ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thimmanna Bhagwat Column: ಅಗ್ನಿಸಾಕ್ಷಿಯ ಭಾಷೆಯಿಂದ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವವರೆಗೆ

ಮೋಸದಿಂದಾದ ವಿವಾಹ, ರೋಗಗ್ರಸ್ತ, ಕಳಂಕಿತ ಅಥವಾ ವ್ಯಭಿಚಾರಿ ಪತ್ನಿಯಾದಂಥ ಕೆಲವೇ ಸಂದರ್ಭಗಳನ್ನು ಬಿಟ್ಟರೆ ಪತ್ನಿಯನ್ನು ತ್ಯಜಿಸಲು ಅನುಮತಿ ಇರಲಿಲ್ಲ. ಪ್ರಜಾಪವಾದಕ್ಕಾಗಿ ಶ್ರೀರಾಮ ಸೀತಾ ಪರಿತ್ಯಾಗ ಮಾಡಿದ್ದು ಪ್ರತ್ಯೇಕವಾದ ರಾಜಧರ್ಮವೆಂದು ಸಮರ್ಥಿಸಲಾಗುತ್ತದೆ. ವಿಚ್ಛೇದನೆಗೆ ಧಾರ್ಮಿಕ ಪೃಕ್ರಿಯೆ ಸ್ಪಷ್ಟವಾಗಿಲ್ಲ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ‌ ಭಾಗ್ವತ್

ಅಗ್ನಿಸಾಕ್ಷಿಯಾಗಿ ಪಾಣಿಗ್ರಹಣ ಮಾಡಿ ಭಾಷೆ ಕೊಡುವ ವೈದಿಕ ವಿವಾಹ ಪ್ರಕ್ರಿಯೆಯು ಒಂದು ಪವಿತ್ರ ಸಂಸ್ಕಾರ. ದಾಂಪತ್ಯವು ಜನ್ಮಾಂತರದ ಸಂಬಂಧ ಎಂದು ಹಿಂದೂಗಳು ನಂಬುವುದರಿಂದ ವಿಚ್ಛೇದನ ಮತ್ತು ಬಹುಪತ್ನಿತ್ವ ಹಿಂದೂ ಧರ್ಮದಲ್ಲಿ ಶಾಸ್ತ್ರಸಮ್ಮತವಾಗಿರಲು ಸಾಧ್ಯವಿಲ್ಲ.

ಮಹಾಭಾರತದ ಆದಿಪರ್ವದಲ್ಲಿ ಬರುವ ದೀರ್ಘತಮಸ ಎಂಬ ಅಂಧಮಹರ್ಷಿಯನ್ನು ಅವನ ಹೆಂಡತಿ ತ್ಯಜಿಸಿದಾಗ “ಪ್ರತಿಯೊಬ್ಬ ಹೆಂಗಸೂ ಅವಳ ಜೀವಿತಕಾಲದಲ್ಲಿ (ಗಂಡನ ಮರಣಾನಂತರ ಕೂಡ) ಒಬ್ಬನೇ ಒಬ್ಬ ಗಂಡನಲ್ಲಿ ಅನುರಕ್ತಳಾಗಿಬೇಕು. ತಪ್ಪಿದರೆ ಅವಳಿಗೆ ಅಪಕೀರ್ತಿ, ಅಪವಾದ ಗಳು ಬರಲಿ" ಎಂಬ ಹೊಸ ಧರ್ಮವನ್ನು ವಿಧಿಸುತ್ತಾನೆ. ಆದರೆ ನಾರದ ಸ್ಮೃತಿಯಲ್ಲಿ, “ಪತಿಯು ಬಹುಕಾಲ ಕಾಣದಿದ್ದರೆ, ಮೃತನಾದರೆ, ಸನ್ಯಾಸಿಯಾದರೆ, ನಪುಂಸಕನಾದರೆ, ಬಹಿಷ್ಕೃತನಾದರೆ ಅಂಥವನ ಪತ್ನಿಯು ಬೇರೆ ಗಂಡನನ್ನು ಹೊಂದಬಹುದು" ಎಂದು ಸ್ತ್ರೀಯರಿಗೆ ಕೂಡ ಪುನರ್ವಿ ವಾಹದ ಅವಕಾಶವನ್ನು ನೀಡಲಾಗಿದೆ.

ಇದು ಈಗಿನ ಕಾಯಿದೆಯ ನಿಬಂಧನೆಗಳಿಗೆ ಬಹುತೇಕ ಹೋಲುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದ ಪ್ರಕಾರ, ಪರಸ್ಪರ ಒಪ್ಪಿಗೆಯಿಂದ ಕೆಲವು ಬಗೆಯ ವಿವಾಹಗಳಿಂದ ಬಿಡುಗಡೆ ಪಡೆಯಬಹುದು. ಇದು ಜೀವನಾಂಶದ ಕುರಿತೂ ನಿರ್ದೇಶಿಸುತ್ತದೆ. ನಳಮಹಾರಾಜನ ಹೆಂಡತಿ ದಮಯಂತಿಗೆ ಪುನಃ ಸ್ವಯಂವರ ಮಾಡುವ ನಾಟಕ ಮಾಡಲಾಗುತ್ತದೆ. ಅದನ್ನು ಅವಳ ತಂದೆಯೇ ಋತುಪರ್ಣ ನಲ್ಲಿಗೆ ತಿಳಿಸುತ್ತಾನೆ ಎಂಬಲ್ಲಿಗೆ ಹಿಂದೂಗಳಲ್ಲಿ ಸ್ತ್ರೀಯರಿಗೂ ಪುನರ್ವಿವಾಹದ ಕ್ರಮ ಇತ್ತು, ವಿಚ್ಛೇದನವೂ ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಶಾಸ್ತ್ರಸಮ್ಮತವಾಗಿತ್ತು ಎಂಬುದು ತಿಳಿದು ಬರುತ್ತದೆ.

ರಾಜರಿಗೆ ಎಷ್ಟು ಬೇಕಾದರೂ ಮದುವೆಯಾಗುವ ಅವಕಾಶವಿತ್ತು. ಆದರೆ ಇತರ ಗಂಡಸರಿಗೆ ಮೊದಲ ಹೆಂಡತಿಗೆ ಮಕ್ಕಳನ್ನು ಹಡೆಯುವ ವಯಸ್ಸು ಮೀರಿದರೂ ಮಕ್ಕಳಾಗದಿದ್ದರೆ ಅಥವಾ ಗಂಡು ಮಕ್ಕಳು ಜನಿಸದಿದ್ದರೆ ಅಥವಾ ಅವಳು ಬಂಜೆಯಾಗಿದ್ದರೆ ಮಾತ್ರ ಪುನರ್ವಿವಾಹ ಹಾಗೂ ಬಹುಪತ್ನಿತ್ವ ಒಪ್ಪಿತವಾಗಿತ್ತು.

