Rangaswamy Mookanahalli Column: ಕಸವೇ ನಮ್ಮೂರು, ಕಸವೇ ನಮ್ಮ ದೈವ !
ಸಾಕುನಾಯಿಗಳಲ್ಲಿ ಡಯಾಬಿಟಿಸ್, ಹರ್ನಿಯಾ ರೋಗಗಳು ಹೆಚ್ಚಾಗುತ್ತಿರುವುದೇಕೆ ಗೊತ್ತೇ? ದಿನಪೂರ್ತಿ ಅಲೆದು ಆಹಾರ ಹುಟ್ಟಿಸಿಕೊಳ್ಳುವುದು, ಸಂತಾನವನ್ನ ಮುಂದು ವರಿಸುವುದು ಇತ್ಯಾದಿ ಮೂಲಭೂತ ಕ್ರಿಯೆಯನ್ನ ಮಾಡುವುದು, ಸಾಯು ವುದು ನಾಯಿಯ ಕೆಲಸ. ಅದರ ಈ ಸಹಜ ಬದುಕನ್ನ ನಾವು ಕಸಿದು ಬಿಟ್ಟಿದ್ದೇ.

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

ನಮ್ಮ ಸಮಾಜದಲ್ಲಿ ಎಲ್ಲದರಲ್ಲೂ, ಎಲ್ಲರಲ್ಲೂ ದೈವವನ್ನು ಕಾಣುತ್ತಿದ್ದೆವು. ನಾಯಿಗೂ ‘ನಾರಾಯಣ’ ಎಂದ ಸಂಸ್ಕಾರ ನಮ್ಮದು. ನಮ್ಮ ದೇವಾನುದೇವತೆಗಳನ್ನ ನೋಡಿ, ಎಲ್ಲರ ಬಳಿಯೂ ವಾಹನವಾಗಿ ಒಂದು ಪ್ರಾಣಿಗಳಿವೆ. ದತ್ತಾತ್ರೇಯ ಸ್ವಾಮಿಯ ಸುತ್ತ ನಾಲ್ಕು ನಾಯಿಗಳಿರುವ ಚಿತ್ರವನ್ನ ನೋಡಿ ಬೆಳೆದವರು ನಾವೆ ಅಲ್ಲವೇ? ಕಾಲ ಬದಲಾಗಲಿಲ್ಲ, ಜನ ಬದಲಾದರು. ಅವರ ಜೀವನಶೈಲಿ ಬದಲಾಯ್ತು. ತಮ್ಮ ಕೆಟ್ಟ ಜೀವನಶೈಲಿಯನ್ನ ತಮ್ಮ ಸಾಕು ಪ್ರಾಣಿ ಗಳಿಗೂ ವರ್ಗಾಯಿಸಿದರು. ಹೀಗೆ ತಾವು ಬದಲಾಗಿ, ತಮ್ಮ ತಪ್ಪನ್ನ ಕಾಲದ ಮೇಲೆ ಹಾಕಿದರು. ಯಾರನ್ನೇ ನೋಡಿ ‘ಕಾಲ ಬದಲಾಯ್ತು’, ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ’ ಇತ್ಯಾದಿಗಳನ್ನ ಹೇಳುತ್ತಾರೆ. ಕಾಲಕ್ಕೆ ತನ್ನ ಇರುವಿಕೆಯ ಅರಿವು ಕೂಡ ಇಲ್ಲ! ಅದಿನ್ನೇನು ಮಾಡೀತು ಪಾಪ!
