿಗೊಳಿಸುವ ಮೌತ್‌ವಾಶ್’ ಎಂದು ಉತ್ತರಿಸುತ್ತಿದ್ದರು. ಒಮ್ಮೆ ಚರ್ಚಿಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ವಿಮಾನ ಕೆಂಪು ಸಮುದ್ರದ ಮೇಲೆ ಹಾರುತ್ತಿತ್ತು. ಆಗ ಅವರು ತಮ್ಮ ಸಹಾಯಕನಿಗೆ ಕೇಳಿದರಂತೆ - ’ಕೆಂಪು ಸಮುದ್ರದ ನೀರು ಕುಡಿಯಲು ಯೋಗ್ಯವೇ?’. ಸಹಾಯಕ ’ಇಲ್ಲ ಸರ್’ ಎಂದಾಗ, ಚರ್ಚಿಲ್ ತಕ್ಷಣ, ‘ಹಾಗಾದರೆ ಸ್ವಲ್ಪ ಜಾನಿ ವಾಕರ್ ತನ್ನಿ, ಆ ನೀರನ್ನು ಕುಡಿಯುವಂತೆ ಮಾಡೋಣ’ ಎಂದರಂತೆ!

ಚರ್ಚಿಲ್ ಎಂದೂ ಅತಿಯಾಗಿ ಕುಡಿದು ಮತಿ ಕಳೆದುಕೊಂಡವರಲ್ಲ. ಅವರು ಕುಡಿದಾಗಲೇ ಸರಿಯಾಗಿರುತ್ತಾರೆ ಮತ್ತು ಚುರುಕಾಗಿರುತ್ತಾರೆ ಎಂಬ ಮಾತು ಚಾಲ್ತಿಯಲ್ಲಿತ್ತು. ಚರ್ಚಿಲ್ ಅವರು ವಿಸ್ಕಿ ಪ್ರಿಯರಾಗಿದ್ದರೆ, ಹೌಸ್ ಆಫ್ ಕಾಮನ್ಸ್ ಸದಸ್ಯೆ ನ್ಯಾನ್ಸಿ ಆಸ್ಟರ್ (ಲೇಡಿ ಆಸ್ಟರ್) ಅದರ ಕಡು ವಿರೋಧಿಯಾಗಿದ್ದರು. ಅವರು ಆಗಾಗ ಮದ್ಯಪಾನ ನಿಷೇಧದ ಪರವಾಗಿ ಧ್ವನಿ ಎತ್ತುತ್ತಿದ್ದರು. ಇದೇ ಕಾರಣಕ್ಕೆ ಚರ್ಚಿಲ್-ಲೇಡಿ ಆಸ್ಟರ್ ನಡುವೆ ಆಗಾಗ ಜಗಳಗಳಾಗುತ್ತಿದ್ದವು. ‌

ಒಮ್ಮೆ ಲೇಡಿ ಆಸ್ಟರ್, ಚರ್ಚಿಲ್ ಅವರ ಮೇಲೆ ಸಿಟ್ಟಾಗಿ, ‘ಮಿಸ್ಟರ್ ಚರ್ಚಿಲ್, ನೀವು ಕುಡಿದು ಪೂರ್ತಿ ಅಮಲೇರಿದ್ದೀರಿ, ನಿಮಗೆ ಪ್ರಜ್ಞೆಯೇ ಇಲ್ಲ.’ ಎಂದರು. ಅದಕ್ಕೆ ಚರ್ಚಿಲ, ’ಹೌದು, ಲೇಡಿ ಆಸ್ಟರ್, ನಾನು ಕುಡಿದಿದ್ದೇನೆ ಮತ್ತು ನನಗೆ ಅಮಲೇರಿದೆ. ಆದರೆ ನಾಳೆ ಬೆಳಗ್ಗೆ ನಾನು ಎದ್ದಾಗ ನನ್ನ ಅಮಲು ಇಳಿದಿರುತ್ತದೆ, ಆದರೆ ನೀನು ಮಾತ್ರ ಎಂದಿನಂತೆ ಅಷ್ಟೇ ವಿಕಾರವಾಗಿ ಇರುತ್ತೀಯ!’ ಎಂದಿದ್ದರು.

