ವಿಶ್ವರಂಗ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿನ ದಿನಗಳಲ್ಲಿ ಮೂರು ಬಹಳ ಮುಖ್ಯವಾದ ಅಂಶಗಳನ್ನು ಜನತೆಯ ಮುಂದೆ ಇಟ್ಟಿದ್ದಾರೆ. ಅವುಗಳು ಹೇಗೆ ನಮ್ಮ ಬದುಕನ್ನು ಬದಲಾಯಿಸಬಲ್ಲವು ಎನ್ನುವುದರ ಬಗ್ಗೆ ಸ್ವಲ್ಪ ಚರ್ಚಿಸೋಣ. ಮೋದಿಯವರು ಸಮಯ ಬದಲಾಗುತ್ತಿದೆ ಎನ್ನುತ್ತಿದ್ದಾರೆ. ಇದು ಸತ್ಯವಾದ ಮಾತು.
2030ರ ವೇಳೆಗೆ ಜಗತ್ತು ಇವತ್ತಿನ ಬದುಕುವ ರೀತಿಯಿಂದ ಬಹಳಷ್ಟು ಬದಲಾವಣೆ ಹೊಂದಿರುತ್ತದೆ. ಹಾವು ತನ್ನ ಪೊರೆಯನ್ನು ಕಳಚಿದಂತೆ ನಮ್ಮ ಸಮಾಜವೂ ಬೇರೊಂದು ಮಗ್ಗಲಿಗೆ ಹೊರಳಿ ಕೊಳ್ಳುತ್ತದೆ. ನಿಜ ಹೇಳಬೇಕೆಂದರೆ ಅನ್ಯ ಮಾರ್ಗವಿಲ್ಲ. ಮೋದಿಜೀ ಜನರಿಗೆ ಹೆಚ್ಚು ಉಳಿತಾಯ ಮಾಡುವಂತೆ ಕರೆ ನೀಡಿದ್ದಾರೆ.
ನಮ್ಮದು ಉಳಿಸುವ ಸಮಾಜ, ಖರ್ಚು ಮಾಡುವ ಸಮಾಜವಲ್ಲ. ಯಾವುದೇ ಸಮಾಜ ಆರ್ಥಿಕವಾಗಿ ಸಬಲವಾಗಿ ಉಳಿದುಕೊಳ್ಳಬೇಕು ಎಂದರೆ ಅಲ್ಲಿನ ಸಮಾಜ ಉಳಿಕೆಯನ್ನು ಮಾಡಬೇಕು. ಸಣ್ಣ ಉಳಿತಾಯಕ್ಕೆ ದೇಶವನ್ನು ಉಳಿಸುವ ಶಕ್ತಿಯಿದೆ ಎನ್ನುವ ಮಾತನ್ನು ಅವರು ಆಡಿದ್ದಾರೆ. ಇದು ಸತ್ಯವಾದ ಮಾತುಗಳು. ಭಾರತ ದೇಶದ ಬೆನ್ನೆಲುಬು ಸಣ್ಣ ಉಳಿತಾಯ. ಅನಾದಿ ಕಾಲದಿಂದ ನಮ್ಮದು ಉಳಿಕೆ ಮಾಡುವ ಸಮಾಜ. ಅವಶ್ಯಕತೆ ಇದ್ದಾಗ ಖರ್ಚು ಮಾಡುವ ಸಮಾಜ ನಮ್ಮದು. ಆದರೆ ಇವತ್ತಿನ ಸಮಾಜದಲ್ಲಿ ಸಮೀಕರಣ ಬದಲಾಗಿದೆ.
ಇದನ್ನೂ ಓದಿ: Rangaswamy Mookanahally Column: ಹಿರಿಯರನ್ನು ಭಾರತ ಹೇಗೆ ನಡೆಸಿಕೊಳ್ಳುತ್ತಿದೆ ?