ಇದನ್ನೂ ಓದಿ: Thimmanna Bhagwath Column: ಟ್ರಂಪ್‌ ಸುಂಕದ ಬರೆಗೆ ಜಿಎಸ್‌ಟಿ ಕಡಿತದ ಮುಲಾಮು

ಮೋಸದಿಂದಾದ ವಿವಾಹ, ರೋಗಗ್ರಸ್ತ, ಕಳಂಕಿತ ಅಥವಾ ವ್ಯಭಿಚಾರಿ ಪತ್ನಿಯಾದಂಥ ಕೆಲವೇ ಸಂದರ್ಭಗಳನ್ನು ಬಿಟ್ಟರೆ ಪತ್ನಿಯನ್ನು ತ್ಯಜಿಸಲು ಅನುಮತಿ ಇರಲಿಲ್ಲ. ಪ್ರಜಾಪವಾದಕ್ಕಾಗಿ ಶ್ರೀರಾಮ ಸೀತಾ ಪರಿತ್ಯಾಗ ಮಾಡಿದ್ದು ಪ್ರತ್ಯೇಕವಾದ ರಾಜಧರ್ಮವೆಂದು ಸಮರ್ಥಿಸಲಾಗುತ್ತದೆ. ವಿಚ್ಛೇದನೆಗೆ ಧಾರ್ಮಿಕ ಪೃಕ್ರಿಯೆ ಸ್ಪಷ್ಟವಾಗಿಲ್ಲ.

ಗೋತ್ರದಿಂದ ಹೊರ ಹಾಕಲು ಘಟಸ್ಫೋಟವೆಂಬ ಧಾರ್ಮಿಕ ಪ್ರಕ್ರಿಯೆ ಇದೆಯಾದರೂ ಅದನ್ನು ವಿಚ್ಛೇದನದ ಸಮಯದಲ್ಲಿ ಅನುಸರಿಸುವ ಬಗ್ಗೆ ಉಲ್ಲೇಖವಿಲ್ಲ. ಸ್ವಾತಂತ್ರ್ಯಕ್ಕೆ ಮೊದಲು ಹಿಂದೂ ಗಳಲ್ಲಿ ವಿಚ್ಛೇದನದ ನಿಯಮಗಳಾಗಲೀ ಕಾನೂನಾಗಲೀ ಇರಲಿಲ್ಲ. ವೈವಾಹಿಕ ವ್ಯಾಜ್ಯಗಳನ್ನು English Matrimonial Causes Act 1888 ರ ಹಾಗೂ ಬ್ರಿಟಿಷ್ ನ್ಯಾಯಾಲಯಗಳ ತೀರ್ಪುಗಳ ಆಧಾರದಲ್ಲಿ ತೀರ್ಮಾನಿಸಲಾಗುತ್ತಿತ್ತು (ಭಾರತೀಯ ವಿಚ್ಛೇದನ ಕಾಯಿದೆ 1869 ಕೇವಲ ಕ್ರೈಸ್ತರಿಗೆ ಅನ್ವಯವಾಗುತ್ತದೆ.

ಮುಸ್ಲಿಮರಿಗೆ ಮುಸ್ಲಿಮ್ ವೈಯಕ್ತಿಕ ಕಾನೂನಿನ ತಲಾಕ್‌ನ ನಿಯಮಗಳು ಅನ್ವಯವಾಗುತ್ತವೆ). 1955ರ ಹಿಂದೂ ವಿವಾಹ ಕಾಯಿದೆಯನ್ನು ರೂಪಿಸುವಾಗ ವಿಚ್ಛೇದನದ ವಿಷಯ ಕಗ್ಗಂಟಾಗಿತ್ತು. ಹಿಂದೂಗಳಲ್ಲಿ ವಿವಾಹ ಬಿಡಿಸಲಾಗದ ನಂಟು (Indissoluble ) ಎಂಬ ನಂಬಿಕೆಯಿದ್ದು ದರಿಂದ ವಿಚ್ಛೇದನ ಮತ್ತು ವಿಶೇಷವಾಗಿ ಸ್ತ್ರೀಯರ ಪುನರ್ವಿವಾಹದ ಕುರಿತು ಕಾಯಿದೆ ರೂಪಿಸುವುದೇ ಅಸಂಗತವೆಂಬ ಭಾವನೆ ಶಾಸಕಾಂಗ ಸಭೆಯ ಕೆಲವು ಸದಸ್ಯರಲ್ಲಿತ್ತು.

ಆದರೆ ದಾಂಪತ್ಯವು ಎಂದಿಗೂ ಸರಿಯಾಗದ ಸ್ಥಿತಿಯಲಿದ್ದಾಗ ಅಥವಾ ದಂಪತಿಯ ಪೈಕಿ ಒಬ್ಬರು ಹೀನಾಯ ಪರಿಸ್ಥಿತಿಯಲ್ಲಿ ಇನ್ನೊಬ್ಬರ ಜತೆ ಅನಿವಾರ್ಯವಾಗಿ ಜೀವಿಸುವಾಗಲೂ ದಾಂಪತ್ಯದ ಮುಂದುವರಿಕೆ ಸಮರ್ಥನೀಯವಲ್ಲ ಎಂಬ ಅಂಶ ಶಾಸಕಾಂಗ ಸಭೆಗೆ ಮನವರಿಕೆಯಾಯಿತು. ಸುದೀರ್ಘ ಚರ್ಚೆಯ ನಂತರ ವಿಚ್ಛೇದನದ ಕುರಿತು ವಿವಿಧ ಕಲಮುಗಳನ್ನು ಸೇರಿಸಲಾಯಿತು.

ಈ ಕಾಯಿದೆಯ 3, 4 ಮತ್ತು 5ನೇ ಅಧ್ಯಾಯಗಳು ಹಿಂದೂ ವಿವಾಹಕ್ಕೆ ಸಂಬಂಧಿಸಿದ ವ್ಯಾಜ್ಯಗಳ ಕುರಿತಾಗಿವೆ. ಮೊದಲು ಆಶ್ಚರ್ಯದ ವಿಷಯವಾಗಿದ್ದ ಡೈವೋರ್ಸ್ ಈಗ ನಮ್ಮ ಹತ್ತಿರದವರಲ್ಲೂ ಕೇಳಿಬರುತ್ತಿದೆ. ಆರಂಭದಲ್ಲಿ ಅಭಿಪ್ರಾಯಭೇದ, ಮುನಿಸು, ವಿವಾದ, ಜಗಳ, ಪ್ರತ್ಯೇಕತೆ, ಪಂಚಾ ಯ್ತಿ, ಪುನರ್ಮಿಲನ, ಪುನಃ ಜಗಳ ಇದೆಲ್ಲಾ ಅಂತಿಮವಾಗಿ ವಿಚ್ಛೇದನದ ಹಂತಕ್ಕೆ ಹೋಗುವಲ್ಲಿ ಕೇವಲ ಗಂಡ ಹೆಂಡತಿಯರ ನಡುವಿನ ಭಾವನಾತ್ಮಕ ಸಂಬಂಧದ ಜತೆಗೆ ಕಾನೂನಿನ ಅನೇಕ ಪ್ರಕ್ರಿಯೆಗಳ ಪಾಲನೆ ಆಗಬೇಕಾದಲ್ಲಿ ಇಬ್ಬರಿಗೂ ಈ ವಿಷಯಗಳ ಕುರಿತು ಅರಿವು ಅಗತ್ಯ. ವಿಚ್ಛೇದನಕ್ಕಿಂತ ಮಕ್ಕಳ ಪೋಷಣೆ ಹಾಗೂ ಜೀವನಾಂಶದ ವಿಷಯ ಇನ್ನೂ ಜಟಿಲವಾದದ್ದು.