ಬೀದಿನಾಯಿಗಳ ಮೇಲೆ ಕೆಲವರಿಗೆ ವಿಶೇಷ ಪ್ರೀತಿ. ತಮ್ಮ ಪ್ರೀತಿಯನ್ನ ಅವರು ತೋರು ವುದು ಹೇಗೆ? ಐದು ರುಪಾಯಿಗೆ ಸಿಗುವ ಬಿಸ್ಕೆಟ್ ಪ್ಯಾಕೆಟ್ ತೆರೆದು ಬಿಸ್ಕೆಟ್ ಹಾಕಿ, ಅದರ ಕವರ್ ಅನ್ನು ಬೀದಿಯಲ್ಲಿ ಬಿಸಾಡಿ ಹೋದರೆ ಅಲ್ಲಿಗೆ ಅವರ ನಾಯಿಪ್ರೇಮ ಮುಕ್ತಾಯ. ವಾರದಲ್ಲಿ ಒಂದೆರಡು ದಿನ ಇದನ್ನ ಮಾಡುತ್ತಾರೆ.
ಇದನ್ನೂ ಓದಿ: Rangaswamy Mookanahalli Column: ಪಾದೋಪಚಾರ ಎಂಬ ಬಹುಕೋಟಿ ಉದ್ಯಮ !
ಮಾಡಿದ ಪಾಪಗಳ ಗಂಟು ಸ್ವಲ್ಪವಾದರೂ ಕರಗೀತು ಎನ್ನುವ ದೂರಾಲೋಚನೆ ಇದ್ದೀತೆ?ಅದೇನೇ ಇರಲಿ, ಇಂಥವರು ನಾಯಿಯ ಬದುಕನ್ನ ಮೂರಾಬಟ್ಟೆ ಮಾಡಿಬಿಟ್ಟರು. ಇವರು ನಾಯಿಗೆ ಉಪಕಾರ ಮಾಡುತ್ತಿಲ್ಲ, ಅಪಕಾರ ಮಾಡುತ್ತಿದ್ದಾರೆ. ದಶಕಗಳ ಹಿಂದೆ ನಾಯಿ ಹಾಕಿದ ಅನ್ನ, ಮುದ್ದೆ, ಚಪಾತಿ ತಿನ್ನುತ್ತಿತ್ತು. ಇವತ್ತು ಅದರ ದೇಹ ಸಕ್ಕರೆ, ಗ್ಲೋಕೋಸ್‌ಗೆ ಅಡಿಕ್ಟ್ ಆಗಿಬಿಟ್ಟಿದೆ.
ಅದು ಅನ್ನ ಮೂಸುವುದು ಬಿಟ್ಟಿದೆ. ಇನ್ನು ಮನೆಯಲ್ಲಿ ಸಾಕಿದ ನಾಯಿಗಳಲ್ಲಿ ಡಯಾ ಬಿಟಿಸ್, ಹರ್ನಿಯಾ ಇತ್ಯಾದಿ ರೋಗಗಳು ಹೆಚ್ಚಾಗುತ್ತಿವೆ. ಇದೆಲ್ಲ ಏಕಾಗುತ್ತಿದೆ ಗೊತ್ತೇ? ಪ್ರಕೃತಿ ನಿಯಮದ ಪ್ರಕಾರ ನಾಯಿಯ ಕೆಲಸ, ಪೂರ್ತಿ ದಿನ ಅಲೆದು ಆಹಾರ ಹುಟ್ಟಿಸಿ ಕೊಳ್ಳುವುದು, ತನ್ನ ಸಂತಾನವನ್ನ ಮುಂದುವರಿಸುವುದು ಇತ್ಯಾದಿ ಸಕಲ ಜೀವಿಗಳು ಮಾಡುವ ಮೂಲಭೂತ ಕ್ರಿಯೆಯನ್ನ ಮಾಡುವುದು ಮತ್ತು ಸಾಯುವುದು. ಹೀಗೆ ಅದರ ಸಹಜ ಬದುಕನ್ನ ಕೂಡ ನಾವು ಕಸಿದುಬಿಟ್ಟಿದ್ದೇವೆ.