ನಾಳೆ ಕಂಡವರಾರು? ಇವತ್ತು ಮಜಾ ಮಾಡಬೇಕು ಎನ್ನುವ ’YOLO’ ಫಿಲಾಸಫಿ ಯುವಜನತೆಯಲ್ಲಿ ಬೇರೂರಿದೆ. ಯು ಓನ್ಲಿ ಲೀವ್ ವ ಎನ್ನುವುದು ಯೊಲೊ ಫಿಲಾಸಫಿ. ಇರುವುದೊಂದು ಜೀವನ ಅದೂ ಕೂಡ ಬಹಳಷ್ಟು ಅನಿಶ್ಚಿತತೆಯಿಂದ ಕೂಡಿದೆ. ಹೀಗಿರುವಾಗ ಸುಮ್ಮನೆ ಉಳಿಸಿ ಪ್ರಯೋಜನ ವೇನು? ಎನ್ನುವುದು ಯುವಜನತೆ ಕೇಳುವ ಮಾತು. ಇದರ ಜೊತೆಗೆ ಜನ ಅನುಭವಗಳ ಮೇಲೆ ಹೆಚ್ಚು ಖರ್ಚು ಮಾಡಲು ಶುರು ಮಾಡಿದ್ದಾರೆ.
ಎಷ್ಟರ ಮಟ್ಟಿಗೆ ಎಂದರೆ ಸಾಲ ಮಾಡಿಯಾದರೂ ಸರಿಯೇ ವಿದೇಶಿ ಪ್ರವಾಸದ ಅನುಭವ ಪಡೆದು ಕೊಳ್ಳಬೇಕು ಎನ್ನುವ ಮನೋಭಾವ ಹೆಚ್ಚಾಗುತ್ತಿದೆ. ಹೀಗಾಗಿ ಮೋದಿಯವರು ಉಳಿತಾಯ ಮಾಡಿ ಎನ್ನುವ ಮಾತನ್ನು ಆಡಿದ್ದಾರೆ. ಇದನ್ನು ನಾವು ಎರಡು ರೀತಿಯಲ್ಲಿ ನೋಡಬಹುದು. ಮೊದಲಿಗೆ ಕುಸಿಯುತ್ತಿರುವ ಉಳಿಕೆಯ ಅಂಕಿಸಂಖ್ಯೆ ಹೆಚ್ಚಿಸಲು. ಎರಡನೆಯದಾಗಿ ಮುಂಬರುವ ಕೆಟ್ಟ ದಿನಗಳಿಗೆ ಸ್ವಲ್ಪ ಕೂಡಿಡಿ ಎನ್ನುವ ಕಿವಿಮಾತು.
2027/28 ಖಂಡಿತ ಸವಾಲು ಒಡ್ಡುವ ವರ್ಷಗಳಾಗಿರುತ್ತವೆ. ಹೀಗಾಗಿ ನಾವೆಲ್ಲರೂ ಉಳಿತಾಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಇದನ್ನು ಹೇಳುವಾಗ ಒಂದು ಮಾತನ್ನು ಹೇಳದೆ ಹೋದರೆ ಅಪಚಾರ ಮಾಡಿದಂತೆ ಆಗುತ್ತದೆ. ನನ್ನ ಆತ್ಮ ಸಾಕ್ಷಿಗೆ ಮೋಸ ಮಾಡಿಕೊಂಡಂತೆ ಆಗುತ್ತದೆ. ಹೀಗಾಗಿ ಇನ್ನೊಂದು ಸಾಲು ಇಲ್ಲಿ ಸೇರಿಸಿಬಿಡುತ್ತೇನೆ. ಮುಂದುವರೆದ ದೇಶಗಳ ಮಟ್ಟಿಗೆ ಭಾರತ ದಲ್ಲಿ ಬಡ್ಡಿದರವನ್ನು ಇಳಿಸಲಾಯಿತು.