ದಾಂಪತ್ಯ ಹಕ್ಕುಗಳ ಪುನಃಸ್ಥಾಪನೆ ( (Restitution of Conjugal Rights. Section- 9 ): ಒಬ್ಬರು ಇನ್ನೊಬ್ಬರ ಜತೆ ವಾಸಿಸುವುದು, ಆರ್ಥಿಕ ಮತ್ತು ವ್ಯಕ್ತಿಗತ ಬೆಂಬಲ, ಲೈಂಗಿಕ ಜೀವನವೂ ಸೇರಿದಂತೆ ದಾಂಪತ್ಯದ ಸಂಬಂಧ ದಂಪತಿಗಳ ಪರಸ್ಪರ ಕಾಯಿದೆಬದ್ಧ ಹಕ್ಕು. ವಿವಾಹದ ನಂತರ ಪತಿ-ಪತ್ನಿಯರಲ್ಲಿ ಮನಸ್ತಾಪವಾಗಿ ಪರಸ್ಪರರು ದೂರವುಳಿದು ಆ ಕಾರಣದಿಂದ ಆ ಇನ್ನೊಬ್ಬರು ಅಂಥ ವೈವಾಹಿಕ ಸಂಬಂಧದಿಂದ ವಂಚಿತರಾದರೆ ಆ ಸಂಬಂಧವನ್ನು ಪುನಃ ಸ್ಥಾಪಿಸಲು ಕೋರ್ಟಿಗೆ ದಾವೆ ದಾಖಲಿಸಬಹುದು.

ಆದರೆ ಹಾಗೆ ದೂರಾಗಲು ಅರ್ಜಿದಾರರೇ ಕಾರಣರಾಗಿದ್ದರೆ ಅಥವಾ ಕಾಯಿದೆಬದ್ಧ ಅನಿವಾರ್ಯತೆ ಕಾರಣವಾದರೆ ಕೋರ್ಟು ಆದೇಶಿಸಲು ನಿರಾಕರಿಸಬಹುದು. ಉದಾಹರಣೆಗೆ ಪತಿ-ಪತ್ನಿಯರು ಪ್ರತ್ಯೇಕವಾಗಿ ದೂರದ ಊರಿನಲ್ಲಿ ನೌಕರಿ ಮಾಡುತ್ತಿದ್ದಾಗ ಒಂದೇ ಕಡೆ ವಾಸಿಸುವುದು ಅಸಾಧ್ಯ ವಾಗಬಹುದು. ಅಥವಾ ಅಂಥ ವೇಳೆ ಒಬ್ಬರು ಇನ್ನೊಬ್ಬರಿದ್ದಲ್ಲಿಗೆ ತಿಂಗಳುಗಟ್ಟಲೆ ಹೋಗದೇ ಇರಬಹುದು.

ಅಥವಾ ಗಂಡನೇ ಹೆಂಡತಿಯನ್ನು ಹೊರಗಟ್ಟಿ ನಂತರ ದಾವೆ ಹಾಕಿದರೆ ಅದು ಒಪ್ಪತಕ್ಕದ್ದಲ್ಲ. ಗಂಡನ ಜತೆ ವಾಸಿಸುವುದು ಪತ್ನಿಯ ಜೀವಕ್ಕೇ ಅಪಾಯ ಎಂಬ ಪರಿಸ್ಥಿತಿ ಮನವರಿಕೆ ಯಾದಾಗಲೂ ಕೋರ್ಟು ಇಂಥ ಆದೇಶ ನೀಡಲು ನಿರಾಕರಿಸಬಹುದು. ಅಂಥ ಸಂದರ್ಭ ಗಳಿಲ್ಲದಿದ್ದಲ್ಲಿ ಕೋರ್ಟು ದಾಂಪತ್ಯ ಜೀವನದ ಪುನಃಸ್ಥಾಪನೆಯ ಡಿಕ್ರಿಯನ್ನು ನೀಡಬಹುದು.

ಅಂಥ ಡಿಕ್ರಿ ನೀಡಿದ ಒಂದು ವರ್ಷದೊಳಗೆ, ಪ್ರತಿವಾದಿ ಪತಿ/ಪತ್ನಿಯು ಅರ್ಜಿದಾರ ಪತಿ/ಪತ್ನಿಯ ಜತೆಗೆ ಮರಳಿ ಬರದಿದ್ದರೆ ಅದು ವಿಚ್ಛೇದನೆಗೆ ಅರ್ಜಿ ಸಲ್ಲಿಸಲು ಮುಖ್ಯ ಕಾರಣ (ಭೂಮಿಕೆ) ಆಗುತ್ತದೆ. ಅಂಥ ಡಿಕ್ರಿಯನ್ನು ಪಾಲಿಸದಿದ್ದರೆ ಇತರ ಡಿಕ್ರಿಗಳಂತೆ ನ್ಯಾಯಾಂಗ ನಿಂದನೆ, ಆಸ್ತಿ ಮುಟ್ಟುಗೋಲಿನಂಥ ಕ್ರಮಗಳ ಜತೆಗೆ 23 ಮತ್ತು 24ನೇ ಕಲಮುಗಳ ಪ್ರಕಾರ ಜೀವನಾಂಶದ ಆದೇಶವನ್ನೂ ಕೇಳಬಹುದು. ಈ ಕಾರಣಕ್ಕಾಗಿಯೇ 9ನೇ ಕಲಮನ್ನು ದುರುಪಯೋಗ ಗೊಳಿಸ ಲಾಗುತ್ತಿದೆ ಎನ್ನಲಾಗುತ್ತದೆ.

ಪರಸ್ಪರರು ಹೊಂದಿಕೊಂಡು ಪುನಃ ಬಾಳಲು ಅನುವು ಮಾಡಿಕೊಡುವ ಈ ಕಲಮು, ಪರಸ್ಪರ ದ್ವೇಷಿಸುವವರಿಗೆ ಒಟ್ಟಿಗೆ ಇರಲು ಆದೇಶಿಸುವ ಮೂಲಕ ವೈಯ್ಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಧಕ್ಕೆ ಉಂಟುಮಾಡುವಂತಿದೆ, ಅದ್ದರಿಂದ 9ನೇ ಕಲಮು ಅಸಾಂವಿಧಾನಿಕ ಎಂದು ಕೆಲವು ಪ್ರಕರಣಗಳಲ್ಲಿ ವಾದಿಸಲಾಗಿತ್ತು.

ಆದರೆ ಅಭಿನೇತ್ರಿ ಸರಿತಾ ವರ್ಸಸ್ ವೆಂಕಟಸುಬ್ಬಯ್ಯ ಪ್ರಕರಣದಲ್ಲಿ 9ನೇ ಕಲಮು ಸಂವಿಧಾನದ 21ನೇ ವಿಧಿಯಡಿ ದತ್ತವಾದ ಖಾಸಗಿತನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆಯುಂಟು ಮಾಡುವುದಿಲ್ಲ ಎಂದು ತೀರ್ಪಿತ್ತಿತು. ಅಂಥದೇ ತೀರ್ಪನ್ನು ಸರೋಜಾರಾಣಿ ವರ್ಸಸ್ ಸುದರ್ಶನ್ ಕುಮಾರ ಪ್ರಕರಣದಲ್ಲೂ ನೀಡಲಾಗಿದೆ.

