ಸಕಾಲಿಕ
ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು
ಸ್ವಾತಂತ್ರ್ಯ ಎನ್ನುವುದು ಕೇವಲ ಒಂದು ಐತಿಹಾಸಿಕ ಘಟನೆಯೋ ಅಥವಾ ಇತಿಹಾಸದ ಪುರಾಣ ಪುಟಗಳಲ್ಲಿ ಉಳಿದುಕೊಂಡ ಶಬ್ದವೋ ಅಲ್ಲ. ಅದು ಸದಾ ಹರಿಯುವ ಜೀವ ನದಿಯಂತೆ, ಪ್ರತಿ ತಲೆಮಾರಿನ ಚಿಂತನೆ, ಆಶೋತ್ತರಗಳು ಮತ್ತು ಅನುಭವಗಳಿಗೆ ತಕ್ಕಂತೆ ಹೊಸ ರೂಪವನ್ನು ಪಡೆದುಕೊಳ್ಳುವ ಒಂದು ನಿರಂತರ ಪ್ರಕ್ರಿಯೆ. ಇಪ್ಪತ್ತೊಂದನೇ ಶತಮಾನದ ಯುವ ತಲೆಮಾರು ನೋಡುವ ಸ್ವಾತಂತ್ರ್ಯದ ದೃಷ್ಟಿಕೋನವು ಸಂಪೂರ್ಣವಾಗಿ ಭಿನ್ನವಾಗಿದೆ.
ಇಂದಿನ ಯುವಕರಿಗೆ ಸ್ವಾತಂತ್ರ್ಯವೆಂದರೆ ಭೌತಿಕ ಗಡಿಗಳಿಂದ ಅಥವಾ ವಿದೇಶಿ ಆಳ್ವಿಕೆಯಿಂದ ಮುಕ್ತಿ ಪಡೆಯುವುದಷ್ಟೇ ಅಲ್ಲ, ಬದಲಿಗೆ ವ್ಯಕ್ತಿತ್ವದ ವಿಕಸನ, ಅಭಿವ್ಯಕ್ತಿಯ ಸ್ವಾತಂತ್ರ್ಯ, ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಪಿಡುಗುಗಳಿಂದ ಬಿಡುಗಡೆ ಹೊಂದುವುದಾಗಿದೆ.
ಇಂದಿನ ಜಾಗತೀಕರಣ ಮತ್ತು ಡಿಜಿಟಲ್ ಯುಗದಲ್ಲಿ ಯುವಜನತೆ ಜಗತ್ತಿನ ಯಾವುದೇ ಮೂಲೆಯ ಸಂಸ್ಕೃತಿ ಮತ್ತು ತಂತ್ರಜ್ಞಾನದೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸುತ್ತಿದೆ. ಈ ಮುಕ್ತ ವಾತಾ ವರಣದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಅತ್ಯಂತ ವಿಶಾಲವಾಗಿ ಬೆಳೆದಿದೆ. ಯುವಕರು ಇಂದು ತಮ್ಮ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ, ತಮ್ಮ ಬದುಕಿನ ಹಾದಿಯನ್ನು ರೂಪಿಸಿ ಕೊಳ್ಳುವಲ್ಲಿ ಮತ್ತು ತಮ್ಮ ಕನಸುಗಳಿಗೆ ರೆಕ್ಕೆಗಳನ್ನು ಕಟ್ಟಿಕೊಳ್ಳುವಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಕುಟುಂಬದ ಹಿರಿಯರು ನಿರ್ಧರಿಸಿದ ಮಾರ್ಗದಲ್ಲಿ ನಡೆಯುವುದು ಅನಿವಾರ್ಯವಾಗಿತ್ತು.