ಜಾನಿ ವಾಕರ್ ಬ್ಲಾಕ್ ಲೇಬಲ್

ಜಾನಿ ವಾಕರ್ ಬ್ಲಾಕ್ ಲೇಬಲ್‌ನ್ನು ಚರ್ಚಿಲ್ ಅಷ್ಟೇ ಗಾಢವಾಗಿ ಪ್ರೀತಿಸಿದ ಮತ್ತೊಬ್ಬ‌ ರೆಂದರೆ ಚಿತ್ರನಟ ದಿವಂಗತ ಅಂಬರೀಶ್. ಅವರು ದಿನವೂ ಕುಡಿಯುತ್ತಿದ್ದರು ಮತ್ತು ದಿನವೂ ಜಾನಿ ವಾಕರ್ ಬ್ಲಾಕ್ ಲೇಬಲ್‌ನ್ನೇ ಕುಡಿಯುತ್ತಿದ್ದರು. ಅವರ ಮುಂದೆ ಅದಕ್ಕಿಂತ ದುಬಾರಿ ಬಾಟಲಿಯನ್ನಿಟ್ಟರೂ, ಅದನ್ನು ಬಿಟ್ಟು ಬೇರೆ ಯಾವ ಗುಂಡನ್ನೂ ಕುಡಿಯುತ್ತಿರ ಲಿಲ್ಲ. ಹಾಗಂತ ಅವರಿಗೆ ಆ ಗುಂಡಿನ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಇರಲಿಲ್ಲ.

ಒಮ್ಮೆ ಪಾರ್ಟಿಯಲ್ಲಿ ಸ್ನೇಹಿತರೊಬ್ಬರು, ’ಅಂಬರೀಶ್, ನೀವು ನಿತ್ಯವೂ ಕುಡಿಯುವ ಜಾನಿ ವಾಕರ್ ಬ್ಲಾಕ್ ಲೇಬಲ್ ಬಗ್ಗೆ ಸ್ವಾರಸ್ಯವಾದ ವಿಷಯಗಳನ್ನು ಹೇಳಿ’ ಎಂದಾಗ, ’ಸುಮ್ನೆ ಕುಡಿ, ಇಂದ್ರೆ ಎದ್ದೋಗು. ನನ್ನ ತಲೆ ತಿನ್ನಬೇಡ’ ಎಂದು ಹೇಳಿದ್ದರು. ಇರಲಿ.

ಸುಮಾರು 206 ವರ್ಷಗಳ ಹಿಂದೆ (1820), ಜಾನ್ ವಾಕರ್ ಎಂಬ ವ್ಯಕ್ತಿ ಒಂದು ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದ. ಅಂದಿನ ಕಾಲದಲ್ಲಿ ಅಂಗಡಿಗಳಲ್ಲಿ ಸಿಗುತ್ತಿದ್ದ ವಿಸ್ಕಿಗಳು ಒಂದೇ ರುಚಿಯನ್ನು ಹೊಂದಿರುತ್ತಿರಲಿಲ್ಲ. ಚಹಾ ಪುಡಿಯನ್ನು ಬೆರೆಸಿ (ಬ್ಲೆಂಡ್) ಮಾರಾಟ ಮಾಡುತ್ತಿದ್ದ ಜಾನ್ ವಾಕರ್, ಅದೇ ತಂತ್ರವನ್ನು ವಿಸ್ಕಿಗೂ ಬಳಸಲು ನಿರ್ಧರಿಸಿದ. ಆತ ವಿವಿಧ ಡಿಸ್ಟಿಲರಿಗಳಿಂದ ಸಿಂಗಲ್ ಮಾಲ್ಟ್ ವಿಸ್ಕಿಗಳನ್ನು ತಂದು ಅವುಗಳನ್ನು ಬೆರೆಸಿ, ಪ್ರತಿ ಬಾರಿಯೂ ಒಂದೇ ರೀತಿಯ ಅದ್ಭುತ ರುಚಿ ನೀಡುವ ವಿಸ್ಕಿಯನ್ನು ತಯಾರಿಸಿದ.‌

