ಒಂದೊಳ್ಳೆ ಮಾತು
ಕುರುಕ್ಷೇತ್ರದ ರಣಾಂಗಣ ಮೌನವಾಗಿತ್ತು. ಅಷ್ಟೂ ದಿನ ನಡೆದ ರಕ್ತಪಾತದ ನಂತರ ಹಸ್ತಿನಾಪುರದ ಮಣ್ಣು ನೂರು ಮಂದಿ ಕೌರವರ ರಕ್ತವನ್ನು ಹೀರಿ ಶಾಂತವಾಗಿತ್ತು. ಗಾಂಧಾರಿ, ತನ್ನೆ ಮಕ್ಕಳನ್ನು ಕಳೆದುಕೊಂಡು ಶೋಕತಪ್ತಳಾಗಿ ರಣಭೂಮಿಗೆ ಬಂದಳು. ಆಕೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯ ಒಳಗಿಂದ ಕ್ಷಣಕ್ಷಣಕ್ಕೂ ಕಣ್ಣೀರು ಹರಿಯುತ್ತಿತ್ತು; ಒಂದಲ್ಲ ಎರಡಲ್ಲ ನೂರು ಜನ ಪುತ್ರರನ್ನು ಕಳೆದುಕೊಂಡ ಆ ಮಹಾತಾಯಿಯ ದುಃಖ ಅಗಾಧವಾಗಿತ್ತು.
ತನ್ನ ನೂರು ಮಂದಿ ಪುತ್ರರ ಶವಗಳ ಮುಂದೆ ನಿಂತ ಗಾಂಧಾರಿಯ ನೋವು ಆಕ್ರೋಶವಾಗಿ ಮಾರ್ಪಟ್ಟಿತು. ಆಕೆಗೂ ತಿಳಿದಿತ್ತು ತನ್ನ ಮಕ್ಕಳು ಅಧರ್ಮದ ಹಾದಿಯಲ್ಲಿದ್ದರು ಎಂದು. ಆದರೆ, ಜಗನ್ನಾಟಕ ಸೂತ್ರಧಾರಿಯಾದ ಶ್ರೀಕೃಷ್ಣನು ಮನಸ್ಸು ಮಾಡಿದ್ದರೆ ಈ ಮಹಾ ವಿನಾಶವನ್ನು ತಡೆಯಬಹುದಿತ್ತು ಎಂಬುದು ಆಕೆಯ ಅಚಲ ನಂಬಿಕೆಯಾಗಿತ್ತು.
ಪಾಂಡವರ ಹಿತೈಷಿಯಾಗಿ, ಸಂಧಾನಕ್ಕೆ ಬಂದ ಕೃಷ್ಣನು ಯುದ್ಧವನ್ನು ತಡೆ ಯುವಲ್ಲಿ ವಿಫಲ ನಾದನೋ ಅಥವಾ ಯುದ್ಧ ನಡೆಯಲೇಬೇಕೆಂದು ಮೌನವಾಗಿದ್ದನೋ ಎಂಬ ಪ್ರಶ್ನೆ ಆಕೆಯನ್ನು ಅನೇಕ ಬಾರಿ ಕಾಡಿತ್ತು.
ಇದನ್ನೂ ಓದಿ: Roopa Gururaj Column: ಶ್ರೀ ರಾಮನ ಭಕ್ತ ಹನುಮಂತನ ಅಪ್ರತಿಮ ಭಕ್ತಿಯ ಪರಾಕಾಷ್ಠೆ
ಗಾಂಧಾರಿ ಎಂದಿಗೂ ಮಕ್ಕಳ ಮೇಲಿನ ಮೋಹಕ್ಕೆ ಧರ್ಮವನ್ನು ಬಿಟ್ಟುಕೊಟ್ಟಿರಲಿಲ್ಲ. ಕುರುಕ್ಷೇತ್ರ ಯುದ್ಧದ ಸಮಯದಲ್ಲೂ ದುರ್ಯೋಧನನು “ಅಮ್ಮಾ, ನನಗೆ ಗೆಲುವಾಗಲೆಂದು ಹರಸು" ಎಂದು ಕೇಳಿದಾಗ, ಆಕೆ ಮಗನ ಮೇಲಿನ ಪ್ರೀತಿಗಿಂತ ಧರ್ಮಕ್ಕೆ ಬೆಲೆ ಕೊಟ್ಟಳು. ‘ಯತೋ ಧರ್ಮಸ್ತತೋ ಜಯಃ’ (ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ) ಎಂದು ಹೇಳುವ ಮೂಲಕ, ಅಧರ್ಮದ ಹಾದಿಯಲ್ಲಿರುವ ಮಗನಿಗೆ ಸೋಲು ಖಚಿತ ಎಂಬ ಕಠಿಣ ಸತ್ಯವನ್ನು ಸಾರಿದಳು.
ಇಂಥ ಗಾಂಧಾರಿಗೆ ಈಗ ಮಕ್ಕಳ ಸಾವು ಸಹಿಸಲಾರದಾಗಿತ್ತು. ಶ್ರೀಕೃಷ್ಣನು ಗಾಂಧಾರಿಯ ಸಮಾ ಧಾನಕ್ಕೆ ಮುಂದಾದಾಗ, ಆಕೆಯ ಸಂಯಮದ ಕಟ್ಟೆ ಒಡೆಯಿತು. “ಕೃಷ್ಣಾ, ನೀನು ಯುದ್ಧವನ್ನು ತಡೆಯಲು ಸರ್ವಶಕ್ತನಾಗಿದ್ದೆ. ನಿನ್ನಲ್ಲಿ ಶಾಂತಿ ಸ್ಥಾಪಿಸುವ ಸಾಮರ್ಥ್ಯವಿತ್ತು. ಆದರೂ ನಿನ್ನ ಕಣ್ಣೆದುರೇ ಕುರುಕುಲ ವಿನಾಶವಾಗುವುದನ್ನು ನೀನು ಮೌನವಾಗಿ ನೋಡುತ್ತಾ ನಿಂತೆ. ಪಾಂಡವರ ಮೇಲಿನ ನಿನ್ನ ಒಲವು, ಪಕ್ಷಪಾತದಿಂದಾಗಿ ಕೌರವ ಸೈನ್ಯದ ತಾಯಂದಿರ ಹೊಟ್ಟೆ ಉರಿಯುತ್ತಿದೆ" ಎಂದು ಗಟ್ಟಿಧ್ವನಿಯಲ್ಲಿ ಅಬ್ಬರಿಸಿದಳು.