ನ್ಯಾಯಾಂಗ ಪ್ರತ್ಯೇಕತೆ (10ನೇ ಕಲಮು): ದಂಪತಿಗಳು ಕೂಡಿ ಬಾಳಬೇಕಾದ ಕಾನೂನಿನ ಬಾಧ್ಯತೆಯನ್ನು ಪಾಲಿಸುವುದು ಸೂಕ್ತ ಕಾರಣಗಳಿಗಾಗಿ ಅಸಾಧ್ಯವೆನಿಸಿದಾಗ ದಂಪತಿಗಳಾಗಿಯೇ ಮುಂದುವರಿದು ಕಾಯಿದೆಬದ್ಧವಾಗಿ ಪ್ರತ್ಯೇಕವಾಗಿರಲು ಕೋರ್ಟಿನ ಆದೇಶ ಪಡೆಯುವ ಪ್ರಕ್ರಿಯೆ ಯನ್ನು ನ್ಯಾಯಾಂಗ ಪ್ರತ್ಯೇಕತೆ ಎನ್ನಬಹುದು. ಹಾಗೆ ಆದೇಶ ಪಡೆದಾಗ ವಾದಿಯು ಪ್ರತಿವಾದಿ ಯೊಂದಿಗೆ ದಾಂಪತ್ಯ ಜೀವನ ನಡೆಸುವುದು ಕಡ್ಡಾಯವಾಗಿರುವುದಿಲ್ಲ.

ಹಿಂದೂ ವಿವಾಹ ಕಾಯಿದೆಯ 10ನೇ ಕಲಮಿನ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸ ಬೇಕಾಗುತ್ತದೆ. 13ನೇ ಕಲಮಿನ 1 ಮತ್ತು 2ನೇ ಉಪಕಲಮುಗಳ ಅಡಿಯಲ್ಲಿ ವಿಚ್ಛೇದನಕ್ಕೆ ಆಧಾರ ವಾಗುವ ಎಲ್ಲಾ ಕಾರಣಗಳೂ Judicial Separation ಅರ್ಜಿಗೆ ಆಧಾರವಾಗುತ್ತವೆ. ನ್ಯಾಯಾಂಗ ಪ್ರತ್ಯೇಕತೆ ವಿಚ್ಛೇದನವಲ್ಲ. ಬದಲಾಗಿ ಒಡೆದ ದಾಂಪತ್ಯದ ಮರು ಹೊಂದಾಣಿಕೆಯ ಸಾಧ್ಯತೆಯತ್ತ ಅವಕಾಶ ಕಲ್ಪಿಸಲು ಒಂದು ಚಿಕ್ಕ ವಿರಾಮ. ನ್ಯಾಯಾಂಗ ಪ್ರತ್ಯೇಕತೆಯ ಕುರಿತು ಕೋರ್ಟಿನಲ್ಲಿ ವಿಚಾರಣೆ ನಡೆಯುವಾಗ ಅಥವಾ ಅಂಥ ಡಿಕ್ರಿ ನೀಡುವಾಗ ಜೀವನಾಂಶ ಕೊಡಲು ಕೂಡಾ ನ್ಯಾಯಾಲಯ ಆದೇಶಿಸಬಹುದು.

ಡಿಕ್ರಿ ನೀಡಿದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ದಂಪತಿಗಳು ಪುನಃ ಕೂಡಿ ಬಾಳದಿದ್ದರೆ ಅದು ವಿಚ್ಛೇದನಕ್ಕೆ ಭೂಮಿಕೆಯಾಗುತ್ತದೆ. ನ್ಯಾಯಾಂಗ ಪ್ರತ್ಯೇಕತೆಯ ಡಿಕ್ರಿ ಪಡೆದ ನಂತರ ದಾಂಪತ್ಯದ ಪರಸ್ಪರ ಬಾಧ್ಯತೆಯನ್ನು ಪಾಲಿಸುವುದು ಕಡ್ಡಾಯವಲ್ಲ. ಅಗ್ನಿಸಾಕ್ಷಿಯಾಗಿ ದಂಪತಿಗಳಾಗಿರಲು ಒಪ್ಪಿ ಬಾಳ್ವೆ ಆರಂಭಿಸಿದ ವಧು-ವರರು ಕೋರ್ಟಿನಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡುವ ಪರಿಸ್ಥಿತಿಗೆ ತಲುಪುವುದು ದುರದೃಷ್ಟಕರ.

ಸುಖವೋ, ಕಷ್ಟವೋ ಹೊಂದಿಕೊಂಡು ಬದುಕುವುದು ಕೇವಲ ಸಿರಿವಂತಿಕೆಯಿಂದ ಬರುವುದಿಲ್ಲ. ದುಡಿದು ಮಕ್ಕಳನ್ನು ಸಾಕುವ ಅನೇಕ ಮಹಿಳೆಯರು, ಲಕ್ಷಗಟ್ಟಲೆ ದುಡಿಮೆ ಇದ್ದರೂ ಸಾಕಾಗದ ಕುಟುಂಬಗಳಲ್ಲಿ ಮನೆಗೆಲಸ ಮಾಡಿ ಅವರಿಗಿಂತ ಸಂತೋಷದಿಂದ ಬದುಕುತ್ತಾರೆ. ವಿಚ್ಛೇದನವನ್ನು ತಪ್ಪಿಸಿ ದಂಪತಿಗಳನ್ನು ಒಂದಾಗಿಸುವುದೇ ಕಾಯಿದೆಯ ಉದ್ದೇಶ.

ಸಮಾಜವೂ ಅದನ್ನೇ ಬಯಸುತ್ತದೆ. ಹಾಗಾಗಿ ದಾಂಪತ್ಯವನ್ನು ಕೊನೆಗೊಳಿಸುವ ವಿಚ್ಛೇದನದ ಡಿಕ್ರಿ ನೀಡುವ ಮೊದಲು ನ್ಯಾಯಾಲಯಗಳು ಎಚ್ಚರಿಕೆಯಿಂದ ವ್ಯವಹರಿಸುತ್ತವೆ, ಅನೇಕಸಲ ಉದ್ದೇಶಪೂರ್ವಕ ವಿಳಂಬದ ಹಾದಿಯನ್ನು ಅನುಸರಿಸುತ್ತವೆ. ಕ್ಷುಲ್ಲಕ ಕಾರಣಗಳಿಗೆ ಸಲ್ಲಿಸ ಲಾಗುವ ವಿಚ್ಛೇದನ ಅರ್ಜಿಗಳನ್ನು ತಿರಸ್ಕರಿಸುತ್ತವೆ.

ಕುಟುಂಬ ನ್ಯಾಯಾಲಯಗಳು ದಂಪತಿಗಳ ವಿರಸ ಸರಿಪಡಿಸಿ ಪುನಃ ಒಂದಾಗಲು ಸಲಹೆಗಾರರನ್ನು ನೇಮಿಸುತ್ತವೆ. ನ್ಯಾಯಾಧೀಶರು ದಂಪತಿಗಳನ್ನು ಮಠವೊಂದರ ಸ್ವಾಮೀಜಿಗಳ ಬಳಿ ಚರ್ಚಿಸಲು ಕಳುಹಿಸಿದ್ದು ಇತ್ತೀಚೆಗೆ ವರದಿಯಾಗಿತ್ತು. ಹೀಗೆ ದಂಪತಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಕಾಯಿದೆಯ ಚೌಕಟ್ಟಿನ ಹೊರಗೂ ಕೋರ್ಟುಗಳು ಕೆಲವು ಕ್ರಮಗಳನ್ನು ಕೈಗೊಳ್ಳುತ್ತವೆ. ಅಂತಿಮ ವಾಗಿ ವಿವಾಹದ ವಿಸರ್ಜನೆಯೇ ಸೂಕ್ತ/ ಅನಿವಾರ್ಯವೆಂದು ಕಂಡುಬಂದಾಗಷ್ಟೇ ವಿಚ್ಛೇದನದ ಡಿಕ್ರಿ ನೀಡಲಾಗುತ್ತದೆ.