ತೀರಾ ಅವೈಜ್ಞಾನಿಕವಾಗಿ ಇಳಿಸಲಾಯಿತು. ಇವತ್ತಿಗೂ ಭಾರತದಲ್ಲಿ ಬಡ್ಡಿದರ ಕಡಿಮೆ. ನಮ್ಮಲ್ಲಿ ರುವ ಜನಸಂಖ್ಯೆ ಮತ್ತು ಹಣದುಬ್ಬರದ ಲೆಕ್ಕಾಚಾರದಲ್ಲಿ ಭಾರತದಲ್ಲಿ ಬಡ್ಡಿ ದರ ಕಡಿಮೆಯಿದೆ. ಇದನ್ನು ಎರಡು ರೀತಿಯಲ್ಲಿ ನೋಡಬಹುದು. ಒಂದು ಇದರಿಂದ ಡೆಬಿಟ್ ಚೀಪ್ ಆಯ್ತು. ಅಂದರೆ ಸಾಲ ಸಸ್ತಾ ಆಯ್ತು. ಎರಡು ಸಣ್ಣ ಉಳಿತಾಯಗಳ ಮೇಲೆ ಬಡ್ಡಿ ಕಡಿಮೆ ಯಾಯ್ತು. ಹೀಗಾಗಿ ಉಳಿತಾಯ ಮಾಡು ವವರಿಗೆ ಯಾವುದೇ ಮೋಟಿವೇಷನ್ ಉಳಿದು ಕೊಳ್ಳಲಿಲ್ಲ.
ಇವತ್ತಿನ ಹಣದುಬ್ಬರವನ್ನು ಮೀರಲಾಗದ ಬಡ್ಡಿದರದಿಂದ ಏನು ಪ್ರಯೋಜನ. ಹೀಗಾಗಿ ಹೊಸ ತಲೆಮಾರು ನಾವೇಕೆ ಉಳಿಸಬೇಕು? ಎನ್ನುವ ಮನೋಭಾವ ಬೆಳೆಸಿಕೊಂಡರು. ಇದರ ಹೊಣೆ ಯನ್ನು ಕೇಂದ್ರ ಸರಕಾರ ತಿರಸ್ಕರಿಸಲು ಸಾಧ್ಯವಿಲ್ಲ. ಮಾನ್ಯ ಪ್ರಧಾನಿಗಳು ಕೇವಲ ಸರ್ಟಿಫಿಕೇಟ್ ಗಳಿಂದ ಯಾವುದೇ ಪ್ರಯೋಜನವಿಲ್ಲ, ಕೌಶಲ ವೃದ್ಧಿ ಮಾಡಿಕೊಳ್ಳಿ ಎಂದಿದ್ದಾರೆ.
ಐಐಟಿ ಅಥವಾ ಐಟಿಐ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಇಂಜಿನಿಯರಿಂಗ್ ಪದವಿಗಳು ನಾಲಾಯಕ್ಕು ಎನ್ನುವುದನ್ನು ಸೂಚ್ಯವಾಗಿ ಹೇಳುತ್ತಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆಗೆ ಇದು ಒಂದು ಸಂದೇಶ ನೀಡುತ್ತಿದೆ. ಇದನ್ನು ಶೀಘ್ರವಾಗಿ ಅರ್ಥ ಮಾಡಿಕೊಂಡವರು ಮಾತ್ರ ಶಿಕ್ಷಣ ಉದ್ಯಮದಲ್ಲಿ ಉಳಿದುಕೊಳ್ಳುತ್ತಾರೆ. ಬಹುತೇಕರು ನಷ್ಟ ಮಾಡಿಕೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ನಾವಿಷ್ಟ ಪಡಲಿ, ಪಡದಿರಲಿ ಎಐ ಬಹಳಷ್ಟು ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಕೈ ಕೆಲಸಗಳಿಗೆ, ಕುಲ ಕಸುಬುಗಳಿಗೆ ಹೆಚ್ಚಿನ ಮಹತ್ವ ಬರಲಿದೆ. ಈ ಹಿಂದೆ ವಿಶ್ವವಾಣಿಯಲ್ಲಿ ಇದರ ಬಗ್ಗೆ ಬರೆದಿದ್ದೆ. ಶಾಲೆ, ಕಾಲೇಜುಗಳು ಒಂದೆಡೆ ಕೂರಿಸಿ ದಿನದ 8 ತಾಸು ಥಿಯರಿ ಹೇಳುವ ಕಾಲ ಮುಗಿದು ಹೋಗುತ್ತದೆ. ಈಗಿರುವ ಶಾಲೆ, ಕಾಲೇಜುಗಳಲ್ಲಿ ಬಹುತೇಕ ಬದಲಾವಣೆಗೆ ಹೊಂದಿಕೊಳ್ಳದೇ ಇದ್ದಲ್ಲಿ ಮುಚ್ಚಿ ಹೋಗುತ್ತದೆ. ಇದನ್ನೇ ಮೋದಿಯವರು ಹೇಳಿದ್ದಾರೆ. ಸ್ಕಿಲ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದವರು ಬದಲಾವಣೆಯ ಪ್ರವಾಹದಲ್ಲಿ ಕೊಚ್ಚಿ ಹೋಗಲಿದ್ದಾರೆ. ಎಚ್ಚರ!