ಅಂದು ಇದಕ್ಕೆ ‘ವಾಕರ್ಸ್ ಕಿಲ್ಮಾರ್ನಾಕ್ ವಿಸ್ಕಿ’ ಎಂದು ಹೆಸರಿತ್ತು. ಕಿಲ್ಮಾರ್ನಾಕ್ ಎಂಬು ದು ಆತನ (ಸ್ಕಾಟ್ಲೆಂಡಿನ) ಊರಿನ ಹೆಸರು.

ಜಾನ್ ವಾಕರ್ ಮಗ ಅಲೆಕ್ಸಾಂಡರ್ ವಾಕರ್ ಒಬ್ಬ ಸಮರ್ಥ ಉದ್ಯಮಿಯಾಗಿದ್ದ. ಆತ 1867 ರಲ್ಲಿ ‘ಓಲ್ಡ ಹೈಲ್ಯಾಂಡ್ ವಿಸ್ಕಿ’ ಎಂಬ ಹೆಸರಿನಲ್ಲಿ ವಿಸ್ಕಿಯನ್ನು ಮಾರುಕಟ್ಟೆಗೆ ಬಿಟ್ಟ. ಆ ಸಮಯದಲ್ಲಿ ಕಂಪನಿಯು ವಿವಿಧ ಗುಣಮಟ್ಟದ ವಿಸ್ಕಿಗಳನ್ನು ತಯಾರಿಸು ತ್ತಿತ್ತು. ಅವುಗಳನ್ನು ಸುಲಭವಾಗಿ ಗುರುತಿಸಲು ಗ್ರಾಹಕರು ಬಾಟಲಿಯ ಮೇಲಿದ್ದ ಲೇಬಲ್‌ ನ ಬಣ್ಣಗಳನ್ನು ಬಳಸುತ್ತಿದ್ದರು.

ಕಡಿಮೆ ವರ್ಷ ಹಳೆಯದಾದ ವಿಸ್ಕಿಯನ್ನು ‘ವೈಟ್ ಲೇಬಲ್’ ಎನ್ನಲಾಗುತ್ತಿತ್ತು. ಸ್ವಲ್ಪ ಉತ್ತಮ ಗುಣಮಟ್ಟದ ವಿಸ್ಕಿಯನ್ನು ‘ರೆಡ್ ಲೇಬಲ್’ ಎನ್ನಲಾಗುತ್ತಿತ್ತು. ಅತ್ಯಂತ ಪ್ರೀಮಿ ಯಂ ಮತ್ತು ಹನ್ನೆರಡು ವರ್ಷಗಳ ಕಾಲ ಪಕ್ವಗೊಳಿಸಿದ ವಿಸ್ಕಿಯನ್ನು ‘ಬ್ಲಾಕ್ ಲೇಬಲ್’ ಎಂದು ಕರೆಯಲಾಗುತ್ತಿತ್ತು. ಜನಪ್ರಿಯತೆಯ ದೃಷ್ಟಿಯಿಂದ ಜನರು ‘ಓಲ್ಡ್ ಹೈಲ್ಯಾಂಡ್ ವಿಸ್ಕಿ’ ಎನ್ನುವ ಬದಲು ಅದರ ಬಣ್ಣ ನೋಡಿ ‘ಬ್ಲಾಕ್ ಲೇಬಲ್’ ಎಂದು ಕರೆಯಲು ಶುರು ಮಾಡಿದರು. ಜನರ ಈ ಅಭ್ಯಾಸವನ್ನೇ ಗಮನಿಸಿದ ಕಂಪನಿಯು, 1909ರಲ್ಲಿ ಅಧಿಕೃತವಾಗಿ ತನ್ನ ವಿಸ್ಕಿಗಳ ಹೆಸರನ್ನು ’ಜಾನಿ ವಾಕರ್ ಬ್ಲಾಕ್ ಲೇಬಲ್’ ಮತ್ತು ’ಜಾನಿ ವಾಕರ್ ರೆಡ್ ಲೇಬಲ್’ ಎಂದು ಬದಲಾಯಿಸಿತು.