ನಮ್ಮ ಪಾಪದ ಮೂಟೆಯನ್ನ ಕರಗಿಸಲು ಅಥವಾ ಇನ್ನಾವುದೋ ಪಾಪಪ್ರಜ್ಞೆಯಿಂದ ಹೊರಬರಲು ನಾಯಿಗೆ ಬಿಸ್ಕೆಟ್ ಹಾಕುತ್ತೇವೆ. ಅದು ನಾಯಿಯ ಬದುಕಿನ ಸಮತೋಲನ ವನ್ನೇ ಕದಡಿಬಿಟ್ಟಿದೆ. ಅವುಗಳಲ್ಲಿ ಇರಬೇಕಾದ ಜಾಗರೂಕತೆ ಇಂದು ಇಲ್ಲವಾಗಿದೆ. ಯಾರು ಬೇಕಾದರೂ ಬಿಸ್ಕೆಟ್ ಹಾಕಿದರೆ ಸಾಕು ಅವುಗಳು ಕೂಡ ಬಾಲ ಅಡಿಸುವುದು ಕಲಿತಿವೆ. ಇನ್ನು ಕೆಲವರು ನಾಯಿಯನ್ನ ಶೋಕಿಗೆ ಸಾಕುತ್ತಾರೆ. ಒಂದಷ್ಟು ದಿನದ ನಂತರ ಅದನ್ನ ಬೀದಿಗೆ ಹಾಕುತ್ತಾರೆ.
ಬೀದಿಯ ಬೆಳೆದ ನಾಯಿಗಳು ಹೇಗೋ ಬದುಕಿಕೊಳ್ಳುತ್ತವೆ. ಬೀದಿ ಪಾಲಾದ ಬಡಪಾಯಿ ಮನೆನಾಯಿಯ ಪಾಡು ಯಾರಿಗೂ ಬೇಡ. ನಾಯಿಗೆ ಹಾಕುವುದಿದ್ದರೆ ಅನ್ನ, ಮುದ್ದೆ ಹಾಕೋಣ, ನಾಲ್ಕು ದಿನ ಬಿಸ್ಕೆಟ್ ಸಿಗದಿದ್ದರೆ ಅವುಗಳು ಕೂಡ ಅನ್ನ ತಿನ್ನಲು ಶುರು ಮಾಡುತ್ತವೆ. ಇನ್ನು ಸಹಜವಾಗಿ, ನೈಸರ್ಗಿಕವಾಗಿ ಅವುಗಳಿಗೆ ಸಿಗಬೇಕಾದ ದೈಹಿಕ ಸುಖ ವನ್ನ ಮನುಷ್ಯ ತನ್ನ ಸಾಕುವ ಗೀಳಿನಿಂದ ಕಿತ್ತುಕೊಂಡಿದ್ದಾನೆ. ಮನುಷ್ಯರಿಗೆ ಮಾತ್ರವಲ್ಲ ನಾಯಿಗೂ ಭಾವನೆಗಳಿವೆ.
ಅವುಗಳ ಭಾವನೆಗಳ ಜತೆ ಆಟ ಆಡುವುದು ಎಷ್ಟು ಸರಿ? ಇನ್ನೊಂದು ಮಜಾ ಎಂದರೆ ದೇಸಿ ತಳಿಯ ನಾಯಿ ಯಾರಿಗೂ ಬೇಡ. ಈ ದೇಶದ ಹವಾಮಾನಕ್ಕೆ ಒಗ್ಗದ ಬೇರೆ ದೇಶದ ತಳಿಗಳಿಗೆ ಐವತ್ತು ಸಾವಿರ, ಲಕ್ಷ ರುಪಾಯಿ ಕೊಟ್ಟು ಕೊಳ್ಳುತ್ತಾರೆ. ಚೀನಾ ಮೊಬೈಲ್ ಅಷ್ಟು ಸುಲಭವಾಗಿ ನಾವು ಕೊಳ್ಳದೆ ಇರಲಾಗದು, ಅಟ್‌ಲೀ ನಾಯಿಯ ವಿಷಯದದರೂ ಆತ್ಮನಿರ್ಭರರಾಗೋಣ ಅಲ್ಲವೇ? ಇನ್ನು ಬೀದಿನಾಯಿಗಳ ಹಾವಳಿಗಳ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಬೃಹತ್ ಗ್ರಂಥವಾಗಬಹುದು. ದ್ವಿಚಕ್ರ ವಾಹನದಲ್ಲಿ ತಿರುಗಾಡು ವುದು ಕಷ್ಟಸಾಧ್ಯ ಎನ್ನುವಂತಾಗಿದೆ.