ಭಾರತದಲ್ಲಿ ಅತ್ಯಂತ ವೇಗವಾಗಿ ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚುತ್ತಿವೆ. ಇದೊಂದು ರೀತಿಯಲ್ಲಿ ಒಳ್ಳೆಯದು. ನಾಲ್ಕು ವರ್ಷ ಪ್ರಯೋಜನಕ್ಕೆ ಬಾರದ ಅಥವಾ ಮಾಸಿಕ ಹದಿನೈದು ಸಾವಿರ ವೇತನ ಪಡೆಯಲು, ಮಾಸಿಕ 25/30 ಸಾವಿರ ವ್ಯಯಿಸಿ ಏಕೆ ಓದಬೇಕು? ಇಲ್ಲಿಯವರೆಗೆ ಇದು ಸರಿ. ಆದರೆ ಹೀಗೆ ಕಾಲೇಜು ಮುಚ್ಚುವ ಬದಲು ಬದುಕಿಗೆ ಬೇಕಾಗುವ ಕೌಶಲ ಕಲಿಸುವ ಶಾಲೆ ಗಳನ್ನಾಗಿ ಏಕೆ ಇವನ್ನು ಪರಿವರ್ತಿಸುತ್ತಿಲ್ಲ? ಬದಲಾವಣೆಗೆ ಸಿದ್ಧರಾಗಿ ಇಲ್ಲವೇ ಅವನತಿ ಹೊಂದಿ ಎನ್ನುವುದು ಮೋದಿಯವರ ಮಾತಿನ ಅರ್ಥ.
ಕೋಟ್ಯಂತರ ಯುವಕರು, ಸಾವಿರಾರು ಶಾಲೆಗಳಿಗೆ ಇದು ಎಚ್ಚರಿಕೆಯ ಕರೆಘಂಟೆ. ಇನ್ನೊಂದು ಮಾತನ್ನೂ ಅವರು ಹೇಳಿದ್ದಾರೆ. ನಾನು ಹೋದ ದೇಶಗಳೆ ನಮಗೆ ಮುಂದಿನ ವರ್ಷಗಳಲ್ಲಿ ಐವತ್ತು ಸಾವಿರ ಜನ ಬೇಕು, ಲಕ್ಷ ಬೇಕು, ಐದು ಲಕ್ಷ ಬೇಕು ಎನ್ನುವ ಬೇಡಿಕೆಯನ್ನು ಇಡುತ್ತಿದ್ದಾರೆ. ಭಾರತ ಜಗತ್ತಿಗೆ ಜನರನ್ನು ಅದರಲ್ಲೂ ಕೌಶಲ ಹೊಂದಿರುವ ವ್ಯಕ್ತಿಗಳನ್ನು ನೀಡುವ ಹ್ಯೂಮನ್ ರಿಸೋರ್ಸ್ ಹಬ್ ಆಗಲಿದೆ ಎಂದಿದ್ದಾರೆ.