ವಿಚ್ಛೇದನದ ಕುರಿತಾದ ಕಾಯಿದೆಯ ( Divorce–Section 13 ) ಒಂದಿಷ್ಟು ಮಹತ್ವದ ಅಂಶಗಳನ್ನು ಈಗ ಚರ್ಚಿಸೋಣ. ವಿವಾಹದ 50ನೇ ವಾರ್ಷಿಕೋತ್ಸವ ಆಚರಿಸುವವರೆಲ್ಲರೂ ತಾವು ‘ಆದಶ ದಂಪತಿಗಳು’ ಎಂದು ಹೇಳಿಕೊಂಡರೆ ಅದು ಆತ್ಮವಂಚನೆಯಾದೀತು. ಯಾಕೆಂದರೆ ಕೆಲವೊಮ್ಮೆ ಆರ್ಥಿಕ ಅವಲಂಬನೆ, ಸಮಾಜದ ಅಪವಾದ, ಮಕ್ಕಳ ಹಿತ ಅಥವಾ ಧಾರ್ಮಿಕ ನಂಬಿಕೆಯಂಥ ಕಾರಣಗಳಿಗಾಗಿ Marriage till Death ಎಂಬ ಪರಿಸ್ಥಿತಿಗೆ ದಂಪತಿಗಳು ಒಡ್ಡಿಕೊಂಡಿರ ಬಹುದು.

ಹೀಗಾಗಿ ಭಾರತದಲ್ಲಿ ವಿಚ್ಛೇದನದ ಪ್ರಮಾಣ ಕೇವಲ ಒಂದು ಪ್ರತಿಶತ ಎಂದರೆ ಹೆಮ್ಮೆ ಪಡುವುದು ಸಲ್ಲ ಎಂಬುದು ಕೆಲವರ ವಾದ. ಹಾಗಂತ ವಿಚ್ಛೇದನದ ಪ್ರಮಾಣ ಹೆಚ್ಚಾಗುತ್ತಿರುವುದು ಪ್ರಗತಿಪರ ಬೆಳವಣಿಗೆಯಲ್ಲ. ಸುಂದರ ಸಂಸಾರದ ಕನಸು ಹೊತ್ತು ದಾಂಪತ್ಯವನ್ನು ಆರಂಭಿಸುವ ಅನೇಕ ದಂಪತಿಗಳು ಸಂವಾದದ ಕೊರತೆ, ತಪ್ಪು ತಿಳಿವಳಿಕೆ, ಉದ್ಯೋಗದಲ್ಲಿನ ಒತ್ತಡ, ಹೊಂದಾಣಿಕೆಯ ತೊಂದರೆಯಂಥ ಕಾರಣಗಳಿಗೆ ಬಹುಬೇಗ ಭಾವನೆಗಳನ್ನು ಮರೆತು ವಿಚ್ಛೇದನದ ದಾರಿ ತುಳಿಯು ತ್ತಿದ್ದಾರೆ.

ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಶಿಕ್ಷಣ ಮತ್ತು ಅದರಿಂದ ಜಾಗೃತವಾದ ಆತ್ಮಾಭಿಮಾನ, ಹಕ್ಕುಗಳ ಕುರಿತು ಪ್ರಜ್ಞೆ, ಶೋಷಣೆ/ದೌರ್ಜನ್ಯಗಳನ್ನು ವಿರೋಧಿಸುವ ಮನೋಸ್ಥಿತಿ ಇವೆಲ್ಲ ವಿಚ್ಛೇದನಕ್ಕೆ ಸಮರ್ಥನೀಯ ಕಾರಣಗಳು. ಆದರೆ ಸ್ವೇಚ್ಛಾಚಾರ ಎನಿಸಬಹುದಾದ ಸ್ವಾತಂತ್ರ್ಯ, ಹಣ-ದೌಲತ್ತಿನ ದುರಾಸೆ, ಕೌಟುಂಬಿಕ ವ್ಯವಸ್ಥೆಯ ಕುರಿತು ತಿರಸ್ಕಾರ ಮುಂತಾದವು ವಿಚ್ಛೇದನಕ್ಕೆ ಎಡೆಮಾಡುವ ಸಾಮಾಜಿಕ ಸಮಸ್ಯೆಗಳಾಗಿವೆ. ಈ ಪ್ರಕ್ರಿಯೆಯಲ್ಲಿ ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಿಣೆ ವಿರೋಧಿ ಕಾಯಿದೆಗಳ ದುರುಪಯೋಗದ ಅನೇಕ ಪ್ರಕರಣಗಳು ಕೋರ್ಟುಗಳ ಮುಂದೆ ಬಂದಿವೆ.

ಕ್ಷುಲ್ಲಕ ವಿಷಯಗಳನ್ನು ತಮ್ಮ ತಮ್ಮಲ್ಲಿ/ಹಿರಿಯರ ಮಾರ್ಗದರ್ಶನದಲ್ಲಿ ಬಗೆಹರಿಸಿಕೊಳ್ಳುವ ಬದಲು ಕೋರ್ಟಿಗೆ ತರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ದುರಂತವೆಂದರೆ ಅನೇಕ ಸಲ ಹೆತ್ತವರೂ ಇದಕ್ಕೆ ಪರೋಕ್ಷ ಕಾರಣರಾಗುವುದು. ಹೆತ್ತವಳೇ ಎಳೆಯ ಮಕ್ಕಳನ್ನು ಬಿಟ್ಟು ಹೋಗುತ್ತಾಳೆಂದರೆ ಅದನ್ನು ಹಠ ಮತ್ತು ಸ್ವ-ಪ್ರತಿಷ್ಠೆಯ ಪರಾಕಾಷ್ಠೆಯೆಂದೇ ಹೇಳಬೇಕು.

ಕಾನೂನುಬದ್ಧ ವಿವಾಹವನ್ನು ಕೊನೆಗೊಳಿಸುವ/ವಿಸರ್ಜಿಸುವ ಆದೇಶವೇ ವಿಚ್ಛೇದನ ಡಿಕ್ರಿ. ದಾಂಪತ್ಯವನ್ನು ಮುಂದುವರಿಸುವುದು ಅಸಾಧ್ಯವೆನಿಸಿದಾಗ ಅಥವಾ ಅದರಲ್ಲಿ ಆಸಕ್ತಿಯಿಲ್ಲ ದಿದ್ದರೆ ಸೂಕ್ತ ಕಾರಣಗಳ ಆಧಾರದಲ್ಲಿ ಕೋರ್ಟಿಗೆ ವಿಚ್ಛೇದನದ ಅರ್ಜಿ ಸಲ್ಲಿಸಬಹುದು.

ವಿಚ್ಛೇದನದ ಡಿಕ್ರಿ ನೀಡಲು ಕಾರಣವಾಗಬಹುದಾದ ಕಾನೂನಿನ ಅಂಶಗಳು ಹೀಗಿವೆ: ೧. ಅರ್ಜಿದಾರರನ್ನು ವಿವಾಹವಾದ ನಂತರ, ಪ್ರತಿವಾದಿಯು ಮೂರನೇ ವ್ಯಕ್ತಿಯೊಂದಿಗೆ ಸ್ವಇಚ್ಛೆ ಯಿಂದ (ಬಲಾತ್ಕಾರ ಅಲ್ಲ) ಲೈಂಗಿಕ ಸಂಪರ್ಕ ಮಾಡಿದ್ದರೆ. ಆದರೆ ಅಂಥ ಕೇವಲ ಒಂದೇ ಘಟನೆ ವಿಚ್ಛೇದನಕ್ಕೆ ಕಾರಣವಾಗದು ಎಂಬ ಕೋರ್ಟ್ ಆದೇಶಗಳಿವೆ.