ಇದನ್ನೂ ಓದಿ: Ravi Sajangadde Column: ಕೆಂಪುಕೋಟೆಯಿಂದ ಮೊಳಗಲಿದೆ ವಂದೇ ಮಾತರಂ
ಆದರೆ ಇಂದಿನ ಯುವ ಪೀಳಿಗೆ ತನ್ನದೇ ಆದ ಆಸಕ್ತಿಗಳಿಗೆ ತಕ್ಕಂತೆ ಎಂಜಿನಿಯರಿಂಗ್, ವೈದ್ಯಕೀಯ ದ ಜೊತೆಗೆ ಕಲೆ, ಕ್ರೀಡೆ, ಸಾಹಿತ್ಯ, ಉದ್ಯಮಶೀಲತೆ ಮತ್ತು ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಷನ್ ನಂತಹ ವಿಭಿನ್ನ ಕ್ಷೇತ್ರಗಳನ್ನು ತನ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ನಿಜವಾದ ಸ್ವಾತಂತ್ರ್ಯದ ಅನುಭವ ಪಡೆದುಕೊಳ್ಳುತ್ತಿದೆ. ಆದರೆ, ಈ ನವೀನ ಸ್ವಾತಂತ್ರ್ಯದ ಹಾದಿಯಲ್ಲಿ ಯುವ ಜನತೆ ಎದುರಿಸುತ್ತಿರುವ ಸವಾಲುಗಳು ಕೂಡ ಅಷ್ಟೇ ಗಂಭೀರವಾಗಿವೆ. ಒಂದು ಕಡೆ ತಂತ್ರಜ್ಞಾನ ಜಗತ್ತನ್ನು ಅಂಗೈಯಲ್ಲಿ ಇರಿಸಿದ್ದರೆ, ಮತ್ತೊಂದು ಕಡೆ ಅದೇ ತಂತ್ರಜ್ಞಾನದ ಅಡಿಗುಂಟ ಸಿಕ್ಕಿಹಾಕಿಕೊಂಡು ಯುವಕರು ಮಾನಸಿಕ ಗುಲಾಮಗಿರಿಯ ಕೊಂಡಿಗಳಿಗೆ ಬಲಿಯಾಗು ತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ವರ್ಚುವಲ್ ಪ್ರಪಂಚದಲ್ಲಿ ಲೈಕ್ಸ್ ಮತ್ತು ಕಾಮೆಂಟ್‌ಗಳ ಬೆನ್ನುಬಿದ್ದು, ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಇದು ಸ್ವಾತಂತ್ರ್ಯ ದ ಹೆಸರಿನಲ್ಲಿ ನಾವು ಅನುಭವಿಸುತ್ತಿರುವ ಒಂದು ಹೊಸ ರೀತಿಯ ಬಂಧನವಾಗಿದೆ. ನೈಜ ಜಗತ್ತಿನ ಬಾಂಧವ್ಯಗಳಿಂದ ದೂರಾಗಿ ಮೊಬೈಲ್ ಪರದೆಗಳಿಗೆ ಸೀಮಿತವಾಗುತ್ತಿರುವ ಯುವ ಮನಸ್ಸುಗಳಿಗೆ ಸ್ವಾತಂತ್ರ್ಯದ ನಿಜವಾದ ಅರ್ಥ ಮತ್ತು ಅದರ ಜವಾಬ್ದಾರಿಯ ಅರಿವು ಮೂಡಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಮತ್ತೊಂದು ಪ್ರಮುಖ ಆಯಾಮವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ. ಪ್ರಜಾಪ್ರಭುತ್ವದ ಅತಿ ದೊಡ್ಡ ಆಸ್ತಿಯಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇಂದಿನ ಯುವಕರು ತಮ್ಮ ಧ್ವನಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಅನ್ಯಾಯಗಳನ್ನು ಪ್ರಶ್ನಿಸುವುದು, ಸರಕಾರದ ನೀತಿಗಳನ್ನು ವಿಮರ್ಶಿಸುವುದು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕೆಲಸವನ್ನು ಯುವ ಪೀಳಿಗೆ ನಿರ್ಭೀತಿಯಿಂದ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆ ಯೂ ಹೆಚ್ಚಾಗುತ್ತಿದೆ.
ಸತ್ಯಾಂಶವಿಲ್ಲದೆ ಟ್ರೋಲ್ ಮಾಡುವುದು, ವೈಯಕ್ತಿಕ ದ್ವೇಷ ಸಾಧಿಸುವುದು ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಮಾತುಗಳನ್ನಾಡುವುದು ಸ್ವಾತಂತ್ರ್ಯವಲ್ಲ, ಅದು ಸ್ವಾತಂತ್ರ್ಯದ ದುರ್ಬಳಕೆ ಎನ್ನುವುದನ್ನು ಯುವ ಜನತೆ ಅರಿಯಬೇಕಿದೆ. ಸ್ವಾತಂತ್ರ್ಯದೊಂದಿಗೆ ಜವಾಬ್ದಾರಿಯೂ ಬೆಸೆದುಕೊಂಡಿದೆ ಎಂಬ ಸತ್ಯವನ್ನು ಮರೆಯಬಾರದು. ಆರ್ಥಿಕ ಸ್ವಾತಂತ್ರ್ಯವು ಯುವ ತಲೆಮಾರಿಗೆ ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಇಂದು ಉದ್ಯೋಗ ಹುಡುಕುವವರಾಗಿ ಉಳಿಯದೆ, ಸ್ಟಾರ್ಟಪ್‌ಗಳ ಮೂಲಕ ಉದ್ಯೋಗದಾತರಾಗುವ ಹಾದಿಯನ್ನು ಯುವಕರು ತುಳಿಯುತ್ತಿದ್ದಾರೆ.