ಜಾನಿ ವಾಕರ್ ಹೆಸರಿನ ಜತೆಗೆ ಬಾಟಲಿಯ ವಿನ್ಯಾಸವೂ ಈ ಬ್ರ್ಯಾಂಡ್ ಬೆಳೆಯಲು ಪ್ರಮುಖ ಕಾರಣವಾಯಿತು ಎಂಬುದು ಅನೇಕರಿಗೆ ಗೊತ್ತಿಲ್ಲ. ಅಲೆಕ್ಸಾಂಡರ್ ವಾಕರ್ ಚೌಕಾಕಾರದ ಬಾಟಲಿಗಳನ್ನು ಪರಿಚಯಿಸಿದ. ಇದಕ್ಕೆ ಕಾರಣವೆಂದರೆ, ಹಡಗಿನಲ್ಲಿ ರಫ್ತು ಮಾಡುವಾಗ ಚೌಕಾಕಾರದ ಬಾಟಲಿಗಳು ಒಂದಕ್ಕೊಂದು ತಾಕಿದರೂ ಒಡೆಯುವ ಸಾಧ್ಯತೆ ಕಡಿಮೆ ಇರುತ್ತಿತ್ತು ಮತ್ತು ಕಡಿಮೆ ಜಾಗದಲ್ಲಿ ಹೆಚ್ಚು ಬಾಟಲಿಗಳನ್ನು ಜೋಡಿಸ‌ ಬಹುದಿತ್ತು.

ಗಮನಿಸಿ, ಜಾನಿ ವಾಕರ್ ವಿಸ್ಕಿ ಬಾಟಲಿಯ ಮೇಲಿನ ಲೇಬಲ್ ಅನ್ನು ನಿಖರವಾಗಿ ಇಪ್ಪತ್ನಾಲ್ಕು ಡಿಗ್ರಿ ಓರೆಯಾಗಿ ಅಂಟಿಸಲಾಗುತ್ತದೆ. ಇದು ಬಾಟಲಿಯ ಮೇಲೆ ಅಕ್ಷರಗಳನ್ನು ದೊಡ್ಡದಾಗಿ ಮತ್ತು ಎದ್ದು ಕಾಣುವಂತೆ ಮಾಡಲು ಅಲೆಕ್ಸಾಂಡರ್ ಮಾಡಿದ ಉಪಾಯ ವಾಗಿತ್ತು.

1908ರಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಟಾಮ್ ಬ್ರೌನ್ ಮಧ್ಯಾಹ್ನದ ಊಟದ ಸಮಯದಲ್ಲಿ ಕಾಗದದ ಮೇಲೆ ಒಬ್ಬ ವ್ಯಕ್ತಿ ವೇಗವಾಗಿ ಹೆಜ್ಜೆ ಹಾಕುತ್ತಿರುವ ಒಂದು ಚಿತ್ರವನ್ನು ಬಿಡಿಸಿದ. ’ಇದು ಜಾನಿ ವಾಕರ್ ಸಂಸ್ಥಾಪಕ ಜಾನ್ ವಾಕರ್’ ಎಂದು ತಮಾಷೆಗೆ ಹೇಳಿದ. ಇದನ್ನೇ ಕಂಪನಿ ತನ್ನ ಲೋಗೋವನ್ನಾಗಿ ಮಾಡಿಕೊಂಡಿತು.