ನಾಯಿಗಳು ವಾಹನ ಸಾವರರನ್ನು ಅಟ್ಟಿಸಿಕೊಂಡು ಬರುವುದು ಸ್ಥಳಭೇದವಿಲ್ಲದೆ ಎಡೆ ಸಾಮಾನ್ಯ ಎನ್ನುವಂತಾಗಿದೆ. ಅವಕ್ಕೆ ಆ ಮಟ್ಟದ ಕೋಪ ಬರಲು ಕಾರಣವೇನು? ಅವುಗಳ ದೇಹದಲ್ಲಿ ಸಂಗ್ರಹವಾಗಿರುವ ಸಕ್ಕರೆ ಎನ್ನುವುದು ನನ್ನ ಅನುಮಾನ. ಕಾರುಗಳ ಹಿಂದೆ ಕೂಡ ಅತ್ಯಂತ ಕೋಪದಿಂದ ಅಟ್ಟಾಡಿಸಿಕೊಂಡು ಹೋಗುವ ನಾಯಿಗಳನ್ನು ಕಂಡಾಗ ನಮ್ಮ ದೇಶ ಇನ್ನೂ ಮುಂದುವರಿಯುತ್ತಲೇ ಇರುವ ದೇಶವಾಗಿ ಏಕೆ ಉಳಿದುಕೊಂಡಿದೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ.
ವರ್ಷದಲ್ಲಿ ಕಡಿಮೆಯೆಂದರೂ ಐದಾರು ಬಾರಿ ಸಣ್ಣ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು, ಮಕ್ಕಳು ಸತ್ತದ್ದು, ಇಲ್ಲವೇ ತೀವ್ರ ಗಾಯಗಳಿಂದ ಚಿಕಿತ್ಸೆ ಪಡೆಯು ತ್ತಿರುವ ವಿಷಯ ಸುದ್ದಿಯಾಗುತ್ತದೆ. ಅಗಣಿತ ಸಮಸ್ಯೆಗಳ ದೇಶ ನಮ್ಮದು. 145 ಕೋಟಿ ಜನಸಂಖ್ಯೆಯ ಜನ ಸಾಗರದಲ್ಲಿ ಹಣವಿಲ್ಲದ, ಪ್ರಸಿದ್ಧರೂ ಅಲ್ಲದವರ ಮನೆಯ ಮಗು ನಾಯಿದಾಳಿಯಿಂದ ಸತ್ತರೆ ಮತ್ತು ಅದು ಸುದ್ದಿಯಾದರೆ ಅದೇ ದೊಡ್ಡದು ಎನ್ನುವ ಪರಿಸ್ಥಿತಿ ಇರುವಾಗ ಬೀದಿನಾಯಿ ಕಾಟ ಸಮಸ್ಯೆ ಎನ್ನಿಸುವುದೇ ಇಲ್ಲ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ, ಸೆಕೆಂಡ್ ಶಿಫ್ಟ್ ಕೆಲಸ ಮಾಡಿ ಮನೆಗೆ ಮರಳು ವವರ ಮತ್ತು ಬೆಳಗ್ಗೆ ಬೇಗ ಎದ್ದು ಹಾಲು, ಪೇಪರ್ ಹಾಕುವ ಹುಡುಗರ ಕಷ್ಟಗಳು ಯಾರ ಕಣ್ಣಿಗೂ ಕಾಣುವುದಿಲ್ಲ. ನಾಯಿ ಅಟ್ಟಾಡಿಸಿಕೊಂಡು ಬಂದು ಅವರು