ಒಬ್ಬ ತಾಯಿಯ ನೋವು ಅಲ್ಲಿ ತಪೋಶಕ್ತಿಯಾಗಿ ಮಾರ್ಪಟ್ಟಿತು. ದಶಕಗಳ ಕಾಲ ಪತಿಭಕ್ತಿಯಿಂದ ಬದುಕಿದ್ದ ಗಾಂಧಾರಿ, ಸಾಕ್ಷಾತ್ ಭಗವಂತನಿಗೆ ಶಾಪ ನೀಡಲು ಮುಂದಾದಳು- “ಕೃಷ್ಣಾ, ಹೇಗೆ ಇಂದು ಕುರುಕುಲವು ಪರಸ್ಪರ ಕಚ್ಚಾಡಿ ನಾಶವಾಯಿತೋ, ಹಾಗೆಯೇ ಇಂದಿನಿಂದ ಮೂವತ್ತಾರು ವರ್ಷಗಳ ನಂತರ ನಿನ್ನ ಯದುವಂಶವೂ ಪರಸ್ಪರ ಕಾದಾಡಿ ಸರ್ವನಾಶವಾಗಲಿ. ನೀನು ಅನಾಥ ನಾಗಿ ಕಾಡಿನಲ್ಲಿ ಸಾವನ್ನಪ್ಪುವಂತಾಗಲಿ!" ಎಂದು ಶಪಿಸುತ್ತಾ ಅಲ್ಲಿಂದ ಕೋಪೋದ್ರಿಕ್ತಳಾಗಿ ನಿರ್ಗಮಿಸಿದಳು.
ಸಾಮಾನ್ಯವಾಗಿ ಯಾರಾದರೂ ಶಾಪ ನೀಡಿದರೆ ಜೀವ ತಲ್ಲಣಿಸುತ್ತದೆ. ಆದರೆ ಇಲ್ಲಿ ಎದುರಿಗಿದ್ದ ವನು ಜಗದೊಡೆಯ. ಶ್ರೀಕೃಷ್ಣನು ಕೋಪಗೊಳ್ಳಲಿಲ್ಲ, ಬದಲಿಗೆ ಶಾಂತವಾಗಿ ಮಂದಹಾಸ ಬೀರುತ್ತಾ, “ತಾಯಿ, ನಿನ್ನ ಶಾಪವನ್ನು ನಾನು ಶಿರಸಾ ವಹಿಸಿ ಸ್ವೀಕರಿಸುತ್ತೇನೆ. ಯದುವಂಶವು ಅಜೇಯವಾದುದು, ಅದನ್ನು ಹೊರಗಿನ ಶಕ್ತಿಗಳು ನಾಶಪಡಿಸಲು ಸಾಧ್ಯವಿಲ್ಲ. ಈಗ ಅದು ಅಹಂಕಾರದಿಂದ ತುಂಬಿದೆ, ಅದನ್ನು ನಾಶಪಡಿಸಲು ನಿನ್ನ ಶಾಪವೊಂದು ನೆಪವಾಗಬೇಕಿತ್ತು.
ನಿನ್ನ ಶಾಪದಿಂದ ನನ್ನ ಕಾರ್ಯ ಸುಲಭವಾಯಿತು" ಎಂದು ನಮಸ್ಕರಿಸಿದನು. ದೈವವು ಕೂಡ ಪ್ರಕೃತಿಯ ನಿಯಮಕ್ಕೆ ಮತ್ತು ಒಬ್ಬ ಪತಿವ್ರತಾ ಸ್ತ್ರೀಯ ಸತ್ಯವಂತಿಕೆಗೆ ಗೌರವ ಕೊಡುತ್ತದೆ ಎಂಬು ದನ್ನು ಈ ಸನ್ನಿವೇಶ ಮನವರಿಕೆ ಮಾಡಿಕೊಡುತ್ತದೆ. ಎಷ್ಟೇ ದೊಡ್ಡ ಕುಲವಾಗಿದ್ದರೂ ಅಹಂಕಾರ ಮತ್ತು ಅಧರ್ಮವು ಅದನ್ನು ನಾಶಪಡಿಸುತ್ತದೆ ಎಂಬುದಕ್ಕೆ ಯದುವಂಶದ ಅವನತಿಯೇ ಸಾಕ್ಷಿ.
ಗಾಂಧಾರಿಯ ಶಾಪವು ಕೇವಲ ಕೋಪದ ಸಂಕೇತವಲ್ಲ, ಅದು ಒಬ್ಬ ಸಾಧ್ವಿಯ ಸತ್ಯದ ಶಕ್ತಿಯ ಪ್ರತೀಕ. ಕರ್ಮದ ಫಲದಿಂದ ಭಗವಂತನೂ ತಪ್ಪಿಸಿಕೊಳ್ಳಲಾರ ಅಂದ ಮೇಲೆ ಮನುಷ್ಯರಾದ ನಾವು ಅದಕ್ಕೆ ಹೆದರಲೇಬೇಕು...