ಗಮನಿಸಿ, ಇಸ್ರೇಲ್, ಜರ್ಮನಿ, ಜಪಾನ್, ಡೆನ್ಮಾರ್ಕ್ ಮತ್ತು ಮಲೇಶಿಯಾ ದೇಶಗಳು ಎ2ಇ ಒಪ್ಪಂದಗಳನ್ನು ಅಂದರೆ ಗವರ್ನ್ಮೆಂಟ್ ಟು ಗವರ್ನ್ಮೆಂಟ್ ಒಪ್ಪಂದಗಳನ್ನು ಮಾಡಿ ಕೊಂಡಿದೆ. ತಮ್ಮ ದೇಶಕ್ಕೆ ಬೇಕಾಗುವ ಕೌಶಲ ಹೊಂದಿದ ಕೆಲಸಗಾರರನ್ನು ಪಡೆದುಕೊಳ್ಳಲು ಮಾಡಿಕೊಂಡ ಒಪ್ಪಂದಗಳಿವು. ಇದರ ಪ್ರಕಾರ ಇಸ್ರೇಲ್ ದೇಶ ವಾರ್ಷಿಕ 65/70 ಸಾವಿರ ಭಾರತೀಯರನ್ನು ತಮ್ಮ ದೇಶಕ್ಕೆ ವಲಸೆ ಮಾಡಲು ಕೇಳಿಕೊಳ್ಳುತ್ತಿದೆ.
ಜರ್ಮನಿಯಲ್ಲಿ ಇವತ್ತಿಗೆ ಸರಿಸುಮಾರು 7 ಲಕ್ಷ ಕೆಲಸಗಳು ಖಾಲಿಯಿವೆ. ಜರ್ಮನರಿಗೆ ಭಾರತೀಯರ ಬೆಲೆ ಗೊತ್ತಿದೆ. ಹೀಗಾಗಿ ಅವರು ಹೆಚ್ಚು ಹೆಚ್ಚು ಭಾರತೀಯರು ತಮ್ಮ ದೇಶಕ್ಕೆ ಬಂದು ನೆಲಸಲಿ ಎಂದು ಬಯಸುತ್ತಿದ್ದಾರೆ. ಭಾರತೀಯರು ವಲಸೆ ಬರಲಿ ಎನ್ನುವುದಕ್ಕೆ ಅವರು ಒಂದು ಹೆಜ್ಜೆ ಮುಂದೆ ಹೋಗಿ ಬಹುತೇಕ ಕೆಲಸಗಳಿಗೆ ಜರ್ಮನ್ ಭಾಷೆಯ ಜ್ಞಾನದ ಅವಶ್ಯಕತೆಯಿಲ್ಲ ಎಂದಿದ್ದಾರೆ.
ವಾರ್ಷಿಕ 90 ಸಾವಿರ ಭಾರತೀಯರಿಗೆ ವೀಸಾ ನೀಡುತ್ತಿದೆ ಜರ್ಮನಿ. ಒಬ್ಬ ವಿದ್ಯಾವಂತ, ಕೌಶಲ ಹೊಂದಿದ ಕನ್ನಡಿಗ ಆರು ಲಕ್ಷ ರೂಪಾಯಿ ಮಾಸಿಕ ವೇತನವನ್ನು ಜರ್ಮನಿಯಲ್ಲಿ ಪಡೆದುಕೊಳ್ಳ ಬಹುದು. ಜಪಾನ್ ಕೂಡ ತೀರಾ ಇತ್ತೀಚಿಗೆ ಭಾರತ ಸರಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ಐದು ವರ್ಷದಲ್ಲಿ ವಿದ್ಯಾವಂತ ಮತ್ತು ಕೌಶಲಗಳನ್ನು ಹೊಂದಿದ ಐದು ಲಕ್ಷ ಭಾರತೀಯರು ಬೇಕು ಎನ್ನುವ ಬೇಡಿಕೆ ಇಟ್ಟಿದೆ. ನಿಮಗೆ ಗೊತ್ತಿರಲಿ ಜಪಾನ್ ಜನಸಂಖ್ಯೆ ತೀವ್ರ ಗತಿಯಲ್ಲಿ ಕುಸಿಯುತ್ತಿದೆ.