ಬಿದ್ದರೆ, ಪೆಟ್ಟಾದರೆ ವಾರಗಟ್ಟಲೆ ಕೆಲಸಕ್ಕೆ ಹೋಗಲಾಗದಿದ್ದರೆ ಅದು ಸುದ್ದಿ ಕೂಡ ಆಗುವುದಿಲ್ಲ. ಅವರು ಮನೆಯನ್ನು ನಡೆಸುವುದು ಹೇಗೆ? ಇನ್ನು ನನಗೆ ಬುದ್ಧಿ ಬಂದ ದಿನದಿಂದ ರಸ್ತೆಯಲ್ಲಿ ವಾಹನ ಗುದ್ದಿ ಸತ್ತ ನಾಯಿಗಳ ದೇಹವನ್ನು ಕೂಡ ತೆಗೆಯದೆ ಇರುವುದು ಮತ್ತು ಒಂದೆ ರಡು ದಿನದಲ್ಲಿ ಅದು ಕೊಳೆತು ನಾರುತ್ತ ಪರಿಸರದ ತುಂಬೆ ಕೆಟ್ಟ ವಾಸನೆಯನ್ನು ಹರಡು ವುದು- ಇದು ಇಂದಿಗೂ ಬದಲಾಗಿಲ್ಲ.
ಹಿಂದೆ ಈ ರೀತಿಯ ಸಾವುಗಳು ಒಂದೆರಡು ಇದ್ದದ್ದು ಈಗ ನೂರಾರು ಸಂಖ್ಯೆಯಲ್ಲಿ ಆಗು ತ್ತಿವೆ. ಸಮಸ್ಯೆ ಕೇವಲ ನಮಗೆ ಮಾತ್ರ ಎನ್ನುವಂತಿಲ್ಲ. ಮನುಷ್ಯನ ಅಭಿವೃದ್ಧಿಯ ವೇಗಕ್ಕೆ ಪಾಪ ನಾಯಿಗಳು ಇನ್ನೂ ಅಪ್ಡೇಟ್ ಆಗಿಲ್ಲ. ಮೊದಲೆ ರಸ್ತೆ ಸರಿಯಿಲ್ಲದ ಕಾರಣ ವಾಹನ ಗಳು ಗಂಟೆಗೆ 30/40 ಕಿಲೋಮೀಟರ್ ವೇಗದಲ್ಲಿ ಚಲಿಸಿದರೆ ಅದು ಹೆಚ್ಚು ಎನ್ನುವಂತಿತ್ತು.
ಇಂದಿಗೆ ರಿಂಗ್‌ರೋಡ್ ಮತ್ತು ಹೈವೇಗಳಲ್ಲಿ ನೂರು ಸಾಮಾನ್ಯ ಎನ್ನುವಂತಾಗಿದೆ. ಹೀಗಾಗಿ ನಾಯಿಗಳಿಗೆ ವಾಹನ ಅವುಗಳನ್ನು ತಲುಪುವ ಸಮಯದ ಲೆಕ್ಕಾಚಾರ ಹಾಕುವಲ್ಲಿ ಸೋಲುತ್ತಿವೆ. ರಸ್ತೆಯನ್ನು ಕ್ರಾಸ್ ಮಾಡಲು ಪರದಾಡುವ ನಾಯಿಗಳನ್ನು ನಾವೆಲ್ಲರೂ ನಿತ್ಯ ನೋಡಬಹುದು. ಬೀದಿನಾಯಿಗೆ ಬಿಸ್ಕೆಟ್ ಹಾಕುವವರ ಸಂಖ್ಯೆ ಒಂದು ಕಡೆ, ಅವು ಗಳನ್ನು ನಖಶಿಖಾಂತ ದ್ವೇಷಿಸುವವರ ಸಂಖ್ಯೆ ಇನ್ನೊಂದು ಕಡೆ. ಬೀದಿನಾಯಿಗಳ ಸಮಸ್ಯೆ ನಾಗರಿಕ ಸಮಾಜವನ್ನು, ಅಲ್ಲಿನ ನಾಗರಿಕತೆಯನ್ನು ಪ್ರಶ್ನಿಸುತ್ತಿದೆ.