ಇದರೊಂದಿಗೆ Keep Walking ಎಂಬ ಘೋಷವಾಕ್ಯವನ್ನು ಸೇರಿಸಲಾಯಿತು. ಇದು ಕಂಪನಿಯ ಪ್ರಗತಿ ಮತ್ತು ಎಂದಿಗೂ ನಿಲ್ಲದ ಗುಣವನ್ನು ಎತ್ತಿ ತೋರಿಸುತ್ತದೆ. ಬ್ಲಾಕ್ ಲೇಬಲ್ ಅನ್ನು ಕೇವಲ ಒಂದು ಅಥವಾ ಎರಡು ವಿಸ್ಕಿಗಳಿಂದ ತಯಾರಿಸುವುದಿಲ್ಲ. ಇದರಲ್ಲಿ ಸ್ಕಾಟ್‌ಲ್ಯಾಂಡ್‌ನ ನಾಲ್ಕು ಪ್ರಮುಖ ಪ್ರದೇಶಗಳಾದ ಹೈಲ್ಯಾಂಡ್ಸ್, ಲೋಲ್ಯಾಂಡ್ಸ್, ಸ್ಪೇಸೈಡ್ ಮತ್ತು ಇಸ್ಲೇಯಿಂದ ಆಯ್ದುಕೊಂಡ ವಿಸ್ಕಿಗಳ ಮಿಶ್ರಣ‌ ವಿರುತ್ತದೆ.

ಇದೇ ಅದರ ವೈಶಿಷ್ಟ್ಯ. ಇದರಲ್ಲಿ ಬಳಸಿರುವ ಪ್ರತಿ ಹನಿ ವಿಸ್ಕಿಯೂ ಕನಿಷ್ಠ ಹನ್ನೆರಡು ವರ್ಷಗಳ ಕಾಲ ಪಕ್ವಗೊಂಡಿರುತ್ತದೆ. ಅಂದರೆ, ನೀವು ಇಂದು ಒಂದು ಬಾಟಲಿಯನ್ನು ಓಪನ್ ಮಾಡಿದರೆ, ಅದರ ಒಳಗಿರುವ ವಿಸ್ಕಿ ತಯಾರಿಕೆ ಕನಿಷ್ಠ 12 ವರ್ಷಗಳ ಹಿಂದೆಯೇ ಆರಂಭವಾಗಿತ್ತು ಎಂದರ್ಥ!

ಜಾನಿ ವಾಕರ್ ಬಗ್ಗೆ ಒಂದು ಮಾತಿದೆ - Johnnie Walker is the only man who keeps walking even after you've had five double shots and can't even stand! (ನೀವು ಐದು ಡಬಲ್ ಶಾಟ್ ಕುಡಿದು ನಿಲ್ಲಲು ಸಾಧ್ಯವಾಗದಿದ್ದರೂ, ಜಾನಿ ವಾಕರ್ ಮಾತ್ರ ಬಾಟಲಿಯ ಮೇಲೆ ಇನ್ನೂ ನಡೆಯುತ್ತಲೇ ಇರುತ್ತಾನೆ!).

‘ಯಾರ ಮನೆಯಲ್ಲಿ ಜಾನಿ ವಾಕರ್ ವಿಸ್ಕಿ ಇರುವುದೋ, ಅವರ ಮನೆಯಲ್ಲಿ ದ್ರವ ಲಕ್ಷ್ಮಿ ನೆಲೆಸಿzಳೆ ಎಂದರ್ಥ’ ಎಂದು ವೈಎನ್ಕೆ ಹೇಳುತ್ತಿದ್ದರು. ಜಾನಿ ವಾಕರ್ ಕಂಪನಿಯ ಇತರ ಲೇಬಲ್‌ಗಳಾದ ‘ಬ್ಲೂ ಲೇಬಲ್’ ಅಥವಾ ‘ಗೋಲ್ಡ್ ಲೇಬಲ್’ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.

ವಿಶ್ವೇಶ್ವರ ಭಟ್‌

View all posts by this author