ಜೊತೆಗೆ ಅಲ್ಲಿ ಈಗಾಗಲೇ ವೃದ್ಧರ ಸಾಮ್ರಾಜ್ಯ ಸೃಷ್ಟಿಯಾಗಿದೆ. ತಮಿಳುನಾಡು ಸರಕಾರ ಜಪಾನ್ ದೇಶದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನ್ನ ಯುವಜನತೆಗೆ ಜಪಾನೀಸ್ ಭಾಷೆ ಕಲಿಸುತ್ತಿದೆ. ಯುವ ಕನ್ನಡಿಗರು ಈ ಅವಕಾಶವನ್ನು ಕೈ ಚೆಲ್ಲಬಾರದು. ಫಿನ್ಲ್ಯಾಂಡ್ ದೇಶದಲ್ಲೂ ಜಪಾನ್ ದೇಶದ ಕಥೆ ಪುನರಾವರ್ತನೆ ಆಗುತ್ತಿದೆ. ಅವರು ಕೂಡ ಭಾರತೀಯರನ್ನು ತೆರೆದ ಬಾಹುಗಳಿಂದ ಆಹ್ವಾನಿಸುತ್ತಿದ್ದಾರೆ.
ಕಳೆದ ಒಂದು ದಶಕದಲ್ಲಿ ಫಿನ್ ಲ್ಯಾಂಡ್ನಲ್ಲಿರುವ ಭಾರತೀಯರ ಸಂಖ್ಯೆ 350 ಪ್ರತಿಶತ ಹೆಚ್ಚಾಗಿ ರುವುದು ಇದಕ್ಕೊಂದು ಉದಾಹರಣೆ. ತೈವಾನ್ ದೇಶದಲ್ಲಿ ಬರ್ತ್ ರೇಟ್ ಬಹಳ ಕಡಿಮೆಯಾಗಿದೆ. ಮುಂದಿನ ಹತ್ತಿಪ್ಪತ್ತು ವರ್ಷದಲ್ಲಿ ಆ ದೇಶ ಆರ್ಥಿಕವಾಗಿ ಕುಸಿದು ಬಿಡುತ್ತದೆ. ಇದನ್ನು ತಡೆಯ ಬೇಕು ಎಂದರೆ ವಲಸಿಗರು ಆ ದೇಶಕ್ಕೆ ಬೇಕೇಬೇಕು. ಹೀಗಾಗಿ ಅವರು ಕೂಡ ಭಾರತದಿಂದ ಕೆಲಸಗಾರರನ್ನು ಎದುರು ನೋಡುತ್ತಿದ್ದಾರೆ.
ಮೆಡಿಕಲ್, ಟೆಕ್ನಾಲಜಿ, ಐಟಿ ಕೆಲಸಗಳ ಜೊತೆಗೆ ಸರ್ವಿಸ್ ಸೆಕ್ಟರ್ ಮತ್ತು ಕನ್ಸ್ಟ್ರಕ್ಷನ್ ವಲಯದಲ್ಲಿ ಕೂಡ ಕೆಲಸಗಾರರ ಬೇಡಿಕೆಯಿದೆ. ಹೀಗಾಗಿ ಕೇವಲ ಬುದ್ಧಿವಂತ, ವಿದ್ಯಾವಂತ ಕನ್ನಡಿಗರಷ್ಟೇ ಅಲ್ಲದೆ ಅರೆ ನುರಿತ ಕೆಲಸಗಾರರಿಗೂ ಅವಕಾಶಗಳು ಹೇರಳವಾಗಿವೆ. ಇನ್ನು ನೇರವಾಗಿ ಒಪ್ಪಂದ ಮಾಡಿಕೊಳ್ಳದೆ ಇದ್ದರೂ ಯೂರೋಪಿನ ಬಹತೇಕ ದೇಶಗಳಲ್ಲಿ ಜನಸಂಖ್ಯೆ ಇನ್ನಿಲ್ಲದ ಕುಸಿತಕ್ಕೆ ತುತ್ತಾಗಿದೆ.