ಆದರೆ ವಿಪರ್ಯಾಸ ಎಂದರೆ ಇದೊಂದು ಸಮಸ್ಯೆ ಎಂದು ಯಾರಿಗೂ ಏಕೆ ಅನಿಸುತ್ತಿಲ್ಲ? ಮೈಸೂರು, ಬೆಂಗಳೂರು ಹೀಗೆ ಎಲ್ಲಾ ಊರುಗಳಲ್ಲೂ ಎಷ್ಟೊಂದು ದೊಡ್ಡ ಹುದ್ದೆಗಳಲ್ಲಿ ಇರುವ ಪ್ರಭಾವಿ ವ್ಯಕ್ತಿಗಳು ಇರುತ್ತಾರೆ. ಅವರ ಕಣ್ಣಿಗೂ ಇದು ನಿತ್ಯ ಬಿದ್ದೇ ಬೀಳುತ್ತದೆ ಅಲ್ಲವೇ? ಆದರೆ ಅವರನ್ನೂ ಸೇರಿಸಿಕೊಂಡು ನಾವ್ಯಾರೂ ಇದರ ಬಗ್ಗೆ ಸೊತ್ತುವುದಿಲ್ಲ.
ಬೀದಿನಾಯಿ ಸಮಸ್ಯೆಯಷ್ಟೇ ಅಥವಾ ಅದಕ್ಕಿಂತ ಇನ್ನೊಂದು ದೊಡ್ಡ ಸಮಸ್ಯೆಯಿದೆ. ಅದು ಕಸ ವಿಲೇವಾರಿ. ನಮ್ಮಲ್ಲಿನ ನಗರಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಅದರ ಬೆಳವಣಿಗೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಸರಕಾರಗಳು ಕಲ್ಪಿಸುತ್ತಿಲ್ಲ. ಬೆಂಗ ಳೂರು ನಗರ ಬದುಕಲು ಯೋಗ್ಯವಲ್ಲ ಎನ್ನುವ ಮಟ್ಟಕ್ಕೆ ನೀರು, ಗಾಳಿ ಕುಲಷಿತ ಗೊಂಡಿದೆ.
ಬೆಂಗಳೂರಿಗೆ ಸಮೀಪದಲ್ಲಿರುವ ಹೊಸಕೋಟೆ, ದೊಡ್ಡಬಳ್ಳಾಪುರ, ತುಮಕೂರು, ಮೈಸೂ ರು ಇತರ ನಗರಗಳು ಕೂಡ ತಾವೇನೂ ಕಡಿಮೆಯಿಲ್ಲ ಎನ್ನುವ ಮಟ್ಟಕ್ಕೆ ಕೆಡುತ್ತಿವೆ. ನಾಲ್ಕು ವರ್ಷದ ಹಿಂದೆ ಮೈಸೂರಿಗೆ ಬಂದಾಗ ಮೈಸೂರು ಇವತ್ತಿನ ಮಟ್ಟಕ್ಕೆ ಕೆಟ್ಟಿರಲಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಕಳೆದ ಆರೇಳು ತಿಂಗಳು ‘ಮುಡಾ’ ಹಗರಣದ್ದೇ ಸುದ್ದಿ ಎಡೆ! ಇಲ್ಲಿನ ಯಾವ ಕೆಲಸ ಕಾರ್ಯಗಳೂ ಸರಿಯಾಗಿ ನಡೆಯುತ್ತಿಲ್ಲ.