೨. ವಿವಾಹದ ನಂತರ ಪ್ರತಿವಾದಿಯು ಅರ್ಜಿದಾರರನ್ನು ಕ್ರೂರತೆಯಿಂದ ನಡೆಸಿಕೊಂಡಿದ್ದರೆ. ಕ್ರೂರತೆ ಎಂದರೆ ಸಾಮಾನ್ಯ ಅರ್ಥದಲ್ಲಿ ಪ್ರತಿವಾದಿ ಪತಿ/ಪತ್ನಿಯೊಂದಿಗೆ ವಾಸಿಸುವುದು ಅರ್ಜಿದಾರರಿಗೆ ಅಪಾಯ ಎಂಬ ಭಾವನೆ ಬರುವಂಥ ನಡವಳಿಕೆ. ಅದು ಶಾರೀರಿಕ ಅಥವಾ ಮಾನಸಿಕವಾಗಿರಬಹುದು. ಮಾನಸಿಕ ಕ್ರೂರತೆ ಎಂದರೆ ಪತಿ/ಪತ್ನಿ ಒಬ್ಬರು ಇನ್ನೊಬ್ಬರಿಗೆ ನೀಡುವ ಮಾನಸಿಕ ಹಿಂಸೆ. ನಿಂದೆ, ಅವಾಚ್ಯ ಶಬ್ದ ಪ್ರಯೋಗ, ಎಲ್ಲರೆದುರು ಹೀಗಳೆಯುವುದು, ಅಪಮಾನಿಸುವುದು, ಶಾರೀರಿಕ ಅಪಾಯ ಮಾಡುವ ಬೆದರಿಕೆ ಹಾಕುವುದು, ಬ್ಲ್ಯಾಕ್‌ಮೇಲ್, ಮಾನಸಿಕವಾಗಿ ಪರಿತ್ಯಜಿಸುವುದು, ಅತಿ ಹೆಚ್ಚಿನ ನಿಯಂತ್ರಣ ಅಥವಾ ಕಣ್ಗಾವಲು, ವ್ಯಭಿಚಾರದ ಸುಳ್ಳು ಆಪಾದನೆ, ಸತತವಾಗಿ ಟೀಕಿಸುವುದು, ಸಾಮಾಜಿಕವಾಗಿ ಪ್ರತ್ಯೇಕಿಸುವುದು, ಕನಿಷ್ಠ ಅವಶ್ಯಕತೆಗಳನ್ನು ಒದಗಿಸದಿರುವುದು ಮುಂತಾದ ನಡವಳಿಕೆಗಳು ಕ್ರೂರತೆಯ ವ್ಯಾಪ್ತಿಯಲ್ಲಿ ಬರುತ್ತವೆ.

ಕ್ರೂರತೆಯ ವಿಷಯದಲ್ಲಿ ಸುಪ್ರೀಂ ಕೋರ್ಟು ಅನೇಕ ಪ್ರಕರಣಗಳಲ್ಲಿ ಆದೇಶ ನೀಡಿದೆ. ವಿ. ಭಗತ್ ವರ್ಸಸ್ ಡಿ. ಭಗತ್ ಪ್ರಕರಣದಲ್ಲಿ ಮಕ್ಕಳನ್ನು ಹೊಂದುವ ಸಲುವಾಗಿ ಲೈಂಗಿಕ ಕ್ರಿಯೆಯನ್ನು ಅಲ್ಲಗಳೆಯುವುದನ್ನೂ ಅದು ಮಾನಸಿಕ ಕ್ರೂರತೆಯೆಂದು ಪರಿಗಣಿಸಿತು. ವರದಕ್ಷಿಣೆಗೆ ಒತ್ತಾಯಿಸು ವುದು ಮಾನಸಿಕ ಕ್ರೂರತೆ ಮತ್ತು ಶಿಕ್ಷಾರ್ಹ ಅಪರಾಧ.

ನವೀನ ಕೌಲಿ ವರ್ಸಸ್ ನೀಲು ಕೌಲಿ ಪ್ರಕರಣದಲ್ಲಿ ವ್ಯಭಿಚಾರ, ಮಾನಸಿಕ ಅಸ್ವಸ್ಥತೆ, ನಪುಂಸಕತ್ವ ದಂಥ ವಿಷಯಗಳ ಸುಳ್ಳು ಆಪಾದನೆಯನ್ನು ಮಾನಸಿಕ ಕ್ರೂರತೆ ಎಂದು ಪರಿಗಣಿಸಿತು.

ಕೆ.ಶ್ರೀನಿವಾಸ್ ರಾವ್ ವರ್ಸಸ್ ಡಿ.ಎ.ದೀಪಾ ಪ್ರಕರಣದಲ್ಲಿ ಕೇವಲ ಒಂದೆರಡು ಸಲ ಸಿಟ್ಟಿನಲ್ಲಿ ಹೇಳಿದ ಉದ್ವೇಗಪೂರ್ಣ ಮಾತುಗಳನ್ನೇ ಕ್ರೂರತೆಯೆಂದು ಪರಿಗಣಿಸಲಾಗದು. ಅದು ಉದ್ದೇಶ ಪೂರ್ವಕವಾಗಿ ಸತತವಾದ ನಡವಳಿಕೆಯಾಗಿರಬೇಕು ಎಂದು ತೀರ್ಪನ್ನಿತ್ತಿತು. ಹೀಗೆ ಮಾನಸಿಕ ಕ್ರೂರತೆಯೆನ್ನುವುದು ಸಂದರ್ಭ-ಸನ್ನಿವೇಶಗಳಿ ಗನುಗುಣವಾಗಿ ನಿರ್ಣಯಿಸುವ ಸೂಕ್ಷ್ಮ ಅಂಶ ವಾಗಿರುತ್ತದೆ.

೩. ಸಕಾರಣವಿಲ್ಲದೆ, ವಿವಾಹದ ನಂತರ, ದಂಪತಿಗಳಲ್ಲಿ ಒಬ್ಬರು ಇನ್ನೊಬ್ಬರನ್ನು ಎರಡು ವರ್ಷಕ್ಕೂ ಅಧಿಕ ಸಮಯ ಪರಿತ್ಯಜಿಸಿದ್ದರೆ. Desertion ಅಂದರೆ ಬೇರೆ ಮನೆಯಲ್ಲಿ ವಾಸವಿರ ಬೇಕೆಂದಲ್ಲ; ಒಂದೇ ಮನೆಯಲ್ಲಿದ್ದೂ ಪರಸ್ಪರ ಸಂಬಂಧವಿಲ್ಲದಿರಬಹುದು ( Constructive Desertion). ಅಂಥ ತ್ಯಜಿಸುವಿಕೆ ವೈವಾಹಿಕ ಸಂಬಂಧ ಬೇಡವೆಂಬ ಉದ್ದೇಶದಿಂದ ಆಗಿರಬೇಕು. ಉದ್ದೇಶಪೂರ್ವಕ ತಿರಸ್ಕಾರ, ದೈಹಿಕ ಸಂಬಂಧವಿಲ್ಲದಿರುವುದು ಇಂಥ ಅನೇಕ ನಡವಳಿಕೆಗಳು ಈಛಿoಛ್ಟಿಠಿಜಿಟ್ಞ ಎಂದು ಪರಿಗಣಿಸಲ್ಪಡುತ್ತವೆ.