ಮುಂದಿನ ಐದ್ಹತ್ತು ವರ್ಷದಲ್ಲಿ ಎಡೆ ಉತ್ತಮ ನಾಗರಿಕರಿಗೆ ಬೇಡಿಕೆ ಹೆಚ್ಚಾಗುತ್ತದೆ. ಕಳೆದ ತಿಂಗಳು ಎರಡು ವಾರ ಫಿನ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ ಪ್ರವಾಸ ಮಾಡುವ ಅವಕಾಶ ಸಿಕ್ಕಿತ್ತು. ಆಗ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳನ್ನ, ಭಾರತೀಯ ಮಕ್ಕಳನ್ನ ಮಾತನಾಡಿ ಸುವ ಅವಕಾಶ ಕೂಡ ಸಿಕ್ಕಿತ್ತು. ಇಂದಿನ ಯುವ ಜನತೆಯ ಯೋಚನಾ ಲಹರಿ ಬಹಳ ವಿಭಿನ್ನ. 26 ವರ್ಷದ ಕೆಳಗೆ ಪ್ರಥಮ ಬಾರಿಗೆ ಸ್ಪೇನ್ ತಲುಪಿದ್ದಾಗ ನನಗೇನೋ ಸಾಧಿಸಿದ ಖುಷಿಯಿತ್ತು. ಆದರೆ ಇಂದಿನ ಹುಡುಗರಲ್ಲಿ ಅದ್ಯಾವುದೂ ಇಲ್ಲ. ಅದಕ್ಕೆ ಪ್ರಮುಖ ಕಾರಣ ಬದಲಾದ ಭಾರತ, ಪೋಷಕರ ಆರ್ಥಿಕ ಭದ್ರತೆ, ಇವುಗಳ ಜೊತೆಗೆ ಕುಸಿತ ಕಾಣುತ್ತಿರುವ ಯೂರೋಪ್ ಮತ್ತು ಅಮೆರಿಕ ಆರ್ಥಿಕತೆ.
ಇವತ್ತಿನ ಹೊಸ ಭಾರತೀಯ ಜನತೆ ನಾವ್ಯಾಕೆ ನಮ್ಮ ದೇಶ, ಜನ ಬಿಟ್ಟು ಅಷ್ಟು ದೂರ ಹೋಗಬೇಕು? ಆ ಚಳಿಯಲ್ಲಿ, ಸೋಶಿಯಲ್ ಲೈಫ್ ಇಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಹಣವನ್ನ ಕೂಡ ಉಳಿಸಿಕೊಳ್ಳಲಾಗದೆ ಅಲ್ಲಿಗೇಕೆ ಹೋಗಬೇಕು? ಎನ್ನುವ ಹಂತಕ್ಕೆ ಬಂದಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಮರಳಿ ಭಾರತಕ್ಕೆ ಹಿಂತಿರುಗುವ ಭಾವನೆ ವ್ಯಕ್ತಪಡಿಸಿದವರ ಸಂಖ್ಯೆ ಹೆಚ್ಚು. ಆದರೆ ಇಂದಿಗೆ ಯೂರೋಪಿಗೆ ವಲಸಿಗರು ಬೇಕು. ಅದು ಭಾರತೀಯರಾದರೆ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ.