ತೀರಾ ಇತ್ತೀಚೆಗೆ ಅಂದರೆ ಐದಾರು ತಿಂಗಳ ಹಿಂದೆ ಒಂದಷ್ಟು ಬಡಾವಣೆಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಕೊಡಲಾಗಿದೆ. ಮುಡಾದಲ್ಲಿ ಹೆಚ್ಚು ಕೆಲಸವಿರುವ ಕಾರಣ ಈ ರೀತಿಯ ವರ್ಗಾವಣೆ ಮಾಡಲಾಗಿದೆ ಎನ್ನುವುದು ಸರಿಯಾದರೂ, ಪಟ್ಟಣ ಪಂಚಾಯತಿ ಗಳ ಬಳಿ ಹಣವಿಲ್ಲದ ಕಾರಣವೋ ಅಥವಾ ಅವರು ಮುಡಾದವರಂತೆಯೋ, ಒಟ್ಟಾರೆ ಮೈಸೂರು ಪೂರ್ತಿ ಕಸದ ಗೂಡಾಗಿದೆ. ಕೇವಲ ಒಂದು ವಾರದ ಹಿಂದೆ ಅಂದರೆ ಫೆಬ್ರವರಿ 2025ರ ಮೊದಲ ವಾರದಲ್ಲಿ ಇಲ್ಲಿನ ಜೆಪಿ ನಗರದಲ್ಲಿರುವ ಕಸ ಸಂಗ್ರಹಣೆ ಮಾಡುವಲ್ಲಿ ಬೆಂಕಿ ಹಾಕಿದ್ದರು.
ಇದು ಶುರುವಿನಲ್ಲಿ ಅಕ್ಕಪಕ್ಕದ ಬಡಾವಣೆಯ ಜನರಿಗೆ ಮಾಡಿದ ಕಿರಿಕಿರಿ ಅಷ್ಟಿಷ್ಟಲ್ಲ. ವಾರವಾದರೂ ಆರದ ಬೆಂಕಿಯಿಂದ ಹೊಗೆ ಬರುತ್ತಲೇ ಇತ್ತು. ಮೈಸೂರಿನಲ್ಲಿ ಚಾಮುಂಡಿ ಬೆಟ್ಟದ ನಂತರದ ಬೆಟ್ಟ ಜೆಪಿ ನಗರದಲ್ಲಿನ ಕಸದ ರಾಶಿಯದು ಎಂದರೆ ನಿಮಗೆ ಆಶ್ಚರ್ಯ ವಾಗಬಹುದು! ಆದರೆ ಇದು ನಿಜ. ಡಂಪ್ ಯಾರ್ಡ್ ಮಾಡಿದಾಗ ಇದು ನಗರ ಪ್ರದೇಶ ದಿಂದ ಬಹಳ ದೂರವಿತ್ತು ಎನ್ನುವ ಕಾರಣಕ್ಕೆ ಮಾಡಿರಬೇಕು.