೪. ಪತಿ/ಪತ್ನಿಯರ ಪೈಕಿ ಒಬ್ಬರು ಹಿಂದೂ ಧರ್ಮವನ್ನು ತ್ಯಜಿಸಿದ್ದರೆ ಇನ್ನೊಬ್ಬರು ವಿಚ್ಛೇದನ ಕೇಳಲು ಅದು ಆಧಾರವಾಗಬಹುದು.

೫. ದಂಪತಿಗಳ ಪೈಕಿ ಒಬ್ಬರು ಇನ್ನೊಬ್ಬರ ಜತೆ ವಾಸಿಸಲು ಅಸಾಧ್ಯವಾಗುವಷ್ಟು ಮತ್ತು ಗುಣ ಪಡಿಸಲಾಗದ ಮಾನಸಿಕ ಅಸ್ವಸ್ಥತೆ ಅಥವಾ ಸಾಂಕ್ರಾಮಿಕವಾದ ಲೈಂಗಿಕ ರೋಗದಿಂದ ಅವರು ಬಳಲುತ್ತಿದ್ದರೆ.

೬. ಪ್ರತಿವಾದಿ ಸನ್ಯಾಸಿ/ಸನ್ಯಾಸಿನಿಯಾದರೆ.

೭. ಏಳು ವರ್ಷಕ್ಕೂ ಅಧಿಕ ಸಮಯದಿಂದ ಬದುಕಿದ್ದಾರೆಯೋ ಇಲ್ಲವೋ ಎಂದು ತಿಳಿಯದಿದ್ದರೆ.

೮. ನ್ಯಾಯಾಂಗ ಪ್ರತ್ಯೇಕತೆ ಅಥವಾ ದಾಂಪತ್ಯ ಸಂಬಂಧದ ಮರುಸ್ಥಾಪನೆಯ ಡಿಕ್ರಿ ಆದ ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಪರಸ್ಪರರ ಕೂಡುವಿಕೆ ಆಗದಿದ್ದರೆ. ಈ ಎಲ್ಲಾ ಕಾರಣಗಳಿಗೆ ವಿಚ್ಛೇದನ ಅರ್ಜಿ ಸಲ್ಲಿಸುವಾಗ ಅವಶ್ಯಕ ಪುರಾವೆ ಒದಗಿಸುವುದು ಅರ್ಜಿದಾರರ ಹೊಣೆಯಾಗಿರು ತ್ತದೆ.

ಇಂಥ ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ಅಥವಾ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಹೆಚ್ಚಿನ ಪ್ರಕರಣಗಳಲ್ಲಿ ನ್ಯಾಯಾಲಯವು ವಿಚ್ಛೇದನವನ್ನು ತಡೆಯಲು ಮತ್ತು ದಾಂಪತ್ಯವನ್ನು ಪುನಃಸ್ಥಾಪಿಸಲು ಯತ್ನಿಸುತ್ತದೆ. ದಂಪತಿಗಳಿಗೆ ಸಲಹೆ ನೀಡಲು ಸಲಹೆಗಾರರನ್ನು ನೇಮಿಸಿ ಅವರ ಜತೆ ಚರ್ಚಿಸಲು ಆದೇಶಿಸುತ್ತದೆ.

13-ಎ ಅಡಿಯಲ್ಲಿ ವಿಚ್ಛೇದನದ ಬದಲು ನ್ಯಾಯಾಂಗ ಪ್ರತ್ಯೇಕತೆಯ ಆದೇಶ ನೀಡುತ್ತದೆ. ಎಲ್ಲಾ ಯತ್ನಗಳು ವಿಫಲಗೊಂಡಾಗ ಮತ್ತು ಸೂಕ್ತ ಕಾರಣಗಳಿದ್ದರೆ ಮಾತ್ರ ವಿಚ್ಛೇದನದ ಡಿಕ್ರಿ ನೀಡಲಾಗು ವುದು. ಅಂಥ ಡಿಕ್ರಿ ನೀಡುವಾಗ 23ನೇ ಕಲಮಿನ ನಿಯಮಾವಳಿಗಳನ್ನು ಕೋರ್ಟು ಗಮನದಲ್ಲಿಡು ತ್ತದೆ. ಈ ಕಾಯಿದೆಯ ೨೪ ಮತ್ತು ೨೫ನೇ ಕಲಮುಗಳು ಜೀವನಾಂಶ ಮತ್ತು ಪರಿಹಾರದ ಕುರಿತಾ ಗಿದ್ದರೆ ೨೬ನೇ ಕಲಮು ಮಕ್ಕಳ ಸುರಕ್ಷೆ (Custody) ಕುರಿತಾಗಿವೆ.

ಪರಸ್ಪರ ಒಪ್ಪಿಗೆ ವಿಚ್ಛೇದನ: ೧೩-ಬಿ ಕಲಮಿನಡಿ ದಂಪತಿಗಳಿಬ್ಬರೂ ವಿಚ್ಛೇದನ ಕೋರಿ ಜಂಟಿ ಅರ್ಜಿ ಸಲ್ಲಿಸಬೇಕು. ಅಂಥ ಅರ್ಜಿ ಸಲ್ಲಿಸುವ ದಿನಾಂಕದಿಂದ ಹಿಂದೆ ಇಬ್ಬರು ಕನಿಷ್ಠ ಒಂದು ವರ್ಷದ ಅವಧಿಗೆ ಪ್ರತ್ಯೇಕವಾಗಿ ವಾಸಿಸಿರಬೇಕು. ಅಂಥ ಮೊದಲ ಹಂತದ ಅರ್ಜಿ ಸಲ್ಲಿಸಿದ ೬ ತಿಂಗಳವರೆಗೆ ಕಾಯಬೇಕು. ಆ ಅವಧಿಯಲ್ಲಿ ದಂಪತಿಗಳು ಪುನಃ ಒಂದಾಗಲು ಯತ್ನಿಸಬೇಕು.

೬ ತಿಂಗಳ ನಂತರವೂ ಒಂದುಗೂಡದಿದ್ದರೆ, ದಂಪತಿಗಳಾಗಿ ಮುಂದುವರಿಯುವುದು ಸಾಧ್ಯವೇ ಇಲ್ಲ ಎಂದು ಇಬ್ಬರೂ ನಿರ್ಣಯಿಸಿದರೆ ಮೊದಲ ಹಂತದ ಅರ್ಜಿ ಸಲ್ಲಿಸಿದ ೧೮ ತಿಂಗಳ ಒಳಗಡೆ ೨ನೇ ಹಂತದ ಅರ್ಜಿಯನ್ನು ಸಲ್ಲಿಸಬೇಕು. ಅದರ ವಿಚಾರಣೆ ನಡೆಸಿ ಕೋರ್ಟು ವಿಚ್ಛೇದನದ ಆದೇಶ ನೀಡುತ್ತದೆ.

14ನೇ ಕಲಮಿನ ಪ್ರಕಾರ ವಿವಾಹ ನಡೆದ ಒಂದು ವರ್ಷದ ಒಳಗಡೆ ಯಾವುದೇ ವಿಚ್ಛೇದನ ಅರ್ಜಿ ಯನ್ನು ಪರಿಗಣಿಸಲಾಗುವದಿಲ್ಲ. ಆದರೆ ಅತ್ಯಂತ ಕ್ಲಿಷ್ಟಕರ/ವಿಶೇಷ ಸನ್ನಿವೇಶಗಳಲ್ಲಿ ನ್ಯಾಯಾಲಯವು ಒಂದು ವರ್ಷದ ಒಳಗೇ ವಿಚ್ಛೇದನ ನೀಡಬಹುದು.