ಅದರಲ್ಲೂ ಜರ್ಮನಿ ಎರಡನೇ ಇಂಗ್ಲೆಂಡ್ ಆಗುತ್ತಿದೆ. ಭಾರತೀಯರ ಸಂಖ್ಯೆ ಈ ದೇಶದಲ್ಲಿ ಏರುಗತಿ ಯಲ್ಲಿದೆ. ಇವತ್ತಿಗೆ ಭಾರತದಲ್ಲೂ ವಿದೇಶಿ ಭಾಷೆ ಕಲಿಯುವುದಕ್ಕೆ ಹೆಚ್ಚಿನ ಆಸಕ್ತಿಯನ್ನ ತೋರಿಸುತ್ತಿದ್ದಾರೆ. ಜರ್ಮನ್, ಸ್ಪ್ಯಾನಿಷ್, ಜಪಾನೀಸ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿ ಒಂದನ್ನ ಕಲಿಯುವುದು ಇಂದಿಗೆ ಜಾಣತನ ಎನ್ನವಂತಾಗಿದೆ.
ಫ್ರೆಂಚ್ ತನ್ನ ಹಳೆಯ ಕಿಮ್ಮತ್ತು ಉಳಿಸಿಕೊಳ್ಳುವಲ್ಲಿ ಎಡವಿದೆ. ಉಳಿದಂತೆ ಇಂಗ್ಲಿಷ್ ಜಾಗತಿಕ ಭಾಷೆಯಾಗಿ ತನ್ನ ವರ್ಚಸ್ಸು ಉಳಿಸಿಕೊಂಡಿದೆ. ಇಂದಿಗೆ ಭಾರತೀಯ ಯುವ ಜನತೆಯ ಮುಂದೆ ಬಹಳಷ್ಟು ಅವಕಾಶವಿದೆ. ಬಹಳಷ್ಟು ಮುಂದುವರಿದ ದೇಶಗಳಲ್ಲಿ ವಲಸಿಗರ ಅಗತ್ಯ ಬಹಳ ಹೆಚ್ಚಾಗಿದೆ. ಎಡೆಯೂ ಇಂದಿಗೆ ಪಾಯಿಂಟ್ ಬೇ ಇಮಿಗ್ರೇಷನ್ ಪಾಲಿಸಿ ಬಂದಿದೆ. ಹೀಗಾಗಿ ಇವತ್ತು ಜಗತ್ತು ಒಂದು ತೆರೆದ ಮನೆಯಾಗಿದೆ.
ಕೆನಡಾ ಮತ್ತು ಅಮೆರಿಕಾ ಅತ್ಯಂತ ದೂರ ಹಾಗೂ ವಿಶೇಷ ಪ್ಯಾಕೇಜ್ ಇಲ್ಲವಾದಲ್ಲಿ ಅಲ್ಲಿಗೆ ಹೋಗದಿರುವುದು ಉತ್ತಮ. ಉಳಿದಂತೆ ಯೂರೋಪು, ಜಪಾನ್ ಬದುಕಲು ಯೋಗ್ಯವಾದ ವಾತಾವರಣ ನೀಡುತ್ತಿವೆ. ಕೊನೆಗೂ ಎಲ್ಲಿ ಬದುಕಬೇಕು? ಹೇಗೆ ಬದುಕಬೇಕು? ಎನ್ನುವ ಪರಿಕಲ್ಪನೆ ನಮಗೆ ಇರಬೇಕು. ಇವತ್ತಿನ ದಿನ ಜಾಗತಿಕವಾಗಿ ಅವಕಾಶಗಳು ಬಹಳಷ್ಟಿವೆ.
ಮುಂದಿನ 3/4 ವರ್ಷದಲ್ಲಿ ಎಐ ಗುಮ್ಮ ಕೆಲಸ ಕದಿಯುತ್ತಾನೆ ಎನ್ನುವ ಕೂಗಿನ ಮಧ್ಯೆ, ಕೌಶಲ ಹೆಚ್ಚಿಸಿಕೊಂಡು ಎದರೂ ಸರಿಯೇ ಕೆಲಸ ಮಾಡುತ್ತೇನೆ, ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವ ಮನೋಭಾವ ಹೊಂದಿದವರಿಗೆ ಸ್ವರ್ಣಯುಗ ಆರಂಭವಾಗುತ್ತಿದೆ ಎನ್ನುವುದು ನನ್ನ ಅಭಿಮತ.