ಇವತ್ತಿಗೆ ಜೆಪಿ ನಗರದಲ್ಲಿ 30*40 ವಿಸ್ತೀರ್ಣದ ಸೈಟಿನ ಬೆಲೆ 80 ಲಕ್ಷಕ್ಕೆ ಹೋಗಿ ಕುಳಿತಿದೆ. ಅಲ್ಲಿ ಪ್ರಜ್ಞಾವಂತ, ಸ್ಥಿತಿವಂತ ನಾಗರಿಕರು ಬದುಕುತ್ತಿದ್ದಾರೆ. ಇಲ್ಲಿನ ಬಡಾವಣೆಗಳು ನೇರ ವಾಗಿ ಮೈಸೂರು ಸಿಟಿ ಕಾರ್ಪೋರೇಷನ್ ( MCC) ಅಧೀನದಲ್ಲಿ ಬರುತ್ತವೆ. ಪರಿಸ್ಥಿತಿ ಹೀಗಿ ದ್ದೂ, ನಿವೇಶನ, ಮನೆಗೆ ಕೋಟ್ಯಂತರ ರೂಪಾಯಿ ಹಣ ಸುರಿದು ಕೂಡ ಇಲ್ಲಿನ ಜನ ಸುಟ್ಟ ಪ್ಲಾಸ್ಟಿಕ್ ವಾಸನೆ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆಗಳನ್ನು ಯಾರಿಗೆ ಹೇಳುವುದು? ಇದನ್ನು ಯಾರು ತಾನೇ ಯಾರಿಗೆ ತಾನೇ ಹೇಳಬೇಕು? ಅಂಗೈ ಹುಣ್ಣಿಗೆ ಕನ್ನಡಿಯೇಕೆ ಬೇಕು! ನಮ್ಮನ್ನು ಆಳುವವರು ನಮಗಿಂತ ಭಿನ್ನರೇನಲ್ಲ. ಅವರಿಗೆ ನಮ್ಮ ಮನಸ್ಥಿತಿ ಚೆನ್ನಾಗಿ ಗೊತ್ತಿದೆ. ಪಕ್ಕದಲ್ಲಿ ಆರಡಿ ಎತ್ತರದ ಕಸ ಬಿದ್ದಿದ್ದರೂ ಅದು ನಮ್ಮ ಕಣ್ಣಿಗೆ ಕಾಣದಂತೆ ನಾವು ನಮ್ಮ 15/20 ಲಕ್ಷ ಅಥವಾ ಅದ ಕ್ಕಿಂತ ಹೆಚ್ಚು ಬೆಲೆ ಬಾಳುವ ಕಾರಿನಲ್ಲಿ ಓಡಾಡುತ್ತೇವೆ. ಕಸಕ್ಕೆ ಬೆಂಕಿ ಹಾಕಿದ ದಿನ ವ್ಯವಸ್ಥೆಯನ್ನು ಒಂದಷ್ಟು ಬಯ್ದುಕೊಳ್ಳುತ್ತೇವೆ.
ಜನ ಸರಿಯಿಲ್ಲ, ಸಮಾಜ ಸರಿಯಿಲ್ಲ, ರಾಜಕಾರಣಿಗಳು ಸರಿಯಿಲ್ಲ ಎಂದು ಸುಮ್ಮನಾಗು ತ್ತೇವೆ. ಬೆಟ್ಟದ ಎತ್ತರದ ಕಸದಲ್ಲಿ, ನಮ್ಮನ್ನು ಅಟ್ಟಾಡಿಸಿಕೊಂಡು ಬರುವ ಬೀದಿನಾಯಿ ಯಲ್ಲಿ ನಮ್ಮದೂ ಒಂದು ಪಾತ್ರವಿದೆ ಎನ್ನುವುದನ್ನು ಕೂಡ ನಾವು ಒಪ್ಪಿಕೊಳ್ಳಲು ತಯಾ ರಿಲ್ಲ. ಈ ಸಮಾಜ ಸೃಷ್ಟಿಯಾಗಿರುವುದು ನಮ್ಮಂಥ ಜನರಿಂದಲೇ ಅಲ್ಲವೇ? ಎಲ್ಲರಿಗೂ ಸಮಾಜ, ವ್ಯವಸ್ಥೆ ಬದಲಾಗಬೇಕು ಎನ್ನುವ ಆಸೆ. ಆದರೆ ಬದಲಾವಣೆಗೆ ನಾವು ಮೊದಲ ಹೆಜ್ಜೆ ಇಡೋಣ ಎನ್ನುವುದಕ್ಕೆ ಮಾತ್ರ ನಾವು ಸಿದ್ದರಿಲ್ಲ. ಹೀಗಾಗಿ ಕಳೆದ 50 ವರ್ಷದಿಂದ ಭಾರತ ಮುಂದುವರಿಯುತ್ತಿರುವ ದೇಶವಾಗೇ ಉಳಿದಿದೆ.