ಸರಿಪಡಿಸಲಾಗದ ವಿಘಟನೆ: ಶಿಲ್ಪಾ ಶೈಲೇಶ ವರ್ಸಸ್ ವರುಣ್ ಶ್ರೀನಿವಾಸನ್ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ, ಸಂವಿಧಾನದ 142ನೇ ವಿಧಿಯಲ್ಲಿ ತನಗಿರುವ ವಿವೇಚನಾಧಿಕಾರವನ್ನು ವಿಚ್ಛೇದನದ ವಿಷಯದಲ್ಲೂ ಪ್ರಯೋಗಿಸಿ ಮಹತ್ವದ ತೀರ್ಪಿತ್ತು, ವಿವರವಾದ ಮಾರ್ಗಸೂಚಿಯನ್ನು ನೀಡಿತು.

ಬ್ರಿಟಿಷ್ ಕಾಯಿದೆಯಲ್ಲಿರುವ Irretrievable Dissolution of Marriage ಎಂಬ ಕಾನೂನಿನ ಅಂಶವು ಹಿಂದೂ ವಿವಾಹ ಕಾಯಿದೆಯಲ್ಲಿ ಇಲ್ಲ. ಕಾಯಿದೆಯ ದೃಷ್ಟಿಯಲ್ಲಿ ಮಾತ್ರ ಅಸ್ಥಿತ್ವದಲ್ಲಿದ್ದು ಭಾವನಾತ್ಮಕವಾಗಿ ಎಂದೂ ಒಂದಾಗದಷ್ಟು ಮುರಿದು ಹೋಗಿರುವ ವೈವಾಹಿಕ ಸಂಬಂಧಗಳ ವಿಶೇಷ ಪ್ರಕರಣಗಳಲ್ಲಿ ಕೆಳ ನ್ಯಾಯಾಲಯಗಳ ಸುದೀರ್ಘ ವಿಚಾರಣೆಯ ಹಂತಗಳೆಲ್ಲವನ್ನೂ ಬದಿಗೊತ್ತಿ ವಿವಾಹದ ವಿಸರ್ಜನೆಯನ್ನು ಆದೇಶಿಸುವ ಅಧಿಕಾರ ಸುಪ್ರೀಂ ಕೋರ್ಟಿಗಿದೆ. ಅಂಥ ವೇಳೆ ಪರಸ್ಪರ ಸಮ್ಮತಿಯ ವಿಚ್ಛೇದನದಲ್ಲಿ ಪಾಲಿಸಬೇಕಾದ 6 ತಿಂಗಳುಗಳ ಕಾಯುವಿಕೆಯ ಷರತ್ತನ್ನು ಸಡಿಲಗೊಳಿಸುವ ಕುರಿತಾಗಿಯೂ ವಿವೇಚನಾಧಿಕಾರವನ್ನು ಸುಪ್ರೀಂ ಕೋರ್ಟು ಬಳಸಬಹುದು ಎಂದು ಸ್ಪಷ್ಟವಾಗಿ ಹೇಳಿದೆ.

ಅನೂರ್ಜಿತ ಹಾಗೂ ಅನೂರ್ಜಿತಗೊಳಿಸಬಲ್ಲ ವಿವಾಹಗಳು ( Void and voidable Marriages Section 11 12 ): ಈ ಕಾಯಿದೆಯ ೫ನೇ ಕಲಮಿನ (ಜಿ), (ಜಿq), ಮತ್ತು (q)ನೇ ಉಪಕಲಮುಗಳಿಗೆ ವ್ಯತಿರಿಕ್ತವಾಗಿ ನಡೆದ ಹಿಂದೂ ವಿವಾಹಗಳು ಪೂರ್ತಿ ಅನೂರ್ಜಿತವಾಗಿರುತ್ತವೆ. ಇನ್ನು ಕೆಲವು ಅದರಿಂದ ತೊಂದರೆಗೊಳಗಾದ ವ್ಯಕ್ತಿ ಇಚ್ಛಿಸಿದರೆ ಅನೂರ್ಜಿತಗೊಳಿಸಬಹುದಾದ ವಿವಾಹಗಳಾಗಿರುತ್ತವೆ. ಅಂಥ ವಿವಾಹಗಳು ಅನೂರ್ಜಿತವೆಂದು ಸಾರುವ ಡಿಕ್ರಿಗಳು ವಿಚ್ಛೇದನದ ಆದೇಶಗಳಲ್ಲ. ಬದಲಾಗಿ ಅಂಥ ವಿವಾಹಗಳೇ ಅನೂರ್ಜಿತ ವಾಗಿರುತ್ತವೆ.

ಅಂಥ ವೇಳೆ ವಿಚ್ಛೇದನದ ಡಿಕ್ರಿ ಅಥವಾ ಜೀವನಾಂಶದ ಆದೇಶ ನೀಡಲಾಗುವುದಿಲ್ಲ. ಅನಿವಾರ್ಯ ಪ್ರಕರಣಗಳಲ್ಲಿ ವಿಚ್ಛೇದನ ಸ್ವಾಗತಾರ್ಹವಾದರೂ, ಅದೊಂದು ಸಾಮಾನ್ಯ ಪ್ರಕ್ರಿಯೆಯಾಗುವುದು ಉತ್ತಮ ಬೆಳವಣಿಗೆಯಲ್ಲ. ಒಳ್ಳೆಯ ಸಂಬಳ, ಆಸ್ತಿ ಹೊಂದಿರುವ ಗಂಡನನ್ನು ಆತನಿಂದ ಕೋಟಿಗಟ್ಟಲೆ ಪರಿಹಾರ, ಜೀವನಾಂಶ ಪಡೆದು ವಿಚ್ಛೇದನ ಹೊಂದುವ ಉದ್ದೇಶದಿಂದಲೇ ಮದುವೆ ಯಾಗುವ ಪ್ರಕರಣಗಳೂ ಕಂಡುಬಂದಿವೆ. ಇದಕ್ಕೆ ವಧುವಿನ ಪಾಲಕರೂ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಅತುಲ್ ಸುಭಾಸ್ ಎಂಬ ಎಂಜಿನಿಯರ್, ಹೆಂಡತಿ ನೀಡಿದ ಮಾನಸಿಕ ಹಿಂಸೆಯಿಂದ ಬೇಸತ್ತು ಆತ್ಮಹತ್ಯೆ ಕೈಗೊಂಡ ಪ್ರಕರಣದ ನೆನಪು ಇನ್ನೂ ಮಾಸಿಲ್ಲ. ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಕೋರ್ಟುಗಳು ಕಾಯಿದೆಯ ದುರುಪಯೋಗ ತಡೆಯಲು ಸೂಕ್ತ ಆದೇಶಗಳನ್ನು ನೀಡುತ್ತಿರುವುದು ಆಶಾದಾಯಕ ಬೆಳವಣಿಗೆ.

(ಲೇಖಕರು ಕಾನೂನು ತಜ್ಞರು ಮತ್ತು ಕೆವಿಜಿ ಬ್ಯಾಂಕ್‌ನ ನಿವೃತ್ತ ಎಜಿಎಂ)